ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ
ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು
ನೋಡದ ಮುನ್ನವೆ ರೂಪವರ್ಪಿತವಾಯಿತ್ತು. ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು. ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು. ಅವಧಾರು ಅವಧಾರು ಲಿಂಗವೆ
ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು. ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ_ ಆರೋಗಿಸು ದೇವಾ.