ವಿಷಯಕ್ಕೆ ಹೋಗು

ಗುಡಿಯ ನೋಡಿರಣ್ಣಾ ದೇಹದ

ವಿಕಿಸೋರ್ಸ್ದಿಂದ

ದೇಹದ ಗುಡಿಯ ನೋಡಿರಣ್ಣಾ

[ಸಂಪಾದಿಸಿ]
  • ದೇಹವೆಂಬ ದೇವಾಲಯವ ನೋಡಿ:
  • ಅಧಿಭೌತಿಕ, ಅಧಿದೈವಿಕ, ಅಧ್ಯಾತ್ನ ಈ ಮೂರು ತತ್ವಗಳ ತ್ರಿಕೋನದಲ್ಲಿ- ಅವೇ ಅಡಿಗಲ್ಲು; ನಿರಾಕಾರನಾದ ಆ ಮೂಲ ತತ್ವ (ಪರಬ್ರಹ್ಮ) ಸಗುಣವಾಗಿ ಈ ದೇಹದಲ್ಲಿ ಬಂದು ವಾಸಿಸುವ ಅಚ್ಚರಿ!

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||

[] [] []

ಶರೀಫ ಸಾಹಿತ್ಯ

ಉಲ್ಲೇಖ

[ಸಂಪಾದಿಸಿ]
  • ಶಿಶುನಾಳ ಶರೀಫರ ಪದಗಳು -ಅನಾಮಿಕ
  1. ಶಿಶುನಾಳ ಶರೀಫರ ಪದಗಳು -ಅನಾಮಿಕ
  2. ಶಿಶುನಾಳ ಶರೀಫರು
  3. ಶಿಶುನಾಳ ಶರೀಫರ ಗೀತೆಗಳು