ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ
ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು
ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ
ಹಂಪಿ
ಕಾಶಿ
ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ
ಇದು ಕಾರಣ
ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.