ಗೋಪಾಲದಾಸರ ಸಾಹಿತ್ಯ

ವಿಕಿಸೋರ್ಸ್ದಿಂದ
Jump to navigation Jump to search

ಸುಳಾದಿ - ಧ್ರುವತಾಳ

ಅನ್ನಂತ ಅಪರಾಧ ಎನ್ನಲ್ಲಿ ಉಂಟೊ ದೇವ ಇನ್ನು ಮುಂದೆ ಆಗೋವು ಅನಂತವಿದ್ದರನ್ನ ಮುನ್ನ ನಿನ್ನ ಆ ನಾಮವನ್ನು ನೆನೆಯದೆ ಅನ್ನಂತ ಅಪರಾಧಕಧಿಕಾರಿ ಆನಾದೆನೋ

ನಿನ್ನ ನಾಮದಿಂದ ಹೋಗುವಷ್ಟು ದೋಷ ಎನ್ನಿಂದ ಮಾಡಲು ಇನ್ನಳವಲ್ಲವು ಇನ್ನು ತಿಳಿದುಹೋಗೆ ಎನ್ನ ಮನವು ನಿನ್ನ ನೆನೆಸದನ್ಯಕೆರಗುತ್ತದೆ ಕಣ್ಣಲ್ಲಿ ಕಂಡರೆ ಕರ್ಣದಿ ಕೇಳಿದರೆ ಇನ್ನೆಂಥ ವೈರಾಗ್ಯವನ್ನು ನಾ ತೋರುವೆ ಕುನ್ನಿ ಸ್ವಪ್ನದಿ ಜ್ಞಾನವನ್ನು ತಂದುಕೊಂಡು ಸನ್ನುತ ಪರರನ್ನವ ತಿಂದಂತೆ ಎನ್ನ ದಾಸತ್ವವು ಇನ್ನಿಚ್ಛೈಸಲೇಕಯ್ಯ ಅನ್ನಂತ ಪರಿಯಲಿ ಶಾಸ್ತ್ರಂಗಳೆಲ್ಲ ತಿಳಿದು ತನ್ನ ಸತಿಯನು ಅನ್ಯರಿಗೊಪ್ಪಿಸಿ ಹೆಣ್ಣು ಶಿಶುವು ಪಡೆದು ಕನ್ಯಾದಾನವ ಮಾಡಿ ಪುಣೈಅ ಗಳಿಸಿದಂತೆ ಎನ್ನ ಧರ್ಮವಯ್ಯ ನಿನ್ನ ದಾಸನಾಗಿ ನಿನ್ನ ಮುದ್ರೆಯ ಧರಿಸಿ ನಿನ್ನ ಹಾಡಿ ಪಾಡಿ ನಿನ್ನನು ಒಲಿಸದೆ ಹೊನ್ನ ಉಳ್ಳವನಲ್ಲಿ ಚೆನ್ನಾಗಿ ಪೋಗಿನ್ನು ನಿನ್ನಂಥ ದಾತನ್ನ ಎನ್ನೆಲ್ಲಿ ಕಾಣೆನೆಂ- ದುನ್ನತ ಪರಿಯಲ್ಲಿ ಬಣ್ಣಿಸಿ ಕೊಂಡಾಡಿ ಹೊನ್ನು ಗಳಿಸಿ ತಂದು ಅನ್ನದಾನವ ಮಾಡಿ ಘನತೆ ಪಡೆದೆನೊ ನಿನ್ನನೊಯಿದು ಬೀರಿ ಇನ್ನೇನಾಯಿತೆಂಬೊ ಪುಣ್ಯ ಪಾಪಂಗಳು ಮುನ್ನ ಮಾಡಿದುದೆಲ್ಲಿ ಇನ್ನು ಮಾಡುತಲಿಪ್ಪೆ ಸನ್ನುತ ಮುನಿಪ್ರಿಯ ಗೋಪಾಲವಿಠಲ ಎನ್ನ ದೇಹ ಬಲು ಭಂಗಗೆಟ್ಟಿತಲ್ಲೋ

ಮಠ್ಯತಾಳ

ಆಸೆ ಎಂಬೋದು ದೊಡ್ಡ ದೋಷವೆಂಬೋದು ತಿಳಿದು ರಾಸಿ ನರಕದೊಳು ವಾಸ ಮಾಡುವೆನಯ್ಯ ಹೇಸಿ ಜಂಬುಕ ತಾನು ಗ್ರಾಸಕಕ್ಕಿಯ ವಾಸೆ ಎಂದು ತಿಳಿದು ಘಾಸಿಬಟ್ಟ ತೆರದಿ ಮೋಸ ಹೋಗಿ ದುರಾಸೆಗೆರಗಿ ಇನ್ನು ಮೀಸಲಾದ ಪುಣ್ಯಹ್ರಾಸ ಮಾಳ್ಪೆನಯ್ಯ ಈ ಸಮಸ್ತ ದೋಷರಾಶಿ ಒಪ್ಪಿಸಿನ್ನು ಬೇಸರದಲೆ ಶ್ರೀ ವಾಸುದೇವ ನಿನ್ನ ಸಾಸಿರ ನಾಮವು ಸೂಸಿ ವೃಷ್ಟಿಗರೆದು ನಾಶಮಾಡು ಅಘ- ಪಾಶ ಕಡಿಯೋ ಬೇಗ ಶೇಷಶಾಯಿ ಗೋಪಾಲವಿಠಲ ನಿಜ ದಾಸರಲಿ ಭಕುತಿ ಲೇಸಾಗಿ ಈಯೋ

ತ್ರಿಪುಟತಾಳ

ಆವಾವ ಕಾಲಕ್ಕು ಜೀವಯೋಗ್ಯತೆ ಅರಿದು ದೇವ ನೀನು ಫಲವನೀವುತಲಿರೆ ಆ ಒಂದು ಪರಿ ಯತನವ ಮಾಡಿ ನಿನ್ನ ಸೇವೆಗೆ ಅನ್ಯಥವಾಗುವೆನೊ ತನುವಿನ ಗ್ರಾಸವು ಕಾವುವಾತನೆ ಬಲ್ಲ ಹಾವು ಬಲ್ಲುದೆ ವೃಥಾ ಧಾವತಿ ಅಲ್ಲದೆ ಹೇವ ಇಲ್ಲದೆ ಮಾನ ಈ ವಿಧ ಎಳೆದು ಸಾವು ಕೊಲ್ಲುತಲಿದೆ ದೇವ ಕೇಳೋ ಆವುದಾದರು ನಿಷ್ಠುರ ಆಡಿದಡೆ ದೇವನೆ ಪ್ರೇರಕನೆಂದು ಅರಿಯದಲೆ ನೋವಾಗುವೆನು ನಿನ್ನ ಭಾವಾರ್ಥ ತಿಳಿಯದೆ ಆವ ಕಾರ್ಯದಲ್ಲಿ ಆವ ಕರ್ಮಗಳಲ್ಲಿ ಆವಾವರಲ್ಲಿನ್ನು ಯಾವತ್ತರಲ್ಲಿ ನೀ ವ್ಯಾಪಕನಾಗಿನ್ನು ಜೀವರ ಕೈಯ ವ್ಯಾಪಾರ ಮಾಡಿಸಿನ್ನು ಆ ಉದಕದಿ ಕಮಲವು ಇದ್ದಂತೆ ಈ ಉಪಾಸನೆಯನ್ನು ಸಾವಧಾನದಿ ಮಾಳ್ಪ್ ಜೀವರಿಗೆ ಇನ್ನು ನೀವರಿಯೆ ರಂಗ ದೇವಕಿನಂದನ ಗೋಪಾಲವಿಠಲ ಆವರಲ್ಲಿ ಇದ್ದರೆನ್ನ ಕಾವಭಾರ ನಿನ್ನದೋ

ಅಟ್ಟತಾಳ

ಸಾಕು ಸಾಕು ದುರ್ವಿಷಯಕ್ಕೆರಗಿಸದೆ ನೂಕಬೇಡವೋ ನರಕದ ಜನುಮಕೆ ನೂಕು ನೂಕು ದುರಿತ ಕುಪಥಗಳೆಲ್ಲ ನೂಕಿಸಬೇಡವೋ ದಿನವ ಕಳೆಯದೆ ವ್ಯರ್ಥ ಬೇಕು ಎನಿಸು ನಿನ್ನ ಶರಣರ ಸಹವಾಸ ಸಾಕು ಸಾಕೆಂಬಂತೆ ಸಾರಿದೆ ನಿನ್ನ ನಾಮ ವಾಕು ಎನಗ್ ಇತ್ತು ಸಹಕಾರವಾಗಿನ್ನು ನೀ ಕಾಯಬೇಕೆನ್ನ ಸಾಕಲ್ಯಗುಣನಿಧಿ ಲೋಕರಕ್ಷಕ ರಂಗ ಗೋಪಾಲವಿಠಲ ವ್ಯಾಕುಲಗೊಳಿಸು ನಿನ್ನ ಕಳವಳಿಕೆಯೊಳು

ಆದಿತಾಳ

ಧರೆಯೊಳು ಅಜ್ಞಾನವೆಂಬೊ ಕತ್ತಲೆಗಿನ್ನು ಹರಿ ನಿನ್ನ ಚರಣ ಸ್ಮರಣೆ ದೀಪ ನಿಲ್ಲಿಸೆ ಇರಬಲ್ಲುದೆ ತಾ ತಮವು ಹರಿದು ಪೋಗುವುದಯ್ಯ ಕರುಣಾಕರನೆ ಸ್ಮರಣೆ ಫಲ ಉಳ್ಳವರಿಗೆ ಕರಿಯೆಂಬೊ ದೋಷವಿನ್ನು ಹರಿಯು ಕಂಡ ತೆರದಿ ಅರಿಯೆ ನಾನಾಪರಿ ಸಾಧನದೊಳಗೆ ಹರಿ ನಿನ್ನ ಸ್ಮರಣೆಗೆ ಇನ್ನೊಂದು ನಾ ಕಾಣೆ ಪರಮ ಮೂಢನು ನಾನು ಕರವೊಡ್ಡಿ ಬೇಡಿಕೊಂಬೆ ವರವ ಪಾಲಿಸು ದೇವ ಕರುಣಾಕರ ಕೃಷ್ಣ ದುರಿತ ಬಂದರಾಗಲಿ ಹರುಷ ಬಂದರಾಗಲಿ ಇರುಳು ಹಗಲು ನಿನ್ನ ಸ್ಥಿರ ಭಕುತಿ ಸ್ಮರಣೆಯಿತ್ತು ಪೊರೆ ಎನ್ನ ಬಿಡದಲೆ ಗೋಪಾಲವಿಠಲ

ಜತೆ

ನಿನ್ನ ವೃಕ್ಷದ ಹಣ್ಣು ಅನ್ಯರು ಒಯ್ದರೆ ಪುಣ್ಯ ನಿನ್ನದು ಕಾಣೊ ಗೋಪಾಲವಿಠಲ