ಚಿಲುಮೆಯ ಅಗ್ಘವಣಿಯ ಕುಡಿದರೇನೋ
ಜನ್ಮದ ಮೈಲಿಗೆಯ ತೊಳೆಯದನ್ನಕ್ಕರ? ಕಾಡುಗಟ್ಟಿಯ ನೀರ ಕುಡಿದರೇನೋ
ತನ್ನ ಕಾಡುವ ಕರಣಾದಿ ಗುಣಂಗಳ ಕಳೆದುಳಿಯದನ್ನಕ್ಕರ? ಉಳ್ಳಿ ನುಗ್ಗೆಯ ಬಿಟ್ಟರೇನೋ
ಸಂಸಾರದ ಸೊಕ್ಕಿನುಕ್ಕಮುರಿದು ಮಾಯಾದುರ್ವಾಸನೆಯ ವಿಸರ್ಜಿಸದನ್ನಕ್ಕರ? ಸಪ್ಪೆಯನುಂಡರೇನೋ ಸ್ತ್ರೀಯರ ಅಪ್ಪುಗೆ ಬಿಡದನ್ನಕ್ಕರ? ಅದೇತರ ಶೀಲ
ಅದೇತರ ವ್ರತ ಮರುಳೇ? ಅಂಗವಾಚಾರಲಿಂಗವಾಗಿ ಮನವು ಅರಿವು ಸಂಬಂಧವಾಗಿ ಸರ್ವ ದುರ್ಭಾವ ಚರಿತ್ರವೆಲ್ಲಾ ಕೆಟ್ಟು ಸತ್ಯ ಸದ್ಭಾವ ನೆಲೆಗೊಂಡ ಸದ್ಭಕ್ತನ ಸುಶೀಲಕ್ಕೆ ನಮೋನಮೋಯೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.