ಕಾಲನ ಸುಟ್ಟ ಭಸ್ಮವ

ವಿಕಿಸೋರ್ಸ್ದಿಂದ



Pages   (key to Page Status)   


ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ಕಾಮನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ತನುತ್ರಯಂಗಳೆಂಬ ತ್ರಿಪುರವ ಚಿತ್‍ಶಿಖಿಯೆಂಬ ಜ್ಞಾನಾಗ್ನಿಯಿಂದ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮತ್ರಯಂಗಳ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಸತ್ವ ರಜ ತಮಂಗಳ ಸುಟ್ಟುರುಹಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಜೀವಭಾವ ಇಂದ್ರಿಯಭಾವ ವಿಷಯಭಾವ ಭೂತಭಾವ ಜನನಭಾವ ಬೀಜಭಾವವೆಂಬ ಭವಾಶ್ರಯವ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯೇಕಾರ್ಥವಾದ ಅಗ್ನಿಯಿಂದ ಸುಟ್ಟುರುಹಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಸ್ವರ್ಗ ಮತ್ರ್ಯ ಪಾತಾಳಕ್ಕೆ ಆಧಾರಸ್ಥಾನವೇ ಚಿತ್ತು. ಆ ಚಿತ್‍ಸ್ವರೂಪವೇ ಬಸವಣ್ಣ. ಇದು ಕಾರಣ ಚಿದ್ವಿಭೂತಿಯನೆ ಸದಾಕಾಲದಲ್ಲಿ ಧರಿಸಿ
ಶುದ್ಧ ಚಿದ್ರೂಪನಾಗಿರ್ದೆನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.