ಕಾಯವೆಂಬ ಭೂಮಿಯ ಮೇಲೆ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ? ಶಿವಜ್ಞಾನವೆಂಬ ಕೊಡಲಿಗೆ ನಿಶ್ಚಿತವೆಂಬ ಕಾವನಿಕ್ಕಿ ಅಷ್ಟದುಡಿಯೆಂಬ ಅಡವಿಯನೆ ಕಡಿದು ಕುಟಿಲ ಕುಹಕವೆಂಬ ಕಿಚ್ಚ ಹತ್ತಿಸಿ ಸುಟ್ಟು ಲೋಭತ್ವವೆಂಬ ಬಟ್ಟೆಯನೆ ಕಟ್ಟಿ ಶಿವಭಕ್ತರ ನುಡಿಯೆಂಬ ಹಿಂಗಲ್ಲನಿಕ್ಕಿ ವೈರಾಗ್ಯವೆಂಬ ಹಡಗಂ ಹತ್ತಿಸಿ ದೃಷ್ಟ ಮುಟ್ಟಿಯೆಂಬ ನೇಗಿಲಿಗೆ ಅವಧಾನವೆಂಬ ಮೀಣಿಯನಳವಡಿಸಿ ಜೀವಭಾವವೆಂಬ ಎರಡೆತ್ತುಗಳ ಹೂಡಿ ಅರುಹೆಂಬ ಹಗ್ಗವನೆ ಹಿಡಿದು ಎಚ್ಚರಿಕೆಯೆಂಬ ಬಾರುಕೋಲ ತಳೆದುಕೊಂಡು ಒತ್ತಿನೂಕಿ ಭೂಮಿಯ ಹಸನ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ಅನೀತಿಯೆಂಬ ಗಾಳಿ ಬೀಸಿ ವಿಷಯವೆಂಬ ಮಳೆ ಸುರಿದು ಹದನಾರದ ಮುಂಚೆ ಅರುಹೆಂಬ ಬೀಜವನೆ ಬಿತ್ತಿ ಪ್ರಸಾದವೆಂಬ ಗೊಬ್ಬರವನೆ ತಳೆದು ಆಚಾರವೆಂಬ ಸಸಿಹುಟ್ಟಿ ಪ್ರಪಂಚೆಂಬ ಹಕ್ಕಿ ಬಂದು ಹಕ್ಕಲ ಮಾಡದ ಮುನ್ನ ನೆನಹೆಂಬ ಕವಣೆಯನೆ ತೆಕ್ಕೊಂಡು ನಾಲ್ಕು ದಿಕ್ಕಿನಲ್ಲಿ ನಿಂತು ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯಯೆಂದು ಅರ್ಭಟಿಸುತಿರ್ದನಯ್ಯ ಇಂತು ಈ ಬೆಳಸು ಸಾಧ್ಯವಾಯಿತ್ತು. ಉಳಿದವರಿಗಸಾಧ್ಯಕಾಣಾ
ಕೂಡಲಚೆನ್ನಸಂಗಮದೇವ