ಕೃತಯುಗ
ತ್ರೇತಾಯುಗ
ದ್ವಾಪರಯುಗ
ಕಲಿಯುಗಂಗಳು ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ ಅನಂತ ಕೋಟ್ಯನುಕೋಟಿ ಯುಗಂಗಳು ಮಡಿದುಹೋದವು
ಅನಂತ ಜಲಪ್ರಳಯಂಗಳು ಸುರಿದು ಹೋದವು. ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ ಲಯವಾಗಿ ಹೋದವು. ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ ಪ್ರಾಣಲಿಂಗ
ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಾದಿಗಳೆಲ್ಲರೂ ಪ್ರಾಣಲಿಂಗಸಂಬಂಧದ ಹೊಲಬನರಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು. ಶಿವಾಚಾರದ ವಿಚಾರವನರಿಯದೆ ಜಗವು ಕೆಟ್ಟುಹೋಹುದೆಂದು ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ
ಗುರುಲಿಂಗಜಂಗಮಪಾದೋದಕಪ್ರಸಾದವೆಂಬ ಪಂಚಾಚಾರಸ್ಥಲವ ನೆಲೆಗೊಳಿಸಿ
ಷಡುಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ ಸ್ಥಿತಗೊಳಿಸಿ
ಪ್ರಾಣಲಿಂಗ
ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ
ಎನ್ನ ಭ್ರಾಂತಿಸೂತಕವ ಬಿಡಿಸಿ
ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು. ಕೂಡಲಸಂಗಮದೇವರು ಸಾಕ್ಷಿಯಾಗಿ ಎನಗೆ ನೀನು ಪರಮಾರಾಧ್ಯ ಕಾಣಾ
ಚೆನ್ನಬಸವಣ್ಣಾ.