ತಾಮಸಗುಣಂಗಳಲ್ಲಿ ಬಿದ್ದು
ತ್ವರಿತದ ವಿಷಯದಲ್ಲಿ ಹರಿದಾಡಿ
ಭವಜಾಲದಲ್ಲಿ ಸತ್ತು ಹುಟ್ಟುವಾತ ಗುರುಸ್ಥಲಕ್ಕೆ ಸಲ್ಲ
ಚರಸ್ಥಲಕ್ಕೆ ಸಲ್ಲ
ಪರಸ್ಥಲಕ್ಕೆ ಸಲ್ಲ. ಗುರುಸ್ಥಲವೆಂದಡೆ ಘನಲಿಂಗಸ್ಥಲವು. ಚರಸ್ಥಲವೆಂದಡೆ ಅತೀತಸ್ಥಲವು. ಪರಸ್ಥಲವೆಂದಡೆ ವಿರಕ್ತಿಸ್ಥಲವು. ಇಂತೀ ತ್ರಿವಿಧಸ್ಥಲದ ನಿರ್ಣಯವ ಬಲ್ಲಾತನೆ ಗುರುಸ್ಥಲಕ್ಕೆ ಯೋಗ್ಯನೆಂಬೆನು ; ಚರಸ್ಥಲಕ್ಕೆ ಯೋಗ್ಯನೆಂಬೆನು ; ಪರಸ್ಥಲಕ್ಕೆ ಯೋಗ್ಯನೆಂಬೆನು. ಇಂತೀ ತ್ರಿವಿಧನಿರ್ಣಯವನರಿಯದೆ ತ್ರಿವಿಧಮಲದಲ್ಲಿ ಭಂಗಿತರಾದವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ ನಿಮ್ಮ ಧರ್ಮ.