ವಿಷಯಕ್ಕೆ ಹೋಗು

ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ_ ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು. ಭವವೆಂಬ ಮಹಾರಣ್ಯದೊಳು
ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು. ಕೋಪವೆಂಬ ಪರ್ಬುಲಿ ಮೊರೆವುತ್ತಿಪ್ಪುದು. ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು. ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು. ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು. ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು. ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು. ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು. ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು. ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು ವಿಷಯವೆಂಬ ಕೂಪ_ಬಳಸಬಾರದು. ಮೋಹವೆಂಬ ಬಳ್ಳಿ_ಕಾಲ ಕುತ್ತಬಾರದು. ಲೋಭವೆಂಬ ಮಸೆದಡಾಯುಧ_ಒರೆ ಉಚ್ಚಬಾರದು. ಇಂತಪ್ಪ ಕದಳಿಯ ಹೊಗಲರಿಯದೆ ದೇವದಾನವ ಮಾನವರೆಲ್ಲರೂ
ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು. ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು. ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ
ಮುಳ್ಳು ಮಸೆ ಮುಟ್ಟದೆ ಕಳಿವರಿದು
ಗೆಲಿದು
ಉತ್ತರಿಸಿ; ಗುಹೇಶ್ವರನೆಂಬ ಲಿಂಗದ ನಿಜಸಮಾಧಿಯಲ್ಲಿ ನಿಂದು
ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !