ಕಾಯಪ್ರಸಾದವ ಎನ್ನ ಕರಸ್ಥಲದಲ್ಲಿ ಕಂಡೆ. ಅದು ಎನ್ನ ಕಂಗಳ ನುಂಗಿ ಸರ್ವಾಂಗವು ತಾನಾಗಿ ನಿಂದು ಪ್ರಜ್ವಲಿಸುತ್ತಿತ್ತು ನೋಡಾ. ಪ್ರಾಣ ಪ್ರಸಾದವ ಎನ್ನ ಮನಸ್ಥಲದಲ್ಲಿ ಕಂಡೆ. ಅದು ಎನ್ನ ಮನವ ನುಂಗಿತ್ತು ನೋಡಾ. ಅನುಭಾವ ಪ್ರಸಾದವ ಎನ್ನಾತ್ಮನ ಕೈಯಲ್ಲಿ ಕಂಡೆ. ಅದು ಎನ್ನಾತ್ಮನ ನುಂಗಿತ್ತು ನೋಡಾ. ಕಾಯಪ್ರಸಾದ ಪ್ರಾಣಪ್ರಸಾದ ಅನುಭಾವಪ್ರಸಾದವೆಂಬ ಈ ತ್ರಿವಿಧಪ್ರಸಾದವು ಒಂದಾಗಿ
ಎನ್ನ ಬ್ರಹ್ಮರಂಧದಲ್ಲಡಗಿ ನಿರ್ಭಾವ ಪ್ರಸಾದವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.