ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ
ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ