ತರವಲ್ಲ ತಗಿ ನಿನ್ನ ತಂಬೂರಿ

ವಿಕಿಸೋರ್ಸ್ದಿಂದ

ತರವಲ್ಲ ತಗಿ ನಿನ್ನ ತಂಬೂರಿ[ಸಂಪಾದಿಸಿ]

  • ತತ್ವಜ್ಞಾನದ ಅರಿವಿಲ್ಲದೆ ಪಾಂಡಿತ್ಯದಿಂದ ಆತ್ಮತತ್ವದ ಪ್ರವಚನ ಮಾಡುವವರನ್ನು ಕುರಿತು ಹೇಳಿದಂತಿದೆ. (ಬತ್ತೀಸ ರಾಗ= ೨೧ ತತ್ವಗಳು)
  • ಸಂಗಿತದ ಜ್ಞಾನವಿಲ್ಲದೆ ತಂಬೂರಿ ಬಾರಿಸಿದರೆ ಆಗುವ ಕಿರಿಕಿರಿ ಯನ್ನೂ ಹೇಳಿದಂತಿದೆ. ಲೀಲಾಜಾಲವಾಗಿ ಪ್ರತಿಮೆ,ರೂಪಕಗಳನ್ನು ಗ್ರಾಮ್ಯದ ಸರಳ ಕನ್ನಡದಲ್ಲಿ ಪ್ರಯೋಗಿಸಿರುವುದು ಹುಟ್ಟು ಕವಿ ಷರೀಫನಿಗೊಬ್ಬನಿಗೇ ಸಾದ್ಯ.

ತರವಲ್ಲ ತಗಿ ನಿನ್ನ ತಂಬೂರಿ - ಸ್ವರ (ತೆಗಿ=ಬಿಡು)
ಬರದೆ ಬಾರಿಸದಿರು ತಂಬೂರಿ ;
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ. ||ಪಲ್ಲವಿ||
 
ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ ;
ಸಿದ್ದ ಸಧಕರ ಸುವಿದ್ಯೆಗೆ ಒದಗುವ (ಸಿದ್ಧರು -ಸಾಧಕರು)
ಬುದ್ದಿವಂತಗೆ ತಕ್ಕ ತಂಬೂರಿ. ೧ ||ಪಲ್ಲವಿ||
 
ಬಾಳಬಲ್ಲವರಿಗೆ ತಂಬೂರಿ - ದೇವ
ಭಾಳಾಕ್ಷ ರಚಿಸಿದ ತಂಬೂರಿ ; (ಭಾಳ ಹಣೆಯಕಣ್ಣಿನವ-ಶಿವ ರಚಿಸಿದ ಸಿದ್ಧಿಯೋಗ)
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ. ೨ ||ಪಲ್ಲವಿ||
 
ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ ;
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ. ೩ ||ಪಲ್ಲವಿ||
 
ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ.
ಶಿಶುನಾಳಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ. ೪ ||ಪಲ್ಲವಿ||

ನೋಡಿ[ಸಂಪಾದಿಸಿ]

ಶರೀಫ ಸಾಹಿತ್ಯ

ಉಲ್ಲೇಖ[ಸಂಪಾದಿಸಿ]

  • ಶಿಶುನಾಳ ಶರೀಫರ ಪದಗಳು -ಅನಾಮಿಕ