ಜನಪದ ಗೀತೆಗಳಲ್ಲಿ ಒಡಹುಟ್ಟು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

೧.ಅಕ್ಕತಂಗೇರ ಬಣ್ಣ ಅವರಿ ಹೂವಿನ ಬಣ್ಣ
ಕುಬುಸದ ಬಣ್ಣ ಕುತನೀಯ/ಹಡೆದಂಥ
ನಾರಿ ನಿನ ಬಣ್ಣ ರವಿಚಿನ್ನ

೨.ಹೆಣ್ಣೀನ ಜನುಮಾಕೆ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ/ಸಾವಿರ
ಹೊನ್ನ ಕಟ್ಟುವರು ಉಡಿಯೊಳಗ

೩.ಎನಗ ಯಾರಿಲ್ಲಾಂತ ಮನದಾಗ ಮರುಗಿದರ
ಪರನಾಡಲೊಬ್ಬ ಪ್ರತಿಸೂರ್ಯ/ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ

೪.ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳ
ಸೀರ್ಯೊಲ್ಲ ಅವನ ಕುಬುಸವಲ್ಲ/ಅಣ್ಣನ
ಮಾರಿ ನೋಡುವ ಮನಸಾಗಿ

೫.ಸರದಾರ ಬರುವಾಗ ಸುರಿದಾವ ಮಲ್ಲೀಗಿ
ದೊರೆ ನನ್ನ ತಮ್ಮ ಬರುವಾಗ /ಯಾಲಕ್ಕಿ
ಗೊನಿ ಬಾಗಿ ಹಾಲ ಸುರಿದಾವ

೬.ಹನ್ನೆರಡು ವರುಷಕ್ಕ ಕನ್ಯೆ ಮೈನೆರೆದಾಳ
ನಾನೇನ ಒಯ್ಲೆ ಕೊಡವೀಗಿ/ತಂಗೀಗಿ
ಕನ್ನಡಿ ಕುಪ್ಪುಸ ನೆನೆದಂಡಿ

೭.ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನಿಗಿ ಎರವಾದೆ/ನನ ತಮ್ಮ
ತಾ ಹುಟ್ಟಿ ಮನೆಗೆ ಧಣಿಯಾದ

೮.ಅಣ್ಣ ಬರತಾನಂತ ಅಂಗಳಕ ಥಳಿ ಕೊಟ್ಟ
ರನ್ನ ಬಚ್ಚಲಕ ಮಣಿ ಹಾಕಿ/ಕೇಳೆನ
ಥಣ್ಣಗ್ಹೀರಲಿ ತವರವರು

೯.ತಂಗೀಗಿ ಕಳುವ್ಯಾನ ತೆವರೇರಿ ನಿಂತಾನ
ಅಂಗೀಲಿ ಕಣ್ಣೀರು ವರಸ್ಯಾನ/ನನ್ನಣ್ಣ
ಇಂದೀಗಿ ತಂಗಿ ಎರವೆಂದಾ

೧೦.ಕಾರ್ಹುಣವಿ ಹಬ್ಬಕ ಕರಿಲಾಕ ಬರಬ್ಯಾಡ
ಕಾಲಬಾಡೀಗಿ ಕೊಡಬ್ಯಾಡ/ನನ್ನಣ್ಣ
ಹೊನ್ನ ದೀವಳಿಗಿ ಮರಿಬ್ಯಾಡ


೧೧. ಕೋಪವ್ಯಾಕಣ್ಣ ಕೊಳ್ಳೊ ಕಾಲಿಗೆ ನೀರ
ಬಾಯ ತಂಬುಲವ ಉಗುಳಣ್ಣ/ನೀ ಬರುವ
ದಾರೀಯ ನೋಡಿ ಬಡವಾದೆ

೧೨.ಬಾವೂಲಿ ಇಟಗೊಂಡು ಕಾವೂಲಿ ತಿದ್ದುವ
ಗಾಳಿ ಬಂದತ್ತ ಬಳಕೂವ/ನನ ತಮ್ಮ
ಬಾಳಿಯೆಲೆಗಿಂತ ಬಲು ಚಲುವ