ಗುರುವ ಮುಟ್ಟಿ ಬಂದಲ್ಲಿ ಪ್ರಸಾದ. ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಲಿಂಗವ ಮುಟ್ಟಿ ಬಂದಲ್ಲಿ ಪ್ರಸಾದ
ತನ್ನ ಬಾಯ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಜಂಗಮವ ಮುಟ್ಟಿಬಂದಲ್ಲಿ ಪ್ರಸಾದ
ತನ್ನ ಬಾಯಿ ಮುಟ್ಟಿ ಬಂದಲ್ಲಿ ಎಂಜಲೆಂಬರು ನೋಡಾ. ಗುರುವಿದ್ದಲ್ಲಿ ಅವಗುಣವುಂಟೆ? ಲಿಂಗವಿದ್ದಲ್ಲಿ ಒಳ್ಳೆಯ ಸ್ಥಲ ಅಲ್ಲದ ಸ್ಥಲವುಂಟೆ? ಜಂಗಮವಿದ್ದಲ್ಲಿ ಜಾತಿ ವಿಜಾತಿಯುಂಟೆ? ಪ್ರಸಾದವಿದ್ದಲ್ಲಿ ಎಂಜಲುಂಟೆ? ಇಂತಪ್ಪ ಪ್ರಪಂಚಜೀವಿಗಳನೆಂತು ಪ್ರಸಾದಿಗಳೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.