ತನುವಿನಲ್ಲಿ ಜ್ಞಾನಗುರು ಸಾಹಿತ್ಯವಾಗಿ ತನುಭಾವವಿಲ್ಲ ನೋಡಾ. ಮನದಲ್ಲಿ ಅರುಹೆಂಬ ಶಿವಲಿಂಗ ಅಚ್ಚೊತ್ತಿತ್ತಾಗಿ ಮನಭಾವವಿಲ್ಲ ನೋಡಾ. ಭಾವದಲ್ಲಿ ಮಹಾನುಭಾವವೆಂಬ ಜಂಗಮ ಸಂಬಂಧವಾಯಿತ್ತಾಗಿ ಭಾವಾಭಾವಂಗಳಿಲ್ಲದ ಸದ್ಭಾವಿ ನೋಡಾ. ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾದ ನಿಃಪ್ರಪಂಚಿಯ ನೋಡಾ. ಆಚಾರ ಅಂಗವಾಗಿ ಅರುಹು ಹೃದಯವಾಗಿ
ಹೃದಯ ಶುದ್ಧವಾಗಿ ಹದುಳಿಗನಾದ ಸದ್ಭಕ್ತನಲ್ಲಿ ಮದನಹರನಿಪ್ಪನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.