ಜಂಗಮ ಜಂಗಮವೆಂದರೆ ಬಾಯಿಲೆಕ್ಕವೆ ಜಂಗಮ ? ಜಂಗಮ ಜಂಗಮವೆಂದರೆ ಉಪಾಧಿಕನೆ ಜಂಗಮ ? ಜಂಗಮ ಜಂಗಮವೆಂಬುದೇನೊ ಬೋಧಕನೆ ಜಂಗಮ ? ಜಂಗಮ ಜಂಗಮವೆಂಬುದೇನೊ ಆಶ್ರಿತನೆ ಜಂಗಮ ? ಜಂಗಮ ಜಂಗಮವೆಂಬುದೇನೊ ಕಾರ್ಯಕಾರಣನೆ ಜಂಗಮ ? ಜಂಗಮ ಜಂಗಮವೆಂಬುದೇನೊ ಸ್ತ್ರೀಲಂಪಟನೆ ಜಂಗಮ ? ಈ ಷಡ್ಗುಣದಿಚ್ಛುಕರ ಜಂಗಮವೆಂಬೆನೆ ? ಎನ್ನೆನು. ಈ ಪಾತಕದ ನುಡಿಯ ಕೇಳಲಾಗದು. ಜಂಗಮವೆಂತಹನೆಂದರೆ: ನಿರವಯ ಜಂಗಮ
ನಿರುಪಾಧಿಕ ಜಂಗಮ ನಿರ್ಬೋಧಕ ಜಂಗಮ
ನಿರಾಶ್ರಿತ ಜಂಗಮ ನಿಃಕಾರಣ ಜಂಗಮ
ನಿರ್ಲಂಪಟ ಜಂಗಮ_ ಇಂತಪ್ಪುದೆ ಕಾರಣವಾಗಿ ಪ್ರಭುದೇವರಿಗೆ ಶರಣೆಂದು ಬದುಕಿದ ಬಸವಣ್ಣ. ಅವರಿಬ್ಬರ ಒಕ್ಕುದ ಕೊಂಡು
ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ