ಕಣ್ಣಿಲ್ಲದಾತ ಕಾಣಬಲ್ಲನೆ ಅಯ್ಯ? ಕಿವಿಯಿಲ್ಲದಾತ ಕೇಳಬಲ್ಲನೇನಯ್ಯ? ಮೂಗಿಲ್ಲದ ಮೂಕಾರ್ತಿ ವಾಸಿಸಬಲ್ಲನೆ ಅಯ್ಯ? ನಾಲಿಗೆಯಿಲ್ಲದವ ರುಚಿಸಬಲ್ಲನೆ ನೋಡಯ್ಯ? ಕೈಯಿಲ್ಲದ ಮೋಟ ಹಿಡಿಯಬಲ್ಲನೆ? ಕಾಲಿಲ್ಲದ ಹೆಳವ ನಡೆಯಬಲ್ಲನೆ ಅಯ್ಯ? ಹಂದೆ ಶೌರ್ಯದ ಕುರುಹ ಬಲ್ಲನೆ? ನಪುಂಸಕ ವ್ಯವಹರಿಸಬಲ್ಲನೆ ಅಯ್ಯ? ತಮ್ಮ ತಾವರಿಯದ ಅಜ್ಞಾನಿಗಳು
ಗುರು ಗುರುವೆಂದು ಅನ್ಯರಿಗೆ ಉಪದೇಶವ ಕೊಟ್ಟು ಅರುಹಿನ ಆಚರಣೆಯ ಹೇಳಿ ಸತ್ಪಥದ ಆಚರಣೆಯ ಹೇಳಿ ತಮ್ಮ ಹಾದಿಯ ತಾವರಿಯರು; ತಾವಿನ್ನಾರಿಗೆ ಹಾದಿಯ ತೋರಿಹರಯ್ಯ? ಆ ಭೂಭಾರಿಗಳು ಗುರು ಗುರುವೆಂಬುದಕ್ಕೆ ನಾಚರು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.