ಕೋಟಿ ಚೆನ್ನಯ
ಕೋಟಿ ಚೆನ್ನಯ
ಮಡಿಕೇರಿ ಸೆಂಟ್ರಲ್ ಹಾಯ್ ಸ್ಕೂಲಿನ ಹೆಡ್ ಮಾಸ್ತರ್
ಪಂಜೆ ಮಂಗೇಶರಾವ್ ಬಿ.ಎ., ಎಲ್.ಟಿ.
1924
ಮಂಗಳೂರು
ಸದಾನಂದ ಕೋಒಪರೇಟಿವ್ ಪ್ರಿಂಟಿಂಗ್ ವರ್ಕ್ಸ್, ಲಿಮಿಟೆಡ್ ನಲ್ಲಿ
ಮುದ್ರಿತವಾಗಿ
ಬಾಲಸಾಹಿತ್ಯ ಮಂಡಲ ಲಿಮಿಟೆಡ್, ಕೋಡಿಯಾಲಬೈಲ
ಇವರಿಂದ ಪ್ರಕಟಿತವಾಯಿತು.
All Rights Reserved by the Publishers.
ಬೆಳೆ: 5 ಆಣೆ,
ಮುನ್ನುಡಿ
[ಸಂಪಾದಿಸಿ]ಈ ಸಂಸಾರದ ಕಷ್ಟಸಂಕಷ್ಟಗಳೂ ಕಾಯಿಲೆ ಕಸಾರಿಕೆ ಗಳೂ ದೆವ್ವ ದೇವತೆಗಳಿಂದ ಪ್ರಾಪ್ತವಾಗುತ್ತವೆಂದು ನಂಬಿ, ಹಣ್ಣು ಕಾಯಿಯ ಹರಕೆಯಿಂದಾಗಲಿ ರಕ್ತಮಾ ಸದ ಬಲಿಯಿಂದಾಗಲಿ ಅವುಗಳ ಉಗ್ರತೆಯನ್ನು ಶಮನಿಸಲು ಪ್ರಯತ್ನ ಪಟ್ಟು, ಬಹು ಕಾಲದಿಂದ ಅವನ್ನು ನಂಬಿಕೊಂಡು ಬಂದಿರುವ ಸೀಮೆಗಳಲ್ಲಿ ತುಳುನಾಡು ಎಂದಾಗಿದೆ. ಇಲ್ಲಿ ಗ್ರಾಮಕ್ಕೆ ಬಂದರಂತೆ ಒಂದು 'ಭೂತ' ಇದೆ; ಆ ಭೂತದ ಸಲುವಾಗಿ ವರ್ಷಕ್ಕೊಂದು ಜಾತ್ರೆ ಇದೆ; ಆ ಸಮಯದಲ್ಲಿ ಆ ಭೂತದ ವೇಷವನ್ನು ಧರಿಸಿಕೊಂಡು, ಆ ವೇಷದಿಂದ ಕುಣಿಯತಕ್ಕ ಪ್ರತ್ಯೇಕ ಜಾತಿಯವರೂ ಇದ್ದಾರೆ. ಭೂತವನ್ನು ಕಟ್ಟಿ ಕುಣಿಯುವ ಮೊದಲು ಆ ವೇಷಗಾರನು ಎರಡು ಮೂರು ತಾಸುಗಳ ತನಕ ಒಂದೇ ತೆರನಾಗಿ ಸ್ವರವೆತ್ತಿ ತುಳು ಹಾಡನ್ನು ಹೇಳುವರು. ಇದಕ್ಕೆ 'ಭೂತದ ಸಂಧಿ' ಎಂಬ ಹೆಸರೇ ತುಳು ನಾಡಿನಲ್ಲಿ ವಾಡಿಕೆಯಾಗಿದೆ. ಆಯಾ ಭೂತದ ವೃತ್ತಾಂತವು ಆಯಾ ಭೂತದ ಸಂಧಿಯಲ್ಲಿ ಬಹು ಮಟ್ಟಿಗೆ ಅಡಕವಾಗಿದೆ. 'ಕೋಟಿ ಚೆನ್ನಯ' ಎಂಬ ಭೂತಗಳ ಸಂಧಿಯನ್ನು ಅವಲಂಬಿಸಿ ಬರೆದ ಈ ಪುಸ್ತಕದಲ್ಲಿನ ಕಥೆಯನ್ನು ಆ ಭೂತ ಕಟ್ಟುವ ತುಳುವರ ಬಾಯಿಯಿಂದ ಈಗಲೂ ಕೇಳಬಹುದು.
ನಾನು ಈ ಕಥೆಯನ್ನು ಎನೆಕಲ್ಲು ಉಪಾಧ್ಯಾಯರಾದ (ಕೈ. ವಾ.) ರಾ. ಉಕ್ಕಣ್ಣ ಗೌಡರ ಪ್ರಯತ್ನದಿಂದ ೧೯೦೪ರಲ್ಲಿ ಹೆಕ್ಕಿಕೊಂಡ ನಂತರ ಇದೇ ಕಥೆಯ ಇಂಗ್ಲಿಷ್ ಭಾಷಾಂತರವನ್ನು 'ಇಂಡಿಯನ್ ಎಂಟಕ್ವೆರಿ ' ಎಂಬ ಇಂಗ್ಲಿಷ್ ಮಾಸಪತ್ರಿಕೆಯ ಹಳೆಯ ಸಂಚಿಕೆಯಲ್ಲಿ ಓದಿ, ಇದರ ಮೂಲವು ಡಾಕ್ಟರ್ ಮೊಗ್ಲಿಂಗ್ ಎಂಬವರಿಂದ ಸಂಗ್ರಹಿಸಲ್ಪಟ್ಟ ಪಾಡ್ದೊನೆಳು' ಎಂಬ ಪುಸ್ತಕದಲ್ಲಿದೆ ಎಂದು ತಿಳಿದು, ಆ ಪುಸ್ತಕವನ್ನು ೧೯೦೯ರಲ್ಲಿ ಸಂಪಾದಿಸಿಕೊಂಡೆನು.
ಡಾಕ್ಟರ್ ಮೊಗ್ಲಿಂಗರ 'ತುಳು ಪಾಡ್ದೊನೆ'ಯಲ್ಲಿಯೂ ನಾನು ಕೇಳಿದ್ದ ಕೋಟಿ ಚೆನ್ನಯರ 'ಸಂಧಿಯಲ್ಲಿಯೂ' ಮುಖ್ಯವಾದ ಕಥಾಭಾಗವು ಒಂದೇಯಾಗಿದ್ದರೂ, ಅಲ್ಲಲ್ಲಿ ಅನೇಕ ವ್ಯತ್ಯಾಸಗಳು ಕಂಡು ಬಂದುದರಿಂದ, ಕಥೆಯ ರಂಗಸ್ಥಳಗಳಾಗಿದ್ದ ಪಂಜಪಡುಮಲೆ ಗ್ರಾಮಗಳನ್ನು ಸಂಚರಿಸಿ, ಅಲ್ಲಿಯ ಭೂತ ಕಟ್ಟು ವವರಿಂದ ಈ ಕಥೆಯ ಬೇರೆ ಬೇರೆ ಪಾಠಾಂತರಗಳನ್ನು ಸಂಗ್ರಹಿಸಿ, ಎಂಟು ವರ್ಷಗಳ ತರುವಾಯ ಎಂದರೆ ೧೯೧೬ರಲ್ಲಿ ಡಾಕ್ಟರ್ ಮೊಗ್ಲಿಂಗರ ತುಳು ಪಾಡ್ದೊನೆಯನ್ನು ನನ್ನ ಸ್ನೇಹಿತರಾದ ರಾ, ರಾ. ಆರ್, ಎಸ್, ಬಾಗಲೋಡಿ ಯವರಿಂದ ಯಥಾವತಿಯಾಗಿ ಕನ್ನಡಿಸಿ, ಕಥೆಯನ್ನು ಪ್ರಕಟಿಸಬೇಕೆಂದು ಯತ್ನಿಸಿದೆನು. “ಇದ್ದದನ್ನು ಇದ್ದ ಹಾಗೆಯೇ ಪ್ರಕಟಿಸಲೋ ಎಂದರೆ, ಕಥಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿರದೆ, ಕಥೆಯ ಸಂವಿಧಾನಕ್ಕೆ ಭಂಗಬರುತ್ತದೆ. ಕಥೆಯನ್ನು ಬೇಕಾದಂತೆ ಪಲ್ಲಟಸಿ ಬರೆಯಲೂ ಎಂದರೆ, ಪುರಾತನ ವಿಗ್ರಹಕ್ಕೆ ಬೊಟ್ಟಿಟ್ಟ ದೋಷವು ಬರುತ್ತದೆ” – ಹೀಗೆಯೇ ಏನು ಮಾಡಬೇಕೆಂದು ನಾನು ಧೃಡಮಾಡಲಾರದೆ, ಎಂಟು ವರ್ಷಗಳ ವರೆಗೆ ಕೈಬರಹದ ನನ್ನ ಪ್ರತಿಗಳನ್ನು ಕಟ್ಟ ಇಟ್ಟಿದ್ದೆನು. ಗೆದ್ದಲ ಬಾಯಿಂದ ತಪ್ಪಿಸಿಕೊಂಡ ಆ ಹಳಯ ಕಾಗದಗಳನ್ನು ಇನ್ನೊಮ್ಮೆ ನೋಡಿ ಈಗ ಮುದ್ರಿಸುವುದಕ್ಕೆ ಇತ್ತಲಾಗಿನ ಮಂಗಳೂರು ವಾರ್ತಾ ಪತ್ರಿಕೆಗಳಲ್ಲಿ ಕೋಟಿಚೆನ್ನಯರ ವಿಷಯವಾಗಿ ಒಂದೆರಡು ಲೇಖಗಳು ಪ್ರಕಟವಾದದ್ದೇ ಕಾರಣವಾಯಿತು.
ಅಕ್ರಮ, ವ್ಯರ್ಥ, ಪುನುರುಕ್ತ, ಅಪಾರ್ಥ, ಹತೋಪಮ್ಮೆ ಲೋಕನಯ ವಿರುದ್ದತೆ ಎ೦ಜಿ ವಶನದೋಷಗಳಲ್ಲಿ ಮೊದಲನೆಯ ಮೂರು ದೋಷಗಳು ಮಾತ್ರವೇ ಮೂಲಕಥೆಯಲ್ಲಿ ಇದ್ದುದರಿಂದ, ಅವನ್ನು ತೆಗೆದುಬಿಟ್ಟು ನನಗೆ ದೊರೆತಿದ್ದ ಪಾಠಾಂತರಗಳಲ್ಲಿಯ ಕಥಾಭಾಗಗಳೆಲ್ಲಾ ಒಂದನ್ನೊಂದು ಕೂಡುವಂತೆ ಮಾಡಿ ಕೋಟಿಚೆನ್ನಯರ ತುಳು “ಪಾಡ್ದೊನೆಯನ್ನು ಕನ್ನಡಿಸಿರುತ್ತೇನೆ". ಮೂಲದಲ್ಲಿದ್ದ ಒಂದೆರಡು ಅಸಹ್ಯ ಪ್ರಸಂಗಗಳನ್ನೂ ಚರ್ವಿತಚವ್ರಣವನ್ನೂ ಕಥಾನಾಯಕರ ಭೀಕರವಾದ ಕೌರವನ್ನೂ ಬಿಟ್ಟು ಬಿಟ್ಟು, ಬ್ರಾಹ್ಮಣ ಜೋಯಿಸನ ವೃತ್ತಾಂತವನ್ನೂ ಪಡುಮಳ ಬೀಡಿನ ದಹನ ಪ್ರಸ್ತಾಪವನ್ನೂ ಕಥೆಯ ಚೌಕಟ್ಟಿನಲ್ಲಿ ನೂತನವಾಗಿ ಸೇರಿಸಿರುತ್ತೇನೆ,
ಮಳೆಗಾಲದ ಹಗಲು ಹೊತ್ತಿನಲ್ಲಿ ತುಳುನಾಡಿನ ಒಕ್ಕಲಿಗನು ನಾಟಿ ಕೆಲಸವನ್ನು ಮುಗಿಸಿ, ಹೊತ್ತು ಮುಳುಗುವುದರೊಳಗೆ ತನ್ನ ತುಲ್ಲು ಮನೆಯನ್ನು ಸೇರಿಕೊಂಡು ಬೇಗನೆ ಊಟ ಮಾಡಿ, ಹೊಯ್ಕೆಂದು ಹೊರಗೆ ಹೊಯ್ಯುತಿದ್ದ ಕಾರತಿಂಗಳ ಮಳೆಯಿಂದ ರಾತ್ರಿಯ ಕತ್ತಲು ಭಯಂಕರವಾಗಿ ಕಾಣುತ್ತಿದ್ದಾಗ—— ಮಿಣಮಿಣನೆ ಉರಿಯುವ ಬೆಳಕಿನ ಬಳಿಯಲ್ಲಿ ಕುಳಿತುಕೊಂಡು ಆತನು ದುಡಿಯಿಂದ ತಾಳಹಾಕಿ ಬಾಯಿಂದ ರಾಗವೆತ್ತಿ ಹಾಡುವ ಪಾಡೋನೆಯನ್ನು ಕೇಳಿ ಉಂಟಾಗುವ ರಸಾಸ್ವಾದನೆಯು ಈ ಕನ್ನಡ ಕಥೆಯ ಒಣ ಮಾತುಗಳನ್ನು ಓದುವುದರಿಂದ ಉಂಟಾಗಲಾರದೆಂದು ನನಗೆ ಗೊತ್ತಿದ್ದರೂ, ತುಳುನಾಡಿನಲ್ಲಿ ಆಗಿ ಹೋದ ಪುರಾತನ ವೀರರು ಆ ನಾಡಿನ ತುಳುವರಲ್ಲದವರ ಹೃದಯದಲ್ಲಿ ಚಿರಕಾಲ ಜೀವಂತರಾಗಿ ಸುಳಿದಾಡಿಕೊಂಡಿರ ಬೇಕೆಂಬ ಉದ್ದೇಶದಿಂದ ಬರೆದ ಹಳ ಯ ತುಳು ಕಥೆಯ ಹೊಸತೊಂದು ಕನ್ನಡ ರೂಪದಲ್ಲಿ ಇರುವ ಕುಂದುಕೊರತೆಗಳನ್ನು ಕನ್ನಡ ದೇಶಾಭಿಮಾನಿಗಳೂ ಭಾಷಾಭಿಮಾನಿಗಳೂ ಮನ್ನಿಸಬೇಕಾಗಿ ನಾನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ.
ಪಂಜೆ ಮಂಗೇಶರಾಯ
ಕೋಟಿ-ಚೆನ್ನಯ.
೧ನೆಯ ಭಾಗ
ಪಡುಮಲೆಯಲ್ಲಿ .
ಬಹುಕಾಲದ ಹಿಂದೆ ತುಳುರಾಜ್ಯದ ಒಂದೊಂದು ಭಾಗವನ್ನು ಒಂದೊಂದು ಮನೆತನದ ಅರಸರು ಆಳಿಕೊಂಡಿದ್ದರು, ಆ ರಾಜ್ಯದ ಒಂದು ಪ್ರಾಂತ್ಯಕ್ಕೆ ಬಂಗರು ಮನೆಯವರು ಅರಸರಾಗಿದ್ದರು; ಒಂದು ಸೀಮೆಗೆ ಚೌಟರು ದೊರೆಗಳಾಗಿದ್ದರು; ಒಂದು ಭಾಗದಲ್ಲಿ ಆಜಿಲ ಮನೆತನದವರು ಬಲಿಷ್ಠರಾಗಿದ್ದರು. ಈಗ ಹಳ್ಳಿಹಳ್ಳಿಗಳಲ್ಲಿ ಪಟೇಲರು ಇರುವ ಹಾಗೆ ಆ ಕಾಲದಲ್ಲಿ ಗ್ರಾಮಕ್ಕೊಬ್ಬ ಗುರಿಕಾರನಿದ್ದನು. ಇಂಥ ನಾಲ್ಕಾರು ಮಂದಿ ಗ್ರಾಮ ಗುರಿಕಾರರ ಮೇಲೆ ಮತ್ತೊಬ್ಬ ಅಧಿಕಾರಿ ಇದ್ದನು; ಇವನಿಗೆ ಬಲ್ಲಾಳ ಎಂದು ಹೆಸರು. ಬಂಗರು, ಚೌಟರು, ಆಜಿಲರು, ಸಾವಂತರು ಮೊದಲಾದವರ ಕೈಕೆಳಗೆ ಅನೇಕ ಮಂದಿ ಬಲ್ಲಾಳರಿದ್ದರು. ಇಂಥ ಒಬ್ಬ ಬಲ್ಲಾಳನು ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನ ಪಡುಮಲೆ ಎಂಬಲ್ಲಿ ಇದ್ದನು; ಮತ್ತೊಬ್ಬನು ಪಂಜದಲ್ಲಿ ಇದ್ದ ನು; ಮೂರನೆಯವನು ಎಣ್ಮೂರಲ್ಲಿ ಇದ್ದನು.
ಒಂದಾನೊಂದು ದಿನ ಆ ಪಡುಮಲೆ ಪೆರುಮಾಳು ಬಲ್ಲಾಳನು ಬೇಟೆಯಾಡುವುದಕ್ಕಾಗಿ ತನ್ನ ಸಂಗಾತಿಯವರೊಡನೆ ಹೊರಟು, ಸಮೀಪದ ಅಡವಿಯನ್ನು ನುಗ್ಗಿ, ಒಂದು ಕಾಡುಹಂದಿಯನ್ನು ಅಟ್ಟಿ ಕೊಂಡು ಹೋಗುತಿದ್ದಾಗ, ದಾರಿಯ ಮೇಲೆ ಇದ್ದ ಚೂಪಾದ ಕಾಸರ್ಕನ ಮುಳ್ಕೊಂದು ಅವನ ಪಾದಕ್ಕೆ ಚುಚ್ಚಿ, ತಲೆಗೆ ನರನರನೆ ನೋವು ಏರಿ, ಅವನು ಅಲ್ಲಿಯೇ ಬಿದ್ದು ಬಿಟ್ಟನು. "ಎಲಾ! ನನ್ನನ್ನು ಏನು ನೋಡುತ್ತೀರಿ? ಇಲ್ಲಿಯೇ ಹತ್ತಿರ ಬೂದಿ ಬೊಮ್ಮಯ ಎಂಬವ................” ಎಂಬೀ ಮಾತುಗಳು ಬಲ್ಲಾಳನ ಬಾಯಿಂದ ಬಿದ್ದವೋ ಇಲ್ಲವೋ ಎನ್ನುವಷ್ಟರಲ್ಲಿ ಅವನಿಗೆ ಕಣ್ಣು ಕತ್ತಲೆ ಬಂದು, ಅವನು ಅಲ್ಲಿಯೇ ಒರಗಿದನು. ಆಗ ಅವನ ಆಳುಗಳು ಮಲೆಗೆ ಇಳಿದು, ಗಳ ಕಡಿದು, ಚಟ್ಟೆ ಕಟ್ಟಿ, ಅದರ ಮೇಲೆ ಬಲ್ಲಾಳನನ್ನು ಮೆಲ್ಲಗೆ ಇರಿಸಿ, ಬೂದಿ ಬೊಮ್ಮಯ್ಯನ ಚಾವಡಿಗೆ ಹೊತ್ತುಕೊಂಡು ಹೋಗಿ ಇಳಿಸಿದರು.
ಇಷ್ಟರಲ್ಲಿ ಪೆರುಮಾಳು ಬಲ್ಲಾಳನಿಗೆ ಮುಳ್ಳು ತಗಲಿದ ಸುದ್ದಿ ಪಡುಮಲೆಯಲ್ಲೆಲ್ಲಾ ಹಬ್ಬಿತು. ಮುಳ್ಳು ಕೀಳುವವರು ಬೇಗಬೇಗನೆ ಬಂದು ನೋಡಿದ್ದಾಯಿತು; ಮಂತ್ರ ಮಾಡುವವರು ಮಾಡಿದ್ದಾಯಿತು; ಮದ್ದು ಕೊಡುವವರು ಕೊಟ್ಟಿದ್ದಾಯಿತು. ಬೊಮ್ಮಯ್ಯ ಬಲ್ಲಾಯನ ಬಲಿಯಾಯಿತು; ಅಮ್ಮಣ್ಣ ಬೈದ್ಯನ ಮದ್ದಾಯಿತು. ಆದರೆ ಮಾಡುವುದೇನು? ಬಲ್ಲಾಳನಿಗೆ ದಿನದಿಂದ ದಿನಕ್ಕೆ ಉರಿ ನೋವು, ಬೀಗು ಬಾವು, ಕೆಂಪು ಕೀವು ಹೆಚ್ಚು ಹೆಚ್ಚಾಯಿತು. ಅನ್ನದಲ್ಲಿ ರುಚಿ, ಹಾಸಿನಲ್ಲಿ ನಿದ್ದೆ, ಮನಸ್ಸಿನಲ್ಲಿ ಗೆಲವು, ಯಾವುದೊಂದೂ ಇಲ್ಲದೆ ಬಲ್ಲಾಳನು ನೋವಿನಿಂದ ಸಂಕಟಗೊಂಡನು; ಕಡ್ಡಿಯಂತೆ ಕಂಗಾಲಾದನು. ಮಾಗಣೆಯ ಜನರೆಲ್ಲಾ ಪಡುಮಲೆಯ ಬೀಡಿಗೆ ಹೋಗಿ, ಬಲ್ಲಾಳನ ಸ್ಥಿತಿಯನ್ನು ಕಂಡು, ಕಣ್ಣೀರು ತುಂಬಿ, ಹಿಂದೆರಳುತಿದ್ದರು.
ಹೀಗೆ ಅವನನ್ನು ನೋಡಬಂದವರಲ್ಲಿ ಒಬ್ಬನು ಒಂದು ದಿನ ಇಂಥ ಮುಳ್ಳು ಹುಣ್ಣಿಗೆ ನಮ್ಮ ಸಾಯನ ಬೈದ್ಯನು ಮುಂಚೆ ಮದ್ದು ಮಾಡುತ್ತಿದ್ದನು. ಈಗ ಅವನಿಗೆ ಚಾಳೀಸು, ಕಣ್ಣು ಕಾಣದು. ಅವನ ತಂಗಿ ದೇಯಿಗೂ ಆ ಮದ್ದು ಗೊತ್ತಿದೆ ಅಂತೆ” ಎಂದು ಮೆಲ್ಲನೆ ಹೇಳಿದನು.
ಅದಕ್ಕೆ ಮತ್ತೊಬ್ಬನು "ಅದು ಹೌದು! ದೇಯಿಯ ಮದ್ದು ಒಳ್ಳೆಯದು, ಆದರೆ ಅವಳು ಈಗ ಬರುವುದು ಹೇಗೆ? ತುಂಬಿದ ಬಸುರಿ ಎಂದು ಸಂಶಯಪಟ್ಟನು. “ಗಂಡ ಕಾಂತಣ್ಣ ಬೈದ್ಯನು ಸತ್ತು ಮೂರು ತಿಂಗಳಾಗಲಿಲ್ಲ” ಎಂದು ಇನ್ನೊಬ್ಬನು ಹೇಳಿದನು. "ದೇಯಿ ಬೈದೆತಿ ಮದ್ದು ಬಲ್ಲಳ" ಎಂಬ ವಾಕ್ಯವು ಬಲ್ಲಾಳನ ಕಿವಿಯ ಮೇಲೆ ಬೀಳುವಷ್ಟರಲ್ಲಿ ಅವನು ನನ್ನ ದಂಡಿಗೆಯಲ್ಲಿ ಅವಳನ್ನು ಕರೆದುಕೊಂಡು ಬನ್ನಿ” ಎಂದು ಬೋವಿಗಳಿಗೆ ಅಪ್ಪಣೆಮಾಡಿದನು. ಆಳುಗಳು ಕೂಡಲೆ ಹೊರಟರು.
ಪೆರುಮಾಳು ಬಲ್ಲಾಳನ ಬೋವಿಗಳು ತನ್ನ ಮನೆಯ ಬಾಗಿಲಿಗೆ ಸಿಂಗರಿಸಿ ತಂದಿದ್ದ ದಂಡಿಗೆಯನ್ನು ಕಂಡು ದೇಯಿ ಬೈದಿತಿಯು- "ಆಹಾ! ಅವಶ್ಯವಿಲ್ಲದ ಭವಿಷ್ಯ ಬಂತು" ಎಂದು ಮನಸ್ಸಿನಲ್ಲಿ ನೆನಸಿಕೊಂಡು, ಉಟ್ಟ ಉಡಿಗೆಯಲ್ಲಿಯೇ ಏಳ್ಮಲೆಗೆ ಹೋಗಿ ಏಳು ಹಿಡಿ ಸೊಪ್ಪು ಕೊಯ್ದಳು; ಮೂರ್ಮಲೆಗೆ ಹೋಗಿ ಮೂರು ಹಿಡಿ ಮದ್ದು ತಂದಳು; ಮನೆಗೆ ಬಂದು, ಅಟ್ಟ ಹತ್ತಿ, ತೆಂಗಿನಕಾಯಿ ತಂದು, ಕಾಣಿಕೆ ಇಟ್ಟಳು. ಆ ಮೇಲೆ ಅವಳು ಆ ಮದ್ದನ್ನೂ, ಕಾಯಿಯನ್ನೂ ದಂಡಿಗೆಯಲ್ಲಿ ಮಡಗಿ ಹೊರಟಳು, ಬೋವಿಗಳು ದಂಡಿಗೆಯನ್ನು ಹೊತ್ತು ಕೊಂಡು ಬಂದರು.
ಇತ್ತ ಬಲ್ಲಾಳನು ದೇಯಿ "ಬಂದಳೋ? ಬರುತ್ತಾಳೆ? ಬರುವಳೋ?” ಎಂದು ಪದೇಪದೇ ಕೇಳುತ್ತ ಅವಳ ಬರವನ್ನೇ ಎದುರು ನೋಡುತಿದ್ದನು. ಅಷ್ಟರಲ್ಲಿ ದೇಯಿಯು ದಂಡಿಗೆಯಿಂದ ಇಳಿದು, ನಾಚಿಕೊಂಡು ಹೇಚಿಕೊಂಡು ಬಂದು, ಬಲ್ಲಾಳನ ಹಾಸಿಗೆಯ ಮಗ್ಗುಲಲ್ಲಿ ಕುಳಿತುಕೊಂಡಳು.
ಬಲ್ಲಾಳನು ದೇಯಿಯ ಮೋರೆಯನ್ನೇ ದೃಷ್ಟಿಸುತ್ತ “ಬೈದಿತಿ! ನನ್ನ ಒಂದು ಜೀವವನ್ನು ಉಳಿಸಿಕೊಡಪ್ಪಾ! ಹಿಂದೆ ನನ್ನ ತಾಯಿಯ ಬಸುರಿಂದ ನಾನು ಬಂದೆ; ಇಂದು ನಿನ್ನ ಬಸುರಿಂದ ಬಂದವನು ಎನ್ನಿಸಿಬಿಡವ್ವಾ! ನಿನಗೆ ಯಾರೂ ಮಾಡದಿದ್ದ ಮಾನ ಮಾಡುವೆ; ಕೊಡದಿದ್ದ ಉಡುಗೊರೆ ಕೊಡುವೆ' ಎಂದು ಅಂಗಲಾಚಿ ಹೇಳಿದನು.
ದೇಯಿ ಬೈದಿತಿಯು ಕೂಡಲೆ ಎದ್ದಳು; ತಾನು ತಂದಿದ್ದ ಔಷಧದ ಪೊಟ್ಟಳವನ್ನು ಬಿಚ್ಚಿದಳು; ಅಮ್ಮಣ್ಣನು ಮೊದಲು ಹಚ್ಚಿದ್ದ ಮದ್ದನ್ನು ತೊಳೆದು ತೆಗೆದಳು; ಅನಂತರ ತನ್ನ ಮದ್ದನ್ನು ಅರೆದು ಪೂಸಿದಳು; ಮಂತ್ರದಿಂದ ಮಾಣಿಸಿದಳು; ಸೊಪ್ಪಿನಿಂದ ತಣಿಸಿದಳು,
ಹೀಗೆ ಮಾಡಲಾಗಿ,-ಬಲ್ಲಾಳನಿಗೆ ಗಳಿಗೆಯಿಂದ ಗಳಿಗೆಗೆ, ದಿನ ದಿಂದ ದಿನಕ್ಕೆ- ಎದೆಯಲ್ಲಿ ಇದ್ದದ್ದು ನಡುವಿಗೆ ಬಂತು; ನಡುವಿನಲ್ಲಿ
ಇತ್ತ ಬಲ್ಲಾಳನಿಗೆ ಮೊದಲಿಗಿಂತ ಚೆನ್ನಾಗಿ ಮೈ ತುಂಬಿದ್ದನ್ನು ಕಂಡು, ಒಂದು ದಿನ ದೇಯಿ ಬೈದಿತಿಯು 'ಬಲ್ಲಾಳರೆ! ನಾನು ಮನೆಗೆ ಹೊರಡ ಬೇಕೆಂದಿದ್ದೇನೆ. 'ನನಗೆ ಏನಾದರೂ ಕೊಡುವುದು ಇದ್ದರೆ, ಅದಕ್ಕೆ ಅಪ್ಪಣೆಯಾಗಲಿ ಎಂದು ಕೈಮುಗಿದು ಬಿನ್ನಯಸಿದಳು,
"ನೀನು ಹೋಗತಕ್ಕದ್ದೆ! ಆದರೆ ಉಡುಗೊರೆ ಕೊಡಲಿಕ್ಕೆ ನಮ್ಮ ಮಲ್ಲಯ ಬುದ್ಧಿವಂತನು ಈಗ ಇಲ್ಲಿ ಇಲ್ಲವಷ್ಟೆ! ಅವನ ಕೂಡೆ ಒಂದು ಮಾತು ಕೇಳಬೇಕು ಎಂದು ಪೆರುಮಾಳು ಬಲ್ಲಾಳನು ಹುಬ್ಬುಗಳನ್ನು ಎತ್ತಿ ಹೇಳಿದನು.
"ಹಾಗೊ? ಅಳಿದ ಜೀವ ಉಳಿಸಿಕೊಡಲು ಆಗ ಇಲ್ಲದವರು ಈಗ ಮಾತ್ರ ಬೇಕೊ?” ಎಂದು ದೇಯಿಯು ಮರುಮಾತು ಕೊಟ್ಟು, ಬೀಡಿನ ಚಾವಡಿಯಿಂದ ಎದ್ದಳು.
ಅಷ್ಟರಲ್ಲಿ ಬೀಡಿನ ಯಜಮಾನಿ ಹೆಂಗಸು 'ಜೀವದಾನ ಮಾಡಿದ್ದಕ್ಕೆ ಯಾವ ಮಾನ ಮಾಡಿದರು? ಆಹಾ! ” ಎಂದು ತನ್ನೊಳಗೆ ಮಾತಾಡಿ ಕೊಂಡದ್ದನ್ನು ಬಲ್ಲಾಳನು ಕೇಳಿ, ಚಾವಡಿಗೆ ಬೆನ್ನು ಹಾಕಿ ಹೋಗುತಿದ್ದ ಆ ದೇಯಿಯನ್ನು ಮತ್ತೆ ಕರೆಯಿಸಿ ಇಕೊ ! ಈ ತಳಿಗೆಯನ್ನು ಹಿಡಿದುಕೊ” ಎಂದು ಹೇಳಿ, ವೀಳ್ಯದ ಹರಿವಾಣವನ್ನು ಅವಳ ಕೈಯಲ್ಲಿ ಕೊಟ್ಟು, ಅವ್ವಾ! ಈ ಎಣ್ಣೆ ಓಲೆ, ಎಸಳು ಬುಗುಡಿ, ಮುಳ್ಳಿನ ಕೊಪ್ಪು, ಪಚ್ಚೆಯ ಮೂಗುತಿ, ಇವೆಲ್ಲ ನಿನಗೆ; ಇನ್ನು ಕೊಡಲಿಕ್ಕೆ ಇರುವುದನ್ನು ನಿನ್ನ ಮುಂದಿನ ಮಕ್ಕಳಿಗೆ ಕೊಡುತ್ತೇನೆ' ಎಂದು ಸಂತಯಿಸಿದನು. “ನನ್ನ ಮಗಳು, ಕಿನ್ನಿದಾರು ಇದಾಳೆ.—ಅವಳಿಗೆ ?” ಎಂದು ಬೈದಿತಿಯು ಕೇಳಿದಳು. “ಅವಳು ನಿಮ್ಮ ಮನೆಯಲ್ಲಿ ಇದ್ದಾಳೋ” ಎಂದು ಬಲ್ಲಾಳನು ಪ್ರಶ್ನೆ ಮಾಡಿದನು.
ಬೈದಿತಿಯು ಅವಳಿಗೆ ಏಳುವರ್ಷ ವಯಸ್ಸು ಎಂದಾಗ ಪಂಜದಲ್ಲಿ ಪಯ್ಯ ಬೈದ್ಯನಿಗೆ ಕೈ ಹಿಡಿಸಿ ಕೊಟ್ಟು ಬಿಟ್ಟಿದ್ದೇವೆ. ಈ ವರ್ಷದ ಅಯನಕ್ಕೆ ಇಲ್ಲಿಗೆ ತರಿಸಿಕೊಳ್ಳಬೇಕೆಂದಿದ್ದೇನೆ' ಎಂದಳು.
ಅದಕ್ಕೆ ಬಲ್ಲಾಳನು ಈ ಪಟ್ಟಿಯ ಸೀರೆ, ಈ ಕುತ್ನಿಯ ರವಕೆ, ಈ ಚಿನ್ನದ ಬಳೆ ಅವಳಿಗೆ” ಎಂದು ಹೇಳಿ ಕೆಲವು ಒಡವೆ ವಸ್ತುಗಳನ್ನು ಕೊಟ್ಟು, ದೇಯಿಬೈದಿತಿಯನ್ನು ಕಳುಹಿಸಿದನು. ಬೀಡಿನ ಚಾವಡಿಯಿಂದ ಇಳಿದು ಬಂದ ದೇಯಿಗೆ ಕಂಬಳದ ಗದ್ದೆಯ ಹತ್ತಿರ ಬರುವಷ್ಟರಲ್ಲಿ ಹೆರಿಗೆ ಬೇನೆಯು ತೋರಿತ್ತು ಅವಳು ಗದ್ದೆಯ ತವರಿಯ ಮೇಲಿನ ಒಂದು ಕೆಂದಾಳೆ ತೆಂಗಿನ ಮರಕ್ಕೆ ಒರಗಿ ಕೊಂಡು, ವ್ಯಥೆಯಿಂದ ನಿಂತುಬಿಟ್ಟಳು. ಅಷ್ಟರಲ್ಲಿ ಹಿಂದೆ ಹೇಳಿದ ಆ ಮಲ್ಲಯ ಬುದ್ಧಿವಂತನು ಬೀಡಿಗಾಗಿ ಅದೇ ದಾರಿಯಲ್ಲಿ ಬರುತಿದ್ದು, ಹಾದಿಗೆ ಅಡ್ಡವಾಗಿ ಕದಲದೆ ನಿಂತಿದ್ದ ದೇಯಿಯನ್ನು ಕಂಡು, “ಅಬ್ಬ! ಬಿಲ್ಲರ ಹೇಣ್ಣೊ? ರಕ್ತದ ಕೊಬ್ಬೊ? ದುಡ್ಡಿನ ಸೊಕ್ಕೊ?” ಎಂದು ಬಿರುಸಾಗಿ ಬಾಯಿ ಮಾಡಿದನು. ದೇಯಿಯು ಉಸ್ಸೆಂದು ಉಸಿರುಬಿಟ್ಟು “ನಾನು ಸೊಕ್ಕಿನಿಂದ ನಿಂತದ್ದೇ ಆದರೆ ನಾನು ಮಾಡಿದ್ದನ್ನು ನಾನೇ ಉಣ್ಣುವೆ. ನಾನು ಸಂಕಟದಿಂದ ನಿಂತದ್ದು ಹೌದಾದರೆ, ನನ್ನ ಮಕ್ಕಳು ನೋಡಿಯಾರು?” ಎಂದು ಮೆಲ್ಲನೆ ಉತ್ತರ ಕೊಟ್ಟಳು.
ಇಷ್ಟರೊಳಗೆ ಬೇನೆಯ ಸುದ್ದಿಯು ಬೀಡಿಗೆ ಮುಟ್ಟಿತು. ಪೆರುಮಾಳು ಬಲ್ಲಾಳನು ದೇಯಿಯ ಹೆರಿಗೆಗಾಗಿ ಎಲ್ಲವನ್ನು ಏರ್ಪಡಿಸಿದನು. ದೇಯಿಯು ಬೀಡಿನ ಒಂದು ಅರೆಯಲ್ಲಿ ಅವಳಿಜವಳಿ ಗಂಡು ಮಕ್ಕಳನ್ನು ಹೆತ್ತಳು, ಸೂತಕದ ದಿವಸಗಳು ಕಳೆದನಂತರ ಮಕ್ಕಳಿಗೆ ನಾಮಕರಣವಾಯಿತು. 'ದಕ್ಷಿಣ ಕೋಟೇಶ್ವರ ದೇವರೆ ಬದಿಕಲ್ಲು ಬಾಳುವಂತ ಬಾಳು' ಎಂದು ಹರಸಿ ಹಿರಿಯ ಮಗುವಿಗೆ ಕೋಟಿ ಎಂತಲೂ, ಉತ್ತರ ಚೆನ್ನಿಗ ದೇವರ ಬದಿಕಲ್ಲು ಬಾಳುವಂತೆ ಬಾಳು' ಎಂದು ಹರಸಿ ಕಿರಿಯ ಮಗುವಿಗೆ ಚೆನ್ನಯ ಎಂತಲೂ ಇಬ್ಬರಿಗೂ ಹೆಸರು ಹಾಕಿದರು. ಮಕ್ಕಳಿಗೆ ನಾಮಕರಣವಾದ ತರುವಾಯ ದೇಯಿ ಬೈದಿತಿಯು ಬಹಳ ಕಾಲ ಬದುಕಲಿಲ್ಲ. ಅವಳು ಸಹಜವಾಗಿ ಕಾಲವಾದಳೊ, ಇಲ್ಲವೆ ಅಮ್ಮಣ್ಣ ಬೈದ್ಯನೂ ಮಲ್ಲಯ ಬುದ್ಧಿವಂತನೂ ಕೂಡಿ ಮಾಡಿಸಿದರೆಂಬುದಾಗಿ ಹೇಳುವ ಮಾಟದಿಂದ ಸತ್ತು ಹೋದಳೋ ಎಂಬುದು ಈ ತನಕ ತಿಳಿಯ ಲಿಲ್ಲ. ಆದರೆ ಆ ಪಡುಮಲೆ ಬಲ್ಲಾಳನು ಮಾತ್ರ ಆ ತಾಯಿತಂದೆಗಳಿಲ್ಲದ ಮಕ್ಕಳನ್ನು ಬಿಟ್ಟು ಹಾಕಲಿಲ್ಲ. ಆತನು ಅವರ ದೂರದ ಸೋದರ ಮಾವನಾದ ಸಾಯಿನ ಬೈದ್ಯನೆಂಬ ಬಿಲ್ಲವನನ್ನು ಕರೆಯಿಸಿ, ಆ ಅನಾಥ ಮಕ್ಕಳನ್ನು ಅವನ ಸೆರಗಿನಲ್ಲಿ ಹಾಕಿ, ಮಕ್ಕಳ ಸಾಕಣೆಗಾಗಿ ಬಿಂದಿಗೆ ತುಂಬ ಹಾಲು, ಹಾಲಿಗಾಗಿ ಹಸು, ಹಸು ಬತ್ತಿದರೆ ಎಮ್ಮೆ, ಮಕ್ಕಳಿಗೆ ಮಲಗಲಿಕ್ಕೆ ಮಂದರಿ, ಮಂದರಿ ಹರಿದರೆ ಹಚ್ಚಡ, ಹಚ್ಚಡ ಹರಿದರೆ ಮಂದರಿ ಕೊಡಿಸಿ, ಅವನನ್ನು ಕಳುಹಿಸಿದನು. ಸಾಯನ ಬೈದ್ಯನ ಮನೆಯಲ್ಲಿ ಕೋಟಿ ಚೆನ್ನಯರು ಸಾಯನ ಬೈದಿತಿಯ ಆರೈಕೆಯಿಂದ ಬೆಳೆದು ದೊಡ್ಡವರಾದರು.
ಪಡುಮಲೆಯಲ್ಲಿ ಒಂದು ವಿಸ್ತಾರವಾದ ಆಟದ ಬೈಲು ಇದೆ. ಹಳ್ಳಿಯ ಮಕ್ಕಳು ಸಂಜೆಯಲ್ಲಿ ಚೆಂಡಾಟವನ್ನೊ ಬಿಲ್ಲಾಟವನ್ನೊ ಆ ಬೈಲಿನಲ್ಲಿ ಆಡುತಿದ್ದರು, ಬಡವರು ಮತ್ತು ಬಲ್ಲಿದರು, ಬೈದ್ಯರು ಮತ್ತು ಒಕ್ಕಲಿಗರು ಎಂಬ ಯಾವ ಭೇದವಿಲ್ಲದೆ ಎಲ್ಲರೂ ಆಟವಾಡುತಿದ್ದರು, ಆಟದಲ್ಲಿ ಮಾತಿಗೆ ಮಾತು ಬರುತ್ತದಷ್ಟೆ. ಹೀಗೆ ಒಂದು ದಿನ ಆಡುವಾಗ ಮಾತಿಗೆಮಾತು ಬಂದು, ಅಂದಿನ ಆಟವೆಲ್ಲ ಜಗಳಾಟವಾಯಿತು. ಬಿಲ್ಲವರ ಮಕ್ಕಳು ಆ ದಿವಸ ಗೆದ್ದಿದ್ದರು; ಒಕ್ಕಲಿಗರ ಮಕ್ಕಳು ಸೋತಿದ್ದರು. ಸೋತವರು ಜಗಳಕ್ಕೆ ನೆಪವನ್ನು ತೆಗೆದರು. 'ಕಳದ ಬಾಡಿಗೆ ಕೊಡಬೇಕು' ಎಂದು ಬುದ್ಧಿವಂತನ ಮಕ್ಕಳು 'ಕಳದ ಬಾಡಿಗೆ ಉಂಟೆಂದು ಆಟದ ಮೊದಲು ಕಟ್ಟು ಮಾಡಿಲ್ಲ' ಎಂದು ಚೆನ್ನಯನು ಕಚ್ಚಾಡಿ ಕಚ್ಚಾಡಿ, ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು. ಚೆಂಡು ಮಾತ್ರ ಬೈದಿತಿಯ ಮಕ್ಕಳ ಕೈಯಲ್ಲಿ ಬಿತ್ತು; ಬುದ್ದಿವಂತನ ಮಕ್ಕಳು ಬರಿಯ ಕೈಯಿಂದ ಅಳುತ್ತ ಮನೆಗೆ ಹೋದರು.
ಮನೆಗೆ ಬಂದ ಮಕ್ಕಳ ಮೋರೆಯನ್ನು ಕಂಡು, ಅವರ ದೂರು ಕೇಳಿ, ಮಲ್ಲಯ ಬುದ್ದಿವಂತನು ಕೋಟಿ ಚೆನ್ನಯರನ್ನು ಹುಡುಕಿ ಹೋದನು. ದಾರಿಯಲ್ಲಿ ಅವರಿಬ್ಬರು ಚೆಂಡಾಡುತ್ತ ತನ್ನ ಎದುರಿಗೆ ಬಂದದ್ದನ್ನು ಕಂಡು ಬುದ್ದಿವಂತನು ಅವರ ಕೈಗೆ ಹೊಡೆದು, ಚೆಂಡನ್ನು ಕಸಕೊಂಡು ಹಿಂದೆರಳಿದನು. ಕೋಟಿ ಚೆನ್ನಯರು ಕೈಯೆತ್ತಲಿಲ್ಲ.
ಅಯ್ಯಾ ! ಚೆಂಡನ್ನು ಚೆನ್ನಾಗಿ ಕಟ್ಟಿಡಿ ! ನಮ್ಮ ಸಣ್ಣ ಕೈಗಳಿಂದ ನೀವು ಕಿತ್ತ ಚೆಂಡನ್ನು ದೊಡ್ಡ ಕೈಗಳಿಂದ ಬೆಳೆದು ತಂದೇವು- ಮರೆಯಬೇಡಿ ! ” ಎಂದು ಹೇಳಿ ಇಬ್ಬರು ಹುಡುಗರು ಮನೆಯ ದಾರಿ ಹಿಡಿದರು.
ಅಲ್ಲಿಂದ ಇತ್ತ ಬುದ್ಧಿವಂತನ ಮನೆಯವರಿಗೂ ಬಿಲ್ಲವರ ಮನೆಯವರಿಗೂ ಮನಸ್ಸು ಸರಿಯಿಲ್ಲದೆ, ಜಗಳಗಳು ಹುಟ್ಟಿ, ಆಗಾಗ ಬಲ್ಲಾಳನ ಬೀಡಿಗೆ ದೂರು ಹೋಗುತಿತ್ತು. ಈ ಮನೆಯ ಕೋಳಿಯ ಮರಿ ಅವರ ಅಂಗಳಕ್ಕೆ ಹಾರಿ ಬಂತೆಂದು ಜಗಳ, ಆ ಮನೆಯ ದನದ ಕರು ಇವರ ಗದ್ದೆಯ ಹತ್ತಿರ ಬಂತೆಂದು ಜಗಳ, ಇಂಥಾ ವ್ಯಾಜ್ಯಗಳನ್ನು ಪದೇಪದೇ ತೀರಿಸುವ ಬದಲಾಗಿ ಇವರಿಬ್ಬರನ್ನು ಬೇರ್ಪಡಿಸುವುದೇ ಮೇಲೆಂದು ಪೆರುಮಾಳು ಬಲ್ಲಾಳನು ನಿಶ್ಚಯಿಸಿ, “ನೀವು ಇಬ್ಬರು ಒಂದೇ ಬೈಲಿನಲ್ಲಿ ಒಂದೇ ನೆರೆಯಲ್ಲಿ ಇದ್ದರೆ, ನಿಮ್ಮ ತೊಂಡುತೊಳಸು ನಮಗೆ ಸದಾ ಸರ್ವದಾ ತಪ್ಪದು. ಭೂಮಿಯನ್ನು ಪಾಲು ಮಾಡಿಕೊಡುತ್ತೇನೆ. ಆಸ್ತಿಯಲ್ಲಿ ಕೆಳಗಿನ ಕಂಬುಳದ ಗದ್ದೆಯು ಬುದ್ದಿವಂತನಿಗೆ, ಮೇಲಿನ ಕಂಬುಳವು ಬಿಲ್ಲವರಿಗೆ' ಎಂದು ತೀರ್ಮಾನಮಾಡಿ, ಗಡಿ ಬಿಡಿಸಿಕೊಟ್ಟು,"ಕಂಬುಳವನ್ನು ಗೋರುವಾಗ ಬಿಲ್ಲವರು ಬುದ್ಧಿವಂತನಿಗೆ ಒಂದು ಕಾಣಿಕ ಕೊಡಬೇಕು” ಎಂದು ಕಟ್ಟುಮಾಡಿದನು. ಈ ರೀತಿಯಾಗಿ ಗದ್ದೆಗಳನ್ನು ವಿಂಗಡಿಸಿಕೊಟ್ಟ ತರುವಾಯ ಕೋಟಿ ಚೆನ್ನಯರು ಅನಿಲಜೆ ಬೈಲನ್ನು ಬಿಟ್ಟು, ಏರಜೆ ಎಂಬಲ್ಲಿಗೆ ಹೋಗಿ, ಅಲ್ಲಿ ಉಳುಕೊಂಡಿದ್ದರು.
ಕೋಟಿ ಚೆನ್ನಯರು ದೂರವಾದರೂ ಮಲ್ಲಯ ಬುದ್ಧಿವಂತನ ಮನಸ್ಸಿನಲ್ಲಿದ್ದ ಕಿಚ್ಚು ಮಾತ್ರ ಆರಲಿಲ್ಲ. ಒಳಗೊಳಗೆ ಬೇಯುತ್ತಲಿದ್ದ ಆ ಹಗೆಯು ಒಂದು ದಿನ ಕುದಿಬ೦ದು ಹೊರಗೆ ಹರಿಯಿತು,
ವರ್ಷ ವರ್ಷವೂ ಬರುವ ಅನಿಲಜೆ ಬೈಲಿನ ಕಂಬುಳದ ಉತ್ಸವವು ಸಮೀಪಿಸಿತು. ಬುದ್ದಿವಂತನು ಕಂಬುಳಕ್ಕೆ ಮುಹೂರ್ತ ಕೇಳಿಕೊಳ್ಳುವು ದಕ್ಕಾಗಿ ತನ್ನ ಮನೆಯಿಂದ ಹೊರಟು, ಊರ ಜೋಯಿಸನಿದ್ದಲ್ಲಿಗೆ ಹೋಗುತಿದ್ದನು. ಜೋಯಿಸನ ಮನೆಗೆ ಹೋಗಲು ಏರಜೆ ಬೈಲು ದಾಟಿ ಹೋಗಬೇಕಾಗಿತ್ತು. ಬುದ್ಧಿವಂತನು ಹೋಗುವುದನ್ನು ಕಂಡು, ಕೋಟಿಯು ತಮ್ಮ ಮನೆಯಿಂದ ಹೊರಕ್ಕೆ ಬಂದು-'ಅಯ್ಯಾ ! ನಮ್ಮ ಕಂಬುಳಕ್ಕೂ ಮುಹೂರ್ತ ಕೇಳಿಬಿಡಿ” ಎಂದು ಹೇಳಿ, ಜೋಯಿಸನ ದೇವರಿಗೆ ಕಾಣಿಕೆಯಾಗಿ ತೆಂಗಿನ ಕಾಯನ್ನು ಕೊಟ್ಟರು. ಮಲ್ಲಯನು ಹೂ೦ಕುಟ್ಟಿ ಮುಂದರಿಸಿ, ಅವನ ತಲೆಯು ತನ್ನ ಕಣ್ಣಿಗೆ ಮರೆಯಾದ ಕೂಡಲೆ ಆ ಹರಕೆಯ ತೆಂಗಿನಕಾಯನ್ನು ದಾರಿಕಲ್ಲಿಗೆ ಒಡೆದು, ನೀರು ಕುಡಿದ, ಕೊಬ್ಬರಿ ತಿಂದು, ಜೋಯಿಸನಿದ್ದಲ್ಲಿಗೆ ಹೋದನು; ಮರಳಿ ಬರುವಾಗ ನಮ್ಮ ಕಂಬುಳಕ್ಕೆ ಈ ಮಂಗಳವಾರ ಮುಹೂರ್ತ, ನಿಮ್ಮ ಕಂಬುಳಕ್ಕೆ ಮುಂದಿನ ಮಂಗಳವಾರ ಕೂಡಿಬರುತ್ತದಂತೆ” ಎಂದು ಸುಳ್ಳೇ ಹೇಳಿದನು. ಆದರೆ ಚೆನ್ನಯನಿಗೆ ಬುದ್ಧಿವಂತನ ಮಾತಿನಲ್ಲಿ ಸಂಶಯ ಬಾರದೆ ಹೋಗಲಿಲ್ಲ ಬುದ್ಧಿವಂತನ ಕಂಬುಳ ನಾಡದು ಮಂಗಳ ವಾರವಷ್ಟೆ ! ನಮಗೂ ಅದೇ ದಿನ ಕಂಬುಳ ಆಗಬೇಕು. ಬುದ್ಧಿವಂತನು ಗೋರುವ ದಿನವೇ ನಾವು ಗೋರಬೇಕು; ' ಅವನು ಬಿತ್ತುವ ದಿನವೇ ನಾವು ಬಿತ್ತಬೇಕು” ಎಂದು ಅವನು ಅಂತರಂಗದಲ್ಲಿ ನಿಶ್ಚಯಿಸಿಕೊಂಡು, ಅಟ್ಟದಲ್ಲಿದ್ದ ಬತ್ತದ ಬೀಜವನ್ನು ತೆಗೆದು, ನೀರಿನಲ್ಲಿ ನೆನೆಹಾಕಿ, ಮನೆ ಮನೆಗೆ ಹೋಗಿ 'ಕಂಬುಳಕ್ಕೆ ನಾಳೆ ಆಳುಬೇಕು, ಎತ್ತುಬೇಕು. ನಾಲ್ಕೆತ್ತು ಇದ್ದವರು ಎರಡೆತ್ತು ನಮ್ಮ ಗದ್ದೆಗೆ ಬಿಡಬೇಕು, ಎರಡೆತ್ತು ಬುದ್ದಿವಂತನ ಗದ್ದೆಗೆ ಬಿಡಬೇಕು, ಎರಡೆತ್ತು ಇದ್ದವರು ಮನಸ್ಸಿದ್ದರೆ ಎರಡನ್ನೂ ನಮ್ಮ ಗದ್ದೆಗೆ ಅಟ್ಟಬೇಕು, ಇಲ್ಲದಿದ್ದರೆ ಅವನ ಗದ್ದೆಗೆ ಅಟ್ಟಬೇಕು' ಎಂಬುದಾಗಿ ಸಾರಿದನು.
ಇದನ್ನು ಕೇಳಿ ಬುದ್ಧಿವಂತನು ಸ್ವಲ್ಪ ಬಿಸಿಯಾಗಿ, ನಿಮ್ಮ ಕಂಬುಳಕ್ಕೂ ನಾಳೆಯ ದಿನವೇ ಕೂಡಿಬಂತೇ ? ಇರಲಿ ! ನಮ್ಮ ಕಂಬುಳವು ನಾಳೆಯೇ ಆಗುವುದು. ಬೆಳ್ಳಿ ಮೂಡಿ ಬೆಳಕು ಹರಿಯುವಷ್ಟರಲ್ಲಿ, ನಿಮ್ಮ ಎತ್ತು ನಮ್ಮ ಗದ್ದೆಗೆ ಇಳಿಯಬೇಕು. ಮನೆಯ ಹೆಂಗಸರು ನೀರಿಗೆ ಬರುವಷ್ಟರಲ್ಲಿ ನಮ್ಮ ಗದ್ದೆಯಲ್ಲಿ ಎತ್ತು ಬಂದು ನಿಲ್ಲಬೇಕು?” ಎಂದು ಕಣ್ಣು ಕೆರಳಿಸಿ ಹೇಳಿ ತನ್ನ ಮನೆಗೆ ಹಿಂತಿರುಗಿದನು. ಇರುಳು ಕಳೆದು ಬೆಳಕು ಹರಿಯಿತು, ಕೋಟಿ ಚೆನ್ನಯರ ಗದ್ದೆಯ ಎರಡು ಸಾಲು ಉತ್ತಾಯಿತು; ಆದರೂ ಬುದ್ಧಿವಂತನ ಗದ್ದೆಗೆ ಎತ್ತುಗಳು ಇಳಿಯಲಿಲ್ಲ. ಗದ್ದೆಗೋರಿ ಆದ ತರುವಾಯ ಕೋಟಿ ಚೆನ್ನಯರು ಎರಡು ಜೋಡಿ ಎತ್ತನ್ನೂ ಎರಡು ಆಳುಗಳನ್ನೂ ಬುದ್ಧಿವಂತನಿಗೆ ಕಳುಹಿಸಿದರು.
ತನ್ನ ಗದ್ದೆಗಿಂತ ಬಿಲ್ಲವರ ಕಂಬುಳವು ಮೊದಲು ಗೋರಿ ಮುಗಿದದ್ದನ್ನು ಕಂಡು ಬುದ್ಧಿವಂತನು ಕಿಡಿಕಿಡಿಯಾದನು; ತನ್ನ ಗದ್ದೆಗೆ ಇಳಿದ ಅವರ ನಾಲ್ಕೆತ್ತುಗಳನ್ನು ಕಂಡು, ತಾನು ನಿಂತಿದ್ದ ಕಟ್ಟೆಯಿಂದ ಕೆಳಕ್ಕೆ ಹಾರಿ, ನೇಗಿಲು ಕಟ್ಟಿದ ಎತ್ತುಗಳನ್ನು ಹೊಡೆದು ಹೊಡೆದು ಓಡಿಸುತ್ತ, ತನ್ನ ಗದ್ದೆಯನ್ನು ಗೋರ ತೊಡಗಿದನು.
ಹೀಗೆ ಬುದ್ಧಿವಂತನು ಸಿಟ್ಟಿನಿಂದ ಎತ್ತುಗಳನ್ನು ಬಡಿಯುವುದನ್ನು ಕಂಡು ಕೋಟಿ ಚೆನ್ನಯರು “ಅಯ್ಯಾ ! ಹೆರವರ ಎತ್ತನ್ನು ಹೊಡೆಯುವುದು ಸರಿಯಲ್ಲ. ಏಟು ಎತ್ತಿನ ಬೆನ್ನಿಗೆ ನೋವು ಮಾತ್ರ ನನ್ನ ಎದೆಗೆ, ನಮ್ಮ ಮೇಲೆ ನಿಮಗೆ ಸೇಡು ಇದ್ದರೆ ನಮ್ಮ ಮೇಲೆ ತೀರಿಸ ಬೇಕೇ ಹೊರತು ಅದನ್ನು ಬಡ ಎತ್ತಿನ ಮೇಲೆ ತೋರಿಸ ಬೇಕೇ? ” ಎಂದು ಹಿಂಜರಿಯದೆ ಮಾತಾಡಿದರು, ಬುದ್ಧಿವಂತನ ಬಾಯಿಂದ ಉತ್ತರವಿಲ್ಲ; ಉಂಕಾರ ಮಾತ್ರ ಹೊರಟಿತು.
ಆ ದಿನದ ಕಂಬುಳದ ಗೌಜಿಯು ಹೇಗೂ ಮುಗಿಯಿತು. ಊಟ ಮಾಡುವವರಿಗೆ ಊಟ ಕೊಟ್ಟಿದ್ದಾಯಿತು; ಊಟ ಮಾಡದವರಿಗೆ ಎಳನೀರು ಹಂಚಿದ್ದಾಯಿತು; ಬಂದವರನ್ನು ಮರ್ಯಾದೆಯಿಂದ ಕಳುಹಿಸಿದ್ದಾಯಿತು. ತರುವಾಯ ಪೂರ್ವ ಪದ್ಧತಿಗೆ ಸರಿಯಾಗಿ ಗದ್ದೆಯಲ್ಲಿ ಬೀಜ ಬಿತ್ತುವ ಸಂಭ್ರಮವು ಪ್ರಾರಂಭವಾಯಿತು. ಬುದ್ದಿವಂತನ ಗದ್ದೆಯ ಬೀಜವನ್ನು ದಂಡಿಗೆಯಲ್ಲಿಯೂ, ಬಿಲ್ಲರ ಗದ್ದೆಯ ಬಿತ್ತವನ್ನು ಕುಕ್ಕೆಯಲ್ಲಿಯೂ ತಂದು, ಅದನ್ನು ಬಿತ್ತಿ ಬಾಳೆಯ ಪೂಕರೆಯನ್ನು ಹಾಕಿದರು.
ಬಿತ್ತಿದ ಗದ್ದೆಯಲ್ಲಿ ಅಗೆಯು ಅಂದವಾಗಬೇಕಾದರೆ ಬಿತ್ತಿದ ನಾಲ್ಕಾರು ದಿನಗಳೊಳಗೆ ಮೊದಲಿನ ಕೊಳೆ ನೀರು ಕಳೆದು, ತಿಳಿನೀರು ಬಿಡುವುದು ಕೆಲವು ಕಡೆ ವಾಡಿಕೆಯಾಗಿದೆ. ಅದಕ್ಕಾಗಿ ಕೋಟಿಯು ಏರಜೆಯಿಂದ ಹೊರಟು ಅನಿಲಜೆಗೆ ಬಂದನು. ಕೋಟಿಯ ಗದ್ದೆಯು ನೀರು ತುಂಬಿ ರಾಮಸಮುದ್ರದಂತೆ ಕಾಣುತಿತ್ತು; ಬುದ್ದಿವಂತನ ಗದ್ದೆಯಲ್ಲಿ ಚಿಟ್ಟೆಗೆ ಕುಡಿಯಲು ನೀರು ಇಲ್ಲದೆ, ಕೊಕ್ಕರೆ ಆಡುತಿತ್ತು. ಕೋಟಿಯು ನೆಟ್ಟಗೆ ಬುದ್ಧಿವಂತನ ಮನೆಗೆ ಹೋಗಿ, ತಲೆ ಹೊರೆಯನ್ನು ಕೆಳಗಿಟ್ಟು, ಬಗ್ಗಿ ಕೈ ಮುಗಿದನು. ಬುದ್ಧಿವಂತನು ಅವನನ್ನು ನೋಡಿದರೂ ನೋಡದಂತೆ ಮಾಡಿ, ಮೋರೆ ತಿರುಗಿಸಿ ಕುಳಿತುಕೊಂಡನು. ಕೋಟಿಯು ತಾನು ನಮಸ್ಕಾರ ಮಾಡಿದರೂ ಕಣ್ಣೆತ್ತಿ ನೋಡದ ಬುದ್ಧಿವಂತನಿಗೆ ಕೇಳಿಸುವಂತೆ “ ಅಯ್ಯಾ! ನಾನು ನಾಲ್ಕು ಸಾರಿ ನಿಮಗೆ ನಮಸ್ಕಾರ ಮಾಡಿದೆ. ನೀವು ಒಂದಕ್ಕಾದರೂ ಕೈ ಅಲ್ಲಾಡಿಸಲಿಲ್ಲ! ಇರಲಿ! ಕಾಡಿನ ಕಾಸರ್ಕನ ಮರಕ್ಕೆ ಅಡ್ಡ ಬಿದ್ದಿದ್ದರೆ ಹಣ್ಣೆಲೆ ಉದುರುತಿತ್ತು, ಚಿಗುರೆಲೆ ನಗುತಿತ್ತು' ಎಂದು ಹೇಳಿದನು. ಆದರೂ ಮಲ್ಲಯ ಬುದ್ದಿವಂತನು ಮಿಾಸೆ ತಿರುವುತ್ತ ಸುಮ್ಮನಿದ್ದನು.
ಕೋಟಿಯು “ಅಯ್ಯಾ! ನಮ್ಮ ಕಂಬಳವನ್ನು ಬಿತ್ತಿ ಮೂರು ದಿನ ನಮ್ಮ ಗದ್ದೆಯ ನೀರು ಬಿಡುವುದಕ್ಕೆ ಅಪ್ಪಣೆಯಾಗಬೇಕು” ಎಂದು ಹೇಳಿ, ಮತ್ತೊಮ್ಮೆ ಕೈಮುಗಿದನು.
ಮೇಲಿನ ಗದ್ದೆಯಿಂದ ಬಿಟ್ಟ ನೀರು ಕೆಳಗಿನ ಗದ್ದೆಗೆ ಇಳಿದು ತೋಡಿಗೆ ಹರಿಯುವಾಗ, ಕೆಳಗಿನ ಗದ್ದೆಯಲ್ಲಿದ್ದ ಬಿತ್ತವೂ ಅಗೆಯ ನೀರಿನೊಡನೆ ಕೊಚ್ಚಿಕೊಂಡು ಹೋಗುವುದೆಂದು ಬುದ್ಧಿವಂತನು ತಿಳಿದಿದ್ದರೂ ಆತನು ಕಣ್ಣಿದ್ದ ಕುರುಡನಂತೆಯೂ, ಕಿವಿಯಿದ್ದ ಕಿವುಡನಂತೆಯೂ, ಬಾಯಿದ್ದ ಮೂಕನಂತೆಯೂ ಸುಮ್ಮನಿದ್ದನು.
ಅವನ ಅಲಕ್ಷ್ಮಭಾವದ ಪರಿಯನ್ನು ನೋಡಿ ಕೋಟಿಯು “ನನ್ನ ನಮಸಾರಗಳು ನಿಮ್ಮ ಗುರುಹಿರಿಯರಿಗೆ ಇರಲಿ” ಎಂದು ಹೇಳಿ, ಅಲ್ಲಿಂದ ತಟ್ಟನೆ ಇಳಿದು, ತನ್ನ ಗದ್ದೆಯ ಹತ್ತಿರ ಬಂದನು, ಗದ್ದೆಯು ನೀರು ತುಂಬಿ ಕೆರೆಯಾಗಿತ್ತು. ಕೋಟಿಯು ಒಂದು ಗುದ್ದಲಿಯನ್ನು ತನ್ನ ಹೊರೆಯಿಂದ ಈಚೆಗೆ ತೆಗೆದು, ಗದ್ದೆಯ ತೆವರಿಯನ್ನು ಒಂದು ಕಡೆ ಕಡಿದುಬಿಟ್ಟನು. ಮೇಲಿನ ಗದ್ದೆಯ ನೀರೆಲ್ಲಾ ನೆರೆಯ ನೀರಿನಂತೆ ಕೆಳಗಿನ ಗದ್ದೆಗೆ ಹರಿಯಿತು. ಜೋಯೆಂದು ಧುಮುಕುವ ಗದ್ದೆ ನೀರಿನ ಜೋಗನ್ನು ಕಂಡು, ಮಲ್ಲಯ ಬುದ್ಧಿವಂತನು ತನ್ನ ಆಳುಗಳನ್ನು ಕೂಗಿ ಕರೆದು, ಹುಲ್ಲು ಸೊಪ್ಪನ್ನು ತರಿಸಿ, ತೆವರಿಯ ಬಾಯನ್ನು ಮುಚ್ಚಿಸಿ, ತನ್ನ ಗದ್ದೆಗೆ ನೀರು ಹನಿಯದಂತೆ ಮಾಡಿಸಿ ಬಿಟ್ಟನು.
ಆಗ ಕೋಟಿಯು “ಅಯ್ಯಾ! ನಿಮ್ಮ ಆಳುಗಳು ಗದ್ದೆಯ ಬಾಯಿ ಮುಚ್ಚುವುದು ಸರಿಯಲ್ಲ. ಎಣಿಲ ಕಾಲದ ಉಪ್ಪನ್ನ, ಸುಗ್ಗಿ ಕಾಲದ ಮಳೆ ಬೆಳೆ, ಇವು ನನಗೂ ಸರಿ; ನಿಮಗೂ ಸರಿ, ನಮ್ಮ ಮೇಲೆ ನಿಮಗೆ ಹಗೆ ಇದ್ದರೆ, ಅದನ್ನು ನಮ್ಮೊಡನೆ ಸಾಧಿಸಿರಿ; ಬಿತ್ತಿದ ಬೆಳೆಯೊಡನೆ ಸಾಧಿಸಬೇಡಿರಿ, ನೀತಿ ಪ್ರಕಾರ ಹೋಗುವ ನೀರು ನೀತಿ ಪ್ರಕಾರ ಹೋಗಲಿ ಎಂದು ಹೇಳಿದನು.
ಅದಕ್ಕೆ ಬುದ್ಧಿವಂತನು ಜರ್ಬಿನಿಂದ “ಏನಂದೆ ? ನೀತಿಗೀತಿ ನಿನಗೆ ಬಿಲ್ಲರ ಕುಟ್ಟಿಗೆ ಯಾರು ಕೊಟ್ಟರೊ ? ನಿನ್ನ ಗದ್ದೆಯ ನೀರಿಗೆ ನನ್ನ ಗದ್ದೆಯ ದಾರಿಯೇ ? ಗದ್ದೆ ಒತ್ತಿನ ಕಾಡು ಕಡಿ, ಕಣಿ ತೋಡು, ನೀರು ಬಿಡು-ಹೋಗುತ್ತದೊ ಇಲ್ಲವೊ ನೋಡು !” ಎಂದು ಆರ್ಭಟಿಸಿದನು.
ಕೋಟಿಯು ಇನ್ನು ಸಮಾಧಾನದಿಂದ “ಅಯ್ಯಾ ! ನಾನು ಬಂದೇ ಇಷ್ಟಾಯಿತು. ನನ್ನ ತಮ್ಮ ಚೆನ್ನಯ ಬಂದಿದ್ದರೆ, ಒಂದಕ್ಕೆ ಒಂದೂವರೆ ಆಗುತಿತ್ತು” ಎಂದನು.
“ಏನು ಬೊಗಳುತ್ತೀ? ನಿನ್ನ ತಮ್ಮ? ಅವನೇನು ಕಾಟಿಯ ಹಾಲು ಕುಡಿದವನೇ ? ಅವನು ಬಾನನ್ನು ಒಡೆದು ಬರುತ್ತಾನೋ ಇಲ್ಲವೆ ಭೂಮಿಯನ್ನು ಬಿರಿದು ಬರುತ್ತಾನೊ? ನಿನ್ನ ತಮ್ಮ?” ಎಂದು ಬುದ್ದಿವಂತನು ಅಬ್ಬರದಿಂದ ಅಣಕಿಸಿದನು.
ಇವರಿಬ್ಬರ ಬಾಯಿಯ ಬಡಿದಾಟವನ್ನು ದೂರದಲ್ಲಿ ನಿಂತು ಕೇಳುತ್ತಲಿದ್ದ ಚೆನ್ನಯನು ತನ್ನ ಕತ್ತಿಯನ್ನು ಹಿಡಿದುಕೊಂಡು, ಸರಸರನೆ ಅಲ್ಲಿಗೆ ಬಂದನು. ಆದರೂ ಬುದ್ಧಿವಂತನ ಬಾಯಲ್ಲಿ ಬೈಗಳು ಅಡಗಲಿಲ್ಲ,
ಕೋಟಿಯು ಚೆನ್ನಯನನ್ನು ತಡಿಸಿ “ಮಲ್ಲಯ! ಬೇಡ! ಕೆಣಕ ಬೇಡ! ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯುತ್ತದೆ. ಕಾಲಿಗೆ ಎರೆದ ನೀರು ತಲೆಗೆ ಏರುವುದೇ? ಕ್ರಮ ಪ್ರಕಾರವಾಗಿ ಮೇಲಿಂದ ಕೆಳಕ್ಕೆ ಹರಿಯ ತಕ್ಕ ನೀರು ಕ್ರಮ ಪ್ರಕಾರವಾಗಿಯೇ ಹೋಗಲಿ! ಅಡ್ಡಗಟ್ಟ ಬೇಡ! ರೀತಿ ರಿವಾಜು ಮೀರ ಬೇಡ ” ಎಂದು ಹೇಳಿ, ಮತ್ತೊಮ್ಮೆ ಕೈ ಮುಗಿದನು.
“ಕ್ರಮಗಿಮ, ರೀತಿರಿವಾಜು ನಿಮಗೆ ಮುಂಡೆ........” ಎಂದು ಮಲ್ಲಯನ ನಾಲಗೆಯಿಂದ ಬೈಗಳು ಬೀಳುವಷ್ಟರಲ್ಲಿ, ಚೆನ್ನಯನು ಅಣ್ಣನ ಕೈಯಿಂದ ಬಿಡಿಸಿಕೊಂಡು, ಚಿಟ್ಟನೆ ಚೀರಿ, ಬುದ್ಧಿವಂತನ ತಲೆ ಹಿಡಿದು ಗಂಟಲನ್ನು ಹಿಂಡಿ, ಬೆನ್ನನ್ನು ಮುಟ್ಟಿ, ಮುಳ್ಳು, ಹುರಿಯನ್ನು ಮುರಿದು, ನೆಲದ ಮೇಲೆ ಅಂಗತಾನೆ ಕೆಡವಿ, ಬೆಳ್ಳಿಯ ಕಟ್ಟಿನ ಬಿಳಿಯ ಸುರಗಿಯನ್ನು ಮೂರು ಸಲ ಅವನ ಎದೆಗೆ ಹಾಕಿದನು. ಮಲ್ಲಯ ಬುದ್ಧಿವಂತನು ಕತ್ತಿಯ ತಿವಿತದಿಂದ ಬಿಸಿ ನೆತ್ತರನ್ನು ನೊರೆನೊರೆಯಾಗಿ ಕಾರಿ, ಕಾಯ ಬಿಟು ಕೈಲಾಸಕ್ಕೆ ಸಂದನು.
ಅನಂತರ ಬುದ್ದಿವಂತನ ಶವಕ್ಕೆ ಕೋಟಿ ಚೆನ್ನಯರು ನೂತನ ಸಂಸ್ಕಾರ ಮಾಡಿದರು. ಅವರು ಹೆಣವನ್ನು ಗದ್ದೆಯ ತೋಡಿನಲ್ಲಿ ಇಟ್ಟು, ಒಂದೊಂದು ಹಾರೆ ತುಂಬ ಮಣ್ಣು ತೆಗೆದು “ಈ ಮಣ್ಣು ಮುದ್ದೆ ನಿನ್ನ ತಲೆಯ ಮುಂಡಾಸು, ಇದು ಮೈಯ ಹಚ್ಚಡ, ಇದು ಕಂಬಿಯ ದೋತರ, ಇದು ಕಾಲಿನ ಎಕ್ಕಡ” ಎಂಬುದಾಗಿ ಹೇಳುತ್ತ, ಸುಗ್ಗಿಯ ಗದ್ದೆಯ ತೆವರಿಗೆ ಮಣ್ಣು ಮೆತ್ತುವಂತೆ ಹೆಣದ ಮೇಲೆ ಮಣ್ಣಿಟ್ಟು, ಬುದ್ಧಿವಂತನ ಮನೆಯ ಕಡೆಗೆ ತಿರುಗಿದರು.
ಕೋಟಿಚೆನ್ನಯರನ್ನು ಕಾಣುತ್ತಲೆ ಬುದ್ಧಿವಂತನ ಹೆಂಡತಿಯ ಎದೆಯು ದಡದಡಿಸಿತ್ತು, ಬಾಯ ನೀರು ಒಣಗಿತು. ಅವಳು ಚೆನ್ನಯನ ಕೈಯಲ್ಲಿದ್ದ ಕತ್ತಿಯ ರಕ್ತವನ್ನು ಕಂಡು, ತನ್ನ ಗಂಡನಿಗೆ ಆಪತ್ತು ಬಂತೆಂದು ತಿಳಿದು, 'ಕುಯ್ಯೋ” ಎಂದು ಕೂಗುತ್ತ, ಕಂಬಳದ ಗದ್ದೆಗೆ ಓಡಿದಳು. ಯನು “ಅಣ್ಣಾ! ಇದೀಗ ಸಮಯ! ನಮ್ಮ ಸಣ್ಣ ಕೈಗಳಿಂದ ಅಂದು ಕಸುಕೊಂಡು ಹೋದ ಚೆಂಡನ್ನು ದೊಡ್ಡ ಕೈಗಳಿಂದ ತಂದೇವೆಂಬುದಾಗಿ ನಾವು ಆಡಿದ ಮಾತನ್ನು ಸಲ್ಲಿಸುವುದಕ್ಕೆ ಇದೀಗ ಸಮಯ!” ಎಂದು ಹೇಳಿ ಆ ಮನೆಯೊಳಕ್ಕೆ ಹೋಗಿ, ತಮ್ಮ ಚಿಕ್ಕಂದಿನ ಚೆಂಡನ್ನು ಹೊರಕ್ಕೆ ತಂದು, ಅಣ್ಣಾ! ಹೊತ್ತಾಯಿತು, ಇನ್ನು ಮನೆಗೆ ಹೋಗೋಣ ! ” ಎಂದು ಹೇಳಿ, ಇಬ್ಬರು ತಮ್ಮ ಮನೆಯ ದಾರಿ ಹಿಡಿದರು. ಆಗ ಚೆನ್ನ ಇತ್ತ ಬುದ್ಧಿವಂತನ ಕೈಹಿಡಿದವಳು ನೆಟ್ಟಗೆ ಪಡುಮಲೆ ಬೀಡಿಗೆ ಹೋಗಿ, ಬಲ್ಲಾಳನ ಕಾಲಡಿಯಲ್ಲಿ ಬಿದ್ದು ಮೂಗಿನ ಮೂಗುತಿ ಕತ್ತಿನ ಕರಿಮಣಿ, ಕಿವಿಯ ಓಲೆ, ಕೈಯ ಬಳೆಗಳನ್ನು ಆತನ ಪಾದದಲ್ಲಿ ಇಟ್ಟು, ತನ್ನ ದುಃಖವನ್ನೂ ದುರ್ದಶೆಯನ್ನೂ ಹೇಳಿಕೊಂಡಳು. ಬಲ್ಲಾಳನು ಕೊಂದವರಿಗೆ ಕೊಲೆ ತಪ್ಪಲಿಕ್ಕಿಲ್ಲ” ಎಂದು ಆಕೆಗೆ ಸಮಾಧಾನ ಹೇಳಿ, ಮನೆಗೆ ಕಳುಹಿಸಿ ಕೊಟ್ಟು, ಕೋಟಿ ಚೆನ್ನಯರನ್ನು ಕರೆತರುವುದಕ್ಕೆ ತತ್ ಕ್ಷಣವೇ ಆಳನ್ನು ಅಟ್ಟಿದನು. ನರಹತ್ಯದ ಸುದ್ದಿಯಿಂದ ಬೀಡಿನವರು ಸಂಭ್ರಾಂತರಾದರು; ಹಳ್ಳಿಯವರು ಭಯಭೀತರಾದರು.
ಕೋಟಿ ಚೆನ್ನಯರು ಮನೆಗೆ ಮುಟ್ಟುವ ಮುಂಚೆಯೇ ಅವರು ಮಾಡಿದ ಘಾತುಕ ಕೃತ್ಯ ಅದನ್ನು ಕುರಿತು ವಿಧವೆಯು ಕೊಟ್ಟ ದುಃಖದ ದೂರು, ದೂರನ್ನು ಕೇಳಿ ಬಲ್ಲಾಳನಿಗಾದ ಕರಿಕರಿ ಕೋಪ, ಇವುಗಳ ಸುದ್ದಿಯೆಲ್ಲಾ ಅವರ ಸಾಕಣೆ ತಾಯಿಯಾದ ಸಾಯಿನ ಬೈದಿತಿಯ ಕಿವಿಗೆ ಬಿದ್ದು, ಅವಳು ಕಳವಳಗೊಳ್ಳುತಿದ್ದಳು, ಅಷ್ಟರಲ್ಲಿ ಇವರಿಬ್ಬರು ಮನೆಗೆ ಬಂದರು,
ಅವರನ್ನು ಕಾಣುತ್ತಲೆ ಸಾಯನ ಬೈದಿತಿಯು ಕೋಟಿ! ಏನಾಯಿತು? ಚೆನ್ನಯ! ಏನು ಮಾಡಿದಿ? ನಮಗೆ ಕೆಡುಗಾಲ ಬಂತಲ್ಲಾ!” ಎಂದು ಸಿಡಿಮಿಡಿಗೊಂಡು ಕೇಳಿದಳು.
ಆಗ ಕೋಟಿಯು “ಅಮ್ಮಾ! ಬುದ್ದಿವಂತನ ಬಾಯಿಂದ ಹದ ತಪ್ಪಿ ಮಾತು ಬಂತು. ಚೆನ್ನಯನ ಕೈಯಿಂದ ಹದ್ದು ಮೀರಿ ಏಟು ಬಿತ್ತು. ಬುದ್ಧಿವಂತನ ಹಾಳು ಒಗಟುತನಕ್ಕೂ ಚೆನ್ನಯನ ಹರೆಯದ ಅವಿವೇಕಕ್ಕೂ ಸರಿಹೋಯಿತು' ಎಂದು ಹೇಳಿ ತಲೆ ತಗ್ಗಿಸಿ ಸಿಂತನು.
ಸಾಯನ ಬೈದಿತಿಯು “ಮಕ್ಕಳೇ! ನೀವು ಮಾಡಿದ ಮಾಟಕ್ಕೆ ಬಲ್ಲಾಳನು ನಿಮ್ಮಾಟ ಆಡಿಸುತ್ತಾನಂತೆ, ನಿಮ್ಮನ್ನು ಬೆಟ್ಟದಿಂದ ಬೀಳಿಸುತ್ತಾನೊ? ಮಡುವಿನಲ್ಲಿ ಮುಳುಗಿಸುತ್ತಾನೊ? ಆನೆಯಿಂದ ತುಳಿಸುತ್ತಾನೊ? ಕುದುರೆಯಿಂದ ಓಡಿಸುತ್ತಾನೊ? ಏನು ಮಾಡುತ್ತಾನೆಂದು ಯಾರು ಬಲ್ಲರು, ದೇವರೇ!” ಎಂದು ಬಾಯಿಬಿಟ್ಟು ಅಳಹತ್ತಿದಳು. ಅವಳ ಗೋಳನ್ನು ಕಂಡು ಚೆನ್ನಯನು ಅಮ್ಮಾ! ನೀನೇಕೆ ಅಳುವೆ? ಈ ಕತ್ತಿಗೆ ಧಾರೆ ಇದೆ; ನನ್ನ ಕೈಗೆ ಚಳಕವಿದೆ. ನಾವು ಯಾರನ್ನೂ ಹೆದರಬೇಕಾಗಿಲ್ಲ. ಯಾರಾದರೂ ಸರಿಯೇ! ನಮ್ಮನ್ನು ನೀತಿಯಿಂದ ಕಂಡರೆ, ಅವರಿಗೆ ಎದೆಯ ಮೇಲಿಂದ ಹಾದಿಕೊಟ್ಟೆವು; ಅನ್ಯಾಯದಿಂದ ಕಂಡರೆ, ಅವರ ಪ್ರಾಣವನ್ನು ಹೀರಿಬಿಟ್ಟೇವು” ಎಂದು ಬಿರುಸಿಂದ ಹೇಳಿದನು.
ಸಾಯಿನ ಬೈದಿತಿಯು “ಮಕ್ಕಳೇ! ಇನ್ನು ನಿಮಗೆ ಉಳಿಗಾಲವಿಲ್ಲ. ಇಲ್ಲಿ ಇನ್ನು ಮುಂದೆ ನಿಮಗೆ ನೀರು ನಂಜಾಯಿತು, ಊರು ಹಗೆಯಾಯಿತು. ಪಡುಮಲೆ ರಾಜ್ಯದಲ್ಲಿ ಒಂದು ಹಗೆ, ಒಂಭತ್ತು ಹೇಗೆ ? ಎಂದಳು.
ಅದಕ್ಕೆ ಕೋಟಿಯು “ಹಾಗಾದರೆ, ನಾವು ಪರರಾಜ್ಯಕ್ಕೆ ಹೋಗುತ್ತೇವೆ. ನಮಗೆ ಈ ರಾಜ್ಯದಲ್ಲಿಯೇ ನೀರು ಬರೆದಿದೆಯೋ?” ಎಂದನು,
ಆ ಮಾತಿಗೆ ಬೈದಿತಿಯು ಈ ನಿಮ್ಮ ಯೋಚನೆಯು ಬಲ್ಲಾಳನಿಗೆ ಗೊತ್ತಾದರೆ, ಅವನು ಸುಮ್ಮನಿರಲಿಕ್ಕಿಲ್ಲ. ನಿಮಗೆ ತನ್ನ ರಾಜ್ಯದಲ್ಲಿ ಬೆಂಕಿ ನೀರು ಕೊಡಬಾರದಾಗಿ ಅವನು ಡಂಗುರ ಹೊಯಿಸುವನು; ನೀವು ರಾಜ್ಯದ ಗಡಿ ದಾಟುವಾಗ ನಿಮ್ಮನ್ನು ಹಿಡಿದು ತರಬೇಕೆಂದು ಉಕ್ಕಡದವರಿಗೂ, ಸುಂಕದ ಕಟ್ಟೆಯವರಿಗೂ, ಅರವಟ್ಟಿಗೆಯವರಿಗೂ ಅಪ್ಪಣೆ ಮಾಡುವನು. ಅವನ ಕಣ್ಣು ಮರಸಿಕೊಂಡು ಹೋಗುವುದು ಸರಿಯೂ ಅಲ್ಲ, ಸಾಧ್ಯವೂ ಇಲ್ಲ” ಎಂದಳು.
ಹಾಗಾದರೆ ಅವನನ್ನು ಬೀಡಿನಲ್ಲಿ ಕಂಡೇ ಹೋಗುವೆವು. ಅವನ ಭಯವೇನು?” ಎಂದು ಚೆನ್ನಯರು ಹೇಳಿದನು.
ತಾಯಿ ಮಕ್ಕಳು ಹೀಗೆ ಮಾತಾಡುತಿದ್ದಾಗ, ಬಲ್ಲಾಳನ ಜನರುಗಳು ಬಂದು, ಕೋಟಿ ಚೆನ್ನಯರನ್ನು ಬೀಡಿಗೆ ಕರೆದುಕೊಂಡುಹೋದರು, ಅವರು ಮನೆಯಿಂದ ಹೊರಡುವ ಮೊದಲು ಬೈದಿತಿಯು ಕೋಟಿಯನ್ನು ಕರೆದು, ಬಲ್ಲಾಳನ ಮುಂದೆ ಹೇಗೆ ಹೇಗೆ ವರ್ತಿಸಬೇಕೆಂದು ಆತನ ಕಿವಿಯಲ್ಲಿ ಹೇಳಿದಳು
ಮನೆಯಿಂದ ಹೊರಟ ಕೋಟಿ ಚೆನ್ನಯರು ಬಲ್ಲಾಳನ ಆಳುಗಳೊಂದಿಗೆ ಪಾಲೆ ದಾಟಿ, ಬೈಲು ಕಳೆದು, ಬೆಟ್ಟ ಹತ್ತಿ, ಹಿತ್ತಿಲಿಗೆ ಇಳಿದು, ಅಡ್ಕವನ್ನು ಅಡರಿ, ಹೊಡೆಯಲ್ಲಿ ಹೋಗಿ, ಹೊಳೆಯನ್ನು ಹಾಯ್ದು, ಕೋಟೆಯ ಆನೆಬಾಗಿಲನ್ನು ಹತ್ತಿ, ರಾಜಾಂಗಣಕ್ಕೆ ಬಂದು, ಚಾವಡಿಯನ್ನು ಬಿಟ್ಟು, ಪಡುವಣ ಪಟ್ಟ ಸಾಲೆಗೆ ಹೋಗಿ, ಬೆಳ್ಳಿಯ ಕಲಶದ ಬಿಳಿಯ ಉಪ್ಪರಿಗೆಯನ್ನು ಏರಿದರು. ಅವರು ರಾಜಾಂಗಣದಲ್ಲಿ ಬಂದಾಗಲೇ ಪಡುಮಲೆಯ ಪೆರುಮಾಳು ಬಲ್ಲಾಳನು ಉಪ್ಪರಿಗೆಯ ಕಿಟಕಿ ಬಾಗಿಲಿನಿಂದ ಇಣಿಕಿ ನೋಡಿ ಓಹೋ! ಅರೆಯಲ್ಲಿ ಹುಟ್ಟಿ ಇಲಿಯಂತೆ ಇದ್ದ ಮಕ್ಕಳು ಈಗ ಹುಲಿಯಂತಾದರು ಎಂದು ತನ್ನೊಳಗೆ ತಿಳಿದುಕೊಂಡು, ಅವರ ವಿಚಾರಣೆ ನಡಿಸುವುದಕ್ಕೆ ಓಲಗವನ್ನು ಕೊಡುವಂಥವನಾದನು.
ಕೋಟಿ ಚೆನ್ನಯರು ಒಳಕ್ಕೆ ಬಂದು, ಕುರ್ಚಿಯಂತಿದ್ದ ಒಂದು ಅರಸುಮಣೆಯ ಮೇಲೆ ಕುಳಿತುಕೊಂಡು ಓಲಗವನ್ನು ಕೊಡುತಿದ್ದ ಪಡುಮಲೆ ಬಲ್ಲಾಳನಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿದರು.
ಬಲ್ಲಾಳನು ಮಾಡಬಾರದ್ದನ್ನು ಮಾಡಿದಿರಿ! ಆಗ ಬಾರದ್ದು ಆಗಬೇಕಷ್ಟೆ' ಎಂದು ಪ್ರಾರಂಭಿಸಿದನು.
ಆಗ ಕೋಟಿಯು ತನಗೆ ಸಾಯನ ಬೈದಿತಿಯು ಕಿವಿಯಲ್ಲಿ ಹೇಳಿದ ಮಾತನ್ನು ನೆನಸಿಕೊಂಡು “ಬುದ್ದೀ! ನಮ್ಮ ತಾಯಿಗೆ ತಾವು ಕೊಟ್ಟ ಮಾತುಂಟಷ್ಟೆ” ಎಂದನು,
“ಯಾವ ಮಾತು?” ಎಂದು ಬಲ್ಲಾಳನು ಕೇಳಿದನು.
“ಬುದ್ದಿ, ಈ ಒಡವೆ ವಸ್ತುಗಳೆಲ್ಲಾ ನಿನಗೆ, ಇನ್ನು ಕೊಡಲಿಕ್ಕೆ ಇರುವುದನ್ನು ಮುಂದೆ ನಿನ್ನ ಮಕ್ಕಳಿಗೆ ಕೊಡುತ್ತೇನೆ” ಎಂದು ತಾವು ನಮ್ಮ ತಾಯಿಗೆ ಮಾತು ಕೊಡಲಿಲ್ಲವೇ? ಎಂದು ಕೋಟಿಯು ಕೇಳಿದನು.
ಬಲ್ಲಾಳ- ಕೋಟಿ, ನಿನ್ನ ತಾಯಿಗೆ ನಾವು ಆಗ ಕೊಟ್ಟ ಮಾತಿಗೂ ನೀವು ಈಗ ಮಾಡಿದ ತಪ್ಪಿಗೂ ಏನೂ ಸಂಬಂಧವಿಲ್ಲ.”
ಕೋಟಿ-ಬುದ್ದಿ, ನಾವು ಆಳು ಕೊಂದದ್ದಕ್ಕೆ ನಮಗೆ ಆಗುವುದು ಆಗಲಿ! ಆದರೆ ನೀವು ಮಾತು ಕೊಟ್ಟಿದ್ದಕ್ಕೆ ನಮಗೆ ದೊರೆಯುವುದು ದೊರೆಯಲಿ!" ಚೆನ್ನಯ- “ನಾವು ಸತ್ತ ನಂತರ ನಿಮ್ಮ ಹತ್ತಿರ ಕೇಳುವವರು
ಯಾರು?
ಬಲ್ಲಾಳ- “ಏನು ಬೇಕು, ಕೇಳಿ ಕೊಡುತ್ತೇನೆ.”
ಕೋಟಿ-ಬೀಡಿನ ಮುಂದಿನ ಬಾಕಿಮಾರು ಗದ್ದೆ.”
ಬಲ್ಲಾಳ-“ಅದಾಗದು”,
ಕೋಟಿ-'ಹಾಲು ಬತ್ತದ ಸರಳೆಮ್ಮೆ”.
ಬಲ್ಲಾಳ- ಅದು ನಮಗೆ ಬೇಕು”
ಕೋಟಿ- “ಇಡೀ ವರ್ಷ ಕಾಯಿ ಮಿಡಿ ಹಣ್ಣುಗಳನ್ನು ಒಟ್ಟಿಗೆ ಬಿಡತ್ತಿರುವ ಆ ಹಲಸಿನ ಮರ
ಬಲ್ಲಾಳ- ಅದನ್ನು ಬಿಡು. ಬೇರೊಂದು ಕೇಳು”.
ಚೆನ್ನಯ- ನಿಮ್ಮ ಇಬ್ಬರ ಹೆಂಡಿರ ಹೂದೋಟಗಳನ್ನು ಕೊಡಿಸಿ.”
ಬಲ್ಲಾಳ “ಏನಂದೆ ?
ಚೆನ್ನಯ-ನಿಮ್ಮ ಪಟ್ಟದ ಕತ್ತಿ.”
ಬಲ್ಲಾಳನು ಕೋಪದಿಂದ ಕೆಂಪಗಾಗಿ ಬೀಡಿನ ಹಾಲಿನಿಂದ ಬೆಳೆದ ನೀವು ನಮ್ಮ ಹೆಂಡಿರ ಹೂದೋಟಗಳನ್ನೂ, ನಾವು ಹಿಡಿಯುವ ಪಟ್ಟದ ಕತ್ತಿಯನ್ನೂ ಬಯಸಿದ ಮೇಲೆ ಮುಂದೆ ಯಾವುದನ್ನು ಕೇಳುವಿರಿ, ಏನನ್ನು ಮಾಡುವಿರಿ ಎಂದು ಹೇಳಲಾಗುವುದಿಲ್ಲ, ಬಿಡಲಾಗದು” ಎಂದು ಹೇಳಿ, ಅವರನ್ನು ಹೆಡೆಮುಡಿ ಕಟ್ಟಿ ತೆಗೆದುಕೊಂಡು ಹೋಗಲು ತನ್ನ ಕಡೆಯವರಿಗೆ ಕಟ್ಟಾಜ್ಞೆ ಮಾಡಿದನು.
“ಕೇಳದ ಉಚಿತ ಕೇಳಿದರೆ ಬಲ್ಲಾಳನಿಗೆ ಬಾರದ ಕೋಪವು ಬರುತ್ತದೆ ” ಎಂದು ಬೈದಿತಿಯು ತನಗೆ ಹೇಳಿದ್ದು ಸತ್ಯವೆಂದು ಕೋಟಿಗೆ ಈಗ ತಿಳಿಯ ಬಂದು, ಅವನು ತನ್ನ ಹಚ್ಚಡದೊಳಗೆ ಅಡಗಿಸಿ ಇಟ್ಟಿದ್ದ ಒಂದು ಪೊಟ್ಟಳವನ್ನು ಮೆಲ್ಲನೆ ಬಿಚ್ಚಿದನು. ಆ ಪೊಟ್ಟಳದಲ್ಲಿ ವೀಳ್ಯದೆಲೆಯ ಕವಳೆಗಳು ಇದ್ದುವು. ಹಾಲೆಮರಕ್ಕೆ ಹೋದ ಪಂಚವಳ್ಳಿ ಜಾತಿಯ ವೀಳ್ಯ, ಮಾವಿನ ಮರಕ್ಕೆ ಹೋದ ಮುಂಡುವಳ್ಳಿ ಜಾತಿಯ ವೀಳ್ಯ-ಕೋಟಿಯು ಆ ವೀಳ್ಯದೆಲೆಯ ಕವಳೆಯನ್ನು ಕೈಯಲ್ಲಿ ಹಿಡಿದು, ಬಲ್ಲಾಳನು ಓಲಗವಾಗಿದ್ದಲ್ಲಿಗೆ ಹೋಗಿ, “ನಮ್ಮ ಮಾತನ್ನು ಸಲ್ಲಿಸುವುದಕ್ಕೆ ಆರು ವರುಷದ ಗಡು” ಎಂದು ಗಟ್ಟಿಯಾಗಿ ಒದರಿ, ಆ ವೀಳ್ಯದೆಲೆಯನ್ನು ಗದ್ದಿಗೆಯ ಮೇಲೆ ಇಟ್ಟು, ಹೆದರದೆ ಅಲ್ಲಿಯೇ ನಿಂತನು. ಕೋಟಿಯು ಹೀಗೆ ಗಡು ಇಟ್ಟಿದ್ದನ್ನು ಕಂಡು ಬಲ್ಲಾಳನ ಉಪ್ಪರಿಗೆಯೇ ಗಡಗಡನೆ ನಡುಗಿತು; ಅಂತಃಪುರದಲ್ಲಿ ದಿಗಿಲು ಉಂಟಾಯಿತು; ಬೀಡಿನವರೆಲ್ಲಾ ಮೂಕರಂತೆ ಪಿಳಪಿಳನೆ ನೋಡ ಹತ್ತಿ ದರು. ಕೋಟಿ ಚೆನ್ನಯರ ಆ ವೀರಾವೇಷವನ್ನು ಕಂಡು, ಅವರ ಮೈ ಮುಟ್ಟುವಷ್ಟು ಧೈರ್ಯವಿಲ್ಲದೆ ಅಲ್ಲಿದ್ದವರೆಲ್ಲರೂ ಅಂಜುಬುರುಕರಂತೆ ಹಿಂಜರಿದರು,
ಕೋಟಿ ಚೆನ್ನಯರು ಯಾರ ತಡೆಯು ಇಲ್ಲದೆ ಬಡಬಡಬಡ ಮೆಟ್ಟಲು ಇಳಿದು, ಬೀಡಿನಿಂದ ಮಾಯವಾದರು.
ಕನಸು ಕಂಡಂತೆಯೂ ಕಣ್ಣು ಕತ್ತಲೆ ಬಂದಂತೆಯೂ ಅರಸುಮಣೆಯಲ್ಲೇ ಮರವೆಗೊಂಡಿದ್ದ ಪೆರುಮಾಳು ಬಲ್ಲಾಳನು ಒಂದು ತಾಸಿನ ತರುವಾಯ ಕಣ್ಣು ತೆರೆದು “ಬೆಳೆಯ ಬಿಟ್ಟ ಬಳ್ಳಿಯು ಬೆಳಿಸಿದವನನ್ನೇ ಬಂಧಿಸಿಬಿಟ್ಟಿತಲ್ಲಾ” ಎಂದು ಯೋಚಿಸಿ, “ಈ ಬಿಲ್ಲರ ಕೊಬ್ಬು ಬೀಡಿಗೆ ಕೆಡಕು, ನಾಡಿಗೆ ಒಡಕು ” ಎಂದು ಬಗೆದು, ಅವರನ್ನು ಹಿಡಿದು ಕೊಲ್ಲಿಸುವುದಕ್ಕೆ ನಾನಾ ಪ್ರಕಾರವಾಗಿ ಸಾಧಿಸಿದನು.
ಬಲ್ಲಾಳನ ಕೈಗೆ ಸಿಗದೆ ಅವನ ರಾಜ್ಯದಲ್ಲಿ ಹಂಗುಹೆದರಿಕೆಯಿಲ್ಲದೆ ಸುತ್ತಾಡುತ್ತಿದ್ದ ಕೋಟಿಚೆನ್ನಯರು ಒಂದು ದಿನ ನಡುಹಗಲ ಬಿಸಿಲಲ್ಲಿ ದಾರಿ ನಡೆದು, ಬಳಲಿ ಬೇಸತ್ತು, ದಣಿವಾರಿಸುವುದಕ್ಕೆಂದು ಒಂದು ಅರಳಿ ಕಟ್ಟೆಯ ಹತ್ತಿರ ಬಂದರು. ಆ ಕಟ್ಟೆ ಪರಿಷ್ಕಾರವಾಗಿತ್ತು; ಕಪ್ಪಾದರೂ ಕನ್ನಡಿಯಂತೆ ಬೆಳಗುವ ನೆಲ, ನೆಲದ ಮೇಲೆ ನಾಲ್ಕು ಕೊಡ ನೀರು ಹಿಡಿಯುವ ಗಡಿಗೆ, ಗಡಿಗೆಯ ಹತ್ತಿರ ಒಂದು ಬಿಂದಿಗೆ, ಅದರ ಎಡಕ್ಕೆ ಸ್ವಲ್ಪ ದೂರ ಒಂದು ಕಂಚಿನ ಕೈದಂಬೆ--ಇವುಗಳಿಂದ ಅದು ಅರವಟ್ಟಿಗೆ ಕಟ್ಟಿ ಎಂದು ಗೊತ್ತಾಗುತಿತ್ತು,
ಒಂದು ನಿಮಿಷದ ಮೇಲೆ ಚೆನ್ನಯನು “ಯಾರೂ ಇಲ್ಲವೆ? ಆಸರಿಗೆ ನೀರು ಬೇಕು. ಎಂದು ಕೂಗಿದನು. ಆಗ ಕಟ್ಟಿಯ ಹಿಂದುಗಡೆಯ ಒಂದು ಹುಲ್ಲು ಗುಡಿಸಲಿನಿಂದ ಒಬ್ಬ ಬ್ರಾಹ್ಮಣನು ಕಟ್ಟೆ ಹತ್ತಿ ಬಂದನು; ಮತ್ತು ಇವರನ್ನು ಕಂಡು ಒಂದು ನಿಮಿಷದವರೆಗೆ ಬೆರಗುಗೊಂಡು, “ನಿಮ್ಮ ಜಾತಿನೀತಿ ಗೊತ್ತಾಗಬೇಕಾಯಿತು” ಎಂದು ಹಗುರವಾಗಿ ಕೇಳಿದನು.
ಕೋಟಿ- “ನಾವು ಜಾತಿಯಲ್ಲಿ ಮುರ್ತೆ ಮಾಡುವವರು .”
ಚೆನ್ನಯ-ನೀತಿಯಲ್ಲಿ ನೂಲು ಹಾಕಿದವರು.”
“ಹಾಗಾದರೆ ತೆಂಕಲ ಮಗ್ಗುಲಲ್ಲಿ ಬನ್ನಿ, ಕಂಚಿನ ಕೈದಂಬೆಯಲ್ಲಿ ನೀರು ಹೊಯ್ಯುತ್ತೇನೆ. ಕೈಕೊಟ್ಟು ಆಸರು ಆರಿಸಿಕೊಳ್ಳಿ' ಎಂದು ಅರವಟ್ಟಿಗೆಯವನು ಸ್ವಲ್ಪ ಧೈರ್ಯದಿಂದ ಹೇಳಿದನು.
ಅದಕ್ಕೆ ಚೆನ್ನಯನು ನೂರು ಕುಲದವರ ಎಂಜಲ ದಂಬೆಯಲ್ಲಿ ನಾವು ಕುಡಿಯುವಂಥವರಲ್ಲ” ಎಂದನು.
ಬ್ರಾಹ್ಮಣನು ಗಾಬರಿಗೊಂಡು “ ನಾನು ಏನು ಮಾಡಲಿ? ” ಎಂದು ದೈನ್ಯದಿಂದ ಹೇಳಿದನು. ಆ ನಮ್ರತೆಯ ಮಾತಿಗೆ ಕೋಟಿಯು “ ನಾವು ಕೈಯೊಡ್ಡುತ್ತೇವೆ' ಎಂದನು.
“ಬೇಡಣ್ಣ ! ನನ್ನ ಕತ್ತಿಯ ಹಿಡಿಯನ್ನು ಹೀಗೆ ಒಡ್ಡು ತ್ತೇನೆ, ನೀರು ಹಾಕಲಿ” ಎಂದು ಹೇಳಿ ಚೆನ್ನಯನು ತನ್ನ ಕತ್ತಿಯ ತುದಿಯನ್ನು ಬಾಯೊಳಗೆ ಇಟ್ಟು, ಅದರ ಹಿಡಿಯನ್ನು ಬ್ರಾಹ್ಮಣನ ಕಡೆಗೆ ಒಡ್ಡಿದನು. ಬ್ರಾಹ್ಮಣನು ನೀರು ಸುರಿದನು, ನೀರಿನ ಒಂದೇ ಒಂದು ತಟುಕು ಕೆಳಗೆ ಬೀಳದಂತೆ ಚೆನ್ನಯನು ನೀರು ಕುಡಿದ ಚಮತ್ಕಾರವನ್ನು ನೋಡಿ, ಆ ಬ್ರಾಹ್ಮಣನು ಆಶ್ಚರ್ಯಗೊಂಡನು.
ಇಬ್ಬರು ಆಸರುಬೇಸರು ಕಳೆದನಂತರ ಕೋಟಿಯು 'ಸ್ವಾಮಿ, ತಾವು ಯಾರು ? ಇಲ್ಲಿ ನಿಮಿತ್ತ ಹೇಳುವವರು ಯಾರಾದರೂ ಇದ್ದಾರೇ ? ಎಂದು ಕೇಳಿದನು.
ಅದಕ್ಕೆ ಬ್ರಾಹ್ಮಣನು "ಬೇಕಾದರೆ ನಾನೇ ಹೇಳುತ್ತೇನೆ' ಎಂದು ಹೇಳಿ ತನ್ನ ಗುಡಿಸಲಿಗೆ ಹೋಗಿ, ಬಿಳಿ ಗೆರೆಯ ಮಂಡಲದ ಮಣೆ, ಕವಡಿ ತುಂಬಿದ ಚೀಲ, ದರ್ಭೆ ಹುಲ್ಲಿನ ಚಾಪೆ- ಇವನ್ನು ಹಿಡಿದುಕೊಂಡು ಬಂದು, ಕಣಿ ಹೇಳುವುದಕ್ಕಾಗಿ ಕುಳಿತುಕೊಂಡನು. ಕೋಟಿಚೆನ್ನಯರೂ ಅಲ್ಲೇ ಕುಳಿತುಕೊಂಡು ನೋಡುತಿದ್ದರು. ಬ್ರಾಹ್ಮಣನು ಒಮ್ಮೆ ಕವಡಿಯನ್ನು ಲೆಕ್ಕಮಾಡಿದನು; ಕೈ ಬೆರಳುಗಳನ್ನು ಎಣಿಕೆ ಮಾಡಿದನು; ಜೇಡಿ ಚೂರಿನಿಂದ ನೆಲದ ಮೇಲೆ ಬರೆದನು; ಗುಣಿಸಿ ನೋಡಿದನು; ಮಣಮಣ ಮಂತ್ರ ಹೇಳಿದನು, ಕಡೆಗೆ ಇಬ್ಬರ ಮುಖವನ್ನು ದೃಷ್ಟಿಸಿ ಅವನು ಹೀಗೆಂದನು.
"ಎರಡು ಮರಿಯಾನೆಗಳು ಕಾಡಿನಿಂದ ಹೊರಬಿದ್ದು ತೋಡನ್ನು ಕಲಕಿ, ಗದ್ದೆಯನ್ನು ತುಳಿದು, ಕಬ್ಬಿನ ತೋಟದ ಮೇಲೆ ಕಣ್ಣಿಟ್ಟಂತೆ ತೋರುತ್ತದೆ.”
ಚೆನ್ನಯನು : ಸರಿ, ಜೋಯಿಸರೇ ! ಚೆನ್ನಾಗಿ ಹೇಳಿದಿರಿ. ಇನ್ನೇನು ಕಾಣುತ್ತದೆ ?” ಎಂದು ಕೇಳಿದನು.
ಬ್ರಾಹ್ಮಣನು ಚೆನ್ನಾಗಿ ಗುಣಿಸಿ ನೋಡಿ, “ಆನೆಮರಿಗಳಿಗೆ ನಾಲ್ಕು ಕಡೆ ಅಪಾಯ, ಮೂಡು ಕಡೆಯಿಂದ ಕಿಚ್ಚಿನ ಅಪಾಯ, ಕಡೆಯಿಂದ ಕರ್ಪದ ಮೋಸ, ಬಡಗಿನಿಂದ ಕೋವಿಯ ಏಟು, ತೆಂಕಲಿಂದ ಮೊಸಳೆಯ ಕಾಟ- ಹೀಗೆಲ್ಲಾ ತೋರುತ್ತದೆ' ಎಂದು ಹೇಳಿ, “ನೀವು ಮಾತ್ರ” – ಎಂದು ಮಾತು ಬೀಳುವಷ್ಟರಲ್ಲಿ ಚೆನ್ನಯನು “ನಮಗೆ ಏನಾಗುತ್ತದೆಂದು ಹೇಳಿ ಬಿಡಿ” ಎಂದು ಒದರಿದನು.
ಚೆನ್ನಯನ ಗರ್ಜನೆಗೆ ಬ್ರಾಹ್ಮಣನ ಬೆರಳೆಣಿಕೆ ತಪ್ಪಿತು; ಅವನು ಮತ್ತೆ ಲೆಕ್ಕಹಾಕಿ ೧೯೯ ರ ಮೇಲೆ ಬಿಡಬೇಕು” ಎಂದು ಸೂಚಿಸಿದನು.
ಕೋಟಿ – “ಇನ್ನೂರು ಬಿಡಬೇಕೆ ?” ಎಂದು ಕೇಳಿದನು.
ಬ್ರಾಹ್ಮಣ - “ಇನ್ ಊರು ಬಿಡು; ಮುಂದೆ ಹತ್ತು, ಹತ್ತು, ಹತ್ತು, ಹತ್ತು ಹೀಗೆ ಏರಿಸಿ ಹೋಗಬೇಕು” ಎಂದನು.
ಕೋಟಿ- “ಎಲ್ಲಿಯವರೆಗೆ?
ಇಲ್ಲಿವರೆಗೆ ಹೋಗಬೇಕು” ಎಂದು ಬ್ರಾಹ್ಮಣನು ತನ್ನ ಬಲಗೈಯ ಬೆರಳುಗಳನ್ನು ಬಿಡಿಸಿ ತೋರಿಸಿದನು,
ಕೋಟೆಯು “ಐನೂರನ್ನು ಮುಟ್ಟಿದ ಮೇಲೆ ನಮಗೆ ಮುಹೂರ್ತಗಳು ಕೂಡಿ ಬಂದಾವೋ ?” ಎಂದು ತಿರಿಗಿ ಪ್ರಶ್ನೆ ಇಟ್ಟನು. ಬ್ರಾಹ್ಮಣನು ಕವಡಿಗಳನ್ನು ಆಡಿಸಿ, “ಅಯ್ಯನೂರನ್ನು ಮುಟ್ಟಿದ ನಂತರದ ದಿನಗಳಲ್ಲಿ ವಿಷಗಳಿಗೆ ಸಂದರ್ಭಗಳೇ ಹೆಚ್ಚು, ಜಗಳದ ಕುರುಹು ತೋರುತ್ತದೆ” ಎಂದನು.
ಕೋಟಿ- ಯಾರೊಳಗೆ ಜಗಳ ??)
ಬ್ರಾಹ್ಮಣ “ನೆಗಳೆಗೂ ಆನೆಗೂ.
ಚೆನ್ನಯ- “ಜಗಳದಲ್ಲಿ ನಾನು ಮೊಸಳೆಯನ್ನು ಸೀಳಿಬಿಡುತ್ತೇನೆ.”
ಕೋಟಿಯು ಜಗಳದಲ್ಲಿ ಏನಾಗುವುದೆಂದು ನೋಡಿ' ಎಂದು ಮರಳಿ ಪ್ರಶ್ನೆ ಇಟ್ಟನು.
ಬ್ರಾಹ್ಮಣನು ಮತ್ತೊಮ್ಮೆ ಕಾಯಿಗಳನ್ನು ಮಗುಚಿ ಹಾಕಿ, “ಜಗಳದಲ್ಲಿ ಆ ಆ ಆ ಆ..... ” ಎಂದು ಬಾಯಿತೆರೆದು ಆಕಳಿಸಿದನು.
ಚೆನ್ನಯ-ಜೋಯಿಸರೇ, ಸೊಲ್ಲು ಹೊರಡುವುದಿಲ್ಲವೇ?
ಬ್ರಾಹ್ಮಣನು – “ಬೈದ್ಯರೇ, ಆನೆಗಳೆ ನೆಲಕ್ಕೆ ಬಿದ್ದು ಸತ್ಯದ ಬುಗ್ಗೆ ಒಸರೀತ; ಕೀರ್ತಿಯ ಹೊಳೆ ಹರಿದೀತು; ಸೌಖ್ಯದ ಬೆಳೆ ಬೆಳೆದೀತು” ಎಂದು ಹೇಳುತ್ತ ದೇವರ ಹೆಸರೆತ್ತಿ, ಮಣೆಗೂ ಕಾಯಿಚೀಲಕ್ಕೂ ಪೊಡಮಟ್ಟು, ನಿಮಿತ್ತ ಹೇಳುವುದನ್ನು ಮುಗಿಸಿ, ಒಳಕ್ಕೆ ಹೋದನು.
ಕೋಟಿ ಚೆನ್ನಯರ ಮನಸ್ಸಿಗೆ ಬ್ರಾಹ್ಮಣನು ಹೇಳಿದೆಲ್ಲಾ ರುಚಿಸಿತೊ ಇಲ್ಲವೋ ಗೊತ್ತಾಗಲಿಲ್ಲ. ಆದರೂ ಬ್ರಾಹ್ಮಣನು ಮನೆಯೊಳಗಿಂದ ಹೊರಕ್ಕೆ ಬರುವ ವರೆಗೆ ಕೋಟಿಯು ಅಲ್ಲಿಂದ ಏಳಲಿಲ್ಲ.
ಒಂದು ಗಳಿಗೆಯ ತರುವಾಯ ಬ್ರಾಹ್ಮಣನು ಎರಡು ಬಿಂದಿಗೆಗಳನ್ನು ತಂದು ಅವರ ಮುಂದಿಟ್ಟನು. ಅಣ್ಣ ತಮ್ಮಂದಿರು ಬಿಂದಿಗೆಯ ಹಾಲು ಕುಡಿದು, ತಟ್ಟೆಯಲ್ಲಿ ಇಟ್ಟಿದ್ದ ವೀಳ್ಯದೆಲೆಯನ್ನು ಕೈಯಲ್ಲಿ ತೆಗೆದು ಕೊಂಡರು.
ಇಷ್ಟರಲ್ಲಿ ಹೊತ್ತು ಮುಳುಗುವುದಕ್ಕಾಯಿತು. ಅವರು ಬ್ರಾಹ್ಮಣನಿಗೂ ಅವನ ಕವಡಿಮಣೆಗೂ ಸಾಷ್ಟಾಂಗ ನಮಸ್ಕಾರಮಾಡಿ, ಕಟ್ಟೆಯಿಂದ ಇಳಿದು, ಮುಂದಕ್ಕೆ ಹೋದರು. ಆ ಅರವಟ್ಟಿಗೆ ಕಟ್ಟೆ ಎಲ್ಲಿತ್ತೊ ಅಲ್ಲಿಂದ ಹಡುಮಲೆ ಬಲ್ಲಾಳನ ಸೀಮೆಯ ಗಡಿಕಲ್ಲಿಗೆ ಬಹಳ ದೂರವಿರಲಿಲ್ಲ; ತಕ್ಕಷ್ಟು ಎತ್ತರದ ಒಂದು ಗುಡ್ಡವು ಮಾತ್ರ ಮಧ್ಯದಲ್ಲಿ ಇತ್ತು, ಕೋಟಿಚೆನ್ನಯರು ಆ ಗುಡ್ಡವನ್ನು ಏರಿ, ಅಡ್ಡಹಾದಿಯಿಂದ ಹೋಗುತಿದ್ದಾಗ, ಚೆನ್ನಯನು “ಇದೇನು ಆಶ್ಚರ್ಯ! ಅಣ್ಣಾ, ಮೂಡು ದಿಕ್ಕಿನಲ್ಲಿ ದೇವರು ಮುಳುಗುತ್ತಾರೋ” ಎಂದು ವಿಚಾರಿಸಿದನು.
ಕೋಟಿಯು ಮೋರೆ ತಿರುಗಿಸಿ, ಕೊಂಬಳತೆಯ ದೂರದಲ್ಲಿ ಕಾಣುವ ಕೆಂಬಣ್ಣವನ್ನು ಕಂಡು “ತಮ್ಮಾ, ಸರಿ- ಅಲ್ಲಿಯೇ ನಮ್ಮ ಮನೆಯಲ್ಲವೇ ? ಹೌದು-ಇದು ಹೊತ್ತು ಮುಳುಗುವ ಬಣ್ಣ ವಲ್ಲ. ನಮ್ಮ ಮನೆ ಹೊತ್ತಿ ಮೇಲೆ ಹಾರುವ ಬೆಂಕಿಯ ನಾಲಗೆ” ಎಂದನು,
ಚೆನ್ನಯನು “ಅಣ್ಣಾ, ಜೋಯಿಸರು ಮೂಡುಗಡೆಯಿಂದ ಕಿಚ್ಚಿನ ಅಪಾಯವುಂಟೆಂದು ಕಣಿಹೇಳಿದ್ದು ನಿಜವಾಯಿತು. ಅಯ್ಯೋ ! ಮನೆಯವರು ಏನಾದರೋ?” ಎಂದು ನಿಟ್ಟುಸಿರು ಬಿಡಹತ್ತಿದನು.
ಕೋಟಿಯು ಅವರು ಮೊನ್ನೆಯೇ ಮನೆಬಿಟ್ಟು ಹೋಗಿರಬಹುದು. ದೇವರ ಮನಸ್ಸಿನಲ್ಲಿದ್ದರೆ, ನಾವು ತಾಯಿಯನ್ನು ಇನ್ನೊಮ್ಮೆ ನೋಡುವೆವು” ಎಂದು ಸಂತಯಿಸುತ್ತ ಮುಂದರಿಸಿದನು. ಅವರಿಗೆ ಸೀಮೆಯ ಗಡಿಕಲ್ಲಿನ ಹತ್ತಿರ ಎರಡು ಗಳಿಗೆ ಇರುಳು ಆಯಿತು, ಗಡಿಕಲ್ಲಿನಿಂದ ಒಂದು ಮಾರು ಈಚೆಗೆ ಸುಂಕದ ಕಟ್ಟೆ ಇತ್ತು, ಸುಂಕದ ದೇರೆ ಎಂಬವನು ಇವರ ಕಾಲಿನ ಸದ್ದನ್ನು ಕೇಳಿ ಕತ್ತಲಲ್ಲಿ ಯಾರದು ಹೋಗುವುದು?” ಎಂದು ವಿಚಾರಿಸಿದನು.
“ನಾವು ದಾರಿಹೋಕರು” ಎಂದು ಕೋಟಿಯು ಉತ್ತರಕೊಟ್ಟನು.
“ಯಾರೇ ಆಗಲಿ, ದಾರಿಸುಂಕ ಕೊಟ್ಟು ಹೋಗಿ” ಎಂದು ದೇರೆಯು ಇದ್ದಲ್ಲಿಂದ ಕದಲದೆ ಹೇಳಿದನು.
ಕೋಟಿ-“ಯಾವ ಸುಂಕವೊ? ನಮ್ಮ ಮೈ ಬೆವರಿನ ಉಪ್ಪಿನ ಸುಂಕವೊ ? ಬಾಯಿ ವೀಳ್ಯದ ಸುಣ್ಣದ ಸುಂಕವೊ ?”
ಚೆನ್ನಯ- “ತಲೆಯ ಮೇಲಿನ ಕೂದಲು ಸುಂಕವೊ? ಕಾಲಿಗಿದ್ದ ಎಕ್ಕಡದ ಸುಂಕವೊ?” ಆಗ ದೇರೆಯು ಹೊರಕ್ಕೆ ತಲೆ ಹಾಕಿ, “ನಿಮ್ಮಕೈಯಲ್ಲಿದ್ದ ಉಕ್ಕಿನ ಕತ್ತಿಯ ಸುಂಕ" ಎಂದನು. ಚೆನ್ನ ಯನು “ನಮ್ಮ ಕತ್ತಿಗೆ ಕ್ರಯ ಕಟ್ಟುವವರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲಿಕ್ಕಿಲ್ಲ” ಎಂದನು.
ಅದಕ್ಕೆ ಸುಂಕದವನು “ಬಂಟರ ಕಾಲಿನ ಎಕ್ಕಡದ ಹೂವಿನ ಮೇಲೆ ಸುಂಕ, ಸೆಟ್ಟಿಯ ಕೊಡೆಯ ಕಾವಿನ ಮೇಲೆ ಸುಂಕ, ಅರಸುಮಗನ ದಂಡಿಗೆಯ ಕೊಂಬಿನ ಮೇಲೆ ಸುಂಕ- ನಾವು ತೆಗೆದುಕೊಂಡಿದ್ದೇವೆ. ನಿಮ್ಮನ್ನು ಬಿಡುವುದುಂಟೇ ?” ಎಂದನು.
ಚೆನ್ನಯ “ನಮ್ಮನ್ನು ಹಿಡಿಯುತ್ತೀಯಾ? ಬಾ ಕೆಳಗೆ, ಬಿಂಕದ ಬಲ್ಲಾಳನಿಗೆ ಕದಲದ ನಾವು ಸುಂಕದ ಕಲ್ಲಾಳನಿಗೆ ಬೆದರುವುದುಂಟೇ ? ಕೆಳಗಿಳಿ- ನಮ್ಮ ಮೇಲೆ ಸುಂಕ ಹೊರಿಸು” ಎಂದು ಹೇಳುತ್ತ ಮುಂದಕ್ಕೆ ಬಂದನು.
ಬಿಂಕದ ಬಲ್ಲಾಳನ ಹೆಸರು ಕೇಳುತ್ತಲೆ ಸುಂಕದವನ ಬಾಯಿ ಒಣಗಿತು. ಅವನು ಬೆಳಕು ತರುತ್ತೇನೆಂದು ಹೇಳಿ, ಒಳಕ್ಕೆ ಹೋಗಿ, ಅಲ್ಲಿಂದಲೇ ತಲೆ ತಪ್ಪಿಸಿಕೊಂಡು ಹೋದನು.
ಕೋಟಿ ಚೆನ್ನಯರು ಪಡುಮಲೆ ಬಲ್ಲಾಳನ ಸೀಮೆ ಕಳೆದು, ರಾತ್ರಿ ಎಲ್ಲಿಯೂ ತಡೆಯದೆ, ದಾರಿ ನಡೆದು, ಹೊತ್ತು ಎರಡುಮೂರು ಗಳಿಗೆ ಏರುವುದರೊಳಗೆ ಪಂಜಕ್ಕೆ ಬಂದು ಮುಟ್ಟಿದರು.
೨ ನೆ ಯ ಭಾ ಗ .
ಪಂಜದಲ್ಲಿ
ಪಡುಮಲೆ ಸೀಮೆಗೆ ಒಬ್ಬ ಬಲ್ಲಾಳನಿದ್ದಂತೆಯೇ ಪಂಜ ಸೀಮೆಗೂ ಒಬ್ಬ ಬಲ್ಲಾಳನಿದ್ದನು. ಇವನ ಹೆಸರು ಕೇಮರ ಬಲ್ಲಾಳ. ಇವನ ಬೀಡು ಪಂಜದಲ್ಲಿತ್ತು; ಪಂಜವು ಆ ಕಾಲದಲ್ಲಿ ದೊಡ್ಡ ಊರಾಗಿತ್ತು.
ಪಂಜದಲ್ಲಿ ಒಂದು ಮನೆ, ಮಾಳಿಗೆಯ ಮನೆ, ಎದುರು ಸಣ್ಣದೊಂದು ಚಪ್ಪರ, ಬಲಗಡೆ ಪದ್ಮಕಟ್ಟೆಯುಳ್ಳ ತೆಂಗಿನಮರ, ಎಡಗಡೆ ಏತಹಾಕಿದ ಬಾವಿ, ಹಿಂದುಗಡೆ ಜೋಡು ಹಟ್ಟಿ ಗಳು, ಅದರ ಮಗ್ಗುಲಲ್ಲಿ ಕೋಳಿಯ ಗೂಡು. ಕೋಟಿ ಚೆನ್ನಯರು ಈ ಮನೆಯ ಮುಂದಿನ ಅಡ್ಡಗಟ್ಟಿದ ಗುಜ್ಜು ತಡಮೆಯನ್ನು ದಾಟಿ, ಬೇಲಿಯೊಳಕ್ಕೆ ನಿಂತು “ ಪಯ್ಯ, ಪಯ್ಯ” ಎಂದು ಕರೆದರು.
ಒಳಗಿನಿಂದ ಯಾರೂ ಓ ಎನ್ನಲಿಲ್ಲ. ಚೆನ್ನಯನು ಓ ಪಯ್ಯ! ಪಯ್ಯ, ಇಲ್ಲವೆ ?” ಎಂದು ಗಟ್ಟಿಯಾಗಿ ಕೂಗಿದನು.
“ಯಾರದು ಕರೆಯುವುದು? » ಎಂಬುದಾಗಿ ಹೆಂಗಸಿನ ಸ್ವರವೊಂದು ಕೇಳಿಸಿತು.
ಕೋಟಿಯು- “ಯಾರೂ ಇಲ್ಲ; ನಾವು ಹಾದಿ ಪಯಣದ ಮಂದಿ. ಪಯ್ಯಬೈದ್ಯ ಇದ್ದಾನೋ? ”
ಉತ್ತರ- 'ಅವರಿಲ್ಲ.”
ಪ್ರಶ್ನೆ – “ಎಲ್ಲಿ ಹೋಗಿದ್ದಾನೆ?”
ಉತ್ತರ- “ಬೈನಿ ಕಟ್ಟಲಿಕ್ಕೆ ಸಂಕಮಲೆಗೆ ಹೋಗಿದ್ದಾರೆ.”
ಪ್ರಶ್ನೆ- “ಯಾವಾಗ ಬಂದಾನು?”
ಉತ್ತರ- ಬೆಳಗ್ಗೆ ಹೋದರೆ, ಮಧ್ಯಾಹ್ನ ಬರುವರು. ಮಧ್ಯಾಹ್ನ ಹೋದರೆ, ಸಂಜೆಗೆ ಬರುವರು.”
ಪ್ರಶ್ನೆ – “ಬರಲಿಕ್ಕೆ ಹೊತ್ತು ಆಗಲಿಲ್ಲವೇ ? ಉತ್ತರ- ಈಗಲೇ ಬಂದಾರು; ಕೂತುಕೊಳ್ಳಿ, ನೂಲು ಹಾಕಿದವರಾದರೆ ಕೆಂದಾಳೆಯ ಪದ್ಮಕಟ್ಟಿ ಇದೆ. ಒಕ್ಕಲಿಗರಾದರೆ ಬಡವರ ಚಪ್ಪರ ಇದೆ. ಜಾತಿಯವರಾದರೆ ಮೊಗಸಾಲೆಯಲ್ಲಿ ತೂಗುಯ್ಯಾಲೆ ಇದೆ”
ಗಂಡಸರಿಲ್ಲದ ಮನೆಯೊಳಕ್ಕೆ ತಾವು ತಲೆಹಾಕುವುದು ಸರಿಯಲ್ಲವೆಂದು ಹೇಳಿ, ಕೋಟಿಚೆನ್ನಯರು ಚಪ್ಪರದಲ್ಲಿ ಹಾಸುಕಂಬಳಿಯನ್ನು ಬಿಡಿಸಿ, ಅಲ್ಲೇ ಕುಳಿತುಕೊಂಡು, ಎಲೆಯ ಸಂಚಿಯನ್ನು ಬಿಚ್ಚಿ, ಬಾಯಿ ಕೆಂಪಗೆ ಮಾಡಿಕೊಂಡರು. ಆಗ ಚೆನ್ನಯನಿಗೆ ಅಡಕೆಯು ತಲೆಗೇರಿ ಬಾಯಾರಿ, ಜೋಮು ಬಂತು. ಕೋಟೆಯು “ನಮಗೆ ಒಂದು ಗಿಂಡಿ ನೀರು ಬೇಕು ಎಂದು ಗಟ್ಟಿಯಾಗಿ ಹೇಳಿದನು.
ಗಂಡಸರಿಲ್ಲದೆ ಮನೆಯ ಹೊರಗೆ ತಲೆಹಾಕುವುದು ಸರಿಯಲ್ಲವೆಂದು ಮಾತಿನಿಂದ ಹೇಳಿದರೂ ಆ ಹೆಂಗಸು ಕೆಲಸದಿಂದ ತೋರಿಸಲಿಲ್ಲ. ಆಕೆಯು ಮಡಿಯುಟ್ಟು, ಕಲ್ಲು ಕಟ್ಟಿದ ಬಾವಿಗೆ ಹೋಗಿ, ನೀರು ತುಂಬಿದ ಬಿಂದಿಗೆಯನ್ನು ಹಿಡಿದುಕೊಂಡು ಹೊರಕ್ಕೆ ಬಂದಳು.
ಇಷ್ಟರಲ್ಲಿ ಚೆನ್ನಯನು ಮರವೆ ತಿಳಿದು, ಕೈಬಟ್ಟೆಯಿಂದ ಮೋರೆಯನ್ನು ಒರಸಿಕೊಳ್ಳುತಿದ್ದನು. ಹೆಂಗಸು ನೀರಿನ ಬಿಂದಿಗೆಯನ್ನು ಹೊಸ್ತಿಲ ಹೊರಗಿಟ್ಟು, ಬಾಗಿಲ ಹಿಂದುಗಡೆ ನಿಂತಳು. ಬಿಂದಿಗೆಯನ್ನು ನೋಡಿ ಅಣ್ಣನು ತಮ್ಮನ ಮುಖವನ್ನೂ ತಮ್ಮನು ಅಣ್ಣನ ಮುಖವನ್ನೂ ದೃಷ್ಟಿಸುತ್ತಾ, ನೀರು ಮುಟ್ಟದೆ ಸುಮ್ಮನಿದ್ದ ರು. ಹೆಂಗಸು ಅದನ್ನು ಕಂಡು ನೀರು ಮಡಗಿದ್ದೇನೆ ” ಎಂದು ಹೇಳಿದಳು.
ಅದಕ್ಕೆ ಕೋಟಿಯು “ನಿನ್ನ ಕೈನೀರು ಕುಡಿಯಬೇಕಾದರೆ, ಹುಟ್ಟು ಬುಡ ಹೇಳಬೇಕು; ಜಾತಿಕುಲ ತಿಳಿಯಬೇಕು. ಎಂದನು. “ಅದಕ್ಕೇನು ಅಡ್ಡಿ? ಕಥೆ ಮಾತ್ರ ದೊಡ್ಡದಿದೆ. ಮನೆಯವರು ಬರಲಿಕ್ಕೂ ತಡ ಇದೆ
ಅಷ್ಟರೊಳಗೆ ಅವಳ ಗಂಡನು ಕಳ್ಳು ಹೊತ್ತುಕೊಂಡು, ಹಿತ್ತಿಲ ಕಡೆಯಿಂದ ಮನೆಗೆ ಬಂದದ್ದು ಆ ಹೆಂಗಸಿಗೆ ಗೊತ್ತಾಗಲಿಲ್ಲ, ಅವಳು ಪರಕೀಯರೊಡನೆ ಮಾತನಾಡುವುದನ್ನು ಅವನು ಕೇಳಿ, ಸಂಶಯದಿಂದ ಮನೆಯ ಬಲಪಾರ್ಶ್ವದ ಗೋಡೆಯ ಮರೆಯಲ್ಲಿ ನಿಂತುಕೊಂಡು ಇವರ ಮಾತುಕಥೆ ಕೇಳುತಿದ್ದನು.
ಚೆನ್ನಯ- “ಕಥೆ ಕೇಳೋಣ”
ಹೆಂಗಸು~ “ನಮ್ಮ ಅಜ್ಜಿ, ಅಂದರೆ ತಾಯಿಯ ತಾಯಿ ಬ್ರಾಹ್ಮಣಿತಿಯಂತೆ, ಅವಳಿಗೆ ತಕ್ಕ ಕಾಲದಲ್ಲಿ ಮದುವೆಯಾಗದೆ ಇದ್ದುದರಿಂದ, ತಾಯಿತಂದೆಗಳು ತಮ್ಮ ಜಾತಿಕಟ್ಟಳೆ ಮೀರಲಾರದೆ, ಅವಳನ್ನು ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟರಂತೆ,
ಕೋಟಿ- ಆ ಮೇಲೆ
ಹೆಂಗಸು- ಆ ಮೇಲೆ ಕಳ್ಳು ತೆಗೆಯಲು ತಾಳೆಮರ ಏರಿದ್ದ ಒಬ್ಬನು ಅವರನ್ನು ಕಂಡು, ಬೀಡಿಗೆ ಹೋಗಿ ತಿಳಿಸಿದನಂತೆ. ಬಲ್ಲಾಳರು ಅಪ್ಪಣೆ ಮಾಡಿದರಂತೆ; ಆ ಪ್ರಕಾರ ಅವನು ಅವರನ್ನು ಮನೆಗೆ ಕೊಂಡುಹೋಗಿ, ಚೆನ್ನಾಗಿ ಸಾಕಿ, ಬಿರ್ಮಣ ಬೈದ್ಯನಿಗೆ ಮದುವೆಮಾಡಿ ಕೊಟ್ಟನಂತೆ,”
ಕೋಟಿ- “ಕರ್ಗೋಲ ತೋಟದ ಬಿರ್ಮಣ್ಣ ಬೈದ್ಯನಿಗೊ?”
ಹೆಂಗಸು- “ಹೌದು ಹೌದು, ಕರ್ಗೊಲ ತೋಟ- ಆ ಹೆಸರೇ ಮರೆತುಹೋಗಿತ್ತು. ನನ್ನ ತಾಯಿ ಆ ಹೆಸರನ್ನು ಒಂದು ಸಲ ಹೇಳಿದ್ದು ನನಗೆ ನೆನಪಿದೆ.”
ಕೋಟಿ- "ತಾಯಿ ಯಾರು?"
ಹೆಂಗಸು - "ಬಿರ್ಮಣ್ಣ ಬೈದ್ಯನ ಮಗಳೇ ನನ್ನ ತಾಯಿ”
ಕೋಟಿ- "ತಾಯಿಯ ಹೆಸರು?"
ಹೆಂಗಸು- "ದೇಯಿ"
ಕೋಟಿ- "ತಂದೆಯ ಹೆಸರು?"
ಹೆಂಗಸು- “ಕಾಂತಣ್ಣ”
ಕೋಟಿ- "ಮೂಲಸ್ಥಳ?”
ಹೆಂಗಸು- “ಕೆಮ್ಮಲಳೆಯ ಬ್ರಹ್ಮರ ಎಂದು ಹೇಳುವುದನ್ನು ಕೇಳಿ ದ್ದೇನೆ. ನಾನು ನೋಡಲಿಲ್ಲ.” ಕೋಟಿ- “ಒಂದು ತಾಯಿಗೆ ನೀವು ಮಕ್ಕಳು ಎಷ್ಟು ಮಂದಿ?”
ಹೆಂಗಸು- “ಚೊಚ್ಚಲಿಗೆ ನಾನಂತೆ, ನನ್ನ ಬೆನ್ನ ಹಿಂದೆ ನನ್ನ ತಾಯಿ ಅವಳಿಜವಳಿ ಗಂಡುಮಕ್ಕಳನ್ನು ಬೀಡಿನ ಅರೆಯಲ್ಲಿ ಹಡೆದಳಂತೆ.”
ಕೋಟಿ- “ಕರ್ಗೋಲ ತೋಟದವಳು ಬೀಡಿನ ಅರೆಯಲ್ಲಿ ಹೆರಿಗೆಯಾಗಲು ಕಾರಣವೇನು?
ಹೆಂಗಸು- “ ಅದೊ? ಅದನ್ನು ಹೇಳುತ್ತೇನೆ. ಪಡುಮಲೆಯ ಪೆರುಮಾಳು ಬಲ್ಲಾಳರಿಗೆ ಒಂದು ಸಾರಿ ಬೇಟೆಗೆ ಹೋದಾಗ ಕಾಲಿಗೆ ಮುಳ್ಳು ತಾಗಿ ಜೀವ ಹೋಕುಬರ್ಕು' ಎಂಬಂತಾಯಿತಂತೆ. ಆಗ ನಮ್ಮ ತಾಯಿ ತುಂಬಿದ ಬಸುರಿ. ಅವಳ ಮದ್ದು ಆಗಬಹುದೆಂದು ಅವಳನ್ನು ಬೀಡಿಗೆ ಕರೆತರಿಸಿದರು. ಅವಳು ತಾನು ತುಂಬಿದ ಬಸುರಿ ಎಂಬುದನ್ನು ನೋಡದೆ ತಾನೇ ಕೈಯಿಂದ ಸೊಪ್ಪು ಅರೆದು ಲೇಪಹಾಕಿ, ವಾಸಿಮಾಡಿದಳಂತೆ. ಆ ಕಾಲದಲ್ಲಿ ಆಕೆ ಅವಳಿಜವಳಿ ಗಂಡುಮಕ್ಕಳನ್ನು ಹೆತ್ತದ್ದರಿಂದ, ಅವಳ ಹೆರಿಗೆಯು ಬೀಡಿನಲ್ಲಿಯೇ ನಡೆಯಿತಂತೆ.
ಕೋಟಿ- “ ಅನಂತರ ಏನಾಯಿತು?
ಹೆಂಗಸು- “ಮಕ್ಕಳು ಹುಟ್ಟಿದ ಮೂರು ತಿಂಗಳುಗಳಲ್ಲಿಯೇ ಅವಳು ಕಾಲವಾದಳು.
ಕೋಟಿ - ಅವಳು ಕಾಲವಾಗುವಾಗ ಹತ್ತಿರ ಯಾರು ಇರಲಿಲ್ಲವೆ?”
ಹೆಂಗಸು-“ನನ್ನ ಏಳನೆಯ ವರ್ಷದಲ್ಲಿ ನನ್ನನ್ನು ಇಲ್ಲಿಗೆ ಕೈ ಹಿಡಿಸಿಕೊಟ್ಟ ತರುವಾಯ ನಾನು ಮನೆಬಿಟ್ಟು ಹೊರಕ್ಕೆ ಕಾಲು ಇಡಲಿಲ್ಲ, ಹೀಗಾದ್ದರಿಂದ ತಾಯಿಯು ಹೆತ್ತ ಸುದ್ದಿಯ ಸುಖವಾಗಲಿ, ಸತ್ತ ಗೋಳಿನ ದುಃಖವಾಗಲಿ, ಕಿವಿಯಿಂದ ಕೇಳಿದ್ದೇನೆ ಹೊರತು ಕಣ್ಣಿಂದ ಕಾಣಲಿಲ್ಲ.”
ಕೋಟಿ ಚೆನ್ನಯರ ಮನಸ್ಸಿನಲ್ಲಿ ಉಲ್ಲಾಸದ ಏರ್ತವೂ, ಉದ್ವೇಗದ ಇಳಿತವೂ ತೋರಿ, ಅವರು ಒಬ್ಬರನ್ನೊಬ್ಬರು ದೃಷ್ಟಿ ಸುತ್ತ ಒಂದು ನಿಮಿಷ ಸುಮ್ಮನಿದ್ದರು.
ಸ್ವಲ್ಪ ಹೊತ್ತಿನ ಮೇಲೆ “ಆ ಮಕ್ಕಳನ್ನು ಯಾರು ಸಾಕಿದರು? ಎಂದು ಕೋಟಿಯು ಕೇಳಿದನು. ಹೆಂಗಸು- ಅನಂತರದ ಸಂಗತಿ ನನಗೆ ಬೇಡವಾಯಿತು. ಬಿತ್ತಿದ ಗದ್ದೆಗೆ ತೆವರಿ ಗಟ್ಟಿ ಇರಬೇಕು; ಹುಟ್ಟಿದ ಹೆಣ್ಣಿಗೆ ತವರು ಗಟ್ಟಿ ಇರಬೇಕು. ತಾಯಿ ಹೋದ ಮೇಲೆ ತವರಿಗೆ ಹೋಗಲಿಲ್ಲ, ತಮ್ಮಂದಿರನ್ನು ಕಾಣಲಿಲ್ಲ, ಊರವರು ಮಾತ್ರ ಅವರ ಪ್ರತಾಪವನ್ನು ಹೊಗಳುತ್ತಾರೆ. ನೀರಿಂದ ಹುಟ್ಟಿದ ಬೆಂಕಿಯಂತೆ, ನೆಲದಿಂದ ಬಂದ ಸಿಡಿಲಂತೆ-
ಚೆನ್ನಯ – “ಅಕ್ಕಾ, ನಿನ್ನ ಹೆಸರು?
ಹೆಂಗಸು-ನನ್ನ ಹೆಸರು ಕಿನ್ನಿದಾರು.?
ಕೂಡಲೆ ಕೋಟಿ ಚೆನ್ನಯರು ತಟ್ಟನೆ ಎದ್ದು “ ಅಕ್ಕ ಎಂದರೆ ನೀನೇ ಸೈ: ತಮ್ಮ ಎಂದರೆ ನಾನೇ ಸೈ; ಎಂದು ಬಾಯಿಂದ ಹೇಳುತ್ತ, ಇಬ್ಬರು ಅವಳ ಪಾದದ ಮೇಲೆ ತಲೆಯಿಟ್ಟು ಅಡ್ಡಬಿದ್ದರು. ಆಗ ಗೋಡೆಯ ಹಿಂದುಗಡೆ ಅದುವರೆಗೆ ಅವಿತುಕೊಂಡಿದ್ದ ಆಕೆಯ ಗಂಡನು ಈಚೆಗೆ ಬಂದು, “ಏಳಿ, ಏಳಿ” ಎಂದು ಹೇಳಿ, ಅವರನ್ನು ಬಲಗೈಯಿಂದ ಎತ್ತಿ, ಮೊಗಸಾಲೆಯ ತೂಗುಯ್ಯಾಲೆಯ ಮೇಲೆ ಕುಳ್ಳಿರಿಸಿದನು; ಕಿನ್ನಿದಾರು ಹಸುವನ್ನು ಕರೆದು, ಹಾಲನ್ನು ಕಾಯಿಸಿ ತಂದು ಅವರನ್ನು ಆದರಿಸಿದಳು. ಆ ದಿನ ಅಕ್ಕನ ಮನೆಯ ಅಕ್ಕಿಯ ಬಿಳಿಯನ್ನವೇನು, ಬೆಲ್ಲದ ಪಾಯಸವೇನು, ಹಲಸಿನ ಸುಟ್ಟವೆಯೇನು, ತುಪ್ಪದ ಒಗ್ಗರಣೆಯೇನು, ಬೆಣ್ಣೆಯ ಮೊಸರೇನು, ಉಪ್ಪಿನ ಕಾಯಿಯೇನು, ಒಟ್ಟೇನು? ಅಡಿಗೆ ಆರೋಗಣೆಗಳು ಹಸಿಯದ ಹೊಟ್ಟೆಗೆ ಹಸಿವೆಯನ್ನು ಉಂಟುಮಾಡಿದುವು.
ಈ ಪ್ರಕಾರವಾಗಿ ಕೋಟಿಚೆನ್ನಯರು ಪಂಜದಲ್ಲಿಯ ತಮ್ಮ ಅಕ್ಕನ ಮನೆಯಲ್ಲಿ ಸುಖವಾಗಿ ಕಾಲ ಕಳೆಯುತ್ತಿರಲು, ಆ ಸುದ್ದಿಯು ಪಂಜದ ಊರಲೆಲ್ಲಾ ಮೆಲ್ಲ ಮೆಲ್ಲನೆ ಹರಡಿತು, ಅನೇಕರು ಬೈದ್ಯನ ಮನೆಗೆ ಹೋಗಿ, ಇವರ ಗಂಡು ಸಿರಿಯ ಮುಖ, ಅಗಲದ ಎದೆ, ಸಣಕಲು ಮೈ, ಚಳಕದ ಕೈ ನೋಡಿಕೊಂಡು, ತಮ್ಮಲ್ಲಿಯೇ ಬೆರಗುಗೊಂಡು ಹಿಂದೆರಳುತ್ತಿದ್ದರು. ಮೊತ್ತಮೊದಲು ಕೋಟಿಚೆನ್ನಯರು ಹೊರಗೆ ಮೋರೆ ಹಾಕಲಿಕ್ಕೆ ಮನಸ್ಸಿಲ್ಲದೆ ಜನಗಳು ಆಗಾಗ ತಮ್ಮನ್ನು ಮನೆಗೆ ಬಂದು ನೋಡಿದಷ್ಟಕ್ಕೆ ಒಬ್ಬಿಬ್ಬರ ಹತ್ತಿರ ಸಲುಗೆಯಿಂದ ವರ್ತಿಸುತ್ತ, ಕ್ರಮೇಣ ಊರಲ್ಲಿ ತಲೆಯೆತ್ತಿ ನಡೆಯ ತೊಡಗಿದರು. ಈ ಸುದ್ದಿಯು ಪಂಜ ಸೀಮೆಯ ಅಧಿಕಾರಿಯಾದ ಕೇಮರ ಬಲ್ಲಾಳನ ಕಿವಿಯವರೆಗೆ ಹೋಯಿತು. ಅವರ ಬುದ್ಧಿಯ ಜಾಣ್ನೆಯನ್ನೂ ಮೈಯ ಬಲ್ಬನ್ನೂ ಕೇಳಿ ಆತನ ಕಿವಿಗೆ ಮೊದಲು ಮೊದಲು ಬಹಳ ರುಚಿಯಾಯಿತು. ಕ್ರಮೇಣ ಆ ಹೊಗಳಿಕೆಯೇ ಕಹಿಯಾಗ ಹತ್ತಿತು, ಹಾಗೆ ಬಲ್ಲಾಳನ ಮನಸ್ಸು ತಿರುಗುವುದಕ್ಕೆ ಚೆಂದುಗಿಡಿ ಎಂಬ ಹೆಸರಿನವನೊಬ್ಬನು ಮುಖ್ಯ ಕಾರಣನಾಗಿದ್ದನು,
ಚೆಂದುಗಿಡಿಯೂ ಕೆಮರ ಬಲ್ಲಾಳನೂ ಒಂದೇ ಮಡಕೆಯಲ್ಲಿ ಉಂಡ ಉಂಡಾಡಿಗಳು; ಒಂದೇ ಹಟ್ಟಿಯಲ್ಲಿ ಹೋರಿದ ಹೋರಿಗಳು; ಒಂದೇ ಗರಡಿಯಲ್ಲಿ ಕಲಿತ ಕಲಿಬಂಟರು, ಚಂದುಗಿಡಿಯು ಹರೆಯದ ಜವ್ವನಿಗನಿದ್ದಾಗ ಪಂಜದ ಮುದುಕ ಬಲ್ಲಾಳನು ಸತ್ತು ಹೋದನು, ತರುವಾಯ ಕೈಮರ ಬಲ್ಲಾಳನಿಗೆ ಎಂಟು ಮಾಗಣೆಯವರು ಕೂಡಿ ಪಟ್ಟ ಕಟ್ಟಿದ್ದೆ ತಡ, ಚೆಂದುಗಿಡಿಯ ಎರಡು ತೋಳುಗಳಲ್ಲಿ ಎಂಟು ತೋಳುಗಳು ಎದ್ದಂತಾಯಿತು, ಮುಂಚಿನ ಬಲ್ಲಾಳನಿದ್ದಾಗ ಪಯ್ಯಬೈದ್ಯನು ಆತನ ಬಲಗೈಯಂತಿದ್ದು, ಬೀಡಿಗೆ ಬೇಕಾದವನಾಗಿದ್ದನು. ಚಂದುಗಿಡಿಗೆ ಮೀಸೆಮೂಡುವುದಕ್ಕೆ ಮುಂಚಿನಿಂದ ಆತನ ಕಣ್ಣು ಪಯ್ಯಬೈದ್ಯನ ಮಣೆಯ ಮೇಲೆ ಇತ್ತು. ಕೇಮರನು ಸೀಮೆಯ ಬಲ್ಲಾಳನಾಗಿ ಎರಡು ಮಳೆಗಾಲಗಳು ಕಳೆಯುವುದರೊಳಗೆ ಚೆಂದುಗಿಡಿಯು ಬೈದ್ಯನ ಮೇಲೆ ಇಲ್ಲದ ಸಲ್ಲದ ದೂರುಗಳನ್ನು ಹೊರಿಸಿ ಅವನನ್ನು ಬೀಡಿನಿಂದ ಹೊರಡಿಸಿ, ಅವನಿದ್ದ ಸ್ಥಳದಲ್ಲಿ ತನ್ನ ಚಾಪೆಯನ್ನು ಬಿಡಿಸಿ, ಕಾಲುನೀಡಿ ಕುಳಿತುಕೊಂಡನು. ಬೈದ್ಯನು ಬೀಡಿನಿಂದ ದೂರವಾದರೂ, ಆತನು ತನ್ನ ತಂದೆಯು ನೆಟ್ಟಿದ್ದ ಬಲ್ಬಂಟನೆಂಬ ಅಭಿಮಾನವು ಕೇಮರಬಲ್ಲಾಳನ ಮನಸ್ಸಿನಿಂದ ತೀರಾ ಮಾಸಿಹೋಗಲಿಲ್ಲ. ಈ ಅಭಿಪ್ರಾಯವನ್ನು ಬಲ್ಲಾಳನ ಮನಸ್ಸಿನಿಂದ ಹೇಗಾದರೂ ಕಿತ್ತು ಬಿಟ್ಟು ಇಬ್ಬರೊಳಗೆ ಪರಸ್ಪರ ವೈರವನ್ನು ತಂದು ಹೂಡಬೇಕೆಂದು ಚೆಂದುಗಿಡಿಯು ಸಮಯವನ್ನು ಸಾಧಿಸುತ್ತಿದ್ದನು. ಹೀಗೆ ಸಾಧಿಸುವುದಕ್ಕೂ ಕೋಟಿ ಚೆನ್ನಯರು ಆ ಬೈದ್ಯನ ಮನೆಯಲ್ಲಿ ಉಳುಕೊಂಡದ್ದಕ್ಕೂ ಸರಿಯಾಯಿತು.
ಕೋಟಿ ಚೆನ್ನಯರು ಹಲವು ತಿಂಗಳಿಂದ ಪಯ್ಯಬೈದ್ಯನಲ್ಲಿ ಇದ್ದದ್ದು ಚೆಂದುಗಿಡಿಗೆ ಆಗುತ್ತಿರಲಿಲ್ಲ, ಚಂದುಗಿಡಿಯು ಸ್ವಭಾವದಲ್ಲಿ ಅಂಜು ಬೇರೊಬ್ಬರ ಎದೆಗಾರಿಕೆಯು ಆತನ ಕಣ್ಣಿಗೆ ಆಗದು. ಅವನು ಮೊದಲೇ ಚೆನ್ನಯನ ಕೈಯಾಟವನ್ನೂ, 'ಬಿಲ್ಲಿನ ಹೊಡೆತವನ್ನೂ, ಕೊಳಲಿನ ಜಾಣ್ಮೆಯನ್ನೂ ಕಂಡು ಬೆಚ್ಚಿ ಹೋಗಿದ್ದನು. ಅದೂ ಅಲ್ಲದೆ ತಾನು ಬೀಡಿನಿಂದ ಕೆಳಕ್ಕೆ ಬೀಳಿಸಿದ್ದ ಪಯ್ಯಬೈದ್ಯನು ಅರಸು ಕೊಂಬೆಯಲ್ಲಿ ತೊಳೆದು ತೂಗುತ್ತಲಿದ್ದ ತನ್ನನ್ನು ಈ ಕೋಟಿ ಚೆನ್ನಯರ ಬಲ್ತೋಳಿನ ದೋಟಿಯಿಂದ ಎಳೆದು ಹಾಕಿ ನೆಲಕ್ಕೆ ಉದುರಿಸಿ ಬಿಡಲಿಕ್ಕಿಲ್ಲವೇ ಎಂಬೊಂದು ಸಂಶಯವು ಚೆಂದುಗಿಡಿಯ ತಲೆಯನ್ನು ತಿನ್ನುತ್ತಲಿತ್ತು. ಆದುದರಿಂದ ಆ ಮೂವರು- ಕೇಮರ ಬಲ್ಲಾಳ, ಪಯ್ಯಬೈದ್ಯ, ಕೋಟಿ ಚೆನ್ನಯರು ಪರಸ್ಪರ ಕೈಗೂಡಿರದೆ, ಮೂರು ಮಲೆಗಳಲ್ಲಿ ಪ್ರತ್ಯೇಕವಾಗಿರುವುದೇ ತನಗೆ ಮೇಲೆಂದು ಆ ಚಂದುಗಿಡಿಯು ಯೋಚಿಸಿ, ಕೇಮರ ಬಲ್ಲಾಳನು ಕೋಟಿ ಚೆನ್ನಯರನ್ನು ಕಣ್ಣು ತುಂಬ ನೋಡದಂತೆ ಹವಣಿಸುತ್ತಿದ್ದರೂ ತನ್ನ ಮನಸ್ಸಿನಲ್ಲಿ ಇದ್ದುದನ್ನು ಮೋರೆಯಲ್ಲಾಗಲಿ ಮಾತಿನಲ್ಲಾಗಲಿ ತೋರಿಸುತ್ತಿರಲಿಲ್ಲ. ಇದು ಪಯ್ಯಬೈದ್ಯನಿಗೆ ಗೊತ್ತಾಗದೆ ಅವನು ದಿನಕ್ಕೆ ಒಂದಾವೃತ್ತಿ “ನಮ್ಮ ಭಾವಂದಿರು ಬೀಡಿನ ಬಲ್ಲಾಳರನ್ನು ಓಲಗದಲ್ಲಿ ಕಾಣಬೇಕೆಂದಿದ್ದಾರೆ. ನೀವು ಭೇಟಿ ಮಾಡಿಸಬೇಕಷ್ಟೆ” ಎಂದು ಚಂದುಗಿಡಿಯ ಹತ್ತಿರ ಪದೇಪದೇ ಕೇಳುವನು; ಚಂದುಗಿಡಿಯು “ಈ ಹೊತ್ತು ನಾಳೆ, ಈ ಹೊತ್ತು ನಾಳೆ ” ಎಂದು ಒಂದಲ್ಲ ಒಂದು ನೆಪವನ್ನು ಹೇಳಿ, ಅವನ ಆಲೋಚನೆಯನ್ನು ಕಡಿದು ಹಾಕುವನು; ಬೈದ್ಯನು ಕೋಟಿಚೆನ್ನಯರಿಗೆ ಬಂದು ತಿಳಿಸಿ ಮುಂದೆ ನೋಡೋಣ ಎಂದು ಹೇಳುವನು; ಹೀಗೆ ಅನೇಕ ತಿಂಗಳುಗಳು ದಾಟಿದುವು.
ಇತ್ತ ಪಡುಮಲೆಯಲ್ಲಿ ಪೆರುಮಾಳ ಬಲ್ಲಾಳನ ಕಣ್ಣಿನ ಮುಂದೆ ಕೋಟಿ ಚೆನ್ನಯರು ಗದ್ದಿಗೆಯ ಮೇಲೆ ಗಡುವಿಟ್ಟು ಯಾವ ದಿನ ಬೀಡಿನಿಂದ ಕೆಳಕ್ಕೆ ಇಳಿದು ಹೋದರೊ ಆ ದಿನದಿಂದ ಬಲ್ಲಾಳನ ಮನಸ್ಸು ಒಂದಕ್ಕೊಂದಾಗಿ ಹೋಯಿತು. ಅವನು ಮಾತುಮಾತಿಗೆ “ಸತ್ತು ಹೋಗಲಿ... ಸುಟ್ಟು ಬಿಡಿ' ಎಂದು ಹೇಳುತ್ತ, ಸಿಟ್ಟನ್ನು ಕಾರುತ್ತಿದ್ದನು. ಕೋಟಿ ಚೆನ್ನಯರನ್ನು ಸಿಕ್ಕಿದ್ದಲ್ಲಿ ಹಿಡಿದು ಕೊಂದು ಹಾಕುವುದಕ್ಕೆ ಅವನ ಆಳುಗಳು ಹೋದರು, ಹೋದ ಆಳುಗಳು ಬೈದ್ಯನ ಮನೆಯನ್ನು ಸುಟ್ಟುಬಿಟ್ಟರು. ಕೋಟಿಚೆನ್ನಯರೂ, ಸಾಯಿನ ಬೈದಿತಿಯ ಮನೆಯೊಳಕ್ಕೆ. ಇರಲಿಲ್ಲ; ಅವರು ಮೊದಲೇ ಅಲ್ಲಿಂದ ಕಾಲುತೆಗೆದಿದ್ದರು, ಸಾಯಿನ ಬೈದಿತಿಯ ಗಂಡ ಸಾಯಿನ ಬೈದ್ಯನು ಮಾತ್ರ ಮನೆಯೊಳಕ್ಕೆ ಇದ್ದನು. ಆಳುಗಳು ಅವನನ್ನು ಹಿಡಿದು ತಂದು ಬಲ್ಲಾಳನಿಗೆ ಒಪ್ಪಿಸಿದರು. ತಲೆತಪ್ಪಿಸಿಕೊಂಡವರು ಎಲ್ಲಿ ಓಡಿರಬೇಕೆಂಬುದನ್ನು ಅವನ ಬಾಯಿಂದ ಹೊರಡಿಸುವುದಕ್ಕೆ ಅವನನ್ನು ನಾನಾ ಬಗೆಯಾಗಿ ಹಿಂಸಿಸಿದರು. ಕುಟುಕು ಜೀವದಲ್ಲಿದ್ದ ಆ ಮುದುಕನ ಸಂಕಟವನ್ನು ಕಂಡು ಬೀಡಿನ ರಾಣಿ ಮುದುಕ ನನ್ನು ಬಿಡಿ, ಅವನ ಗೋಳನ್ನು ಕೇಳಲಾರೆ” ಎಂದು ಹೇಳಿ ಅವನನ್ನು ಬಿಡಿಸಿಬಿಟ್ಟಳು. ಅಂದಿನಿಂದ ಮುದುಕನು ಮೊದಲಿನಂತೆಯೇ ಬೀಡಿನ ಒಳಗಿನವರಿಗೆ ಬೇಕಾದ ಕಳ್ಳನ್ನು ಒದಗಿಸಿಕೊಡುತ್ತ ಅವರಲ್ಲಿ ವಿಶ್ವಾಸದಿಂದ ನಡೆಯುತ್ತ ಬೀಡಿನ ಕೋಟೆಯ ಹೊರಹೋಗಲಿಕ್ಕೆ ಅಪ್ಪಣೆ ಇಲ್ಲದೆ ಅಲ್ಲಿಯೇ ಇದ್ದನು,
ಪೆರುಮಾಳ ಬಲ್ಲಾಳನ ಮನಸ್ಸು ಕೋಟಿ ಚೆನ್ನಯರ ಸಂಗತಿಯಿಂದ 'ನೀರು ಸೋಕಿದರೆ ಬಿಸಿ ಗಾಳಿ ಹಾಕಿದರೆ ಉರಿ' ಎಂಬಂತೆ ಹುಣ್ಣು ಹುಣ್ಣಾಗಿ ಹೋಯಿತು, ಗದ್ದಿಗೆಯಲ್ಲಿ ಗಡುವನ್ನು ಇಟ್ಟಿದ್ದು ನೆನಪಿಗೆ ಬರುತ್ತಲೆ ಅವನ ಮುಖವು ಬಾಡುವುದು; ಅವರು ಮರಳಿ ಬರಲಾರರೆಂದು ಯಾರಾದರೂ ಹೇಳಿದರೆ, ಅದು ಅರಳುವುದು, ಬೀಡಿನಲ್ಲಿ ಹುಟ್ಟಿದ ಮಕ್ಕಳು ಬೇಡಿ ತಿನ್ನಬೇಕಾಯಿತೇ ಎಂದು ನೆನೆಸಿ ಮರುಕಿನಿಂದ ಅವರು ಎಲ್ಲಿದ್ದರೂ ಸರಿಯೇ ಅವರನ್ನು ಸಂಧಿಸಾಮಗಳಿಂದ ತಿರಿಗಿ ತರಿಸಿಕೊಳ್ಳಬೇಕು' ಎಂದು ಒಮ್ಮೆ ಹೇಳುವನು. ಮತ್ತೊಮ್ಮೆ 'ದೂರದ ಮಾರಿ ದೂರಕ್ಕಿರಲಿ! ಕಿಚ್ಚಿನ ಕಿಡಿ ಎಂದು ಗೊತ್ತಿದ್ದು ಕಟ್ಟೆಯಲ್ಲಿ ಕಟ್ಟಿಕೊಳ್ಳುವುದೇಕೆ' ಎಂದು ಅಭಿಪ್ರಾಯಪಟ್ಟು ಸುಮ್ಮನಾಗುವನು, ಈ ಪ್ರಕಾರವಾಗಿ ಹೆದರಿಕೆಯ ಒಂದು ದಂಡಿಯು ಕತ್ತಿನಲ್ಲಿ ಕಟ್ಟಲ್ಪಟ್ಟು ಹಗೆಯ ಹಾದಿಯಲ್ಲಿ ಹಾಯ್ದು ಹಾಯ್ದು ಹೋಗಲರಿಯದ ಹೋರಿಯಂತೆ ಅವನ ಮನಸ್ಸು ಕ್ಷುಬ್ದ ವಾಗಿತ್ತು.
ಹೀಗಿರಲು ಕೋಟಿಚೆನ್ನಯರ ಜಾಡು ಹಿಡಿದು ಅವರನ್ನು ಹುಡುಕಲಿಕ್ಕೆ ಹೋದ ಬಲ್ಲಾಳನ ಬೇಹಿನವರಲ್ಲಿ ಒಬ್ಬನು ಹಳ್ಳಿಗಳನ್ನೆಲ್ಲಾ ಸುತ್ತಾಡಿ, ಅವರು ಪಂಜದ ಊರಲ್ಲಿ ಸೇರಿಕೊಂಡಿದ್ದಾರೆಂಬುದನ್ನು ಗೊತ್ತು ಮಾಡಿ, ಪಡುಮಲೆಗೆ ಹಿಂದಿರಳಿ, ಅವರ ಸೋವುಸುಳಿವುಗಳನ್ನು ತಮ್ಮ ಯಜಮಾನನಿಗೆ ತಂದು ಕೊಟ್ಟನು. ಮರುದಿನವೇ ಬಲ್ಲಾಳನು ತನ್ನ ಸೇನಬೇವನನ್ನು ಚಾವಡಿಗೆ ಕರೆಯಿಸಿದನು. ಆ ಸೇನಬೊವನು ಮುಂಜಾನೆಯ ಮುಂಬಿಸಿಲಿಗೆ ಹಾಕಿಸಿ ಸಂಜೆಯ ತಂಬಿಸಿಲಿಗೆ ತೆಗೆಯಿಸಿ, ಸರಿಗೊಳಿಸಿದ ತಾಳೆಯ ಗರಿಗಳ ಕಟ್ಟೊ೦ದನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಬಲ್ಲಾಳನಿಗೆ ಕೈಮುಗಿದು “ಬುದ್ಧಿ" ಎಂದು ನಿಂತನು. ಬಲ್ಲಾಳನು “ಗುಟ್ಟಿನ ಕೆಲಸವಿದೆ. ಒಳಗಿನ ಕೊಟಡಿಗೆ ಬಾ” ಎಂದು ಹೇಳಿ ಇಬ್ಬರೂ ಏಕಾಂತವಾದ ಒಂದು ಕೋಣೆಗೆ ಹೋದರು. ಸೇನಬೋವನು ಕೈಯಲ್ಲಿದ್ದ ಕಟ್ಟಿನಿಂದ ಒಂದು ಓಲೆಯನ್ನು ಈಚೆಗೆ ತೆಗೆದು, ಅದರ ಕಡೆ ಕುಡಿಗಳನ್ನು ಕತ್ತರಿಸಿ, ನಡುವಿನ ಬಾವನ್ನು ಸರಿಮಾಡಿ, ಎಣ್ಣೆಯನ್ನೂ ಅರಸಿನವನ್ನೂ ಪೂಸಿ, ಮೇಲೆ ಶ್ರೀಕಾರವನ್ನು ಗೀರಿ, ಬಲ್ಲಾಳನು ಹೇಳಿದ ಒಕ್ಕಣೆಯನ್ನು ಬರೆದು, ಓಲೆಯನ್ನು ಆತನ ಕೈಯಲ್ಲಿ ಕೊಟ್ಟನು, ಬಲ್ಲಾಳನು ಪತ್ರದ ಕೊನೆಯಲ್ಲಿ ಕಂಟದಿಂದ ಗೆರೆಗೀರಿ ಸೇನಭೋವನೊಡನೆ “ಇದನ್ನು ಳರಿಗೆ ಮುಟ್ಟಿಸಬೇಕು” ಎಂದು ಅಪ್ಪಣೆ ಮಾಡಿದನು. ಓಲೆಯನ್ನು ತೆಗೆದುಕೊಂಡು ಇಬ್ಬರು ಓಲೆಕಾರರು ಪಡುಮಲೆಯಿಂದ ಅದೇ ದಿನ ಹೊರಟರು.
ಇತ್ತ ಬಲ್ಲಾಳನು ಓಲೆಯನ್ನು ಬರೆಯಿಸುತ್ತಿದ್ದಾಗ, ಅತ್ತ ಚಂದುಗಿಡಿಯು ಮನೆಯ ಚಾವಡಿಯಲ್ಲಿದ್ದು ತನ್ನ ಮನಸ್ಸಿನಲ್ಲಿ ಹೀಗೆ ಚಿಂತಿಸುತ್ತಿದ್ದನು- “ಏನು ಮಾಡಿದರೂ ಕೋಟಿ ಚೆನ್ನಯರ ಹೆಸರೇ ಮೇಲೆ ಬರುತ್ತದಲ್ಲಾ! ಇವರ ಅಮಾನುಷ ಕೃತ್ಯಗಳಿಂದ ಊರಲ್ಲಿದ್ದ ಮಕ್ಕಳಿಗೆ ಮದ್ದು ಮಾಯೆ ಮಾಡಿದಂತಾಗಿದೆ, ಹೆಂಗಸರಿಗೆ ಮಂಕುಬೂದಿ ಹಾಕಿದಂತಾಗಿದೆ; ಮುದುಕರಿಗೆ ಮುದಿಭ್ರಾಂತಿ ಹಿಡಿದಂತಾಗಿದೆ. ಏನು ಮಾಡಿದರೂ, ಈ ಬಿಲ್ಲರ ಕುಟ್ಟಿಗಳ ಮಾರಾಟವನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲವಲ್ಲ! ಇವರ ಸುದ್ದಿಯನ್ನು ನಾನು ಕಟ್ಟಿಕಟ್ಟಿ ಬಿಗಿದಷ್ಟಕ್ಕೆ ಅದು ಜೋರು ಜೋರು ಬಾಯಿ ಮಾಡುತ್ತದಲ್ಲಾ! ಎಲ್ಲಿ ಅವರು ನಮ್ಮ ಕೇಮರ ಬಲ್ಲಾಳನ ಎದುರಿಗೆ ಬಿದ್ದು ಅವನನ್ನು ಮರುಳು ಮಾಡಿ, ನನಗೆ ಅಪಾಯವನ್ನು ತಂದೊಡ್ಡುವರೋ ಗೊತ್ತಾಗುವುದಿಲ್ಲ! ಸಾಲದ್ದಕ್ಕೆ ನಮ್ಮ ಬಲ್ಲಾಳನಿಗೆ ಹಿತ್ತಾಳಿಯ ಕಿವಿ; ಕೆಸರುಗೂಟದ ಮನಸ್ಸು; ಬಂಗಿ ಮುಕ್ಕಿ ಹೊತ್ತಿಗೊಂದು ಬುದ್ಧಿ. ಯಾವ ಉಪಾಯವೂ ಹೊಳೆಯುವುದಿಲ್ಲವಲ್ಲಾ!" ಹೀಗೆ ಚಂದುಗಿಡಿಯು ಯೋಚಿಸುತಿದ್ದಾಗ ಬಲ್ಲಾಳನ ಜನ ಬಂದು “ಬುದ್ದಿ, ಅಟ್ಟ ಅನ್ನದಲ್ಲಿ ಉಟ್ಟ ಉಡಿಗೆಯಲ್ಲಿ ಹೊರಟು ಬರಬೇಕೆಂದು ಅಪ್ಪಣೆಯಾಗಿದೆ ಎಂದನು. ತಕ್ಷಣವೇ ಚೆಂದುಗಿಡಿಯು ಅಲ್ಲಿಂದ ಎದ್ದು ಕೇಮರನ ಬೀಡಿಗೆ ಹೋದನು,
ಕೇಮರ ಬಲ್ಲಾಳನು ಒಳಗಿನ ಅರೆಯಲ್ಲಿ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದನು. ಚಂದುಗಿಡಿಯು ಬಂದು ಕೈಮುಗಿದು, ಕೈಕಟ್ಟಿ ನಿಂತನು. ಕೇಮರನು ಅವನಿಗೆ ಕುಳಿತುಕೊಳ್ಳಲು ಹೇಳಿ, ಮುಗುಳುನಗೆಯಿಂದ “ರಹಸ್ಯದ ಕಾರ್ಯ- ರಾಯಸ ಬಂದಿದೆ ” ಎಂದನು,
ಚಂದುಗಿಡಿಯು “ಬುದ್ಧಿ" ಎಂದು ಗಂಟಲೊತ್ತಿದಂತೆ ಹೇಳಿ, ಮೊಳಕೈಗಳನ್ನು ಒರಸುತ್ತ, “ಬುದ್ಧಿ” ಎಂದು ಸ್ವರ ಎತ್ತಿದನು. ಕೇಮರ ಬಲ್ಲಾಳನು “ನಮ್ಮ ಪಡುಮಲೆ ರಾಜ್ಯದಿಂದ ಓಲೆ ಉಡುಗೊರೆ ಸಹಿತ ಆಳು ಬಂದಿದೆ. ಭಾರಿ ರಾಯಸ, ಕೋಟಿ ಚೆನ್ನಯರನ್ನು ಕುರಿತು ಬಲ್ಲಾಳರು ಬರಸಿದ್ದಾರೆ ಎಂದು ಹೇಳಿ, ಓಲೆಯನ್ನು ಚಂದುಗಿಡಿಯ ಕೈಯಲ್ಲಿ ಕೊಟ್ಟನು.
ಚೆಂದುಗಿಡಿಯ ಎದೆಯು ಬಡೆಯ ಹತ್ತಿತು. ಅವನು ನಡುಗುವ ಕೈಗಳಲ್ಲಿ ಅದನ್ನು ಹಿಡಿದು ಒಮ್ಮೆ ಓದಿಕೊಂಡನು; ಒಮ್ಮೆ ಒಳಕ್ಕೆ ಸರಿದ ನಾಲಗೆಯು ಈಗ ಹೊರಕ್ಕೆ ಬಂತು. ಅವನು ಅದನ್ನು ಇನ್ನೊಮ್ಮೆ ಚೆನ್ನಾಗಿ ಹಿಂದು ಮುಂದು ಮಗುಚಿ ನೋಡಿ, ಬುದ್ದಿ, ರಾಯಸದ ಒಕ್ಕಣೆ ಸರಿಯಿದೆ. ಬಾಳೆಯಾಗಿ ಬೆಳಿಸಿದ್ದು ತಾಳೆಯಾಗಿ ತಲೆಯನ್ನು ಜಜ್ಜಿತಲ್ಲಾ” ಎಂದನು.
ಕೇಮರ ಬಲ್ಲಾಳನು “ಓಲೆಯನ್ನು ಓದಬೇಕೆಂದಿಲ್ಲ. ಒಟ್ಟೇನು ಹೇಳಿ ಬಿಡು” ಎಂದು ಹೇಳಿ, ತನ್ನ ಬೆಳ್ಳಿಯ ಕರಡಿಗೆಯೊಳಗಿಂದ ಬಂಗಿಯ ಉಂಡೆಯನ್ನು ತೆಗೆದು ಮುಕ್ಕಿದನು.
ಚೆಂದುಗಿಡಿಯು ಇನ್ನೊಮ್ಮೆ ಓಲೆಯನ್ನು ಓದಿದಂತೆ ನಟಿಸಿ, “ಬುದ್ಧಿ, ಪಡುಮಲೆಯ ರಾಜ್ಯದಲ್ಲಿ ಬಿಲ್ಲವರಿಗೆ ಹುಟ್ಟಿದ ಕೋಟಿಚೆನ್ನಯರು ಮಲ್ಲಯ ಬುದ್ಧಿವಂತನನ್ನು ಕೊಂದು, ಭಾರಿ ನರಹತ್ಯಮಾಡಿ, ತಲೆ ಮರೆಸಿಕೊಂಡು ಓಡಿಹೋಗಿದ್ದಾರೆ. ಪಂಜದ ರಾಜ್ಯದಲ್ಲಿ ಕಾಲಿಟ್ಟರೆ ಅವರನ್ನು ಹಿಡಿದು ಕಳುಹಿಸಬೇಕು-
ಕೇಮರ ಬಲ್ಲಾಳ-"ಇಲ್ಲದಿದ್ದರೆ-" ಚೆಂದುಗಿಡಿ “ ಇಲ್ಲದಿದ್ದರೆ, ಇಲ್ಲದಿದ್ದರೆ ಅವರನ್ನು ಇಲ್ಲೇ ಕೊಲ್ಲಿಸಬೇಕು” ಎಂದು ನಾಲಗೆ ಕಚ್ಚಿ ಹೇಳಿದನು. ಆ ಕಡೆಯ ವಾಕ್ಯವು ರಾಯಸದಲ್ಲಿ ಇರಲಿಲ್ಲ.
ಕೇಮರ ಬಲ್ಲಾಳ- ಕಳುಹಿಸದಿದ್ದರೆ ಅವನು ಏನು ಮಾಡುತ್ತಾನಂತೆ?"
ಚೆಂದುಗಿಡಿ-"ಅವರನ್ನು ಹಿಂದಕ್ಕೆ ಕಳುಹಿಸಿ ಇಲ್ಲವೆ ಕೊಂದು ಹಾಕಿ, ನಮ್ಮೊಳಗಿನ ಪೂರ್ವ ಸ್ನೇಹವನ್ನು ಬೆಳೆಸುವುದು; ನಮ್ಮ ಪಡುಮಲೆ ಬೀಡಿನ ಮಾನಮರ್ಯಾದೆಯನ್ನು ಕಾಪಾಡುವುದು ಹೀಗೆ ಸಾಷ್ಟಾಂಗ ನಮಸ್ಕಾರ ಪೂರ್ವಕವಾಗಿ ಬರೆಯಿಸಿರುತ್ತಾರೆ.
ಕೇಮರ ಬಲ್ಲಾಳ- “ಸರಿ! ಬೀಡಿನ ಗೌರವವು ನಮಗೂ ಒಂದೇ, ಅವರಿಗೂ ಒಂದೇ. ಹಾಗಾದರೆ ಅವರ ಬೀಡಿನ ಮರ್ಯಾದೆಯನ್ನು ನಾವು ಕಾಯಬೇಕಷ್ಟೆ - "
ಚೆಂದುಗಿಡಿ- “ಬುದ್ಧಿ! ಅಪ್ಪಣೆಯಾದರೆ ನಾನು ಮಾಡುತ್ತೇನೆ.”
ಹೀಗೆ ಹೇಳಿ ಚೆಂದುಗಿಡಿಯು ಪಡುಮಲೆಯಿಂದ ಬಂದ ಓಲೆಯ ಒಕ್ಕಣೆಯಂತೆ ನಡಿಸತಕ್ಕ ಉಪಾಯಗಳನ್ನು ಸೂಚಿಸಿ, ಬೀಡಿನಿಂದ ಹೊತ್ತು ಮುಳುಗುವಷ್ಟರೊಳಗೆ ತನ್ನ ಮನೆಗೆ ಹಿಂದೆ ಹೋಗುತಿದ್ದನು.
ಆ ಹೊತ್ತಿಗೆ ಚೆಂದುಗಿಡಿಯ ಮನೆಯ ದಾರಿ ಹಿಡಿದು ಕೋಟಿ ಚೆನ್ನಯರೊಟ್ಟಿಗೆ ಈಚೆಗೆ ಬರುತಿದ್ದ ಪಯ್ಯಬೈದ್ಯನು ಚೆಂದುಗಿಡಿಯನ್ನುಕಂಡು, “ಅಯ್ಯಾ! ನಾವು ನಿಮ್ಮಲ್ಲಿಗೆ ಹೋಗುತಿದ್ದೆವು. ನಿಮ್ಮನ್ನು ಬೀಡಿಗೆ ಕರೆಯಿಸಿದ್ದಾರೆಂದು ಕೇಳಿ ಈ ದಾರಿಯಾಗಿ . . . "
ಚೆಂದುಗಿಡಿಯು ಅವನನ್ನು ಮಾತು ಮುಗಿಸಲಿಕ್ಕೆ ಬಿಡದೆ, ಅವನ ಕೈ ಹಿಡಿದು, ಮೂವರನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಕೂಡಲೆ ಒಳಗಿನಿಂದ ಬಂದ ಹಾಲಿನ ಗಿಂಡಿ, ಸಕ್ಕರೆಯ ತಟಕು, ಕೆಂದಾಳೆ ಸೀಯಾಳ- ಇವುಗಳ ಉಪಚಾರ ಮಾತ್ರವಾಯಿತು, ಅವನ್ನು ಯಾರೂ ಮುಟ್ಟಲಿಲ್ಲ. ತರುವಾಯ ವೀಳ್ಯದ ತಟ್ಟಿ ಬಂತು- ಪಂಚವಳ್ಳಿಯೆಲೆ, ಇಬ್ಬಾಗದ ಅಡಕೆಯ ಹೋಳು, ಬೆಣ್ಣೆಯಂಥ ಬಿಳಿಸುಣ್ಣ, ಸೂರತಿ ಹೊಗೆಸೊಪ್ಪು, ಪಯ್ಯನು ಎಲೆಯನ್ನು ಒರಸಿ, ಉಗುರಿಂದ ಕುಡಿಯನ್ನು
ಚೆನ್ನಯ-“ಗೊತ್ತಾಗುವುದಕ್ಕೆ ಆರು ತಿಂಗಳು ಹಿಡಿದರೆ, ಪೂರಯಿಸುವುದಕ್ಕೆ ಎಷ್ಟು ಕಾಲ ಬೇಕಾಗುವದೊ?
ಕೋಟಿ--- "ಅಯ್ಯಾ, ನಾವು ಬಲ್ಲಾಳರ ಭೇಟಿಯನ್ನು ನಿರೀಕ್ಷಿಸಿ ಬಹಳ ಕಾಲದಿಂದ ಹೆರವರ ಮನೆಯಲ್ಲಿ ಇದ್ದೇವೆ, ಒಮ್ಮೆ ಅವರ ದರ್ಶನವಾಯಿತೆಂದರೆ, ನಾವು ಇದುವರೆಗೆ ಕಾದುಕೊಂಡಿದ್ದ ಬೇಸರು ಹೋಗಿಬಿಡುತ್ತದೆ. ಬಲ್ಲಾಳರನ್ನು ನಿಮ್ಮ ಮೂಲಕ ಕಾಣಬೇಕೆಂದು ನಮ್ಮ ಭಾವನ ಅಭಿಪ್ರಾಯವಿದೆ.”
ಪಯ್ಯಬೈದ್ಯ – “ಏನು ಹೇಳುತ್ತಿ, ಭಾವಾ? ನಮಗೆ ಬೇಕಾದಾಗ ಬಲ್ಲಾಳರು ನೋಡಸಿಗಲಿಕ್ಕೆ ಅವರೇನು ನಾವು ಕಟ್ಟುವ ತಾಳೆಯ ಮರವೊ? ಆಳ ನೋಡಿ ತೊರೆಯನ್ನು ದಾಟಬೇಕು, ವೇಳೆ ನೋಡಿ ದೊರೆಯನ್ನು ಕಾಣ ಬೇಕು, ಅರಸನ ಚಿತ್ರ, ಬೀಡಿನ ಸಂಗತಿ, ಅಲ್ಲವೆ ಚೆಂದುಗಿಡಿ?”
ಚೆನ್ನಯ-- “ಇನಾದರೂ ಆ ಕಾಣುವುದಕ್ಕೆ ಇದೆಯೋ ಇಲ್ಲವೊ?
ಚೆಂದುಗಿಡಿ-“ಅದಕ್ಕೇನು ಅಡ್ಡಿ ?”
ಚೆನ್ನಯ- “ ಹಾಗಾದರೆ, ಯಾವಾಗ?"
ಚೆಂದುಗಿಡಿ “ನಾಳೆ?"
ಪಯ್ಯಬೈದ್ಯ– “ನಾಳೆ ಸಂಕ್ರಾಂತಿ, ನಾಳೆ ಬೇಡ --ನಾಡದು ಆಗಬಹುದು"
ಚೆಂದುಗಿಡಿ-"ನಾಡದು ಸೋಮವಾರ--"
ಚೆನ್ನಯ- “ಎಷ್ಟು ಹೊತ್ತಿಗೆ?”
ಚೆಂದುಗಿಡಿ “ಹಟ್ಟಿಯಿಂದ ಹೋದ ದನ ಹಟ್ಟಿಯೊಳಗೆ ಬರುವುದರೊಳಗೆ,
ಕೋಟಿ-ಆ ದಿನ ನಿಮ್ಮ ಕೈಗೆ ಬಿಡುವು ಇದೆಯಷ್ಟೆ!” ಚೆ೦ದುಗಿಡಿ- "ಹೌದು, ಹೌದು.”
ಚೆಂದುಗಿಡಿಯ ಮನೆಯಿಂದ ಮೂವರೂ ಹಿಂದೆರಳಿದರು, ದಾರಿಯಲ್ಲಿ ಚೆನ್ನಯನು “ಅಣ್ಣ, ಈ ಚೆಂದುಗಿಡಿಯನ್ನು ನೋಡಿದಾಗ ಯಾರ ನೆನಪಾಗುತ್ತದೆ?” ಎಂದು ಕೇಳಿದನು.
ಕೋಟಿ- "ಅವನು ಗಿಡುಗನ ಹಾಗೆ ಕಾಣುತ್ತಾನೆ,
ಚೆನ್ನಯ-- "ಅವನ ಬಾಯಿ ನೆಗಳೆಯ ಬಾಯ ಹಾಗೆಯೇ ಇದೆ, ಜೋಯಿಸರು ಹೇಳಿದ ನೆಗಳೆಯ ನೆನಪು ಬರುತ್ತದೆ-ಅಲ್ಲವೆ ಅಣ್ಣ?”
ಅಷ್ಟರಲ್ಲಿ ಮನೆಯು ಹತ್ತಿರವಾಯಿತು; ಮೂವರು ಒಳಗೆ ಹೋದರು.
ಸೋಮವಾರ ಸೂರ್ಯೋದಯವಾಯಿತು. ಕೋಟಿಚೆನ್ನಯರು ಹೊತ್ತು ನೆತ್ತಿಗೆ ಬರುವುದರೊಳಗೆ ಮುಂಗೈಗೆ ಮುಟ್ಟುವಂತೆ ಗಂಧವನ್ನು ಲೇಪಿಸಿಕೊಂಡು, ಹಣೆ ತುಂಬುವಂತೆ ತುಳಸಿಕಟ್ಟೆಯ ಮೃತ್ತಿಕೆಯಿಂದ ನಾಮವನ್ನು ಎಳೆದುಕೊಂಡು, ತೊಡೆಯಗಲದ ಚಲ್ಲಣವನ್ನು ಉಟ್ಟು, ಬಲು ಉದ್ದದ ಪಟ್ಟೆಯ ದಟ್ಟಿಯನ್ನು ನಡುವಿಗೆ ಬಿಗಿದು, ಗಿಳಿಬಣ್ಣದ ಟೊಪ್ಪಿಗೆಯಿಂದ ತಲೆಯನ್ನು ಮುಚ್ಚಿ, ರಾಮ ಲಕ್ಷ್ಮಣ ಎಂಬ ಎರಡು ಕತ್ತಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೇಮರ ಬಲ್ಲಾಳನ ದರ್ಶನಕ್ಕಾಗಿ ಹೊರಟರು.
ಅವರು ದಾರಿಯ ಮೇಲೆ ಮುಟ್ಟುವುದರೊಳಗೆ ಪಯ್ಯಬೈದ್ಯನು ಕಲ್ಲೆಡವಿ ಬಿದ್ದರೂ ಬಿದ್ದಂತೆ ತೋರಿಸಿಕೊಳ್ಳದೆ ಮುಂದೆ ಹೋಗುವವರನ್ನು ಕುರಿತು “ಒಂದು ಗಳಿಗೆ ತಡೆಯಿರಿ. ನನಗೆ ನಿನ್ನೆಯಿಂದ ಅಪಶಕುನಗಳೇ ಕಾಣುತ್ತವೆ. ರಾತ್ರಿ ಕೆಟ್ಟ ಕನಸು ಬಿತ್ತು – ಕಷ್ಟದಲ್ಲಿ ಬಿದ್ದು ಹೊರಳಾಡಿದ ಕಾಡಾನೆಯು ನನ್ನನ್ನು ಸೊಂಡಿಲಲ್ಲಿ ಹಿಡಿದು ನೆಲಕ್ಕೆ ಅಪ್ಪಳಿಸಿ ಬಿಟ್ಟಂತೆ ಕನಸು ಕಂಡೆ. ಎಚ್ಚೆತ್ತು ಹೊರಬರುವಾಗ ಚೆನ್ನಯನು ನಿದ್ದೆಯಲ್ಲಿ “ಅಣ್ಣಾ, ಕೋಟಿ' ಎಂದು ಕನಿಕರದಿಂದ ಕೂಗಿದ್ದನ್ನು ಕೇಳಿದೆ. ಈಗ ದಾರಿಯಲ್ಲಿ ಕಾಲಿಡುವಾಗ ಮುಗ್ಗರಿಸಿದಂತಾದೆ, ಆದುದರಿಂದ ನೀವು ಈ ಕೆಂದಾಳೆಯ ಪದ್ಮಕಟ್ಟೆಯ ಮೇಲೆ ಕುಳಿತುಕೊಂಡು ಅಪಶಕುನವನ್ನು ಕಳೆಯಲೇ ಬೇಕು” ಎಂದನು. ಹೀಗೆ ದುಶ್ಶಕುನಗಳನ್ನು ನಿವಾರಿಸಿಕೊಂಡು ಅವರು ಬೀಡನ್ನು ಮುಟ್ಟುವಾಗ ಹೊತ್ತು ಇಳಿಯಲಿಕ್ಕಾಯಿತು. ಇಳಿ ಹೊತ್ತಿನಲ್ಲಿ
ಇದ್ದರೂ ಸಾಲದು,
ಅವರು ಚಾವಡಿಯ ಮೇಲೆ ಬರುವಷ್ಟರಲ್ಲಿ ಚೆಂದುಗಿಡಿಯು ಒಳಕ್ಕೆ ಹೋಗಿ ಒಂದು ನಿಮಿಷದಲ್ಲಿಯೇ ಹೊರಕ್ಕೆ ಬಂದು, “ಬೈದ್ಯರೇ, ನಿಮ್ಮ ಕಾರ್ಯವು ರಹಸ್ಯದ್ದಿದ್ದರೆ, ನಿಮ್ಮಿಬ್ಬರಿಗೆ ಮಾತ್ರ ಒಳಗೆ ಅಪ್ಪಣೆಯಾಗಿದೆ” ಎಂದು ಹೇಳಿದನು.
ಅದಕ್ಕೆ ಕೋಟಿಯು “ಯಾವ ಗುಟ್ಟಾದರೂ ಬೀಡಿನಲ್ಲಿ ನಿಮ್ಮ ಕಿವಿಯ ಹೊರಗಲ್ಲವಷ್ಟೆ” ಎಂದನು.
ಚೆಂದುಗಿಡಿಯು “ಬಲ್ಲಾಳರ ಅಪ್ಪಣೆಯಂತೆ ನಡೆಯ ಬೇಕಾದದ್ದು ನನ್ನ ಕೆಲಸ, ಬಲ್ಲಾಳರಿಗೆ ಬೆಳಗ್ಗಿನಿಂದ ಮೈಯಲ್ಲಿ ಅಷ್ಟು ಸೌಖ್ಯವಿಲ್ಲವಂತೆ. ಆದುದರಿಂದ ನೀವಿಬ್ಬರೇ ಅವರನ್ನು ಹೋಗಿ ಕಾಣುವುದು ನನಗೆ ಮೇಲೆಂದು ತೋರುತ್ತದೆ. ಅದೇ-ಹೊಸತಾಗಿ ಕಟ್ಟಿಸಿದ ಮೇಲ್ಮಾಳಿಗೆ; ಅವರು ಅಲ್ಲಿಯೇ ಓಲಗವಾಗಿದ್ದಾರೆ. ನೀವು ಒಳಕ್ಕೆ ಹೋಗಿ; ನಾವು 'ಇಲ್ಲಿಯೇ ಕಾವಲು ಇದ್ದೇವೆ ” ಎಂದು ಅವರಿಬ್ಬರನ್ನು ಒಡಂಬಡಿಸಿದನು.
ಕೋಟಿಚೆನ್ನಯರು ಒಳಕ್ಕೆ ಹೋಗಿ, ಮಾಳಿಗೆಯ ಬಡಗು ಗೋಡೆಯ ಒತ್ತಿನಲ್ಲಿದ್ದ ಗದ್ದಿಗೆಯನ್ನು ಸಮೀಪಿಸುವಷ್ಟರಲ್ಲಿ ಅದರ ಮೇಲೆ ಅರೆ ಒರಗಿದ್ದವನು ಮೈಯಲುಗಿಸಿ, “ಬನ್ನಿ, ಇಲ್ಲೇ ಕುಳಿತುಕೊಳ್ಳಬಹುದು ” ಎಂದು ಹೇಳಿ, ಹೂವಿನ ಚಾಪೆ ಹಾಸಿದ್ದ ಹಲಗೆಯನ್ನು ತೋರಿಸಿ, “ಹಸೆ ಇದೆ, ಕುಳಿತುಕೊಳ್ಳಿ; ಇದು ನಾವು ಕಟ್ಟಿಸಿದ ಹೊಸ ಮಾಳಿಗೆ-ಹೇಗಿದೆ? ಎಂದು ತಾನೇ ಮಾತಾಡುವುದಕ್ಕೆ ಪ್ರಾರಂಭಿಸಿದನು.
ಅದಕ್ಕೆ ಚೆನ್ನಯನು “ಬುದ್ದಿ, ಕೇಳೆಬೇಕೆ? ಮಾಳಿಗೆ ಚೆನ್ನಾಗಿದೆ- ಬಳ್ಳಿಯಷ್ಟು ಬಾವು ಇಲ್ಲ ಮೂಗಿನಷ್ಟು ಮೊನೆ ಇಲ್ಲ ” ಎಂದನು.
ಕೋಟಿಯ ಕಣ್ಣು ಗದ್ದಿಗೆಯ ಮೇಲೆಯೇ ಇದ್ದಾಗ, ಅವನ ಕಿವಿಗೆ ಬಾಗಿಲಿನವನು ಬಾಗಿಲು ಮುಚ್ಚಿದ ಸದ್ದು ಬಿತ್ತು, ಕೀಲಿನವನು ಕೀಲು ಹಾಕಿದ ಶಬ್ದವು ಕೇಳಿಸಿತು. ಆಗ ಆತನು ತಮ್ಮಾ, ಹಾಲೆಂದು ಬಾಯಿಗೆ ಮುಟ್ಟಿಸುವಾಗ ಅದು ಕಳ್ಳಿಯ ಹಾಲಾಯಿತಲ್ಲಾ! . ಹಾಸಿಗೆಯೆಂದು ಒರಗುವಷ್ಟರಲ್ಲಿ ಅದು ಮುಳ್ಳಿನ ಹಾಸಾಯಿತಲ್ಲಾ! ಇಂಬು ಎಂದು ನಂಬಿದ್ದು ಅಂಬು ಆಯಿತಲ್ಲಾ! ಇವನು ಬಲ್ಲಾಳನಲ್ಲ ನಿಜವಾಗಿಯೂ ಬಲ್ಲಾಳನಲ್ಲ” ಎಂದು ಉದ್ರೇಕಗೊಂಡನು.
ಚೆನ್ನಯನು – "ಅಣ್ಣಾ ! ನೀನು ಹೇಳಿದ್ದು ಸರಿಯೆ, ಬಲ್ಲಾಳನಿಗೆ ಗಿಳಿ ಮೂಗು, ಕುಡಿತೆ ಕಿವಿ, ಜಳ್ಳು ಹೊಟ್ಟೆ, ಅಂಡೆ ಕಾಲು ಎಂದು ಹೇಳುವು ದನ್ನು ಕೇಳಿದ್ದೇನೆ. ಇವನ ಮೈಕಟ್ಟು, ಗರಡಿಯಲ್ಲಿ ಸಾಧಕ ಮಾಡಿದ ತೆರದಲ್ಲಿದೆ. ಇವನು ಬಲ್ಲಾಳನಿಗೆ ಹುಟ್ಟಿದ ....."
ಅಷ್ಟರಲ್ಲಿ ಗದ್ದಿಗೆಯ ಮೇಲೆ ಇದ್ದವನು ಚಿರನೆ ಚೀರಿ, ಕತ್ತಿಯನ್ನು ಜಳಪಿಸುತ್ತ, ಕೆಳಕ್ಕೆ ಇಳಿದು ಮುಂದೆ ಬರುತ್ತಿದ್ದನು.
ಚೆನ್ನಯನ ಕಣ್ಣು ಅರಳಿತು ಹಲ್ಲುಗಳು ಒಂದಕ್ಕೊಂದು ಅಂಟಿಕೊಂಡುವು, ತೆರೆದ ಸೊಳ್ಳೆಯಿಂದ ಬಿಸಿ ಗಾಳಿಯು ಹೊರಟಿತು, ಮೈಕೂದಲು ಜುಮ್ಮೆಂದು ಎದ್ದು ನಿಂತಿತು.
ಅದನ್ನು ಕಂಡು ಕೋಟಿಯು ಅವನ ಕೈ ಹಿಡಿದು, “ಚೆನ್ನಯ, ತಡಿ, ದುಡುಕಬೇಡ” ಎಂದು ಹೇಳಿ, ಕತ್ತಿ ಹಿರಿದು ತನ್ನ ಮುಂದೆ ನಿಂತವನನ್ನು ಗುರುತಿಸಿ – ತಮ್ಮಾ, ಇವನು ಬಲ್ಲಾಳನಲ್ಲ, ಬಲ್ಲಾಳನ ವೇಷದಿಂದ ಕುಳಿ ತಿದ್ದ ಅವನ ಬೀಡಿನ ಕೊಟ್ಟಾರಿ” ಎಂದು ಹೇಳಿ ಎದ್ದು ನಿಂತನು.
ಆದರೆ ಗದ್ದಿಗೆಯಿಂದ ಇಳಿದಿದ್ದ ಕೊಟ್ಟಾರಿಯು ಕೋಟಿಚೆನ್ನಯರನ್ನು ಎದುರಿಸದೆ, ಬಡಗು ಗೋಡೆಯಲ್ಲಿದ್ದ ಬಾಗಿಲನ್ನು ಸರ್ರನೆ ತೆರೆದು, ಅದನ್ನು ದಾಟಿ, ತನ್ನ ಬೆನ್ನ ಹಿಂದೆ ಅದನ್ನು ಕೀಲಿಸಿ ಹೊರಕ್ಕೆ ಹೋದನು. ಕೂಡಲೆ ಡೋಲು ಬಡೆದಂತೆ ಬಡ ಬಡ ಬಡ ಶಬ್ದವಾಯಿತು.
"ಪಡುಮಲೆಯಿಂದ ಬಂದವರನ್ನು ಸಾಂಗವಾಗಿ ಕಂಡದ್ದಾಯಿತು. ಇನ್ನು ಇವರು ನಮ್ಮ ಬೀಡಿನಲ್ಲಿ ಯಾರ ತೊಂದರೆಯು ಇಲ್ಲದೆ ಬೇಕಾದಷ್ಟು ಕಾಲ ಸುಖವಾಗಿ ಇರಬಹುದು” ಎಂಬ ಮಾತುಗಳು ಕೇಳ ಬಂದುವು; ಸ್ವರವು ಚೆಂದುಗಿಡಿಯ ಸ್ವರವಾಗಿತ್ತು. ಇಕ್ಕಡೆಯ ಬಾಗಿಲುಗಳು ಮುಚ್ಚಿ ಬಿಟ್ಟಿದ್ದ ಮೇಲ್ಮಾಳಿಗೆಯಲ್ಲಿ ಕೋಟಿ ಚೆನ್ನಯರು ಚಾಪೆಯೊಳಗೆ ಹಿಡಿದಿದ್ದ ಹಾವಿನಂತೆ ಬುಸುಗುಟ್ಟುತ್ತ “ಅಯ್ಯೋ ! ವಿಧಿಯೇ ! ಇದು ಪಡುಮಲೆಯವರ ಹಗೆಯೇ ? ಕೇಮರನ ಮೋಸವೇ ? ನಮ್ಮ ಗ್ರಹಚಾರವೇ ? ಹೀಗೆ ಮಳೆಗಾಲದಲ್ಲಿ ಮೋಡದ ಮೇಲೆ ಮೋಡವು ಕವಿಯುವಂತೆ ನಮ್ಮ ಮೇಲೆ ಆಪತ್ತಿನ ಮೇಲೆ ಆಪತ್ತು ಬರುತ್ತದಲ್ಲಾ! ನಮಗೆ ಸಾಯುವ ಕಾಲವು ಬಂತೇ ? ಇದ್ದಾಗ ನಾವು ಓಲಗದ ಬಂಟರು; ಸತ್ತರೆ ವೈಕುಂಠದ ಬಂಟರು ನಾವು ಒಟ್ಟಿಗೆ ಹುಟ್ಟಿದೆವು, ಒಟ್ಟಿಗೆ ಬೆಳೆದೆವು. ಇನ್ನು ಒಟ್ಟಿಗೆ ಏಕೆ ಸಾಯಬಾರದು ?" ಎಂದು ನಾನಾ ಪ್ರಕಾರವಾಗಿ ಮರುಗುತಿದ್ದರು.
ನಡು ಇರುಳು ದಾಟಿ ಹೋಗಿ, ಚಂದ್ರನು ಅಸ್ತಮಿಸುವುದಕ್ಕಾದರೂ ಇಬ್ಬರು ಮುಂದೇನು ಗತಿ ಎಂದು ತಮ್ಮೊಳಗೆ ವಿಚಾರಿಸುತ್ತ, ಕಣ್ಣಿಗೆ ನಿದ್ದೆ ಬಾರದೆ ಕುಳಿತುಕೊಂಡಿದ್ದರು. ಮುಳುಗುವ ಚಂದ್ರನು ಆ ಮಾಳಿಗೆಯ ಒಂದು ಸಣ್ಣ ಕಿಟಿಕಿಯೊಳಗಿನಿಂದ ಈ ಇಬ್ಬರನ್ನು ಇಣಿಕಿ ನೋಡಿ ಕೆಳಕ್ಕೆ ಇಳಿದನು, ಆಗ ಚೆನ್ನಯನು ಅಣ್ಣಾ, ನನ್ನನ್ನು ಒಂದು ನಿಮಿಷ ನಿನ್ನ ಹೆಗಲ ಮೇಲೆ ಹೊತ್ತುಕೊಳ್ಳುವೆಯಾ? ನಾವು ಇಲ್ಲಿಂದ ತಪ್ಪಿಸಿಕೊಳ್ಳಬಹುದು” ಎಂದನು.
ಕೋಟಿಯು ತಮ್ಮನನ್ನು ಹೆಗಲ ಮೇಲೆ ಹಿಡಿದುಕೊಂಡು ಎದ್ದು ನಿಂತನು; ಹೆಗಲ ಮೇಲೆ ನಿಂತಿದ್ದ ಚೆನ್ನಯಸ ಕೈಗಳಿಗೆ ಆ ಚಿಕ್ಕ ಕಿಟಿಕಿಯು ಎಟಕಿತು. ಕೂಡಲೆ ಆ ಕಿಟಿಕಿಯು ಅವನ ಬಲವಾದ ಕೈಗಳಿಂದ ಕುಲುಕಿದಂತಾಗಿ, ಗೋಡೆಯಿಂದ ಎಬ್ಬಿಸಲ್ಪಟ್ಟು, ಕಿಟಿಕಿ ಇದ್ದೆಡೆಯಲ್ಲಿ ಒಂದು ಬಿರುಕು ಕಾಣಿಸಿತು. ತರುವಾಯ ಅಣ್ಣ ತಮ್ಮಂದಿರು ತಮ್ಮ ನಡುವಿಗೆ ಬಿಗಿದುಕೊಂಡಿದ್ದ ದಟ್ಟಿಗಳನ್ನು ಬಿಚ್ಚಿ, ಅವೆರಡನ್ನು ಉದ್ದದ ಒಂದೇ ದಟ್ಟಿಯಾಗುವಂತೆ ಗಂಟಿಕ್ಕಿ, ಅದನ್ನು ಇಕ್ಕಡೆಗಳಿಂದ ಚೆನ್ನಾಗಿ ಎಳೆದು ನೋಡಿ ಪರೀಕ್ಷಿಸಿದರು. ಈ ಉದ್ದದ ದಟ್ಟಿಯ ಒಂದು ತುದಿ ಯನ್ನು ಚೆನ್ನಯನು ಕೈಯಲ್ಲಿ ಹಿಡಿದುಕೊಂಡನು, ದಟ್ಟಿಯ ಬಹು ಭಾಗವನ್ನು ಕೋಟೆಯು ನೆರಿಗೆನೆರಿಗೆಯಾಗಿ ಕಟ್ಟಿಕೊಂಡನು. ಈಗ ತಮ್ಮನು ಅಣ್ಣನ ಹೆಗಲನ್ನು ಮತ್ತೊಮ್ಮೆ ಏರಿ, ಗೋಡೆಯಲ್ಲಿದ್ದ ಆ ಬಿರುಕಿನಿಂದ ಮೈಯನ್ನು ತೂರಿಸಿಕೊಂಡು, ದಟ್ಟಿಯ ತುದಿಯನ್ನು ಬಿಡದೆ ಹೊರಕ್ಕೆ ಬಂದನು. ಒಳಗಿನಿಂದ ಕೋಟಿಯು ದಟ್ಟಿಯ ಭಾಗವನ್ನು ಬಿಡುವಷ್ಟಕ್ಕೆ ಚೆನ್ನಯನು ತನ್ನ ಕಾಲುಗಳನ್ನು ಒಂದೊಂದಾಗಿ ಗೋಡೆಗೆ ಆನಿಸಿಕೊಂಡು ಆ ದಟ್ಟಿ ಹಿಡಿದು ಮಾಡುತ್ತ ಮಾಟುತ್ತ ಕೆಳಕ್ಕೆ ಇಳಿದನು, ಈಗ ಚೆನ್ನಯನು ಅದನ್ನು ಕೆಳಗಿನಿಂದ ಎಳೆಯುವಷ್ಟಕ್ಕೆ ಒಳಗಿದ್ದ ಕೋಟಿಯು ಅದನ್ನು ಸೆಳೆದು ಸೆಳೆದು ಗೋಡೆಯನ್ನು ಹತ್ತುತ್ತ, ಕಿಟಿಕಿಯ ಕನ್ನವನ್ನು ಮುಟ್ಟಿದನು; ಅನಂತರ ಆ ದಟ್ಟಿಯ ತುದಿಯನ್ನು ಮಾಳಿಗೆಯ ಮಾಡಿನ ಮರದ ಅಡ್ಡಕ್ಕೆ ಕಟ್ಟಿ, ಅದನ್ನು ತೂಗಬಿಟ್ಟು, ಅದರ ಆಧಾರದಿಂದ ಮೆಲ್ಲನೆ ಕೆಳಕ್ಕೆ ಇಳಿದು ತಮ್ಮನನ್ನು ಸೇರಿಕೊಂಡನು. ಇಷ್ಟರಲ್ಲಿ ಚಂದ್ರನು ಮುಳುಗಿ ಕತ್ತಲು ಇನ್ನೂ ಕಪ್ಪಾದಂತೆ ಕಾಣಿಸಿತು. ಗುಂಡಿಯೊಳಗಿಂದ ತಪ್ಪಿಸಿಕೊಂಡು ಕತ್ತಲೆಯ ಕಾಡೊಳಗೆ ನುಗ್ಗಿ ಕೊಳ್ಳುವ ಸೊಕ್ಕಾನೆಗಳಂತೆ ಅವರಿಬ್ಬರು ಆ ಅಂಧಕಾರದಲ್ಲಿ ಅಲ್ಲಿ ಬಿದ್ದು ಇಲ್ಲಿ ಬಿದ್ದು, ಬೆಳಕು ಹರಿಯುವಷ್ಟರೊಳಗೆ ಪಂಜದಿಂದ ಮಾಯವಾದರು.
ಮರುದಿನ ಬೆಳಗ್ಗೆ ಕೋಟಿಚೆನ್ನಯರ ಪಲಾಯನದ ಸಮಾಚಾರವು ಚೆಂದುಗಿಡಿಗೆ ಗೊತ್ತಾದರೂ ಅವನು ಅದನ್ನು ಕೇಮರಬಲ್ಲಾಳನ ಕಿವಿಗೆ ಬೀಳಿಸದೆ ಅವರಿಬ್ಬರು ಸೆರೆಯಲ್ಲಿ ಇದ್ದಾರೆ ಎಂಬಂತೆ ಸುದ್ದಿಯನ್ನು ಹರಹಿದನು; ಆದರೆ ಆಳುಗಳನ್ನು ಗುಟ್ಟಾಗಿ ಕಳುಹಿಸಿ ಮನೆ ಮನೆಗಳಲ್ಲಿ ಹುಡುಕಿಸಿದನು. ತಪ್ಪಿಹೋದ ಕೋಟಿಚೆನ್ನಯರು ತಪ್ಪಿಯೇ ಹೋದರು; ಪಂಜದ ಜನಗಳಿಗೆ ಮಾತ್ರ ಗೊತ್ತಾಗಲಿಲ್ಲ.
೩ ನೆ ಯ ಭಾ ಗ .
ಎಣ್ಮೂರಲ್ಲಿ.
ಪಂಜವನ್ನು ಬಿಟ್ಟ ಕೋಟಿಚೆನ್ನಯರು ಎಣ್ಮೂರು ಸೀಮೆಯ ದಾರಿ ಹಿಡಿದರು. ಮುಂಚಿನ ಕಾಲದಲ್ಲಿ ಪಂಜದಿಂದ ಎಣ್ಮೂರಿಗೆ ಹೋಗುವವರು ಸುತ್ತು ದಾರಿಯನ್ನು ಹಿಡಿಯಬೇಕಾಗಿತ್ತು. ಈಗ ಇರುವ ದಾರಿಯುದ್ದಕ್ಕೆಲ್ಲಾ ಆ ಕಾಲದಲ್ಲಿ ದಟ್ಟಡವಿ ಬೆಳೆದಿತ್ತು. ಹುಲಿಗಳು ಮೇಯುವ ಹೊಲದಂತೆಯೂ, ಆನೆಗಳು ಅಲೆಯುವ ಆಟದ ಬೈಲಂತೆಯೂ ಇದ್ದು, ಸುಮಾರು ಎರಡು ಮೈಲು ಅಗಲಕ್ಕೆ ಮರಗಳಿಂದ ಕಿಕ್ಕಿರಿದಿದ್ದ ಈ ಕಾಡನ್ನು ಹಗಲು ಹೊತ್ತಿನಲ್ಲಾದರೂ ದಾಟುವುದಕ್ಕೆ ಆಗ ಜನರು ಧೈರ್ಯಪಡುತಿರಲಿಲ್ಲ , ಈ ಕಾಡೇ ಪಂಜಸೀಮೆಗೂ ಎಣ್ಮೂರು ಸೀಮೆಗೂ ಗಡಿಯಾಗಿದ್ದ ತುಪ್ಪೆ ಕಲ್ಲಿನ ಕಾಡು; ಇದರ ಸಂಬಂಧವಾಗಿ ಎರಡು ಸೀಮೆಗಳ ಬಲ್ಲಾಳರಿಗೆ ವಾದ ವಿವಾದಗಳು ಆಗಾಗ ಬರುತ್ತಲೇ ಇದ್ದುವು. ಅಡವಿಯ ಮೂಡುಕಡೆಯಲ್ಲಿ ಈಗ ಪಾಳುಬಿದ್ದಿರುವ ಅಯ್ಯನೂರು ಬೈಲಿಗಾಗಿ ಇಬ್ಬರು ಪರಸ್ಪರ ಹೊಡೆದಾಡುತಿದ್ದರು. ಕೋಟಿಚೆನ್ನಯರು ಈ ಬೈಲಿನ ಹತ್ತಿರದ ಅಡವಿಯಲ್ಲಿ ಅವಿತುಕೊಂಡು ಕೆಲವು ದಿನಗಳ ತನಕ ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಂಡರು.
ಪಡುಮಲೆಯ ಕೋಟಿಚೆನ್ನಯರ ಸಮಾಚಾರವು ಇದಕ್ಕಿಂತ ಮೊದಲೇ ಎಣ್ಣೂರಿನಲ್ಲಿ ಹಬ್ಬಿತ್ತು. ಅವರು ಪೆರುಮಾಳು ಬಲ್ಲಾಳನ ಗದ್ದಿಗೆಯಲ್ಲಿ ಗಡು ಇಡುವುದಕ್ಕೆ ಮುಂಚಿತವಾಗಿಯೇ ಅವರ ಸಾಕಣೆ ತಾಯಿ ಸಾಯಿನ ಬೈದಿತಿಯು ಪಡುಮಲೆಗೆ ಬೆನ್ನು ಹಾಕಿ, ಎಣ್ಮೂರಿಗೆ ಹೊರಟು ಬಂದು, ತನ್ನ ದೂರದ ಸಂಬಂಧಿಕರೊಬ್ಬರಲ್ಲಿ ಉಳುಕೊಂಡಿದ್ದಳು. ಕೋಟಿಚೆನ್ನಯರ ಪ್ರತಾಪವನ್ನು ಇವಳ ಬಾಯಿಂದ ಕೇಳಿದ ನೆಂಟರಿಷ್ಟರೂ ಜಾತಿಮತಸ್ಥರೂ ಅದಕ್ಕಾಗಿ ಬಹಳ ಹೆಚ್ಚಳಪಡುತಿದ್ದರು. ಅವರಿಬ್ಬರ ಮೇಲಿದ್ದ ಈ ಹೆಚ್ಚಳವು ಆ ವೀರರ ಸಾಹಸಶೌರ್ಯಗಳ ವಾರ್ತೆಯು ಹೆಚ್ಚಿ ದಷ್ಟಕ್ಕೆ ಭಯಭರಿತ ಭಕ್ತಿಯಾಯಿತು. "ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲಿಕ್ಕಿಲ್ಲ' ಎಂಬಂತಿದ್ದ ವೀರರಿಬ್ಬರನ್ನು ಎಣ್ಮೂರಿನ ಬಿಲ್ಲವರು ಕ್ರಮೇಣ ತಮ್ಮವರೆಂಬ ವಿಶ್ವಾಸದಿಂದ ಭಾವಿಸತೊಡಗಿದರು. ಹೀಗೆ ಕೋಟಿಚೆನ್ನಯರ ಪ್ರಶ್ನೆಯು ಎಣ್ಮೂರಲ್ಲಿ ಜಾತಿ ಪ್ರಸಂಗವಾಯಿತು. ಕೇಮರ ಬಲ್ಲಾಳನು ಅವರನ್ನು ಮೋಸದಿಂದ ಹಿಡಿದು ಸೆರೆಯಲ್ಲಿ ಇಟ್ಟಿದ್ದಾನೆಂಬ ಸುದ್ದಿಯಿಂದ ಬಿಲ್ಲರ ಉಡಿಯಲ್ಲಿ ಬೆಂಕಿಕಿಡಿಯನ್ನು ಕಟ್ಟಿದಂತಾಗಿ, ಅವರೆಲ್ಲ ರು ಒಟ್ಟುಗೂಡಿ ಎಣ್ಮೂರು ಬಲ್ಲಾಳನಿದ್ದಲ್ಲಿಗೆ ಹೋಗಿ, ಕೋಟಿ ಚೆನ್ನಯರನ್ನು ಅವರ ತಲೆ ಹೂ ಬಾಡದಂತೆ ನೋಡಿಕೊಂಡು ಅವರನ್ನು ಕೂಡಲೆ ಕಳುಹಿಸಿಕೊಡಲು ಕೇಮರ ಬಲ್ಲಾಳನಿಗೆ ಪತ್ರ ಬರೆಯಬೇಕೆಂಬುದಾಗಿಯೂ, ಆತನು ಅದಕ್ಕೆ ಒಪ್ಪದಿದ್ದರೆ ಆತನ ಸೀಮೆಯನ್ನು ಒಳನುಗ್ಗಿ ಕೋಟಿಚೆನ್ನಯರನ್ನು ಬಿಡಿಸಿಕೊಂಡು ಎಣ್ಮೂರಿಗೆ ತರುವಂತೆ ತಮಗೆ ಅಪ್ಪಣೆ ಕೊಡಿಸಬೇಕೆಂಬದಾಗಿಯೂ ಅರಿಕೆಮಾಡಿಕೊಂಡರು. ಎಣ್ಮೂರು ಬಲ್ಲಾಳನು ಬಿಲ್ಲರ ಬಿನ್ನಹವನ್ನು ಕಿವಿಗೊಟ್ಟು ಕೇಳಿ, ತನ್ನ ಕಡೆಯ ಕಿನ್ನಿಚೆನ್ನಯನೆಂಬವನನ್ನು ಕರೆದು, ಕೋಟಿಚೆನ್ನಯರನ್ನು ಸಂಧಿಮಧ್ಯಸ್ಥಿಕೆಯಿಂದ ಕರೆದುಕೊಂಡು ಬರುವಂತೆ ಪ್ರಯತ್ನಿಸು” ಎಂದು ಅಪ್ಪಣೆಮಾಡಿ, ಒಂದು ದಿನ ಪಂಜಕ್ಕೆ ಕಳುಹಿಸಿದನು.
ಆ ದಿನ ಮಧ್ಯಾಹ್ನ ಕೋಟಿಚೆನ್ನಯರು ತಾವೂ ಅಡಗಿಕೊಂಡಿದ್ದ ತುಪ್ಪೆ ಕಲ್ಲು ಅಡವಿಯಿಂದ ಹೊರಬಿದ್ದು ಮುಂದಿನ ದಾರಿಯನ್ನು ಹುಡುಕಿ ಸಂಚರಿಸುತ್ತಿರಲು, ಚೆನ್ನಯನು ಫಕ್ಕನೆ ನಿಂತು ಬಿಟ್ಟು, “ಅಣ್ಣಾ, ಇದೋ ಗಡಿಕಲ್ಲು, ಪಂಜ ಹಿಂದಕ್ಕಾಯಿತು-- ಇದು ಎಣ್ಮೂರು” ಎಂದನು.
ಆಗ ಕೋಟಿಯು “ನನಗೆ ಬರಹ ಇಲ್ಲ. ಮೊದಲು ಹುಟ್ಟಿ, ನೆಟ್ಟಗೆ ಬೆಳೆಯಲಿಕ್ಕೆ ನಾನಾದೆ; ಬರಹ ಓದಿ, ಬುದ್ಧಿ ಕಲಿಯಲಿಕ್ಕೆ ನೀನಾದೆ. ಕಲ್ಲು ಬರಹ ಓದು” ಎಂದನು.
ಚೆನ್ನಯನು ಮೊಳಕಾಲು ಊರಿ, ಗಡಿಕಲ್ಲಿನ ಬರಹವನ್ನು ಓದಿ ಹೇಳಿದನು.
ಕೋಟಿಯು “ಹೌದು, ಚೆನ್ನಯ ನೀನು ಓದಿದಂತೆ ಎಲ್ಲವೂ ಈಗ ನಡೆಯುತ್ತದೆ. ಮುಂಚಿನ ಕಾಲದಲ್ಲಿ ಎಣ್ಮೂರು ಬಲವಾಗಿತ್ತು, ಪಂಜದ ಹಣಕಾಸೆಲ್ಲಾ ಎಣ್ಮೂರಿಗೆ ಹೋಗುತಿತ್ತು. ಈಗಿನ ಕಾಲದಲ್ಲಿ ಎಣ್ಮೂರು ಪಂಜದವರು ಜಗಿದು ಬಿಟ್ಟ ಕಬ್ಬಿನ ಸಿವುಡಿಯಂತಾಗಿದೆ. ಇಲ್ಲದಿದ್ದರೆ ಕಾಡಿನ ಆಚೆಗೆ ನೆಟ್ಟಿದ್ದ ಈ ಗಡಿಕಲ್ಲು ಈಚೆಗೆ ಬಂದು ಬೀಳುತ್ತಿತ್ತೇ” ಎಂದನು.
ಅದಕ್ಕೆ ಚೆನ್ನಯನು- “ಅದು ಮೊದಲಿದ್ದಲ್ಲೇ ಏಕೆ ಇರಬಾರದು?” ಎಂದು ಹೇಳಿ, ತನ್ನ ಎರಡು ಕೈಗಳಿಂದ ಅಲುಗಾಡಿಸಿ, ನಾಲ್ವರು ಹೊರಲಾರದಷ್ಟು ತೂಕವಾದ ಆ ಗಡಿಕಲ್ಲಿಗೆ ಬೆನ್ನು ಕೊಟ್ಟು, ಅದನ್ನು ಒಯ್ಯುತ್ತಿದ್ದನು'
ಅಷ್ಟರಲ್ಲಿ ಎಣ್ಮೂರಿಂದ ಪಂಜಕ್ಕಾಗಿ ನಾಲ್ಕು ಮಂದಿ ಆಳುಗಳೊಡನೆ ಆ ದಾರಿಯಾಗಿ ಹೋಗುತ್ತಿದ್ದ ಕಿನ್ನಿ ಚೆನ್ನಯನು ಕೋಟಿಯ ತಮ್ಮನ ಕೆಲಸವನ್ನು ಕಂಡು, ಅವರಿಬ್ಬರನ್ನು ಆಶ್ಚರ್ಯದಿಂದ ದೃಷ್ಟಿಸುತ್ತ ಅಲ್ಲಿಯೇ ನಿಂತುಬಿಟ್ಟನು. ಅವನ ಆಳುಗಳು ಅವನ ಹಿಂದೆಯೇ ತಡೆದರು.
ಕೋಟೆಯು ಗಡಿಯ ಕಲ್ಲನ್ನು ಹೊತ್ತು ಕೊಂಡು ಹೋಗುವ ಚೆನ್ನಯನೊಡನೆ “ತಮ್ಮಾ, ಅಳುಕಬೇಡ, ತುಳುಕಬೇಡ ” ಎಂದು ಸೂಚಿಸಿದನು,
ಕಿನ್ನಿಚೆನ್ನಯನು ಕೋಟೆಯೊಡನೆ “ಆತನು ನಿನ್ನ ತಮ್ಮನೊ ? ಗಡಿಕಲ್ಲನ್ನು ಅವನು ಏತಕ್ಕೆ ಕಿತ್ತು ಬಿಟ್ಟನು? ” ಎಂದು ಕೇಳಿದನು.
ಆ ಮಾತಿಗೆ ಕೋಟಿಯು ತನ್ನ ಕೈ ಬೆರಳಿನಿಂದ ಆ ಕಾಡಿನ ಆಚೆ ಕಡೆಯ ಗಡಿಯನ್ನು ತೋರಿಸಿ, “ಆಯ್ಯಾ ಈ ಗಡಿಕಲ್ಲಿನ ಪೂರ್ವಸ್ಥಳವು ಕಾಡಿನ ಆಚೆಗಿದೆ. ನಾವು ಕಣ್ಣಾರೆ ಕಂಡಿದ್ದೇವೆ. ಪಂಜಕ್ಕೆ ಬಲವು ಬರುತ್ತಲೇ ಈ ಕಲ್ಲು ಅಲ್ಲಿಂದ ಇಲ್ಲಿ ಹಾರಬೇಕೇ ? ಎಂದು ಹೇಳಿದನು.
ಇಷ್ಟರೊಳಗೆ ಚೆನ್ನಯನು ಕಲ್ಲನ್ನು ಮೊದಲಿದ್ದಲ್ಲಿ ನಿಲ್ಲಿಸಿ ಜಾಗ್ರತೆಯಾಗಿ ಬಂದು, “ಮತ್ತು ಈ ಕಲ್ಲು ಎಣ್ಮೂರಿನ ಜಾಗವನ್ನು ಕಿತ್ತು ತೆಗೆಯಬೇಕೇ ? ಮುಂಚಿನ ರೀತಿರಿವಾಜು ಈಗಲೂ ನಡೆಯಲಿ!, ಎಂದು ಮುಗಿಸಿದನು.
ಅವರಿಬ್ಬರ ನಿಲುವು ಚೆಲುವುಗಳಿಂದ ಬೆರಗಾಗಿ, ಅವರ ನಡೆನುಡಿಗಳಿಂದ ಮರುಳಾಗಿ, ಮಾತಾಡುವುದಕ್ಕೆ ನಾಲಗೆ ಬಾರದೆ ದುರದುರನೆ ಅವರ ಮುಖವನ್ನೇ ನೋಡುತ್ತಿದ್ದ ಕಿನ್ನಿಚೆನ್ನಯನು ಅರೆಗಳಿಗೆಯ ಮೇಲೆ ಸ್ವಲ್ಪ ಧೈರ್ಯಗೊಂಡು, “ಬುದ್ದಿ, ತಮ್ಮನ್ನು ನೋಡಿದರೆ ತಾವು ಯಾರೋ ಮೇಲಿಂದ ಭೂಮಿಗೆ ಬಂದ ಜನಗಳ ಹಾಗೆ ಕಾಣುತ್ತದೆ. ಆದರೆ ತಾವು ಯಾರು ಎಂದು ತಮ್ಮೊಂದಿಗೆ ಕೇಳುವುದಕ್ಕೆ ನಾಲಗೆಯು ಹೆದರಿ ತರತರಿಸುತ್ತದೆ- ನಿಜವಾಗಿಯೂ ತಾವು ಯಾರು ಎಂದು ಅಪ್ಪಣೆಯಾಗಲಿ” ಎಂದು ಕೈಮುಗಿದು ಕೇಳಿದನು.
ಚೆನ್ನಯನು ಕತ್ತಿಯ ಹಿಡಿಗೆ ಕೈಹಾಕಿದನು. ಕೋಟಿಯು ಆಯ್ಯಾ ಕಳ್ಳು ಕುಡಿದು ಮೈ ಹಾಳು ಮಾಡಬಾರದು; ಸುಳ್ಳು ನುಡಿದು ಬಾಯಿ ಹೊಲಸು ಮಾಡಬಾರದು. ನಾವು ಅವಳಿಜವಳಿ, ನಾನು ಕೋಟಿ-- ಅಣ್ಣ. ಇವನು ಚೆನ್ನಯ-ತಮ್ಮ” ಎಂದು ಗಂಭೀರತೆಯಿಂದ ಹೇಳಿದನು.
ತಕ್ಷಣವೇ ಆ ಐವರು ಹಿಂದಕ್ಕೆ ಸರಿದು, ಬಾಯಲ್ಲಿ ಮಾತಿಲ್ಲದವರಾಗಿ, ಅಲ್ಲಿಯೇ ಕೈ ಕಟ್ಟಿ ನಿಂತುಕೊಂಡರು. ಅನಂತರ ಕಿನ್ನಿಚೆನ್ನಯನು “ಬುದ್ದಿ, ಹುಡುಕಿದರೆ ದೊರೆಯದ ಮದ್ದು ಬಳ್ಳಿ ಕಾಲಿಗೆ ತೊಡರಿದಂತಾಯಿತು; ಕಣ್ಣಿಗೆ ಕಾಣದ ಚಿನ್ನದ ಕೊಪ್ಪರಿಗೆ ಕೈಯಲ್ಲಿ ಬಂದು ಕುಳಿತಂತಾಯಿತು; ತಮ್ಮಿಬ್ಬರನ್ನು ನೋಡಬೇಕೆಂದು ಹೊರಟಿದ್ದ ನಮಗೆ ಇಲ್ಲಿಯೇ ತಮ್ಮ ದರ್ಶನವಾಯಿತು” ಎಂದು ಬಹಳ ವಿನಯದಿಂದ ಹೇಳಿಕೊಂಡನು.
ಕೋಟಿಯು “ನೀವು ಯಾರು ಎಂದು ವಿಚಾರಿಸಿದನು.
ಉತ್ತರ-“ಬುದ್ಧಿ, ತಮಗೆ ಕೇಮರಬಲ್ಲಾಳನಲ್ಲಿ ಆದ ಮರೆಮೋಸವನ್ನು ಕೇಳಿ, ತಮ್ಮನ್ನು ಸಂಧಿ ಮಧ್ಯಸ್ಥಿಕೆಯಿಂದ ಕರೆದುಕೊಂಡು ಬರಲು ಎಣ್ಮೂರು ಬಲ್ಲಾಳನಿಂದ ಆಜ್ಞಾಪಿಸಲ್ಪಟ್ಟ ಜನಗಳು ನಾವು. ತಮ್ಮ ಸಮಾಚಾರವನ್ನು ಮೊದಲೇ ಕೇಳಿದ್ದೇವೆ.”
ಪ್ರಶ್ನೆ- “ನಮ್ಮ ಸಂಗತಿಯನ್ನು ಯಾರು ಹೇಳಿದರು ?"
ಉತ್ತರ- “ತಮ್ಮ ಸಾಕಣೆ ತಾಯಿ ಸಾಯಿನ ಬೈದಿತಿ »
ಪ್ರಶ್ನೆ - “ ಅವಳು ಪಡುಮಲೆಯಲ್ಲಿ ಇದ್ದಾಳೆ. ಅವಳಿಂದ ಗೊತ್ತಾಗಲು ಸಾಧ್ಯವಿಲ್ಲವಷ್ಟೆ!"
ಉತ್ತರ- “ಸಾಯಿನ ಬೈದಿತಿಯು ಎಣ್ಮೂರನ್ನು ಸೇರಿಕೊಂಡು ಬಹು ಕಾಲವಾಯಿತು, ಸಾಯುವ ಮುಂಚೆ ಅವಳು ನಿಮ್ಮನ್ನು ಒಂದು ಸಲ ಕಣ್ಣ ತುಂಬ ನೋಡಬೇಕೆಂದು ಹಂಬಲಿಸುತ್ತಾಳೆ, ಬುದಿ." ಪ್ರಶ್ನೆ – “ಅವಳು ಎಲ್ಲಿರುವಳು?”
ಉತ್ತರ- “ಅಯ್ಯನೂರು ಬೈಲಿನ ತಿಮ್ಮಣ್ಣ ಬೈದ್ಯನಲ್ಲಿ”
ಪ್ರಶ್ನೆ – “ಅವಳು ಆರೋಗ್ಯದಲ್ಲಿ ಇದ್ದಾಳೇ ?
ಉತ್ತರ- “ಮೂರು ದಿವಸಗಳ ಹಿಂದೆ ಅವಳ ಜೀವದಾಸ ಬಿಟ್ಟು ಬಾಯಿಗೆ ಹಾಲೆರೆದಿದ್ದರು, ನಿನ್ನೆ ಮೊನ್ನೆಯ ಸ್ಥಿತಿ ನನಗೆ ಗೊತ್ತಿಲ್ಲ, ಬುದ್ಧಿ !”
ಇಷ್ಟು ಮಾತುಕಥೆಯಾದನಂತರ ಕೋಟಿಚೆನ್ನಯರು ಬಂದವರ ಜತೆಯಲ್ಲಿ ಹೊರಟು ಸಂಜೆಗೆ ಮುಂಚಿತವಾಗಿ ಎಣ್ಮೂರಿಗೆ ಬಂದು, ತಿಮ್ಮಣ್ಣ ಬೈದ್ಯನ ಮನೆಯೊಳಕ್ಕೆ ಹೋದರು.
ಮನೆಯ ಚಾವಡಿಯ ಮೇಲೆ ಒಂದು ಹರಳೆಣ್ಣೆಯ ದೀಪವು ಮಿಣಮಿಣನೆ ಉರಿಯುತ್ತಲಿತ್ತು, ಅದರ ಒತ್ತಿನಲ್ಲಿ ಒಂದು ಕೋಣೆಯೊಳಗೆ ಸುಮಾರು ೬೦ ವರ್ಷ ವಯಸ್ಸು ದಾಟಿದ ಹೆಂಗಸೊಬ್ಬಳು ಒಂದು ಚಾಪೆಯ ಮೇಲೆ ಮಲಗಿದ್ದಳು, ಅವಳ ಮೈಯೆಲ್ಲಾ ಜ್ವರದಿಂದ ಬೆಂದು, ಕೆಮ್ಮಿನಿಂದ ಜಜ್ಜಿ ಹೋಗಿ, ಗರಿಯಂತೆ ಹಗುರವಾಗಿತ್ತು, ಕಿನ್ನಿಚೆನ್ನಯನು ಆ ಚಾಪೆಯ ಹತ್ತಿರ ಬಂದು ಕುಳಿತುಕೊಂಡು, “ಅಮ್ಮಾ, ಈ ಹೊತ್ತು ಹೇಗಿದೆ? ನಿನ್ನ ಮಕ್ಕಳು ಕೋಟಿಚೆನ್ನಯರು ಬಂದಿದ್ದಾರೆ, ನೋಡು” ಎಂದು ಹೇಳಿದನು.
ಆ ಎರಡು ಹೆಸರುಗಳನ್ನು ಕೇಳುತ್ತಲೇ ಅವಳ ಮುಚ್ಚಿದ ಕಣ್ಣು ಕೊಂಚ ತೆರೆಯಿತು; ಬಿಗಿದ ತುಟಿ ಅಲ್ಲಾಡಿತು, “ಓ ನನ್ನ ಬಾಲ” ಮಾತುಗಳು ಅಸ್ಪಷ್ಟವಾಗಿ ಬಾಯಿಂದ ಹೊರಟುವು.
ಆಗ ಕೋಟಿಯು ಮುದುಕಿಯ ತಲೆಯನ್ನು ತನ್ನ ಎಡ ತೊಡೆಯ ಮೇಲೆ ಇಟ್ಟು ಕುಳಿತುಕೊಂಡನು; ಚೆನ್ನಯನು ಅವಳ ಕಾಲುಗಳನ್ನು ಒತ್ತಲು ತೊಡಗಿದನು.
ಚೆನ್ನಯನು “ಅಮ್ಮಾ, ಸಾಯಿನ ಬೈದ್ಯರು ಎಲ್ಲಿದ್ದಾರೆ ?” ಎಂದು ಕೇಳಿದನು.
ಅದಕ್ಕೆ ಕೋಟೆಯು “ಮಾತಾಡಿಸಬೇಡ; ಮಾತಾಡಿದರೆ ದಣುವಾಗುತ್ತದೆ” ಎಂದು ತಮ್ಮನಿಗೆ ಸೂಚಿಸಿದನು. ಸಾಯನ ಬೈದಿತಿಯು ಬಹಳ ಪ್ರಯತ್ನ ಪಟ್ಟು, “ಮಕ್ಕಳೇ ! ನನ್ನ ಕಡೆಗಾಲಕ್ಕೆ ನನಗೆ ಒದಗಿದಿರಿ! ಜಯಸಿರಿ ನಿಮ್ಮ ಭುಜದಲ್ಲಿ ನೆಲಸಲಿ ! ನಿಮ್ಮ ಹೆಸರು ನಮ್ಮ ರಾಜ್ಯದಲ್ಲಿ ಉಳಿಯಲಿ !” ಎಂದು ಹೇಳಿ ಬಾಯಿ ತೆರೆದಳು.
ಅಲ್ಲಿ ಇದ್ದವರೆಲ್ಲರು ಅವಳ ಬಾಯಿಗೆ ಒಂದೊಂದು ತಳುಕು ಹಾಲು ಎರೆದರು. ಕೊನೆಗೆ ಕೋಟಿ ಚೆನ್ನಯರು ತುಳಸಿ ಎಲೆಯನ್ನೂ ಗಂಗೋದಕವನ್ನೂ ಅವಳ ಬಾಯಲ್ಲಿ ಇಟ್ಟು, ಅವಳಿಗೆ ನಮಸ್ಕರಿಸಿದರು. ಬೈದಿತಿಯು ಲೋಕಯಾತ್ರೆಯನ್ನು ಮುಗಿಸಿದಳು, ಅನಂತರ ಜಾತಿವಿಧಿಗೆ ಆನುಸಾರವಾಗಿ ನಡೆಯ ತಕ್ಕ ಸಾವುಸೂತಕಗಳು ನಡೆದುವು.
ಇದಾದ ಕೆಲವು ದಿವಸಗಳ ತರುವಾಯ ಕಿನ್ನಿಚೆನ್ನಯನು ಎಣ್ಮೂರು ಬಲ್ಲಾಳನ ಓಲಗಕ್ಕೆ ಹೋದನು. ಬಲ್ಲಾಳನು ಅವನನ್ನು ಕಂಡು “ಬಾ, ಇಲ್ಲೇ ಮಣೆ ಇದೆ. ನಿನ್ನನ್ನು ಕಾಣದೆ ಹಲವು ದಿನಗಳಾದುವು, ಅಲ್ಲವೆ ?” ಎಂದನು.
ಅದಕ್ಕೆ ಕಿನ್ನಿಚೆನ್ನಯನು “ಹೌದು, ಬುದ್ದಿ, ಕೋಟಿಚೆನ್ನಯರ ಸಾಕಣೆ ತಾಯಿಯು ತೀರಿ ಹೋದುದರಿಂದ, ಅವರನ್ನು ತಮ್ಮ ದರ್ಶನಕ್ಕೆ ಕರೆದುಕೊಂಡು ಬರಲು ಇದುವರೆಗೆ ಸಾಧ್ಯವಾಗಲಿಲ್ಲ” ಎಂದನು,
ಬಲ್ಲಾಳನು “ಹಾಗಾದರೆ, ನಾಳೆ ಮಧ್ಯಾಹ್ನದ ಓಲಗಕ್ಕೆ ಅವರನ್ನು ಕರೆದುಕೊಂಡು ಬಾ”ಎಂದು ಹೇಳಿ, ಅವರಿಬ್ಬರು ಹೇಗೆ ಇದ್ದಾರೆ? ಎಂದು ಕೇಳಿದನು,
ಕಿನ್ನಿಚೆನ್ನಯನು “ನಾನು ಏನು ಎನ್ನಲಿ, ಬುದ್ದಿ? ಕಣ್ಣಿಗೆ ಚೆಲುವರು, ಜನರಿಗೆ ಮರುಳರು ಜನಿಸಿದವರಲ್ಲಿ ಇಲ್ಲ, ಇನ್ನು ಜನಿಸಲಿಕ್ಕಿಲ್ಲ, ಅವರಿದ್ದ ರಾಜ್ಯದಲ್ಲಿ ಒಂದು ಊರು ಉಳಿಸಬಹುದು, ಒಂದು ಊರು ಅಳಿಸಬಹುದು” ಎಂದು ಅವರನ್ನು ಕೊಂಡಾಡಿದನು,
“ಹಾಗಾದರೆ ಅವರನ್ನು ನಾಳೆ ನಡುಹಗಲ ಓಲಗಕ್ಕೆ ಕರೆದುಕೊಂಡು ಬಾ” ಎಂದು ಹೇಳಿ, ಬಲ್ಲಾಳನು ಒಳಕ್ಕೆ ಹೋದನು.
ಕಿನ್ನಿಚೆನ್ನಯನು ಬೀಡಿನಿಂದ ಇಳಿದು ಕೋಟಿಚೆನ್ನಯರಿದ್ದಲ್ಲಿಗೆ ಹೋಗಿ, ಮರುದಿನ ಬಲ್ಲಾಳರ ಓಲಗಕ್ಕೆ ಹೋಗುವುದಾಗಿ ನಿಶ್ಚಯ ಮಾಡಿದನು, ಎಣ್ಮೂರಿನ ದೇವಬಲ್ಲಾಳನು ಪಡುಮಲೆಯ ಪೆರುಮಾಳ ಬಲ್ಲಾಳನಷ್ಟು ರಣಶೂರನೂ ಅಲ್ಲ, ಪಂಜದ ಕೇಮರ ಬಲ್ಲಾಳನಷ್ಟು ರಣಭೀರುವೂ ಅಲ್ಲ , ಆತನು ಪೆರುಮಾಳನಿಗಿಂತ ಸಾಧುವಾಗಿದ್ದನು, ಕೇಮರನಿಗಿಂತ ಬುದ್ದಿವಂತನಾಗಿದ್ದನು, ಈ ಮೂವರಲ್ಲಿ ಅತ್ಯಧಿಕ ಧರ್ಮಬುದ್ದಿಯು ಇವನಲ್ಲಿ ಇತ್ತು, ಆತನು ಅಧರ್ಮ, ದಾರಿದ್ರ್ಯ, ರೋಗ, ಅಂತಃಕಲಹ ಇವೇ ಒಂದು ರಾಜ್ಯದ ತಿರುಳನ್ನು ತಿನ್ನುವ ಹುಳುಗಳೆಂದು ಆಗಾಗ ಹೇಳುತಿದ್ದನು. ಆತನ ಹೆಸರು ತುಳುದೇಶದ ಚೌಟ ಬಂಗರು ಮನೆತನಗಳಲ್ಲಿ ಮಾತ್ರವಲ್ಲ, ಇಕ್ಕೇರಿಯ ಅರಮನೆಯ ವರೆಗೆ ಹೋಗಿತ್ತು. ಎಂದಿನಿಂದ ಇಕ್ಕೇರಿಯವರು ಇವನ ಹೆಸರನ್ನು ಕೊಂಡಾಡಹತ್ತಿದರೋ ಅಂದಿನಿಂದ ಇವನ ನೆರೆಕರೆಯ ಬಲ್ಲಾಳರು ಇವನನ್ನು ಹಳಿದು, ಹೀಯಾಳಿಸಿ, ಹಗೆಮಾಡತೊಡಗಿದರು. ಹೀಗೆ ಹಗೆಮಾಡಿ ಇವನಿಗೆ ಹಾಳು ಬಗೆದವರಲ್ಲಿ ಕೇಮರ ಬಲ್ಲಾಳನೇ ಮೊದಲನೆಯವನು,
ಕೇಮರಬಲ್ಲಾಳನಿಗೆ ದೇವಬಲ್ಲಾಳನಲ್ಲಿದ್ದ ಹೊಟ್ಟೆಕಿಚ್ಚು ಆ ಚೆಂದುಗಿಡಿಯ ದುರಾಲೋಚನೆಯ ಗಾಳಿಯಿಂದ ಭುಗಿಲೆಂದು ಹೊತ್ತಿತು, ಅವನು ತನಗೆ ಪಂಜದ ಪಟ್ಟವಾದ ಕೆಲವು ವರ್ಷಗಳಲ್ಲಿಯೇ ದೇವಬಲ್ಲಾಳನ ಸೀಮೆಯ ಎಲ್ಲೆಯಲ್ಲಿದ್ದ ಜನಗಳನ್ನು ಕಾಡತೊಡಗಿದನು. ಕೇಮರಬಲ್ಲಾಳನ ಉದ್ಧಟತನದ ಮುಂದೆ ದೇವಬಲ್ಲಾಳನ ಸಂಧಿಸಾಮಗಳು ನಡೆಯಲಿಲ್ಲ. ಬರಬರುತ್ತಾ ದೇವಬಲ್ಲಾಳನ ಸೀಮೆಯು ಮುಂಜಾನೆಯ ನೆರಳಂತೆ ಗಿಡ್ಡವಾಗುತ್ತ ಬಂತು, ಕೇಮರಬಲ್ಲಾಳನ ಸೀಮೆಯು ಸಂಜೆಯ ನೆರಳಂತೆ ಉದ್ದವಾಗುತ್ತ ಹೋಯಿತು, ತನ್ನ ಕೈಯಿಂದ ಅನ್ಯಾಯವಾಗಿ ಕಿತ್ತು ಬಿಟ್ಟ ತನ್ನ ಸೀಮೆಯ ಭಾಗವನ್ನು ಪರಸಹಾಯದಿಂದಲಾದರೂ ವಶಮಾಡಿಕೊಳ್ಳಬೇಕೆಂದು ದೇವಬಲ್ಲಾಳನು ಸಮಯ ಕಾಯುತಿದ್ದನು. ಆ ಲೋಕೈಕ ವೀರರಾದ ಕೋಟಿಚೆನ್ನಯರ ಭುಜಬಲದಿಂದ ತನ್ನ ರಾಜ್ಯವು ಮರಳಿ ತಲೆ ಎತ್ತುವಂತೆ ಮಾಡಬೇಕೆಂದು ಬಗೆದು ಅವರನ್ನು ಸತ್ಕಾರಪೂರ್ವಕವಾಗಿ ಓಲಗದಲ್ಲಿ ಕಾಣುವುದಕ್ಕೆ ಆತನು ಎಲ್ಲವನ್ನು ಅಣಿ ಮಾಡಿದ್ದನು. ಮರುದಿನ ಮಧ್ಯಾಹ್ನದಲ್ಲಿ ಕೋಟಿ ಚೆನ್ನಯರು ಎಣ್ಮೂರಿನ ಕಿನ್ನಿಚೆನ್ನಯನನ್ನು ಅನುಸರಿಸಿ, ತಾಯಿಯ ಸಂಗಾತದ ಮಕ್ಕಳಂತೆಯೂ, ಹೇಟೆಯ ಮಗ್ಗುಲಲ್ಲಿನ ಕೋಳಿ ಮರಿಗಳಂತೆಯೂ, ಸೂಜಿಯ ಹಿಂದುಗಡೆಯ ನೂಲೆಳೆಗಳಂತೆಯೂ ಬೀಡಿಗೆ ಹೋದರು. ಎಣ್ಮೂರು ಬಲ್ಲಾಳನು ಅವರನ್ನು ಸಕಲ ಸಂಭ್ರಮದಿಂದ ಕಂಡು, ಓಲಗಶಾಲೆಗೆ ಕರೆದುಕೊಂಡು ಬಂದು, ಯೋಗಕ್ಷೇಮವನ್ನು ವಿಚಾರಿಸಿ, ಅವರ ಪೂರ್ವ ವೃತ್ತಾಂತವನ್ನು ಕೇಳಿ, ತನ್ನ ರಾಜ್ಯದಲ್ಲಿ ಅವರು ಸುಖವಾಗಿ ಸಹಸ್ರಕಾಲ ಇರಬೇಕೆಂಬದಾಗಿ ಸೂಚಿಸಿದನು.
ಆಗ ಕಿನ್ನಿಚೆನ್ನಯನು “ಬುದ್ದಿ, ನಮಗೆ ಬೇಕಾದವರು ಬೀಡಿನಿಂದ ದೂರವಾಗಿ ಇರಬಾರದಷ್ಟೆ. ಇಂಥ ಜಾಗವನ್ನೇ ಇವರಿಗೆ ಕೊಡಿಸಬೇಕೆಂಬುದಕ್ಕೆ ನನಗೆ ಅಪ್ಪಣೆಯಾಗಲಿ!”
ದೇವಬಲ್ಲಾಳನು “ಬಂಟರೇ, ನಿಮಗೆ ನಮ್ಮ ರಾಜ್ಯದಲ್ಲಿ ಯಾವ ಸ್ಥಳ ಬೇಕು? ಬಿಲ್ಲರ ನಟ್ಟಿಲ್ಲು ಆದೀತೇ?!” ಎಂದು ಕೇಳಿದನು.
ಕೋಟಿ- ಬುದ್ಧಿ, ಅದನ್ನು ಕೊಟ್ಟರೆ ಜಾತಿಗೆ ಜಾತಿ ಹಗೆ ಎಂಬಂತೆ ನಮ್ಮವರ ವಿರೋಧವೇ ನಮಗೆ ಬರಬಹುದು.”
ದೇವಬಲ್ಲಾಳ- ಒಕ್ಕಲಿಗನ ಗುತ್ತು ಬಾಳಿಕೆ ಕೊಟ್ಟರೆ-
ಕೋಟಿ – “ನಾಯಿಗೂ ಬೆಕ್ಕಿಗೂ ಇದ್ದ ವೈರದಂತೆ”
ದೇವಬಲ್ಲಾಳ- “ಬ್ರಾಹ್ಮಣರ ಬೆರಂಪಳ್ಳಿ ಕೊಡುತ್ತೇನೆ, ಆಗದೋ?”
ಕೋಟಿ- “ಆಗಲಿಕ್ಕೆ ಆಗಬಹುದು,
ಅದನ್ನು ತೆಗೆದುಕೊಂಡರೆ ನಾಗರ ಹಾವಿಗೂ ಕನ್ನಡಿ ಹಾವಿಗೂ ಒಂದೇ ಬಿಲದಲ್ಲಿ ಇಟ್ಟಂತಾದೀತು.”
ದೇವ ಬಲ್ಲಾಳ– “ಹಾಗಾದರೆ, ನೀವೇ ಒಂದನ್ನು ಆಯ್ದು ಕೊಳ್ಳಿ”
ತತ್ಕ್ಷಣವೇ ಚೆನ್ನಯನು “ಅಣ್ಣಾ, ಪಡುಮಲೆಯ ಜೋಯಿಸರು ಹೇಳಿದ್ದು ನನಗೆ ನೆನಪಿದೆ. ಆ ಐನೂರು ಬೈಲು ಇಲ್ಲೇ ಅಲ್ಲವೇ ? ” ಎಂದನು.
ಕೋಟಿಯು ಆ ಮಾತನ್ನು ಕೇಳಿ “ಬುದ್ಧಿ, ಐನೂರು ಗುತ್ತನ್ನು ಕರುಣಿಸಿರಿ” ಎಂದನು. ಅದಕ್ಕೆ ದೇವ ಬಲ್ಲಾಳನು ಅದು ಒಕ್ಕಲಿಲ್ಲದ ಗುತ್ತು, ಅಷ್ಟೇ ಅಲ್ಲ, ಆ ಗುತ್ತು ತನ್ನ ಸೇವೆಗೆ ಸೇರಿದ್ದೆಂದು ಪಂಜದ ಕೇಮರ ಬಲ್ಲಾಳನು ಸುಳ್ಳು ಸಾಧನೆ ಮಾಡಿ, ನಮ್ಮ ಹಳೆಯ ಗಡಿಕಲ್ಲುಗಳನ್ನು ಕಿತ್ತು ಹಾಕಿಸಿ, ಗುತ್ತಿನಲ್ಲಿ ಹೊಗೆ ಏಳುವುದಕ್ಕೆ ಬಿಡುವುದಿಲ್ಲ. ಇದು ನನಗೆ ಗೊತ್ತಿದ್ದು, ನಿಮ್ಮನ್ನು ಮೊದಲೇ ಜಗಳದ ಮಣೆಯ ಮೇಲೆ ಏತಕ್ಕೆ ಕೂರಿಸಬೇಕು?” ಎಂದು ಹೇಳಿದನು.
ಗಡಿಕಲ್ಲುಗಳನ್ನು ಕಿತ್ತ ಮಾತು ಬರುತ್ತಲೆ ಕೋಟಿ ಚೆನ್ನಯರು ಒಬ್ಬರು ಮತ್ತೊಬ್ಬರ ಮುಖವನ್ನು ನೋಡಿದರು, ಚೆನ್ನಯನು “ಬುದ್ಧಿ, ನಾವು ನಿಮ್ಮ ರಾಜ್ಯದಲ್ಲಿ ಕಾಲಿಡುವಾಗಲೇ ಆ ಜಗಳದ ಮಣೆಯನ್ನು ಮೆಟ್ಟಿ ಬಂದಿದ್ದೇವೆ, ನಾನು ಆ ಗಡಿಕಲ್ಲನ್ನು ಮುಂಚಿನ ಸ್ಥಳದಲ್ಲಿ ಹೊತ್ತು ಹಾಕಿ, ನಿಮ್ಮ ರಾಜ್ಯಕ್ಕೆ ೫೦ ಮಾರು ಜಾಗವನ್ನು ಕೂಡಿಸಿದ್ದೇನೆ, ಅಯ್ಯ ನೂರು ಗುತ್ತನ್ನು ನಮಗೆ ದಯಪಾಲಿಸಿ ಬಿಡಿ, ಜಗಳಕ್ಕೆ ಬರುವವರು ಬರಲಿ, ನಾವು ನೋಡಿಕೊಳ್ಳುತ್ತೇವೆ” ಎಂದನು.
ದೇವ ಬಲ್ಲಾಳನು “ಹಾಗಾದರೆ ಇನ್ನು ಜಗಳ ತಪ್ಪದು” ಎಂದನು.
ಕೋಟಿ “ಜಗವು ಇರುವಷ್ಟು ಕಾಲ ಜಗಳವು ಇದೆ, ಬುದ್ಧಿ” ಎಂದನು.
ದೇವ ಬಲ್ಲಾಳನು “ಆ ಗುತ್ತು ನಿಮಗೆ ಮೆಚ್ಚಿಗೆಯಾಗಿದ್ದರೆ ನನ್ನ ಅಡ್ಡಿ ಇಲ್ಲ, ಅದನ್ನು ನೀನು ಸಹಸ್ರ ಕಾಲಾವಧಿ ಅನುಭವಿಸಿಕೊಂಡು ಬಂದು, ಬೀಡಿನ ಮರ್ಯಾದೆಯನ್ನು ಕಾಪಾಡುವಂಥವರಾಗಬೇಕು” ಎಂದು ಹೇಳಿ, ಕೈವೀಳ್ಯವನ್ನು ಕೊಟ್ಟನು,
ಅದನ್ನು ಸ್ವೀಕರಿಸಿ ಕೋಟಿ ಚೆನ್ನಯರು ಎಣ್ಮೂರು ಬಲ್ಲಾಳನ ವಶವರ್ತಿಯಾಗಿದ್ದು, ಅಯ್ಯನೂರು ಗುತ್ತನ್ನು ಮಾಡಿಕೊಂಡು ಸುಖವಾಗಿದ್ದರು,
ಕೋಟಿ ಚೆನ್ನಯರನ್ನು ಹಿಡಿಯಲಿಕ್ಕೆ ಚೆಂದುಗಿಡಿಯೂ ಕೇಮರನೂ ಮಾಡಿದ ಮೋಸ, ಅವರು ಸೆರೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ, ಅವರನ್ನು ಎಣ್ಮೂರಲ್ಲಿ ಕಂಡ ಸಂಗತಿ, ಅಲ್ಲಿ ಅವರಿಗೆ ದೊರೆತ ಆಶ್ರಯ, ಆವರ ಸಹಾಯದಿಂದ ಎಣ್ಮೂರು ಬಲ್ಲಾಳನು ತನ್ನ ರಾಜ್ಯ ವಿಸ್ತಾರಕ್ಕಾಗಿ ಮಾಡುವ ಹಂಚಿಕೆ- ಇವುಗಳ ಸುದ್ದಿಯು ಪಂಜ ಸೀಮೆಯಲ್ಲಿಯೂ ಪಡುಮಲೆ ಸೀಮೆಯಲ್ಲಿ ಹಬ್ಬುವುದಕ್ಕೆ ಬಹು ಕಾಲ ಹೋಗಲಿಲ್ಲ. ಒಬ್ಬ ಬಲ್ಲಾಳನು ಸಿಟ್ಟಿನಿಂದ ತನ್ನ ಊರಲ್ಲಿದ್ದ ಕಿನ್ನಿದಾರುವನ್ನೂ ಅವಳ ಗಂಡನನ್ನೂ ಬಹಳವಾಗಿ ಕಾಡಿದನು; ಇನ್ನೊಬ್ಬ ಬಲ್ಲಾಳನು ತನ್ನ ಬೀಡಿನಲ್ಲಿದ್ದ ಮುದುಕ ಸಾಯಿನ ಬೈದ್ಯನನ್ನು ಉಪದ್ರವಿಸಿದನು. ಇಬ್ಬರ ಕೋಪವು ಇಷ್ಟರಲ್ಲೇ ಮುಗಿಯಲಿಲ್ಲ. ಅವರು ಕೋಟಿಚೆನ್ನಯರನ್ನು ಕಂಡಲ್ಲಿ ಹಿಡಿದು ಕಡಿದು ಹಾಕ ಬೇಕೆಂಬದಾಗಿ ಅಪ್ಪಣೆ ಕೊಟ್ಟು, ಆಗಾಗ ತಮ್ಮ ಕಡೆಯ ಜನಗಳನ್ನು ಎಣ್ಮೂರಿಗೆ ಗುಟ್ಟಿನಿಂದ ಕಳುಹಿಸಿದರು; ವಿಷದ ಹಾಲಿನಿಂದ ಅವರನ್ನು ಕೊಲ್ಲಬೇಕೆಂದು ಗೊಲ್ಲರ ಮೂಲಕವಾಗಿ ದುರಾಲೋಚನೆ ನಡಿಸಿದರು; ಅವರ ಬಿತ್ತವುಳಿಯದಂತೆ ಮಾಡಬೇಕೆಂದು ಕಣಿಯರಿಂದ ಬಗೆಬಗೆಯ ಮದ್ದು ಮಾಟಗಳನ್ನು ಮಾಡಿಸಿದರು, ಏನು ಮಾಡಿದರೂ ಕೋಟಿಚೆನ್ನಯರ ತಲೆಕೂದಲು ಉದುರಲಿಲ್ಲ.
ಜೋಡಿ ಹುಲಿಗಳ ಬಾಯಿಂದ ತಪ್ಪಿಸಿಕೊಂಡು ಸುರಕ್ಷಿತವಾದ ಹಸುರು ಹುಲ್ಲುಗಾವಲಿಗೆ ಹೋಗಿ, ಕುಣಿದು ಮೇಯುವ ಹುಲ್ಲೆಯ ಮರಿಗಳನ್ನು ಕಂಡು ಆರ್ಭಟಿಸುವ ದುಷ್ಟ ವ್ಯಾಘ್ರಗಳಂತೆ ಆ ಇಬ್ಬರು ಬಲ್ಲಾಳರು ಚೆನ್ನಕೋಟಿಯರನ್ನು ಹುಟ್ಟಡಗಿಸಬೇಕೆಂದು ಮನಸ್ಸಿನಲ್ಲಿ ದೃಢಮಾಡಿಕೊಂಡರು, ಈ ಮಧ್ಯದಲ್ಲಿ ಚೆನ್ನಯನು ಗಡಿಕಲ್ಲುಗಳನ್ನು ಒಂದು ಕಡೆಯಿಂದ ಕಿತ್ತು ಇನ್ನೊಂದು ಕಡೆಯಲ್ಲಿ ನೆಟ್ಟಿದ್ದು, ಆಯ್ಯನೂರು ಗುತ್ತನ್ನು ವಿಸ್ತರಿಸಿದ್ದು, ಅವರಿಬ್ಬರು ಪಂಜಸೀಮೆಗೆ ಸೇರಿದ್ದ ಬಂಟಮಲೆಯಲ್ಲಿ ಹೇಳದೆ ಕೇಳದೆ ಆಗಾಗ ಬೇಟೆಯಾಡಿದ್ದು, ಸರ್ವರ ಹೃದಯದಲ್ಲಿ ಅವರಿಂದ ಒಂದು ಬಗೆಯ ಭೀತಿ ಹುಟ್ಟಿದ್ದು - ಇವುಗಳ ಸಮಾಚಾರವನ್ನು ಕೇಳಿ, ಪಡುಮಲೆಯ ಪೆರುಮಾಳನೂ ಪಂಜದ ಕೇಮರನೂ ಅವರನ್ನು ನೆಲಸಮಮಾಡುವ ಆಲೋಚನೆಯಿಂದ ಜನಗಳನ್ನು ಕೂಡಿಸುತ್ತ, ಮುಸ್ತೈದೆಯನ್ನು ಒದಗಿಸುತ್ತ, ತಕ್ಕ ವೇಳೆಯನ್ನು ಎದುರು ನೋಡುತ್ತ ಇದ್ದರು,
ಬೇಡುವ ಬಡವನು ಕೊಡುಗೈಯಾಗಿರುವ ದೊರೆಗೆ ಬೇಕಾದವನಾಗುತ್ತಲೇ ಚಾಡಿಯ ಬಾಯಿ ತುರಿಸಹತ್ತುತ್ತದೆ, ಕೋಟಿಚೆನ್ನಯರು ಎಣ್ಮೂರು ಬಲ್ಲಾಳನ ಪ್ರೀತಿಗೆ ಪಾತ್ರರಾಗಿ ಅವನ ಬೀಡಿನಲ್ಲಿ ಪ್ರಬಲರಾದುದನ್ನು ಕಂಡು ಚಾಡಿಗಾರರು ಬಲ್ಲಾಳನನ್ನು ಅವರ ಮೇಲೆ ತಿರುಗಿಸುವುದಕ್ಕೆ ತೊಡಗಿದರು. ಅರಸರ ಕಿವಿಗೆ ತರಲೆ ಹಾಳು, ಬಾಗಿಲ ಕಿವಿಗೆ ಒರಲೆ ಹಾಳು' ಎಂಬ ಗಾದೆಗೆ ಸರಿಯಾಗಿ, ಬಲ್ಲಾಳನು ಆ ಚಾಡಿಗಾರರ ಮಾತಿಗೆ ಕಿವಿಗೊಡ ಹತ್ತಿದನು. ಅವನು ಕಿವಿಗೊಡುವಷ್ಟಕ್ಕೆ ಚಾಡಿ ಹೆಚ್ಚುತ್ತ ಹೋಯಿತು,
ಈ ಚಾಡಿಗಾರರಲ್ಲಿ ಒಬ್ಬನು ಒಂದು ದಿನ ಬಲ್ಲಾಳನ ಹತ್ತಿರ ಯಾರೂ ಇಲ್ಲದ್ದನ್ನು ಕಂಡು, ಬುದ್ದಿ! ಮನೆಯಲ್ಲಿ ಬೇಸರವೆಂದು ಇಲ್ಲಿ ಬಂದೆ- ಇಲ್ಲಿಯೂ ನಮ್ಮ ಹೊಸ ಬಂಟರು ಹೇಳುವಂತೆ ಬೇಸರಿಕೆ” ಎಂದನು.
ಆಗ ಎಣ್ಯರು ಬಲ್ಲಾಳನು ಕಿವಿಗಳನ್ನು ಚೆನ್ನಾಗಿ ತೆರೆದು, “ಹೊಸ ಬಂಟರು ಏನೆನ್ನುತ್ತಾರೆ?” ಎಂದು ಕೇಳಿದನು.
“ನಮ್ಮ ಸೇವೆಗೆ ಹೊಸಬರಾದವರಿಗೆ ಇಲ್ಲಿ ಬೇಸರವಾಗುವುದೇನೋ ಸಹಜ” ಎಂದು ಚಾಡಿಗಾರನು ಮೇಲಿನ ಮೇಲೆ ಹೇಳಿದನು.
“ನೀನು ಅಳುಕಬೇಡ. ಎಲ್ಲವನ್ನೂ ಬಿಚ್ಚಿ ಹೇಳು” ಎಂದು ಬಲ್ಲಾಳನು ಹುಬ್ಬೆತ್ತಿ ಕೇಳಿದನು.
ಚಾಡಿಗಾರ-“ ಬುದ್ದಿ, ಇದು ಬಡ ರಾಜ್ಯವಂತೆ, ನೀವು ಬಡ ಬಲ್ಲಾಳರಂತೆ. ಹೀಗೆ ಕಲೆ ಹೇಳಿ ಹೊಸ ಬಂಟರು ಕುಲ ದೂಷಿಸುತ್ತಾರೆ, ಬುದ್ದಿ.”
ಬಲ್ಲಾಳನು ಇನ್ನು ಹೆಚ್ಚು ಕೇಳುವುದಕ್ಕೆ ಮನಸ್ಸಿಲ್ಲದೆ ಕೋಟಿ ಚೆನ್ನಯರನ್ನು ಕರೆತರಿಸಿ, ಚಾಡಿಗಾರನ ಇದಿರಿನಲ್ಲಿ ಅವರನ್ನು ವಿಚಾರಿಸಿದನು.
ಆಗ ಚೆನ್ನಯನು ಕೈಮುಗಿದು, “ಬುದ್ಧಿ! ಇದು ಯಾವುದೂ ನನ್ನ ಅಣ್ಣನಿಗೆ ಗೊತ್ತಿಲ್ಲ. ಮಾತಾಡಿದ್ದು ನಾನು. ನಾನು ನಿಮ್ಮ ಕುಲವನ್ನು ದೂಷಿಸಿಲ್ಲವೆಂದು ಖಂಡಿತವಾಗಿ ಹೇಳುವೆನು. ನನ್ನ ಮಾತುಗಳನ್ನು ನಾನೇ ಹೇಳಿಬಿಡುತ್ತೇನೆ, ಬುದ್ಧಿ! ಮೊನ್ನೆ ಸಂಕಲೆ ಕಡಿದು ಜನಗಳನ್ನು ಹರಹುತಿದ್ದ ಅರಮನೆಯ ಸೊಕ್ಕಾನೆಯನ್ನು ನಾವಿಬ್ಬರು ಹಿಡಿದು ತಂದು, ಲಾಯದಲ್ಲಿ ಕಟ್ಟಿದೆವಷ್ಟೆ. ಆ ದಿನ ನಮಗೆ ಹಿಡಿಯಲಾರದಷ್ಟು ಸಂತೋಷವಾಯಿತು. ಇಂಥ ಸಾಹಸವಿದ್ದರೆ ಉಂಡ ಅನ್ನ ನಮಗೆ ಅರಗುತ್ತದೆ. ನಾವು ಈ ರಾಜ್ಯಕ್ಕೆ ಬಂದು ಎರಡು ಮೂರು ವರುಷಗಳಾದರೂ, ಬಡವರಾದ ನಮ್ಮಿಂದ ಯಾವ ತರದ ಪೌರುಷವೂ ಬೀಡಿಗೆ ಆಗಲಿಲ್ಲ, ಹಂದಿಯ ನವಿರು, ಹುಲಿಯ ಉಗುರು, ಆನೆಯ ದಂತ ಇವನ್ನು ತಂದು ಕಾಣಿಕೆ ಕೊಡೋಣ ಎಂದರೆ ತುಪ್ಪೆ ಕಲ್ಲಿನ ಕಾಡಿನಲ್ಲಿ ಕಾಲಿಡಲು ನನಗೆ ಅಪ್ಪಣೆ ಇಲ್ಲ; ಕೊಳುಗುಳಕ್ಕೆ ಹೋಗಿ ಹಗೆಗಳನ್ನು ಚೆಂಡಾಡಿ ಅವರ ತಲೆಗಳನ್ನು ನಿಮ್ಮ ಪಾದಕ್ಕೆ ಒಪ್ಪಿಸೋಣ ಎಂದರೆ ನಮಗೆ ರಣವೀಳ್ಯವನ್ನು ಕೊಟ್ಟಿಲ್ಲ. ಹೀಗೆ ನಮಗೆ ಉಂಡ ಉಣಿಸು ಕುತ್ತವಾಗಿದೆ, ಕುಡಿದ ನೀರು ಪಿತ್ತವಾಗಿದೆ. ಉಟ್ಟ ಬಟ್ಟೆ ಕೊಳೆಯಲಿಲ್ಲ, ಹಿಡಿದ ಕತ್ತಿ ಮಾಸಲಿಲ್ಲ. ಈ ಮಾತು ದೂಷಣೆಯಾದರೆ ಈ ಕತ್ತಿ ಇದೆ, ನನ್ನ ಕೊರಳೂ ಇದೆ ” ಎಂದು ಹೇಳಿ ಬಲ್ಲಾಳನ ಮುಂದುಗಡೆ ಕತ್ತನ್ನು ಬಾಗಿಸಿ ನಿಂತನು.
ದೇವ ಬಲ್ಲಾಳನು ಚೆನ್ನಯನ ವಚನಗಳನ್ನು ಕೇಳಿ ತಟಸ್ಥನಾಗಿ “ಹೌದು ಬಂಟರೇ, ನಮ್ಮ ರಾಜ್ಯದಲ್ಲಿ ಬೇಟೆಗೀಟಿ, ಆಯನ ಆರಾಟ ಇರಬೇಕು, ಇವುಗಳ ಮೂಲಕ ಜನಗಳಲ್ಲಿ ಮೈಬಲವು ಬರುತ್ತದೆ; ಸಂಘಶಕ್ತಿಯು ಒಳೆಯುತ್ತದೆ. ಆದರೆ ತುಪ್ಪೆ ಕಲ್ಲು ಕಾಡಿನಲ್ಲಿ ಬೇಟೆಯಾಡಿದರೆ ನಾವು ನಂಬದವರನ್ನು ಕೊಳುಗುಳಕ್ಕೆ ಕೂಗಿ ಕರೆದಂತಾಗುವುದು. ಅದಕ್ಕಾಗಿಯೇ ಹಿಂದೆ ಸರಿಯುತ್ತೇವೆ, ಬಂಟರೇ” ಎಂದನು.
ಆಗ ಚೆನ್ನಯನು “ಬುದ್ಧಿ, ಕಾಡು ಮೃಗಗಳ ಬಾಧೆಯಿಂದ ಜನಗಳನ್ನು ತಪ್ಪಿಸುವುದು ನಮ್ಮ ಕಾರ್ಯ. ಆ ಕಾರ್ಯಸಾಧನೆಯಲ್ಲಿ ಯಾವ ತೊಂದರೆ ಬಂದರೂ ಹಿಮ್ಮೆಟ್ಟಲಾಗದು” ಎಂದನು.
“ಹಾಗಾದರೆ ತುಪ್ಪೆ ಕಲ್ಲಡವಿಯ ಬೇಟಿ ಆಗಲಿ ಎಂದು ಬಲ್ಲಾಳನು ಅಪ್ಪಣೆ ಕೊಡಿಸಿ, “ಚೆನ್ನಯ, ಈ ಚಾಡಿಗೆ ಚಾಡಿಗಾರನನ್ನು ಏನು ಮಾಡಬೇಕು? ಇವನಿಗೆ ತಕ್ಕ ಶಿಕ್ಷೆಯಾವುದು?” ಎಂದು ಕೇಳಿದನು.
ಆಗ ಚೆನ್ನಯನು “ಬುದ್ಧಿ ಅವನಲ್ಲಿ ನನ್ನ ಕತ್ತಿ ನನೆಯುವಷ್ಟು ರಕ್ತವಿಲ್ಲ, ಕೊಕ್ಕಿ ತಿನ್ನುವಷ್ಟು ಮಾಂಸವಿಲ್ಲ, ಅವನನ್ನು ಬಿಟ್ಟುಬಿಡಿ” ಎಂದನು.
ಮೇಲಿನ ಸಂಭಾಷಣೆಯಾದ ಕೆಲವು ದಿನಗಳಲ್ಲಿಯೇ ಓಲೆಗಳನ್ನು ಬರಿಸಿ: ಬೇಟೆಗೆ ಬೇಕಾದ ಸನ್ನಾಹಕ್ಕಾಗಿ ಕಡಲ ಬಳಿಯ ಬೊಕ್ಕಪಟ್ಟಣದಿಂದ ಬಗೆಬಗೆಯ ಬಲೆಗಳನ್ನು ತರಿಸಿದ್ದಾಯಿತು; ಗಟ್ಟದ ಮೇಲಿಂದ ನಾನಾ ಜಾತಿಯ ಬೇಟೆನಾಯಿಗಳನ್ನು ಒದಗಿಸಿಕೊಂಡದ್ದಾಯಿತು, ತರುವಾಯ ಒಂದು ದಿನ ಬೆಳಗ್ಗೆ ಜನಗಳ ಗುಂಪೊಂದು ಬಿಲ್ಲು ಬಾಣ ಗಳನ್ನೂ ಕತ್ತಿ ಈಟಿಗಳನ್ನೂ ಕೊಂಬುಕಹಳೆಗಳನ್ನೂ ಹಿಡಿದುಕೊಂಡು, ನಾಯಿಗಳ ಸಮೇತ ತುಪ್ಪೆ ಕಲ್ಲು ಕಾಡನ್ನು ನುಗ್ಗಿ ತು.
ಆ ಬೇಟೆಗಾರರು ಬಹಳ ಹೊತ್ತಿನ ತನಕ ಕಾಡು ಎಬ್ಬಿದರೂ ಬೂದುಗಣ್ಣಿನ ಮೊಲ, ಪಚ್ಚೆ ಕಾಲಿನ ಜಿಂಕೆ, ಕೊಬ್ಬಿದ ಹಂದಿ, ಕುಟುರುವ ಕುಡುಮುಲು ಹಕ್ಕಿ- ಯಾವುದೊಂದೂ ಏಳಲಿಲ್ಲ , ತರುವಾಯ ಅವರು ಬಲ್ಲೆ ಇದ್ದಲ್ಲಿ ಕಲ್ಲು, ಕಂಡಿ ಇದ್ದಲ್ಲಿ ಜನ, ಮೈದಾನು ಇದ್ದಲ್ಲಿ ನಾಯಿ- ಹೀಗೆ ಎಳ್ಳೆಸಿಕೊಂಡು ಕಾಡಿಗೆ ಮುತ್ತಿಗೆ ಹಾಕಿದರು. ಸುಮಾರು ಎರಡು ತಾಸುಗಳ ವರೆಗೆ ಸುಮ್ಮನೆ ಕಾದು ನಿಂತರು. ಯಾವುದೊಂದಾದರೂ ನೆಲದ ಮೇಲೆ ಓಡಿದಂತೆ, ಇಲ್ಲವೆ ಮರದ ಮೇಲೆ ಹರಿದಂತೆ, ಇಲ್ಲವೆ ಆಕಾಶದಲ್ಲಿ ಹಾರಿದಂತೆ ತೋರಲಿಲ್ಲ. ಅನಂತರ ಒಂದು ಕಡೆಯಲ್ಲಿ ನೆಲಹಿಡಿದು ಎಲೆಯವರೆಗೆ ಎಬ್ಬುವಾಗ ಆಳುದ್ದ ಕಪ್ಪು ತೋರಿತು. 'ಆನೆಗೆ ಕಿರಿದು, ಕುದುರೆಗೆ ಹಿರಿದು' ಎಂದು ಒಬ್ಬನು ಮರಗಳ ಹಿಂದಿನಿಂದ ಮತ್ತೊಬ್ಬನಿಗೆ ಕೈಸನ್ನೆ ಮಾಡಿದನು. ಒಡನೆ ಅದು ದಡಕ್ಕೆಂದು ಎದ್ದು, ಡುರುಂಕ್ಕಂದು ಕೂಗಿ, ಮುಸುಡು ಆಡಿಸಿದ್ದನ್ನು ಕಂಡು ಚೆನ್ನಯನು 'ಇದಿರಿಗೆ ಬಂದದ್ದು ಎಂಥಾದ್ದು, ಕೋಟಿ ?” ಎಂದು ಕೇಳಿದನು.
ಅಷ್ಟರಲ್ಲಿ ಆ ಕಾಡುಹಂದಿಯು ನವಿರುಗಳನ್ನು ನಿಗುರಿಸಿ, ಮಳೆಗಾಲದ ಗುಡುಗಿನಂತೆ ಮೊರೆಯುತ್ತ, ಮಿಂಚಿನಂತೆ ತನ್ನ ಕೋರೆ ಹಲ್ಲುಗಳನ್ನು ಜಳಪಿಸುತ್ತ ಗಾಳಿಯ ವೇಗದಿಂದ ಕೋಟಿಗೆ ಎದುರಾಗಿ ಬರುತಿತ್ತು. “ಓಡೋಣವೇ ಬಂಟರ ಮಾನದ ಮೇಲೆ ಬರುತ್ತದೆ, ನಿಲ್ಲೋಣವೇ ಪ್ರಾಣದ ಮೇಲೆ ಬರುತ್ತದೆ” – ಈ ಪ್ರಕಾರವಾಗಿ ಕೋಟಿಯ ಮನಸ್ಸು ತೂಗುತ್ತಲಿತ್ತು, ಅರೆನಿಮಿಷದಲ್ಲಿ ಅವನ ಬಲಗೈಯ ಬಾಣವು ಎಡಗೈಯ ಬಿಲ್ಲನ್ನು ಬಿಟ್ಟು ಹಾರಿ, ಹಂದಿಯ ಮುಖದಲ್ಲಿ ಮುರುಟಿಕೊಂಡು ತಿಕದಲ್ಲಿ ಹೊರಟಿತು. ಹಂದಿಯ ಒರಳಾಟವು ನಾಕಲೋಕಕ್ಕೆ ಮುಟ್ಟಿತು; ಹೊರಳಾಟವು ನಾಗಲೋಕಕ್ಕೆ ಹೋಯಿತು. 'ಹಂದಿಯನ್ನು ಅಣ್ಣನು ಕೊಂದನೊ, ಅಣ್ಣನನ್ನು ಹಂದಿ ಕೊಂದಿತೆ' ಎಂಬ ಅನುಮಾನದಿಂದ ಚೆನ್ನಯನು ಮುಂದೂಡಿ ಬಂದು ಕೇಳಿದನು, ಕೋಟಿಯು ತನ್ನ ಕೈಬೆರಳಿಂದ ತೋರಿಸಿದನು, ಹುಲ್ಲು ಎಲೆಗಳ ರಾಶಿಯ ಮೇಲೆ ಆನೆಮರಿಯಂತ ಭಯಂಕರವಾಗಿ ಬಿದ್ದಿದ್ದ ದೊಡ್ಡ ಕಾಡುಹಂದಿಯನ್ನು ಚೆನ್ನ ಯನು ತನ್ನ ಎಡಗಾಲಿಂದ ಮೆಟ್ಟಿ ದನು. ಹಂದಿಯು ಮುಚ್ಚಿದ್ದ ಕಣ್ಣನ್ನು ಅರೆತೆರೆದು, ಬಾಲವನ್ನು ಪಟ್ಟನೆ ಅಲುಗಿಸಿ, ಮೈ ಕೊಡಹಿ, ಅರೆನಿಮಿಷದಲ್ಲಿ ಎದ್ದೋಡಿತು, ಚೆನ್ನಯನು ಅದನ್ನು ಬೆನ್ನಟ್ಟಿ ಕೊಂಡು ಹೋದನು. ಅವನ ಹಿಂದುಗಡೆ ಉಳಿದವರೆಲ್ಲರು ಓಡತೊಡಗಿದರು.
ಹಂದಿಯು ಓಡುತ್ತ ಓಡುತ್ತ ತುಪ್ಪೆ ಕಲ್ಲ ಮಲೆಯನ್ನು ದಾಟ, ಪಂಜ ಸೀಮೆಯ ಅಡ್ಕಕ್ಕೆ ಹೋಗಿ, ಫಕ್ಕನೆ ತಿರುಗಿ, ಚೆನ್ನಯನಿಗೆ ಇದಿರಾಗಿ ಬಂತು. ಚೆನ್ನಯನು ತನ್ನ ಉರವಣೆಯನ್ನು ನಿಲ್ಲಿಸಿ, ಕಣ್ಣ ಮುಚ್ಚುವಷ್ಟರಲ್ಲಿ ತನ್ನಎರಡು ಕತ್ತಿಗಳನ್ನು ಮುಂದಕ್ಕೆ ಹಿಡಿದು, ಹಂದಿಗೆ ಮುಖವಾಗಿ ನಿಂತನು. ಹಾಯ್ದು ಬರುವ ಹಂದಿಯ ಎರಡು ಪಕ್ಷಗಳು ಚೆನ್ನಯನು ಒತ್ತಿಹಿಡಿದ ಕೈಗಳಿಂದ ಸಿಳ್ಳನೆ ಸೀಳಲ್ಪಟ್ಟು, ಆ ಹಂದಿಯು ಮುಂದರಿಸಲಾರದೆ ಅವನ ಕೈಬಳಿಯಲ್ಲಿಯೇ ರಕ್ತದ ಹೊನಲಿನಲ್ಲಿ ಹೊರಳಾಡಿ ಪ್ರಾಣಬಿಟ್ಟಿತು. ಚೆನ್ನಯನ ಎರಡು ಕೈಗಳ ಎಲುಬುಗಳು ಮಾತ್ರ ತೂಗುತಿದ್ದುವು; ಹಂದಿಯ ತಿವಿತ ದಿಂದ ಅವುಗಳಲ್ಲಿನ ಮಾಂಸವೂ ರಕ್ತವೂ ಕೈಬಿಟ್ಟು ಹೋಗಿದ್ದುವು.
ಹಂದಿಯು ಪ್ರಾಣಬಿಟ್ಟ ಹೊತ್ತಿಗೆ ಸರಿಯಾಗಿ ಪಂಜದ ಸೀಮೆಯವರು ಅಲ್ಲಿಗೆ ಬಂದು ಮುಟ್ಟಿದರು. ಬೇಟೆಗಾರರ ಬೆಳಗಿನ ಕೋಲಾಹಲವನ್ನು ಕೇಳಿ ಚೆಂದುಗಿಡಿಯು ಅವರನ್ನು ಮೊದಲೇ ಕಳುಹಿಸಿದ್ದರೂ ಎಣ್ಮೂರಿನವರು ಯಾವ ಕಾಡನ್ನು, ಯಾವ ಕುಂಜವನ್ನು ಎಬ್ಬುತ್ತಾರೆಂದು ತಿಳಿಯದೆ, ಅವರು ಸುತ್ತಾಡಿ ಸುತ್ತಾಡಿ ಕಟ್ಟಕಡೆಗೆ ಇಲ್ಲಿಗೆ ಬಂದು ಕೂಡಿದರು,
ಅವರ ಕಡೆಯ ಮುಖ್ಯಸ್ಥನೊಬ್ಬನು “ನಮ್ಮ ಗಡಿಯಲ್ಲಿ ಬಿದ್ದುದನ್ನು ನಾವು ಕೊಡಲಿಕ್ಕಿಲ್ಲ. ಹಂದಿಯ ತಲೆಬಾಲಗಳನ್ನು ಕೊಟ್ಟು ಹೋಗಬೇಕು, ಇಲ್ಲದಿದ್ದರೆ ನಾವು ಹಂದಿಯನ್ನು ಒಯ್ಯುತ್ತೇವೆ” ಎಂದು ಹೇಳಿ, ಗಟ್ಟಿಯಾದ ಬೀಳುಗಳನ್ನು ತರಿಸಿ, ಹಂದಿಯ ಸೊಂಟಕ್ಕೆ ಸಿಕ್ಕಿಸಿ, ತನ್ನ ಕಡೆಯ ಆಳುಗಳಿಂದ ಅದನ್ನು ಎಳೆಯಿಸಿದನು, ಗಾಯಗಳಿಂದ ಜರ್ಜರಿತವಾಗಿ ಹೋದ ಚೆನ್ನಯನು ಎದ್ದು ನಿಂತು, ಅಣ್ಣಾ! ಏನು ನೋಡುತ್ತಿರಿ? ಈಗ ಈ ಹಂದಿಗೆ ಗೆಲವು ಹೇಳುತ್ತೀರೋ? ಇಲ್ಲವೆ ಪಂಜದ ಮುನ್ನೂರು ಅಳಿಗೆ ಇದಿರಾಗುತ್ತೀರೋ?” ಎಂದು ಕೇಳಿದನು,
ಕೋಟಿಯು “ಚೆನ್ನಯ, ನೀನು ಮುಂದರಿಸಬೇಡ. ನಾನು ಇನ್ನೊಮ್ಮೆ ಒಡಂಬಡಿಸುತ್ತೇನೆ. ನಾವು ಕೊಂದ ಹಂದಿ ನಮ್ಮದಲ್ಲವೇ? ಎಂದು ಪಂಜದವರ ಹತ್ತಿರ ಮಾತಾಡುವುದಕ್ಕೆ ಪ್ರಾರಂಭಿಸಿದನು.
ಅಷ್ಟರಲ್ಲಿ ಪಂಜದವರು ಬೀಳುಹಾಕಿ ಹಂದಿಯನ್ನು ಎಳೆದು ಕೊಂಡುಹೋಗಲು ಸಿದ್ದವಾಗಿದ್ದುದನ್ನು ಕಂಡು ಚೆನ್ನಯನು ತನ್ನ ನಡುವಿಗಿದ್ದ ಬೆಳ್ಳಿಯ ಜೋಡು ಉಡುದಾರವನ್ನು ಈಚೆಗೆ ತೆಗೆದು, ಹಂದಿಯ ಎರಡು ದಾಡೆಗಳಲ್ಲಿ ಸಿಕ್ಕಿಸಿ, ಅದನ್ನು ಒಬ್ಬನೇ ಹಿಂದಕ್ಕೆ ಸೆಳೆದು, ಪಂಜಕ್ಕೂ ಎಣ್ಮೂರಿಗೂ ನಡುವೆ ಇರುವ ಮಂಜಳಪಾದೆ ಎಂಬ ಸ್ಥಳದಲ್ಲಿ ಸರಸರನೆ ಒಯ್ದು ತಂದನು. ಇಕ್ಕಡೆಯವರಿಗೆ ಹೊಯ್ ಕಯ್ ಆಯಿತು, ಕೋಟಿಚೆನ್ನಯರು ಆ ಮುನ್ನೂರು ಆಳುಗಳಲ್ಲಿ ಹಲವರನ್ನು ಸುಗ್ಗಿ ಬೆಳೆಯ ಹುಲ್ಲು ಸಡಿಗಳನ್ನು ಮಗುಚುವಂತೆ ಅಡ್ಡ ಹಾಕಿದರು. ಅಳಿದುಳಿದವರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಬೆನ್ನಿಗೆ ಕಾಲುಕೊಟ್ಟರು.
ತರುವಾಯ ಹಂದಿಯನ್ನು ಸೀಳಿದ್ದಾಯಿತು; ಎಣ್ಮೂರು ಬಲ್ಲಾಳನ ಅಪ್ಪಣೆ ಪ್ರಕಾರ ಎಲ್ಲರಿಗೂ ಮಾಂಸವನ್ನು ಹಂಚಿದ್ದಾಯಿತು; ಕೋಟಿ ಚೆನ್ನಯರು ಬೇಟೆಯ ಆಯಾಸವನ್ನು ಎಣ್ಣೆಯ ಸ್ಥಾನದಿಂದ ಕಳೆದದ್ದಾಯಿತು, ಒಂದು ವಾರದೊಳಗೆ ಅವರ ಮೈ ಗಾಯಗಳೆಲ್ಲ ವಾಸಿಯಾಗಿ ಅವರ ಭುಜಗಳು ಮತ್ತೆ ಕುದುರುವುದಕ್ಕೆ ಹತ್ತಿದುವು.
ಇತ್ಯ ಎಣೂರಿನ ಮೇಲೆ ದಂಡೆತ್ತಿ ಹೋಗಬೇಕೆಂದು ಹವಣಿಸುತ್ತಿದ್ದ ಪೆರುಮಾಳು ಬಲ್ಲಾಳನಿಗೂ ಚೆಂದುಗಿಡಿಗೂ ಈ ಬೇಟೆಯಿಂದ ಒಂದು ನೆಪವು ದೊರೆಯಿತು, ಪೆರುಮಾಳನು ಎಣ್ಮೂರನ್ನು ಕಾವೇರಿ ಸಂಕ್ರಮಣದೊಳಗೆನೇ ಪುಡಿಪುಡಿ ಮಾಡಬೇಕೆಂದು ಇದ್ದನು. ಆದರೆ ಪಂಜದಲ್ಲಿ ಕೊಳುಗುಳಕ್ಕೆ ಬೇಕಾದ ಸಾಮಗ್ರಿಗಳು ಒದಗದೆ ಇದ್ದುದರಿಂದಲೋ ಅಥವಾ ಕೇಮರಬಲ್ಲಾಳನ ಬುದ್ದಿಯು ಕೆಸರುಗದ್ದೆಯ ಗೂಟದಂತೆ ಇದ್ದುದರಿಂದಲೋ ಅಥವಾ ಇನ್ನು ಯಾವ ಕಾರಣದಿಂದಲೋ ತುಲಾ ಸಂಕ್ರಾಂತಿಯು ಕಳೆದರೂ ಯುದ್ಧಸಿದ್ಧತೆಯು ಆಗಲಿಲ್ಲ. ಅದಕ್ಕಾಗಿ ಪೆರುಮಾಳು ಬಲ್ಲಾಳನು ಇರುಳು ನಿದ್ದೆಯಿಂದ ಎದ್ದೆದ್ದು ತವಕಿಸುತ್ತಿದ್ದನು. ಆತನು ಪಂಜದ ಮುನ್ನೂರು ಆಳುಗಳ ಮೋರೆಗೆ ಮಸಿಯಾದ ವಾರ್ತೆಯನ್ನು ಕೇಳಿ, ಅದಕ್ಕೆ ತಕ್ಕದಾದ ಪ್ರತಿಕಾರವನ್ನು ಎಣ್ಮೂರು ಬಲ್ಲಾಳನಿಗೆ ಮಾಡಬೇಕೆಂದು ಚೆಂದುಗಿಡಿಗೆ ಸೂಚಿಸಿದನು. ಹೀಗೆ ಪೆರುಮಾಳು ಬಲ್ಲಾಳನು ಕೊಟ್ಟ ಧೈರ್ಯದಿಂದ ಉಬ್ಬಿ ಚಂದುಗಿಡಿಯು ಪರಿಹಾಸ್ಯಕರವಾದ ಒಂದು ಬಗೆಯ ಒಕ್ಕಣೆಯ ಓಲೆಯನ್ನು ಎಣ್ಮೂರಿಗೆ ಕಳುಹಿಸಿದನು.
ತುಲಾಸಂಕ್ರಾಂತಿಯು ಕಳೆದ ಏಳನೆಯ ದಿನ ಈ ಪತ್ರವು ಎಣ್ಮೂರಿಗೆ ಬಂದು ಮುಟ್ಟಿತು. ದೇವಬಲ್ಲಾಳನು ಬೀಡಿನಲ್ಲಿ ಓಲಗವಾಗಿದ್ದನು ಎಡದ ಮೈಯಲ್ಲಿ ಕಿನ್ನಿಚೆನ್ನಯ, ಬಲದಮೈಯಲ್ಲಿ ಕೋಟಿಚೆನ್ನಯ, ಮುಂದುಗಡೆಯಲ್ಲಿ ಹದಿನೆಂಟು ಪೇಟೆಯವರು, ಹಿಂದುಗಡೆಯಲ್ಲಿ ಚಾಮರಗಳನ್ನು ಬೀಸುವ ಕನ್ನೆಯರು, ಹೀಗೆ ಸಕಲ ವಿಲಾಸವೈಭವಗಳ ಒಡ್ಡೋಲಗದಲ್ಲಿ ಒಪ್ಪುತ್ತಿರುವ ಎಲ್ಲೂರು ದೇವಬಲ್ಲಾಳನ ಸಮಕ್ಷದಲ್ಲಿ ಪಂಜದ ಹರಿಕಾರನು ತಂದಿದ್ದ ಓಲೆಯನ್ನು ಬೀಡಿನ ಸೇನಬೊವನು ಓದಿದನು, ಅದೆಂತಂದರೆ--
ಶ್ರೀಮತ್ತು ಪಂಜ ಬೀಡಿನ ಬಲ್ಲಾಳ ಪಟ್ಟದಲ್ಲಿ ಅಭಿಷಿಕ್ತರಾದ ಪಂಜ ಸಂಸ್ಥಾನದ ಶ್ರೀ ಕೇಮರ ಬಲ್ಲಾಳರು ಎಣ್ಮೂರು ಬೀಡಿನ ದೇವಬಲ್ಲಾಳರಿಗೆ ಬರೆಯಿಸಿದ ಪತ್ರವೇನೆಂದರೆ - ಸ್ವಸ್ತಿ ಶ್ರೀ:ಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬೧೭ನೆಯ ಶ್ರೀಮುಖ ಸಂವತ್ಸರದ ತುಲಾ ಮಾಸ ದಿನ ೨೫ರ ವರೆಗೆ ಉಭಯ ಕುಶಲೋಪರಿ, ತರುವಾಯ ನಮ್ಮ ನಿಮ್ಮ ಉಭಯ ರಾಜ್ಯಗಳನ್ನು ವಿಂಗಡಿಸಲಿಕ್ಕಾಗಿ ಪ್ರಾಕಾರಭ್ಯ ಹಾಕಿದ್ದ ಗಡಿಕಲ್ಲುಗಳನ್ನು ನಿಮ್ಮ ಕಡೆಯ ದುರ್ಮನುಷ್ಯರು ಕಿತ್ತು ಹಾಕಿ ನಮ್ಮ ಸಂಸ್ಥಾನದ ಸರಹದ್ದುಗಳನ್ನು ಬೇರ್ಪಡಿಸಿದ್ದಾರೆಂಬದಾಗಿಯೂ, ನಮ್ಮ ಅಪ್ಪಣೆ ಇಲ್ಲದೆ ನಮ್ಮ ಸಂಸ್ತಾನಕ್ಕೆ ಸೇರಿದ್ದ ಬೈಲುಭೂಮಿಯನ್ನು ಬಲಕಾಯಿಸಿದ್ದಾರೆಂಬುದಾಗಿಯೂ ಇತ್ತಲಾಗೆ ನಮ್ಮ ಕಾಡನ್ನು ಒಳನುಗ್ಗಿ ನನ್ನೊಡನೆ ಹೇಳದೆ ಕೇಳದೆ ಹಂದಿಯನ್ನು ಬೇಟೆಯಾಡಿ ನಮ್ಮ ಕಡೆಯವರ ಮಾತನ್ನು ಮೀರಿ ಅದನ್ನು ಎಳೆದುಕೊಂಡು ಹೋಗಿದ್ದಾರೆಂಬದಾಗಿಯೂ ನಮ್ಮ ಚಿತ್ತಕ್ಕೆ ಬಂದುದರಿಂದ, ಈ ವಿವಾದಾಂಶಗಳು ಸರಿಯಾಗಿ ಇತ್ಯರ್ಥವಾಗುವುದಕ್ಕೆ ಮುಂಚಿತವಾಗಿ ನಮ್ಮ ಕಾಡಿನಲ್ಲಿ ಕೊಂದಿದ್ದ ಹಂದಿಯ ತಲೆ ಬಾಲಗಳನ್ನು ಈ ಓಲೆ ತರುವವರ ಕೈಯಲ್ಲಿ ನಮ್ಮ ಸಮಾಧಾನಕ್ಕಾಗಿ ಕೂಡಲೆ ಕಳುಹಿಸಿಕೊಡತಕ್ಕದ್ದು; ಅದನ್ನು ಕಳುಹಿಸದ ಕಾಲಕ್ಕೆ ಆ ಹಂದಿಯನ್ನು ಕೊಂದವರನ್ನು ನಮಗೆ ಒಪ್ಪಿಸಿಕೊಡತಕ್ಕದ್ದು; ಅದು ಆಗದಿದ್ದರೆ ನೀವು ಗಂಡುಗಲಿಯಂತೆ ಕೊಳುಗುಳಕ್ಕೆ ಜನಗಳನ್ನು ಕೂಡಿಕೊಂಡು ಬರತಕ್ಕದ್ದು, ಹಾಗೆ ಕಾಳಗಕ್ಕೆ ಬರಲು ಆಗದಿದ್ದರೆ, ಬಲ್ಲಾಳರಾದ ನೀವು ಸೀರೆಯುಟ್ಟು, ರವಕೆ ತೊಟ್ಟು ಬೀಡಿನ ಚಾವಡಿಯಲ್ಲಿ ತಲೆಬಾಗಿ ನಿಂತುಕೊಂಡಿದ್ದಲ್ಲಿ ಬಿಲ್ಲಾಳರಾದ ನಾವು ದಿಬ್ಬಣ ಸಮೇತ ಹಣ್ಣು ಕೇಳಲು ಬರುವಂಥವರಿದ್ದೇವೆ.
ಹೀಗೆ ಸೇನಬೋವನು ಓದಿದ ಪತ್ರವನ್ನು ಕೇಳಿ ದೇವಬಲ್ಲಾಳನ ಬಾಯಿ ನೀರು ಆರಿಹೋಯಿತು. ಎರಡು ನಿಮಿಷಗಳವರೆಗೆ ಓಲಗದಲ್ಲಿ ಸದ್ದುಗಲಗು ಇಲ್ಲದೆ ಮೌನವು ಕವಿಯಿತು.
“ಕಿನ್ನಿ ಚೆನ್ನಯ, ಓಲೆಯ ಒಕ್ಕಣೆ ಕಿವಿಯಲ್ಲಿ ಹೋಯಿತಷ್ಟೆ. ಇದಕ್ಕೆ ಏನು ಹೇಳುತ್ತೀ? ” ಎಂದು ದೇವಬಲ್ಲಾಳನು ಕಿನ್ನಿಚೆನ್ನಯನ ಕಡೆಗೆ ಮೋರೆ ತಿರುಗಿಸಿ, “ ಈ ಕೋಟಿಚೆನ್ನಯರ ಸಂಗತಿಯು ಬಿಸಿಹಾಲಿನ ಗುಟುಕಿನಂತೆ ಒಳಗೆ ತೆಗೆದುಕೊಳ್ಳಲಿಕ್ಕೂ ಇಲ್ಲ, ಹೊರಗೆ ಉಗುಳಲಿಕ್ಕೂ ಇಲ್ಲ ಎಂಬಂತಾ ಗಿದೆ. ಏನು ಮಾಡೋಣ? ಎಂದು ಕೇಳಿದನು.
ಕಿನ್ನಿ ಚೆನ್ನಯನು ಎದ್ದು “ಬುದ್ದಿ,” ಎಂದು ದೈನ್ಯದಿಂದ ನುಡಿದು, ಸುಮ್ಮನಾದನು.
ಆಗ ಕೋಟಿಯು “ಬುದ್ದಿ, ಬೀಡಿನವರನ್ನು ಹುರಿಗೊಳಿಸತಕ್ಕ ತಾವೇ ಹೀಗೆ ಕಳವಳಿಸಿದರೆ ಮಾಡುವುದೇನು? ಬೆಂಕಿಗೆ ಚಳಿ ಹಿಡಿದರೆ, ನೀರಿಗೆ ಬಾಯಿ ಆರಿದರೆ, ಗಾಳಿಗೆ ಮೈ ಬೆವರಿದರೆ ನಿವಾರಿಸ ತಕ್ಕವರು ಯಾರು? ಇಂಥ ಪ್ರಸಂಗದಲ್ಲಿ ತಮ್ಮಂಥವರು ವಿವೇಚನೆಯಿಂದ ವರ್ತಿಸಬೇಕಾಗಿದೆ. -ಎಂದನು,
ಆಗ ಚೆನ್ನಯನು “ಬುದ್ಧಿ, ನಮ್ಮಿಂದ ತಮಗಾಗಲಿ ತಮ್ಮ ರಾಜ್ಯಕ್ಕಾಗಲಿ ಅಪಾಯವು ಬರುವಂತಿದ್ದರೆ, ನಾನು ಈಗಲೇ ಹೊರಟೆ. ನನಗೆ ಅಪ್ಪಣೆಯಾಗಲಿ” ಎಂದು ಕೈಮುಗಿದು ನಿಂತುಕೊಂಡನು.
ದೇವಬಲ್ಲಾಳನು ಆ ಬಂಟರ ದೆಸೆಯಿಂದ ತನ್ನ ರಾಜ್ಯಕ್ಕೆ ಆಪತ್ತು ಒದಗಿತೆಂದು ತನ್ನ ಮನಸ್ಸಿನಲ್ಲಿಯೇ ನೆನಸಿ, ಅದನ್ನು ಬಾಯಿಬಿಟ್ಟು ಹೇಳಲಾರದೆ, ಉಸ್ಸೆಂದು ಒಮ್ಮೆ ಉಸಿರುಬಿಟ್ಟನು,
ಅದನ್ನು ಕಂಡು ಕೋಟಿಯು- “ಬುದ್ದಿ, ತಾವು ಚಿಂತೆ ಬಿಡಬೇಕು. ಇನ್ನು ನಮಗೆ ರಣವೀಳ್ಯವನ್ನು ಕೊಟ್ಟು ಕಳುಹಿಸಿದ್ದಲ್ಲಿ ನಾವು ಹಗೆಗಳನ್ನು ಎದುರ್ಗೊಂಡು ರಣರಂಗದಲ್ಲಿ ಅವರ ತಲೆಗಳನ್ನು ಚೆಂಡಾಡಿ, ಇಲ್ಲವೆ ನಮ್ಮ ಮೈ ರಕ್ತವನ್ನು ಚೆಲ್ಲಾಡಿ, ತಮ್ಮ ಋಣವನ್ನು ತೀರಿಸಬೇಕೆಂದು ಇದ್ದೇವೆ' ಎಂದು ಗಟ್ಟಿಯಾಗಿ ಹೇಳಿದನು.
ಈ ಮಾತುಗಳ ಗಾಳಿಯು ಬೀಸುತ್ತಲೇ ಅಲ್ಲಿದ್ದವರ ಗರ್ವೋದ್ರೇಕದಿಂದಲೂ ಭುಜಗಳ ಚಪ್ಪಾಳೆಯಿಂದಲೂ ಆ ಆಸ್ಥಾನವು ಕದಡಿದಂತಾಯಿತು. “ಸಿಟ್ಟಿ ಬೀಸುವ ಓಲೆ !' 'ಸುಡುಗಾಡು ಓಲೆ!' 'ಸೊಕ್ಕಿನ ಓಲೆ ! ಬಿರುನುಡಿಗಳು ಬಾಯಿಂದ ಬಾಯಿಗೆ ಹಾರಿದುವು. ಒಬ್ಬಿಬ್ಬರು ಆ ಓಲೆಕಾರನ ಮೇಲೆ ಕೈ ಮಾಡುವುದಕ್ಕೆ ಹೋದರು. ಕೋಟಿಯು ಬೇಡಬೇಡವೆಂದು ತಡಿಸಿದರೂ, ಬೀಡಿನ ಮಂಜುಪೆರ್ಗಡೆ ಎಂಬವನು ಆ ಓಲೆಯ ಕಡೆ ಕುಡಿ ಕತ್ತರಿಸಿ ಅದನ್ನು ಓಲೆಕಾರನ ಕೊರಳಿಗೆ ಕಟ್ಟಿ, ಅವನನ್ನು ಬೈದು ಭಂಗಿಸಿ, ಚಾವಡಿಯಿಂದ ಹೊರಕ್ಕೆ ದೊಬ್ಬಿ, ಅವಮಾನ ಮಾಡಿ ಕಳುಹಿಸಿಬಿಟ್ಟನು,
ಹೀಗೆ ಮೋರೆಗೆ ಮಂಗಳಾರತಿಯಾಗಿ ಪಂಜಕ್ಕೆ ಹಿಂದಿರಳಿದ ತನ್ನ ಕಡೆಯ ಹರಿಕಾರನನ್ನು ಕಂಡು ಚೆ೦ದುಗಿಡಿಯು ಅತ್ಯಂತ ಕೋಪಾಟೋಪದಿಂದ ಕೇಮರಬಲ್ಲಾಳನ ಬಳಿಗೆ ಹೋಗಿ, ಎಣ್ಮೂರಿನ ಮೇಲೆ ದಾಳಿವರಿದು ಹೊರಡುವುದಕ್ಕೆ ಎಲ್ಲವು ಸಿದ್ದವಾಗಿರಬೇಕೆಂದು ಅಪ್ಪಣೆ ಕೊಡಿಸಿ, ತಾನು ಸ್ವತಃ ಪಡುಮಲೆಯವರೆಗೆ ತೀವ್ರಗತಿಯಿಂದ ಹೋಗಿ, ತೂಕಡಿಸುತ್ತಲಿದ್ದ ಪೆರುಮಾಳು ಬಲ್ಲಾಳನನ್ನು ಎಚ್ಚರಿಸಿ, ಸೇನಾಸಮೇತನಾಗಿ ಪಂಜದವರ ಪಕ್ಷವನ್ನು ಸೇರಿಕೊಳ್ಳುವಂತೆ ಆತನ ಸಹಾಯವನ್ನು ಅಪೇಕ್ಷಿಸಿದನು,
ತುಲಾಮಾಸವು ಕಳೆದು ವೃಶ್ಚಿಕಮಾಸವು ತಲೆದೋರಿ ಹತ್ತು ದಿನಗಳು ದಾಟಿ ಹೋದುವು. ಗದ್ದೆಗಳಲ್ಲಿದ್ದ ಪೈರು ಒಕ್ಕಲಿಗನ ಅಂಗಳದಲ್ಲಿ ಮೊದಲೇ ಭದ್ರವಾಗಿ ಸೇರಿಕೊಂಡಿತ್ತು. ನೀರಿದ್ದಲ್ಲಿ ಸುಗ್ಗಿಯ ಬೆಳೆಯು ಒಂದೂವರೆ ಗೇಣು ಮೇಲೆ ಬಂದಿತ್ತು. ಹಿಂಗಾರು ಮಳೆಯು ಬಾರದೆ ಆಕಾಶವು ಶುಭ್ರವಾಗಿತ್ತು. ಮಳೆಗಾಲದಲ್ಲಿ ಸ್ತಬ್ದವಾಗಿ ಹೋಗುವ ಜನರ ಕ್ರಿಯಾಕಲಾಪಗಳು ಈ ಮೊದಲೇ ಸರಾಗವಾಗಿ ನಡೆಯ ತೊಡಗಿದ್ದು ವು. ಬೆಟ್ಟದ ತೊರೆಗಳಲ್ಲಿ ನೀರು ಇಳಿದಿದ್ದುದರಿಂದ, ಹೇರಾಟದ ಎತ್ತುಗಳು ಗಟ್ಟದ ಸರಕನ್ನು ತುಳುನಾಡಿಗೆ ಹೊತ್ತುಕೊಂಡು ಬರುವುದಕ್ಕೆ ಪ್ರಾರಂಭವಾಗಿತ್ತು, ತುಳುನಾಡಿನ ಅತ್ಯಂತ ಪ್ರಸಿದ್ಧವಾದ ಸುಬ್ರಹ್ಮಣ್ಯ ಜಾತ್ರೆಯು ಸಮೀಪಿಸಿತು.
ಜಾತ್ರೆಗೆ ನಾಲ್ಕು ದಿವಸ ಮುಂಚಿತವಾಗಿ ಪೆರುಮಾಳು ಬಲ್ಲಾಳನು ಮಂದಿಮಾರ್ಬಲದೊಡನೆ ಪಡುಮಲೆಯಿಂದ ತೆರಳಿ, ಪೆರ್ಲಂಪಾಡಿಯ ಮಾರ್ಗವಾಗಿ ಹೋಗಿ, ಎರುಕಡಪಿನ ಹತ್ತಿರ ಬಂದು ಇಳಿದನು. ಸಂಜದ ಕೆೇಮರ ಬಲ್ಲಾಳನ ಜನಗಳು ಸಾಮಾನುಸರಂಜಾಮನ್ನು ಶೇಖರಿಸಿಕೊಂಡು ಕಡವಿನ ಆಚೆಗೆ ಇದ್ದುರು; ಕೇಮರನ ಇನ್ನೊಂದು ದಂಡು ಎಣ್ಮೂರಿನ ಸರಹದ್ದಿನ ಕಂಡಿಕಣಿವೆಗಳನ್ನು ಕಟ್ಟಿ, ರಸ್ತೆ ಮುಸ್ತೈದೆಗಳು ಎಣ್ಮೂರಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಈ ಸೈನ್ಯವು ಕಳ್ಳದಾರಿಯಾಗಿ ಬಂದು ತನ್ನ ರಾಜ್ಯದ ಗಡಿಗಳಲ್ಲಿ ಬಲಕಾಯಿಸಿ ನಿಂತಿದ್ದ ಸುದ್ದಿಯು , ಜಾತ್ರೆಯ ಮುಂಚಿನ ದಿವಸ ಎಣ್ಮೂರಿನ ದೇವಬಲ್ಲಾಳನಿಗೆ ಗೊತ್ತಾಗಿ ತನ್ನ ಕಡೆಯ ೫೦೦ ಮಂದಿಯನ್ನು ಎಣ್ಮೂರು ದೇವಸ್ಥಾನದ ಮುಂದುಗಡೆಯ ಬೈಲಿನಲ್ಲಿ ನಿಲ್ಲಿಸಿ, ಜಗಳವಾಡುವುದಕ್ಕೆ ಸಿದ್ದವಾಗಿದ್ದನು,
ಯುದ್ಧದ ಸಿದ್ಧತೆಯನ್ನು ಕಂಡು ಕೇಳಿದಸೀಮೆಯವರು ತಮ್ಮ ಬದುಕುಬಾಳನ್ನೂ ದನಕರುವನ್ನೂ ದೂರಕ್ಕೆ ಸಾಗಿಸಲು ಪ್ರಯತ್ನಿಸಿದರು; ಚಿನ್ನ ಬೆಳ್ಳಿ ಇದ್ದವರು ಅದನ್ನು ನೆಲಮರೆ ಮಾಡಿಕೊಂಡು ತಮ್ಮ ಮನೆಗಳನ್ನು ಕಾದುಕೊಂಡಿದ್ದರು; ಮರ್ದಾಳ ಸೀಮೆಯ ರೈತರು ಲೂಟಿಯ ಭಯದಿಂದ ತಮ್ಮ ಹೆಂಡತಿಮಕ್ಕಳು ಆದಿಯಾಗಿ ಸರ್ವಸ್ವವನ್ನು ಕೊಕ್ಕಡದ ಮಾರ್ಗವಾಗಿ ಸಾಗಿಸಿಬಿಟ್ಟರು.
ಮಾರ್ಗಶಿರ ಶುದ್ಧ ಷಷ್ಟಿಯ ದಿನ ಸೂರ್ಯೋದಯಕ್ಕೆ ಸರಿಯಾಗಿ ದೇವಬಲ್ಲಾಳನು ಕೋಟಿಚೆನ್ನಯರಿಗೆ ತೊಡವುತಾಂಬೂಲಗಳನ್ನು ಕೊಟ್ಟು, ತನ್ನ ಸೈನ್ಯಕ್ಕೆ ಅವರನ್ನು ಮುಖಂಡರನ್ನಾಗಿ ಮಾಡಿ, ಅವರ ಆಜ್ಞಾನುಸಾರವಾಗಿ ನಡೆಯುವುದಕ್ಕೆ ಅನುವಾದನು, ಕೋಟಿಚೆನ್ನಯರು ಸೈನ್ಯದ ಜನದಲ್ಲಿ ಬೀಡಿನ ಪಹರೆಗೂ, ಎಣೂರಿನ ಚೌಸುತ್ತಿನ ಕಾವಲಿಗೂ, ಬಲ್ಲಾಳನ ಚಾಕರಿಗೂ ಬೇಕಾದಷ್ಟು ಮಂದಿಯನ್ನು ವಿಂಗಡಿಸಿ, ಉಳಿದ ಅರೆವಾಸಿ ಮಂದಿಯನ್ನು ತಮ್ಮ ಸಂಗಡ ಕೂಡಿಕೊಂಡು,ಎಣ್ಮೂರು ದೇವಸ್ಥಾನದ ದಾರಿಯನ್ನು ಹಿಡಿದರು. ಹೊತ್ತು ಎರಡು ಮಾರು ಏರುವಷ್ಟರಲ್ಲಿ ಇತ್ತಂಡದವರಿಗೆ ಮುಖ ಸಂಧಿಸಿ ಜಗಳಕ್ಕೆ ಪ್ರಾರಂಭವಾಯಿತು. ಇಕ್ಕಡೆಯವರು ಎಸೆದ ಬಾಣಗಳಿಂದ ಅನೇಕರು ಮಡಿದುಬಿದ್ದರು. ಮೂರುಮುಕ್ಕಾಲು ಗಳಿಗೆಯಲ್ಲಿ ಪಂಜದ ಕೇಮರ ಬಲ್ಲಾಳನು ಏರಿದ್ದ ಕುದುರೆಯ ಕಣ್ಣಿಗೆ ಬಾಣವು ತಗಲಿ, ಬಲ್ಲಾಳನು ಕುದುರೆಯಿಂದ ಕೆಳಕ್ಕೆ ಬಿದ್ದು, ಯುದ್ಧರಂಗದಿಂದ ಓಡಿ ಹೋದನು. ಎಣ್ಮೂರಿನ ಕಡೆಯಿಂದ ಯುದ್ಧ ಮಾಡುತಿದ್ದ ಮಂಜುಹೆಗ್ಗಡೆ ಎಂಬ ವೀರನು ಜಖಂ ಆಗಿ ಅಲ್ಲಿಯೆ ಮೃತನಾದುದನ್ನು ಕಂಡು ಎಣ್ಮೂರಿನವರು ಹಿಮ್ಮೆಟ್ಟಿ ಪಲಾಯನದ ಮಾರ್ಗವನ್ನು ನೋಡುತಿದ್ದರು. ಆ ಹೊತ್ತಿಗೆ ಸರಿಯಾಗಿ ಪೆರುಮಾಳ ಬಲ್ಲಾಳನೂ ಚೆಂದುಗಿಡಿಯೂ ತಮ್ಮ ತಮ್ಮ ಕುದುರೆ ಗಳನ್ನು ದೌಡಾಯಿಸಿಕೊಂಡು, ಮುಂದೊತ್ತಿ ಬರುವಂಥವರಾದರು. ಎಣ್ಮೂರಿನವರು ಕಾಲಿಗೆ ಬುದ್ದಿ ಹೇಳತೊಡಗಿದರು.
ಎಣ್ಮೂರಿನ ಜನಗಳು ನಿಂದು ನಿತ್ತರಿಸಲಾರದೆ ಹಿಂದೆಗೆದು ಹೋಗುವುದನ್ನು ಕೋಟಿಚೆನ್ನಯರು ಕಂಡು ತಮ್ಮ ಕತ್ತಿಗಳನ್ನು ಜಳಪಿಸುತ್ತ ಇರಿಸಿಕೊಂಡು ಬಂದವರನ್ನು ತಮ್ಮ ಖಡ್ಗಕ್ಕೆ ಆಹುತಿಯನ್ನಾಗಿ ಮಾಡುತ್ತ, ಓಡಿಹೋಗುವವರನ್ನು ಮುಖತಿರುಹಿ ಯುದ್ಧ ಮಾಡಬೇಕೆಂದುಹುರಿಗೊಳಿಸುತ್ತ, ಬಾಕಿಮಾರು ಗದ್ದೆಗೆ ಬಂದರು. ಅಷ್ಟರಲ್ಲಿ ಶತ್ರು ಸೈನ್ಯದ ೨೦೦ ಜನರು ಅವರನ್ನು ಮುಸುಕಿ ಮುತ್ತಿದರು.
ತಮ್ಮನ್ನು ಬಳಸಿಕೊಂಡು ನಿಂತಿದ್ದ ಹಗೆಯವರನ್ನು ಕಂಡು ಕೋಟಿಚೆನ್ನಯರು ಬೆನ್ನಿಗೆ ಬೆನ್ನು ಕೊಟ್ಟು ನಿಂತು, ಸುತ್ತು ಮುತ್ತಲಿಂದ ಬರ ತಕ್ಕ ಏಟುಗಳನ್ನು ಒಂದು ಗಳಿಗೆಯ ವರೆಗೆ ತಪ್ಪಿಸಿಕೊಂಡರು. ತರುವಾಯ ಅವರಿಬ್ಬರು ಕಬ್ಬಿನ ತೋಟಕ್ಕೆ ಬಿದ್ದ ಮರಿಯಾನೆಗಳಂತೆಯೂ, ಕುರಿ ಹಿಂಡನ್ನು ನುಗ್ಗಿದ ಹುಲಿಮರಿಗಳಂತೆಯೂ ಶತ್ರುಗಳನ್ನು ಕೈಗೆ ಸಿಕ್ಕಂತೆ ಕೊಲ್ಲುತ್ತ ರಣಭಯಂಕರರಾಗಿ ಯುದ್ಧ ಮಾಡುತಿದ್ದಾಗ ಒಂದು ಚಿತ್ರ ಬಾಣವು ಕೋಟಿಯ ಅಪಾಯಸ್ಥಾನಕ್ಕೆ ತಗಲಿ, ಅವನನ್ನು ಕಲ್ಲು ಗೊಂಬೆಯಂತೆ ಮಾಡಿಬಿಟ್ಟಿತು.
ಅದನ್ನು ಕಂಡು ಚೆನ್ನಯನು- ಅಣ್ಣಾ ! ಕಾಲು ತಿರುಗಿಸಿ, ಕಾಲು ತಿರುಗಿಸಿ” ಎಂದು ಚೀರಿದನು. ಕೋಟಿ- “ ತಮ್ಮಾ! ತಲೆಗೆ ಏರಿದೆ ಚಿತ್ರಬಾಣ; ಎದೆಯನ್ನು ಸೀಳಿದೆ ಶಿಳೀಮುಖ; ಕಣ್ಣಿಗೆ ಬೀಸಿದೆ ಅರಸಿನ ಹುಡಿ ಎಂದು ಅಸ್ಪುಟವಾಗಿ ಹೇಳಿ, ಕೂಡಲೆ “ ತಮಾ-ನೀನು ಯಾವಾಗಲೂ ಹಿಂದುಮುಂದು ನೋಡುವುದಿಲ್ಲ. ಅಕೊ ! ನಿನ್ನ ಬೆನ್ನ ಹಿಂದೆ” ಎಂದು ಕೈಸನ್ನೆ ಮಾಡಿದನು.
ಆ ಹೊತ್ತಿಗೆ ಸರಿಯಾಗಿ ಒಬ್ಬನು ಚೆನ್ನಯನ ಬೆನ್ನ ಹಿಂದೆ ಕಳ್ಳ ಹೆಜ್ಜೆಯಿಂದ ನುಸುಳಿಕೊಂಡು ತನ್ನ ಕತ್ತಿಯನ್ನು ಆತನ ಕೊರಳಿಗೆ ಇಟ್ಟಿದ್ದನು.
ತಕ್ಷಣವೇ ಚೆನ್ನಯನು ಮೋರೆಯನ್ನು ತಿರುಗಿಸಿ, ಇದ್ದಲ್ಲಿಂದ ಫುಟ ನೆಗೆದು “ಅಣ್ಣಾ ! ಇದು ನೆಗಳೆ; ಹರಿದು ಬಂದು ಕಚ್ಚುವ ಸ್ವಭಾವದ್ದು. ಕಣ್ಣಿಂದ ಕಾಣಲಿಕ್ಕಿಲ್ಲ, ಕೈಯಿಂದ ಮುಟ್ಟಲಿಕ್ಕಿಲ್ಲ ಎಂಬಂತೆ ಹಿಂದುಗಡೆಯಿಂದ ಬಂದಿದೆ” ಎಂದು ಹೇಳಿ, ತುಂಟ ಕುದುರೆಯಂತೆ ಕಾಲಿನಿಂದ ಒದೆದು ಬಿಟ್ಟನು. ಆ ಏಟು ಸಿಡಿಲಿನಂತೆ ಚೆಂದುಗಿಡಿಯ ಕಪಾಲಕ್ಕೆ ಬಿದ್ದು ಅವನು ಕಾಯಬಿಟ್ಟು ಸಂದನು.
ಚಂದುಗಿಡಿಯು ಸತ್ತದ್ದೇ ತಡ, ಅವನ ಸೈನಿಕರು ಕೊಳುಗುಳವನ್ನು ಬಿಟ್ಟು ಓಡತೊಡಗಿದರು. ಹೊತ್ತು ತಲೆಗೆ ಬರುವಷ್ಟರಲ್ಲಿ ಯುದ್ಧವು ಮುಗಿಯಿತು. ಯುದ್ಧದ ಜಯಧ್ವನಿಯು ಎಣ್ಮೂರು ಬೀಡಿಗೆ ಮುಟ್ಟಿತು. ಆಗ ದೇವಬಲ್ಲಾಳನು ಆ ವೀರರನ್ನು ಮಹಾಸಂಭ್ರಮದಿಂದ ಕಾಣುವುದಕ್ಕಾಗಿ ಪಟ್ಟದ ಜೋಡಿ ಕುದುರೆಗಳನ್ನೂ ಎರಡು ಪಲ್ಲಕಿಗಳನ್ನೂ ಸಿಂಗರಿಸಿಕೊಂಡು ಕಾಲ್ನಡೆಯಾಗಿ ಬಂದು, ದೇವಸ್ಥಾನದ ಮುಂದುಗಡೆಯ ಬಾಕಿಮಾರು ಗದ್ದೆಯಲ್ಲಿ ಗಾಯಗೊಂಡು ಬಿದ್ದಿದ್ದ ಕೋಟಿ, ಅವನ ಕಡೆಗಾಲದ ಸೇವೆ ಮಾಡುತ್ತಲಿದ್ದ ಚೆನ್ನಯ, ಇವರಿಬ್ಬರ ಹಿಂದುಗಡೆಯಲ್ಲಿ ಪಶ್ಚಾತ್ತಾಪದ ಮುಖಮುದ್ರೆಯಿಂದ ಮಾತಿಲ್ಲದೆ ನಿಂತಿದ್ದ ಪೆರುಮಾಳು ಬಲ್ಲಾಳ-ಈ ಮೂವರನ್ನು ಕಂಡನು. ಉಭಯಪಕ್ಷದ ಅನೇಕ ಸೈನಿಕರು ರಣರಂಗದಲ್ಲಿ ಮಡಿದು ಬಿದ್ದಿದ್ದರು. ಉಳಿದವರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿದ್ದರು.
ದೇವಬಲ್ಲಾಳನು ಕೋಟಿಚೆನ್ನಯರನ್ನು ಕಂಡು, ಅವರ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ, “ನನ್ನನ್ನೂ ನನ್ನ ಬೀಡನ್ನೂ ಕಾಪಾಡಿದ ಬಂಟರು ತಾವು. ತಮ್ಮ ಅಡಿಯಾಳಾದ ನನ್ನನ್ನು ಕಾಯಬೇಕು. ನನ್ನ ಹಣೆಯನ್ನು ಕಡಿದು ತಮಗೆ ಮಣೆಯನ್ನಾಗಿ ಇಟ್ಟರೂ ತಮ್ಮ ಉಪಕಾರವನ್ನು ತೀರಿಸಲಾರೆನು. ಇನ್ನು ತಾವು ಈ ರಣಭೂಮಿಯನ್ನು ಬಿಟ್ಟು, ಈ ಪಲ್ಲಕಿಗಳಲ್ಲಿ ಓಲಗವಾಗಿ, ಬೀಡಿನ ಚಾವಡಿಗೆ ದಯಮಾಡಿಸಿ, ನನ್ನ ರಾಜ್ಯವನ್ನೆಲ್ಲಾ ಉದ್ಧರಿಸಬೇಕು” ಎಂದು ಭಕ್ತಿಪೂರ್ವಕವಾಗಿ ಬೇಡಿಕೊಂಡನು.
ಅಷ್ಟರಲ್ಲಿ ಪೆರುಮಾಳು ಬಲ್ಲಾಳನು ಮುಂದಕ್ಕೆ ಬಂದು ತನ್ನ ಕೈಗಳನ್ನು ಹಣೆಯ ಮೇಲೆ ಇಟ್ಟು ಕೊಂಡು, “ನಾನು ಸಾಕಿದ ಮರಿಗಳ ಮೇಲೆ ಕೈಮಾಡಿದ ಪಾಪಿ ನಾನು ! ಈ ಪಾಪಕ್ಕೆ ಇದೇ ಪ್ರಾಯಶ್ಚಿತ್ತ" ಎಂದು ಹೇಳಿ ತನ್ನ ಕೈಯಲ್ಲಿದ್ದ ಸುರಗಿಯು ತನ್ನ ಹೊಟ್ಟೆಯೊಳಗೆ ಚುಚ್ಚಿಕೊಳ್ಳುವಷ್ಟರಲ್ಲಿ ಕೋಟಿಯು “ಬೇಡ ಬುದ್ದಿ - ಕೈ ತಡೆಯಿರಿ” ಎಂದು ಸಂಜ್ಞೆ ಮಾಡಿದನು.
ಆಗ ಚೆನ್ನಯನು ಎದ್ದು ಪೆರುಮಾಳು ಬಲ್ಲಾಳನ ಕೈಯಲ್ಲಿದ್ದ ಸುರಗಿಯನ್ನು ಕಸಕೊಂಡನು.
ಇತ್ತ ಕೋಟಿಯ ಮೈರಕ್ತದ ಪ್ರವಾಹದಲ್ಲಿ ಆತನ ಪ್ರಾಣವು ಮುಳು ಗೇಳುತ್ತಲಿತ್ತು. ಅವನು ತಮ್ಮನೊಡನೆ “ನನ್ನನ್ನು ಈ ಶಿವಾಲಯದ ಇದಿರಾಗಿ ಮಲಗಿಸಿಬಿಡು ಎಂದು ಹೇಳಿ, ಆಕಾಶದ ಕಡೆಗೆ ದೃಷ್ಟಿಯನ್ನು ತಿರುಗಿಸಿ “ಚೆನ್ನಯ, ಈ ದಿನ ಸುಬ್ರಹ್ಮಣ್ಯ ಜಾತ್ರೆ. ದೇವರು ರಥಾರೋಹಣ ವಾಗಿದ್ದಾರೆ. ಗರುಡಪಕ್ಷಿಯು ತನ್ನ ರೆಕ್ಕೆಗಳನ್ನು ಬಿಚ್ಚಿ ಮಂಡಲಾಕಾರವಾಗಿ ರಥದ ಮೇಲೆಯೇ ಆಕಾಶದಲ್ಲಿ ಸುತ್ತುವಂತೆ ಈ ಕಾಯಬಿಟ್ಟು ಕೈಲಾಸಕ್ಕೆ ಹೋಗಲು ನನ್ನ ಆತ್ಮವು ಹಾರೈಸುತ್ತಲಿದೆ. ಆದರೆ ನನಗೆ ಸ್ವರ್ಗಕ್ಕೆ ನೀರು ಕೊಡುವ ಮುಂಚೆ ದೇವಸ್ಥಾನದಲ್ಲಿ ಪೂಜೆಯಾಗಲಿ !” ಎಂಬ ಮಾತುಗಳನ್ನು ಮೆಲ್ಲನೆ ಒಂದೊಂದಾಗಿ ಹೇಳಿದನು.
ಸೂರ್ಯನು ಅಸ್ತಕ್ಕೆ ಹೋದನು, ದೇವಸ್ಥಾನದಲ್ಲಿ ಘಂಟಾನಾದವು ಕೇಳಿಸಿತು, ಪೂಜೆಗೆ ಪ್ರಾರಂಭವಾಯಿತು. ಮುಂಚಿನ ಕಾಲದಲ್ಲಿ ಎಂಥಾ ಭಯಂಕರ ಯುದ್ಧವು ನಡೆಯುತ್ತಲಿದ್ದರೂ ದೇವಸ್ಥಾನದ ಪೂಜಾವಿಧಿಗಳಿಗೆ ಇತ್ತಂಡದವರಿಂದಲೂ ಅಡ್ಡಿಯಾಗುತ್ತಿರಲಿಲ್ಲ. ಪೂಜೆಯಾಗಿ ದೇವಸ್ಥಾನದ ಬ್ರಾಹ್ಮಣನು ಹೊರಕ್ಕೆ ತೆಗೆದುಕೊಂಡು ಬಂದ ಆರತಿಯನ್ನೂ ತೀರ್ಥವನ್ನೂ ಕೋಟಿಯು ಸ್ವೀಕರಿಸಿ ದೇವಬಲ್ಲಾಳನನ್ನು ಹತ್ತಿರಕ್ಕೆ ಕರೆದು, “ಬುದ್ದಿ, ಇನ್ನು ಮುಂದೆ ಸಹಸ್ರಾವಧಿ ಕಾಲ ಈ ಮಹಾಲಿಂಗೇಶ್ವರನ ಪೂಜೆಯು ನಡುಮಲೆಯಲ್ಲಿ ಅರವಟ್ಟಿಗೆ ಇಟ್ಟಿರುವ ಆ ಬ್ರಾಹ್ಮಣರ ಕೈಯಿಂದ ನಡೆಯಿಸಬೇಕು” ಎಂದು ನಂಬಿಗೆಯನ್ನು ತೆಗೆದುಕೊಂಡು, “ಬಾಯಿಗೆ ತೀರ್ಥವನ್ನು ಹೊಯ್ದು ಬಿಡಿ” ಎಂದು ಸೂಚಿಸಿ, ಬಾಯಿತೆರೆದನು.
ದೇವಬಲ್ಲಾಳನೂ ಪೆರುಮಾಳು ಬಲ್ಲಾಳನೂ ಆತನ ಒಂದೊಂದು ಪಕ್ಕದಲ್ಲಿ ಕುಳಿತುಕೊಂಡು ಕೆಂದಾಳೆ ಎಳನೀರನ್ನು ಒಂದಿಷ್ಟು ಆತನ ಬಾಯಿಗೆ ಹೊಯ್ದರು. ಕೋಟಿಯು ಆ ಇಬ್ಬರು ಬಲ್ಲಾಳರ ಕೈಗಳನ್ನು ತನ್ನ ಕೈಗಳಿಂದ ಜೋಡಿಸಿ ಬಿಗಿಹಿಡಿದು, “ಮುಂದೆ ನೀವು ಕೈಗೂಡಿ ಬದುಕುವುದು ಒಳ್ಳೆಯದು” ಎಂದು ಹೇಳಿ, ಕಣ್ಣು ಮುಚ್ಚಿದನು; ಮುಚ್ಚಿದ ಕಣ್ಣು ಮತ್ತೆ ತೆರೆಯಲೇ ಇಲ್ಲ.
ಕೋಟಿಯು ಪರಂಧಾಮಕ್ಕೆ ಹೋಗುವುದನ್ನು ಕಂಡು ಚೆನ್ನಯನು “ಅಣ್ಣನನ್ನು ಬಿಟ್ಟು ನಾನೇತಕ್ಕೆ ಬಾಳಲಿ ? ಹುಟ್ಟುವಾಗ ಒಟ್ಟಿಗೆ ಹುಟ್ಟಿದವರು ಹೋಗುವಾಗ ಒಟ್ಟಿಗೆ ಹೋಗಬೇಕಷ್ಟೆ, ಅಣ್ಣ, ನಾನು ನಿಮ್ಮ ಬೆನ್ನ ಹಿಂದೆಯೆ ಬಂದೆ” ಎಂದು ಹೇಳಿ ಆ ದೇವಸ್ಥಾನದ ಮುಂದುಗಡೆ ಯಲ್ಲಿದ್ದ ಬಾವಿಯ ಬಾಯಿಕಲ್ಲಿಗೆ ತನ್ನ ತಲೆಯನ್ನು ತಾಟಾಡಿಸಿದನು. ಚೆಂದುಗಿಡಿಯ ಕತ್ತಿಯ ತಿವಿತದಿಂದ ರಕ್ತಹೋಗಿ ಮೊದಲೇ ಜರ್ಜರಿತವಾದ ಆತನ ಶಿರಸ್ಸಿನ ಒಳಗಿಂದ ಬಿಳಿ ಮೆದುಳಿನ ಮಾಲೆಯೊಂದು ಹೊರಬಂದು ದೇವಸ್ಥಾನದ ಬಲಿಪೀಠದಲ್ಲಿ ಇಟ್ಟಿದ್ದ ಮಲ್ಲಿಗೆಯ ಸರದಂತೆ ಕಲ್ಲಿನ ಮೇಲೆ ಬಿತ್ತು; ಅದರೊಂದಿಗೆ ಆತನ ಆತ್ಮವು ಮೇಲಕ್ಕೇರಿ ಹೋಯಿತು. ಕೂಡಲೆ ಆ ಶಿವಾಲಯದ ಒಳಗೆ ಉರಿಯುತ್ತಲಿದ್ದ ದೀಪಗಳೆಲ್ಲಾ ತಮ್ಮಷ್ಟಕ್ಕೆ ಆರಿ ಹೋದುವು; ಒಂದು ಗಳಿಗೆಯ ತನಕ ಗುಡುಗುಮಿಂಚುಗಳು ತೋರಿದುವು; ಒನಕೆಯ ಧಾರೆಯಲ್ಲಿ ಮಳೆಹೊಯ್ದು ತಟ್ಟನೆ ತಾನಾಗಿ ನಿಂತುಹೋಯಿತು.
ದೇವಬಲ್ಲಾಳನು “ಹಾ! ಹಾ! ವಿಧಿಯೇ ! ಇಂದಿಗೆ ನನ್ನ ರಾಜ್ಯದಲ್ಲಿದ್ದು ನನ್ನನ್ನು ಕಾಪಾಡಿದ ಆನೆಗಳೆ ಬಿದ್ದು ಹೋದುವೆಂದು ಮುಮ್ಮಲ ಮರುಗಿ, ಆ ಎರಡು ಶವಗಳನ್ನು ಅಲಂಕರಿಸಿ, ತಾನು ತಂದಿದ್ದ ಪಲ್ಲಕಿಗಳಲ್ಲಿ ಇರಿಸಿ, ಮಹಾಸಂಭ್ರಮದಿಂದ ಮೆರವಣಿಗೆ ಮಾಡಿಸಿ, ಬೀಡಿಗೆ ಕೊಂಡುಬಂದನು. ಮರುದಿನ ಹದಿನೆಂಟು ಪೇಟೆಯವರು ಒಂದುಗೂಡಿ ಜಾತಿವಿಧಿಗೆ ಅನುಸಾರವಾಗಿ ಶವಸಂಸ್ಕಾರವನ್ನು ಸಹಿಸಿದರು.
ಯಾವ ಹೊತ್ತಿಗೆ ಕೊಟಿಯ ಆತ್ಮವು ಕಾಯವನ್ನು ಕಳಚಿಬಿಟ್ಟಿತ್ತೋ ಆ ವೇಳೆಗೆ ಸರಿಯಾಗಿ ಪಡುಮಲೆಯ ಬೀಡಿಗೆ ಬೆಂಕಿ ಬಿದ್ದು ಅದು ಸುಟ್ಟು ಬೂದಿಯಾಯಿತು. ವಿಚಾರಮಾಡಿದ್ದಲ್ಲಿ ಬೀಡಿನವರಿಗೆ ಬಹಳ ನಚ್ಚು ಮೆಚ್ಚಿನವನಾಗಿ ನಡೆಯುತಿದ್ದ ಮುದುಕ ಸಾಯಿನಬೈದ್ಯನು ಬೀಡಿನೊಳಗೆ ಯಾರೂ ಇಲ್ಲದ್ದನ್ನು ಕಂಡು, ಪೂರ್ವದ್ವೇಷವನ್ನು ತೀರಿಸುವುದಕ್ಕಾಗಿ ಬೀಡಿಗೆ ಕಿಚ್ಚು ಹಾಕಿದನೆಂತಲೂ, ಬೆಂಕಿಹತ್ತಿದ ತರುವಾಯ ಬೀಡಿನಿಂದ ಬೇರೆಯವರ ಕಣ್ಮರೆಯಾಗಿ ತಪ್ಪಿಸಿಕೊಳ್ಳಲಾರದೆ ಆ ಬೆಂಕಿಯಲ್ಲಿಯೇ ಆತನು ಬಿದ್ದು ಹತನಾದನೆಂತಲೂ ಹೇಳುವರು.
ಎಣ್ಮೂರು ದೇವಬಲ್ಲಾಳನು ಕೋಟಿಚೆನ್ನಯರನ್ನು ಸುಟ್ಟು ಶುದ್ದ ಮಾಡಿಸಿದ್ದಲ್ಲಿ ಅವರ ಸಮಾಧಿಗಳನ್ನು ಕಟ್ಟಿಸಿ, ಗರಡಿಗಳನ್ನು ಏರ್ಪಡಿಸಿದನು. ಆ ದೇವಸ್ಥಾನದ ನಿತ್ಯಾರ್ಚನೆಗೆ ಅಂದು ಕೋಟಿಚೆನ್ನಯರಿಗೆ ಕವಡಿಯಿಟ್ಟು ನಿಮಿತ್ತ ಹೇಳಿದ ಬ್ರಾಹ್ಮಣನನ್ನು ಕರೆತರಿಸಿ, ಅವನಿಗೆ ಉಂಬಳಿಯನ್ನು ಕೊಟ್ಟು, ಕೋಟಿಯ ಮಾತನ್ನು ನಡಿಸಿದನು. ಪೆರುಮಾಳು ಬಲ್ಲಾಳನು ಪಡುಮಲೆಗೆ ಹಿಂದಿರಳಿ ಹೊಸ ಬೀಡನ್ನು ಕಟ್ಟಿಸಿ, ಕೋಟಿಚೆನ್ನಯರ ಕಂಬುಳದ ಗದ್ದೆಯ ಬಳಿಯಲ್ಲಿಯೇ ಅವರ ಗುಡಿಗಳನ್ನು ಅಂದವಾಗಿ ಮಾಡಿಸಿ, ಅಲ್ಲಿ ಅವರ ಬಿಂಬಗಳನ್ನು ಪ್ರತಿಷ್ಠಿಸಿ, ತಾನು ಬದುಕಿರುವಷ್ಟು ಕಾಲ ದಿನಕ್ಕೆ ಮೂರು ಸಲ ಆ ಬಿಂಬಗಳ ದರ್ಶನವನ್ನು ಮಾಡುತಿದ್ದನು.
ಕಾಲಗತಿಯಿಂದ ತುಳುನಾಡಿನಲ್ಲಿ ಬಲ್ಲಾಳರ ಸಂಸ್ಥಾನಗಳು ಆ ಮನೆತನದವರ ಕೈಬಿಟ್ಟು ಹೋದರೂ, ಅವರ ಬೀಡುಗಳು ಪಾಳುಬಿದ್ದು ಮಣ್ಣುಗುಪ್ಪೆಯಾದರೂ, ನಾಲ್ಕು ಶತಮಾನಗಳ ಹಿಂದೆ ತುಳುನಾಡಿನಲ್ಲಿ ಬಿಲ್ಲರ ಪ್ರಭಾವವು ಹೇಗೆ ಇದ್ದಿತೆಂಬುದಕ್ಕೆ ಅನೇಕ ಗ್ರಾಮಗಳಲ್ಲಿ ಕೋಟಿ ಚೆನ್ನಯರಿಗಾಗಿ ಕಟ್ಟಿಸಿದ ಗರಡಿಗಳು ಈಗ ಸಾಕ್ಷಿಗುಡ್ಡೆಗಳಾಗಿವೆ. ಕಾಡಿ ಆಳಿದವರ ಹೆಸರು ಅಳಿಯಿತು; ನಾಡಿನ ಹಿತಕ್ಕಾಗಿ ಕಾದಾಡಿ ಕಾಯ ಬಿಟ್ಟು ಕೈಲಾಸಕ್ಕೆ ಸಂದವರ ಹೆಸರು ಉಳಿಯಿತು.