ತೋಳ ಮತ್ತು ಮೇಕೆ ಮರಿ

ವಿಕಿಸೋರ್ಸ್ ಇಂದ
Jump to navigation Jump to search

ಒಂದೂರಲ್ಲಿ ಒಂದು ಮೇಕೆ ಮರಿ ಇತ್ತು. ಆಗ ತಾನೆ ಮೂಡುತಿದ್ದ ತನ್ನ ಕೊಂಬುಗಳನ್ನು ನೋಡಿ, ತಾನಾಗಲೇ ದೊಡ್ಡವನಾದೆ ಎಂದು ಜಂಬದಿಂದ ಮೆರೆದಿತ್ತು. ಒಂದು ದಿನ ಸಂಜೆ, ಹುಲ್ಲು ಮೇಯ್ದಾದ ನಂತರ ಎಲ್ಲಾ ಮೇಕೆಗಳು ಮನೆಯಕಡೆ ಹೊರಟವು. ತಾಯಿ ಮೇಕೆ ಮನೆಗೆ ಹೋಗಲು ಕರೆದದ್ದು ಕೇಳಿಸಿದರೂ ಕೇಳಿಸದಂತೆ, ಇನ್ನೂ ತಿನ್ನುತ್ತಿರುವಂತೆ ನಟಿಸಿತು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡಿದರೆ, ಎಲ್ಲ ಮೇಕೆಗಳೂ ಆಗಲೇ ಮನೆಗೆ ಹೊರಟುಹೋಗಿದ್ದವು. ಮರಿ ಮೇಕೆಯೊಂದೆ ಹಿಂದೆ ಉಳಿದಿತ್ತು, ಸೂರ್ಯ ಆಗಲೆ ಮುಳುಗಲು ತಯಾರಿ ನಡೆಸಿದ್ದ, ಮರಗಳ ಉದ್ದುದ್ದ ನೆರಳನ್ನು ನೋಡಿ, ತೋಳನ ಭೀತಿಯಿಂದ ತರತರನೆ ನಡುಗಲಾರಂಭಿಸಿತು ಮೇಕೆ ಮರಿ. ಹೆದರಿಕೆಯಿಂದಲೇ ಅಮ್ಮಾ ಅಮ್ಮಾ ಎಂದು ಕೂಗುತ್ತಾ ಮನೆಯದಾರಿ ಹಿಡಿಯಿತು. ಮಾರ್ಗ ಮಧ್ಯದಲ್ಲಿ ಗಿಡಗಳ ಪೊದೆಯಿಂದ ತೋಳವೊಂದು ದುತ್ತನೆ ಮೇಕೆ ಮರಿಯ ಎದುರಿಗೆ ಬಂದು ನಿಂತಿತು. ತೋಳನನ್ನು ನೊಡಿದ ಮೇಕೆ ಮರಿ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಗುವ ದನಿಯಲ್ಲಿ, ತೋಳಣ್ಣ ನನ್ನನ್ನು ತಿನ್ನುವ ಮೊದಲು, ನಿನ್ನ ತುತ್ತೂರಿಯ ದನಿಗೆ ನನ್ನ ಕಾಲು ನೋಯುವಷ್ಟು ನೃತ್ಯ ಮಾಡಬೇಕೆಂಬದು ನನ್ನ ಕೊನೆ ಆಸೆ, ದಯವಿಟ್ಟು ನೆರೆವೇರಿಸಿಕೊಡುತ್ತೀಯಾ ಎಂದಿತು. ತೋಳನಿಗೂ ಮೇಕೆ ಮರಿಯನ್ನು ತಿನ್ನುವ ಮೊದಲು ಸ್ವಲ್ಪ ಮನರಂಜನೆ ಇರಲಿ ಎನಿಸಿ, ಆಗಲಿ ನಿನ್ನ ಆಸೆಯನ್ನು ನೆರವೇರಿಸುತ್ತೇನೆ ಎಂದು ಮೇಕೆ ಮರಿಗೆ ಹೇಳಿ, ತನ್ನ ತುತ್ತೂರಿ ತೆಗೆದು ನಿಧಾನವಾಗಿ ತಾನು ಊಟಮಾಡುವ ಮೊದಲು ಬಾರಿಸುವ ರಾಗವನ್ನು ಬಾರಿಸತೊಡಗಿತು.

ಇತ್ತ, ಮನೆಯ ಹಾದಿ ಹಿಡಿದಿದ್ದ ಮೇಕೆಗಳ ಗುಂಪು ತುಂಬಾ ಹೆಚ್ಚು ದೂರ ಹೋಗಿರಲಿಲ್ಲ, ಕುರುಬನ ನಾಯಿಗಳು ತೋಳನ ತುತ್ತೂರಿಯ ರಾಗವನ್ನು ಗುರುತಿಸಿ, ತೋಳ ಯಾವುದೊ ಮೇಕೆಯನ್ನು ಹಿಡಿದಿರಬೇಕೆಂದು ಒಡನೆಯೆ ಶಬ್ಧಬಂದ ಕಡೆ ನಾಯಿಗಳು ನುಗ್ಗಿದವು. ಇದ್ದಕ್ಕಿದ್ದಂತೆ ನಾಯಿಗಳ ದಾಳಿಯನ್ನು ಕಂಡು, ತೋಳ ತುತ್ತೂರಿಯನ್ನು ನಿಲ್ಲಿಸಿ ತನ್ನ ಕಾಲಿಗೆ ಬುದ್ದಿಹೇಳಿತು. ಜೀವ ಉಳಿಸಿಕೊಂಡ ತೋಳ, ಮೇಕೆ ಮರಿ ಕಂಡ ತಕ್ಷಣ ಮೊದಲು ಅದನ್ನು ತಿನ್ನದೇ, ತುತ್ತೂರಿ ಊದಿದ್ದಕ್ಕೆ ತನ್ನನ್ನು ತಾನೇ ಹಳಿದು ಕೊಂಡಿತು. ಇತ್ತ ಮೇಕೆ ಮರಿ ಮತ್ತೆ ಯಾವತ್ತೂ ಜಂಬ ಮಾಡದೇ, ತನ್ನ ತಾಯಿಯೊಡನೆ ಇರುವುದನ್ನು ಕಲಿಯಿತು.

ನೀತಿ: ನಾವು ಮಾಡಬೇಕಾದ ಕಾರ್ಯದಿಂದ ನಮ್ಮನ್ನು ಬೇರೆ ಯಾವುದೇ ಕಾರಣಗಳು ತಡೆಯಬಾರದು.