ತನುವ್ಯಸನ ಮನವ್ಯಸನ ಧನವ್ಯಸನ ವಾಹನವ್ಯಸನ ಉತ್ಸಾಹವ್ಯಸನ ವಿಶ್ವವ್ಯಸನ ಸೇವಕವ್ಯಸನ ಇಂತೀ ಸಪ್ತವ್ಯಸನಂಗಳು: ತನುವ್ಯಸನ ವಸ್ತು ಆಭರಣ ವೀಳೆಯ ಬಯಸೂದು
ಮನವ್ಯಸನ ಕಳವು ಹುಸಿ ಪಾರದ್ವಾರವ ಬಯಸೂದು
ಧನವ್ಯಸನ ರಾಜ್ಯವ ಬಯಸೂದು. (ಧನಧಾನ್ಯವ ಬಯಸೂದು?) ವಾಹನವ್ಯಸನ ಆನೆ ಕುದುರೆ ಸೇನೆ ಬಯಸೂದು
ವಿಶ್ವವ್ಯಸನ ಚತುರ್ವಿಧಕರ್ತವ್ಯ ಬಯಸೂದು
ಉತ್ಸಾಹವ್ಯಸನ ಪುತ್ರ ಮಿತ್ರ ಕಳತ್ರವ ಬಯಸೂದು
ಸೇವಕವ್ಯಸನ ಉಣಲಾರೆ
ಉಡಲಾರೆ ತೊಡಲಾರೆನೆಂದೆನುತ್ತಿಹುದು. ಈ ಸಪ್ತವ್ಯಸನಂಗಳಂ ಬಿಟ್ಟು ಲಿಂಗವ್ಯಸನಿಯಾಗಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಿಗಳೆಂಬೆನು.