ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು ಪರದೇಶದೊಳಗಿಪ್ಪರೆಂಬ ಭಾವದಲ್ಲಿ ಅಡಗಿದ ಆನಂದಕ್ಕಿಂತ ಮನಮುಟ್ಟಿ ನೆನೆವುದರಿಂದಾದ ಆನಂದ ಮಿಗಿಲಾಗಿಪ್ಪುದು ನೋಡಾ ! ಮನಮುಟ್ಟಿ ನೆನೆವುದರ ಸುಖಕ್ಕಿಂತ
ಅವರನಪ್ಪಿ ಆಲಂಗಿಸುವುದರಿಂದಾದ ಸುಖ ಅಧಿಕವಾಗಿ ತೋರ್ಪುದು ನೋಡಾ ! ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ ಅವರೊಡನೆ ಸದಾ ಕೂಡಿಪ್ಪ ಹರ್ಷ ಹಿರಿದಾಗಿಪ್ಪುದು ನೋಡಾ ! ಇಂತೀ ದೃಷ್ಟಾಂತದಂತೆ
ಪರಶಿವಲಿಂಗವ ಭಾವದಲ್ಲಿ ಭಾವಿಸುವುದಕ್ಕಿಂತ ಮನಮುಟ್ಟಿ ನೆನೆವುದು
ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು
ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು
ಕರಮುಟ್ಟಿ ಪೂಜಿಸುವುದಕ್ಕಿಂತ ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು
ಪರಮಾವಧಿಯಾಗಿಪ್ಪುದು ನೋಡಾ ! ಇದು ಕಾರಣ_ಕೂಡಲಚೆನ್ನಸಂಗಯ್ಯನ ಶರಣರು ಭಾವದಿಂದ ಮನಕ್ಕೆ
ಮನದಿಂದ ನೇತ್ರಕ್ಕೆ
ನೇತ್ರದಿಂದ ಕರಕ್ಕೆ ಆ ಶಿವಲಿಂಗವ ಬಿಜಯಂಗೈಸಿಕೊಂಡು ಪೂಜಾದಿ ಸತ್ಕ್ರಿಯೆಗಳನಗಲದೆ ಆಲಸದೆ ಆಚರಿಸುತಿಪ್ಪರು