ಖಿನ್ನತೆ ಬನ್ನಿ ನಿವಾರಿಸೋಣ

ವಿಕಿಸೋರ್ಸ್ದಿಂದ
ಖಿನ್ನತೆ ಬನ್ನಿ ನಿವಾರಿಸೋಣ  (2017) 
by ಡಾ॥ ಸಿ. ಆರ್. ಚಂದ್ರಶೇಖರ್


Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ಖಿನ್ನತೆ
ಬನ್ನಿ ನಿವಾರಿಸೋಣ




ಡಾ. ಸಿ. ಆರ್. ಚಂದ್ರಶೇಖರ್‌

ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು

ಸಮಾಧಾನ ಆಪ್ತ ಸಲಹಾ ಕೇಂದ್ರ

ಬೆಂಗಳೂರು






ಪ್ರಕಾಶಕರು

ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್ (ರಿ)

ಕಲಬುರಗಿ - 585 105

KHINNATHE: Banni Nivarisona
'Depression: Come Let's Prevent
A Book by
Dr. C. R. Chandrashekar
Former Professor of Psychiatry
NIMHANS. BENGALURU
&
Founder Trustee of
Samadhana Counselling Center
Bengaluru. Ph: 26482929

Published by
Shadakshariswamy Diggaonkar Trust (R.)
Kalaburagi 585 105

© ಲೇಖಕರು
ಪ್ರಥಮ ಮುದ್ರಣ: ಏಪ್ರಿಲ್ 2017
ಉಪಯೋಗಿಸಿದ ಕಾಗದ: 70 ಜಿಎಸ್ ಎಂ ಮ್ಯಾಪ್ಲಿಥೋ
ಕ್ರೌನ್ 1/8 ಪುಟಗಳು: 52
ಬೆಲೆ: ರೂ. 36/-
ಪ್ರಕಾಶಕರು
ಎಸ್. ಎಸ್. ಹಿರೇಮಠ ಹಾಗೂ ಮಹಾನಂದಾ ಎಸ್. ಡಿಗ್ಗಾಂವಕರ
ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್ (ರಿ.)
ಕಲಬುರಗಿ


ಸಂಪಾದಕ ಮಂಡಳಿ
ಡಾ. ನಾ. ಸೋಮೇಶ್ವರ
ಡಾ. ಎಸ್. ಎಸ್. ಗುಬ್ಬಿ
ಡಾ. ಹೆಚ್. ಎಫ್. ಯೋಗಪ್ಪನವರ
ಡಾ. ಈಶ್ವರಯ್ಯ ಮಠ
ಡಾ. ಆರ್. ವೆಂಕಟರೆಡ್ಡಿ
ಪ್ರೊ ನರೇಂದ್ರ ಬಡಶೇಷಿ
ಸಂಪರ್ಕ ವಿಳಾಸ
ಎಸ್. ಎಸ್. ಹಿರೇಮಠ
'ಸದಾಶಯ' ಜಿ.ಡಿ.ಎ. 425, ತಿಲಕನಗರ
ಕುಸನೂರು ರಸ್ತೆ ಕಲಬುರ್ಗಿ - 585 105
ಮೊಬೈಲ್: 9342356222/9482045384
Email: sshirematha 1953@gmail.com


ಮುಖಪುಟ ವಿನ್ಯಾಸ: ಸುಧಾಕರ ದರ್ಬೆ
ಪುಸ್ತಕ ವಿನ್ಯಾಸ: ಶ್ರೀಧರ್ ಆರ್. ಎಸ್.
ಮುದ್ರಣ: ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ. -ಬಸವಣ್ಣ


ಅರ್ಪಣೆ


ಸಮಾಜಮುಖಿ ವೈದ್ಯ, ವೈದ್ಯಸಂತ

ಲಿಂ. ಡಾ॥ ಎಸ್. ಎಸ್. ಸಿದ್ಧಾರೆಡ್ಡಿ - ಬೀದರ

ಅವರ ಸಂಸ್ಮರಣೆಗೆ ಗೌರವಪೂರ್ವಕವಾಗಿ...

ಲೇಖಕನ ಮಾತು

ಖಿನ್ನತೆಯಿಂದ ಬಳಲದ ವ್ಯಕ್ತಿ ಇಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ, ಉಳ್ಳವರಿಂದ ಹಿಡಿದು ಏನೂ ಇಲ್ಲದವರಿಗೆ, ಸ್ತ್ರೀ ಪುರುಷರಿಗೆ, ಯಾವುದೇ ಕಷ್ಟ ಕಾರ್ಪಣ್ಯ ಬಂದಾಗ ಅಥವಾ ಯಾವ ಕಾರಣವೂ ಇಲ್ಲದೆ ಖಿನ್ನತೆ ಬರಬಹುದು.

ಖಿನ್ನತೆ ವ್ಯಕ್ತಿಯ ದೈಹಿಕ-ಮಾನಸಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಅವನ/ ಅವಳ ದೈನಂದಿನ ಚಟುವಟಿಕೆಗಳಿಗೆ, ಜಾಣ್ಮೆ, ಪ್ರತಿಭಾ ಪ್ರದರ್ಶನಕ್ಕೆ ಅಡ್ಡಗಾಲನ್ನು ಹಾಕುತ್ತದೆ. ಖಿನ್ನತೆಯಿಂದಾಗಿ ಹೀರೋ ಆಗಿದ್ದ ವ್ಯಕ್ತಿ ಜೀರೋ ಆಗಿಬಿಡುತ್ತಾನೆ.

ಅನುವಂಶೀಯತೆ, ಬಾಲ್ಯದ-ಆನಂತರದ ಜೀವನದ ಕಹಿ- ಅನುಭವಗಳು, ಪ್ರೀತಿ ವಾತ್ಸಲ್ಯದ ಕೊರತೆ, ಆಸರೆ-ಸಹಾನುಭೂತಿಯ ಅಭಾವ, ಮಿದುಳಿನಲ್ಲಿ ರಾಸಾಯನಿಕ ಏರುಪೇರು, ಅನಾರೋಗ್ಯ ಮತ್ತು ಅಹಿತಕರ ಪರಿಸರ ಎಲ್ಲವೂ ಖಿನ್ನತೆ ಬರಲು ಕಾರಣವಾಗುತ್ತವೆ.

ಖಿನ್ನತೆಗೆ ಚಿಕಿತ್ಸೆಯೂ ಇದೆ. ಅದು ಗುಣವಾಗುವಂತಹ ಕಾಯಿಲೆ. ಖಿನ್ನತೆ ಬರದಂತೆ ತಡೆಗಟ್ಟಲೂಬಹುದು.

2017-18 ಖಿನ್ನತೆಯ ನಿವಾರಣೆಯ ವರ್ಷ. ಬನ್ನಿ ಖಿನ್ನತೆಯನ್ನು ನಿಭಾಯಿಸೋಣ, ನಿವಾರಿಸೋಣ.

ಈ ಕಿರುಪುಸ್ತಕವನ್ನು ಪ್ರಕಟಿಸಿ, ಸಾಹಿತ್ಯ ದಾಸೋಹ ಮಾಡಿರುವ ಶ್ರೀ ಎಸ್.ಎಸ್. ಹಿರೇಮಠ ದಂಪತಿಗಳಿಗೆ ಧನ್ಯವಾದಗಳನ್ನು ಹೇಳೋಣ.

ಬೆಂಗಳೂರು

ಡಾ. ಸಿ. ಆರ್. ಚಂದ್ರಶೇಖರ್

ಏಪ್ರಿಲ್ 2017

ಪ್ರಕಾಶಕರ ನುಡಿ

"ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆ ತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯ? ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು."

ಅಕ್ಕನ ಈ ವಚನ ಇಂದು ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಖಿನ್ನತೆ ಕಾಯಿಲೆಯ ನಿವಾರಣೆಗೆ ಒಂದು ಅತ್ಯುತ್ತಮ ಪರಿಹಾರೋಪಾಯದ ದಿವ್ಯ ಮಂತ್ರೌಷಧಿಯಾಗಿದೆ. ಜನಪ್ರಿಯ ಸಮುದಾಯ ಮನೋವೈದ್ಯರೆಂದೇ ಪ್ರಖ್ಯಾತಿ ಹೊಂದಿರುವ ಡಾ. ಸಿ. ಆರ್. ಚಂದ್ರಶೇಖರ ಅವರು ರಚಿಸಿರುವ “ಖಿನ್ನತೆ: ಬನ್ನಿ ನಿವಾರಿಸೋಣ” ಈ ಕಿರು ಪುಸ್ತಕ ಎಲ್ಲ ವರ್ಗದ, ಎಲ್ಲ ವಯೋಮಾನದ ಓದುಗರಿಗೆ ಕೈ ದೀವಿಗೆಯಾಗಿದೆ. ತಮ್ಮ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ಅವರಿಗೆ ನಮ್ಮ ಅನಂತ ಪ್ರಣಾಮಗಳು.

"ಖಿನ್ನತೆ: ಬನ್ನಿ ಮಾತನಾಡೋಣ" (Depression: Let's Talk) ಎಂಬ ಘೋಷವಾಕ್ಯವನ್ನು ಹೊಂದಿರುವ ಪ್ರಸಕ್ತ 2017ನೆಯ ಸಾಲಿನ ವಿಶ್ವ ಆರೋಗ್ಯ ದಿನಾಚರಣೆಯ ನಿಮಿತ್ತವಾಗಿ ಈ ಪುಸ್ತಕವನ್ನು ಕಡಿಮೆ ಬೆಲೆಗೆ ಕೊಡಬೇಕೆಂಬ ನಮ್ಮ ಸದಾಶಯಕ್ಕೆ ನೀರೆರೆದವರು ಮಾತೋಶ್ರೀ ಗುರಮ್ಮಾ ಎಸ್. ಸಿದ್ದಾರೆಡ್ಡಿ, ಶ್ರೀ ಬಿ. ಎಸ್. ದೇಸಾಯಿ ಹಾಗೂ ಅವರ ಸ್ನೇಹಬಳಗ ಡಾ. ಎಸ್. ಎಸ್. ಗುಬ್ಬಿ, ಹಾಗೂ ಡಾ. ರಾಜೇಶ್ವರಿ ಸಿದ್ದಾರೆಡ್ಡಿ ಅವರು. ಇವರೆಲ್ಲರಿಗೂ ನಮ್ಮ ವಿಶ್ವಾಸ ಪೂರ್ವಕ ವಂದನೆಗಳು, ಹಾಗೆಯೇ, ಅರ್ಥಪೂರ್ಣ ಮುಖಪುಟ ರಚಿಸಿರುವ ಶ್ರೀ ಸುಧಾಕರ ದರ್ಬೆ ಅವರಿಗೆ, ಋಟ ವಿನ್ಯಾಸಗೊಳಿಸಿದ ಶ್ರೀ ಆರ್. ಎಸ್. ಶ್ರೀಧರ ಅವರಿಗೆ ಮತ್ತು ಅಚ್ಚುಕಟ್ಟಾಗಿ ಮುದ್ರಣ ಕಾರ್ಯ ನಿರ್ವಹಿಸಿರುವ ಲಕ್ಷ್ಮೀ ಮುದ್ರಣಾಲಯದ ಸಿಬ್ಬಂದಿಗೆ ಪ್ರೀತಿಪೂರ್ವಕ ನೆನಹುಗಳು.

ಕಲಬುರಗಿ

-ಮಹಾನಂದಾ ಡಿಗ್ಗಾಂವಕರ

ಏಪ್ರಿಲ್ 7, 2017

-ಎಸ್. ಎಸ್. ಹಿರೇಮಠ



ಖಿನ್ನತೆ

ಖಿನ್ನತೆ-Depression ಎಂಬುದು ಸರ್ವವ್ಯಾಪಿ, ಖಿನ್ನತೆಗೆ ಒಳಗಾಗದ ವ್ಯಕ್ತಿ ಇಲ್ಲ. ಯಾವುದೇ ಕಷ್ಟ-ನಷ್ಟ, ಸೋಲು-ನಿರಾಶೆ, ಅವಮಾನ-ಅಗಲಿಕೆ-ಸಾವು ಸಂಭವಿಸಿದಾಗ 'ಖಿನ್ನತೆ' ತಪ್ಪದೇ ಹಾಜರಾಗುತ್ತದೆ. ಉದಾಹರಣೆಗೆ:

ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸವೆಂದಾಗ ದಶರಥ ಮಹಾರಾಜ ಖಿನ್ನತೆಗೆ ಒಳಗಾಗಿ ಮೃತ್ಯುವಶನಾಗುತ್ತಾನೆ.

ವನವಾಸ ಪ್ರಾಪ್ತಿಯಾದಾಗ ಖಿನ್ನತೆಗೆ ಒಳಗಾಗದ ರಾಮ, ಸೀತಾಪಹರಣವಾದಾಗ ಖಿನ್ನತೆಗೆ ಒಳಗಾಗುತ್ತಾನೆ. ತುಂಬು ಗರ್ಭಿಣಿಯನ್ನು ಕಾಡಿಗೆ ಅಟ್ಟಿದ ತಪ್ಪಿತಸ್ಥ ಭಾವನೆಯಿಂದ, ಸೀತೆ ಭೂಗರ್ಭ ಪ್ರವೇಶ ಮಾಡಿದ್ದನ್ನು ಕೇಳಿದ ರಾಮ ಖಿನ್ನನಾಗಿ ಸರಯೂ ನದಿಯನ್ನು ಪ್ರವೇಶಿಸಿ, ಪ್ರಾಣತ್ಯಾಗ ಮಾಡುತ್ತಾನೆ.

ನೂರು ಯೋಜನ ವಿಸ್ತಾರ ಉಳ್ಳ ಸಮುದ್ರವನ್ನು ಲಂಘಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿ ವೀರ ಆಂಜನೇಯನು ಖಿನ್ನನಾಗಿ ಆತ್ಮಹತ್ಯೆಯ ಮಾತಾಡುತ್ತಾನೆ.

ಅಶೋಕ ವನದಲ್ಲಿ ರಾವಣನ ಖೈದಿಯಾಗಿದ್ದ ಸೀತೆ, ರಾಮ ಬರಲಿಲ್ಲವೆಂಬ ಹತಾಶೆಯಿಂದ, ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಹನುಮಂತನಿಂದ ರಕ್ಷಿಸಲ್ಪಡುತ್ತಾಳೆ.

ಚಕ್ರವ್ಯೂಹದೊಳಗೆ ಸಿಕ್ಕಿ ಹತನಾದ ಮಗ ಅಭಿಮನ್ಯುವಿನ ಸಾವಿನ ದುಃಖವನ್ನು ತಡೆಯಲಾಗದ ಸವ್ಯಸಾಚಿ ಅರ್ಜುನ, ಅಭಿಮನ್ಯುವಿನ ಸಾವಿಗೆ


ಕಾರಣನಾದ ಜಯದ್ರತನನ್ನು ಕೊಲ್ಲದಿದ್ದರೆ ತಾನು ಅಗ್ನಿಪ್ರವೇಶ ಮಾಡಿ

ಪ್ರಾಣಬಿಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ.

ತಂದೆ ದಕ್ಷಬ್ರಹ್ಮ ಮಾಡಿದ ಅವಮಾನವನ್ನು ಸಹಿಸಲಾಗದೆ, ದಾಕ್ಷಾಯಿಣಿ ಯಜ್ಞಕುಂಡಕ್ಕೆ ಬಿದ್ದು ಆತ್ಮಾರ್ಪಣೆ ಮಾಡಿದರೆ, ಆಕೆಯ ಈ ದುರಂತ ಸಾವಿನಿಂದ ವಿಚಲಿತನಾದ ಶಿವ ಬುದ್ಧಿಭ್ರಮಣೆಗೆ ಒಳಗಾಗುತ್ತಾನೆ.

ಪ್ರೀತಿಯ ಪತಿ ಸಾವನ್ನಪ್ಪಿದಾಗ, ಆ ದುಃಖವನ್ನು ಸಹಿಸಲಾಗದ ಪತ್ನಿಯರು ಚಿತೆ ಏರಿ ಸಹಗಮನ ಮಾಡುತ್ತಿದ್ದರು.

ಖಿನ್ನತೆ-Depressionನ ಲಕ್ಷಣಗಳಿವು:

D - Dullness: ಮಂಕುತನ, ಲವಲವಿಕೆ ಇರದು. ಮಂಕಾಗಿ ವ್ಯಕ್ತಿ ನಿಷ್ಕ್ರಿಯನಾಗಿ ಒಂದೆಡೆ ಕೂರುತ್ತಾನೆ ಅಥವಾ ಹಾಸಿಗೆ ಹಿಡಿಯುತ್ತಾನೆ.

E - Energyless, No Enthusiasm: ಶಕ್ತಿ-ಉಲ್ಲಾಸ-ಉತ್ಸಾಹಗಳಿಲ್ಲ. ಕೆಲಸ ಕರ್ತವ್ಯ ನಿರ್ವಹಣೆ ಮಾಡಲು ಮನಸ್ಸಿಲ್ಲ.

P - Pain: ನೋವು, ತಲೆ-ಎದೆ-ಕತ್ತು, ಬೆನ್ನು-ಸೊಂಟ-ಕೈಕಾಲು ಹೀಗೆ ದೇಹದ ಅನೇಕ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿಗೆ ಯಾವುದೇ ದೈಹಿಕ ಕಾರಣವಿರುವುದಿಲ್ಲ. ಎಲ್ಲ ಪರೀಕ್ಷೆಗಳು 'ನಾರ್ಮಲ್' ಎಂದೇ ಇರುತ್ತವೆ.

R - Remorceful-Regretful: ಪಶ್ಚಾತ್ತಾಪ, ತಪ್ಪಿತಸ್ಥ ಭಾವನೆ, ಪಾಪಪ್ರಜ್ಞೆ ವ್ಯಕ್ತಿಯನ್ನು ಕಾಡತೊಡಗುತ್ತದೆ. ಮಾಡಿದ ತಪ್ಪುಗಳು, ಅನ್ಯಾಯ, ಅಕ್ರಮಗಳ ಕಹಿನೆನಪು ಮನಸ್ಸಿಗೆ ಹಿಂಸೆ ನೀಡಬಹುದು.

E - Eating Less: ಹಸಿವು ಕಡಿಮೆ. ಊಟ ರುಚಿಸುವುದಿಲ್ಲ. ಊಟ ಕಡಿಮೆಯಾಗಿ ಶರೀರದ ತೂಕವೂ ಇಳಿಯುತ್ತದೆ.


S - Sleep Disturbances-Sexual Disturbances ನಿದ್ರಾಹೀನತೆ, ನಿದ್ರೆಯ ತೊಂದರೆಗಳು, ಲೈಂಗಿಕ ಅನಾಸಕ್ತಿ, ಲೈಂಗಿಕ ದೌರ್ಬಲ್ಯಗಳು.

S - Suicidal Ideas and Attempts: ಆತ್ಮಹತ್ಯಾ ಆಲೋಚನೆಗಳು ಮತ್ತು ಪ್ರಯತ್ನ.

I - Insecurity Inferiorty Feelings: ಅಭದ್ರತೆಯ ಭಾವನೆಗಳು, ಕೀಳರಿಮೆಯ ಯೋಚನೆಗಳು, ನಾನು ನಿಷ್ಟ್ರಯೋಜಕ, ಕೆಲಸಕ್ಕೆ ಬಾರದವನು, ತಾನು ಎಲ್ಲರಿಗಿಂತ ಕೀಳು, ಬುದ್ಧಿಹೀನ ಎನ್ನುವುದು.

O - Orphan Feelings: ಅನಾಥಪ್ರಜ್ಞೆ ತನಗೆ ಯಾರೂ ಇಲ್ಲ, ತನ್ನನ್ನು ಯಾರೂ ಮೆಚ್ಚುವುದಿಲ್ಲ, ಸಹಾಯಕ್ಕೆ ಬರುವುದಿಲ್ಲ ಎನಿಸುವುದು.

N - Negative Attitude and Negative Thoughts: ನಕಾರಾತ್ಮಕ ಧೋರಣೆ ಮತ್ತು ಆಲೋಚನೆಗಳು, ನಿರಾಶಾವಾದ.

ಹೀಗೆ ಖಿನ್ನತೆ ಹಲವಾರು ರೋಗಲಕ್ಷಣಗಳ ಸಮೂಹ.

ಖಿನ್ನತೆ ಮೂರು ಮಟ್ಟಗಳಲ್ಲಿರಬಹುದು.

ತೀವ್ರ ಮಟ್ಟ: ರೋಗಿ ತನ್ನ ಪ್ರಾಥಮಿಕ ಬೇಕು-ಬೇಡಗಳನ್ನು ಗಮನಿಸುವುದಿಲ್ಲ. ನಿಷ್ಕ್ರಿಯನಾಗಿ ಒಂದೆಡೆ ಕೂರಬಹುದು. ಆತ್ಮಹತ್ಯೆ ಪ್ರಯತ್ನ ಮಾಡಬಹುದು.

ಮಧ್ಯಮ ಮಟ್ಟ: ಅತಿಯಾದ ಶಾರೀರಿಕ ನೋವುಗಳು, ಆಹಾರ ಸೇವನೆ-ನಿದ್ರೆಯ ಏರುಪೇರು, ಸಾಯುವ ಆಸೆ. ಶಕ್ತಿ ಸಾಮರ್ಥ್ಯ ಕುಗ್ಗುತ್ತದೆ.

ಅಲ್ಪ ಮಟ್ಟ: ಅನೇಕ ಶಾರೀರಿಕ ನೋವುಗಳು, ಬೇಸರ, ದುಃಖ, ನಕಾರಾತ್ಮಕ ಆಲೋಚನೆಗಳು

ಖಿನ್ನತೆಯ ವ್ಯಾಪ್ತಿ

2016ರಲ್ಲಿ ನಿಮ್ಹಾನ್ಸ್ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ ಭಾರತದಲ್ಲಿ ಪ್ರತಿ ನೂರು ಜನರಲ್ಲಿ ಐದು ಜನ ಖಿನ್ನತೆ ರೋಗದಿಂದ ಬಳಲುತ್ತಿದ್ದಾರೆ. ಕಳವಳದ ವಿಚಾರವೆಂದರೆ ಬಹುತೇಕ ರೋಗಿಗಳಿಗೆ ತಮಗೆ ಖಿನ್ನತೆಯಿದೆ ಎಂಬುದು ತಿಳಿದಿರುವುದೇ ಇಲ್ಲ. ಖಿನ್ನತೆ ರೋಗಿಗಳು ತಮ್ಮ ಆರೋಗ್ಯ ಸರಿಯಿಲ್ಲ. ತಮಗೆ ವಿವಿಧ ಬಗೆಯ ಮತ್ತು ವಿವಿಧ ಭಾಗದಲ್ಲಿ ನೋವಿದೆ, ನಿಶ್ಯಕ್ತಿಯಿದೆ, ಆಯಾಸವಾಗುತ್ತಿದೆ, ಹಸಿವು ನಿದ್ರೆ ಮೈಥುನ/ಮಲಮೂತ್ರ ವಿಸರ್ಜನೆಯ ಏರುಪೇರಿದೆ. ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಿ ಎಂದು ವೈದ್ಯರಲ್ಲಿಗೆ ಆಸ್ಪತ್ರೆಗೆ ಹೋಗುತ್ತಾರೆ. ಯಾವುದೇ ಚಿಕ್ಕ/ದೊಡ್ಡ ಆಸ್ಪತ್ರೆ, ಜನರಲ್ ಪ್ರಾಕ್ಟಿಶನರ್ ಅಥವಾ ತಜ್ಞ ವೈದ್ಯರಲ್ಲಿಗೆ ಹೋಗುವ ರೋಗಿಗಳಲ್ಲಿ ಶೇಕಡ 30-50ರಷ್ಟು ಮಂದಿಗೆ ಖಿನ್ನತೆ ರೋಗ ಇರುತ್ತದೆ ಎಂದು ನಮ್ಮ ದೇಶದಲ್ಲಿ ನಡೆದಿರುವ ಅಧ್ಯಯನಗಳು ತಿಳಿಸುತ್ತವೆ. ಇವರನ್ನು ಪರೀಕ್ಷಿಸಿದ ವೈದ್ಯರಿಗೆ ದೇಹದಲ್ಲಿ ಯಾವುದೇ ರೋಗ, ಕೊರತೆ ಕಂಡುಬರುವುದಿಲ್ಲ. ಎಲ್ಲಾ ಪರೀಕ್ಷಾ ವರದಿಗಳು (ರಕ್ತ, ಎಕ್ಸರೆ, ಇ.ಸಿ.ಜಿ., ಸ್ಕ್ಯಾನಿಂಗ್, ಎಂ.ಆರ್.ಐ. ಇತ್ಯಾದಿ) ನಾರ್ಮಲ್ ಆಗಿರುತ್ತವೆ. ಈ ರೋಗಗಳಿಗೆ ವೈದ್ಯರು ಒಂದಷ್ಟು ವಿಟಮಿನ್ ಮಾತ್ರೆಗಳು, ಟಾನಿಕ್‌ಗಳು, ನೋವು ನಿವಾರಕಗಳನ್ನು ಬರೆದು ಕೊಡುತ್ತಾರೆ. ಸಹಜವಾಗಿ ಈ ಔಷಧಿ-ಟಾನಿಕ್‌ಗಳಿಂದ ರೋಗಿಗಳಿಗೆ ವೃಥಾ ಖರ್ಚು ವಿನಾ ಬೇರಾವ ಪ್ರಯೋಜನವಿರುವುದಿಲ್ಲ. ಖಿನ್ನತೆ ರೋಗಿಗಳು, ಈ ಚಿಕಿತ್ಸೆ ವಿಫಲವಾದಾಗ ಕಂಗಾಲಾಗುತ್ತಾರೆ. ತಮ್ಮ ಗ್ರಹಚಾರ ಚೆನ್ನಾಗಿಲ್ಲ ಎಂತಲೋ, ಯಾರದ್ದೋ ಕೆಟ್ಟಕಣ್ಣು ಬಿದ್ದಿದೆ ಎಂತಲೋ ಯಾರೋ ಮಾಟ, ಮಂತ್ರ ಮಾಡಿದ್ದಾರೆ ಎಂತಲೋ, ಯಾರೋ ಮದ್ದು ಹಾಕಿದ್ದಾರೆ ಎಂತಲೋ ಯಾವುದೋ ಪಾಪ ಕರ್ಮಫಲ ಎಂತಲೋ ತರ್ಕಿಸಿ ಚಿಂತಿತರಾಗುತ್ತಾರೆ. ಜೋತಿಷಿ, ಮಂತ್ರವಾದಿ, ದೇವಸ್ಥಾನ, ಮಸೀದಿ, ದರ್ಗಾ, ಚರ್ಚುಗಳಿಗೆ ಹೋಗುತ್ತಾರೆ. ಪೂಜೆ, ಹರಕೆ, ಕಾಣಿಕೆ, ಹೋಮ, ಹವನ, ತಾಯಿತ, ಚೀಟಿ ಕಟ್ಟಿಸುತ್ತಾರೆ. ತಮ್ಮ ಹಣ-ಶ್ರಮ, ಸಮಯವನ್ನು ವ್ಯರ್ಥ ಮಾಡುತ್ತಾರೆ. ಇದು ತಪ್ಪಬೇಕು. ಖಿನ್ನತೆ ರೋಗ ಒಂದು ಮೆದುಳಿನ- ಮನಸಿನ ಕಾಯಿಲೆ. ಮೆದುಳಿನಲ್ಲಿ ಡೋಪಮಿನ್-ಸೆರೊಟೊನಿನ್ ನರವಾಹಕ ತಗ್ಗುವುದು, ದೇಹದಲ್ಲಿ ಥೈರಾಕ್ಸಿನ್ ರಸದೂತ ಕಡಿಮೆಯಾಗುವುದು, ಕಷ್ಟ- ನಷ್ಟ-ಸೋಲು, ಅಪಮಾನ-ನಿರಾಶೆಗಳನ್ನು ಎದುರಿಸಲು ವ್ಯಕ್ತಿ ವಿಫಲನಾಗುವುದೇ ಖಿನ್ನತೆಗೆ ಕಾರಣ. ಖಿನ್ನತೆ ವಾಸಿಯಾಗುವ ರೋಗ ಎಂದು ತಿಳಿಯುವ ಅಗತ್ಯವಿದೆ. ಇದನ್ನು ಎಲ್ಲರೂ ಗಮನಿಸಬೇಕು.

ಖಿನ್ನತೆ ರೋಗವಿದೆಯೆಂದು ಗುರುತಿಸಲು ಮತ್ತು ಅದರ ತೀವ್ರತೆಯನ್ನು ಅಳೆಯಲು ಈ 15 ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿ, ಪ್ರತಿ ಹೌದು ಉತ್ತರ ನಿಮಗೆ ಖಿನ್ನತೆಯಿದೆ ಎಂಬುದನ್ನು ತಿಳಿಸಿದರೆ ಹೌದುಗಳು ಹೆಚ್ಚಿದಷ್ಟು ಖಿನ್ನತೆ ಹೆಚ್ಚು ತೀವ್ರವಾಗಿದೆಯೆಂದು ನಮಗೆ ಗೊತ್ತಾಗುತ್ತದೆ.

ಕ್ರ.ಸಂ ಪ್ರಶ್ನೆ ಹೌದು ಇಲ್ಲ
1. ದಿನದ ಹೆಚ್ಚಿನ ಸಮಯದಲ್ಲಿ ನಿಮಗೆ ದುಃಖವಾಗುತ್ತದೆ.ಕಣ್ಣೆಲ್ಲಾ ನೀರು ತುಂಬಿ ಅಳು ವಂತಾಗುತ್ತದೆಯೆ?
2. ಹಸಿವು ಕಡಿಮೆಯಾಗಿ ಊಟ ರುಚಿಸುತ್ತಿಲ್ಲವೆ?
3. ನಿದ್ರೆ ಬರಲು ಕಷ್ಟ, ಮಧ್ಯೆ ಮಧ್ಯೆ ಎಚ್ಚರವಾಗುವುದು, ಸರಿಯಾಗಿ ನಿದ್ರೆ ಮಾಡಲಾಗುತಿಲ್ಲವೆ?
4. ಮೈಕೈ ನೋವು ಸುಸ್ತು-ಆಯಾಸ-ತಲೆನೋವು-ಎದೆ ನೋವಿದೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಎಲ್ಲವೂ ನಾರ್ಮಲ್ ಎಂದಿದೆಯಾ?

ಕ್ರಸಂ ಪ್ರಶ್ನೆ ಹೌದು ಇಲ್ಲ
5. ದಿನ ನಿತ್ಯದ ಚಟುವಟಿಕೆಗಳನ್ನು ಮಾಡಲು ಆಸಕ್ತಿ ಇಲ್ಲವೇ? ಎಂದಿನ ವೇಗದಲ್ಲಿ ಮಾಡಲಾಗುತ್ತಿಲ್ಲವೇ?
6. ಹೊರಗಡೆ ಹೋಗುವುದು ಬೇಡ, ಯಾರನ್ನೂ ಭೇಟಿ ಮಾಡುವುದು ಬೇಡ ಎಂದೆನಿಸುತ್ತದೆಯೇ? ಒಂಟಿಯಾಗಿರೋಣ ಎಂದೆನಿಸುತ್ತದೆಯೇ?
7. ನಿಮ್ಮ ಕೆಲಸ-ಕರ್ತವ್ಯಗಳನ್ನು ಮಾಡಲಾಗುತ್ತಿಲ್ಲ, ನಿಮ್ಮ ಶಕ್ತಿ ಸಾಮರ್ಥ್ಯ ಕುಗ್ಗಿದೆ ಎನಿಸಿದೆಯೇ?
8. ಮನರಂಜನಾ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಷ್ಟವಿಲ್ಲ. ಅವೇನೂ ಬೇಡ ಎನಿಸುತ್ತಿದೆಯೇ?
9. ಕುಟುಂಬದಲ್ಲಿ ಮತ್ತು ಹೊರಗಡೆ ನೀವು ಉಪಯುಕ್ತ ಪಾತ್ರ ವಹಿಸಲಾಗುತ್ತಿಲ್ಲಾ ಎನಿಸಿದೆಯೇ?
10. ನೀವೊಬ್ಬರು ನಿಯೋಜಕರು, ಬೆಲೆಯಿಲ್ಲ ದವರು ಎಂದು ಅನಿಸುತ್ತಿದೆಯೇ? ತಪ್ಪಿತಸ್ಥ ಭಾವನೆ ಕಾಡುತ್ತಿದೆಯೇ?
11. ವಿಷಯ-ಸಮಸ್ಯೆಯನ್ನು ವಿಶ್ಲೇಷಿಸುವುದು, ಪರಿಹಾರವನ್ನು ಆಲೋಚಿಸುವುದು, ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತಿದೆಯೇ?
12. ಹೊಸತನ್ನು ಕಲಿಯಲು ಕಷ್ಟವಾಗುತ್ತಿದೆಯೇ?

ಕ್ರಸಂ ಪ್ರಶ್ನೆ ಹೌದು ಇಲ್ಲ
13. ನೆನಪಿನ ಶಕ್ತಿ ಕಡಿಮೆಯಾಗಿ ಮರೆವು ಹೆಚ್ಚಾಗಿದೆಯೇ?
14. ಬದುಕು ಬೇಡ, ಜೀವನ ಮಾಡುವುದು ಕಷ್ಟ ಎಂದೆನಿಸುತ್ತಿದೆಯೇ?
15. ಸಾಯಬೇಕು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಲ್ಲಿಯಾದರೂ ದೂರ ಹೋಗಬೇಕು ಎಂದೆನಿಸಿದೆಯೇ?


ಖಿನ್ನತೆ ಕಾಯಿಲೆಯ ಅಪರೂಪದ ಮತ್ತು ಅಸಾಮಾನ್ಯ ಲಕ್ಷಣಗಳು:

  • ವಿಪರೀತ ಹಸಿವು. ಸದಾ ಏನನ್ನಾದರೂ ತಿನ್ನ ಬೇಕೆಂಬ ಆಸೆ. ಹೀಗಾಗಿ ತೂಕ ಹೆಚ್ಚಾಗುವುದು.
  • ಅತಿಯಾದ ನಿದ್ರೆ, ಹಗಲಿನಲ್ಲಿ ನಿದ್ರೆ.
  • ನಿದ್ರೆಯಲ್ಲಿ ನಡೆಯುವುದು.
  • ಎಲ್ಲರೂ ತನ್ನ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ, ಆಡಿಕೊಂಡು ನಗುತ್ತಿದ್ದಾರೆ ಎನಿಸುವುದು.
  • ಯಾರೋ ತನ್ನನ್ನು ಬೈದಹಾಗೆ, ಚುಚ್ಚಿ ಮಾತಾಡಿದ ಹಾಗೆ, ತನ್ನ ಹಿಂದಿನ ತಪ್ಪುಗಳನ್ನು ಎತ್ತಿ ಆಡಿದ ಹಾಗೆ ಭ್ರಮೆಯಾಗುವುದು.
  • ತನ್ನ ದೇಹದ ಒಳ ಅಂಗಾಂಗಗಳು ಕೆಲಸಮಾಡುತ್ತಿಲ್ಲ. ಕಾಣೆಯಾಗಿವೆ. ನಾಶವಾಗಿವೆ ಎನಿಸುವುದು.
  • ಒಂದು ಅವಧಿಯ ಎಲ್ಲ ಘಟನೆಗಳು, ಅನುಭವಗಳು ಮರೆತು ಹೋಗುವುದು. ತನ್ನ ಹೆಸರು, ಗುರುತು ನೆನಪಿಗೆ ಬಾರದಿರುವುದು.
  • ಉದ್ದೇಶವಿಲ್ಲದೆ ಅಪರಾಧ ಮಾಡುವುದು.
■ ■

ಮಕ್ಕಳಲ್ಲಿ ಖಿನ್ನತೆ ಕಾಯಿಲೆ[ಸಂಪಾದಿಸಿ]

ಮಕ್ಕಳು ಖಿನ್ನತೆ ಕಾಯಿಲೆಗೆ ಒಳಗಾಗುತ್ತಾರೆ. ತಂದೆ ತಾಯಿಯ ಅಗಲಿಕೆ, ಪ್ರೀತಿ, ಆರೈಕೆಗಳಲ್ಲಿ ಲೋಪಗಳು, ಪಕ್ಷಪಾತ, ತಿರಸ್ಕಾರ, ನಿರ್ಲಕ್ಷಗಳು, ಸಹೋದರ ಮಾತ್ಸಲ್ಯ, ಶಾಲೆ-ಶಿಕ್ಷಣದ ಸಮಸ್ಯೆಗಳು, ಕಲಿಕೆಯಲ್ಲಿ ಹಿಂದುಳಿಯುವಿಕೆ, ಪರೀಕ್ಷೆ-ಸ್ಪರ್ಧೆಯಲ್ಲಿ ವಿಫಲತೆ, ಸಹಪಾಠಿಗಳ ನಿರ್ಲಕ್ಷ ವಿವಿಧ ರೀತಿಯ ಶೋಷಣೆ, ದೌರ್ಜನ್ಯಗಳು, ಲೈಂಗಿಕ ಅಪಚಾರ ಖಿನ್ನತೆ ಕಾಯಿಲೆಗೆ ಕಾರಣವಾಗಬಹುದು.

ಲಕ್ಷಣಗಳು

  1. ಮಂಕುತನ, ಒಂಟಿಯಾಗಿರುವುದು, ಇತರ ಮಕ್ಕಳೊಂದಿಗೆ ಬೆರೆಯದಿರುವುದು, ಜನರಿಂದ ದೂರವಿರುವುದು, ಆಟಪಾಠಗಳಲ್ಲಿ ಭಾಗವಹಿಸದಿರುವುದು.
  2. ಆಹಾರ ಸೇವನೆ ಮಾಡದಿರುವುದು, ತಿನ್ನಬಾರದ ವಸ್ತುಗಳನ್ನು ತಿನ್ನುವುದು.
  3. ನಿದ್ರಾಹೀನತೆ, ಕೆಟ್ಟ ಕನಸುಗಳು ಬಿದ್ದು ಎಚ್ಚರವಾಗುವುದು, ನಿದ್ರಾ ತೊಂದರೆಗಳು/ ನಿದ್ರೆಯಲ್ಲಿ ಮಾತನಾಡುವುದು, ಭಾವೋದ್ರೇಕವನ್ನು ಪ್ರಕಟಿಸುವುದು, ನಿದ್ರೆಯಲ್ಲಿ ಮೂತ್ರ ವಿಸರ್ಜಿಸುವುದು (ಹಾಸಿಗೆ ಬಟ್ಟೆ ಒದ್ದೆಯಾಗುತ್ತದೆ) ನಿದ್ರಾ ನಡಿಗೆ, ಹಲ್ಲು ಮಸೆಯುವುದು ಇತ್ಯಾದಿ.
  4. ಕಲಿಕೆಯಲ್ಲಿ ಹಿಂದುಳಿಯುವುದು, ಕಲಿತದ್ದನ್ನು ಮರೆಯುವುದು, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದೆ ಕಡಿಮೆ ಅಂಕಗಳನ್ನು ಪಡೆಯುವುದು, ಫೇಲಾಗುವುದು, ಶಾಲೆಗೆ ಹೋಗಲು ನಿರಾಕರಿಸುವುದು.

  1. ಹವ್ಯಾಸಗಳು-ಆಟೋಟಗಳಲ್ಲಿ ಭಾಗವಹಿಸದಿರುವುದು.
  2. ಅಲ್ಪ ಕಾರಣಕ್ಕೆ ಹೆಚ್ಚು ಅತ್ತು ರಂಪಾಟ ಮಾಡುವುದು, ಹಠ ಮಾಡುವುದು.
  3. ಅವಿಧೇಯತನ-ತಂದೆ/ತಾಯಿ/ಶಿಕ್ಷಕರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದು ಕೊಳ್ಳುವುದು, ಮಾಡು ಎಂದರೆ ಮಾಡದೇ, ಮಾಡಬೇಡ ಎನ್ನುವುದನ್ನು ಮಾಡುವುದು.
  4. ಸಿಟ್ಟು, ಕೋಪ, ಆಕ್ರಮಣಶೀಲತೆಯನ್ನು ಪ್ರದರ್ಶಿಸುವುದು, ಜಗಳ ಕಾಯುವುದು.
  5. ಸುಳ್ಳು, ಕಳ್ಳತನ, ಇತರರಿಗೆ ತೊಂದರೆ ಹಿಂಸೆ ನೀಡಿ ಸಂತೋಷಪಡುವುದು, ವಸ್ತು ವಿಶೇಷಗಳನ್ನು ಹಾಳು ಮಾಡುವುದು. ನೀತಿ ನಿಯಮಗಳ ಭಂಗ ಮಾಡುವುದು, ಅಪರಾಧ ಮಾಡುವುದು.
  6. ಶಾಲೆಗೆ ಚಕ್ಕರ್ ಹಾಕುವುದು/ ಮನೆಬಿಟ್ಟುಹೋಗುವುದು.
  7. ಸಾಯುತ್ತೇನೆ ಎಂದು ಹೆದರಿಸುವುದು.
  8. ಆತ್ಮಹತ್ಯೆಗೆ ಪ್ರಯತ್ನಿಸುವುದು.
  9. ಅಸ್ಪಷ್ಟ ಮಾತು, ವಿಚಿತ್ರವಾದ ಮತ್ತು ತೀವ್ರವಾದ ದೈಹಿಕ ತೊಂದರೆಗಳಿವೆ ಎಂದು ಹೇಳುವುದು, ಅನಾರೋಗ್ಯದಿಂದ ಬಳಲುವುದು, ಹುಸಿ ತುರ್ತು ಸ್ಥಿತಿಯನ್ನು ಪ್ರಕಟಿಸುವುದು, ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬರುವುದು. ಆದರೆ ಚಿಕಿತ್ಸೆ ತೆಗೆದುಕೊಳ್ಳಲು ನಿರಾಕರಿಸುವುದು. ವೈದ್ಯರೊಂದಿಗೆ ಸಹಕರಿಸದಿರುವುದು.
  10. ಧೂಮಪಾನ, ಮದ್ಯಪಾನ, ಮಾದಕವಸ್ತು (ಗಾಂಜಾ, ಅಫೀಮು) ಸೇವಿಸುವುದು, ಪೋಲಿ ಹುಡುಗ, ಹುಡುಗಿಯರ ಗುಂಪಿಗೆ ಸೇರುವುದು.
  11. ಮನೆಯೊಳಗೇ ಇರುವುದು, ಹೊರಬರಲು ನಿರಾಕರಿಸುವುದು.

ಮಕ್ಕಳಲ್ಲಿ ಖಿನ್ನತೆಯನ್ನು ಗುರುತಿಸಿ ವೈದ್ಯರಲ್ಲಿಗೆ ಕರೆದೊಯ್ದಿರಿ.


ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಖಿನ್ನತೆ ರೋಗ ಹೆಚ್ಚು

ಪುರುಷಮಹಿಳೆ ಅನುಪಾತವು 1:2ರಷ್ಟಿದೆ. ಮಹಿಳೆಯರು ಹೆಚ್ಚು ಖಿನ್ನತೆಗೆ ಒಳಗಾಗಲು ಜೈವಿಕ-ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ನಾನ ರೀತಿಯ ಕಷ್ಟಕೋಟಲೆ, ಪಕ್ಷಪಾತ, ದೌರ್ಜನ್ಯಗಳಿಗೆ ಅನೇಕ ಮಹಿಳೆಯರು ತುತ್ತಾಗುತ್ತಾರೆ. ಜೊತೆಗೆ ಅವರಿಗೆ ಪ್ರೀತಿ, ಸಹಾನುಭೂತಿ ಆಸರೆ ನೀಡುವವರು ಕಡಿಮೆಯೆ. ನೋವುಗಳನ್ನು ನುಂಗಿ ಬದುಕುವ ಮಹಿಳೆ ಖಿನ್ನತೆಗೆ ಸುಲಭದಲ್ಲಿ ತುತ್ತಾಗುತ್ತಾಳೆ.

1. ಹಾರ್ಮೋನುಗಳ ವ್ಯತ್ಯಾಸದಿಂದ ಮಹಿಳೆಯರಲ್ಲಿ ಖಿನ್ನತೆ: ಋತುಚಕ್ರ, ಹೆರಿಗೆ, ಋತುಬಂಧದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ.

ಈಸ್ಟೋಜನ್ / ಪ್ರೊಜೆಸ್ಟೆರೋನ್ ಹಾರ್ಮೋನುಗಳು ಮಹಿಳೆಯ ಋತುಚಕ್ರವನ್ನು ನಿರ್ದೇಶಿಸುತ್ತವೆ. ಇವುಗಳ ಉತ್ಪಾದನೆ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಖಿನ್ನತೆ ಕಾಣಿಸಿಕೊಳ್ಳುವುದು ವಿಶೇಷ. ಮಾಸಿಕ ಋತುಸ್ರಾವದ ಆಸುಪಾಸಿನ ದಿನಗಳಲ್ಲಿ ಕಂಡು ಬರುವ PRE MENSTR UAL TENSION, ಹೆರಿಗೆಯ ನಂತರ ಕಂಡು ಬರುವ POSTPARTUM BLUES, ಹಾಗೂ ಋತುಬಂಧದ ಸಮಯದಲ್ಲಿ MENOPAUSE SYNDROME, ಇದಕ್ಕೆ ಉದಾಹರಣೆಗಳು.

ಋತುಸ್ರಾವದ ಅವಧಿಯ ನೋವು: ಋತುಸ್ರಾವ ಶುರುವಾಗುವ ಮೊದಲು ಮತ್ತು ಸ್ರಾವವಾಗುವ ಸ್ತ್ರೀ ಅಲ್ಪಮಟ್ಟದ ಖಿನ್ನತೆಗೆ ಹೋಗುವುದೇ ಆಕೆಯನ್ನು ಬಾಧಿಸುವ ತೊಂದರೆಗಳಿಗೆ ಕಾರಣ ಎನ್ನಲಾಗಿದೆ.


ಹೊಟ್ಟೆನೋವು, ತಲೆನೋವು, ಸೊಂಟದಲ್ಲಿ ನೋವು, ಆತಂಕ, ಬೇಸರ,

ಸಿಟ್ಟು, ಅನಾಸಕ್ತಿ, ಒಂಟಿತನದ ಜೀವನ, ಮಂಕುತನ, ನಿಷ್ಕ್ರಿಯತೆ ಸಾಮಾನ್ಯ ತೊಂದರೆಗಳು.

2. ಹೆರಿಗೆ ನಂತರದ ಖಿನ್ನತೆ: ಹೆರಿಗೆಯಾಗಿದೆ. ಆರೋಗ್ಯವಂತ ಮಗು ಹುಟ್ಟಿದೆ. ಗಂಡುಮಗು ಆಗಿದೆ. ಆದರೆ ತಾಯಿ ಖಿನ್ನತೆಗೆ ಒಳಗಾಗಬಹುದು, ಇನ್ನು ಹೆರಿಗೆ ಕಷ್ಟವಾಯಿತು, ಮಗು ಆರೋಗ್ಯವಾಗಿಲ್ಲ; ಅಂಗವೈಫಲ್ಯವಿದೆ, ಹೆಣ್ಣು ಮಗು, ಗಂಡ, ಅತ್ತೆಮನೆಯವರು ನೋಡಲು ಬಂದಿಲ್ಲ. ಸಮೀಪವಿದ್ದು ಆರೈಕೆ ಮಾಡುವವರಿಲ್ಲ. ಆಗ ಈ ಖಿನ್ನತೆ ಹೆಚ್ಚುತ್ತದೆ. ಬಾಣಂತಿ ತನ್ನ ಮತ್ತು ಮಗುವಿನ ಬೇಕು ಬೇಡಗಳನ್ನು ಗಮನಿಸದಿರಬಹುದು. ದುಃಖದಿಂದ ಕಣ್ಣೀರು ಹಾಕಬಹುದು. ನಾನೇಕೆ ಗರ್ಭಿಣಿಯಾದೆ? ಏಕೆ ಮಗುವನ್ನು ಹೆತ್ತೆ? ಹೆರಬಾರದಿತ್ತೆನಿಸಬಹುದು. ಈ ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಅಲ್ಪಮಟ್ಟದಿಂದ ತೀವ್ರಮಟ್ಟದವರೆಗೆ ಇರಬಹುದು.

3. ಋತುಬಂಧದ ಖಿನ್ನತೆ: ಸಾಕಷ್ಟು ಮಹಿಳೆಯರು ಋತುಬಂಧ ವಾಗುವ ಸುತ್ತಮುತ್ತಲಿನ ಅವಧಿಯಲ್ಲಿ ಹಲವಾರು ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗುತ್ತಾರೆ. ಈಸ್ಟೋಜನ್ ಪೊಜೆಸ್ಟರೋನ್ ಸ್ಥಗಿತಗೊಳ್ಳುವುದರ ಜೊತೆಗೆ ಅನೇಕ ಮನೋಸಾಮಾಜಿಕ ಅಂಶಗಳು ಖಿನ್ನತೆಗೆ ಕಾರಣ ವಾಗುತ್ತವೆ. ವಯಸ್ಸಾಯಿತು ಮೊದಲಿನ ದೈಹಿಕ ಸೌಂದರ್ಯವಿಲ್ಲ, ಆಕರ್ಷಣೆಯಿಲ್ಲ, ಸ್ತನಗಳು ಜೋಲು ಬಿದ್ದಿವೆ. ಲೈಂಗಿಕ ಆಸಕ್ತಿ ಕಡಿಮೆ ಯಾಗಿದೆ. ಸಂಭೋಗ ಕಷ್ಟವಾಗುತ್ತಿದೆ. (ಯೋನಿ ರಸ ಉತ್ಪತ್ತಿಯಾಗದೆ ಯೋನಿ ಒಣಗಿದಂತಿದ್ದು ಸಂಭೋಗ ನೋವುಂಟು ಮಾಡುತ್ತದೆ.) ಆದರೆ ಗಂಡನ ಲೈಂಗಿಕ ಆಸಕ್ತಿ ಮೊದಲಿನಂತೆ ಇದೆ. ಹೀಗಾಗಿ ಆತ ತನ್ನಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳಬಹುದು. ಅಥವಾ ಆತನಿಗೆ ಹೆಂಡತಿಯಾಗಿ ಲೈಂಗಿಕ ಸುಖವನ್ನು ನೀಡುವುದರಲ್ಲಿ ನಾನು ವಿಫಲಳಾಗುತ್ತಿದ್ದೇನೆ. ಬೆಳೆದ ಮಕ್ಕಳು ತನ್ನಿಂದ ದೂರವಾಗುತ್ತಿದ್ದಾರೆ. ತಮ್ಮದೇ ಆದ ಪ್ರಪಂಚದಲ್ಲಿದ್ದು ತನ್ನನ್ನು ಮರೆಯುತ್ತಿದ್ದಾರೆ. ಗಂಡು ಮಕ್ಕಳಿಗೆ ತಾನು ಬೇಡವಾಗುತ್ತಿದ್ದೇನೆ.


ತಾವಿನ್ನೂ ಸ್ವಂತ ಮನೆ ಮಾಡಿಕೊಂಡಿಲ್ಲ. ಅಕ್ಕತಂಗಿಯರು ತನಗಿಂತ

ಹೆಚ್ಚು ಅನುಕೂಲವಾಗಿದ್ದಾರೆ. ಶ್ರೀಮಂತರಾಗಿದ್ದಾರೆ. ತವರುಮನೆಯ ಸಪೋರ್ಟ್ ಕಡಿಮೆಯಾಗಿದೆ. ಅಣ್ಣ ಅತ್ತಿಗೆ ಈಗ ಹೆಚ್ಚು ಮಾತಾಡಿಸುತ್ತಿಲ್ಲ. ನೋಡಲು ಬರುವುದಿಲ್ಲ. ತಾಯಿಗೆ ವಯಸ್ಸಾಗಿದೆ. ಅಷ್ಟು ಸಂತೋಷವಾಗಿಲ್ಲ. ಮಗ, ಸೊಸೆ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗೆ ಹತ್ತೆಂಟು ಕಾರಣಗಳಿಂದ ಖಿನ್ನತೆ ಬರುತ್ತದೆ. ಜೊತೆಗೆ ಹಿಂದೆ ಮಾಡಿದ ತಪ್ಪುಗಳು ಆಗಿಹೋದ ಕಹಿ ಘಟನೆ-ಅನುಭವಗಳಿಂದ ಖಿನ್ನತೆ ಹೆಚ್ಚಾಗುತ್ತದೆ. ದೇಹದಲ್ಲಿ ನೋವು, ಸುಸ್ತು, ನಿಶ್ಯಕ್ತಿ, ಮೊದಲಿನ ಚುರುಕುತನವಿಲ್ಲ. ಕೆಲಸಗಲ್ಲಿ ವೇಗ ಕಡಿಮೆಯಾಗಿದೆ. ಮಾಮೂಲಿನ ಕೆಲಸ ಮಾಡಲು ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಟೈಮಿಗೆ ಸರಿಯಾಗಿ ಗಂಡ-ಮಕ್ಕಳಿಗೆ ಊಟ-ತಿಂಡಿ ಮಾಡಿಕೊಡಲಾಗುತ್ತಿಲ್ಲ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿಲ್ಲ. ಕಾಡುವ ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಥೈರಾಯ್ಡ್, ಕೀಲುಬೇನೆಗಳು ಖಿನ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಉದ್ಯೋಗಸ್ಥ ಮಹಿಳೆಯಲ್ಲಿ ಖಿನ್ನತೆ[ಸಂಪಾದಿಸಿ]

ಗೃಹಕೃತ್ಯಗಳ ಜೊತೆಗೆ, ಹೊರಗಡೆ ಹೋಗಿ ಉದ್ಯೋಗ ಮಾಡಿ, ದುಡಿಯುವ ಹೆಂಗಸರಲ್ಲಿ ಒತ್ತಡ ಹೆಚ್ಚು ಉದ್ಯೋಗದ ಜವಾಬ್ದಾರಿಗಳು, ಹೆಚ್ಚು ಕೆಲಸ-ಕಡಿಮೆ ಸಂಬಳ, ಲಿಂಗತಾರತಮ್ಯ ನೇರ ಮತ್ತು ಅಪರೋಕ್ಷ ಲೈಂಗಿಕ ಕಿರುಕುಳಗಳು, ಪುರುಷ ಸಹೋದ್ಯೋಗಿಗಳ ಅಸಹಕಾರ ಮತ್ತು ಕಿರಿಕಿರಿ, ಗಂಡ, ಅತ್ತೆ ಮಾವಂದಿರ ದಬ್ಬಾಳಿಕೆ, ಅನುಮಾನಗಳು, ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವುದು. ಅಭಿಪ್ರಾಯ ಸ್ವಾತಂತ್ರ ವಿಲ್ಲದಿರುವುದು, ದೈಹಿಕ ಅನಾರೋಗ್ಯ-ಈ ಎಲ್ಲವೂ ಸೇರಿ ಖಿನ್ನತೆಯನ್ನುಂಟು ಮಾಡಬಲ್ಲವು. ಪ್ರತಿಯೊಂದು ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಆಪ್ತ ಸಮಾಲೋಚನೆಯ ಸೌಲಭ್ಯ ಇರಬೇಕು.

■ ■

ಇಳಿವಯಸ್ಸಿನಲ್ಲಿ ಖಿನ್ನತೆ ಕಾಯಿಲೆ

ಅರವತ್ತು ವರ್ಷ ವಯಸ್ಸಿನ ಅನಂತರ ಶೇಕಡಾ 30ರಷ್ಟು ವೃದ್ಧರು/ 75 ವರ್ಷ ವಯಸ್ಸಿನ ನಂತರ ಶೇಕಡಾ 50ರಷ್ಟು ವೃದ್ಧರು ಖಿನ್ನತೆಗೆ ಒಳಗಾಗುತ್ತಾರೆಂದು ಸಮೀಕ್ಷೆಗಳು ತಿಳಿಸುತ್ತವೆ. ವೃದ್ಧಾಪ್ಯದಲ್ಲಿ ಶರೀರ ಮತ್ತು ಮನಸ್ಸಿನಲ್ಲಾಗುವ ಬದಲಾವಣೆಗಳು, ಸಾಮಾಜಿಕ ಅಂಶಗಳು, ಕಾಡುವ ಅನಾರೋಗ್ಯ, ಆರ್ಥಿಕ ಪರಾವಲಂಬನೆ, ಮನೆಯವರ ನಿರ್ಲಕ್ಷ್ಯ, ಸಾವು, ಪಾಪಪ್ರಜ್ಞೆ ವೃದ್ಧರ ಖಿನ್ನತೆಗೆ ಕಾರಣವಾಗುತ್ತವೆ.

ವೃದ್ಧಾಪ್ಯದಲ್ಲಿ ಹಲವು ಕಾಯಿಲೆಗಳು, ಶಾರೀರಕ ಮತ್ತು ಮಾನಸಿಕ ದುರ್ಬಲತೆಗಳು ಕಾಡುತ್ತವೆ. ಜೀವನಸಂಗಾತಿ ಕಾಯಿಲೆಗಳಾದ ಡಯಾಬಿಟೀಸ್, ಬಿಪಿ, ಕೀಲುಬೇನೆ, ಕ್ಯಾನ್ಸರ್, ಹೃದ್ರೋಗಗಳು, ಲಿವರ್, ಕಿಡ್ನಿ ವೈಫಲ್ಯತೆ, ಮೂಳೆ ಜಳ್ಳಾಗುವುದು-ಮುರಿಯುವುದು ವ್ಯಕ್ತಿಯ ಜೀವವನ್ನು ಹಿಂಡುತ್ತವೆ. ಅನಾರೋಗ್ಯ ಪೀಡಿತರಾದ ಇಳಿವಯಸ್ಸಿನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಔಷಧೋಪಚಾರ ಮಾಡಿಸಲು ತಡ ಮಾಡುತ್ತಾರೆ. ತನ್ನಿಂದಾಗಿ ಅವರಿಗೆ ಖರ್ಚು ಹೆಚ್ಚು ತನ್ನ ಪರಾವಲಂಬನೆ ಹೆಚ್ಚುತ್ತಿದೆ. ಡಯಾಬಿಟೀಸ್, ಬಿ.ಪಿ. ಕಂಟ್ರೋಲ್‌ಗೆ ಬರುತ್ತಿಲ್ಲ. ವಿಷಮ ಪರಿಣಾಮಗಳಿಂದಾಗಿ ದೇಹ ದುರ್ಬಲವಾಗಿದೆ. ಎಲ್ಲಿ ಲಕ್ವಾ ಹೊಡೆಯು ತ್ತದೋ, ಹೃದಯಾಘಾತವಾಗುತ್ತದೆಯೋ ಎಂಬ ಆತಂಕ, ಎಂತಹ ಸಾವು ಬರುತ್ತದೋ, ಆಸ್ಪತ್ರೆಯಲ್ಲಿ, ಐಸಿಯುನಲ್ಲಿ, ಮೂಗು ಬಾಯಿಗೆ ಕೈಗೆ ಟ್ಯೂಬ್ ಹಾಕಿಸಿಕೊಂಡು ಬಿದ್ದಿರಬೇಕಾಗುತ್ತದೋ, ಏನೋ, ಸರಿಯಾದ ಚಿಕಿತ್ಸೆ ಸಿಗುತ್ತದೋ, ಇಲ್ಲವೋ, ಸತ್ತಮೇಲೆ ಸ್ವರ್ಗವೋ, ನರಕವೋ, ಪುನರ್ಜನ್ಮವೋ ಗೊತ್ತಿಲ್ಲ. ಈ ಎಲ್ಲಾ ಅಂಶಗಳು ವೃದ್ಧರ ಖಿನ್ನತೆಯನ್ನು ಹೆಚ್ಚಿಸುತ್ತವೆ. ಖಿನ್ನತೆಯಿಂದ ಅವರ ರೋಗಲಕ್ಷಣಗಳು ಉಲ್ಬಣಿಸುತ್ತವೆ. ಅಂಗಾಂಗ ದುರ್ಬಲತೆ ಹೆಚ್ಚುತ್ತದೆ. ಇದರಿಂದ ಮತ್ತಷ್ಟು ಖಿನ್ನತೆ, ಇದೊಂದು ವಿಷವರ್ತುಲವಾಗುತ್ತದೆ. ವೃದ್ಧಾಶ್ರಮಗಳಲ್ಲಿರುವ ವೃದ್ಧರಲ್ಲಿ, ಆಸ್ಪತ್ರೆಗಳಲ್ಲಿ ದೀರ್ಘಕಾಲ ಇರಬೇಕಾದವರಲ್ಲಿ ಖಿನ್ನತೆ ತೀವ್ರವಾಗಿರುತ್ತದೆ.


  • ಪ್ರತಿಕ್ರಿಯಾ ಖಿನ್ನತೆ (REACTIVE DEPRESSION)
  • ಚಿತ್ತ ಚಂಚಲತೆಯ ಖಿನ್ನತೆ(NEUROTIC DEPRESSION)
  • ಒಳಜನ್ಯ ಖಿನ್ನತೆ(ENDOGENOUS DEPRESSION)
  • ಚಿತ್ತವಿಕಲತೆಯ ಖಿನ್ನತೆ(PSYCHOTIC DEPRESSION)
  • ದೈಹಿಕ ಕಾಯಿಲೆಯ ಮುಖವಾಡ ಧರಿಸಿದ ಖಿನ್ನತೆ (MASKED DEPRESSION)
  • ದೀರ್ಘಾವದಿಯ ಖಿನ್ನತೆ (CHRONIC DEPRESSION)
  • ಪುನರಾವರ್ತನೆಗೊಳ್ಳುವ ಖಿನ್ನತೆ (RECURRENT DEPRESSION)
  • ಮೇನಿಯಾ ಖಿನ್ನತೆಯ ಕಾಯಿಲೆ (BPAD-BIPOLAR AFFECTIVE DISORDER)


ಪ್ರತಿಕ್ರಿಯಾ ಖಿನ್ನತೆ (REACTIVE DEPRESSION) (ಸಂಕ್ಷಿಪ್ತ/ಅಲ್ಪಾವಧಿಯ ಖಿನ್ನತಾ ಪ್ರತಿಕ್ರಿಯೆ) BRIEF DEPRESSIVE REACTION

ಯಾವುದೇ ಅಹಿತಕಾರಿ 'ಮಾನಸಿಕ ಒತ್ತಡ' ಅಥವಾ ಆಘಾತಕಾರಿ ಘಟನೆಗೆ ಪ್ರತಿಕ್ರಿಯಾ ರೂಪವಾಗಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಉದಾ:


ಸಾವು, ಅಗಲಿಕೆ, ಅಪಘಾತ, ದುರಂತ, ಪ್ರಾಣಾಂತಕವಾದ ಕಾಯಿಲೆ

ಇದೆಯೆಂದು ಗೊತ್ತಾಗುವುದು, ಶಸ್ತ್ರ ಚಿಕಿತ್ಸೆ, ಹಣ ಕಳೆದುಕೊಳ್ಳುವುದು ಬೆಲೆ ಬಾಳುವ ವಸ್ತು ಮತ್ತು ಮುಖ್ಯ ಕಾಗದ ಪತ್ರಗಳನ್ನು ಕಳೆದುಕೊಳ್ಳುವುದು, ಲಾಭ ಅನುಕೂಲತೆಯ ಅವಕಾಶ ಕೈ ತಪ್ಪಿಹೋಗುವುದು, ಮಿಥ್ಯಾ ರೋಪ, ಅವಮಾನ, ಪೊಲೀಸ್ ಠಾಣೆಗೆ ಹೋಗಬೇಕಾಗಿ ಬರುವುದು, ನ್ಯಾಯಾಲಯ ದಲ್ಲಿ ಪ್ರಕರಣ ದಾಖಲಾಗುವುದು, ಮೋಸ, ವಂಚನೆಗೆ ತುತ್ತಾಗುವುದು ಇತ್ಯಾದಿ, ಪ್ರಚೋದನೆ ಘಟನೆಯಾದ ಕೂಡಲೆ ಅಥವಾ ಒಂದು ದಿನದೊಳಗಾಗಿ ಶುರುವಾಗುವ ಖಿನ್ನತೆ ಸಾಮಾನ್ಯವಾಗಿ ಒಂದು ತಿಂಗಳಿದ್ದು ಕಡಿಮೆಯಾಗುತ್ತದೆ. ಖಿನ್ನತೆ ತೀವ್ರವಾಗಿದ್ದಾಗ ವ್ಯಕ್ತಿ ಸಂಪೂರ್ಣ ನಿಷ್ಕ್ರಿಯನಾಗಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು.

PROLONGED DEPRESSIVE REACTION

ವಿಸ್ತರಿಸಿದ ಖಿನ್ನತೆ: ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯ ಕಡಿಮೆ ಇದ್ದರೆ, ಬೇಕಾದ ಜೀವನ ಕೌಶಲಗಳಿಲ್ಲದೇ ಹೋದರೆ, ಆಸರೆ ನೀಡುವ, ಸಾಂತ್ವನ ಹೇಳುವ ಜನ ಇಲ್ಲದೇ ಹೋದರೆ ಖಿನ್ನತೆ ಒಂದು ತಿಂಗಳಿನ ಅನಂತರವೂ ಮುಂದುವರಿಯಬಹುದು. ಚಿತ್ತ ಚಂಚಲತೆಯ ಖಿನ್ನತೆಯಾಗಿ ಉಳಿಯಬಹುದು. ವ್ಯಕ್ತಿ ಖಿನ್ನತೆಗೆ ಕಾರಣವಾದ ಅಂಶ ಘಟನೆಯನ್ನು ಮತ್ತೆ ಮತ್ತೆ ಮೆಲಕು ಹಾಕುತ್ತಾನೆ.

MIXED ANXIETY AND DEPRESSIVE REACTION

ಖಿನ್ನತೆಯ ಜೊತೆ ಜೊತೆಗೆ ಆತಂಕ, ಭಯದ ಲಕ್ಷಣಗಳೂ ಇರಬಹುದು. ವೇಗದ ಉಸಿರಾಟ ಅಥವಾ ಉಸಿರಾಡಲು ತೊಂದರೆ, ನಿಮಿಷಕ್ಕೆ 80ರ ಮೇಲೆ ಹೋಗುವ ಹೃದಯ ಬಡಿತ, ಬೆವರು, ಸ್ನಾಯುಗಳ ಬಿಗಿತ, ನಡುಕ, ಪದೇ ಪದೇ ಮಲ, ಮೂತ್ರ ವಿಸರ್ಜಿಸುವ ಅಗತ್ಯ, ಏಕಾಗ್ರತೆಯ ಕೊರತೆ, ಗೊಂದಲ, ಮತ್ತಷ್ಟು ಕಷ್ಟ ನಷ್ಟಗಳಾಗಬಹುದೆಂಬ


ದಿಗಿಲು, ತನ್ನ ಬಗ್ಗೆ ಕೀಳರಿಮೆ, ಮಾನಸಿಕ ಚಡಪಡಿಕೆ ಇತ್ಯಾದಿ ಭಯದ

ಲಕ್ಷಣಗಳು ಸೇರಿಕೊಳ್ಳುತ್ತವೆ. ವ್ಯಕ್ತಿಯ ನೆಮ್ಮದಿ ಕದಡುತ್ತದೆ.

ಚಿತ್ತ ಚಂಚಲತೆಯ ಖಿನ್ನತೆ
NEUROTIC DEPRESSION

ನಮ್ಮ ದೇಶದಲ್ಲಿ ಈ ಬಗೆಯ ಖಿನ್ನತೆಯಲ್ಲಿ ಅಸ್ಪಷ್ಟ ಮತ್ತು ಅನೇಕ ದೈಹಿಕ ರೋಗ ಲಕ್ಷಣಗಳಿಂದ ವ್ಯಕ್ತಿ ಬಳಲುತ್ತಾನೆ/ಳೆ. ಸಾಮಾನ್ಯ ವೈದ್ಯರು ಆಸ್ಪತ್ರೆಗೆ ಹೋಗಿ ನನ್ನ ಆರೋಗ್ಯ ಸರಿಯಿಲ್ಲ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಿ ಎಂದು ಹೇಳುತ್ತಾರೆ. ಬೇಕಾದ ಬೇಡವಾದ ಎಲ್ಲಾ ದೈಹಿಕ ಪರೀಕ್ಷೆಗಳನ್ನು (ರಕ್ತ, ಮೂತ್ರ, ಎಕ್ಸರೆ, ಇಸಿಜಿ, ಸ್ಕ್ಯಾನಿಂಗ್ ಇತ್ಯಾದಿ) ಮಾಡಿಸಲು ಒತ್ತಾಯಿಸುತ್ತಾರೆ. ಎಲ್ಲಾ ರಿಪೋರ್ಟುಗಳು ನಾರ್ಮಲ್ ಎಂದಾಗ, ವೈದ್ಯರು, ರೋಗಿಗಳು ಮತ್ತು ಮನೆಯವರು ಆಶ್ಚರ್ಯಪಡುತ್ತಾರೆ. ಎಲ್ಲಾ ನಾರ್ಮಲ್ ಇರಬೇಕಾದರೆ ರೋಗಿ ನಾಟಕ ಮಾಡುತ್ತಿದ್ದಾನೆ/ಳೆ ಅಥವಾ ಬೇಕಂತಲೇ ರೋಗವಿದೆಯೆಂದು ಸುಳ್ಳು ಹೇಳುತ್ತಿದ್ದಾನೆ/ಳೆ ಎಂದು ಮನೆಯವರು ಹೇಳುವಂತಾಗುತ್ತದೆ. ಅಥವಾ ರೋಗಿಯ ರೋಗಲಕ್ಷಣಗಳಿಗೆ ಮಾಟ, ಮಂತ್ರ, ಮದ್ದೀಡು, ದುಷ್ಠ ಶಕ್ತಿಗಳ ಉಪಟಳ, ದೈವದ ಶಾಪ ಎಂದು ನಿರ್ಧರಿಸಿ, ದೇವಸ್ಥಾನ, ಮಸೀದಿ, ಚರ್ಚುಗಳು, ಮಂತ್ರವಾದಿಗಳು. ಜೋತಿಷ್ಯರತ್ತ ಹೋಗುತ್ತಾರೆ. ಯೋಗ-ಧ್ಯಾನ, ಪ್ರಾಣಾಯಾಮ, ನ್ಯಾಚುರೋಪತಿ ಇತ್ಯಾದಿ ಪರಾಯ ಚಿಕಿತ್ಸಾ ಪದ್ಧತಿಗಳ ಬಾಗಿಲು ತಟ್ಟುತ್ತಾರೆ. ಶಾರೀರಕ ರೋಗಲಕ್ಷಣಗಳ ಜೊತೆಗೆ ಬೇಸರ, ದುಃಖ, ಅಸಹಾಯಕತೆ, ನಿರಾಸೆ, ನಿರುತ್ಸಾಹ, ಜಿಗುಪ್ಪೆ, ಹಸಿವು, ನೀರಡಿಕೆ, ನಿದ್ದೆ, ಮೈಥುನದ ತೊಂದರೆಗಳಿಂದಲೂ ಬಳಲುತ್ತಾರೆ. ಚಿತ್ತಚಂಚಲತೆಯ ಖಿನ್ನತೆ ಹಲವಾರು ತಿಂಗಳುಗಳಿಂದ ಹಿಡಿದು ಹಲವಾರು ವರ್ಷಗಳವರೆಗೆ ಮುಂದುವರೆಯುತ್ತದೆ. ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಖಿನ್ನತೆಗೆ 'ಡಿಸ್ತೈಮಿಯಾ' (DYSHTHYMIA) ಎಂದು ಕರೆಯುತ್ತಾರೆ.


ಚಿತ್ತ ಚಂಚಲತೆಯ ಖಿನ್ನತೆ ಹೆಂಗಸರಲ್ಲಿ, ಒಂಟಿಯಾಗಿ

ಜೀವಿಸುವವರಲ್ಲಿ, ಮೇಲಿಂದ ಮೇಲೆ ಕಷ್ಟ ಸಮಸ್ಯೆಗಳಿಗೆ ಒಳಗಾದವರಲ್ಲಿ ಕೀಳರಿಮೆ ಹೆಚ್ಚಿರುವವರಲ್ಲಿ, ದೀರ್ಘಕಾಲದ ಅನಾರೋಗ್ಯ ಪೀಡಿತರಲ್ಲಿ, ಇಳಿವಯಸ್ಸಿನವರಲ್ಲಿ, ಮನೆಯವರ ನಿರ್ಲಕ್ಷ್ಯಕ್ಕೆ ಒಳಗಾದವರಲ್ಲಿ, ದೌರ್ಜನ್ಯಕ್ಕೆ ಒಳಗಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಒಳಜನ್ಯ ಖಿನ್ನತೆ (ENDOGENUOS DEPRESSION)

ಇದು ಶರೀರದೊಳಗೆ ಮೆದುಳಿನಲ್ಲೇ ಉತ್ಪತ್ತಿಯಾಗುತ್ತದೆ. ನರವಾಹಕಗಳಾದ ಡೋಪಮಿನ್ /ಸೆರೊಟೊನಿನ್ ಕಡಿಮೆಯಿರುವುದು, 'ಥೈರಾಕ್ಸಿನ್' ಹಾರೋನ್ ಕಡಿಮೆ ಇರುವುದು ಈ ಬಗೆಯ ಖಿನ್ನತೆಗೆ ಕಾರಣವಾಗುತ್ತದೆ. ಒಳಜನ್ಯ ಖಿನ್ನತೆ ಸಾಮಾನ್ಯವಾಗಿ 30 ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತದೆ. ಮಧ್ಯ ವಯಸ್ಕರಲ್ಲಿ, ಸ್ತ್ರೀಯರಲ್ಲಿ ಹೆಚ್ಚು. ಮುಟ್ಟು ನಿಲ್ಲುವ ಅವಧಿಯಲ್ಲಿ (ಮೆನೋಪಾಸ್-ಋತುಬಂಧ) ಒಳಜನ್ಯ ಖಿನ್ನತೆ ಕಾಣಿಸಿಕೊಳ್ಳಬಹುದು. ಇಳಿವಯಸ್ಸಿನಲ್ಲಿ ಚಿತ್ತ ಚಂಚಲತೆಯ ಖಿನ್ನತೆ ಜೊತೆಜೊತೆಗೆ ಒಳಜನ್ಯ ಖಿನ್ನತೆಯೂ ಇರಬಹುದು-ಆಗ ಇದನ್ನು DOUBLE DEPRESSION ಎನ್ನುತ್ತಾರೆ.

ಹೊರಗಿನ ಯಾವ ಕಾರಣ, ಒತ್ತಡ, ಸಮಸ್ಯೆಗಳಿಲ್ಲದ, ಖಿನ್ನರಾಗಿರುವ ವ್ಯಕ್ತಿ ಮನೆಯವರ ಪಾಲಿಗೆ ಒಗಟಾಗುತ್ತಾನೆ/ಳೆ. ಒಳ್ಳೆಯ ಮನೆ, ಕುಟುಂಬ, ಹಣದ ಕೊರತೆಯಿಲ್ಲ, ಮಕ್ಕಳೆಲ್ಲಾ ಚೆನ್ನಾಗಿದ್ದಾರೆ. ಯಾವುದಕ್ಕೂ ಕೊರತೆಯಿಲ್ಲಾ, ಇವನು/ಳು ಏಕೆ ಖಿನ್ನನಾಗಿದ್ದಾನೆ/ಳೆ ಡಾಕ್ಟರೇ ಎಂದು ಜನ ಕೇಳುವಂತಾಗುತ್ತದೆ. ಮದ್ದು, ಮಾಟ, ಮಂತ್ರ, ಜಾತಕ ಫಲ, ಗ್ರಹಗತಿ, ಗ್ರಹಚಾರ, ಕೆಟ್ಟಕಣ್ಣು ಎಂದೆಲ್ಲಾ ಯೋಚಿಸಿ ಆ ದಿಸೆಯಲ್ಲಿ ಪರಿಹಾರಕ್ಕೂ ಹಣ, ಶ್ರಮವನ್ನು ವ್ಯಯ ಮಾಡುತ್ತಾರೆ. ಸರಿಯಾದ ಪ್ರತಿಫಲವಿಲ್ಲದೆ ಕಂಗಾಲಾಗುತ್ತಾರೆ. ಒಳಜನ್ಯ ಖಿನ್ನತೆಗೂ ಹೊರಜನ್ಯ ಖಿನ್ನತೆಗೂ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ:


ಒಳಜನ್ಯ ಖಿನ್ನತೆ ಹೊರಜನ್ಯ ಚಿತ್ತಚಂಚಲತೆಯ ಖಿನ್ನತೆ
ರೋಗಿಗಳಿಗೆ ಒಂಟಿಯಾಗಿ ಇರಲು ಇಷ್ಟ. ಜನರ ಜೊತೆಯಲ್ಲಿರಲು ಇಷ್ಟ.
ಪರಿಸರದ ಗುಣಮಟ್ಟವು ರೋಗಿಯ ಮೇಲೆ ಯಾವ ಪರಿಣಾಮವೂ ಬೀರದು ಪ್ರಚೋದಕ, ಸಂತೋಷ ದಾಯಕ ಪರಿಸರದಿಂದ ವ್ಯಕ್ತಿ ಸ್ವಲ್ಪ ಗೆಲುವಾಗಿರುತ್ತಾನೆ.
ಖಿನ್ನತೆ ಬೆಳಿಗ್ಗೆ ಹೆಚ್ಚಾಗಿರುತ್ತದೆ. ಖಿನ್ನತೆ ಸಂಜೆ-ರಾತ್ರಿಗೆ ಹೆಚ್ಚಾಗುತ್ತದೆ.
ಬೆಳಗಿನ ಜಾವಕ್ಕೆ ಎಚ್ಚರವಾಗಿ ಮತ್ತೆ ನಿದ್ದೆ ಬರುವುದಿಲ್ಲ. (LATE INSOMNIA) ನಿದ್ರೆ ಬರಲು ಕಷ್ಟ ಅಥವಾ ಮಧ್ಯೆ ಮಧ್ಯೆ ಎಚ್ಚರ (INITIAL MIDDLE INSOMNIA)
ತೂಕ ಕಡಿಮೆಯಾಗುತ್ತದೆ. ತೂಕ ಹೆಚ್ಚಬಹುದು.
ನಿರಾಶೆಯ ತೀವ್ರತೆ ಹೆಚ್ಚು. ಕಡಿಮೆ ನಿರಾಶೆ.
ಹೆಚ್ಚು ಅಸಹಾಯಕತೆ, ಇವರ ಬೇಕು ಬೇಡಗಳನ್ನು ಇತರರು ಗಮನಿಸಬೇಕು. ಪರಾವಲಂಬನೆ ಹೆಚ್ಚು. ತನ್ನ ಬೇಕು ಬೇಡಗಳನ್ನು ರೋಗಿ ಗಮನಿಸುತ್ತಾನೆ.
ಚಲನೆ ನಿಧಾನ. ಚಲನೆ ಮಾಮುಲು.
ಅನಾಸಕ್ತಿ ತೀವ್ರ ಕಡಿಮೆ/ಸಾಧಾರಣ ಅನಾಸಕ್ತಿ
ಆತ್ಮಹತ್ಯೆಗೆ ತೀವ್ರ ಬಗೆಯ ವಿಧಾನಗಳ ಆಯ್ಕೆ (ನೇಣು, ಆಸಿಡ್, ಪಿಸ್ತೂಲು, ಅತೀ ಎತ್ತರದ ಕಟ್ಟಡದಿಂದ ಕೆಳಕ್ಕೆ ಹಾರುವುದು). ಕಡಿಮೆ/ಮಧ್ಯಮ ಮಟ್ಟದ ವಿಧಾನಗಳ ಆಯ್ಕೆ.
ಪಾಪಪ್ರಜ್ಞೆ ಹೆಚ್ಚು. ಪಾಪಪ್ರಜ್ಞೆ ಕಡಿಮೆ.
ಚಿತ್ತವಿಕಲತೆ ಲಕ್ಷಣಗಳು (ಭ್ರಮೆ) ಭ್ರಮೆಯಿಲ್ಲ.

ಒಳಜನ್ಯ ಖಿನ್ನತೆ ಸಾಮಾನ್ಯವಾಗಿ ಮೂರರಿಂದ ಒಂದು

ವರ್ಷದವರೆಗೆ ಉಳಿಯಬಹುದು. ಸರಾಸರಿ ಐದರಿಂದ ಆರು ತಿಂಗಳು ಇದ್ದು, ನಂತರ ಕಡಿಮೆಯಾಗಿ ಮತ್ತೆ ಕೆಲ ಕಾಲದ ನಂತರ ಬರಬಹುದು. ಆಗ ಅದನ್ನು RECURRENT DEPRESSION ಎಂದು ಕರೆಯಲಾಗುತ್ತದೆ. ಇದು ವರ್ಷಕ್ಕೊಮ್ಮೆ ಎರಡು ಮೂರು ವರ್ಷಗಳಿಗೆಗೊಮ್ಮೆ ಅಥವಾ ವರ್ಷದಲ್ಲಿ ಹಲವು ಬಾರಿ ಕಾಣಿಸಿಕೊಳ್ಳಬಹುದು.

ಮೇನಿಯಾ ಖಿನ್ನತೆ ಕಾಯಿಲೆ: ಖಿನ್ನತೆ ಒಂದು ಅವಧಿಯಲ್ಲಿ ಮತ್ತೊಂದು ಅವಧಿಯಲ್ಲಿ ಮೇನಿಯಾ (ಅತೀ ಮಾತು/ಚಟುವಟಿಕೆ, ವಿಪರೀತ ಸಂತೋಷ, ಕೋಪ, ಹಿಡಿತವಿಲ್ಲದೆ ಹಣ ಖರ್ಚು ಮಾಡುವುದು, ದೊಡ್ಡ ದೊಡ್ಡ ಯೋಜನೆ ಹಾಕುವುದು, ತಾನೊಬ್ಬ ಅತೀ ಗಣ್ಯ ವ್ಯಕ್ತಿ, ಅಪಾರ ಶಕ್ತಿವಂತ, ಬುದ್ಧಿವಂತ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಇತ್ಯಾದಿ ಲಕ್ಷಣಗಳು) ಕಾಯಿಲೆ ಬಂದರೆ ಅದನ್ನು 'ಬೈಪೋಲಾರ್ ಅಫೆಕ್ಟಿವ್ ಡಿಸಾಸ್ಟರ್ ಅಥವಾ ಮೇನಿಕ್ ಡಿಪೆಸ್ಟಿವ್ ಡಿಸ್ಸಾರ್‌' ಎಂದು ಕರೆಯಲಾಗುತ್ತದೆ. ಚಕ್ರದೋಪಾದಿಯಲ್ಲಿ ಖಿನ್ನತೆ ಮೇನಿಯಾ ಬರುತ್ತದೆ. ಈ ಚಕ್ರವು ವರ್ಷಕ್ಕೊಮ್ಮೆ ಅಥವಾ ಹಲವಾರು ಸಲ ಅಥವಾ ಎರಡು ಮೂರು ವರ್ಷಕ್ಕೊಮ್ಮೆ ಉರುಳಬಹುದು. ಜೀವನ ಪರ್ಯಂತ ಈ ಕಾಯಿಲೆ ಪುನರಾವರ್ತನೆಗೊಳ್ಳುತ್ತಲೇ ಇರಬಹುದು.

ಚಿತ್ತವಿಕಲತೆಯ ಖಿನ್ನತೆ (PSYCHOTIC DEPRESSION)[ಸಂಪಾದಿಸಿ]

ಖಿನ್ನತೆ ತೀವ್ರವಾಗಿರುವ ಜೊತೆ ಜೊತೆಗೆ ಚಿತ್ತವಿಕಲತೆಯ ಲಕ್ಷಣಗಳೂ ಕಂಡುಬರುತ್ತವೆ. ಭ್ರಮೆಗಳು ಪ್ರಮುಖ ಲಕ್ಷಣ
  • ಯಾವ ತಪ್ಪು ಪಾಪಗಳನ್ನು ಮಾಡದಿದ್ದರೂ ತಾನು ಅತೀ ದೊಡ್ಡ ಮತ್ತು ಕ್ಷಮಿಸಲಾಗದ ತಪ್ಪು ಪಾಪ ಮಾಡಿರುವೆ ಎಂದು ರೋಗಿ ನಂಬುತ್ತಾನೆ/ಳೆ.
  • ತಾನೊಬ್ಬ ನಿರ್ಗತಿಕ-ಬಡವ, ಒಂದು ರೂಪಾಯಿಯೂ ಇಲ್ಲದ ನಿರ್ಗತಿಕ ಅನಾಥ ಎಂದು ವ್ಯಕ್ತಿ ಹೇಳುತ್ತಾನೆ/ಳೆ. ವ್ಯಾಪಾರದಲ್ಲಿ

ತಾನು ದಿವಾಳಿಯಾಗಿದ್ದೇನೆ ಎನ್ನುತ್ತಾನೆ/ಳೆ. ನಿಜದಲ್ಲಿ ಹಾಗೇನೂ ಆಗಿರುವುದಿಲ್ಲ.
  • ಎಲ್ಲರೂ ತನ್ನನ್ನು ಅತಿ ಕೆಟ್ಟವನು, ದುಷ್ಟ, ರಾಕ್ಷಸನಂತವನ್ನು ಎಂದು ಹೇಳುತ್ತಿದ್ದಾರೆಂಬ ಭ್ರಮೆ. ಇದು ಎಲ್ಲೆಡೆ ಪ್ರಚಾರವಾಗಿದೆ. ಇಡೀ ಊರಿಗೆ ಗೊತ್ತಿದೆ ಎನ್ನುತ್ತಾನೆ. ಮನೆಯಿಂದ ಹೊರಬರಲು ನಿರಾಕರಿಸುತ್ತಾನೆ. ಜನ ತನ್ನನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಾರೆ. ಅಪಹಾಸ್ಯ ಮಾಡುತ್ತಾರೆ ಎನ್ನುತ್ತಾನೆಯ
  • ತನ್ನ ಶರೀರದ ಅಂಗಾಂಗಗಳು (ಉದಾ: ಹೃದಯ, ಮೆದುಳು, ಲಿವರ್) ಮೂತ್ರಪಿಂಡ ಕೆಲಸ ಮಾಡುತ್ತಿಲ್ಲ ಅಥವಾ ಅವೆಲ್ಲಾ ಮಾಯವಾಗಿವೆ ಎನ್ನಬಹುದು. ತಾನೀಗಾಲೇ ಸತ್ತಿದ್ದೇನೆ ಎನ್ನುವುದು.
  • ತನಗೆ ರೌರವ ನರಕ ಕಾದಿದೆ. ದೇವರು ತನ್ನನ್ನು ಕ್ರೂರವಾಗಿ ಶಿಕ್ಷಿಸುತ್ತಾನೆ ಎನ್ನುವುದು.
  • ಎಲ್ಲರೂ ತನ್ನ ಬಗ್ಗೆ ಅವಹೇಳನ ಮಾಡುವ ರೀತಿಯಲ್ಲಿ ಮಾತಾಡುತ್ತಿದ್ದಾರೆ ಎನ್ನುವುದು.
  • ಕ್ರೂರ ಮೃಗಗಳು ತನ್ನ ಮೇಲೆ ಆಕ್ರಮಣ ಮಾಡುತ್ತವೆ, ಕೊಲ್ಲುತ್ತವೆ ಅವುಗಳ ಗರ್ಜನೆ, ಕೂಗು ಕೇಳುತ್ತಿವೆ ಎನ್ನುವುದು.
  • ಮೈ ಮೇಲೆ ಸಾವಿರಾರು ಇರುವೆ, ಹುಳುಗಳು, ಕೀಟಗಳು ಹಾವು, ಹಲ್ಲಿಗಳು ಓಡಾಡುತ್ತಿವೆ ಎನ್ನುವುದು.
  • ಚಿತ್ತವಿಕಲತೆಯ ಖಿನ್ನತೆಯು, ಒಳಜನ್ಯ ಖಿನ್ನತೆ ಮತ್ತು ಪ್ರತಿಕ್ರಿಯ ಖಿನ್ನತೆಯ ಒಂದು ಭಾಗವಾಗಿರಬಹುದು.


ದೈಹಿಕ ಕಾಯಿಲೆಯ ಮುಖವಾಡ ಧರಿಸಿದ ಖಿನ್ನತೆ
(MASKED DEPRESSION)

ಕೆಲವು ಪ್ರಕರಣಗಳಲ್ಲಿ ಖಿನ್ನತೆ ಕಾಯಿಲೆಗಳಲ್ಲಿ ಖಿನ್ನತೆಯ ಲಕ್ಷಣಗಳು ಇರುವುದಿಲ್ಲ. ದೇಹದಲ್ಲಿ ಹತ್ತಾರು ನೋವು ಸುಸ್ತು, ಆಯಾಸ, ನಿಶ್ಯಕ್ತಿ,


ಚರ್ಮದಲ್ಲಿ ಅತಿರೇಕ ಸಂವೇದನೆ (ಉರಿ, ಜೋಮು, ಸೂಜಿಯಿಂದ

ಚುಚ್ಚಿದ ಅನುಭವ) ಲೈಂಗಿಕ ದುರ್ಬಲತೆ, ಹಸಿವು ಕಡಿಮೆ, ನಿದ್ರಾಹೀನತೆ ಇತ್ಯಾದಿ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಇದನ್ನು (MASKED DEPRESSION) ಎನ್ನಲಾಗುತ್ತದೆ. ಎಲ್ಲ ದೈಹಿಕ ಪರೀಕ್ಷೆಗಳು ನಾರ್ಮಲ್ ಆಗಿರುತ್ತವೆ. ವೈದ್ಯರು ಈ ಹಿನ್ನೆಲೆಯಲ್ಲಿ ಖಿನ್ನತೆ ಇರಬಹುದೆಂದು ನಿರ್ಧರಿಸಿ ಖಿನ್ನತೆ ನಿವಾರಕ ಔಷಧಿ ಕೊಟ್ಟರೆ ರೋಗಿ ಉತ್ತಮಗೊಳ್ಳುತ್ತಾನೆ. ಇಲ್ಲದಿದ್ದರೆ ವ್ಯಕ್ತಿ ತನಗೆ ದೈಹಿಕ ಕಾಯಿಲೆ ಇದೆಯೆಂದು ನಂಬಿ, ಹಲವಾರು ವೈದ್ಯರಲ್ಲಿಗೆ ಹೋಗಿ ಟೆಸ್ಟ್‌ಗಳನ್ನು ಮತ್ತೆ ಮತ್ತೆ ಮಾಡಿಸಿ ದಣಿಯುತ್ತಾನೆ.

■ ■
ಉಚಿತ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶನಕ್ಕಾಗಿ ಮಾನಸಿಕ ಕಾಯಿಲೆಗಳ ಚಿಕಿತ್ಸೆಗಾಗಿ ಸಂಪರ್ಕಿಸಿ:

ಸಮಾಧಾನ ಕೇಂದ್ರ
324, 6ನೇ ಕ್ರಾಸ್
ಅರಕೆರೆ ಮೈಕೋ ಲೇ ಔಟ್, ಮೊದಲ ಹಂತ
ಬನ್ನೇರುಘಟ್ಟ ರಸ್ತೆ, ಬೆಂಗಳೂರು - 76
ಫೋನ್: 080-26482929


ಸಹಜ ದುಃಖವು 'ಖಿನ್ನತೆ' ಕಾಯಿಲೆಯಾಗಲು ಹಲವಾರು

ಕಾರಣಗಳಿವೆ. ಒಂದಕ್ಕಿಂತ ಹೆಚ್ಚಿನ ಕಾರಣಗಳು ಸೇರಿ ಕಾಯಿಲೆ ಸೃಷ್ಟಿಯಾಗುತ್ತದೆ.

  • ಅನುವಂಶೀಯತೆ: ಖಿನ್ನತೆ ಕಾಯಿಲೆ ಅನುವಂಶೀಯವಾಗಿ ಜೀನುಗಳ ಸಾಗಿ ಬರಬಹುದು.
  • ಮೆದುಳಿನ ನರಕೋಶಗಳಲ್ಲಿ ಡೋಪಮಿನ್ ಸೆರೊಟೊನಿನ್ ಪ್ರಮಾಣ ಕಡಿಮೆಯಾಗುವುದು.
  • ಥೈರಾಕ್ಸಿನ್ ಹಾರ್ಮೋನು ಕೊರತೆ.
  • ಇತರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸ್ಟಿರಾಯಿಡ್ಸ್, ಆಂಟಿ ಬಯೋಟಿಕ್ಸ್, ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ಬಳಸುವ ಮಾತ್ರೆಗಳು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು.
  • ಬಾಲ್ಯ ಮತ್ತು ಹರೆಯದ ಅವಧಿಯಲ್ಲಿ ಮಗು ಪ್ರೀತಿ, ಆಸರೆ, ಭಾವನಾತ್ಮಕ ಸುರಕ್ಷತೆಯಿಂದ ವಂಚಿತನಾಗುವುದು, ತೀವ್ರ ಶಿಕ್ಷೆ, ಶಿಸ್ತಿಗೆ ಒಳಗಾಗುವುದು, ಶಾರೀರಿಕ, ಮಾನಸಿಕ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು.
  • ನಕಾರಾತ್ಮಕ ನೋವುಂಟುಮಾಡುವ ಘಟನೆಗಳು, ಉದಾ: ಸಾವು, ಅಗಲಿಕೆ, ದೊಡ್ಡ ಮೊತ್ತದ ಹಣ, ಆಸ್ತಿ, ಬೆಲೆ ಬಾಳುವ ವಸ್ತುಗಳ

ನಷ್ಟ, ದೊಡ್ಡ ಸೋಲು, ಅಪಮಾನ, ತೀವ್ರ ಆರೋಪಗಳು, ಅನ್ಯಾಯಗಳು, ಮೋಸ ವಂಚನೆಗಳು, ಜೈಲು ವಾಸ ಇತ್ಯಾದಿ. ಕೌಟುಂಬಿಕ ವಿರಸ, ಸಮಸ್ಯೆಗಳು, ವ್ಯಕ್ತಿ-ವ್ಯಕ್ತಿ ಸಂಬಂಧಗಳಲ್ಲಿ ಬಿರುಕು, ಪ್ರೀತಿ ವಿಶ್ವಾಸದ ಕೊರತೆ, ಅಪನಂಬಿಕೆ, ತಿರಸ್ಕಾರಗಳು, ಅನಗತ್ಯ ಪೈಪೋಟಿ.
  • ತೀವ್ರ ಮತ್ತು ದೀರ್ಘಕಾಲದ ಅನಾರೋಗ್ಯ, ಅಂಗ ವೈಫಲ್ಯ ಮತ್ತು ಪ್ರಾಣಾಂತಕ ಕಾಯಿಲೆಗಳು ಸಾಮಾಜಿಕ ಕಳಂಕವನ್ನು ಮಾಡುವ ಕಾಯಿಲೆಗಳು.
  • ನಿರುದ್ಯೋಗ ಅಥವಾ ಉದ್ಯೋಗದ ಸ್ಥಳದ ಸಮಸ್ಯೆಗಳು, ಒತ್ತಡ, ಕಿರುಕುಳಗಳು, ಇಷ್ಟವಿಲ್ಲದ ಉದ್ಯೋಗ, ಮೆಚ್ಚುಗೆ, ಪ್ರೋತ್ಸಾಹದ ಕೊರತೆ, ಪಕ್ಷಪಾತ.
  • ಸಾಮಾಜಿಕ ಅಸಮತೆ, ಅವ್ಯವಸ್ಥೆ, ಪಕ್ಷಪಾತ, ಶೋಷಣೆ, ಅನ್ಯಾಯಗಳು, ಬಡವ-ಶ್ರೀಮಂತರ ನಡುವಿನ ಅಗಾಧ ಅಂತರ.
■ ■
ಖಿನ್ನತೆ ಪೂರ್ಣವಾಗಿ ವಾಸಿಯಾಗುವಂತಹ ಕಾಯಿಲೆ.
  1. ಔಷಧಿಗಳು.
  2. ವಿದ್ಯುತ್ ಕಂಪನ ಚಿಕಿತ್ಸೆ.
  3. ಮನೋ ಚಿಕಿತ್ಸೆ-ಆಪ್ತ ಸಮಾಲೋಚನೆ.
  4. ಕಲಾಚಿಕಿತ್ಸೆ, ವಿರಮಿಸುವ ಚಟುವಟಿಕೆಗಳು.

ಔಷಧಿಗಳು: ಸುರಕ್ಷಿತವಾದ, ಪರಿಣಾಮಕಾರಿಯಾದ ಔಷಧಿಗಳು ಈಗ ಲಭ್ಯವಿವೆ. ಖಿನ್ನತೆ ನಿವಾರಕ ಔಷಧಿಗಳೆಂದೇ ಹೆಸರಾದ ಈ ಔಷಧಿಗಳನ್ನು ಯಾವುದೇ ವೈದ್ಯರು ಬರೆದುಕೊಡಬಲ್ಲರು.

1.ಎಸ್ಪಿಟಲೋಪಾಂ 2. ಸಟ್ರ್ರಾಲಿನ್
3. ವೆನ್‌ಲಾಪ್ಲಾಕ್ಸಿನ್ 4. ಮಿರ್ಟಾಜಪಿನ್
5. ಇಮಿಪ್ರಮಿನ್ 6. ಅಮಿಟ್ರಿಫೈಲಿನ್
7. ಡಾತಿಪಿನ್ 8. ಪೆರಾಕ್ಸಿಟಿನ್
9. ಡ್ಯೂಲಾಕ್ಸಿಟಿನ್ 10. ಪೂಯಾಕ್ಸಿಟಿನ್

ಯಾರಿಗೆ ಯಾವ ಔಷಧ, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಸಾಮಾನ್ಯವಾದ ಅಡ್ಡ ಪರಿಣಾಮಗಳು; ಇವು ತಾತ್ಕಾಲಿಕ ಹಾಗೂ ನಿವಾರಣೀಯ.


  • ಬಾಯಿ ಒಣಗುವುದು/ಜೊಲ್ಲು ಹೆಚ್ಚಾಗುವುದು.
  • ಹೊಟ್ಟೆ ಉರಿ/ವಾಕರಿಕೆ/ವಾಂತಿ (ಗ್ಯಾಸ್ಟ್ರಿಕ್ ಸಮಸ್ಯೆ).
  • ತಲೆಭಾರ, ತಲೆಸುತ್ತು.
  • ನಿದ್ರೆ ಹೆಚ್ಚಾಗುವುದು, ಹಗಲು ಹೊತ್ತಿನಲ್ಲಿ ತೂಕಡಿಕೆ, ಮಂಪರು.
  • ಮಂಕುತನ/ಚಟುವಟಿಕೆಗಳು ತಗ್ಗುವುದು.
  • ತೂಕ ಹೆಚ್ಚಾಗುವುದು.
  • ಲೈಂಗಿಕ ದುರ್ಬಲತೆ.
  • ಕೈಕಾಲುಗಳು ನವಿರಾಗಿ ನಡುಗುವುದು/ಬಿಸಿಯಾಗುವುದು.
  • ಸಮತೋಲನ ಚಲನೆ ಇಲ್ಲದಿರುವುದು, ನಡೆಯುವುದು, ಬರೆಯುವುದು ಕಷ್ಟವಾಗುತ್ತದೆ.

ಈ ತೊಂದರೆಗಳು ಬಂದರೆ ಏನು ಮಾಡಬೇಕೆಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೀವೇ ಔಷಧ ನಿಲ್ಲಿಸಲು, ಕಡಿಮೆ ಮಾಡಲು ಪ್ರಯತ್ನಿಸಬೇಡಿ.


ಎಷ್ಟು ಕಾಲ ಔಷಧ ಸೇವನೆ?[ಸಂಪಾದಿಸಿ]

ಸಾಮಾನ್ಯವಾಗಿ ಹೆಚ್ಚಿನ ಪ್ರಕರಣಗಳಲ್ಲಿ 2 ರಿಂದ 3 ತಿಂಗಳು, ಕೆಲವರಲ್ಲಿ ಒಂದೆರಡು ವರ್ಷ. ಕೆಲವರಲ್ಲಿ ಹಲವಾರು ವರ್ಷಗಳು.

ಶೇಕಡಾ 10ರಷ್ಟು ಪ್ರಕರಣಗಳಲ್ಲಿ ಮಾತ್ರ ಜೀವನ ಪರ್ಯಂತ ತೆಗೆದು ಕೊಳ್ಳಬೇಕಾಗಬಹುದು.

ಈ ಔಷಧಿಗಳಲ್ಲಿ ದೀರ್ಘಾವಧಿ ವಿಷಮ ಪರಿಣಾಮಗಳಿಲ್ಲ ಎಂಬುದು ಸಮಾಧಾನದ ಅಂಶ.

ಔಷಧಿಗಳನ್ನು ಊಟದ ನಂತರ, ಕ್ರಮಬದ್ಧವಾಗಿ, ವೇಳೆಗೆ ಸರಿಯಾಗಿ ಸೇವಿಸುವಂತೆ ರೋಗಿಗೆ ಹೇಳಬೇಕು, ಇದರ ಉಸ್ತುವಾರಿ ಮಾಡಬೇಕು,


ಅನಗತ್ಯವಾಗಿ ಔಷಧ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಾರದು.

ನಿಲ್ಲಿಸಬಾರದು. ಔಷಧಗಳ ದುರುಪಯೋಗವನ್ನು ತಡೆಗಟ್ಟಬೇಕು. ಔಷಧಿಗಳನ್ನು ಮುಕ್ತವಾಗಿ ಎಲ್ಲರ ಕೈಗೆ ಸಿಗುವ ರೀತಿಯಲ್ಲಿ ಖಂಡಿತ ಇಡಬಾರದು. ಖಿನ್ನತೆ ರೋಗಿಯಲ್ಲಿ ಆತ್ಮಹತ್ಯಾ ಪ್ರಯತ್ನದ ರಿಸ್ಕ್ ಇದ್ದರೆ ಔಷಧಗಳನ್ನು ರೋಗಿಯ ಕೈಗೆ ಕೊಡಲೇಬಾರದು. ಆಯಾ ಡೋಸನ್ನು ಅಥವಾ ಬೀರುವಿನಲ್ಲಿಟ್ಟು ಬೀಗ ಹಾಕಬೇಕು. ಮಾತ್ರೆಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ, ಆಕಸ್ಮಿಕವಾಗಿ ಹತ್ತಿಪ್ಪತ್ತು ಮಾತ್ರೆಗಳನ್ನು ತಿಂದರೂ ಪ್ರಾಣಕ್ಕೆ ಅಪಾಯವಿಲ್ಲ. ಇಂಥ ಸಂದರ್ಭದಲ್ಲಿ ತಕ್ಷಣ ವೈದ್ಯರ ನೆರವನ್ನು ಪಡೆಯಿರಿ.

ವಿದ್ಯುತ್ ಕಂಪನ ಚಿಕಿತ್ಸೆ (ECT) (ELECTRO CONVULISIVE THERAPY)[ಸಂಪಾದಿಸಿ]

ಸಣ್ಣ ಪ್ರಮಾಣದ (80 ರಿಂದ 100 ವೋಲ್ಟ್ ಕರೆಂಟ್) ವಿದ್ಯುತ್ತನ್ನು ಮಿದುಳಿನೊಳಕ್ಕೆ ಹಾಯಿಸಿ ಕಂಪನವನ್ನುಂಟುಮಾಡಿದಾಗ ನರವಾಹಕಗಳ ಉತ್ಪತ್ತಿ/ಸಮತೋಲನ ಸರಿ ಪ್ರಮಾಣಕ್ಕೆ ಬರುತ್ತದೆ. ಆಗ ಸಹಜವಾಗಿ ಖಿನ್ನತೆ ಹಾಗೇ ಸ್ಕಿಜೋಫ್ರಿನಿಯಾದಂತಹ ತೀವ್ರ ರೀತಿಯ ಮಾನಸಿಕ ಕಾಯಿಲೆಗಳು ಗುಣವಾಗುತ್ತವೆ; ಬೇಗ ಗುಣವಾಗುತ್ತವೆ. ಆದ್ದರಿಂದ ತೀವ್ರ ಖಿನ್ನತೆ ಕಾಯಿಲೆಯಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುವ ರಿಸ್ಕ್ ಹೆಚ್ಚಿರುವ ವ್ಯಕ್ತಿಗಳಲ್ಲಿ ಖಿನ್ನತೆಯಿಂದ ಸಂಪೂರ್ಣವಾಗಿ ನಿಷ್ಕ್ರಿಯರಾಗಿರುವ (ಸೂಪರ್) ಪ್ರಕರಣಗಳಲ್ಲಿ ಚಿತ್ತವಿಕಲತೆ ಲಕ್ಷಣಗಳಿರುವ ಪ್ರಕರಣಗಳಲ್ಲಿ, ವಿದ್ಯುತ್ ಕಂಪನ ಚಿಕಿತ್ಸೆಯನ್ನು ನೀಡಲಾಗುತ್ತದೆ. ಎರಡು ದಿನಕ್ಕೊಮ್ಮೆ ಒಟ್ಟು 5 ಅಥವಾ 6 ಸಲ ಕೊಡಲಾಗುತ್ತದೆ. ಔಷಧವನ್ನು ಮುಂದುವರೆಸಲಾಗುತ್ತದೆ.

ಅನಿಸ್ತೀಸಿಯಾ (ಅರಿವಳಿಕೆ) ಕೊಟ್ಟು ಇಸಿಟಿ ಕೊಡುವುದರಿಂದ ರೋಗಿಗೆ ನೋವಾಗಲೀ, ಗಂಭೀರ ಅಡ್ಡ ಪರಿಣಾಮಗಳಾಗಲೀ ಆಗುವುದಿಲ್ಲ ಇಸಿಟಿ ಒಂದು ಅತ್ಯಂತ ಸುರಕ್ಷತಾ ಚಿಕಿತ್ಸಾ ವಿಧಾನವಾಗಿದೆ. ವೈದ್ಯರು ಇಸಿಟಿ ಕೊಡಲು ಪ್ಲಾನ್ ಮಾಡಿದರೆ ಭಯಪಡದೆ ಕೊಡಿಸಿ.


ಮನೋಚಿಕಿತ್ಸೆ ಆಪ್ತಸಮಾಲೋಚನೆ: (PSYCHOTHERAPY COUNSELLING)[ಸಂಪಾದಿಸಿ]

ಖಿನ್ನತೆ ಬರಲು ಕಾರಣವಾದ ಮನೋ ಸಾಮಾಜಿಕ ಅಂಶಗಳನ್ನು ಗುರುತಿಸಿ, ಅವುಗಳನ್ನು ಸೂಕ್ತವಾಗಿ ನಿಭಾಯಿಸಲು ವ್ಯಕ್ತಿಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದೇ ಮನೋಚಿಕಿತ್ಸೆ-ಆಪ್ತ ಸಮಾಲೋಚನೆಯ ತಿರುಳು, ಚಿಕಿತ್ಸಕ/ಸಮಾಲೋಚಕನು ಸ್ನೇಹ ವಿಶ್ವಾಸದಿಂದ ವ್ಯಕ್ತಿಯ ಜೊತೆ, ವ್ಯಕ್ತಿಯ ಮನೆಯವರ ಜೊತೆ, ಸ್ನೇಹಿತ- ವಿಷಯಗಳನ್ನು ಸಂಗ್ರಹಿಸುತ್ತಾನೆ. ಅವುಗಳನ್ನು ವಿಶ್ಲೇಷಿಸಿ ಯಾವುದು ಎಷ್ಟರಮಟ್ಟಿಗೆ ವ್ಯಕ್ತಿಯ ದುಃಖಕ್ಕೆ-ಖಿನ್ನತೆಗೆ ಕಾರಣವಾಗಿದೆ, ಯಾವುದು ಖಿನ್ನತೆ ಮುಂದುವರೆಯಲು ಪ್ರೇರಕವಾಗಿದೆ ಎಂಬುದನ್ನು ಗುರುತಿಸುತ್ತಾನೆ. ವ್ಯಕ್ತಿಗೆ ಸಾಂತ್ವನ ಹೇಳಿ, ಸಮಾಧಾನ ಮಾಡಿ, ಈ ವಿಷಯಗಳನ್ನು ಹೇಗೆ ಹೇಗೆ ಅದರೊಂದಿಗೆ ಹೊಂದಿಕೊಳ್ಳಬೇಕೆಂದು ತಿಳಿಸುತ್ತಾನೆ. ವ್ಯಕ್ತಿಯ ಸಮರ್ಥವಾಗಿ ನಿಭಾಯಿಸಬೇಕು, ಸಮಸ್ಯೆಯನ್ನು ನಿವಾರಿಸಲಾಗದಿದ್ದರೆ ಬಲಾಬಲಗಳನ್ನು ಅರ್ಥಮಾಡಿಕೊಂಡು ಅವುಗಳ ಇತಿಮಿತಿಯನ್ನು ವ್ಯಕ್ತಿ ಹೇಗೆ ಸಮಾಧಾನ ಚಿತ್ರವಾಗಿ ಜೀವನವನ್ನು ಮುನ್ನಡೆಸಬಲ್ಲ ಎಂದು ಲೆಕ್ಕಾಚಾರ ಮಾಡಿ ವ್ಯಕ್ತಿಗೆ ಮಾರ್ಗದರ್ಶನ ಮಾಡುತ್ತಾನೆ. ವ್ಯಕ್ತಿ ಮತ್ತು ಆತನ/ಆಕೆಯ ಮನೆಯವರ ವ್ಯಕ್ತಿತ್ವದ ನ್ಯೂನತೆಗಳು, ನಕಾರಾತ್ಮಕ ಧೋರಣೆಗಳು-ವರ್ತನೆಗಳು, ನಡೆ-ನುಡಿಗಳನ್ನು ಬದಲಿಸಿಕೊಳ್ಳಲು ಸಹಾಯ ಮಾಡುತ್ತಾನೆ. ಇದು ಎರಡರಿಂದ ಹತ್ತು ಸೆಶನ್ಸ್‌ಗಳಲ್ಲಿ ಸಹಕರಿಸಿದರೆ ಮನೋಚಿಕಿತ್ಸೆ-ಆಪ್ತಸಮಾಲೋಚನೆ ಫಲಪ್ರದವಾಗುತ್ತದೆ. ನಡೆಯಬಹುದು. ವ್ಯಕ್ತಿ ಮತ್ತು ಸಂಬಂಧಪಟ್ಟವರು ಬದಲಾಗಲು ಸಹಕರಿಸದಿದ್ದರೆ, ಬದಲಾಗಲು ಒಪ್ಪದಿದ್ದರೆ ಸಮಾಲೋಚನೆ ವಿಫಲವೂ ಆಗಬಹುದು. ವ್ಯಕ್ತಿಯ ನಕಾರಾತ್ಮಾಕ ಧೋರಣೆ, ಆಲೋಚನೆಗಳನ್ನು ಗುರುತಿಸಿ, ನಕಾರಾತ್ಮಕ ತಂತ್ರಗಳನ್ನು ಪತ್ತೆ ಮಾಡಿ ಅವುಗಳನ್ನು ಸಕಾರಾತ್ಮಕ ಆಲೋಚನೆ-ಧೋರಣೆಗಳನ್ನಾಗಿ ಬದಲಿಸಲು ಪ್ರಯತ್ನಿಸುವುದೇ ಸಿ.ಬಿ.ಟಿ ಅರ್ಥಾತ್ ಕಾಗ್ನೆಟಿವ್‌ ಬಿಹೇವಿಯರ್ ಥೆರಪಿಯ ತಿರುಳು, ಕುಟುಂಬದ


ವಾತಾವರಣ, ಉದ್ಯೋಗದ ವಾತಾವರಣ, ಸಮಾಜದ (ಸುತ್ತಮುತ್ತಲಿನ

ವಾತಾವರಣವನ್ನು ಬದಲಿಸುವುದು ಅಥವಾ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಹಿತಕರ ಪರಿಸರಕ್ಕೆ ಬದಲಿಸಿ, ನೆಮ್ಮದಿನ್ನು ಕೊಡುವುದೇ ಸಾಮಾಜಿಕ ಚಿಕಿತ್ಸೆ (SOCIAL THERAPY), ಕೆಲವು ಪ್ರಕರಣಗಳಲ್ಲಿ ಪರಿಸರದ ಬದಲಾವಣೆಯಿಂದ ಖಿನ್ನತೆ ತಗ್ಗುತ್ತದೆ.

ಕಲಾ ಚಿಕಿತ್ಸೆ: (ART THERAPY)[ಸಂಪಾದಿಸಿ]

ಮೈಮನಸ್ಸುಗಳನ್ನು ವಿರಮಿಸಿ, ಮನಸ್ಸಿನ ಗಮನವನ್ನು ತಮ್ಮೆಡೆಗೆ ಸೆಳೆಯಬಲ್ಲ ಶಾಂತಿ-ನೆಮ್ಮದಿ, ಖುಷಿಯನ್ನು ನೀಡಬಲ್ಲ ಲಲಿತ ಕಲೆಗಳು, ಯೋಗ, ಧ್ಯಾನಗಳು, ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆ ಮತ್ತು ಆಚರಣೆಗಳು ಖಿನ್ನತೆಯನ್ನು ತಗ್ಗಿಸಲು ನೆರವಾಗುತ್ತವೆ. ಕ್ರಮಬದ್ಧವಾಗಿ ಇವುಗಳನ್ನು ಮಾಡುವುದೇ ಸಂಗೀತ ಚಿಕಿತ್ಸೆ, ನೃತ್ಯ ಚಿಕಿತ್ಸೆ ಕಲಾ ಚಿಕಿತ್ಸೆ, ಯೋಗ ಚಿಕಿತ್ಸೆ, ಧ್ಯಾನ ಚಿಕಿತ್ಸೆ ಎನಿಸಿಕೊಳ್ಳುತ್ತದೆ. ಇಷ್ಟದೇವರನ್ನು ಪೂಜೆ ಪ್ರಾರ್ಥನೆಗಳಿಂದ ನೆನೆಸಿಕೊಂಡು, ದೇವರು ನನ್ನನ್ನು ಕಾಪಾಡುತ್ತಾನೆ. ರಕ್ಷಿಸುತ್ತಾನೆ. ಸಮಸ್ಯೆ ಸಂಕಷ್ಟಗಳನ್ನು ಪರಿಹರಿಸುತ್ತಾನೆ, ನೋವನ್ನು ನಿವಾರಿಸುತ್ತಾನೆ ಎಂದು ನಂಬುವುದರಿಂದ ಖಿನ್ನತೆ ಖಂಡಿತ ಕಡಿಮೆಯಾಗುತ್ತದೆ. ಕಷ್ಟ ನಷ್ಟಗಳು ಬಂದಾಗ, ದುಃಖ ದುಮ್ಮಾನಗಳು ನಮ್ಮನ್ನು ಮುತ್ತಿಕೊಂಡಾಗ, ಈ ಭವಸಾಗರದಲ್ಲಿ ನಾವು ಮುಳುಗುತ್ತಿದ್ದೇವೆಂದುಕೊಂಡಾಗ, 'ದೇವರು' ನಮ್ಮ ಸೇರಿಸುತ್ತಾನೆ, ಬಂಧು ಮಿತ್ರ ಕೈಬಿಟ್ಟರೂ, ಕೈಹಿಡಿದು ನಮ್ಮನ್ನು ಪೊರೆಯುತ್ತಾನೆ ಹಿತವನ್ನು ಕಾಯುತ್ತಾನೆ, ನೀರಿನ ಸುಳಿಯಿಂದ ನಮ್ಮನ್ನು ರಕ್ಷಿಸಿ ದಡ ಎಂದು ಹೇಳಿಕೊಳ್ಳಿ.

ಖಿನ್ನತೆಯಿದ್ದಾಗ ನೀವೇನು ಮಾಡಬೇಕು?[ಸಂಪಾದಿಸಿ]

ಕಾರಣ ಇದ್ದು ಅಥವಾ ಕಾರಣವಿಲ್ಲದೆಯೋ ಖಿನ್ನತೆ ನಿಮ್ಮನ್ನು ಆವರಿಸಿಕೊಂಡಾಗ ಬೇಸರ, ದುಃಖ, ನಿರುತ್ಸಾಹ, ನಿರಾಸಕ್ತಿ, ಅಸಹಾಯಕತೆ, ನಿರಾಶದಾಯಕ ಮತ್ತು ಬದುಕು ಬೇಡ ಎಂಬ ಇತ್ಯಾದಿ ಲಕ್ಷಣಗಳು ಕಂಡು ಬಂದಾಗ:


  • ಒಂಟಿಯಾಗಿರಬೇಡಿ: ಮನೆಯವರ, ಆತ್ಮೀಯರ ಜೊತೆ ಇರಿ. ನಿಮ್ಮೊಡನೆ ನಿಮ್ಮ ಇಷ್ಟದೈವ ಇದೆ. ಆ ದೇವರ ಶ್ರೀರಕ್ಷೆ ನಿಮಗಿದೆ ಎಂದು ಭಾವಿಸಿ.
  • ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಎಂದಿನ ನಿತ್ಯ ಚಟುವಟಿಕೆಗಳ ಜೊತೆಗೆ ಮನಸ್ಸಿಗೆ ಹಿತ-ಆನಂದ ಕೊಡಬಲ್ಲ ನಿಮಗಿಷ್ಟವಾದ ಸಂಗೀತ ಕೇಳಿ, ಪುಸ್ತಕ ಓದಿ, ಮನೆಯಲ್ಲಿರುವ ನಿಮ್ಮ ಕುಟುಂಬ-ಪ್ರವಾಸದ ಅಲ್ಬಂ ನೋಡಿ, ಮನೆಯವರೊಂದಿಗೆ ಮಕ್ಕಳೊಂದಿಗೆ ಆಟವಾಡಿ, ವಾಕಿಂಗ್ ಹೋಗಿ ಬನ್ನಿ, ಪಾರ್ಕ್ ಅಥವಾ ದೇವಸ್ಥಾನದ ಆವರಣದಲ್ಲಿ ಕುಳಿತುಕೊಳ್ಳಿ, ಅಲ್ಲಿನ ವಾತಾವರಣ ಚೇತೋಹಾರಿಯಾಗಿರುತ್ತದೆ.
  • ನಿರಾಶೆಯನ್ನು, ನಕಾರಾತ್ಮಕ ಆಲೋಚನೆಯನ್ನು ಕಿತ್ತೊಗೆಯಿರಿ: ಒಳ್ಳೆಯದಾಗುತ್ತದೆ. ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಬದಲಾವಣೆ ಸಾಧ್ಯವಿದೆ, ಜಯ ಸಿಗುತ್ತದೆ. ಜನ ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಸ್ವಲ್ಪ ಕಾಯಬೇಕಷ್ಟೆ ಎಂದುಕೊಳ್ಳಿ. 'ಲೋಕದೊಳಗೆ ಹುಟ್ಟಿದ ಬಳಿಕ ಸ್ಥಿತಿ ನಿಂದೆಗಳು ಬಂದಡೆ ಮನದಲ್ಲಿ ಭಯ ನಿರಾಶೆ ತಾಳದೆ ಸಮಾಧಾನಿಯಾಗಿರಬೇಕು' ಎಂಬ ಅಕ್ಕ ಮಹಾದೇವಿಯ ವಚನವನ್ನು ನೆನೆಯಿರಿ.
  • ನಿಮ್ಮ ಇಷ್ಟದೇವರನ್ನು ನೆನೆಯಿರಿ: ಮನಸ್ಸಿನಲ್ಲೇ ಪೂಜೆ, ಪ್ರಾರ್ಥನೆ ಮಾಡಿ, ಕೈಹಿಡಿದು ನಡೆಸೆನ್ನನು ಎಂದು ಕೇಳಿಕೊಳ್ಳಿ. "ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವವನು ಇದಕೆ ಸಂಶಯವಿಲ್ಲ" ಎಂಬ ಕನಕದಾಸರ ಕೀರ್ತನೆಯನ್ನು ಹಾಡಿಕೊಳ್ಳಿ.
  • ಇತರರ ಅನುಚಿತ ವರ್ತನೆ-ಮಾತುಗಳು ನಿಮ್ಮನ್ನು ಘಾಸಿಗೊಳಿಸಿದ್ದರೆ, ನಿಮಗೆ ಅಪಮಾನ ಮಾಡಿದ್ದರೆ, ಅವರನ್ನು ಕ್ಷಮಿಸಿಬಿಡಿ, ಅವರು ಮಾಡಿದ ಕರ್ಮ, ಅವರೇ ಅದರ ಫಲವನ್ನು ಅನುಭವಿಸುತ್ತಾರೆ ಬಿಡಿ.

"ಲೋಕದ ಡೊಂಕನು ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲ ಸಂಗಮದೇವ."

ಎಂಬ ಬಸವಣ್ಣನವರ ವಚನವನ್ನು ಮೆಲುಕು ಹಾಕಿ.

  • ಕಷ್ಟ-ನಷ್ಟ, ಸಮಸ್ಯೆ ಸವಾಲುಗಳಿದ್ದರೆ ಮನೆಯವರೊಂದಿಗೆ ಆತ್ಮೀಯ ಬಂಧು ಮಿತ್ರರೊಂದಿಗೆ ಚರ್ಚಿಸಿ ಪರಿಹಾರವೇನೆಂಬುದನ್ನು ಕಂಡು ಹಿಡಿಯಿರಿ, ಕಾರ್ಯಪ್ರವೃತ್ತರಾಗಿ ಕೆಲವು ಸಲ ಕೆಲವು ಕಾಲ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸಹನೆಯಿರಲಿ.
  • ಆಸೆ-ಬಯಕೆಗಳಿಗೆ ಲಗಾಮು ಹಾಕಿ, ಇರುವುದರಲ್ಲಿ ಲಭ್ಯವಿರುವುದರಲ್ಲಿ ಸಂತೋಷಪಡಿ.

"ಬೆದಕಾಟ ಬದುಕೆಲ್ಲ ಚಣ ಚಣವು ಹೊಸ ಹಸಿವು |
ಅದಕಾಗಿ ಇದಕ್ಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದವಗಂ-ಮಂಕುತಿಮ್ಮ"

  • ಖಿನ್ನತೆಯಿಂದ ಕುದಿಯುವ ಮನಸ್ಸಿಗೆ ನೀವೇ ಸಾಂತ್ವನದ ನೀರು ಹಾಕಿ ಶಮನಗೊಳಿಸಿ.

"ಗುಡಿ ಪೂಜೆಯೋ ಕಥೆಯೋ, ಸೊಗಸು ನೋಟವೋ ಹಾಡೋ
ಬಡವರಿಂಗು ಪ್ರಕೃತಿಯೋ ಆವುದೋ ಮನದ
ಬಡಿದಾಟವನ್ನು ನಿಲ್ಲಿಸಿ, ನೆಮ್ಮದಿಯ ನೀವೊಡದೆ
ಬಿಡುಗಡೆಯೋ ಜೀವಕ್ಕೆ ಮಂಕುತಿಮ್ಮ"

ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿ.


  • ಆತ್ಮಹತ್ಯೆಯ ಯೋಚನೆ ಬಂದರೆ

ಈಸಬೇಕು ಇದ್ದು ಜಯಿಸಬೇಕು. ಸಾವು ಯಾವುದಕ್ಕೂ ಪರಿಹಾರವಲ್ಲ, ಪರಿಹಾರ ಆಗಲು ಸಾಧ್ಯವಿಲ್ಲ. ನೀವು ಸ್ವಹತ್ಯೆ ಮಾಡಿಕೊಂಡು ಸತ್ತರೆ, ನಮ್ಮನ್ನು ಪ್ರೀತಿಸುವವರಿಗೆ, ಮನೆಯವರಿಗೆ ಅವರ ಕಡೆಯ ಉಸಿರಿನವರೆಗೆ ದುಃಖ, ನೋವು ಕಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

  • ಕಷ್ಟಗಳು, ನೋವು, ಅಪಮಾನಗಳು ಚಲಿಸುವ ಮೋಡಗಳಿದ್ದಂತೆ ನಿಲ್ಲುವುದಿಲ್ಲ. ಸರಿದು ಹೋಗುತ್ತದೆ ಎಂಬುದನ್ನು ಗಮನಿಸಿ. ನೋವಿನಲ್ಲೂ ನಗಲು ಪ್ರಯತ್ನಿಸಿ.
  • ನಿಮ್ಮ ವೈದ್ಯರನ್ನು ಕಾಣಿ: ಖಿನ್ನತೆ ನಿವಾರಕ ಮತ್ತು ಶಮನಕಾರಿ ಮಾತ್ರೆಗಳನ್ನು ಬರೆಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸೇವಿಸಿ, ಅಗತ್ಯಬಿದ್ದರೆ ಮನೋವೈದ್ಯರನ್ನು, ಮನಶಾಸ್ತ್ರಜ್ಞರನ್ನು ಕಾಣಿರಿ.

ಖಿನ್ನತೆ ಮತ್ತು ಆತ್ಮಹತ್ಯೆ:[ಸಂಪಾದಿಸಿ]

2015ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತವರ ಸಂಖ್ಯೆ 1,34,000. ಇದು ಪೊಲೀಸ್ ಇಲಾಖೆಯ ಅಂಕಿ ಅಂಶ, ವರದಿಯಾಗದ ಪ್ರಕರಣಗಳನ್ನು ಗಮನಿಸಿದರೆ, ಈ ಸಂಖ್ಯೆ ಹತ್ತು ಲಕ್ಷವನ್ನೂ ಮೀರುತ್ತದೆ. ಆತ್ಮಹತ್ಯೆಗೆ ಖಿನ್ನತೆ ರೋಗವೇ ಪ್ರಮುಖ ಕಾರಣ. ಆತ್ಮಹತ್ಯೆಗೆ ಪ್ರಯತ್ನ ಮಾಡುವವರೆಲ್ಲಾ ಶೇ. 70ರಷ್ಟು ಜನ ಖಿನ್ನರಾಗಿರುತ್ತಾರೆ. ಬದುಕಿನಲ್ಲಿ ಆಸಕ್ತಿ, ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ಅವರಿಗೆ 'ಸಾವೇ ಪರಿಹಾರ, ಕಷ್ಟನೋವುಗಳಿಂದ ತಪ್ಪಿಸಿಕೊಳ್ಳಲು ರಾಜಮಾರ್ಗ' ಎನಿಸಿಬಿಡುತ್ತದೆ. ಒಳಜನ್ಯ ಖಿನ್ನತೆ ಉಳ್ಳವರು, ತೀವ್ರ ಬಗೆಯ ವಿಧಾನಗಳನ್ನು ಆತ್ಮಹತ್ಯೆಗೆ ಬಳಸುತ್ತಾರೆ. ಇದರ ಬಗ್ಗೆ ಯಾವ ಸುಳಿವನ್ನೂ ಕೊಡುವುದಿಲ್ಲ. ಆತ್ಮಹತ್ಯೆ ಆಲೋಚನೆ ಮಾಡುವ ವ್ಯಕ್ತಿಯನ್ನು ನೀವು ಕಂಡರೆ ಬಹಳ ಎಚ್ಚರಿಕೆಯಿಂದ ಅವರನ್ನು ಗಮನಿಸಿ, ಆತ್ಮಹತ್ಯೆಯನ್ನು ತಡೆಗಟ್ಟಿ.


  • ವ್ಯಕ್ತಿಯನ್ನು ಒಂಟಿಯಾಗಿರಲು ಬಿಡಬೇಡಿ, ಯಾರಾದರೂ ವ್ಯಕ್ತಿಯ ಜೊತೆಯಲ್ಲಿರುವಂತೆ ವ್ಯವಸ್ಥೆ ಮಾಡಿ, ವ್ಯಕ್ತಿ ಸ್ನಾನದ ಮನೆ ಶೌಚಾಲಯಕ್ಕೆ ಹೋದಾಗ ಚಿಲುಕ ಹಾಕಿಕೊಳ್ಳದಿರಲಿ, ತಡವಾದರೆ ಏಕೆ ತಡ ಎಂದು ಕೇಳಿ.
  • ವ್ಯಕ್ತಿ ತನ್ನ ನಿರಾಶೆ ಬವಣೆಗಳ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಿ, ನಿಮ್ಮ ಸಹಾಯ ಹಸ್ತವನ್ನು ನೀಡಿ, ಆತನ ಆಕೆಯ ಸಮಸ್ಯೆಗಳಿಗೆ ಪರಿಹಾರವಿದೆ ಎನ್ನಿ, ನೋವಿಗೆ ಭಾವನಾತ್ಮಕವಾಗಿ ಸ್ಪಂದಿಸಿ.
  • ಅಪಾಯಕಾರಿ ವಸ್ತುಗಳು ವ್ಯಕ್ತಿಗೆ ಸಿಗದಂತೆ ನೋಡಿಕೊಳ್ಳಿ. ಚಾಕು, ಬ್ಲಡ್, ರೇಜರ್, ಸೀಮೆಎಣ್ಣೆ, ಟಿಕ್ ಟ್ವೆಂಟಿ, ಔಷಧಿ ಮಾತ್ರೆಗಳು ಇತ್ಯಾದಿ.
  • ವ್ಯಕ್ತಿಯ ಊಟ-ತಿಂಡಿ-ನಿದ್ರೆಯನ್ನು ಗಮನಿಸಿ.
  • ವ್ಯಕ್ತಿಯ ಯಾವುದಾದರೂ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ, ಸಂಗೀತ, ಧ್ಯಾನ, ಪೂಜೆ, ಆಟಗಳಲ್ಲಿ ತೊಡಗಿಸಿ.
  • ವೈದ್ಯರಿಂದ ಖಿನ್ನತೆ ಶಮನಕ್ಕಾಗಿ ಮಾತ್ರೆ ಕೊಡಿಸಿ. ಅದನ್ನು ವ್ಯಕ್ತಿಯ ಕೈಗೆ ಕೊಡದೆ, ಆಯಾ ಹೊತ್ತಿನ ಮಾತ್ರೆಯನ್ನು ಯಾರಾದರೂ ನುಂಗಿಸುವಂತೆ ಮಾಡಿ. ಅಗತ್ಯ ಬಂದರೆ ಆಸ್ಪತ್ರೆಗೆ ಅಡ್ಮಿಟ್ ಮಾಡಿ.

ಆಸೆಗಳ ಕೆಣಕದಿರು, ಪಾಶಗಳ ಬಿಗಿಯದಿರು |
ಕೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಕೃತಿಯ ಚುಚ್ಚದಿರು |
ಎನ್ನುತೀಶನ ಬೇಡುತಿರೋ ||

ಆಸೆಗಳನ್ನು ಪ್ರಚೋದಿಸಬೇಡ, ಬಂಧನಗಳ ಬಿಗಿಯನ್ನು ಹೆಚ್ಚಿಸಬೇಡ. ಕಷ್ಟಕರವಾದ ಪರೀಕ್ಷೆಗಳನ್ನು ಎದುರಿಸಲು ನನ್ನನ್ನು ಕರೆಯಬೇಡ, ಬೇಸರ ತರುವಂತಹ ಪಾಪ-ತಪ್ಪುಗಳ ನೆನಪುಗಳಿಂದ ಚುಚ್ಚಬೇಡ ಎಂದು ದೇವರಲ್ಲಿ ಬೇಡಿಕೊ ಎನ್ನುತ್ತಾರೆ ಡಿ.ವಿ.ಜಿ.

ಖಿನ್ನತೆ ಕಾಯಿಲೆ ಬರದಂತೆ ತಡೆಗಟ್ಟಬಹುದೇ?[ಸಂಪಾದಿಸಿ]

ಬಹುತೇಕ ಪ್ರಕರಣಗಳು ಆಗದಂತೆ ಖಂಡಿತ ತಡೆಗಟ್ಟಬಹುದು. ಇದು ಸಾಧ್ಯ. ಪಾಲಕರು, ಶಿಕ್ಷಕರು, ವೈದ್ಯರು, ಜನನಾಯಕರು, ಗುರುಗಳು, ವ್ಯಕ್ತಿ, ಕುಟುಂಬ ಮತ್ತು ಸಮಾಜ ಮನಸ್ಸು ಮಾಡಿದರೆ ಖಂಡಿತವಾಗಿ ಮಠಾಧೀಶರು, ಕಲಾವಿದರು ಎಲ್ಲರೂ ಕೈ ಜೋಡಿಸಿದರೆ ಖಿನ್ನತೆಯನ್ನು ನಿವಾರಿಸಬಹುದು. ಅದು ಉಲ್ಬಣವಾಗಿ ಆತ್ಮಹತ್ಯೆಗೆ ದಾರಿ ಮಾಡಿಕೊಡುವು ದನ್ನು ತಪ್ಪಿಸಬಹುದು.

1. ಆಸೆ-ಅತಿಆಸೆ-ಆಕಾಂಕ್ಷೆ-ಮಹತ್ವಾಕಾಂಕ್ಷೆಗೆ ಲಗಾಮು:[ಸಂಪಾದಿಸಿ]

"ಆಸೆಯೇ ದುಃಖಕ್ಕೆ ಕಾರಣ" ಎಂಬ ಸತ್ಯವನ್ನು ಗೌತಮಬುದ್ಧ ಸಾರಿ ಹೇಳಿದ್ದಾನೆ. ಆಸೆಯನ್ನು ಬಿಡುವುದು ಹೇಗೆ? ಆಸೆಯೇ ಜೀವನದ ಗಾಡಿ ಮುಂದೆ ಹೋಗಲು ಬೇಕೇಬೇಕಾದ ಇಂಧನವಲ್ಲವೇ? ತಿನ್ನುವ ಆಸೆ, ಉಡುವ ಆಸೆ, ತೊಡುವ ಆಸೆ, ಸಿಂಗರಿಸಿಕೊಳ್ಳುವ ಆಸೆ, ಮಿಲನದ ಮಕ್ಕಳನ್ನು ಪಡೆಯುವ ಆಸೆ, ಹಣ-ಆಸ್ತಿ ಸಂಪಾದಿಸುವ ಆಸೆ, ಕೀರ್ತಿ ಗೌರವಗಳನ್ನು ಗಳಿಸುವ ಆಸೆ, ಅಧಿಕಾರ-ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವ ಆಸೆ, ಶತಾಯುಷಿಯಾಗಿ ಬದುಕುವ ಆಸೆ, ದೇಶ ತಿರುಗುವ ಆಸೆ, ಸುಂದರವಾದ ವಸ್ತು ವಿಶೇಷಗಳನ್ನು ನೋಡುವ ಆಸೆ, ಆಸೆಯಿಲ್ಲದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನಿಸುತ್ತದೆ ಅಲ್ಲವೇ?

ಆಸೆಯಿರಲಿ, ಇರಲೇಬೇಕು. ಆದರೆ ಇತಿಮಿತಿಯಲ್ಲಿರಲಿ, ಅತಿ ಆಸೆ ಬೇಡ, ದುರಾಸೆ ಖಂಡಿತಾ ಬೇಡ. ಅತಿಆಸೆಯಿಂದ ನಮಗೆ ನಿರಾಶೆ ಕಟ್ಟಿಟ್ಟ ಬುತ್ತಿ ನಿರಾಶೆಯಿಂದ ದುಃಖ, ದುಃಖದಿಂದ ಖಿನ್ನತೆ, ದುರಾಶೆಯಿಂದ


ಇತರರಿಗೆ ನೋವು, ನಿರಾಶೆ, ದುರಾಸೆಯ ನಿಮ್ಮನ್ನು ಎಲ್ಲರೂ ಇಷ್ಟಪಡದೆ

ಗೌರವಿಸದೆ ದ್ವೇಷಿಸುತ್ತಾರೆ. ನಿಮಗೆ ಕೆಡುಕಾಗಲಿ ಎಂದೇ ಹಾರೈಸುತ್ತಾರೆ. ನೀವು ಕೆಟ್ಟರೆ ಸಂತೋಷಪಡುತ್ತಾರೆ!

ಆಹಾರವಿರಲಿ, ವಸ್ತ್ರ, ವಸತಿಯಿರಲಿ, ಅಲಂಕಾರದ ಒಡವೆ ವಸ್ತುಗಳಿರಲಿ, ಕೀರ್ತಿ ಕಾಮನೆಗಳಿರಲಿ ಮೆಚ್ಚುಗೆ ಪುರಸ್ಕಾರಗಳಿರಲಿ ಅವುಗಳಲ್ಲಿ ಗಳಿಸಿ ಸುಖಿಸುವ ಆಸೆಗೆ ಮಿತಿಯಿರಲಿ, ನಿಮ್ಮ ಆದಾಯ, ಯೋಗ್ಯತೆ, ಶಕ್ತಿ, ಸಾಮರ್ಥ್ಯಕ್ಕೆ ಅದು ಅನುಗುಣವಾಗಿರಲಿ, ಎಷ್ಟು ಲಭ್ಯವೋ ಅಷ್ಟರಲ್ಲಿ ಸಂತೋಷ, ತೃಪ್ತಿಯಿರಲಿ, ಹೆಚ್ಚುವರಿ ಆಹಾರ ಧನ ಧಾನ್ಯ ಸಿರಿಯನ್ನು ಹಂಚಿಬಿಡಿ, ದಾನ ಧರ್ಮ ಮಾಡಿ, ಇಲ್ಲದವರಿಗೆ ಕೊಟ್ಟು ಸಂತೋಷಪಡಿ, ಈ ಕ್ರಿಯೆಯಿಂದ ಬರುವ ನೆಮ್ಮದಿ ತೃಪ್ತಿ ಅನುಪಮ/ ಅದ್ವಿತೀಯವಾದದ್ದು, ಕೊಟ್ಟು ಸುಖಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ.

2. ನಿರೀಕ್ಷೆ ಕಡಿಮೆಯಿರಲಿ[ಸಂಪಾದಿಸಿ]

ನಿಮ್ಮಿಂದ ನೀವು ಏನು ಮತ್ತು ನಿರೀಕ್ಷೆ ಮಾಡುತ್ತೀರಿ? ಯಾವ ಸಾಧನೆ, ಎಷ್ಟು ಸಾಧನೆ ಮಾಡಬೇಕೆಂದಿದ್ದೀರಿ? ಎಷ್ಟು ಎತ್ತರದ ಮಟ್ಟವನ್ನು ತಲುಪಬೇಕೆಂದಿದ್ದೀರಿ? ನಿಮ್ಮ ಗುರಿಯೇನು? ಎಷ್ಟು ಬೇಗ ಮುಟ್ಟಬೇಕು? ವಿದ್ಯಾಭ್ಯಾಸದಲ್ಲಿ, ಉದ್ಯೋಗದಲ್ಲಿ, ಕುಟುಂಬದಲ್ಲಿ ಸಮಾಜದಲ್ಲಿ ನಿಮ್ಮ ಗಳಿಕೆ ಸಾಧನೆ ಎಷ್ಟಿರಬೇಕು? ಯಾವ ಎತ್ತರಕ್ಕೇರಬೇಕು? ನಿಮ್ಮ ಬುದ್ಧಿಮಟ್ಟ ನಿಮಗಿರುವ ಛಲ, ಬದ್ಧತೆ, ದೈಹಿಕ ಮಾನಸಿಕ ಶಕ್ತಿ ಸಾಮರ್ಥ್ಯಗಳು ಅವುಗಳಲ್ಲಿರುವ ನ್ಯೂನತೆ ಕೊರತೆಗಳು, ನಿಮ್ಮ ಪ್ರತಿಸ್ಪರ್ಧಿಗಳು ಯಾರು, ಎಷ್ಟು ಜನರಿದ್ದಾರೆ, ಅವರ ಬಲಾಬಲಗಳೇನು, ನಿಮ್ಮ ಸಮಾಜದ ನಿಮ್ಮ ನಿರೀಕ್ಷೆಗಳನ್ನು ರೂಪಿಸಿಕೊಳ್ಳಿ, ವಾಸ್ತವಿಕತೆಯ ಅರಿವಿರಲಿ, ಅವಾಸ್ತವಿಕ ನಿರೀಕ್ಷೆಯಿಂದ ವಿಫಲತೆ, ವಿಫಲತೆಯಿಂದ ಖಿನ್ನತೆ.

ನಿಮ್ಮ ತಂದೆ ತಾಯಿ ಸೋದರ ಸೋದರಿಯರು, ನಿಮ್ಮ ಜೀವನ ಸಂಗಾತಿ, ನಿಮ್ಮ ಮಕ್ಕಳು, ಸಹೋದ್ಯೋಗಿಗಳಿಂದ ಏನು ಮತ್ತು ಎಷ್ಟನ್ನು


ನಿರೀಕ್ಷಿಸುತ್ತೀರಿ? ಅವರಿಗೆ ಆ ಮಟ್ಟವನ್ನು ತಲುಪುವ ನಿಮಗೆ ಕೊಡುವ

ಸಾಮರ್ಥ್ಯ ಮತ್ತು ಮನಸ್ಸಿದೆಯಾ ಗಮನಿಸಿ, ಇವರೆಲ್ಲಾ ನಿಮಗೆ ಎಷ್ಟು ಗಮನ ಕೊಡುತ್ತಾರೆ? ನೀವು ಹೇಳುವುದನ್ನು ಕೇಳಿಸಿಕೊಳ್ಳುತ್ತಾರೆ, ಇಲ್ಲವಾ? ನಿಮ್ಮ ಬಗ್ಗೆ ಎಷ್ಟು ಗೌರವ, ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ? ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರಾ? ಅಗತ್ಯ ಬಿದ್ದಾಗ ನಿಮ್ಮ ನೆರವಿಗೆ ಬರುತ್ತಾರಾ ಇಲ್ಲವಾ ನೋಡಿ, ಅವರಿಂದ ಎಷ್ಟು ಗಮನ, ಪ್ರೀತಿ- ಆಸರೆ ಸಿಗುತ್ತದೋ ಅಷ್ಟಕ್ಕೆ ಸಂತೋಷಪಡಿ, ಅವರು ಕೊಟ್ಟಿದ್ದು ನೆರವಾದದ್ದು ಸಾಲದು ಎನ್ನಬೇಡಿ. ಸಿಕ್ಕಿದ್ದಕ್ಕೆ ಲಾಭ ಎಂದುಕೊಳ್ಳಿ ಪ್ರತಿಯಾಗಿ ನೀವು ನಿಮಗೆ ಎಷ್ಟು ಪ್ರೀತಿ, ಗೌರವ, ಆಸರೆಯನ್ನು ಅವರಿಗೆ ನೀಡಬೇಕೆನ್ನಿಸುತ್ತದೋ ಅಷ್ಟನ್ನು ಕೊಡಿ, ಕೊಟ್ಟು ಸಂತೋಷಪಡಿ, ಅವರು ಅದನ್ನು ನೆನೆಯಬೇಕು. ನಿಮ್ಮನ್ನು ಹೊಗಳಬೇಕು. ಅದರ ಸಾಲವನ್ನು ಋಣವನ್ನು ಅವರು ತೀರಿಸಬೇಕು ಎಂದು ನಿರೀಕ್ಷೆ ಮಾಡಬೇಡಿ. ಇನ್ನು ನೀವಿರುವ ಸಮುದಾಯ/ ಸಮಾಜದಿಂದ ಏನು ನಿರೀಕ್ಷೆ ಮಾಡಬೇಕು? ಯಾವ ನಿರೀಕ್ಷೆಯನ್ನು ಮಾಡದಿರುವುದೇ ಕ್ಷೇಮ? ಸಮುದಾಯ/ಸಮಾಜಕ್ಕೆ ನೀವೇನು ಕೊಡಬಲ್ಲಿರೋ, ಕೊಟ್ಟು ಅದನ್ನು ಮರೆಯಿರಿ, ಸಮಾಜದಿಂದ ಥ್ಯಾಂಕ್ಸ್‌ನ್ನೂ ಸಹ ನಿರೀಕ್ಷಿಸಬೇಡಿ!

3. ಆರೋಗ್ಯವರ್ಧನೆ[ಸಂಪಾದಿಸಿ]

  • ಆರೋಗ್ಯವು/ಸುಖ/ಸಂತೋಷವನ್ನುಂಟು ಮಾಡಿದರೆ, ಅನಾರೋಗ್ಯ-ಕಾಯಿಲೆಗಳು, ಖಿನ್ನತೆ, ನೋವು, ದುಃಖ ಉಂಟುಮಾಡುತ್ತವೆ. ಆರೋಗ್ಯವನ್ನು ಗಳಿಸುವುದು, ಉಳಿಸಿ ವರ್ಧಿಸುವುದು ನಿಮ್ಮ ಕೈಯಲ್ಲಿದೆ.
  • ಪುಷ್ಟಿಕರವಾದ ಹಿತ-ಮಿತ ಆಹಾರವನ್ನು ವೇಳೆಗೆ ಸರಿಯಾಗಿ ಸೇವಿಸಿ, ಶರೀರಕ್ಕೆ ಶಕ್ತಿ ಬರುವುದು ನಾವು ಸೇವಿಸುವ ಆಹಾರದಿಂದ, ಆಮ್ಲಜನಕದಿಂದ, ಶರೀರದ ತೂಕ ನಿಮ್ಮ ಎತ್ತರಕ್ಕೆ/ವಯಸ್ಸಿಗೆ ಸರಿಯಿದೆಯಾ ನೋಡಿಕೊಳ್ಳಿ.

  • ಮೂಲೆಗೆ ಪ್ರತಿ ಜೀವಕೋಶಕ್ಕೆ ರಕ್ತ ಹರಿಯಬೇಕು. ಅದರ ನಿತ್ಯವ್ಯಾಯಾಮ/ಶಾರೀರಕ ಚಟುವಟಿಕೆಗಳು: ಶರೀರದ ಮೂಲೆ ಮೂಲಕ ಗ್ಲುಕೋಸ್-ಆಮ್ಲಜನಕ ಜೀವಕೋಶಗಳಿಗೆ ಸರಬರಾಜಾಗ ಬೇಕು. ಅಲ್ಲಿ ಉತ್ಪನ್ನವಾಗುವ ಕಸನಂಜು ಬೇಕಾದರೆ ದೇಹ ಚಲಿಸಬೇಕು. ಹೃದಯ ಬಲವಾಗಿ ರಕ್ತ ವಸ್ತುಗಳು ದೇಹದಿಂದ ಹೊರಹೋಗಬೇಕು. ಇದೆಲ್ಲಾ ಆಗ

ಪಂಪ್ ಮಾಡಬೇಕು, ಶ್ವಾಸಕೋಶಗಳು ಮೂತ್ರಪಿಂಡಗಳು ಲಿವರ್ ಚೆನ್ನಾಗಿ ಕೆಲಸಮಾಡಬೇಕು. ದೇಹಕ್ಕೆ ವ್ಯಾಯಾಮ ಅಗತ್ಯ. ಅದಕ್ಕೆ ಕೆಲಸ ಕೊಡಿ.

  • ಸ್ವಚ್ಛದೇಹ-ಪರಿಸರ: ಕೊಳಕಿದ್ದಲ್ಲಿ, ಕತ್ತಲಿದ್ದಲ್ಲಿ ರೋಗಾಣುಗಳು ಮನೆ ಮಾಡುತ್ತವೆ. ಸ್ವಚ್ಛತೆ ಇದ್ದಲ್ಲಿ, ಗಾಳಿ, ಬೆಳಕಿದ್ದಲ್ಲಿ ಅವು ಬದುಕುವುದಿಲ್ಲ. ಆದ್ದರಿಂದ ನಿಮ್ಮ ದೇಹವನ್ನು, ಮನೆಯನ್ನು ಕಸಕಡ್ಡಿ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸುಂದರ ಪರಿಸರ, ಸ್ವಚ್ಛಪರಿಸರ ಮನಸ್ಸಿಗೆ ಆಹ್ಲಾದವನ್ನು ಹುರುಪನ್ನು ನೀಡುತ್ತದೆ.

4. ಮಾನಸಿಕ ಒತ್ತಡ/ಕೇಶಗಳನ್ನು ತಗ್ಗಿಸಿ:[ಸಂಪಾದಿಸಿ]

ಮುಖ್ಯವಾಗಿ ಚಿಂತೆ ಅತೃಪ್ತಿ, ನಕಾರಾತ್ಮಕ ಆಲೋಚನೆ-ಧೋರಣೆ ಗಳನ್ನು ನಿಲ್ಲಿಸಿ, ಸದಾ ಆಶಾವಾದಿಯಾಗಿರಿ. ಒತ್ತಡ ತಗ್ಗಿಸಲು ಮೈ ಮನಸುಗಳು ವಿರಮಿಸುವಂತೆ ಮಾಡಿ,

5. ದುಃಖದಾಯಕ ಸಂದರ್ಭ ಘಟನೆಗಳನ್ನು ಎದುರಿಸಲು/ನಿಭಾಯಿಸಲು ಮಾನಸಿಕ ಸಿದ್ಧತೆ ಮಾಡಿ.[ಸಂಪಾದಿಸಿ]

ಪ್ರತಿಯೊಬ್ಬರ ಜೀವನದಲ್ಲಿ ಅವರು ಶ್ರೀಮಂತರಿರಲಿ/ಬಡವರಿರಲಿ,


ಸ್ತ್ರೀಯರಿರಲಿ/ ಪುರುಷರಿರಲಿ ಒಂದು ವರ್ಷಕ್ಕೆ ಒಂದಾದರೂ ದುಃಖದಾಯಕ ಘಟನೆ/ಸಂದರ್ಭ ಬಂದೇ ಬರುತ್ತದೆ. ಉದಾಹರಣೆಗೆ:
  • ಪ್ರೀತಿ ಪಾತ್ರರ, ನಾವು ಇಷ್ಟಪಡುವ ವ್ಯಕ್ತಿಯ ಅಗಲಿಕೆ, ಕೇಡಾಗುವುದು ಅಥವಾ ಸಾವು ಬರುವುದು.
  • ದೊಡ್ಡ ಮೊತ್ತದ ನಷ್ಯ
  • ಹೆಚ್ಚು ವೆಚ್ಚದ ಖರ್ಚಿನ ಬಾಬತ್ತು. ಅಷ್ಟು ಹಣ ನಮ್ಮಲ್ಲಿಲ್ಲ.
  • ಸಾಲ ಮಾಡಬೇಕಾಗಿ ಬರುವುದು.
  • ಮನೆಯವರ/ಪ್ರೀತಿಪಾತ್ರರ ಅಥವಾ ಸಾಕಿದ ಮುದ್ದು ಪ್ರಾಣಿಯ ಅನಾರೋಗ್ಯ, ಅಪಘಾತ-ಗಾಯ.
  • ವೈಯಕ್ತಿಕ ಅಪಘಾತ/ಅನಾರೋಗ್ಯ
  • ಇರುವ ಕಾಯಿಲೆ ಹತೋಟಿಗೆ ಬಾರದಿರುವುದು.
  • ಉದ್ಯೋಗದಲ್ಲಿ ಪ್ರಗತಿ ಆಗದಿರುವುದು, ಬೇಡದ ಜಾಗ/ವಿಭಾಗಕ್ಕೆ ವರ್ಗಾವಣೆ, ಹಿಂಬಡ್ತಿ, ಮಾಡಿದ ಕೆಲಸಕ್ಕೆ ಮಾನ್ಯತೆಯಿಲ್ಲ, ಆರೋಪಗಳು, ಅಧಿಕಾರದ ನಷ್ಟ, ಕೆಲಸದ ಸ್ಥಳದಲ್ಲಿ ಜಗಳ ಮನಸ್ತಾಪಗಳು.
  • ಸಂಬಂಧಗಳಲ್ಲಿ ಬಿರುಕು/ವಿರಸ
  • ಸ್ಥಾನ/ಮಾನ, ಗೌರವದ ನಷ್ಟ/ಅಪಮಾನ.
  • ಸುಲಭವೆಂದುಕೊಂಡಿದ್ದ ಕೆಲಸ ಕಷ್ಟವಾಗುವುದು.
  • ಗುರಿಮುಟ್ಟಲಾರೆ ಎನಿಸುವುದು, ಅಡಚಣೆಗಳು,
  • ಕೈಗೆತ್ತಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಮುಗಿಯದಿರುವುದು. ಉದಾ: ಮನೆ ಕಟ್ಟುವುದು, ಮಗ/ಮಗಳ ಮದುವೆ, ವ್ಯವಹಾರದ ವಿಸ್ತರಣೆ, ಯೋಜನೆ, ಕರ್ತವ್ಯ, ಜವಾಬ್ದಾರಿಗಳು.
  • ನಮ್ಮ ಸೋಲು/ಪ್ರತಿಸ್ಪರ್ಧಿ ಜಯಗಳಿಸುವುದು.
  • ಒಳ್ಳೆಯ ಅವಕಾಶಗಳು ತಪ್ಪಿಹೋಗುವುದು.
  • ನಮಗೆ ಅನ್ಯಾಯ, ಮೋಸ, ವಂಚನೆಯಾಗುವುದು

ಈ ರೀತಿಯ ಸಂದರ್ಭಗಳಲ್ಲಿ ನಮಗೆ ಆಸರೆಯಾಗಬಲ್ಲ

ಒತ್ತಾಸೆಯಾಗಿ ನಿಲ್ಲಬಲ್ಲವರ (ಮನೆಯವರು/ಬಂಧುಮಿತ್ರಸಹೋದ್ಯೋಗಿ ಗಳು, ಪರಿಚಿತ ಅನುಭವಿಗಳು) ನೆರವನ್ನು ಪಡೆದು ನಮ್ಮ ಸಾಮರ್ಥ್ಯವನ್ನು ಬಳಸಿಕೊಂಡು, ಸಮಸ್ಯೆ/ಸನ್ನಿವೇಶವನ್ನು ಎದುರಿಸಬೇಕು. ಆತಂಕಪಡದೆ, ಬೇಸರಪಡದೆ ಪ್ರಯತ್ನ ನನ್ನದು, ನೋಡೋಣ ದೇವರಿದ್ದಾನೆ, ನಾನಿದನ್ನು ನಿಭಾಯಿಸುತ್ತೇನೆ, ಬಂದದ್ದು ಬರಲಿ ಒಳ್ಳೆಯದೇ ಆಗುತ್ತದೆ. ಇದು ನನಗೆ ಪರೀಕ್ಷಾ ಕಾಲ. ಈ ಪರೀಕ್ಷೆಯಲ್ಲಿ ನಾನು ಪಾಸಾಗುತ್ತೇನೆ. ಹಿರಿಯರ ಆಶೀರ್ವಾದ ಇದೆ. ಗೆಳೆಯರ ಶುಭ ಹಾರೈಕೆಗಳಿವೆ, ದೇವರ ಕೃಪೆಯಿದೆ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ನೆಮ್ಮದಿಯಿಂದ ಇರಲು ಪ್ರಯತ್ನಿಸಬೇಕು.

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ |
ಎಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲಲೋಕಕ್ಕಾಗಿ ತನಗೆ ತಾಂ ಕಲ್ಲಾಗ
ಬಲ್ಲವನೆ ಮುಕ್ತನಲ-ಮಂಕುತಿಮ್ಮ

ಎಲ್ಲರೊಳಗೆ ತಾನು ಮತ್ತು ತನ್ನೊಳಗೆ ಎಲ್ಲರೂ ಇರುವಂತೆ, ಎಲ್ಲೆಲ್ಲಿಯೂ ನೋಡಿ ನಡೆದುಕೊಳ್ಳುತ್ತಾ, ಎಲ್ಲರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾ, ಲೋಕಕ್ಕೆ ಬೆಲ್ಲದಂತೆ ಸಿಹಿಯಾಗಿರುತ್ತಾ, ತನಗೆ ಮಾತ್ರ ಕಲ್ಲಾಗಬಲ್ಲವನು 'ಮಾನಸಿಕ ಆರೋಗ್ಯವಂತ'.

■ ■




ನಿಮ್ಮ ಮಾನಸಿಕ ಆರೋಗ್ಯವರ್ಧನೆ ಹೇಗೆ?

 'ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ
ಇಂದ್ರಿಯಗಳೆಂಬ ಶಾಖೋಪಶಾಖೆಗೆ ಹಾರಿ
ವಿಷಯಗಳೆಂಬ ಹಣ್ಣು ಫಲಗಳಂ ಗ್ರಹಿಸಿ
ಭವದತ್ತ ಮುಖಮಾಡಿ ಹೋಗುತ್ತಿದೆ ನೋಡಾ
ಈ ಮನವೆಂಬ ಮರ್ಕಟದ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ
ಎನ್ನ ಉಳಿಸಿಕೊಳ್ಳಾ ಅಖಂಡೇಶ್ವರ'

ನಮ್ಮ ಮನಸ್ಸು ಮಂಗನಂತೆ ಅತಿಚಂಚಲ. ಒಂದು ವಿಷಯದಿಂದ ಮತ್ತೊಂದಕ್ಕೆ, ಒಂದು ಆಸೆಯಿಂದ ಮತ್ತೊಂದು ಆಸೆಗೆ, ಒಂದು ಚಿಂತೆಯಿಂದ ಮತ್ತೊಂದು ಚಿಂತೆಗೆ, ಒಂದು ಆಕರ್ಷಣೆಯಿಂದ ಇನ್ನೊಂದು ಆಕರ್ಷಣೆ ಎಡೆಗೆ ಜಿಗಿಯುತ್ತಲೇ ಇರುತ್ತದೆ. ಅದಕ್ಕೆ ನೆಮ್ಮದಿ ಇಲ್ಲವೇ ಇಲ್ಲ. ಅದು ಸುಮ್ಮನೆ ಕೂರುವುದಿಲ್ಲ. ನಮ್ಮ ಮನಸ್ಸು ಸುಖದಿಂದ ಹಿಗ್ಗುತ್ತದೆ. ದುಃಖದಿಂದ ಕುಗ್ಗುತ್ತದೆ. ಸಿಟ್ಟುಕೋಪಗಳಿಂದ ಉರಿಯುತ್ತದೆ. ಭಯದಿಂದ ನಡುಗುತ್ತದೆ. ಮತ್ಸರದಿಂದ ಕುದಿಯುತ್ತದೆ. ನಿರಾಶೆ, ಜಿಗುಪ್ಪೆಗಳಿಂದ ಕಂಗಾಲಾಗುತ್ತದೆ. ಇರುವುದಕ್ಕಿಂತ ಇಲ್ಲದಿರುವುದರೆಡೆಗೆ ತುಡಿಯುತ್ತಿರುತ್ತದೆ. ಅದಕ್ಕೆ ತೃಪ್ತಿ ಇಲ್ಲ. ಸಮಾಧಾನವಿಲ್ಲ. ಪ್ರತಿಕ್ಷಣ ಏನಾದರೊಂದನ್ನು ಬೇಡುತ್ತಲೇ ಇರುತ್ತದೆ. ಅದರ ಬೇಕುಗಳ ಪಟ್ಟಿ ಬಹುದೊಡ್ಡದು. ಬಯಸಿದ್ದು ದೊರಕಿದಾಗ, ಸಾಕು ಎಂದು ಹೇಳದೇ, ಇನ್ನಷ್ಟುಬೇಕು ಎನ್ನುತ್ತದೆ. ಇತರರಿಗೆ ನೋವು ಸೋಲು, ನಿರಾಶೆಗಳಿಂದ ಕಂಗೆಡುತ್ತದೆ. ತಾನೂ ರೋಗಗ್ರಸ್ತವಾಗಿ ಹೆಚ್ಚು ಸಿಕ್ಕಿದೆ ನನಗೆ ಕಡಿಮೆ ಎಂದು ಖಿನ್ನವಾಗುತ್ತದೆ. ಉಂಟಾದ ಕಷ್ಟನಷ್ಟ ದೇಹವನ್ನೂ ರೋಗಗ್ರಸ್ತವನ್ನಾಗಿ ಮಾಡುತ್ತದೆ. ಏನಿದೀ ಮನಸ್ಸು, ಅದನ್ನು


ನೆಮ್ಮದಿಯಿಂದ ಇಡಲು ಏನು ಮಾಡಬೇಕು. ಅದು ಆರೋಗ್ಯವಾಗಿರಲು

ಯಾವ ಕ್ರಮಗಳನ್ನು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ನೋಡೋಣ:

ನಮ್ಮ ದೇಹದೊಳಗಿನ ಚೇತನವೇ ಮನಸ್ಸು. ಅದು ನಮ್ಮ ದೇಹವನ್ನು ದೇಹದ ಎಲ್ಲಾ ಅಂಗಾಂಗಗಳನ್ನು ನಿರ್ದೇಶಿಸುವುದರ ಜೊತೆಗೆ ನಮ್ಮ ಆಲೋಚನೆ, ಭಾವನೆಗಳು, ಪಂಚೇಂದ್ರಿಯಗಳಿಂದ ಒಳಬರುವ ಎಲ್ಲ ಮಾಹಿತಿಗಳನ್ನು ಅರ್ಥೈಸುವುದು, ಜ್ಞಾನ-ಕೌಶಲ್ಯಗಳನ್ನು ಕಲಿಯುವುದು, ಕಲಿತು ಸಮಯ ಸಂದರ್ಭಕ್ಕೆ ಅನುಸಾರವಾಗಿ ಅವನ್ನು ವಿವೇಚನೆಯಿಂದ ಬಳಸುವುದು. ಆಹಾರ, ನಿದ್ರೆ, ಮೈಥುನ, ಕಲ್ಮಶಗಳ ವಿಸರ್ಜನೆಯಂತಹ ಸರಿತಪ್ಪುಗಳನ್ನು ನಿರ್ಣಯಿಸುವುದು, ನಮ್ಮ ಬಲಾಬಲಗಳನ್ನು ಅರ್ಥ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು, ಒಳಿತು, ಕೆಡುಕು, ಮಾಡಿಕೊಳ್ಳುವುದು, ಯಾವುದೇ ವಿಷಯ, ವ್ಯಕ್ತಿ ಸನ್ನಿವೇಶಕ್ಕೆ ಸೂಕ್ತವಾದ ಕ್ರಿಯೆ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದು, ಇತರರೊಂದಿಗೆ ಸ್ನೇಹ ಸಂಬಂಧ ಗಳನ್ನು ಇಟ್ಟುಕೊಳ್ಳುವುದು, ಮನೆ ಮಕ್ಕಳು ಆಶ್ರಿತರನ್ನು ರಕ್ಷಿಸುವುದು ವಾಸ್ತವಿಕ ಜಗತ್ತಿನೊಡನೆ ಹೊಂದಿಕೊಳ್ಳುವುದು ಇತ್ಯಾದಿ ಅನೇಕ ಸಾಯುವ ಕ್ಷಣದವರೆಗೆ ಮಾಡುತ್ತಲೇ ಇರುತ್ತದೆ. ಸುಮಾರು ಇಪ್ಪತ್ತು ಚಟುವಟಿಕೆಗಳನ್ನು ಈ ನಮ್ಮ ಮನಸ್ಸು ನಿರಂತರವಾಗಿ ಹುಟ್ಟಿನಿಂದ ಹಿಡಿದು, ವರ್ಷಗಳ ಕಾಲ ನಮ್ಮ ಮನಸ್ಸು (ಗರ್ಭಧಾರಣೆ ಅವಧಿಯಿಂದ ಹಿಡಿದು ಪ್ರೌಢಾವಸ್ಥೆಯನ್ನು ಮುಟ್ಟುವವರೆಗೆ) ವಿಕಾಸ ಹೊಂದುತ್ತದೆ.


ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ
ಪಂಚಕರಣಂಗಳಿವೆ ಎಂದು ಹೇಳಿಹೇ ಕೇಳಿರಯ್ಯಾ
ಮನವೆಂಬುದು ಸಂಕಲ್ಪವಿಕಲ್ಪಕ್ಕೊಳಗಾಯಿತ್ತು
ಇಲ್ಲದುದ ಕಲ್ಪಿಸುವುದೇ ಸಂಕಲ್ಪ
ಇದ್ದುದ ನರಿಯದುದೇವಿಕಲ್ಪ
ಕಲ್ಪಿಸಿ ರಚಿಸುವುದೇ ಬುದ್ಧಿಯಯ್ಯ
ಕಲ್ಪಿಸಿ ಮಾಡುವುದು ಚಿತ್ತವಯ್ಯ
ಮಾಡಿದುದಕೆ ನಾನೆಂಬುದು ಅಹಂಕಾರವಯ್ಯ

ಮಾಡುವ ನೀಡುವ ಭಾವ ಶಿವ (ದೈವ) ಕೃತ್ಯವೆಂದಡೆ ಜ್ಞಾನವಯ್ಯ
ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ
ಕಪಿಲಸಿದ್ದ ಮಲ್ಲಿಕಾರ್ಜುನಾ.


ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು, ಆಶಾವಾದಗಳು, ಸರಿನಿರ್ಧಾರಗಳನ್ನು ಮಾಡುವುದು. ವಿಷಯ ವಸ್ತು-ಸಂದರ್ಭ ಘಟನೆಗಳ ವಾಸ್ತವಿಕ-ಸತ್ಯದ ವಿಶ್ಲೇಷಣೆ ಮಾಡುವುದು. ಪ್ರೀತಿ ವಿಶ್ವಾಸ ಸ್ನೇಹ, ದಯೆ- ಅನುಕಂಪ ಸಹಾನುಭೂತಿ, ಸ್ವಾಭಿಮಾನ, ಧೈರ್ಯದಂತಹ ಸಕಾರಾತ್ಮಕ ಭಾವನೆಗಳ ಪ್ರಕಟಣೆ, ಜೀವನದ ಬೇಕುಬೇಡಗಳನ್ನು, ಸಮಾಜ ವಿಧಿಸುವ ಕಟ್ಟುಕಟ್ಟಳೆಗಳೊಳಗೆ ಪೂರೈಸಿಕೊಂಡು ತೃಪ್ತಿಪಡುವುದು. ಇತರರಿಗೆ ನೋವು ತೊಂದರೆ ಕೊಡದೆ ಋಜು ಮಾರ್ಗದಲ್ಲಿ ನಡೆಯುವುದು. ಸಕಲರಿಗೆ ಲೇಸನ್ನು ಬಯಸುವುದು, ಯಾವುದೇ ಸಂದರ್ಭ ಸನ್ನಿವೇಶಕ್ಕೆ ಹೊಂದಿಕೊಳ್ಳು ವುದು. ಏನಾದರೂ ಉತ್ತಮವಾದ ಗುರಿ ಇಟ್ಟುಕೊಂಡು, ಅದನ್ನು ಧರ್ಮಮಾರ್ಗದಲ್ಲಿ ಮುಟ್ಟಲು ಪ್ರಯತ್ನಿಸುವುದು, ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ದೀನ-ದಲಿತ-ಅಂಗವಿಕಲರಿಗೆ ನೆರವಾಗುವುದು, ಪರೋಪಕಾರ ಮಾಡುವುದು ಮಾನಸಿಕ ಆರೋಗ್ಯದ ಲಕ್ಷಣಗಳು.

ನಕಾರಾತ್ಮಕ ಆಲೋಚನೆಗಳು, ನಿರಾಶಾವಾದ, ದುಡುಕಿ ತಪ್ಪು ನಿರ್ಧಾರಗಳನ್ನು ಮಾಡುವುದು, ಸದಾ ಕಲ್ಪನಾಲೋಕದಲ್ಲಿ ವಿಹರಿಸುವುದು. ಸತ್ಯವಾಸ್ತವಿಕತೆಯನ್ನು ಒಪ್ಪಲು ನಿರಾಕರಿಸುವುದು, ಇತರರು ಹೇಳಿದ್ದನ್ನೆಲ್ಲಾ, ನೋಡಿದ್ದು ಕೇಳಿದ್ದನ್ನೆಲ್ಲಾ ಸುಲಭವಾಗಿ ನಂಬುವುದು, ಮೂಢನಂಬಿಕೆಗಳು ಕಂದಾಚಾರಗಳನ್ನು ಪ್ರೋತ್ಸಾಹಿಸುವುದು, ಮನಸ್ಸಿನೊಳಗೆ ಆಸೆ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳನ್ನು ತುಂಬಿಕೊಳ್ಳುವುದು, ಪರಹಿತಕ್ಕಿಂತ ಸ್ವಾರ್ಥಕ್ಕೇ ಹೆಚ್ಚು ಆದ್ಯತೆ ನೀಡುವುದು, ಭೂತ-ಭವಿಷ್ಯಗಳ ಬಗ್ಗೆ ಇಲ್ಲದುದರ ಬಗ್ಗೆ ಆಗಿಹೋದ ತಪ್ಪು ಕಹಿಘಟನೆಗಳ ಬಗ್ಗೆ ಚಿಂತಿಸಿ ಕೊರಗುವುದು, ಅಲ್ಪ ಕಾರಣಗಳೇ ದುಃಖ, ಭಯ, ಕೋಪಗಳನ್ನು ಪಕಟಿಸುವುದು, ಗುರಿ ಇಲ್ಲದೇ ಜೀವನಮಾಡುವುದು, ಗುರಿ ಇಟ್ಟುಕೊಂಡರೂ, ಮಾರ್ಗದ ಬಗ್ಗೆ ವಿವೇಚನೆ ಇಲ್ಲದಿರುವುದು, ಅಕ್ರಮ ಅನ್ಯಾಯ, ಅಧರ್ಮದ


ದಾರಿ ತುಳಿಯುವುದು, ಮೋಸ ವಂಚನೆಯ ಮೂಲಕ, ನೀತಿ

ನಿಯಮಗಳನ್ನು ಪಾಲಿಸದೆ, ಸಂಪತ್ತು ಸ್ಥಾನಮಾನಗಳನ್ನು ಪಡೆಯುವುದು, ಇತರರನ್ನು ಉಪೇಕ್ಷಿಸುವುದು, ತಿರಸ್ಕಾರದಿಂದ ನೋಡುವುದು, ಅವಮಾನ ಮಾಡುವುದು, ಹಿಂಸೆ-ಆಕ್ರಮಣ-ಶೀಲತೆ-ನಾಶಮಾಡುವ ಪ್ರವೃತ್ತಿಯನ್ನು ತೋರುವುದು, ಮಾನಸಿಕ ಅನಾರೋಗ್ಯದ ಪ್ರಮುಖ ಲಕ್ಷಣಗಳು.

ಮಾನಸಿಕ ಆರೋಗ್ಯ ಮತ್ತು ಅನಾರೋಗ್ಯವನ್ನು ನಿರ್ಧರಿಸುವ ಅಂಶಗಳು[ಸಂಪಾದಿಸಿ]

ವ್ಯಕ್ತಿ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ(ಳೆ)ಯೇ ಅಥವಾ ಅನಾರೋಗ್ಯವಾಗಿದ್ದಾನೆ(ಳೆ)ಯೇ ಎಂಬುದನ್ನು ಹಲವಾರು ಅಂಶಗಳು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ನಿರ್ಧರಿಸುತ್ತವೆ ಎಂಬುದು ಗಮನಾರ್ಹ.

  • ಅನುವಂಶೀಯತೆ ನ್ಯೂನತೆಯುಳ್ಳ ವಂಶವಾಹಿನಿಗಳು, ವರ್ಣತಂತುಗಳು.
  • ಮಿದುಳಿನ ಬೆಳವಣಿಗೆ-ಮಿದುಳಿಗಾಗುವ ಹಾನಿ, ನ್ಯೂನತೆ ಕೊರತೆಗಳು.
  • ತಂದೆತಾಯಿಗಳ ಲಾಲನೆ ಪಾಲನಾ ವಿಧಾನಗಳು
  • ಕುಟುಂಬದ ಇತರ ಸದಸ್ಯರ ಮನೋಭಾವ ನಡೆವಳಿಕೆಗಳು.
  • ಮನೆಯ ವಾತಾವರಣ.
  • ಶಾಲೆ-ಶಿಕ್ಷಕರು-ಸಹಪಾಠಿಗಳು-ಶಿಕ್ಷಣದ ಗುಣಮಟ್ಟ.
  • ನೆರೆಹೊರೆ-ಸಮಾಜದ ರೀತಿನೀತಿಗಳು.
  • ಮಾಧ್ಯಮಗಳ ಗುಣಮಟ್ಟ ಮತ್ತು ಪ್ರಭಾವ.
  • ಹಣಕಾಸು, ಸಂಪನ್ಮೂಲಗಳ ಹೆಚ್ಚಳ ಅಥವಾ ಕೊರತೆ.
  • ಪರಿಸರ
  • ದೇಹದ ಆರೋಗ್ಯಸ್ಥಿತಿ ಅಥವಾ ಕಾಯಿಲೆಗಳು.

  • ಜೀವನದ ಘಟನೆಗಳು: ಸಾವು ಅಗಲಿಕೆ, ಕಷ್ಟನಷ್ಟ, ಸೋಲುಗೆಲವು, ಸ್ಥಳಬದಲಾವಣೆ, ಉದ್ಯೋಗದಲ್ಲಿ ವರ್ಗಾವಣೆ ಭಡ್ತಿ, ಹಿಂಭಡ್ತಿ, ಮದುವೆ-ವಿಚ್ಛೇದನೆ ಇತ್ಯಾದಿ.
  • ಜನ ಸಂಪರ್ಕ, ಜನರ ಆಸರೆ ಅಥವಾ ಅಸಹಕಾರ, ಬಂಧುಮಿತ್ರರ ನಡೆವಳಿಕೆಗಳು ಮತ್ತು ಧೋರಣೆಗಳು ಇತ್ಯಾದಿ.
■ ■

ಬರಿಯ ಪೊಳ್ಳು ವಿಚಾರ ಮಾನುಷ ವ್ಯಾಪಾರ |
ಪರಿಕಿಸಲು ಪುಣ್ಯವೆಂಬುದುಮಹಂಕಾರ ||
ಅರಳಿ ಮೊಗವನಿನಿತು ನಕ್ಕು ನಗಿಸಿರೆ ಸಾರ |
ಹೊರೆ ಮಿಕ್ಕ ಸಂಸಾರ ||

ಮನುಷ್ಯರ ವ್ಯವಹಾರ, ಪರಿಶ್ರಮ ತಿರುಳಿಲ್ಲದ ಪೊಳ್ಳು ವಿಚಾರ! ಪರೀಕ್ಷೆ ಮಾಡಿ, ಯೋಚಿಸಿ ನೋಡಿದರೆ ಒಳ್ಳೆಯ ಕೆಲಸ ಮಾಡಿ ಪುಣ್ಯ ಗಳಿಸಿದೆ ಎಂಬುದೂ ಒಂದು ರೀತಿಯ ಅಹಂಕಾರವೇ. ಮುಖವನ್ನು ಅರಳಿಸಿ ನಕ್ಕು, ಇತರರನ್ನು ನಗಿಸಿದರೆ ಸಾಕು.

ಸಂಸಾರದ ಮಿಕ್ಕ ಶ್ರಮಗಳೆಲ್ಲ ಒಂದು ಹೊರೆ. -ಡಿ.ವಿ.ಜಿ

ನಾವೇಕೆ ಹುಟ್ಟಿದೆವು ಮತ್ತು
ನಾವು ಎಂದು ಸಾಯುತ್ತೇವೆ ಗೊತ್ತಿಲ್ಲ
ಹುಟ್ಟು ಸಾವಿನ ನಡುವಿನ ಬದುಕಲ್ಲಿ
ನಮ್ಮ ಕ್ಷೇಮದ ಜೊತೆಜೊತೆಗೆ
ಇತರರ ಕ್ಷೇಮವನ್ನು ನೋಡಿಕೊಳ್ಳೋಣ
ಅದೇ ಬದುಕಿನ ಸಾರ್ಥಕತೆ.




ಸಮಾಧಾನ


ಮಾನಸಿಕ ಸಮಸ್ಯೆಗಳಿಗೆ ಉಚಿತ ಆಪ್ತ ಸಲಹೆ
ಮಾರ್ಗದರ್ಶನ ಹಾಗೂ ತರಪೇತಿ ಕೇಂದ್ರ

ಡಾ. ಸಿ. ಆರ್. ಚಂದ್ರಶೇಖರ್ ಮತ್ತು ತಂಡದವರಿಂದ

  • ವಿದ್ಯಾರ್ಥಿಗಳ ಕಲಿಕೆ ಸಮಸ್ಯೆಗಳು
  • ಮಕ್ಕಳ ನಡವಳಿಕೆ ತೊಂದರೆಗಳು
  • ದಾಂಪತ್ಯ ಮತ್ತು ಕುಟಂಬ ವಿರಸಗಳು
  • ಮಾನಸಿಕ ಒತ್ತಡ ಮತ್ತು ಕೇಶಗಳು
  • ಆತಂಕ ಖಿನ್ನತೆ ಇತ್ಯಾದಿ ಮಾನಸಿಕ ಅಸ್ವಸ್ಥತೆಗಳು

ಇತ್ಯಾದಿಗಳಿಗೆ ಸಲಹೆ, ಸಾಂತ್ವನ ಮಾರ್ಗದರ್ಶನವನ್ನು
ಉಚಿತವಾಗಿ ನೀಡಲಾಗುತ್ತದೆ.


ಸಮಯ
ಪ್ರತಿದಿನ ಬೆಳಿಗ್ಗೆ 11.00 ರಿಂದ 1.00 ಗಂಟೆ ಮತ್ತು
ಸಂಜೆ 6.00 ರಿಂದ 8.30ರವರೆಗೆ
ಭಾನುವಾರ ರಜೆ

ಹಾಗೆಯೇ ಆಪ್ತಸಮಾಲೋಚಕರಾಗಲು ಮೂರು ತಿಂಗಳು ಅವಧಿಯ
ತರಪೇತಿ ಕಾರ್ಯಕ್ರಮವಿದೆ.
ಪ್ರತಿ ಭಾನುವಾರ ಬೆಳಿಗ್ಗೆ 10.00 ರಿಂದ 2.00 ಗಂಟೆ

ಸ್ಥಳ
ನಂ. 324, 6ನೇ ಕ್ರಾಸ್, ಅರಕೆರೆ ಮೈಕೋ ಲೇಔಟ್
ಮೊದಲನೇ ಹಂತ (ಬಸ್ ಸ್ಟಾಂಡ್ ಸಮೀಪ)
ಬನ್ನೇರು ಘಟ್ಟ ರಸ್ತೆ, ಬೆಂಗಳೂರು- 560 076, ಫೋನ್-26582929
ಡಾ|| ಸಿ.ಆರ್. ಚಂದ್ರಶೇಖರ್: ಮೊಬೈಲ್ 98456 05615



ಸರಳ-ತೃಪ್ತ ಜೀವನ ಶೈಲಿಯಿಂದ
ಆರೋಗ್ಯ ಮತ್ತು ಆನಂದ ಲಭ್ಯ

ಡಾ॥ ಸಿ. ಆರ್. ಚಂದ್ರಶೇಖರ್
ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು
ಸಮಾಧಾನ ಆಪ್ತ ಸಲಹಾ ಕೇಂದ್ರ, ಬೆಂಗಳೂರು



ವೈರಿಗಳೊಡನೆ ಹೋರಾಡಿ
ಗೆಲ್ಲುವವರು ವೀರರು.
ಖಿನ್ನತೆಯ ವಿರುದ್ದ ಹೋರಾಡಿ
ಗೆಲ್ಲುವವರು ವೀರರು, ಧೀರರು.
ಖಿನ್ನತೆ ಬರದಂತೆ ತಡೆಗಟ್ಟುವವರು
ಜಾಣರು, ಚತುರರು.
ಖಿನ್ನತೆಯಿಂದ ಬಳಲುವವರಿಗೆ
ನೆರವಾಗುವರರು ಉತ್ತಮರು.
ಅವರು ಪ್ರಾತಃಸ್ಮರಣೀಯರು.

ಖಿನ್ನತೆಗೆ ಚಿಕಿತ್ಸೆಯೂ ಇದೆ. ಅದು ಗುಣವಾಗುವಂತಹ ಕಾಯಿಲೆ. ಖಿನ್ನತೆ ಬರದಂತೆ ತಡೆಗಟ್ಟಲೂಬಹುದು. 2017-18 ಖಿನ್ನತೆಯ ನಿವಾರಣೆಯ ವರ್ಷ. ಬನ್ನಿ ಖಿನ್ನತೆಯನ್ನು ನಿಭಾಯಿಸೋಣ ನಿವಾರಿಸೋಣ.

ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್ (ರಿ)

ಕಲಬುರಗಿ