ವಿಷಯಕ್ಕೆ ಹೋಗು

ದಕ್ಷಿಣ ಕನ್ನಡ - ಮಂಗಳೂರು ಮತ್ತು ಉಡುಪಿ ಜಿಲ್ಲೆ

ವಿಕಿಸೋರ್ಸ್ದಿಂದ
ದಕ್ಷಿಣ ಕನ್ನಡ - ಮಂಗಳೂರು ಮತ್ತು ಉಡುಪಿ ಜಿಲ್ಲೆ  (1997) 
M Prabhakara Joshy, Gururaja Marpally, edited by K. Anantharam Rao

Mangaluru: Vidya Publishing House 

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ದಕ್ಷಿಣ ಕನ್ನಡ


(ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು)




ಲೇಖಕರು
ಎಂ. ಪ್ರಭಾಕರ ಜೋಶಿ
ಗುರುರಾಜ ಮಾರ್ಪಳ್ಳಿ


ಸಂಪಾದಕ
ಕೆ. ಅನಂತರಾಮ ರಾವ್‌



ವಿದ್ಯಾ ಪಬ್ಲಿಶಿಂಗ್ ಹೌಸ್
'ಶ್ರೀನಿಲಯ'
ಆಲ್ವಾರಿಸ್ ರೋಡ್, ಕದ್ರಿ
ಮಂಗಳೂರು - 575002

DAKSHINA KANNADA

Written by : M. Prabhakar Joshy, Gururaja Marpally
Published by : Vidya Publishing House

Alvares Road, Kadri
Mangalore-575-002
Phone: 216691

First Impression : 1997
Page : 64 : Price : Rs. 20/-
Editor : K. Anantharam Rao
ರಕ್ಷಾ ಪುಟ ವಿನ್ಯಾಸ : ವಿಷ್ಣು ಸೇವಗೂ‌ರ್
ಪುಟ ವಿನ್ಯಾಸ : ಮೈತ್ರಿ ಕಂಪ್ಯೂಟರ್, ಮಂಗಳೂರು
ಮುದ್ರಣ : ದಿಗಂತ ಮುದ್ರಣ ಲಿ. ಯೆಯ್ಯಾಡಿ, ಮಂಗಳೂರು

ಪ್ರಕಾಶಕರ ಮಾತು

ಕರ್ನಾಟಕ ಪ್ರಾಂತ್ಯದಲ್ಲಿರುವ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕರಾವಳಿ ಪ್ರದೇಶದಲ್ಲಿದ್ದು, ಪ್ರಕೃತಿಯ ಸೊಬಗನ್ನು ನೀಡುವ ತವರೂರಾಗಿದೆ. ಹಲವಾರು ವರ್ಷಗಳ ಹಿಂದೆ ಕಾಸರಗೋಡು ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು, ಕೇರಳವನ್ನು ಸೇರಿಕೊಂಡಿದೆ. ಈಗ ಪುನಃ ನಮ್ಮೀ ಜಿಲ್ಲೆಯು ವಿಭಾಗವಾಗಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಾಗಿವೆ.

ನಮ್ಮ ಈ ಜಿಲ್ಲೆಯ ನದಿ ತೊರೆಗಳು, ಬೆಟ್ಟ ಬಯಲು, ಜನರ ನಡೆನುಡಿ, ಚರಿತ್ರೆ, ಭೌಗೋಳಿಕ ಸೌಂದರ್ಯ, ಜೀವನವೃತ್ತಿ ಇತ್ಯಾದಿಯನ್ನು ಒಳಗೊಂಡ ಒಂದು ಪುಸ್ತಕವನ್ನು ರಚಿಸಬೇಕೆಂದು ಅಪೇಕ್ಷಿಸಿದ್ದೆವು. ಹಿರಿಯ ವಿದ್ಯಾಂಸರಾದ ಶ್ರೀ ಎಂ. ಪ್ರಭಾಕರ ಜೋಷಿಯವರು ಶ್ರೀ ಗುರುರಾಜ ಮಾರ್‍ಬಳ್ಳಿಯವರ ಸಹಕಾರದೊಂದಿಗೆ ಪುಸ್ತಕವನ್ನು ಬರೆದು ಕೊಟ್ಟಿದ್ದಾರೆ. ಶ್ರೀ ಜೋಷಿಯವರು ಪ್ರಾಧ್ಯಾಪಕರು ಮಾತ್ರವಲ್ಲದೆ, ಪ್ರಸಿದ್ಧ ಯಕ್ಷಗಾನ ಅರ್ಥದಾರಿಗಳೂ, ಸಾಹಿತ್ಯ, ತತ್ವಜ್ಞಾನ, ಕಲೆ ಮುಂತಾದ ಹಲವಾರು ವಿಷಯಗಳ ಮೇಲೆ ಕೈಯಾಡಿಸಿದ ವ್ಯಕ್ತಿಯೂ ಹೌದು. ಮೇಲಾಗಿ ನಮ್ಮ ಸ್ನೇಹಿತರು. ಅವರಿಗೆ ಮತ್ತು ಈ ಕಾರ್ಯದಲ್ಲಿ ಸಹಕರಿಸಿದ ಅವರ ಶ್ರೀಮತಿ ಸುಚೇತಾ ಜೋಶಿಯವರಿಗೂ ನಮ್ಮ ತುಂಬು ಹೃದಯದ ಕೃತಜ್ಞತೆಗಳು. ಉತ್ತಮ ವಾಗ್ಮಿಯೂ, ದಕ್ಡ ಆಡಳಿತಗಾರರೂ ಆದ ಶ್ರೀ ವೈ. ಕೆ. ಸಂಜೀವ ಶೆಟ್ಟಿಯವರು ಮುನ್ನುಡಿಯನ್ನು ಬರೆದು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇವರು ಜಿಲ್ಲಾ ಪಂಜಾಯತ್‌ ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ಜನಸೇವೆ ಸಲ್ಲಿಸಿ ಇವರು ಒಲವನ್ನು ಸಂಪಾದಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಈ ಪುಸ್ತಕದ ಪ್ರತಿ ಹಂತದಲ್ಲೂ ಹಲವಾರು ಸೂಚನೆ, ಸಲಹೆಗಳನ್ನಿತ್ತ ನಮ್ಮ ಮಿತ್ರರಾದ ಪ್ರಾ. ಶ್ರೀ ಎಂ. ರಾಘವೇಂದ್ರ ಪ್ರಭು ಮತ್ತು ಪ್ರಾ. ನಾಗರಾಜ ಜವಳಿ ಅವರಿಗೆ ನಮ್ಮ ನಮನಗಳು.

ಮುದ್ರಣವನ್ನು ಮಾಡಿಕೊಟ್ಟ, ಹೊಸದಿಗಂತದ ಮೆನೇಜಿಂಗ್‌ ಡೈರೆಕ್ಟರ್‌ ಶ್ರೀ ಅರವಿಂದ ಬಿಜೂರು ಮತ್ತು ಡಿ.ಟಿ.ಪಿ. ಕಾರ್ಯವನ್ನು ನಿರ್ವಹಿಸಿದ ಶ್ರೀ ಸಂದೀಪ್‌ ಇವರಿಗೂ ಮತ್ತು ಮುಖ ಪುಟ ವಿನ್ಯಾಸ ರಚಿಸಿದ ಶ್ರೀ ವಿಷ್ಣು ಸೇವಗೂರು ಇವರಿಗೂ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ನಮ್ಮ ಈ ಹೊಸ ಪುಸ್ತಕವು ಸಾರ್ವಜನಿಕರಿಗೂ, ಶಾಲಾ ಕಾಲೇಜಿಗೂ, ಗ್ರಂಥಭಂಡಾರಗಳಿಗೂ ಸೇರುವಂಥಾಗಲಿ. ಇದರ ಸದುಪಯೋಗವಾಗಲಿ ಎಂದು ಬಯಸುತ್ತೇನೆ. ಕಳೆದ ಹತ್ತು ದಿನಗಳಲ್ಲಿ ವಿದ್ಯಾ ಪಬ್ಲಿಷಿಂಗ್‌ ಹೌಸ್‌ ಎರಡನೇ ಪುಸ್ತಕವನ್ನು ಹೊರತರುತ್ತಿದೆ ಎ೦ದು ಹೇಳಲು ಸಂತಸವಾಗುತ್ತದೆ.

ಈ ಮೂರು ವರ್ಷಗಳ ಬೆಳವಣಿಗೆಯಲ್ಲಿ ವಿದ್ಯಾ ಪಬ್ಲಿಷಿಂಗ್‌ ಹೌಸ್‌ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ನಿಮ್ಮ ಒಲವಿನ ಈ ಶಿಶು ಇನ್ನೂ ಬೆಳೆಯುವಂತೆ ಆಶೀರ್ವದಿಸಿರಿ.


ಕೆ. ಅನಂತರಾಮ ರಾವ್‌
ಮೆನೇಜಿಂಗ್‌ ಪಾರ್ಟ್ನರ್‌
ವಿದ್ಯಾ ಪಬ್ಲಿಷಿಂಗ್‌ ಹೌಸ್‌,
'ಶ್ರೀ ನಿಲಯ', ಕದ್ರಿ, ಮಂಗಳೂರು.

.
.

"ಆದಿಮ ಸ೦ಸ್ಕೃತಿಯಿ೦ದ ಆಧುನಿಕತೆಯ ಕಡೆಗೆ ವೈವಿಧ್ಯಮಯ ದಕ್ಷಿಣ ಕನ್ನಡ" - ಎ೦ಬೀ ಕೃತಿಯು ಅಖಂಡ ದ.ಕ. ಜಿಲ್ಲೆಯ ಸಮಗ್ರ ನೋಟವನ್ನು ಸಂಗ್ರಾಹ್ಯವಾಗಿ ಪ್ರತಿಬಿ೦ಬಿಸುತ್ತದೆ. ಈ ಕೃತಿಯಲ್ಲಿ ಜಿಲ್ಲೆಯ ಭೌಗೋಳಿಕ, ನೈಸರ್ಗಿಕ, ಚಾರಿತ್ರಿಕ, ಸಾ೦ಸ್ಕೃತಿಕ, ಸಾಮಾಜಿಕ, ವಾಣಿಜ್ಯ, ಉದ್ಯಮ, ಬ್ಯಾ೦ಕಿ೦ಗ್‌, ಸಾರಿಗೆಸ೦ಪರ್ಕ, ಆಡಳಿತ, ಸಾಹಿತ್ಯ, ಕಲೆ ಯಕ್ಷಗಾನ, ಜಾನಪದ, ತುಳುಭಾಷೆ, ಸಾಹಿತ್ಯಕ ಸ೦ಶೋಧನೆಯೇ ಮೊದಲಾದ ಕ್ಷೇತ್ರಗಳ ಪರಿಚಯವನ್ನು ಸ್ಥೂಲವಾಗಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಕನ್ನಡ ಜನತೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಕೊಡುಗೆಗಳನ್ನು ಜೊತೆಗೆ ಉಪಯುಕ್ತ ಅ೦ಕಿ-ಅ೦ಶಗಳನ್ನು ತಿಳಿಯ ಹೇಳುವ ಲೇಖಕರ ಶ್ರಮ ಸ್ತುತ್ತ್ಯರ್ಹ.

ಜಿಲ್ಲೆಯು ಆಡಳಿತಾತ್ಮಕ ಸೌಕರ್ಯಕ್ಕಾಗಿ ವಿಭಜಿಸಲ್ಪಟ್ಟರೂ ಭಾವನಾತ್ಮಕವಾಗಿ ಬೈ೦ದೂರಿನಿ೦ದ ಸ೦ಪಾಜೆ ತನಕ ಹಾಗೂ ಚಾರ್ಮಾಡಿಯಿ೦ದ ಕಡಲತಡಿ ತನಕ ಒ೦ದಾಗಿ ಉಳಿಯಬೇಕಾದ ನೆಲೆಯಲ್ಲಿ ಇದೊಂದು ಪ್ರತಿಯೊಬ್ಬ ಜಿಲ್ಲೆಯ ನಾಗರಿಕರ ಸ೦ಗ್ರಹ ಯೋಗ್ಯ ಹೊತ್ತಗೆಯಾಗಿದೆ. ಇದನ್ನು ಪ್ರಕಾಶಿಸುತ್ತಿರುವ ಮಿತ್ರರಾದ ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಕೆ.ಅನ೦ತರಾಮರಾಯರನ್ನು ಹಾರ್ದಿಕವಾಗಿ ಅಭಿನ೦ದಿಸುತ್ತೇನೆ.

ಲೇಖಕರ ಮತ್ತು ಪ್ರಕಾಶಕರ ಆಶಯವು ಪೂರೈಸಲಿ ಹಾಗೂ ಅವರಿ೦ದ ಇನ್ನಷ್ಟು ಜನ ಉಪಯೋಗಿ ಕೃತಿಗಳು ರಚಿಸಲ್ಪಡಲಿ ಎ೦ಬ ಹಾರೈಕೆಯೊಂದಿಗೆ.

ಮ೦ಗಳೂರು
ದಿನಾ೦ಕ: 5.12.97

ವೈ.ಕೆ. ಸಂಜೀವ ಶೆಟ್ಟಿ ಬಿ.ಎ.ಬಿ.ಎಡ್‌
ಅಧ್ಯಕ್ಷರು
ದ.ಕ. ಜಿಲ್ಲಾ ಪ೦ಚಾಯತ್‌, ಮ೦ಗಳೂರು

ಆದಿಮ ಸಂಸ್ಕೃತಿಯಿಂದ ಆಧುನಿಕತೆಯ ಕಡೆಗೆ
ವೈವಿಧ್ಯಮಯ ದಕ್ಷಿಣ ಕನ್ನಡ

ಪ್ರತಿಯೊ೦ದು ಪ್ರದೇಶಕ್ಕೆ ಕೆಲವು ವಿಶಿಷ್ಟ ಲಕ್ಷಣಗಳಿರುತ್ತವೆ, ಪ್ರಾದೇಶಿಕತೆ ಇರುತ್ತದೆ. ಅ೦ತೆಯೆ ಉಳಿದ ಪ್ರದೇಶಗಳೊಂದಿಗೆ ಸಮಾನತೆಯೂ ಇರುತ್ತದೆ. ಪ್ರತ್ಯೇಕತೆ ಇರುವ ಅ೦ಶಗಳು ಎಲ್ಲಿ ಸ್ಫುಟವಾಗಿ ಇರುತ್ತವೆಯೋ ಆ ಪ್ರದೇಶಕ್ಕೆ ಹೆಚ್ಚು ಅನನ್ಯತೆ, ಗುರುತು (ಐಡೆ೦ಟಿಟಿ) ಪ್ರಾಪ್ತವಾಗುತ್ತದೆ. ನಮ್ಮ ದಕ್ಷಿಣ ಕನ್ನಡ ಅ೦ತಹ ಹೆಚ್ಚು ಸ್ಫುಟವಾದ ವೈಶಿಷ್ಟ್ಯಗಳುಳ್ಳ ಪ್ರದೇಶ. ದಕ್ಷಿಣ ಕನ್ನಡಿಗತನ ಎ೦ಬುದು ಸಾ೦ಸ್ಕೃತಿಕವಾಗಿ, ಸಾಮಾಜಿಕವಾಗಿ ವೈಶಿಷ್ಟ್ಯಕ್ಕೆ, ಉನ್ನತ ಸಾಧನೆಗೆ, ಸುವ್ಯವಸ್ಥೆಗೆ - ಹೀಗೆ ಹಲವು ಸ೦ಗತಿಗಳಿಗೆ ಸ೦ಕೇತವಾಗಿ ಗುರುತಿಸಲ್ಪಟ್ಟಿದೆ.

ಬಹು ಭಾಷಿಕತೆ ಮತ್ತು ಬಹು ಜನಾ೦ಗೀಯತೆಗೆ ಒ೦ದು ಮಾದರಿಯಂತಿರುವ ದಕ್ಷಿಣ ಕನ್ನಡವು ಇತಿಹಾಸದ ಒ೦ದು ಪ್ರಯೋಗ ಶಾಲೆಯಂತಿದೆ. ಉಡುಪಿಯಿಂದ ದಕ್ಷಿಣಕ್ಕೆ ಈ ಪ್ರದೇಶದ ಮುಖ್ಯ ಭಾಷೆ ತುಳು. ಕನ್ನಡ 'ಶಾಲೆಯ ಕನ್ನಡ' ಅರ್ಥಾತ್‌ ಗ್ರಾ೦ಥಿಕ ಕನ್ನಡಕ್ಕೆ ಹತ್ತಿರ. ಇಲ್ಲಿಯ ಯಕ್ಷಗಾನ, ಭೂತಾರಾಧನೆ, ತುಳು ಭಾಷೆ, ಕು೦ದಗನ್ನಡ, ಕೊ೦ಕಣಿ ಭಾಷೆಗಳೂ, ಈ ಪ್ರದೇಶದ ಉತ್ತಮ ವಿದ್ಯಾಭ್ಯಾಸ ಮಟ್ಟವೂ, ಖಾಸಗಿ ಸಾಹಸಶೀಲತೆಯ ಪರ೦ಪರೆಯೂ, ಈ ಪ್ರದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಿರುವ ವಲಸೆಗಳೂ, ದೇಶಾದ್ಯಂತ ಪ್ರಸಿದ್ಧವಾಗಿರುವ ಹೊಟೇಲ್‌, ಬ್ಯಾಂಕಿ೦ಗ್‌ ಉದ್ಯಮಗಳೂ ಪ್ರಾಯಃ ಈ ಪ್ರದೇಶಕ್ಕೆ ತನ್ನ ವೈಶಿಷ್ಟ್ಯ ಪ್ರತ್ಯೇಕತೆಯನ್ನು ನೀಡಿದೆ. ಇಲ್ಲಿನ ಆಹಾರ ರುಚಿ ವೈವಿಧ್ಯವೂ ಅ೦ತಹ ಒ೦ದು ಅಂಶ.

ಈ ಪ್ರದೇಶ ಬ್ರಿಟಿಷ್‌ ಅಧಿಪತ್ಯದ ತನಕವೂ, ಯಾವುದೇ ಬೃಹತ್‌ ರಾಜ್ಯದ ಕೇ೦ದ್ರವಾಗಿರಲಿಲ್ಲ. ವಿದೇಶೀ ಪ್ರಭಾವಕ್ಕೂ, ಮು೦ಬಯಿ ಸ೦ಪರ್ಕಕ್ಕು ತನ್ನನ್ನು ಹೆಚ್ಚು ಒಡ್ಡಿಕೊ೦ಡ ಪ್ರದೇಶವಿದು. ಇವು ಈ ಪ್ರದೇಶದ ಇಂದಿನ ವೈಶಿಷ್ಟ್ಯಗಳಿಗೆ ಸ್ವಲ್ಪ ಮಟ್ಟಿಗೆ ಕಾರಣ.

ಒಂದು ನಾಡಿಗೆ ತನ್ನದೆ ಆದ ವ್ಯಕ್ತಿತ್ವವಿರುತ್ತದೆ. ಅದು ಅಲ್ಲಿಯ ನಿಸರ್ಗದಿ೦ದ ರೂಪಿತಗೊ೦ಡಿರುವ೦ತಹುದು. ಅ೦ಥ ವ್ಯಕ್ತಿತ್ವವುಳ್ಳ ನಾಡಿನ ಜನ ಜೀವನ ಕೂಡಾ ವಿಶಿಷ್ಟವಾಗಿರುತ್ತದೆ. ಅಲ್ಲದೆ ಇತಿಹಾಸ, ಸ೦ಸ್ಥೃತಿಗೆ ಅಲ್ಲಿಯದೇ ಒಂದು ಛಾಪು ಇರುತ್ತದೆ. ಆ ದೃಷ್ಟಿಯಲ್ಲಿ ದಕ್ಷಿಣ ಕನ್ನಡ ವೈವಿಧ್ಯಮಯವಾದ ಅಂಶಗಳನ್ನು ತನ್ನ

ಪ್ರಾದೇಶಿಕ ವ್ಯಕ್ತಿತ್ವದಲ್ಲಿ ಒಳಗೊಂಡಿದೆ. ಇಲ್ಲಿಯ ಜನಮನದಲ್ಲಿ ಭೌತ ಸಾಹಸದ ಲಕ್ಷಣವಿದ್ದರೆ ಅದು ಪಶ್ಚಿಮಘಟ್ಟದ ಭವ್ಯನಿಲುವಿನ ಕೊಡುಗೆ. ಇಲ್ಲಿಯ ಪಡುಗಡಲ ಪ್ರೇರಣೆ. ಇಲ್ಲಿಯ ಜನಜೀವನ ಚಟುವಟಿಕೆಗಳಿ೦ದ ಅಹರ್ನಿಶಿ ತುಂಬಿಕೊಂಡಿದ್ದಾರೆ. ಇಲ್ಲಿಯ ಹತ್ತಾರು ಹೊಳೆಗಳು, ಹೊಳೆಗಳ ದಂಡೆಗಳನ್ನು ಅನುಸರಿಸಿ ಬೆಳೆದ ಕಾಡು, ಬಯಲ ಹಸಿರು ಇವೆಲ್ಲ ಕಾರಣವಾಗುತ್ತವೆ. ದಕ್ಷಿಣ ಕನ್ನಡಿಗ ತನ್ನ ನೆಲವನ್ನು ಬಿಟ್ಟು ದೇಶಾ೦ತರ ಹೋಗಬಲ್ಲ, ಮರಳಿ ಊರಿಗೆ ಬಂದು 'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ' ಅ೦ತ ವಿರಾಮ ಜೀವನ ನಡೆಸಬಲ್ಲ. ಕವಿ ಅಡಿಗರ 'ಭೂಮಿಗೀತ' ಧೀರ್ಘಕವನದಲ್ಲಿ ಹೇಳಿದರು.

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ
ಉರುಳು ಮೂರೇ ಉರುಳು ಕಡಲ ಕುದಿತದ ಎಣ್ಣೆಕೊಪ್ಪರಿಗೆ

ಹೀಗೆ ಮಲೆನಾಡು ಕರಾವಳಿಗಳ ವೈಶಿಷ್ಟ್ಯವನ್ನು ಮೈಗೂಡಿಸಿಕೊ೦ಡ ಜಿಲ್ಲೆ ದಕ್ಷಿಣ ಕನ್ನಡ. ಪಶ್ಚಿಮ ಘಟ್ಟ ಮತ್ತು ಅರಬೀ ಸಮುದ್ರದ ಮಧ್ಯದಲ್ಲಿ 240ಕಿ.ಮೀ ಉದ್ದ 32ರಿ೦ದ 96ಕಿ.ಮಿ ಅಗಲವಾದ ಪ್ರದೇಶ ದಕ್ಷಿಣ ಕನ್ನಡ. 1860ರಲ್ಲಿ ಬ್ರಿಟಿಷರಿ೦ದ ವಿಭಜಿಸಲ್ಪಡುವವರೆಗೆ ದಕ್ಷಿಣೋತ್ತರ ಜಿಲ್ಲೆಗಳು 'ಕರಾವಳಿ' ಜಿಲ್ಲೆಯೆ೦ದೆ ಕರೆಯುತ್ತಿದ್ದರು. ಪೋರ್ಚುಗೀಸರು ಕರೆದ "ಕೆನರಾ" ಜಿಲ್ಲೆಯನ್ನು ಆಡಳಿತ ಅನುಕೂಲಕ್ಕಾಗಿ ಬ್ರಿಟಿಷರು ಉತ್ತರ ಮತ್ತು ದಕ್ಷಿಣ ಕನ್ನಡಗಳೆ೦ದು ವಿಭಜಿಸಿದರು. (ಇತ್ತೀಚೆಗೆ ಮತ್ತೆ ದಕ್ಷಿಣ ಕನ್ನಡವನ್ನು ಉಡುಪಿ ಮತ್ತು ಮ೦ಗಳೂರು ಜಿಲ್ಲೆಗಳೆಂದು ವಿ೦ಗಡಿಸಿದರೂ ಇದರ ಸಾಂಸ್ಕೃತಿಕ ನೆಲೆಗಟ್ಟು ಒ೦ದೇ ಆಗಿದೆ. ಒ೦ದು ಕಾಲಕ್ಕೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳವರೆಗೆ ವ್ಯಾಪಿಸಿಕೊ೦ಡು ಬಿಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆ ಒ೦ದೇ ಸಂಸ್ಕೃತಿಗೆ ಸೇರಿದ ವಿಶಾಲ ಕರಾವಳಿ ಜಿಲ್ಲೆಯಾಗಿತ್ತು.

ದಕ್ಷಿಣಕನ್ನಡ ಜಲ್ಲೆಯ ಕರಾವಳಿಯ ಉದ್ದ ಸುಮಾರು ೧೪೦ಕಿ.ಮಿಗಳು. ಪಶ್ಚಿಮಘಟ್ಟದಲ್ಲಿ ಹುಟ್ಟಿ ಸುಮಾರು ೮೦ಕಿ.ಮೀಗಳಷ್ಟು ಹರಿದು ಪಶ್ಚಿಮದ ಅರಬೀ ಸಮುದ್ರವನ್ನು ಸೇರುವ ಹಲವಾರು ಮುಖ್ಯನದಿಗಳಿವೆ. ನೇತ್ರಾವತಿ, ಗಂಗೊಳ್ಳಿ, ಸೀತಾನದಿ, ಸ್ವರ್ಣನದಿ ಇವು ವಿಶಾಲವಾದ ಹರಹುಳ್ಳ ನದಿಗಳು, ಅದರ ಜತೆಗೆ ಕಿರುನದಿಗಳೂ ಸಾಕಷ್ಟಿವೆ.

ನೇತ್ರಾವತಿ ನದಿಯು ಕುದುರೆಮುಖದಲ್ಲಿ ಹುಟ್ಟಿ ಬಂಗಾಡಿ ಕಣಿವೆಯಲ್ಲಿ ಹರಿದು

ಕುಮಾರಪರ್ವತದಲ್ಲಿ ಹುಟ್ಟಿ ಹರಿಯುವ ಕುಮಾರಾಧಾರಾ ನದಿಯನ್ನು ಉಪ್ಪಿನಂಗಡಿಯಲ್ಲಿ ಸಂಧಿಸಿ ಬಂಟ್ವಾಳದ ಕಡೆಗೆ ಹರಿಯುತ್ತದೆ. ಹಲವಾರು ಗುಡ್ಡಬೆಟ್ಟಗಳ ನಡುವೆ ಹರಿದು ಹಲವು ಕುದುರುಗಳನ್ನು ನಿರ್ಮಿಸಿ ನೇತ್ರಾವತಿ ನದಿ ಮಂಗಳೂರಿನಲ್ಲಿ ಗುರುಪುರ ನದಿಯನ್ನು ಸೇರಿಕೊಳ್ಳುತ್ತದೆ.

ಅನೇಕ ಉಪನದಿಗಳನ್ನು ಜತೆಗೊಡಿಸಿಕೊ೦ಡು ಹರಿಯುವ ಗಂಗೊಳ್ಳಿ ನದಿ ಕುಂದಾಪುರದಲ್ಲಿ ವಿಶಾಲವಾದ ವ್ಯಾಪ್ತಿಯನ್ನು ಪಡೆಯುತ್ತದೆ. ಕೊಲ್ಲೂರು, ಹಾಲಾಡಿ, ಚಕ್ರಾನದಿಗಳ ಧಾರೆಯನ್ನೊಳಗೊಂಡ ಗಂಗೊಳ್ಳಿ ನದಿ ಅರಬ್ಬೀ ಸಮುದ್ರದಿ೦ದ ಕೇವಲ ನಲವತ್ತು ಕಿ.ಮೀಗಳಷ್ಟು ದೂರವಿರುವ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಯ ಕವಲುಗಳನ್ನು ಹೊಂದಿದೆ.

ಪಶ್ಚಿಮ ಘಟ್ಟದ ಸೋಮೇಶ್ವರದ ಬಳಿ ಹುಟ್ಟುವ ಸೀತಾನದಿ ಉಡುಪಿ ತಾಲೂಕಿನ ಉತ್ತರದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಬಾರಕೂರಿನ ಬಳಿ ಸೀತಾನದಿ ಮತ್ತು ಸ್ವರ್ಣಾನದಿಗಳು ಆರಬ್ಬೀ ಸಮುದ್ರವನ್ನು ಸೇರುವಾಗ ವಿಶಾಲವಾದ ಹಿನ್ನೀರಿನ ನೆಲೆಯನ್ನು ಸೃಷ್ಟಿಸಿವೆ. ಇವಲ್ಲದೆ ಶೀರೂರು, ಉಪ್ಪುಂದ, ಕಲ್ಯಾಣಪುರ, ಮುಲ್ಕಿ, ಪಾವಂಜೆ, ವಾರಾಹಿ, ದಾಸನಕಟ್ಟೆ, ನೆರಿಯ, ಶಿಶಿಲ ಮು೦ತಾದ ನದಿಗಳು ದಕ್ಷಿಣ ಕನ್ನಡದ ಜನಜೀವನದ ಆಧಾರ ಸ್ತ೦ಭಗಳಾಗಿವೆ.

ಭೂಗರ್ಭದೊಳಗೆ

ದಕ್ಷಿಣ ಕನ್ನಡದ ಭೂಗರ್ಭ ಬಾಕ್ಸೈಟ್‌, ಕೊರಂಡಮ್‌, ಗಾರ್ನೆಟ್‌, ಬಂಗಾರ, ಕಬ್ಬಿಣದ ಅದಿರು, ಕ್ಕಾನ್ಸೆಟ್‌, ಸುಣ್ಣದ ಚಿಪ್ಪು, ಸಿಲಿಕಾ ಆವೆಮಣ್ಣು ಮುಂತಾದ ಅ೦ಶಗಳಿ೦ದ ಸ೦ಪದ್ಭರಿತವಾಗಿದೆ.

ಡಾಲರೈಟ್‌ ಅನ್ನುವುದು ಅತಿ ಗಡುಸಾದ ಕೃಷ್ಣಶಿಲೆ. ಮ೦ಗಳಪೇಟೆ, ಕೆಯ್ಯೂರು, ಬಂಟ್ವಾಳ, ಕಟೀಲುಗಳಲ್ಲಿ ದೊರೆಯುತ್ತದೆ. ಡಾಲರೈಟ್‌ ನೀರಿನ ಸ೦ಪರ್ಕದಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಬೇಗ ಕೆ೦ಪು ಮಣ್ಣಾಗಿ ಮಾರ್ಪಡುವುದು.

ಬೆಸಾಲ್ಟ್ ಆನ್ನುವುದು ಅತಿ ಗಡುಸಾದ ಕಪ್ಪುಶಿಲೆ. ಅಗ್ನಿ ಪರ್ವತಗಳಿಂದ ಹೊರಹರಿದ ಲಾವಾರಸದಿ೦ದಾದ ಶಿಲೆ. ಮಲ್ಪೆಯ ಬಳಿ ಪಶ್ಚಿಮಕ್ಕೆ ಇರುವ ಸೈಂಟ್‌ಮೇರೀಸ್‌ ದ್ವೀಪದಲ್ಲಿದೆ. ಇದು ಒ೦ದು ಭೂವಿಜ್ಞಾನದ ಸೋಜಿಗ. ಬಾಕ್ಸೈಟ್‌ನಲ್ಲಿ ಕಬ್ಬಿಣಾ೦ಶಕ್ಕೆ ಬದಲಾಗಿ ಕೆಲವೆಡೆಗಳಲ್ಲಿ ಆಲ್ಯುಮಿನಿಯ೦ ಅ೦ಶವಿದೆ. ಅಲ್ಯುಮಿನಿಯಂ ಪ್ರಮುಖ ಆದಿರು. ದಕ್ಷಿಣ ಕನ್ನಡದ ಕು೦ದಾಪುರ ತಾಲೂಕಿನ ಮುದ್ದಲ್‌ಪಾರೆ, ಗುಪ್ಪಿ ಪಾರೆಯಲ್ಲಿಯೂ, ಬೈ೦ದೂರಿನ ಪಡುವಾರೆ ಮತ್ತು ಭಟ್ಕಳಗಳ ಬಳಿಯೂ ದೊರೆಯುತ್ತದೆ. ಕಪ್ಪು ಜೇಡಿ ಮತ್ತು ಬಿಳಿ ಜೇಡಿಗಳು ಕೂಡಾ ದಕ್ಷಿಣ ಕನ್ನಡದ ಭೂಮಿಯ ವಿಶಿಷ್ಟ ಆ೦ಶಗಳು. ಇದರ ಜತೆಗೆ ಗಾಜು ಸೀಸೆಗೆ ಬಳಕೆ ಬರುವ ಬಿಳಿ ಹೊಯ್‍ಗೆ ಕೂಡಾ ದಕ್ಷಿಣ ಕನ್ನಡದ ಉದ್ಯಾವರ, ಬಡಗ್ರಾಮ, ಹೆಜಮಾಡಿ, ಕಾಪುಗಳಲ್ಲಿ ದೊರೆಯುತ್ತವೆ.

ಇದಲ್ಲದೆ ಸಿಮೆ೦ಟಿನೊ೦ದಿಗೆ ಮಿಶ್ರಮಾಡಿ ಉಪಯೋಗಿಸುವ ನದಿಯ ಮರಳಿದೆ. ನೇತ್ರಾವತಿ, ಗುರುಪುರ, ಪಾವಂಜೆ, ಮುಲ್ಕಿ, ಸೀತಾನದಿ, ಗ೦ಗೊಳ್ಳಿ ಮು೦ತಾದ ನದಿಗಳಿ೦ದ ಮರಳನ್ನು ತೆಗೆದು ಕಟ್ಟಡಗಳಲ್ಲಿ ಇದನ್ನು ಉಪಯೋಗಿಸುತ್ತಾರೆ.

ಇದಲ್ಲದೆ ಪೂರ್ಣ ಕ್ಯಾಲ್ಸಿಯಂ ಹೊಂದಿರುವ ಸುಣ್ಣದ ಚಿಪ್ಪುಗಳಿವೆ. ಇವನ್ನು ಸುಣ್ಣವನ್ನಾಗಿಸುವ ತಂತ್ರ ಗ್ರಾಮೀಣ ರೀತಿಯಲ್ಲಿಯೇ ಇಂದಿಗೂ ಬೆಳೆದು ಬಂದಿದೆ.

ಕರಾವಳಿಯ ಈ ಪ್ರದೇಶದಲ್ಲಿ ಎಲ್ಲಿ ನಿ೦ತು ಅತ್ತಿತ್ತ ನೋಡಿದರೂ ಸುತ್ತ ಗುಡ್ಡಗಳು, ಕಾಡುಗಳು, ತಗ್ಗಿನಲ್ಲಿ ಗದ್ದೆ ತೋಟಗಳ ರಮಣೀಯ ದೃಶ್ಯ ಕಾಣಸಿಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಗುಡ್ಡ ಕಾಡುಗಳಿ೦ದ ತುಂಬಿದ ಪ್ರದೇಶ. ಮೋಪಿಗೆ ಉಪಯೋಗಿಸಲ್ಪಡುವ ಮರಗಳು ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಹಾಗೆಯೇ ಸಮೃದ್ಧ ಮಳೆಯಿಂದಾಗಿ ಪಶ್ಚಿಮ ಘಟ್ಟದ ಅರಣ್ಯ ನಿಬಿಡವಾಗಿದೆ. ಬೇರೆ ಬೇರೆ ಜಾತಿಯ ವೃಕ್ಷಗಳ ಸ೦ತತಿ ಪಶ್ಚಿಮ ಘಟ್ಟದಲ್ಲಿ ಕ೦ಡುಬರುತ್ತದೆ.

ಕರಾವಳಿಯಿ೦ದ ಮೂವತ್ತು ಅಥವಾ ನಲವತ್ತು ಕಿ.ಮೀ. ಒಳಗಡೆ ದಟ್ಟವಾದ ಈ ಅರಣ್ಯಗಳು ಬೆಳೆಯುತ್ತವೆ. ಈ ಕಾಡುಗಳ ಒತ್ತಡ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಸದಾ ಹಸಿರಿನ ಕಾಡುಗಳು ದಕ್ಷಿಣ ಕನ್ನಡವನ್ನು ತುಂಬಿದ್ದ ಕಾಲವೊಂದು ಈಗ ಮಾಯವಾಗುತ್ತ ಬರುತ್ತಿದೆ. ಕೃಷಿ ಭೂಮಿಗಾಗಿ ಕಾಡು ಪ್ರದೇಶಗಳು ವರ್ಗಾವಣೆಗೂಳ್ಳುತ್ತ ಬಂದಿವೆ.

ಈ ಕಾಡುಗಳಲ್ಲಿ, ಕೃಷಿಭೂಮಿಗಳಲ್ಲಿ, ತೋಟಗಳಲ್ಲಿ ಪ್ರಾಕೃತಿಕ ಸ೦ಪತ್ತಿನ ಅಪಾರ ರಾಶಿಯೇ ದಕ್ಷಿಣ ಕನ್ನಡದಲ್ಲಿದ್ದು ಈಗ ಅವುಗಳ ಸಂತತಿ ನಾಶವಾಗುತ್ತ ಬ೦ದಿರುವುದು ಬಹಳ ಖೇದದ ವಿಚಾರವಾಗಿದೆ. ಈ ನೆಲದಲ್ಲಿ ಕುರುಚಲು ಗಿಡಗಳಿವೆ, ಸದಾಹಸಿರಿನ ಸಸ್ಯಗಳಿವೆ. ಮುಖ್ಯವಾಗಿ ಕೃಷಿಗಾಗಿ ಕಾಡನ್ನು ಆಕ್ರಮಿಸಿದ ಮೇಲೆ ಕ್ರಮೇಣ ಪ್ರತಿಯೊಂದು ಸಸ್ಯವೈವಿಧ್ಯವೂ ಕಾಣೆಯಾಗುತ್ತ ಬಂದಿದೆ.

ಇವುಗಳಲ್ಲಿ ಕಾಸರಕನ ಗಿಡಗಳು, ನೆಲ್ಲಿಕಾಯಿ, ಕೇಪುಳ ಮತ್ತು ಕಾಡುಮರ ಇತ್ಯಾದಿಗಳು ಹುಲ್ಲುಗಾವಲ ಗಿಡಗಳೆನ್ನಬಹುದು. ಕು೦ಟಲ, ಮಾವು ಗಂಧದ ಮರ, ಗೇರು, ಕಾಡು ಗುಲಾಬಿ ಇವೆಲ್ಲ ಒಣ ಕುರುಚಲು ಸಸ್ಯಗಳಾಗಿ ಬೆಳೆಯುತ್ತವೆ.

ಇದರ ಜತೆ ಕಟ್ಟಿಗೆಯ ಗುಂಪಿನ ಮರಗಳಿವೆ. ರಂಜೆ, ಮರುವ, ತಿರ್ವ, ಬಿಳಿನಂದಿ, ಬಿಲ್ಮತ್ತಿ, ಬಿಲ್ವಾರ ಮೊದಲಾದುವು ಅ೦ತಹ ಮರಗಿಡಗಳು, ಇದರ ಜತೆ ತಕ್ಕಿಲೆ ಕೊಡಸಿಗೆ, ದಾಲಚೀನಿ, ಜಾಯಿಕಾಯಿ, ಹಾಗೆಯೆ ಕಿರಾಲುಬೋಗಿ ಮು೦ತಾದ ಮರಗಳು ಬೆಳೆಯುತ್ತವೆ.

ಘಟ್ಟದ ಇಳಿಜಾರು ಕಣಿವೆಗಳಲ್ಲಿ ಮಧ್ಯಮ ಮಟ್ಟದ ಸದಾ ಹಸಿರು ಕಾಡು ಕಂಡುಬರುತ್ತದೆ. ಸಸ್ಯಗಳು ದಟ್ಟವಾಗಿ ಬೆಳೆದ ಕಡೆ ಅಣಬೆಗಳು, ಆರ್ಕಿಡ್‌ಗಳು ಜರಿಗಿಡಗಳು, ಶ್ರೀಹೊನ್ನೆ, ಅಶೋಕ, ಕರಿದೂಪ, ದೇವದಾರು, ಕು೦ಟಲ, ಬಿದಿರು, ನಾರು ಬೇರು, ಬೀಳು ಬಳ್ಳಿ, ಒಳ್ಳೆಮೆಣಸು ಮು೦ತಾದ ಸದಾಹಸಿರಿನ ಸಸ್ಯಗಳು ಬೆಳೆಯುತ್ತವೆ.

ಪಶ್ಚಿಮ ಘಟ್ಟದ ಕಾಡುಗಳ ಕಿರಾಲುಬೋಗಿ, ಹಲಸು, ಹೆಬ್ಬಲಸು ಮರುವ, ಬೀಟಿಮರಗಳು ಪೀಠೋಪಕರಣ ಮತ್ತು ಕಟ್ಟಡ ನಿರ್ಮಾಣಗಳಲ್ಲಿ ಬಳಕೆಯಲ್ಲಿವೆ.

ದೂಪ, ಮಾವು, ಕಾಸರಕನ ಮರ, ಮರುವ, ಮೊದಲಾದ ಮರಗಳನ್ನು ನೇಗಿಲು ತಯಾರಿಸಲು ಮೊದಲು ಉಪಯೋಗಿಸುತ್ತಿದ್ದರು, ಈಗ ಕಬ್ಬಿಣದ ನೇಗಿಲುಗಳು ಬ೦ದಿವೆ. ಆದ್ದರಿ೦ದ ನೇಗಿಲುಗಳಿಗೆ ಮರದ ಅಗತ್ಯವಿಲ್ಲ.

ಹೊನ್ನೆಮರ, ಗುರಿಗೆ, ಅರಶಿನ ತೇಗ ಮೊದಲಾದುವನ್ನು ನೊಗಗಳ ತಯಾರಿಗಾಗಿ ಉಪಯೋಗಿಸುತ್ತಾರೆ, ಮಾವು ಧೂಪಗಳನ್ನು ದೋಣಿ ತಯಾರಿಸಲು ಉಪಯೋಗಿಸುತ್ತಾರೆ. ರೈಲ್ವೆ ಸ್ಲೀಪರ್‌ಗಳ ತಯಾರಿಯಲ್ಲಿ ರೆಂಜೆ, ಕಿರಾಲುಬೋಗಿ, ತಿರ್ವ ಹೊನ್ನೆ ಮತ್ತು ಮರುವ ಮೊದಲಾದ ಮರಗಳನ್ನು ಮೋಪುಗಳಾಗಿ ಬಳಸುತ್ತಾರೆ. ಬೆತ್ತಗಳಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ.

ಬೆಳೆಗಳು

ದಕ್ಷಿಣ ಕನ್ನಡದ ಕರಾವಳಿಯ ಮುಖ್ಯ ಬೆಳೆ ಭತ್ತ . ಒಳನಾಡಿನಲ್ಲಿ ಅಡಿಕೆ, ತೆ೦ಗುಗಳನ್ನು ಬೆಳೆಸುತ್ತಾರೆ. ಒಟ್ಟು 1,81,942 ಹೆಕ್ಟೇರುಗಳಲ್ಲಿ ಭತ್ತವನ್ನು ಮುಖ್ಯಬೆಳೆಯನ್ನಾಗಿ ಬೆಳೆಸುತ್ತಾರೆ.

ಇದನ್ನು ಬಿಟ್ಟರೆ ಕಬ್ಬು, ರಾಗಿ ಮತ್ತು ಧಾನ್ಮಗಳನ್ನು ಬೆಳೆಸುವ ಕ್ರಮವಿದೆ. ಎರಡನೆಯ ಫಸಲಿನ ಕಾಲದಲ್ಲಿ ಹುರುಳಿ, ಉದ್ದು, ಹೆಸರು, ನೆಲಗಡಲೆ ಮುಂತಾದವನ್ನು ಬೆಳೆಸುವ ಕ್ರಮವಿದೆ. ದ್ವಿದಳ ಧಾನ್ಮಗಳನ್ನು ಸಾಮಾನ್ಯ 16,000 ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯುತ್ತಾರೆ.

ಗುಡ್ಡದ ಕಮರಿಗಳಲ್ಲಿ ಮೂರನೆಯ ಫಸಲಿನ ಕಾಲದಲ್ಲಿ ಗದ್ದೆಗಳಲ್ಲಿ ತರಕಾರಿ, ಗಡ್ಡೆಗೆಣಸುಗಳನ್ನು ಬೆಳೆಸುತ್ತಾರೆ. ಶುಂಠಿಯ ಬೆಳೆಯನ್ನು, ಅರಶಿನವನ್ನು ಬೆಳೆಸುವ ಕ್ರಮವಿದೆ.

ಬಾಳೆಯನ್ನು, ಹಣ್ಣು ಹಂಪಲ ಗಿಡಗಳನ್ನು ಎಲ್ಲ ಕಡೆ ಕಾಣಬಹುದು. ಬಾಳೆಯ ಗಿಡಗಳು ಮೊದಲು ಅಡಿಕೆಗೆ ನೆರಳಾಗಿ ಇದ್ದು ಅಡಿಕೆ ಫಲ ಬರುವ ತನಕ ವಾಣಿಜ್ಯ ಬೆಳೆಯಾಗಿ ಬೆಳೆಸುವವರಿದ್ದಾರೆ. ಅಡಿಕೆಯ ಬೆಳೆ ಈಗ ಪುಮುಖ ವಾಣಿಜ್ಯ ಬೆಳೆಯಾಗಿದೆ.

ಚಂದ್ರಬಾಳೆ, ಕದಳಿ, ಗಾಳಿ, ಬೂದು, ಹೂ, ರಸ, ಮೈಸೂರು, ಪುಟ್ಟುಬಾಳೆಗಳೆ೦ದು ಅನೇಕ ಜಾತಿಯ ಸಂಪ್ರದಾಯಿಕ ಬಾಳೆಗಳ ಬೆಳೆಯೊಂದಿಗೆ ಇತ್ತೀಚೆಗೆ ಕ್ಯಾವೆ೦ಡಿಶ್‌ ಬಾಳೆಯನ್ನು ಬೆಳೆಸುವ ಕ್ರಮವನ್ನು ಅನುಸರಿಸಲಾಗುತ್ತಿದೆ.

ದಕ್ಷಿಣ ಕನ್ನಡದಲ್ಲಿ ಸುಮಾರು 2,609 ಹೆಕ್ಟೇರುಗಳಲ್ಲಿ ಕಸಿ ಮಾವಿನ ಕೃಷಿಯನ್ನು ಮಾಡುತ್ತಾರೆ. ಜೊತೆಗೆ ಸಾಂಪ್ರದಾಯಿಕ ಕಾಡು ಮಾವಿನ ಮರಗಳು ತುಂಬ ಇವೆ.

ಅಲ್ಫೋನ್ಸಾ, ಬೆನೆಟ್‌, ಪೈರಿ, ಮುಂಡಪ್ಪ, ತೋತಾಪುರಿ, ನೀಲಂ, ಬ೦ಗಲ್‌ಪಳ್ಳಿ ಮತ್ತು ಕದ್ರಿ ಮುಂತಾದ ಹಲವು ಜಾತಿಯ ಬೆಳೆಗಳನ್ನು ಬೆಳೆಸುತ್ತಾರೆ.

ಇದಲ್ಲದೆ ಕ್ಯೂ ಮತ್ತು ಮೊರಿಸಿಯನ್‌ ಜಾತಿಯ ಅನಾನಸುಗಳನ್ನು ಕಾರ್ಕಳ, ಬೆಳ್ತಂಗಡಿ ಕುಂದಾಪುರ ಮತ್ತು ಮಂಗಳೂರು ತಾಲೂಕುಗಳಲ್ಲಿ ಬೆಳೆಸುವ ಪದ್ಧತಿಯಿದೆ. ಹಲಸಿನ ಮರಗಳು ದಕ್ಷಿಣ ಕನ್ನಡದಲ್ಲಿ ಸುಮಾರು 1958 ಹೆಕ್ಟೇರ್‌ ವಿಸ್ತಾರದಲ್ಲಿ ಬೆಳೆಯುತ್ತದೆ. ಇದಲ್ಲದೆ ಚಿಕ್ಕು, ಪಪ್ಪಾಯಿಗಳು ಕೂಡಾ ಇಲ್ಲಿ ಬೆಳೆಯುತ್ತವೆ. ಪಪ್ಪಾಯಿ ಗಿಡಗಳನ್ನು ಸುಮಾರು 150 ಹೆಕ್ಟೇರ್‌ಗಳಲ್ಲಿ ಬೆಳೆಸಲಾಗುತ್ತದೆ. ಅಡಕೆಯು ಈ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದು ಮುಖ್ಯವಾಗಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬೆಳೆಯುತ್ತದೆ. ಇಲ್ಲಿನ ಅಡಕೆಯು ದೇಶದ ವಿವಿಧ ಭಾಗಗಳಿಗೆ ಮಾರಾಟವಾಗುತ್ತಿದ್ದು, ಈ ಜಿಲ್ಲೆಯ ಸಂಪತ್ತಿಗೆ ಒ೦ದು ಮುಖ್ಯ ಕಾರಣವಾಗಿದೆ.

ದಕ್ಷಿಣ ಕನ್ನಡದಲ್ಲಿ ಎಲ್ಲ ಕಡೆ ಕಾಣಿಸುವ ಇನ್ನೊ೦ದು ಮರ ಹನೆ ಮರ. ಇದನ್ನು ಮನೆಕಟ್ಟಲು ಮೋಪುಗಳಾಗಿಯೂ ಉಪಯೋಗಿಸುವವರಿದ್ದಾರೆ. ಇದರಿಂದ ಕಳ್ಳನ್ನು ಕೂಡ ತೆಗೆಯುತ್ತಾರೆ. ಇದರಿ೦ದ ಓಲೆ ಬೆಲ್ಲವನ್ನು ತಯಾರಿಸುತ್ತಾರೆ.

ಇಲ್ಲಿನ ತರಕಾರಿಯ ಬೆಳೆಗಳು ವೈವಿಧ್ಯಮಯ. ಅಳಸಂಡೆ, ಕು೦ಬಳ, ಬಸಳೆ, ಬೆಂಡೆ, ಮೆಣಸು, ಹೀರೆ ಹೀಗೆ ಅನೇಕ ಬಗೆಯ ತರಕಾರಿಗಳು ಬೆಳೆಯುತ್ತವೆ. ಮನೆಯ ಬಳಕೆಗಾಗಿ ಸೌತೆ, ಮುಳ್ಳುಸೌತೆ, ಹರಿವೆ, ನುಗ್ಗೆಕಾಯಿ ಮುಂತಾದವನ್ನು ಬೆಳೆಸುತ್ತಾರೆ.

ದೀವಿ ಹಲಸು ದಕ್ಷಿಣ ಕನ್ನಡದಲ್ಲಿ ಬೆಳೆಯುವ ಇನ್ನೊಂದು ಬೆಳೆ. ಸುವರ್ಣಗಡ್ಡೆ, ಮುಂಡಿ ಮತ್ತು ಕೆಸುವಿನ ಗಡ್ಡೆಯನ್ನು ಜಿಲ್ಲೆಯಾದ್ಯ೦ತ ನೀರಿನ ಆಶ್ರಯವಿದ್ದಲ್ಲಿ ಬೆಳೆಸುತ್ತಾರೆ.

ಮೆಣಸನ್ನು ಸು.2400 ಹೆಕ್ಟೇರುಗಳಲ್ಲಿ ಬೆಳೆಸುತ್ತಾರೆ. ಭತ್ತದೊ೦ದಿಗೆ ಇದನ್ನು ಆವರ್ತನ ಬೆಳೆಯಾಗಿಯೂ ಬೆಳೆಯುತ್ತಾರೆ. ಒಳ್ಳೆ ಮೆಣಸನ್ನು ಅಡಿಕೆ ಮತ್ತು ತೆ೦ಗಿನ ತೋಟಗಳಲ್ಲಿ ಬೆಳೆಸುತ್ತಾರೆ. ಸುಳ್ಳ, ಸ೦ಪಾಜೆ, ಬೆಳ್ತ೦ಗಡಿಯ ಘಟ್ಟದ ಇಳಿಜಾರಿನಲ್ಲಿ ತೋಟಗಾರಿಕೆಯ ಬೆಳೆಗಳನ್ನು ಮಾತ್ರ ನೋಡಬಹುದು. ಒಳ್ಳೆ ಮೆಣಸುಗಳಲ್ಲಿ ತಣಿಯೂರು, ಕರಿಮು೦ಡ ಹಾಗೂ ಕಳುವಳ್ಳಿ ಎ೦ಬ ಜಾತಿಗಳಿವೆ. ಶುಂಠಿ, ಕರಿಬೇವು, ಗೇರುಬೀಜ, ಇವು ಇನ್ನೂ ಕೆಲವು ಕೃಷಿ ಉತ್ಪಾದನೆಗಳು. ಗೇರು ನಾಲ್ಕು ನೂರು ವರ್ಷಗಳ ಹಿ೦ದೆ ಪೋರ್ಚುಗೀಸರ ಮೂಲಕ ಬಂದು ಸೇರಿದ ಸಸ್ಕದ ಜಾತಿ. ಮೂರು ನಾಲ್ಕು ವರ್ಷಗಳಲ್ಲಿ ಫಲ ಬಿಟ್ಟು ಅನೇಕ ವರ್ಷ ಫಲ ಕೊಡುತ್ತದೆ.

ಇದರ ಜೊತೆ ಇತ್ತೀಚೆಗೆ ಕ೦ಡು ಬರುವ ಬೆಳೆ ಕೊಕ್ಕೊ. ಇದು ಸುಮಾರು 1282 ಹೆಕ್ಟೇರುಗಳಲ್ಲಿ ವ್ಯಾಪಿಸಿದೆ. ರಬ್ಬರ್‌ ಕೂಡಾ ವಾಣಿಜ್ಮ ಬೆಳೆಯಾಗಿ ಆಕರ್ಷಣೆಗೆ

ಕಾರಣವಾಗಿದೆ. ಅಡಿಕೆ ತೋಟದ ಮಧ್ಯೆ ಕೊಕ್ಕೊ ಬೆಳೆಯಬಹುದು. ಆದರೆ ರಬ್ಬರ್‌ ಗಿಡಗಳಿಗೆ ಪ್ರತ್ಕೇಕವಾಗಿ ಇಳಿಜಾರು ಪ್ರದೇಶಗಳೇ ಬೇಕಾಗುತ್ತದೆ.

ಅಲಂಕಾರ ಗಿಡಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮಲ್ಲಿಗೆ, ಸೇವಂತಿಗೆ, ಆಬ್ಬಲಿಗೆಗಳಿಗೆ ಪ್ರಮುಖ ಸ್ಥಾನವಿದೆ. ಮಲ್ಲಿಗೆಯಲ್ಲಿ ಉಡುಪಿ ಮತ್ತು ಮ೦ಗಳೂರು ಮಲ್ಲಿಗೆಗಳೇ ಮುಖ್ಯವಾದುವು.

ಕರಾವಳಿ ಜಿಲ್ಲೆಯಲ್ಲಿ ಈ ಎಲ್ಲ ಸಸ್ಯವರ್ಗಗಳ ಜತೆ ವನಸ್ಪತಿಗಳು, ಕಳೆಗಿಡಗಳು, ಶಿಲೀಂದ್ರಗಳು ಕೂಡಾ ಬೆಳೆಯುತ್ತವೆ. ಇವಿಷ್ಟೇ ಆಲ್ಲ. ಆಲ, ಆಶ್ವಥ್ಥ, ಹುಣಸೆ, ಅತ್ತಿ, ಬೇವು ಮು೦ತಾದ ಮರಗಿಡಗಳು ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲಿ ಬೆಳೆಯುತ್ತವೆ.

ಪ್ರಾಣಿವರ್ಗ

ಕರಾವಳಿ ಜಿಲ್ಲೆಯ ಪ್ರಾಣಿವರ್ಗದ ಸಂಪತ್ತು ವೈವಿಧ್ಯಮಯವಾದದ್ದು. ಸಾಕುಪ್ರಾಣಿಗಳಾದ ದನ, ಆಡು, ಕೋಣ, ನಾಯಿ, ಕುರಿ, ಕೋಳಿ, ಮೊಲ ಇವೆಲ್ಲ ಇದ್ದರೆ, ಕಾಡಿನಲ್ಲಿ ಹುಲಿ, ಚರತೆ, ಆನೆ, ಜಿಂಕೆ, ಕಡವೆ, ಕಾಡುಕೋಳಿ, ಮ೦ಗ ಮುಂತಾದವು ಇವೆ.

ಜಲಚರಗಳಾದ ಮೀನು, ಮೊಸಳೆ, ನಾನಾ ಜಾತಿಯ ಹಾವುಗಳು ಎಲ್ಲವನ್ನು ನಮ್ಮ ಜಿಲ್ಲೆಯಲ್ಲಿ ಕಾಣಬಹುದು. ಕಾಡುಗಳಲ್ಲಿ ಸದಾ ಜೀರುಂಡೆಗಳ ನಾದವನ್ನು ಕೇಳಬಹುದು. ಪತ೦ಗಗಳಲ್ಲಿ ಅನೇಕ ಜಾತಿಗಳಿವೆ. ಅನೇಕ ಕೀಟರಾಶಿಗಳಿವೆ. ಇಲ್ಲಿ ಅತ್ಕ೦ತ ಉಪಯುಕ್ತ ಕೀಟದ ಜಾತಿ ಅಂದರೆ ಜೇನುನೊಣ. ಸ್ಥಳೀಯ ಜೇನಿಗೆ ಬಹಳ ಬೇಡಿಕೆ ಇದೆ.

ಪಕ್ಷಿಗಳು

ದಕ್ಷಿಣ ಕನ್ನಡ ಪಕ್ಷಿಗಳ ಜಾತಿಯನ್ನು ಎರಡು ವಿಭಾಗವಾಗಿ ಮಾಡಿದ್ದಾರೆ. ಮೊದಲನೆಯ ವರ್ಗದಲ್ಲಿ ಕೃಷಿಗೆ ಅಪಾಯಕಾರಿಯಾದ ಗಿಳಿ ಗೀಜಗಗಳು. ಎರಡನೆಯ ವರ್ಗದಲ್ಲಿ ಕೊಳ್ಳೆ ಹೊಡೆಯುವ ಪಕ್ಷಿಗಳು, ಗಿಡುಗಗಳು ಗೂಬೆಗಳು. ಈ ಪಕ್ಷಿಗಳ ವೈವಿಧ್ಯಮಯ ಅನ್ವೇಷಣೆಗೆ ವಿಪುಲ ಅವಕಾಶ ಇಲ್ಲಿ ತೆರೆದಿದೆ.

ಮಳೆಯ ಪ್ರಮಾಣ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ವಿಫುಲವಾಗಿದೆ. ಜೂನ್‌ನಿ೦ದ ಸಪ್ಪ೦ಬರ್‌ವರೆಗೆ ಇಲ್ಲಿ ಮಳೆಗಾಲವೆ೦ದು ಕರೆಯಬಹುದು. ಸರಾಸರಿ ಮಳೆ 154.73” ರಿಂದ 3930 ಮಿ.ಮಿ. ಮಳೆಯು ಕರಾವಳಿಯಲ್ಲಿ ಮೊದಲ್ಗೊಂಡು ಘಟ್ಟದ ಕಡೆಗೆ ಬಿರುಸಾಗಿ ಸಾಗುತ್ತದೆ. ಭಟ್ಕಳ ಮತ್ತು ಬೈ೦ದೂರಿನ ಕರಾವಳಿಗಳಲ್ಲಿ ಇತರ ಕರಾವಳಿಗಿ೦ತ ಮಳೆಯ ಪ್ರಮಾಣ ಹೆಚ್ಚು. ಸುಮಾರು 120 ದಿನಗಳಲ್ಲಿ ದಿನವೊ೦ದಕ್ಕೆ ತಲಾ 2.5 ಮಿ.ಮೀ.ನಂತೆ ಮಳೆ ಬೀಳುತ್ತದೆ. ಮಳೆಗಾಲದ ಹವೆ ತಂಪಾಗಿರುತ್ತದೆ.

ಮಳೆಗಾಲವಿಡೀ ಮೋಡಮುಸುಕಿ ಮುಸಲಧಾರೆಯ ಮಳೆ ಎಡೆಬಿಡದೆ ಸುರಿಯುತ್ತದೆ. ಮಳೆಯ ಮಟ್ಟಿಗೆ ದಕ್ಷಿಣ ಕನ್ನಡದ ಮಳೆಗಾಲ ಅತ್ಯಂತ ಸು೦ದರ. ಮೊದಲೇ ಹಚ್ಚ ಹಸಿರ ವನಸಿರಿ. ಹೊಳೆಗಳಿಂದ ಗುಡ್ಡ ಬೆಟ್ಟಗಳಿಂದ ಸಮುದ್ರದಿಂದ ರಮ್ಮವಾಗಿರುವ ನಿಸರ್ಗವನ್ನು ಮಳೆ ಇನ್ನಷ್ಟು ಸು೦ದರಗೊಳಿಸುತ್ತದೆ.

ಮಳೆಗಾಲದ ಆರ೦ಭ ಸಾಕಷ್ಟು ಆರ್ಭಟದಿ೦ದ ಗುಡುಗು-ಮಿ೦ಚುಗಳ ಹೊಡೆತದಿ೦ದ. ಆರ೦ಭಗೊಳ್ಳುತ್ತದೆ, ಹಾಗೆಯೇ ಸೆಪ್ಟ೦ಬರ್‌ ಆಕ್ಟೋಬರ್‌ ತಿ೦ಗಳುಗಳಲ್ಲಿ ಅಷ್ಟೆ ರುದ್ರವಾಗಿ ಕಡಿಮೆಯಾಗುತ್ತದೆ. ಮಳೆಗಾಲ ಇಲ್ಲಿ ಹಚ್ಚಹಸುರನ್ನು ಕಾಪಾಡಿ ಮಾಯವಾಗುತ್ತದೆ. ನಮ್ಮಜಿಲ್ಲೆಯ ಹವಾಮಾನದ ವೈಶಿಷ್ಟ್ಯವೆ೦ದರೆ ಉತ್ತರ ಭಾರತದಂತೆ ಇಲ್ಲಿ ವಿಪರೀತವಾದ ಸೆಕೆ, ಚಳಿ, ಮಳೆಗಾಲ ಬಾಧಿಸುವುದಿಲ್ಲ. ಬಡವರು ತಮ್ಮ ಕನಿಷ್ಟ ಸೌಲಭ್ಯಗಳೊಂದಿಗೆ ಈ ನೆಲದಲ್ಲಿ ಹಸನಾಗಿ ಬಾಳಬಹುದು. ಚಳಿಗಾಗಿ ಉಣ್ಣೆಯ ಕೋಟುಗಳ, ಸೆಕೆ ತಡೆಯಲಾರದೆ ಎ.ಸಿ.ಗಳ ಯಾವುದರ ಅಗತ್ಯವೂ ಕಾಣಿಸದು. ಅದು ಕಾಣಿಸಿಕೊ೦ಡಿದ್ದರೆ ಈಗಿನ ಪ್ಯಾಷನ್‌ಗಾಗಿ ಅಷ್ಟೆ. ಒ೦ದು ವೇಳೆ ಇಲ್ಲಿಯ ಹವೆಯಲ್ಲಿ ವೈಪರೀತ್ಕ ಕ೦ಡು ಬಂದರೆ ನಾವು ಸೃಷ್ಟಿಸಿರುವ ನಗರಗಳಿ೦ದ ಹೊರತು ಇಲ್ಲಿಯ ಪ್ರಾಕೃತಿಕ ಸಹಜ ವಾತಾವರಣದಲ್ಲಿ ಸಾಮಾನ್ಯ ಜನ ನೆಮ್ಮದಿಯಿ೦ದ ಬದುಕುವ ಹವಾಮಾನ ನಮ್ಮ ಜಿಲ್ಲೆ ಯದು.

ಜನ — ವಸತಿ — ಭಾಷೆ

ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಕ೦ಡು ಖ್ಯಾತ ಕವಯತ್ರಿ ಸರೋಜಿನಿ ನಾಯುಡು ಆವರು ಈ ಜಿಲ್ಲೆಯನ್ನು 'ನ೦ದನವನ' ಎಂದು ಕರೆದಿದ್ದರು. ಇ೦ಥ ಜಿಲ್ಲೆಯ ಒಟ್ಟು ವಿಸ್ತಾರ 8441 ಚದರ ಕಿಲೋಮೀಟರುಗಳು. ಕರ್ನಾಟಕದ ವಿಸ್ತೀರ್ಣದ 4.4 ಶೇಕಡಾ ಭಾಗವನ್ನು ಈ ಜಿಲ್ಲೆ ಹೊಂದಿದೆ. 1991ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆ 26,94,264 ಆಗಿದ್ದು ಅದರಲ್ಲಿ 13,06,256 ಗ೦ಡಸರು ಮತ್ತು 13,88,008 ಹೆ೦ಗಸರು. ಜನಸ೦ಖ್ಯೆಯ ಮಾನದಲ್ಲಿ ಕರ್ನಾಟಕದಲ್ಲಿ ಜಿಲ್ಲೆ ಆರನೆಯ ಸ್ಥಾನವನ್ನು ಪಡೆದಿದೆ.

ಜನಸಂಖ್ಯೆಯ ಒತ್ತಡ ಮಣ್ಣಿನ ಫಲವತ್ತತೆ, ಮಳೆಯ ಪ್ರಮಾಣ, ಸ೦ಪರ್ಕ ಸೌಲಭ್ಯ, ವ್ಯಾಪಾರ ವಹಿವಾಟುಗಳನ್ನು ಹೊಂದಿಕೊಂಡಿದೆ. ಇವೆಲ್ಲದರಿ೦ದಾಗಿ ಜಲ್ಲೆಯ ಜನಸಂಖ್ಯೆಯ ಒತ್ತಡ ಹೆಚ್ಚಾಗುತ್ತಲಿದೆ. ಬೆ೦ಗಳೂರು ಮತ್ತು ಮ೦ಡ್ಕಗಳ ನ೦ತರ ಈ ಜಿಲ್ಲೆ ಜನಸ೦ಖ್ಯೆಯಲ್ಲಿ ಅತ್ಯಂತ ಒತ್ತಡವಿರುವ ಜಿಲ್ಲೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾ೦ತರ ಪ್ರದೇಶಗಳಿ೦ದ ನಗರಗಳಿಗೆ ಜನರ ವಲಸೆ ನಿರ೦ತರವಾಗಿ ನಡೆದಿದೆ. ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ಸೌಲಭ್ಯ ನಗರಗಳಲ್ಲಿನ ಪ್ರಮುಖ ಆಕರ್ಷಣೆಯಾಗುತ್ತಲಿದೆ. ವ್ಯಾಪಾರ ವಹಿವಾಟು, ಸ೦ಪರ್ಕ ಸಾಧನಗಳ ದೃಷ್ಟಿಯಿ೦ದ ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಹೆಚ್ಚು ಸೌಲಭ್ಯವನ್ನು ಹೊಂದುತ್ತಲಿವೆ. ಕೆಲವು ಶ್ರೀಮ೦ತ ವರ್ಗದ ಕೃಷಿಕರು ಹಳ್ಳಿಯಲ್ಲೂ, ನಗರದಲ್ಲೂ, ವಾಸ್ತವ್ಯವನ್ನು ಮಾಡಿಕೊಂಡಿರುವರಿದ್ದಾರೆ. ನಗರದ ವಾಸ್ತವ್ಯಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಲ್ಪಡುತ್ತವೆ.

ದಕ್ಷಿಣ ಕನ್ನಡದಲ್ಲಿ ಮುಖ್ಯವಾಗಿ ಎರಡು ಭಾಷೆಗಳು, ಕನ್ನಡ ಮತ್ತು ತುಳು. ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡು ಭಾಷೆಯಾಗಿ ಹೆಚ್ಚಿನ ಜನರು ವ್ಯವಹರಿಸುವ ಭಾಷೆ ಕನ್ನಡವೇ ಆಗಿದೆ. ಹಾಗೆಯೇ ಕನ್ನಡದಲ್ಲೂ ಉಪಭಾಷೆಗಳಿಗವೆ. ಗೌಡರು, ಹವ್ಯಕ ಬ್ರಾಹ್ಮಣರು ಆಡುವ ಕನ್ನಡವೇ ಬೇರೆ. ಕೊರಗರ೦ತಹ ಪರಿಶಿಷ್ಟ ವರ್ಗದವರಿಗೆ ಪ್ರತ್ಕೇಕ ಭಾಷೆಯಿದೆ.

ಕಲ್ಯಾಣಪುರ ಹೊಳೆಯಿಂದಾಚೆ ಕುಂದಾಪುರ ಕನ್ನಡ (ಕು೦ದಗನ್ನಡ) ಮಾತೃಭಾಷೆಯಾಗಿ ಉಪಯೋಗಿಸಲ್ಪಡುತ್ತದೆ. ಕಲ್ಯಾಣಪುರ ಹೊಳೆಯಿಂದ ಈಚೆ ದಕ್ಷಿಣದ "ಚ೦ದ್ರನದಿ ಹೊಳೆಯವರೆಗೆ ಇಲ್ಲಿ ತುಳುವೇ ಮಾತೃಭಾಷೆಯಾಗಿ ಉಳ್ಳವರಾಗಿದ್ದಾರೆ. ತುಳು ಭಾಷೆಯನ್ನು ಕನ್ನಡ ಮತ್ತು ತುಳು ಬಲ್ಲವರು ಕೂಡಾ ಉಪಯೋಗಿಸುತ್ತಾರೆ. ಗೌಡ ಸಾರಸ್ವತರು, ಸಾರಸ್ವತರು ಮತ್ತು ರೋಮನ್‌ ಕ್ಕಾಥೋಲಿಕ್‌ರು ಮತ್ತು ಇತರ ಕೆಲವು ವರ್ಗಗಳ ಜನರು ಕೊಂಕಣಿ ಭಾಷೆಯನ್ನು ಉಪಯೋಗಿಸುತ್ತಾರೆ. ಗೋವೆಯನ್ನು ಪೋರ್ಚುಗೀಸರು ಆಕ್ರಮಿಸಿದ ನ೦ತರ ಹೆಚ್ಚಿನ ಕೊ೦ಕಣಸ್ಥರು ದಕ್ಷಿಣ ಕನ್ನಡಕ್ಕೆ ವಲಸೆ ಬ೦ದರು. ಇಲ್ಲಿ ಉರ್ದು ಭಾಷೆಯನ್ನು ಡೆಕ್ಕನಿ ಮುಸ್ಲಿಮರು ಉಪಯೋಗಿಸುತ್ತಾರೆ. ಮರಾಠಿ ಭಾಷೆಯನ್ನಾಡುವ ಜನವರ್ಗಗಳೂ ಇಲ್ಲಿವೆ. ನಗರಗಳಲ್ಲಿ ಗುಜರಾತಿ ಭಾಷಿಕರೂ ಇದ್ದಾರೆ. ತೆಲುಗು, ತಮಿಳು, ಮಲಯಾಳ ಮನೆಮಾತಿನವರೂ ಚಿಕ್ಕ ಸ೦ಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ಮಾಪಿಳ್ಳೆ (ಬ್ಯಾರಿ) ಜನರು ಮಲಯಾಳಂನ್ನು, ನವಾಯತರು ಕೊಂಕಣಿಯನ್ನು ಉಪಯೋಗಿಸುತ್ತಾರೆ.

ತುಳು ಭಾಷೆಗೆ ಕನ್ನಡ ಲಿಪಿಯನ್ನೆ ಬಳಸುತ್ತಾರೆ. 'ಸಂಧಿ ಮತ್ತು ಪಾಡ್ದನಗಳು' ಪರ೦ಪರಾಗತ ಜಾನಪದ ಹಾಡುಗಬ್ಬಗಳು ತುಳುವಿನಲ್ಲಿ ಇವೆ. ಪಾಡ್ದನಗಳು ಹಿರಿಯರ ವೀರಗಾಥೆಗಳು, ಕೋಟಿಚೆನ್ನಯರ ವೀರಗಾಥೆ ಪ್ರಸಿದ್ದವಾಗಿದೆ. ಈ ತುಳು ಭಾಷೆಯಲ್ಲಿ ನಾಟಕಗಳು, ಸಿನಿಮಾಗಳು ಕೂಡಾ ಸೃಷ್ಟಿಯಾಗಿವೆ.

ತುಳು ಭಾಷೆಯು ಪ್ರಾಕ್‌ ದ್ರಾವಿಡ ಭಾಷೆಯ ಅನೇಕ ಲಕ್ಷಣಗಳನ್ನು ಉಳಿಸಿಕೊಂಡಿದ್ದು ಭಾಷಾ ಅಧ್ಯಯನದ ದೃಷ್ಟಿಯಿ೦ದ ಮಹತ್ವದಾಗಿದೆ. ಕನ್ನಡ ಮತ್ತು ತುಳುವಿನ ಕೊಳು-ಕೊಡುಗೆ ಅಪರಿಮಿತವಾಗಿದೆ. ತುಳು ಭಾಷೆ ಕನ್ನಡದಿ೦ದಷ್ಟೇ ಅಲ್ಲ, ಪರ್ಶಿಯನ್‌ ಮತ್ತು ಅರೇಬಿಕ್‌ ಭಾಷೆಗಳಿ೦ದ ಕೂಡಾ ಸಾಕಷ್ಟು ಶಬ್ದಗಳನ್ನು ಪಡೆದಿದೆ.

ಚರಿತ್ರೆ ಮತ್ತು ಧಾರ್ಮಿಕ ಪ್ರಭಾವ

ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಕದ೦ಬ ದೊರೆ ಮಯೂರಶರ್ಮನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಬ್ರಾಹ್ಮಣರ ಆಗಮನವಾಯಿತೆ೦ದು ಓದುತ್ತೇವೆ. ಆದರೆ ಇತ್ತೀಚಿನ 2000 ವರ್ಷಗಳ ಇತಿಹಾಸದಲ್ಲಿ ನಾವು ಒಮ್ಮೆಲೆ ಧಾರ್ಮಿಕ ಹಾಗೂ ಕುಲಕುಟು೦ಬಗಳ ಉಲ್ಲೇಖನವನ್ನು ಸೃಷ್ಟಿಗೊಳಿಸುವಷ್ಟು ದಾಖಲೆಗಳನ್ನು ಪಡೆದಿಲ್ಲ.

ಕ್ರಿ.ಶ. ಒ೦ದನೆಯ ಶತಮಾನದ ವೇಳೆ ದಕ್ಷಿಣ ಕನ್ನಡದಲ್ಲಿ ಬೌದ್ದ ಧರ್ಮದ ಪ್ರಭಾವ ಗಾಢವಾಗಿದ್ದಿರಬೇಕು. ಇದಕ್ಕೆ ದೃಷ್ಟಾ೦ತವಾಗಿ ಕದ್ರಿಯ ಗುಡ್ಡೆಗಳು ಇವೆ. ಈಗ ಅವುಗಳನ್ನು ಪಾ೦ಡವರ ಗುಹೆಗಳೆಂದು ಕರೆಯುತ್ತಾರೆ. ಆಳುಪ ದೊರೆ ಕು೦ದವರ್ಮ ನಿರ್ಮಿಸಿದ ಲೋಕೇಶ್ವರನ ವಿಗ್ರಹ ಇವುಗಳಿಗೆ ಒ೦ದು ಆಧಾರವಾಗಿದೆ. ಕೆಲವು ನಗರಗಳ ಹೆಸರು ಹಾಗೂ ದೇವತೆಗಳ ವಿಗ್ರಹಗಳ ಹೆಸರುಗಳಿಂದ ಬೌದ್ದ

ಧರ್ಮದ ಪ್ರಭಾವ ತುಳುನಾಡಿನಲ್ಲಿ ಸಾಕಷ್ಟು ಇತ್ತೆ೦ದು ಹೇಳಬಹುದು.

ತದನ೦ತರ ಅದ್ವೈತ ಮತ್ತು ಜೈನ ಧರ್ಮದ ಪ್ರಭಾವ ತುಳುನಾಡಿನ ಮೇಲೆ ಸಾಕಷ್ಟು ಆಯಿತು. ಜತೆಗೆ ನಾಥಪ೦ಥದ ಪ್ರಭಾವವನ್ನು ಕಾಣುತ್ತೇವೆ.

ಆಳುಪ ದೊರೆಗಳ ಕಾಲದಲ್ಲಿ ಸಾಕಷ್ಟು ಪ್ರಭಾವ ಶೈವ ಧರ್ಮದಿಂದ ಉ೦ಟಾಯಿತು. ಒ೦ದನೇ ಚಿತ್ರವಾಹನನ ಕಾಲದಿ೦ದಲೂ ಶೈವ ಧರ್ಮ ಮುನ್ನಡೆಯನ್ನು ಪಡೆಯಿತು.

ಮೂಡಬಿದರೆ ಮತ್ತು ಕಾರ್ಕಳದಲ್ಲಿನ ಅರಸು ಮನೆತನಗಳಿ೦ದ ಹಿ೦ದೂ ದೊರೆಗಳ ಮೇಲೆ ಜೈನ ಧರ್ಮದ ಪ್ರಭಾವ ಹೆಚ್ಚಾಗಿತ್ತೆಂದೂ ಹೇಳಬಹುದು. ಕ್ರಿ.ಶ. ಒ೦ಭತ್ತನೆಯ ಶತಮಾನದಲ್ಲಿ ಜೈನ ಧರ್ಮಕ್ಕೆ ಉನ್ನತಿಯ ಸ್ಥಿತಿ ಲಭ್ಯವಾಯಿತು. ದಿಗಂಬರ ಪಂಥದ ಜೈನರು ದಕ್ಷಿಣ ಕನ್ನಡದ ದೊರೆಗಳನ್ನು ಹೆಚ್ಚು ಪ್ರಭಾವಿಸಿದರು. ಇಲ್ಲಿ ಸಂಪ್ರದಾಯ, ಮದುವೆ, ಉತ್ತರ ಕ್ರಿಯೆಗಳ ವಿಚಾರದಲ್ಲಿ ದಕ್ಷಿಣ ಕನ್ನಡದ ಬ೦ಟರಿಗೂ ಜೈನರಿಗೂ ಸಾಕಷ್ಟು ಸಾಮ್ಯಗಳಿರುವುದನ್ನೂ ನಾವು ಕಾಣುತ್ತೇವೆ.

ಹಾಗೆಯೇ ದಕ್ಷಿಣ ಕನ್ನಡದಲ್ಲಿ ಭಾಗವತ ಸ೦ಪ್ರದಾಯದ ಪ್ರಭಾವವನ್ನು ನಾವು ಸಾಕಷ್ಟು ಕಾಣುತ್ತೇವೆ. ಕು೦ದಾಪುರ ಬಾಳುಕುದ್ರುವಿನಲ್ಲಿ ಕಾಸರಗೋಡಿನ ಎಡನೀರಿನಲ್ಲಿ ಭಾಗವತ ಸ೦ಪ್ರದಾಯದ ಮಠಗಳಿವೆ. ಅಂತೆಯೇ ಇಲ್ಲಿನ ಕೆಲವು ಜನವರ್ಗಗಳು ಶೃ೦ಗೇರಿ ಮಠಕ್ಕೆ ನಡೆದುಕೊಳ್ಳುತ್ತವೆ.

ಕ್ರಿ.ಶ. ಹದಿಮೂರನೆಯ ಶತಮಾನದಲ್ಲಿ ಆಚಾರ್ಯತ್ರಯರಲ್ಲಿ ಒಬ್ಬರಾದ ಮಧ್ವಾಚಾರ್ಯರಿ೦ದ ಆರಂಭಗೊಂಡ ದ್ವೈತಮತ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಮಧ್ವಾಚಾರ್ಯರನ್ನು ಆನ೦ದತೀರ್ಥ ಮತ್ತು ಪೂರ್ಣಪ್ರಜ್ಞರೆ೦ದು ಕರೆಯುತ್ತಾರೆ.

ಕ್ರಿ.ಶ. 1238ರಲ್ಲಿ ಇವರ ಜನನ. ಉಡುಪಿಗೆ ಒ೦ಭತ್ತು ಕಿಲೋ.ಮೀ. ದೂರದಲ್ಲಿರುವ ಪಾಜಕಕ್ಷೇತ್ರದಲ್ಲಿ ಜನಿಸಿದ ಮಧ್ವಾಚಾರ್ಯರು ಒಬ್ಬ ಉದ್ಧಾಮ ಮತಾಚಾರ್ಯರಾಗಿ 79 ವರ್ಷಗಳ ಕಾಲ ಬದುಕಿದರು. ಉಪನಿಷತ್ತು, ಭಗವದ್ಗೀತೆ, ವೇದಾ೦ತಗಳಿಗೆ ಭಾಷ್ಯ ಬರೆದು ಅವರು 39 ಗ್ರಂಥಗಳನ್ನು ರಚಿಸಿದರು.

ಅವರ ದ್ವೈತ ದರ್ಶನ ಮತ್ತು ಭಕ್ತಿಯ ಕ್ರಮ ಜನರಿಗೆ ಅನುಕರಿಸಲು ಸಾಧ್ಯವಾಗುವಂಥದಿತ್ತು. ಜಗತ್ತನ್ನು ಸತ್ಯವೆಂದು ಸಾರಿದ ಅವರು ಶ೦ಕರಾಚಾರ್ಯ

ಹಾಗೂ ರಾಮಾನುಜಾಚಾರ್ಯರಿಗಿ೦ತ ಭಿನ್ನವಾಗಿದ್ದರು. ಮಧ್ವಾಚಾರ್ಯರು ಆತ್ಮ ಮತ್ತು ಪರಮಾತ್ಮ ನಡುವಣ ಭೇದಗಳನ್ನು ಸಮರ್ಥಿಸುತ್ತಾರೆ. ದೇವ ಜೀವ ಭೇದ, ದೇವ-ವಸ್ತು ಭೇದ, ಆತ್ಮ ಮತ್ತು ವಸ್ತು ಭೇದ, ಆತ್ಮ ಮತ್ತು ಆತ್ಮ ಭೇದ, ವಸ್ತು ಮತ್ತು ವಸ್ತುಗಳ ಭೇದಾವಸ್ಥೆಯನ್ನು ಮಧ್ವಾಚಾರ್ಯರು ಪ್ರತಿಪಾದಿಸಿದರು. ಅವರು ಅದ್ವೈತ ಮತ್ತು ವಿಶಿಷ್ಟಾದ್ವೈತ ಮತದವರೊಡನೆ ಸಾಕಷ್ಟು ವಾದಿಸಿ ತನ್ನ ತತ್ವಚಿ೦ತನೆಗಳನ್ನು ಪ್ರಚಾರಪಡಿಸಿದರು.

ದ್ವೈತ ಮತದ ಪ್ರಚಾರಕ್ಕಾಗಿ ಅವರು ಎ೦ಟು ಮಠಗಳನ್ನು ಸ್ಥಾಪಿಸಿದರು. ಹಾಗೆಯೇ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಉಡುಪಿಯನ್ನು ದೊಡ್ಡ ಧಾರ್ಮಿಕ ಕ್ಷೇತ್ರವನ್ನಾಗಿಸಿದರು.

ಇದರ ಜೊತೆಗೆ ದಕ್ಷಿಣ ಕನ್ನಡದಲ್ಲಿ ವೀರಶೈವ ಮತದ ಪ್ರಭಾವ ಕ್ರಿ.ಶ. ಹದಿನಾಲ್ಕನೇ ಶತಮಾನದಲ್ಲಿ ಆಯಿತೆಂದು ತೋರುತ್ತದೆ. ಇಕ್ಕೇರಿಯ ನಾಯಕರ ಕಾಲದಲ್ಲಿ ವೀರಶೈವ ಮತದ ಪ್ರಚಾರವು ಆಯಿತೆಂದು ಕಾಣುತ್ತದೆ. ಮಂಗಳೂರಿನ ಬಸವನ ಗುಡಿಯಲ್ಲಿ 50ರಿ೦ದ 60 ಮನೆಗಳು ವೀರಶೈವರದ್ದೆ೦ದು ಕಂಡುಹಿಡಿಯಲಾಗಿದೆ. ವೀರಶೈವರ ಅನೇಕ ಅನೇಕ ಜೀರ್ಣವಾದ ಮಠಗಳನ್ನು ಇಲ್ಲಿ ಕಾಣಬಹುದು. ಗುರುಪುರ, ಗುರುವಾಯನಕೆರೆಗಳಲ್ಲೂ ವೀರಶೈವರು ಇರುತ್ತಿದ್ದರು.

ಇಷ್ಟೇ ಅಲ್ಲದೆ ಧರ್ಮಕ್ಕೆ ಸ೦ಬ೦ಧಿಸಿದ೦ತೆ ಇತರ ಕೆಲವು ಪ್ರಾಚೀನ ಪದ್ಧತಿಗಳನ್ನು ನಾವು ದಕ್ಷಿಣ ಕನ್ನಡದಲ್ಲಿ ನೋಡಬಹುದು.

ಅವುಗಳಲ್ಲಿ ದುರ್ಗೆ ಮತ್ತು ಮಾರಿಯಮ್ಮ ಮತ್ತು ಬೆರ್ಮೆರ್‌ ಆರಾಧನಾ ನಂಬಿಕೆಗಳು ಬಹಳ ಮುಖ್ಯವಾದವು. ಮಾರಿಯಮ್ಮ ಮುಖ್ಯವಾಗಿ ಭಯಂಕರ ರೋಗಗಳನ್ನು ನಾಶಪಡಿಸುವ ದೇವತೆ ಎ೦ದು ನ೦ಬಲಾಗುತ್ತದೆ. ಇದರ ಜತೆಗೆ ಮಾಸ್ತಿಯ ನಂಬುಗೆಗಳು ಇವೆ.

ಆರಾಧನೆ
ನಾಗ ಪೂಜೆ ದಕ್ಷಿಣ ಕನ್ನಡದ ಇನ್ನೊ೦ದು ನಂಬಿಕೆ . ನಾಗ-ಸುಬ್ರಹ್ಮಣ್ಮರನ್ನು ಅಭೇದ ರೂಪದ ಶಕ್ತಿಯ ಆರಾಧನೆ ದಕ್ಷಿಣ ಕನ್ನಡದಲ್ಲಿ ಪ್ರಚಲಿತವಾಗಿದೆ. ನಾಗಾರಾಧನೆಯ ಬನಗಳು, ಅಶ್ವತ್ಥ ಮರದಕಟ್ಟೆಗಳಲ್ಲಿ ನಾಗನಕಲ್ಲುಗಳು ಹಾಗೆಯೇ

ಗುಡಿಗು೦ಡಾರಗಳಿವೆ. 'ನಾಗಮ೦ಡಲ' ಎ೦ಬ ಬಹುದೊಡ್ಡ ಆರಾಧನೆ ಇವುಗಳಲ್ಲಿ ನಡೆಯುತ್ತದೆ. ನಾಗಮ೦ಡಲದಲ್ಲಿ ವೈದ್ಯರೆ೦ಬ ಪ೦ಗಡದವರು ನಾಗನೃತ್ಯವನ್ನು ಮಾಡುವ ರೂಢಿ ಇದೆ. ಅಹಿಚ್ಛತ್ರದಿ೦ದ ಬ೦ದ ಬ್ರಾಹ್ಮಣರಿ೦ದ ಈ ನಾಗಾರಾಧನೆ ರೂಢಿಯಾಗಿರಬಹುದೆ೦ಬ ಊಹೆಗಳಿವೆ. ನಾಗನನ್ನು ನಾಗಬ್ರಹ್ಮನೆ೦ದೂ ವ್ಯವಹರಿಸುತ್ತಾರೆ.

ಆರಾಧನೆಗಳಲ್ಲಿ ಹೆಚ್ಚಿನ ಸ೦ಖ್ಕೆಯ ಜನರ ಆರಾಧನೆ ಭೂತಾರಾಧನೆ. ಇದರಲ್ಲಿ ಮನೆದೈವಗಳು, ಕುಟು೦ಬ ದೈವಗಳು ಹಾಗೂ ಸಾಮೂಹಿಕ ದೈವಗಳು ಎ೦ದು ನಾವು ವಿಭಜಿಸಬಹುದು. ಕಾಡು, ನಾಡ, ಕುಟು೦ಬಗಳ, ಕೃಷಿ, ಜನ, ಜಾನುವಾರುಗಳ ರಕ್ಷಣೆಗಾಗಿರುವ ಅನೇಕ ದೈವಗಳಿವೆ. ಭೂತಸ್ಥಾನಗಳೆ೦ದು ಗುರುತಿಸುವ ಭೂತದ ಗುಡಿಗಳು ವಿಶಿಷ್ಟವಾದ ರಚನೆಗಳು. ಭೂತದ ನರ್ತಕರಾಗಿ ಅಥವಾ ಪಾತ್ರಿಗಳಾಗಿ ಪರವ, ಪ೦ಬದ, ನಲ್ಕೆ ಪಂಗಡದವರು ಇರುತ್ತಾರೆ.

ಬಿಲ್ಲವ ಹಾಗೂ ಬ೦ಟರಿ೦ದ ಜನಪ್ರಿಯ ರೀತಿಯಲ್ಲಿ ಪೂಜಿಸಲ್ಪಡುವ ಜೋಡಿ ದೈವಗಳೆ೦ದರೆ ಕೋಟಿ ಮತ್ತು ಚೆನ್ನಯ. ಈ ದೈವಗಳಿಗೆ 'ಬೈದೆರ್ಲು' ಎ೦ಬ ಹೆಸರೂ ಇದೆ. ಇವರಿಬ್ಬರು ತುಳುನಾಡಿನ ವೀರ ಪುರುಷರು. ಭೂತಗಳಲ್ಲಿ ಕಲ್ಕುಡ, ಕಲ್ಲುರ್ಟಿ, ಪ೦ಜುರ್ಳಿ, ಹಾಯ್ಗುಳಿ, ಜುಮಾದಿ, ರಕ್ತೇಶ್ವರಿ ಮು೦ತಾದ ಭೂತಗಳು ತುಂಬಾ ಪ್ರಸಿದ್ಧವಾದವು. ಸುಮಾರು 450 ಭೂತಗಳನ್ನು ಗುರುತಿಸಲಾಗಿದೆ.

ಚರಿತ್ರೆಯ ಹಿಂದೆ ಮುಂದೆ

ದಕ್ಷಿಣ ಕನ್ನಡದ ಚರಿತ್ರೆಯನ್ನು ಪ್ರಾಗೈತಿಹಾಸಿಕ ಪ್ರಾಚೀನತಮ ಸಾಂಸ್ಕೃತಿಕ ಅವಶೇಷಗಳನ್ನು ಪರಿಶೀಲಿಸಿದರೆ ಪುರಾತತ್ವ ಅನ್ವೇಷಣೆಗಳ ಪ್ರಕಾರ ದಕ್ಷಿಣ ಕನ್ನಡದ ಚರಿತ್ರೆಯ ಕಾಲವನ್ನು ಸಾ೦ಸ್ಕೃತಿಕವಾಗಿ ಎರಡು ವಿಭಾಗ ಮಾಡಬಹುದು.

ಒಂದು: ಪ್ರಾಗೈತಿಹಾಸಿಕ ಯುಗದ ಬೃಹತ್‌ ಶಿಲಾ ಸ೦ಸ್ಕೃತಿಯ ನೆಲೆಗಳು ಮತ್ತು ಇತಿಹಾಸ ಪ್ರಾರ೦ಭ ಕಾಲದ ನೆಲೆಗಳು.

ಇದರಲ್ಲಿ ಬೃಹತ್‌ ಶಿಲಾ ಸಂಸ್ಕೃತಿಯ ನೆಲೆಗಳು ಪುತ್ತೂರು, ಬಡಕಜೆಕಾರು, ಮೂಡನಿಡ೦ಬೂರು, ವಡ್ಡರಸೆ, ಬೇಳೂರುಗಳಲ್ಲಿ ಕಾಣಬಹುದು.

ಹಾಗೆಯೇ ಇತಿಹಾಸ ಪ್ರಾರ೦ಭಕಾಲದ ನೆಲೆಗಳೆ೦ದರೆ ಉದ್ಕಾವರ, ಬಾರಕೂರು, ಹಟ್ಟಿಯ೦ಗಡಿಗಳು. ಚರಿತ್ರೆಯ ಕಾಲದಿ೦ದ ಒಂದು ಕ್ಷಣ ಹಿಂದೆ ಸರಿದು ಈ ಭೂಮಿ ರಚನೆ ಹೇಗಾಯಿತು ಎಂದು ಯೋಚಿಸದರೆ ಪಶ್ಚಿಮ ಘಟ್ಟದ ತುದಿಯಲ್ಲಿ ನಿ೦ತು ಕೊಡಲಿ ರಾಮನು ಎಸೆದ ಕೊಡಲಿಯಿಂದಾಗಿ ಅರಬೀ ಸಮುದ್ರವು ಹಿಂದೆ ಸರಿಯಿತೆಂದು ಒಂದು ಪುರಾಣ ಕಥೆಯಿದೆ. ಆದರೆ ವೈಜ್ಞಾನಿಕವಾಗಿ ಪರಿಶೀಲಿಸಿದಾಗ ಸಮುದ್ರದಲ್ಲಿ ಉಂಟಾದ ಸ್ತರಭ೦ಗದಿಂದಾಗಿ ದಕ್ಷಿಣ ಕನ್ನಡದ ಭೂರಚನೆ ಉಂಟಾಯಿತೆಂದು ಕ೦ಡುಹಿಡಿದಿದ್ದಾರೆ.

ಹಿ೦ದೂ ಮಹಾಸಾಗರದ ತೀರ ಮತ್ತು ತಳಭಾಗಗಳನ್ನು "ಗ್ಲೋಮರ್‌ ಛಾಲೆ೦ಜರ್‌" ಎಂಬ ಸ೦ಶೋಧನಾ ಹಡಗು ಪರಿಶೀಲಿಸಿದಾಗ ಪಶ್ಚಿಮ ಸಮಾನಾ೦ತರವಾಗಿ ಸಮುದ್ರದಲ್ಲಿ ಸ್ತರಭ೦ಗ ಉ೦ಟಾಗಿ ಸಮುದ್ರ ತಳದ ಒಂದು ಭಾಗ ಕುಸಿದಿರುವುದು ಕಂಡು ಬಂದಿದೆ. ಈ ಕುಸಿತದಿಂದಾಗಿ ಸಮುದ್ರದಲ್ಲಿ ಆಳವು ಹೆಚ್ಚಾಗಿ ಅದಕ್ಕೆ ನೀರು ಹರಿದು ತುಂಬಿದಾಗ ತೀರದ ನೀರು ಹಿಂದೆ ಸರಿದಿರಬೇಕು ಎ೦ದು ತಿಳಿದು ಬಂದಿದೆ.

ಅ೦ದರೆ ಪರಶುರಾಮನ ಕುರಿತಾದ ಕತೆಗೂ ವೈಜ್ಞಾನಿಕವಾಗಿ ಭೂರಚನೇಯ ಕುರಿತಾದ ಸ೦ಶೋಧನೆಗೂ ಸ೦ಬ೦ಧವಿರುವುದು ಒಂದು ಕುತೂಹಲದ ಸ೦ಗತಿಯಾಗಿದೆ. ಒಂದು ಸ೦ಪ್ರದಾಯದ ಕತೆಯಂತೆ ಪರಶುರಾಮ ತನ್ನ ತಾಯಿಗಾಗಿ ಉಡುಪಿ ಸಮೀಪದ ಕುಂಜಾರುಗಿರಿಯಲ್ಲಿ ಒ೦ದು ದೇವಸ್ಥಾನವನ್ನು ಕಟ್ಟಿಸಿದನೆಂದು ಪ್ರತೀತಿ ಇದೆ. ದಕ್ಷಿಣ ಕನ್ನಡದ ಮುಖ್ಯನದಿಗಳಾದ ಕುಮಾರಧಾರ, ಪಯಸ್ಟಿನಿ, ಚಂದ್ರಗಿರಿ, ನೇತ್ರಾವತಿ, ನದಿಗಳ ವಿಚಾರ ಕ್ರಮವಾಗಿ ಮಾರ್ಕ೦ಡೇಯ ಪುರಾಣ, ವಾಯು ಪುರಾಣ ಮತ್ತು ಭವಿಷ್ಯೋತ್ತರ ಪುರಾಣಗಳಲ್ಲಿ ತಿಳಿದುಬರುತ್ತವೆ.

ಕ್ರಿ. ಶ. ಮೂರು ಮತ್ತು ನಾಲ್ಕನೇ ಶತಮಾನಗಳಿಗೆ ಸಂಬಂಧಿಸಿದ ತಮಿಳಿನ 'ಸ೦ಘ೦' ಗ್ರ೦ಥಗಳಲ್ಲಿ ಕವಿ ಮಮುಲನಾರ್‌ ಈ ಪ್ರದೇಶವನ್ನು ತುಳುನಾಡು ಎಂದು ಕರೆದ ದಾಖಲೆ ಸಿಗುತ್ತದೆ. ಮೌರ್ಯರ ದೊರೆ ಅಶೋಕನ ಕಾಲದಲ್ಲಿ ಈ ನಾಡಿಗೆ ಸತಿಯಪುತ್ರ ಎ೦ಬ ಉಲ್ಲೇಖವಿದ್ದುದು ಕಂಡು ಬರುತ್ತದೆ.

ಭಾರತದ ಪಶ್ಚಿಮ ಕರಾವಳಿ ಮತ್ತು ಮೆಡಿಟರೇನಿಯನ್‌ ದೇಶಗಳ ವ್ಯಾಪಾರ ಸ೦ಬ೦ಧಗಳನ್ನು ನಾವು ಗ್ರೀಕ್‌ ಮತ್ತು ರೋಮನ್‌ ಬರಹಗಾರರ ಗ್ರ೦ಥಗಳಲ್ಲಿ ಕಾಣುತ್ತೇವೆ. ಇವನ್ನು ಎಷ್ಟರ ಮಟ್ಟಿಗೆ ನಂಬಬಹುದೆಂಬುದು ಬೇರೆಯೇ ವಿಚಾರ.

ಇವರು ಉಲ್ಲೇಖಿಸುವ ಸ್ಥಳನಾಮಗಳ ಉಚ್ಛಾರಗಳಲ್ಲಿ ಅನುಮಾನಗಳು ಉಂಟಾಗಬಹುದು. ಪಶ್ಚಿಮದ ರಾಷ್ಟ್ರಗಳೊಡನೆ ದಕ್ಷಿಣ ಕನ್ನಡಕ್ಕೆ ಸ೦ಬ೦ಧವಿತ್ತು ಎ೦ಬುವುದರ ಬಗ್ಗೆ ಸ೦ಶಯ ಪಡಬೇಕಾಗಿಲ್ಲ.

ಗ್ರೀಕ್‌ ಪ್ರವಾಸಿ ಪ್ಲಿನಿಯ ಗ್ರ೦ಥಗಳಲ್ಲಿ ಮ೦ಗಳೂರಿನ ಬಗ್ಗೆ "ಮುಜೆರಿಸ್‌"ಎಂಬ ಉಲ್ಲೇಖ ಕಂಡು ಬರುತ್ತದೆ. ಹಾಗೆಯೇ ನೇತ್ರಾವತಿಯನ್ನು "ನೀತ್ತಿಯಸ್‌"ಎಂದು ಕರೆಯಲಾಗಿದೆ. ಪ್ಲಿನಿ ಹೆಸರಿಸುವ 'ಬೇರೇಸ್‌'ಎ೦ಬುವದು ಬಸರೂರು ಆಗಿರಬೇಕೆ೦ದು ವಿದ್ವಾ೦ಸರು ಅಭಿಪ್ರಾಯ ಪಡುತ್ತಾರೆ. ಮುಂದೆ ಕ್ರಿ.ಶ 1500 ಕಾಲದ ಟಾಲೆಮಿಯ ಗ್ರ೦ಥಗಳಲ್ಲಿ ಮ೦ಗಳೂರು 'ಮಹನೂರು' ಆಗಿ ಬಂದಿದೆ. ಆತ ಹೇಳುವ "ಓಲೈಖೋರಾ" ಆಳ್ವಖೇಡವಾಗಿದ್ದು ಆಳುಪರು ಆಳಿದ ಸ್ಥಳವೆ೦ಬ ಗ್ರಹಿಕೆಯಿದೆ.

ದಕ್ಷಿಣ ಕನ್ನಡವನ್ನು ಬ್ರಿಟಿಷರು 1799ರಲ್ಲಿ ವಶಪಡಿಸಿಕೊಳ್ಳುವ ಮೊದಲು ಆಳಿದ ಮನೆತನಗಳು ಸ್ಥೂಲವಾಗಿ ಹೀಗೆ ವಿ೦ಗಡಿಸಬಹುದು:

(1) ಆಳುಪರ ಕಾಲ (2) ವಿಜಯನಗರ ಅರಸರ ಆಳ್ವಿಕೆಯ ಕಾಲ (3) ಕೆಳದಿ ನಾಯಕರ ಕಾಲ (4) ಹೈದರಾಲಿ ಮತ್ತು ಟಿಪ್ಪುವಿನ ಕಾಲ

ಆಳುಪರ ಕಾಲ

ಆಳುಪರದು ನಾಗಮೂಲದ ಮನೆತನವೆ೦ದು ಗುರುತಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ವಿವಾದಗಳಿದ್ದು ಆಳುಪರೆ೦ದರೆ ಆಳ್ವಖೇಡದ ದೊರೆಗಳೆ೦ದು ಅಭಿಪ್ರಾಯವೂ ಇದೆ. ಆಳುಪರ ಮೂಲದ ಬಗ್ಗೆ ಈಗಲೂ ಸಾಕಷ್ಟು ಜಿಜ್ಞಾಸೆಗಳಿವೆ.

ಆಳುಪರು ಈ ಮೊದಲ ಶತಮಾನದಿ೦ದ ಈ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತ ಬ೦ದವರು. ಅದರ ಬಗ್ಗೆ ಖಚಿತ ಪುರಾವೆಗಳು ಇದುವರೆಗೂ ಸಿಕ್ಕಿಲ್ಲ. ಗ್ರೀಕ್‌ ಬರಹಗಾರರ ಗ್ರ೦ಥಗಳಿ೦ದ ನಮಗೆ ಆಳುಪರ ಕುರಿತು ಕೆಲವು ಸಾಕ್ಷಿಗಳು ದೊರೆಯುತ್ತವೆ. ಆಳುಪರು ಇಲ್ಲಿನ ಆಡಳಿತದ ಮೂಲ ಪುರುಷರೆ೦ದು ಆವರಲ್ಲಿ ಅನೇಕ ಪ೦ಗಡಗಳಿದ್ದ ವೆ೦ದು ಉಹಿಸಲಾಗುತ್ತಿದೆ.

ಕ್ರಿ. ಶ. ಆರನೇ ಶತಮಾನದವರೆಗೆ ಆಳುಪರ ಕುರಿತು ಹೇಳಿಕೊಳ್ಳಬಹುದಾದ ದಾಖಲೆಗಳೇನೂ ಸಿಗುವುದಿಲ್ಲ. ಆರನೆಯ ಶತಮಾನದ ವೇಳೆ ಆಳುಪರು ಪ್ರಾಬಲ್ಕಕ್ಕೆ ಬ೦ದಂತೆ ಕಾಣಿಸುತ್ತದೆ. ಕ್ರಿ.ಶ. 450ರ ಹಲ್ಮಿಡಿ ಶಾಸನವನ್ನು ಪರಿಸೀಲಿಸಿದ ಮೇಲೆ

ಆಳುಪರ ಕಾಲವನ್ನು ಕ್ರಿ.ಶ. ಎರಡನೆಯ ಶತಮಾನದವರೆಗೆ ಹಿ೦ದಕ್ಕೆ ಒಯ್ಯಬಹುದು. ಆಳುಪರು ಇಲ್ಲಿನ ಮೂಲನಿವಾಸಿಗಳಾಗಿರಬಹುದೇ ಎ೦ಬ ಅನುಮಾನವೂ ಹುಟ್ಟಿದ್ದಿದೆ.

ದಕ್ಷಿಣ ಕನ್ನಡದ ಆಳುಪ ಅರಸರು ಕರ್ನಾಟಕದ ಅರಸರೊಂದಿಗೆ ಬೇರೆ ಬೇರೆ ಕಾಲದಲ್ಲಿ ಮಾ೦ಡಲಿಕರಾಗಿ, ಸ್ನೇಹಿತರಾಗಿ ಹಾಗೆಯೇ ಬ೦ಡಾಯಗಾರರಾಗಿ ಆಳಿದ್ದಿದೆ. ಕ್ರಿ.ಶ. ಆರನೆಯ ಶತಮಾನದ ಹಲ್ಮಿಡಿ ಮತ್ತು ಗುಡ್ಡಾಪುರ ಶಾಸನಗಳಿ೦ದ ಕದ೦ಬರ ಸಾಮಂತರಾಗಿ ಆಳುಪರು ಆಡಳಿತ ನಡೆಸುತ್ತಿದ್ದರು ಎನ್ನುವ ಅಭಿಪ್ರಾಯ ಪಡಬಹುದು.

ಕ್ರಿ. ಶ. ಆರನೆಯ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕದಲ್ಲಿ ವಾತಾಪಿ ಚಾಳುಕ್ಯರ ಉದಯವಾಯಿತು. ಈ ಕಾಲದಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯ ಸ್ಪಷ್ಟ ಇತಿಹಾಸ ಸಿಗುತ್ತದೆ. ಆಕಾಲದಲ್ಲಿಯೂ ಚಾಳುಕ್ಯರ ಸಾಮ೦ತರಾಗಿ ಆಳುಪರು ಆಳುತ್ತಿದ್ದರು. ತಮ್ಮ ವೈರಿಗಳಾದ ಪಲ್ಲವರನ್ನು ಮತ್ತು ಪಾ೦ಡ್ಯರನ್ನು ಬಗ್ಗುಬಡಿಯಲು ಚಾಳುಕ್ಯರು ಆಳುಪರೊಡನೆ ಸ್ನೇಹದಿ೦ದ ಇದ್ದರು.

ಚಾಳುಕ್ಯರು ಬಲಹೀನರಾದಾಗ ರಾಷ್ಟ್ರಕೂಟರು ಪ್ರಬಲರಾದರು. ಮುಂದಿನ 20-25 ವರ್ಷಗಳು ಆಳುಪರ ಇತಿಹಾಸದಲ್ಲಿ ಅ೦ತಃಕಲಹವಿತ್ತು. ಇದರ ನ೦ತರ ಕರ್ನಾಟಕವನ್ನು ಆಳಿದ ಕಲ್ಯಾಣ ಚಾಳುಕ್ಯರು ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಸಾಮ್ರಾಜ್ಯದಲ್ಲಿರಿಸಿಕೊ೦ಡು ಆಳ್ವಖೇಡದ ಸಮೃದ್ಧಿಗೆ ಕಾರಣರಾದರೆ೦ದು ಬಿಲ್ಹಣನು ತನ್ನ ವಿಕ್ರಮಾದಿತ್ಯ ಚರಿತ್ರೆಯಲ್ಲಿ ತಿಳಿಸಿದ್ದಾನೆ.

ಮುಂದೆ ಹೊಯ್ಸಳರ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಪರಿವರ್ತನೆ ಉ೦ಟಾಯಿತು. ಹೊಯ್ಸಳರು ಬಾರಕೂರಿನಲ್ಲಿ ಸೈನಿಕ ಠಾಣೆಯನ್ನು ಸ್ಥಾಪಿಸಿದರು. ಇವರಿಗೂ ಆಳುಪ ದೊರೆಗಳಿಗೂ ನೆ೦ಟಸ್ತಿಕೆಯ ಸ೦ಬ೦ಧ ಬೆಳೆದು ಎರಡೂ ಮನೆತನಗಳೂ ಬಾರಕೂರಿನಿ೦ದ ಆಡಳಿತ ನಡೆಸಿದರು.

ವಿಜಯ ನಗರ
ಮುಂದೆ ವಿಜಯ ನಗರದ ಅರಸರ ಕಾಲವು ಪ್ರಾರಂಭವಾಯಿತು, ಇದು ಕ್ರಿ.ಶ.1336ರಲ್ಲಿ. ಸಮಗ್ರ ಕನ್ನಡ ಕರಾವಳಿಯು ವಿಜಯನಗರ ಸಾಮ್ರಾಜ್ಯದ ವಶವಾಯಿತು. ಹಾಗೆಯೆ ದಕ್ಷಿಣ ಕನ್ನಡವನ್ನು ಆಳಿದ ಬೇರೆ ಬೇರೆ ಮನೆತನಗಳಿವೆ, ಮುಖ್ಯವಾದ

ಅರಸುಮನೆತನಗಳೆ೦ದರೆ ಅಜಿಲರು, ಬ೦ಗರು, ಚೌಟರು, ಭೈರರಸ ಒಡೆಯರು, ಮೂಲರು, ಸಾಮಂತರು, ಪಡುಬಿದ್ರೆ ಬಲ್ಲಾಳರು, ಎರ್ಮಾಳ್‌ ಹೆಗ್ಗಡೆ, ಕಾಪು ಮಾರ್‍ಡ ಹೆಗ್ಗಡೆ, ವಿಠಲ ಎಂಬ ಅರಸುಮನೆತನಗಳು ಮುಖ್ಯವಾಗಿವೆ.

ಈ ಅರಸು ಮನೆತನಗಳು ಕೆಲವು ಗ್ರಾಮಗಳ ಒಡೆತನ ಹೊ೦ದಿದ ತು೦ಡರಸರ ಹಾಗೆ ದಕ್ಷಿಣ ಕನ್ನಡವನ್ನು ಆಳುತ್ತಿದ್ದುವು. ಇವರ ಕಾಲದಲ್ಲಿ ಅಜಿಲರು ವೇಣೂರನ್ನು, ಬ೦ಗರು ಬಂಗಾಡಿ, ಮಂಗಳೂರು ನ೦ದಾವರ, ಚೌಟರು ಪುತ್ತಿಗೆ ಉಲ್ಲಾಳ ಮೂಡಬಿದ್ರೆ, ಬೈರರಸ ಒಡೆಯರು ಕಳಸ, ಕೆರವಾಸೆ, ಕಾರ್ಕಳ, ಮೂಲರು ಬೈಲ೦ಗಡಿ, ಸಾವ೦ತರು ಸೀಮಂತೂರು, ಒಳಲಂಕೆ ಪಡುಪಣ೦ಬೂರು, ಪಡುಬಿದ್ರೆ, ಎರ್ಮಾಳು ಹೆಗ್ಗಡೆಯವರು ಎರ್ಮಾಳ, ಕಾಪು ಹೆಗ್ಗಡೆ ಕಾಪು, ತೊಳಹರರು ಸೂರಾಲ. ವಿಠಲ ಮನೆತನ ವಿಟ್ಲದ ಮೂಲಕ ತಮ್ಮ ರಾಜಧಾನಿಗಳನ್ನು ನಿರ್ಮಿಸಿಕೊ೦ಡು ರಾಜ್ಯ ವಿಸ್ತಾರ ಮಾಡಿಕೊ೦ಡು ಆಳಿದರು. ವಿಜಯನಗರದ ಆರಸರ ಪ್ರತಿನಿಧಿಗಳು ಬಾರಕೂರು ಮತ್ತು ಮ೦ಗಳೂರುಗಳನ್ನು ಮುಖ್ಯಕೇ೦ದ್ರವಾಗಿಟ್ಟುಕೊ೦ಡು ಆಳತೊಡಗಿದರು. ವಿಜಯನಗರದ ಅರಸರಿಗೆ ಹೊರದೇಶದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮಂಗಳೂರು ಮತ್ತು ಬಾರಕೂರುಗಳು ಪ್ರಮುಖ ಬ೦ದರುಗಳಾಗಿದ್ದುವು.

ಹದಿಮೂರನೇ ಶತಮಾನದಲ್ಲಿ ಆಫ್ರಿಕನ್‌ ಯಾತ್ರಿ ಇಬ್ನಬಟೂಟ ಸದಾಶಿವಗಡದಿ೦ದ ಕಲ್ಲಿಕೋಟೆಯವರೆಗೆ ಮಾಡಿದ ತನ್ನ ಯಾತ್ರೆಯಲ್ಲಿ ಅನೇಕ ಅ೦ಶಗಳನ್ನು ಹೇಳಿದ್ದಾನೆ. ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅನೇಕ ತುಂಡರಸರಿಂದ ಆಳಲ್ಪಡುತ್ತಿತ್ತೆಂದು ಅವರೆಲ್ಲ ಬಾರಕೂರಿನಲ್ಲಿ ವಾಸಿಸುತ್ತಿದ್ದ ವಿಜಯನಗರದ ಪ್ರತಿನಿಧಿ 'ಓಡೆಯರ್‌'ಗೆ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರೆ೦ದು ತಿಳಿದು ಬರುತ್ತದೆ.

1342ರ ವೇಳೆ ಇಬ್ನಬಟೂಟ ದಕ್ಷಿಣ ಕನ್ನಡವನ್ನು ಸಂದರ್ಶಿಸಿದ್ದನೆಂದು ತಿಳಿದು ಬರುತ್ತದೆ. ಅವನು ಕಾರವಾರದಿ೦ದ ಕಲ್ಲಿಕೋಟೆಯವರೆಗೆ ಅನೇಕ ಪ್ರಾ೦ತ್ಯಗಳನ್ನು ಸಂದರ್ಶಿಸಿದ್ದನೆಂದು ತಿಳಿದು ಬರುತ್ತದೆ. ಅವನು ಬಾರಕೂರನ್ನು ಪಾಕನೂರು ಎಂದೂ, ಮಂಗಳೂರನ್ನು 'ಮಂಜರೂರು' ಎ೦ದು ಬರೆದದ್ದು ತಿಳಿದುಬರುತ್ತದೆ. ಆಗಿನ ಕಾಲದಲ್ಲಿ ದಾರಿಹೋಕರಿಗೆ ಆಶ್ರಯವಾಗಿ ಅರ್ಧ ಮೈಲಿಗೊ೦ದು 'ಅರವಟ್ಟಿಗೆ'ಗಳಿದ್ದವೆ೦ದೂ ಹಾಗೆಯೇ ಅದರ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬನನ್ನು ಮೇಲ್ವಿಚಾರಣೆಗೆ ಇಡುತ್ತಿದ್ದರೆ೦ದು ಆತ ಬರೆದಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಸಮೃದ್ಧ ನಾಡೆ೦ದು ವರ್ಣಿಸಿದ್ದಾನೆ. ಕೃಷ್ಣದೇವರಾಯನ ಕಾಲದಲ್ಲಿ ದಕ್ಷಿಣ ಕನ್ನಡವನ್ನು ನಾಲ್ವರು ರಾಜಪ್ರತಿನಿಧಿಗಳು ಆಳುತ್ತಿದ್ದರು. ಅದು ಹದಿನೈದನೆಯ ಶತಮಾನದ ಕಾಲ. ಕೃಷ್ಣದೇವರಾಯನು ಈ ನಾಲ್ವರು ರಾಜಪ್ರತಿನಿಧಿಗಳು ಅವನಿಗೆ ವಿಧೇಯರಾಗಿದ್ದುದರಿ೦ದ ಮ೦ಗಳೂರಿಗೆ ಬೇರೆಯೇ ಒಬ್ಬ ಪ್ರತಿನಿಧಿಯನ್ನು ನೇಮಿಸಲಿಲ್ಲ. ಅಲ್ಲದೆ ಬಾರಕೂರು, ಮ೦ಗಳೂರು, ಚಂದ್ರಗುತ್ತಿ, ರಾಜ್ಯಗಳಿಗೆ ವಿಶೇಷ ಪ್ರತಿನಿಧಿಯಾಗಿ ಕೆಳದಿಯ ಸದಾಶಿವ ನಾಯಕನಿದ್ದ. ಇದೇ ಕಾಲಕ್ಕೆ ಈ ನಾಡಿಗೆ ಪೋರ್ಚುಗೀಸರ ಆಗಮನವಾಯಿತು. 1498ರ ವೇಳೆ ವಾಸ್ಕೋಡಗಾಮ ಉಡುಪಿಯ ಬಳಿಯ ಸೈ೦ಟ್‌ ಮೇರೀಸ್‌ ದ್ವೀಪಕ್ಕೆ ತಲುಪಿದ್ದ ಉಲ್ಲೇಖಗಳಿವೆ. ಹದಿನೈದನೆಯ ಶತಮಾನದ ಆದಿ ಭಾಗದಲ್ಲಿ ವಿಜಯನಗರದ ಅರಸರು ಪೋರ್ಚುಗೀಸರಿಗೆ ಬೇಕಾದಲ್ಲಿ ಬ೦ದರನ್ನು ನಿರ್ಮಿಸುವ ಹಕ್ಕನ್ನು ಕೊಟ್ಟಿದ್ದರೆ೦ದು ತಿಳಿದು ಬರುತ್ತದೆ.

ಪೋರ್ಚುಗೀಸ್‌ ಯಾತ್ರಿಕ ಬಾರ್ಬೋಸಾ ಕರಾವಳಿ ಜಿಲ್ಲೆಗಳನ್ನು ಸ೦ದರ್ಶಿಸಿದ್ದ. ಅವನು ದಕ್ಷಿಣ ಕನ್ನಡವನ್ನು 'ತುಳುನಾಟ್‌' ಎ೦ದು ಕರೆಯುವುದನ್ನು ಗಮನಿಸಬೇಕು. ಆಗ ಬಸರೂರು ಅತ್ಯಂತ ಪ್ರಮುಖ ವಹಿವಾಟಿನ ಬ೦ದರಾಗಿತ್ತೆ೦ದು ತಿಳಿದು ಬರುತ್ತದೆ. ಆ ಕಾಲಕ್ಕೆ ಮ೦ಗಳೂರು ಅತ್ಯಂತ ದೂಡ್ಡ ನಗರವಾಗಿತ್ತೆ೦ದು ಬರ್ಬೋಸಾ ಬರೆಯುತ್ತಾನೆ.

ಪೋರ್ಚುಗೀಸರ ಜತೆ ವಿಜಯನಗರದ ಕೃಷ್ಣದೇವರಾಯನಿಗೆ ಸೌಹಾರ್ದ ಸ೦ಬ೦ಧವಿತ್ತೆ೦ದು ತಿಳಿದು ಬರುತ್ತದೆ. ಪೋರ್ಚುಗೀಸರು ಕ್ರಮೇಣ ಕರಾವಳಿಯಲ್ಲಿ ತಮ್ಮ ಅಧಿಪತ್ಯವನ್ನು ಲಪಡಿಸಿಕೊಳ್ಳುತ್ತಿದ್ದರು. ಅರಬರ ಪ್ರಭಾವ ಕ್ರಮೇಣ ಕಡಿಮೆಯಾಗುತ್ತ ಬರುತಿತ್ತು. 1526ರಲ್ಲಿ ಮ೦ಗಳೂರಿನ ಸ್ಥಳೀಯರೊಂದಿಗೆ ಭೀಕರವಾದ ಕದನ ನಡೆದು ಪೋರ್ಚುಗೀಸರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದು ಮುಂದೆ ತಿಳಿದು ಬರುತ್ತದೆ.

ಇ೦ಥ ಪೋರ್ಚುಗೀಸರ ಜತೆ ಸಖ್ಯವೇ ಮೇಲೆ೦ದು ಆಗ ವಿಜಯನಗರದ ದೊರೆ ಮನಗಂಡು 1547ರಲ್ಲಿ ಅವರ ಜತೆ ಒಪ್ಪ೦ದವನ್ನು ಮಾಡಿಕೊಂಡ. ಆದ್ದರಿ೦ದ ಪೋರ್ಚುಗೀಸರ ಕೈಗೆ ವಿದೇಶಿ ವ್ಮಾಪಾರವು ಸ೦ಪೂರ್ಣ ಒಪ್ಪಿಸಲ್ಪಟ್ಟಿತು. ಆದರೆ ಸ್ಥಳೀಯ ಅಧಿಕಾರಿಗಳು ಈ ರೀತಿಯ ಆಡಳಿತ ಹಸ್ತಾ೦ತರವನ್ನು ವಿರೋಧಿಸಿದರು. ಈ ಕಾರಣದಿ೦ದಲೇ ಪದೇ ಪದೇ ಪೋರ್ಚುಗೀಸರ ಜತೆ ಕದನಗಳು ಏರ್ಪಟ್ಟವು. ಇದೇ ಸ೦ದರ್ಭದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಳು. ಅವಳು ಸ್ಹಳೀಯ ರಾಜರೊಡನೆ ಸೇರಿ ಪೋರ್ಚುಗೀಸರ ಆಡಳಿತ ವಿರುದ್ದ ಸಮರವನ್ನು ಸಾರಿದಳು. ಉಳ್ಳಾಲದ ರಾಣಿಯ ಹೋರಾಟ ಈ ದಿಸೆಯಲ್ಲಿ ಪ್ರಥಮ ಸ್ವಾತ೦ತ್ರ್ಯ ಹೋರಾಟವಾಗಿ ಕಾಣಿಸುತ್ತದೆ. ಅಬ್ಬಕ್ಕ ರಾಣಿ ಈ ಪ್ರದೇಶದ ಸ್ಟಾತ೦ತ್ರ್ಯಾಕಾ೦ಕ್ಷೆಯ ಸ೦ಕೇತವಾಗಿ ಗೌರವಿಸಲ್ಪಡುತ್ತಾಳೆ.

ಕೆಳದಿಯ ಆಳ್ವಿಕೆ

ಮುಂದೆ ಹದಿನಾರನೆಯ ಶತಮಾನದಲ್ಲಿ ಕೆಳದಿಯನಾಯಕರ ಅಧಿಪತ್ಕ ಆಡಳಿತಕ್ಕೆ ಬ೦ತು. ಇವರಲ್ಲಿ ಸದಾಶಿವ ನಾಯಕನು ಬಾರಕೂರು ಮತ್ತು ಮ೦ಗಳೂರಿನ ಅಧಿಪತ್ಯವನ್ನು ಪಡೆದಿದ್ದನೆ೦ದು ತಿಳಿದು ಬರುತ್ತದೆ. ಅವನು ವಿಜಯನಗರದ ದೊರೆ ಸದಾಶಿವರಾಯನಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದನು.

ಹದಿನಾರನೆಯ ಶತಮಾನದಲ್ಲಿ ಇಟಾಲಿಯನ್‌ ಯಾತ್ರಿಕ ಡಲ್ಲಾವಲ್ಲಾ ಬರೆದಿಟ್ಟ ಅನುಭವಗಳಿ೦ದ ಪಶ್ಚಿಮ ಕರಾವಳಿಯ ಅನೇಕ ಅ೦ಶಗಳು ತಿಳಿದು ಬರುತ್ತದೆ. ಅವನು ಇಕ್ಕೇರಿಯಿ೦ದ ಗೋವಾದವರೆಗೆ ಸ೦ಚರಿಸಿದ್ದ. ಆ ಕಾಲದಲ್ಲಿ ವೆ೦ಕಟಪ್ಪನಾಯಕ, ವೀರಭದ್ರನಾಯಕ ಹಾಗೂ ಶಿವಪ್ಪನಾಯಕರ ಆಡಳಿತದ ದಾಖಲೆಗಳು ನಮಗೆ ದೊರೆಯುತ್ತವೆ.

ಶಿವಪ್ಪನಾಯಕನ ಕಾಲದಲ್ಲಿ ಪೋರ್ಚುಗೀಸರಿಗೂ ಶಿವಪ್ಪನಾಯಕನಿಗೂ ಸ೦ಬ೦ಧಗಳಲ್ಲಿ ಸಾಮರಸ್ಯವಿರಲಿಲ್ಲ. ಆದರೆ ಪೋರ್ಚುಗೀಸರನ್ನು ಬಗ್ಗು ಬಡಿಯುವುದರಲ್ಲಿ ಶಿವಪ್ಪನಾಯಕ ಯಶಸ್ವಿಯಾಗಿದ್ದನೆ೦ದು ತಿಳಿದು ಬರುತ್ತದೆ.

ಹದಿನಾರನೆಯ ಶತಮಾನದ ಅಂತ್ಯದ ವೇಳೆ ಮತ್ತೆ ಪೋರ್ಚುಗೀಸರನ್ನು ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊ೦ಡ೦ತೆ ಕಾಣಿಸುತ್ತದೆ, ಆಗಿನ ದೊರೆ ಸೋಮಶೇಖರ ಜೊತೆ ಅವರು ಒಪ್ಪ೦ದ ಮಾಡಿಕೊಂಡಂತೆ ಕಾಣಿಸುತ್ತದೆ. ಆ ಒಪ್ಪ೦ದದಿಂದಾಗಿ ಹೊನ್ನಾವರ. ಬಸರೂರು ಮತ್ತು ಮ೦ಗಳೂರುಗಳಲ್ಲಿ ಪೋರ್ಚುಗೀಸರಿಗೆ ವ್ಯವಹಾರದ ಅವಕಾಶಗಳನ್ನು ನೀಡಲಾಯಿತು.

1763ರಲ್ಲಿ ಹೈದರ್‌ ಅಲಿಯು ಕೆಳದಿಯನ್ನು ವಶಪಡಿಸಿಕೊಂಡನು. ಆದುದರಿಂದ ದಕ್ಷಿಣ ಕನ್ನಡ ಕರಾವಳಿಯೂ ಅವನ ಕೈವಶವಾಯಿತು. ಆತ ಪೋರ್ಚುಗೀಸರೊಡನೆ

ಸೌಹಾರ್ದ ಸ೦ಬ೦ಧ ಬೆಳೆಸಿಕೊ೦ಡು ಮ೦ಗಳೂರಿನಲ್ಲಿ ಅವರ ವ್ಶಾಪಾರ ಕೇಂದ್ರವನ್ನು ಮೊದಲಿನಂತೆ ಇಟ್ಟುಕೊಳ್ಳಲು ಒಪ್ಪಿಗೆಯಿತ್ತನು.

ಮುಂದೆ ಬ್ರಿಟಿಷರು ಹೈದರ್‌ ಅಲಿಗೂ ಜಗಳವಾಗಿ ಪೋರ್ಚುಗೀಸರ ವ್ಯವಹಾರದಲ್ಲಿ ಮತ್ತೆ ತೊಡಕು ಕ೦ಡು ಬ೦ತು. ಪೋರ್ಚುಗೀಸರು ತಮ್ಮ ವ್ಶಾಪಾರ ವಹಿವಾಟು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ಮುಂದೆ ಹದಿನೆ೦ಟನೆಯ ಶತಮಾನದಲ್ಲಿ ಪೋರ್ಚುಗೀಸರು ಬಹುವಾಗಿ ತಮ್ಮ ದಕ್ಷಿಣ ಕನ್ನಡ ಸ೦ಪರ್ಕವನ್ನು ಕಳೆದುಕೊ೦ಡತೆ ಆಯಿತು.

ಸುಮಾರು 300 ವರ್ಷಗಳ ಕಾಲದಲ್ಲಿ ಪೋರ್ಚುಗೀಸರು ದಕ್ಷಿಣ ಕನ್ನಡದ ಕರಾವಳಿಯ ವ್ಕಾಪಾರಿಗಳೊಡನೆ ನಿಕಟ ಸ೦ಬ೦ಧ ಬೆಳೆಸಿಕೊ೦ಡು ಬ೦ದರು.

ಹದಿನೈದನೆಯ ಶತಮಾನದಿ೦ದ ಪೋರ್ಚುಗೀಸರು ಕ್ರೈಸ್ತಧರ್ಮ ಪ್ರಸಾರವನ್ನು ಮಾಡತೊಡಗಿದರು. ಈ ಜಿಲ್ಲೆಯ ಕ್ಕಾಥೊಲಿಕ್‌ ಕ್ರೈಸ್ತರು ಗೋವೆಯಿಂದ ಬ೦ದವರು, ಅವರ ಸ೦ತತಿಯವರು. ಯಾಕೆಂದರೆ ಇಲ್ಲಿಯ ನಾಡಾಡಿಗಳನ್ನು ಮತಾ೦ತರಿಸುವ ಯತ್ನದಲ್ಲಿ ಪೋರ್ಚುಗೀಸರು ಅಷ್ಟೇನು ಯಶಸ್ಸು ಪಡೆಯಲಿಲ್ಲ.

ಕನ್ನಡ, ತುಳು, ಕೊ೦ಕಣಿ ಭಾಷೆಗಳ ಮೇಲೆ ಫೋರ್ಚುಗೀಸರ ಪ್ರಭಾವ ಸಾಕಷ್ಟು ಇದೆಯೆಂದು ವಿದ್ವಾಂಸರು ಆಭಿಪ್ರಾಯ ಪಡುತ್ತಾರೆ.

ಬ್ರಿಟಿಷ್‌ ಅಧಿಪತ್ಯ

ಕನ್ನಡ ಜಿಲ್ಲೆಯು 1779ರಲ್ಲಿ ಇಂಗ್ಲಿಷರ ಅಧಿಪತ್ಯಕ್ಕೆ ಒಳಗಾಗುವ ಸಂದರ್ಭ ಒದಗಿತು. ಕ೦ಪೆನಿ ಸರಕಾರದ ಆಡಳಿತ ಸ್ಥಳೀಯರಿಗೆ ಅನೇಕ ಸ೦ಕಟಗಳನ್ನು ತ೦ದೊಡ್ಡಿತು. ವ್ಯಾವಹಾರಿಕ ವಸ್ತುಗಳ ಮೇಲಿನ ಸುಂಕ ಹೆಚ್ಚಾಯಿತು, ಇದರಿ೦ದ ವಹಿವಾಟು ಸ್ಥಗಿತಗೂಂಡಿತು. ರೈತರ ಬದುಕು ದುಸ್ತರವಾಯಿತು. ರೈತರು ಹಣದ ರೂಪದಲ್ಲಿ ಕ೦ದಾಯ ಸಲ್ಲಿಸುವುದು ಕಷ್ಟವಾಯಿತು.

ಇದೇ ಕಾಲಕ್ಕೆ ಕೊಡಗಿನಲ್ಲಿ ಬ್ರಿಟಿಷ ಆಳ್ವಿಕೆ ಧೃಡವಾಗಿ ಬೇರು ಬಿಟ್ಟಿತ್ತು. ಹಿ೦ದಿನ ರಾಜನ ದಿವಾನರಾದ ಬ್ರಾಹ್ಮಣರ ಲಕ್ಷ್ಮೀನಾರಾಯಣಯ್ಯ ಮತ್ತು ಅಪ್ಪಾರಂಡ ಬೋಪು ಈಗಲು ದಿವಾನರಾಗಿ ಮುಂದುವರಿದಿದ್ದರು. ಮೊದಲು ಬ್ರಿಟಿಷರಿಗೆ ಇವರಿಬ್ಬರ ವಿಶ್ವಾಸಗಳಿಸ ಬೇಕಾಗಿತ್ತು. ಅದಕ್ಕಾಗಿ ದಿವಾನರ ಸಂಬಳವನ್ನು ಹೆಚ್ಚಿಸಲಾಯಿತು.

1836ರ ವೇಳೆ ಚಿಕ್ಕವೀರ ರಾಜನ ದೊಡ್ಡಪ್ಪನ ಪ್ರಥಮ ಪುತ್ರ ತನ್ನ ಅರಸೊತ್ತಿಗೆಯನ್ನು ತನಗೆ ಮರಳಿಸುವಂತೆ ಕೇಳಿದಾಗ ದಿವಾನರ ಬೆ೦ಬಲವಿದ್ದ ಬ್ರಿಟಿಷರ ಸರಕಾರ ಅವನನ್ನು ಸೆರೆಯಲ್ಲಿಟ್ಟಿತು.

ಈ ಘಟನೆಗೂ ಕನ್ನಡ ಜಿಲ್ಲೆಗೂ ಸ೦ಂಬಂಧವಿದೆಯೆ೦ದು ಆ ವಿಚಾರವನ್ನು ಪ್ರಸ್ತಾಪಿಸಲಾಗುತ್ತಿದೆ. ಯಾಕೆ೦ದರೆ ಆಕಾಲದಲ್ಲಿ ಬ್ರಿಟಿಷರನ್ನು ಒದ್ದೋಡಿಸಬೇಕೆ೦ಬ ಗುಪ್ತ ಸ೦ಘಟನೆ ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ನಡೆಯುತ್ತಲೇ ಇತ್ತು. ಈ ಕೆಲಸದಲ್ಲಿ ದಿವಾನರೂ ಇತರ ಆಢ್ಯರೂ ಸೇರಿಕೊ೦ಡಿದ್ದರು. 1845ರ ವರೆಗೆ ದಕ್ಷಿಣ ಕನ್ನಡದ ಧರ್ಮಾಧಿಕಾರಿಗಳಾಗಿ ಸ್ಥಾನಿಕ ಬ್ರಾಹ್ಮಣರು ನಿಯುಕ್ತರಾಗಿ ಕೊ೦ಡಿರುತ್ತಿದ್ದರು. ದಿವಾನ ಲಕ್ಷ್ಮೀನಾರಾಯಣಯ್ಕನ ಊರು ಸುಳ್ಳದ ಬಳಿ ಅಜ್ಜಾವರವಾಗಿತ್ತು. ಕೊಡಗಿನ ಬ್ರಿಟಿಷರ ರಾಜಕೀಯದ ವಿರುದ್ದ ಬ೦ಡೇಳುವ ಪ್ರಸ೦ಗದಲ್ಲಿ ಕಲ್ಯಾಣಸ್ವಾಮಿ ಮತ್ತು ಇತರ ಮುಖ೦ಡರು ತೊಡಗಿಕೊಂಡು ಹದಿನೆ೦ಟನೆಯ ಶತಮಾನದಲ್ಲಿ ಬ್ರಿಟಿಷರ ವಿರುದ್ದ ಪ್ರಥಮ ಬ೦ಡಾಯ ದಕ್ಷಿಣ ಕನ್ನಡದಲ್ಲಿ ನಡೆಯಿತು. ಇದೇ 'ಕಲ್ಯಾಣಪ್ಪನ ಕಾಟಕಾಯ' ಎ೦ದು ಪ್ರಸಿದ್ಧವಾಗಿದೆ.

1834ರ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಸೆಲ್‌ ಮಿಶನ್‌ನವರು ಪ್ರಚಾರ ಶಿಕ್ಷಣ, ಮುದ್ರಣ, ಸಮಾಜಸೇವೆಗಳ ಒಲವು ದಕ್ಷಿಣ ಕನ್ನಡಕ್ಕೆ ತನ್ನತನವನ್ನು ಗುರುತಿಸಿಕೊಳ್ಳಲು ಸಹಾಯ ಮಾಡಿತು. ಟಿಪ್ಪುವಿನ ಕಾಲದಲ್ಲಿ ಆಘಾತಗೊಂಡಿದ್ದ ಜಿಲ್ಲೆಯ ಕ್ಕಾಥೋಲಿಕ್‌ ಸಮಾಜಕ್ಕೆ ಪ್ರೊಟೆಸ್ಟೆ೦ಟರ ಚಟುವಟಿಕೆ ಉತ್ಸಾಹ ತಂದಿತ್ತು. ಪ್ರಾಶ್ಚಾತ್ಯ ಶಿಕ್ಷಣದ ವ್ಯಾಪ್ತಿ, ಕ್ರೈಸ್ತ ಮಿಶನರಿಗಳ ಚಟುವಟಿಕೆ ದಕ್ಷಿಣ ಕನ್ನಡಕ್ಕೆ ಪ್ರೇರಣೆಯನ್ನು ಇತ್ತವು. 1870ರಲ್ಲಿ ಮಂಗಳೂರಲ್ಲಿ ಬ್ರಹ್ಮಸಮಾಜ ಚಟುವಟಿಕೆ ಆರ೦ಭಗೊಂಡಿತು. ಹತ್ತೊ೦ಬತ್ತನೇ ಶತಮಾನದ ಹೊತ್ತಿಗೆ ಥಿಯೋಸೊಫಿಕಲ್‌ ಸೊಸೈಟಿ ಉದಯವಾಗಿ 1901ರ ವೇಳೆಗೆ ಆದು ಕೇಂದ್ರ ಸ೦ಸ್ಥೆಯಿ೦ದ ಮಾನ್ಯತೆ ಪಡೆಯಿತು. 1919ರಲ್ಲಿ ಆರ್ಯಸಮಾಜದ ಚಟುವಟಿಕೆಗಳು ಆರಂಭಗೊಂವು. ಈ ಎಲ್ಲಾ ಚಟುವಟಿಕೆಗಳು ರಾಷ್ಟ್ರೀಯ ಜಾಗೃತಿಗೆ ಹಿನ್ನೆಲೆ ಒದಗಿಸಿದವು.

ಆದರೆ ಈ ಶತಮಾನದ ಆರ೦ಭದ ಬ೦ಗಾಳದಲ್ಲಿನ ಚಟುವಟಿಕೆಗಳು ದಕ್ಷಿಣ ಕನ್ನಡಕ್ಕೆ ಅ೦ತಹ ಪ್ರೇರಣೆಯನ್ನು ನೀಡಲಿಲ್ಲ. ಇಲ್ಲಿಯ ರಾಷ್ಟ್ರೀಯ ಜಾಗೃತಿಯ ಜನಕರಾದ ಕಾರ್ನಾಡ ಸದಾಶಿವರಾಯರಿಂದ ಮಂಗಳೂರಿನಲ್ಲಿ ಹೋ೦ ರೂಲ್‌

ಚಳವಳಿಯ ಚಟುವಟಿಕೆಗಳು ಆರ೦ಭವಾದವು. ಕಾರ್ನಾಡರು ಬ್ರಹ್ಮ ಸಮಾಜದ ಕನಸಿನಲ್ಲಿದ್ದವರು. ಆಧುನಿಕ ಸಮಾಜದ ನಿರ್ಮಾಣಕ್ಕೆ ಆವರು ಪ್ರಯತ್ನಿಸಿದ್ದವರು.

ಉಡುಪಿಯಲ್ಲಿ 1921ರ ಎಪ್ರಿಲ್‌ ತಿ೦ಗಳಲ್ಲಿ ಜಲಿಯನ್‌ ವಾಲಾಬಾಗ್‌ ದಿನಾಚರಣೆಯ ಆರ೦ಭದೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸ್ಥಾಪನೆಗೊಂಡಿತು. 1920ರಲ್ಲಿ ಕಾರ್ನಾಡರು ಕಲ್ಕತ್ತದ ವಿಶೇಷ ಅಧಿವೇಶನಕ್ಕೆ ಹೋಗಿ ಬ೦ದರು. 1922ರಲ್ಲಿ ಎರಡನೆಯ ಕರ್ನಾಟಕ ಪ್ರಾ೦ತೀಯ ರಾಜಕೀಯ ಪರಿಷತ್ತು ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 1930ರ ಕಾನೂನು ಭ೦ಗ ಚಳುವಳಿ ಕಾಲಕ್ಕೆ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಅನೇಕ ಚಟುವಟಿಕೆಗಳು ನಡೆದವು. ಉಪ್ಪಿನ ಸತ್ಕಾಗ್ರದಲ್ಲಿ ನೂರಾರು ಜನರು ಪಾಲ್ಗೊಂಡರು. ಅದೇ ಕಾಲದಲ್ಲಿ ಇಸವಿ 1930-31 ರಲ್ಲಿ ಗಾಂಧಿ — ಇರ್ವಿನ್‌ ಒಪ್ಪ೦ದದ ತನಕ ಜಿಲ್ಲೆಯಲ್ಲಿ ನೂರಾರು ಜನ ಸೆರೆಮನೆ ವಾಸ ಅನುಭವಿಸಿದರು.

ಇದೇ ರೀತಿಯಲ್ಲಿ ಆರಂಭವಾದ ಹೋರಾಟವು ಮುಂದೆ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿಯೂ ಉತ್ಸಾಹದಿ೦ದ ಬೆಳೆಯಿತು. ಭಾರತ ಸ್ವತಂತ್ರವಾಗುವ ವರೆಗೂ ದಕ್ಷಿಣ ಕನ್ನಡ ಜಿಲ್ಲೆ ಕೂಡಾ ಸ್ವಾತ೦ತ್ರ್ಯ ಸಮರದ ಚಟುವಟಿಕೆಗಳಲ್ಲಿ ಅನೇಕ ನಾಯಕರಿ೦ದ ಮಾರ್ಗದರ್ಶನ ಪಡೆಯಿತು.

ಈವರೆಗೆ ದಕ್ಷಿಣ ಕನ್ನಡ ಐತಿಹಾಸಿಕ ನೋಟವೊ೦ದರಲ್ಲಿ ದೊರೆಗಳ ಕಾಲದಿ೦ದ ಪ್ರಜಾಪ್ರಭುತ್ವ ದೊರಕುವವರೆಗಿನ ಹೋರಾಟವೊಂದನ್ನು ನಾವು ಗಮನಿಸಿದೆವು. ಒಂದು ದೃಷ್ಟಿಯಿ೦ದ ದಕ್ಷಿಣ ಕನ್ನಡ ಈ ಶತಮಾನದ ಆದಿಯಿ೦ದಲೇ ನೂರಾರು ಅನ್ಯಪ್ರದೇಶಗಳ ಜನರ ಸ೦ಬ೦ಧದಿಂದ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿದೆ. ಆ ದೃಷ್ಟಿಯಲ್ಲಿ ದಕ್ಷಿಣ ಕನ್ನಡಕ್ಕೆ ತನ್ನನ್ನು ಇತರ ಪ್ರದೇಶಗಳ ಜನರ ಪ್ರಭಾವಕ್ಕೆ ಒಡ್ಡಿಕೊಳ್ಳುವುದು ತನ್ನ ಪ್ರಭಾವವನ್ನು ಇತರರ ಮೇಲೆ ಬೀರುವ ಒ೦ದು ವಿಶೇಷವಾದ ಕೊಳು-ಕೊಡುಗೆಯ ಸಂಸ್ಕೃತಿಯ ಆಭ್ಯಾಸವಾಗಿದೆ.

ದಕ್ಷಿಣ ಕನ್ನಡದ ಪ್ರಾಗೈತಿಹಾಸಿಕ ಶಿಲಾಸ೦ಸ್ಕೃತಿ ಮತ್ತು ಇತಿಹಾಸ ಪೂರ್ವ ಕಾಲದ ದಾಖಲೆಗಳಿ೦ದ ಇನ್ನೂ ಅನೇಕ ಅಂಶಗಳು ಪ್ರಕಟಗೊಳ್ಳುತ್ತವೆ. ಅದರಲ್ಲಿ ಸ್ಪಷ್ಟವಾಗುವುದೆ೦ದರೆ ದಕ್ಷಿಣ ಕನ್ನಡದಲ್ಲಿ ವಾಸವಾಗಿರುವ ಎಲ್ಲಾ ಜನಾ೦ಗಗಳು ಬೇರೆ ಬೇರೆ ಕಡೆಯಿ೦ದ ವಲಸೆಬ೦ದವರೆಂಬುದು ತಿಳಿಯುತ್ತದೆ. ಈ ಜಿಲ್ಲೆಯನ್ನು

ಸತತ ಏಳು ಶತಮಾನಗಳ ಕಾಲ ಆಳಿದ ಆಳುಪರು ಹೊರ ಪ್ರಾ೦ತ್ಯಗಳ ರಾಜರ ಪ್ರಭಾವವನ್ನು ಅ೦ಗಿಸಿಕೊ೦ಡವರು. ಅದರಿಂದಾಗಿ ದಕ್ಷಿಣ ಕನ್ನಡದಲ್ಲಿ ಒ೦ದು ಸಾ೦ಸ್ಕೃತಿಕ ಸೌಹಾರ್ದತೆ ಮೊದಲಿನಿ೦ದ ಬೆಳೆದು ಬಂದಿದೆ.

ಜನ ಜೀವನ

ಕೆಲವು ಪದ್ಧತಿಗಳು

ಇದುವರೆಗೆ ಸ್ಥೂಲವಾಗಿ ದಕ್ಷಿಣ ಕನ್ನಡದ ಇತಿಹಾಸ ಮತ್ತು ಭೌಗೋಳಿಕ ರೂಪರೇಷೆಗಳನ್ನು ನೋಡಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಮುಖ್ಯವಾಹಿನಿಯಲ್ಲಿ ಆರ್ಯ ಮತ್ತು ದ್ರಾವಿಡ ಜನ ಜೀವನ ಪದ್ದತಿಯನ್ನು ಕಾಣುತ್ತೇವೆ. ಆರ್ಯರದು ಪುರುಷ ಪ್ರಧಾನ ಕುಟು೦ಬ ವ್ಯವಸ್ಥೆಯಾದರೆ ದ್ರಾವಿಡರದು ಮಾತೃಪ್ರಧಾನ ಕುಟು೦ಬ ವ್ಯವಸ್ಥೆ.

ನಮ್ಮ ದಕ್ಷಿಣ ಕನ್ನಡದ ಸ೦ಸ್ಮೃತಿಯು ಎರಡೂ ಮೂಲ ಧಾರೆಗಳಿ೦ದ ಸ೦ಮಿಳಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕರು ಮಾತೃಪ್ರಧಾನವಾದ ಅಳಿಯ ಸ೦ತಾನವನ್ನು ಮು೦ದುವರಿಸಿಕೊ೦ಡು ಬಂದಿದ್ದಾರೆ. ಅಳಿಯ ಸ೦ತಾನ ಮತ್ತು ಮಕ್ಕಳ ಸ೦ತಾನದ ಅಧಿಕಾರದ ಹಕ್ಕು ಎರಡೂ ಅನುವ೦ಶೀಯವಾಗಿರುತ್ತದೆ.

ಅಳಿಯ ಸ೦ತಾನದ ಸ್ತ್ರೀ ಹೆಚ್ಚು ಹಕ್ಕು ಪಡೆದುಕೊಂಡಿರುತ್ತಾಳೆ. ತಾಯಿಯಿ೦ದ ಮಗಳಿಗೆ ನೇರಕವಾಗಿ ಹಕ್ಕು ದತ್ತವಾಗುವುದು, ಪಿತೃಪ್ರಧಾನ ಕುಟು೦ಬದಲ್ಲಿ ಮಕ್ಕಳಿಗೆ ಹಕ್ಕು ತ೦ದೆಯಿ೦ದ ಅನುವ೦ಶೀಯವಾಗಿ ಬರುತ್ತದೆ. ಇಲ್ಲಿ ಸ್ತ್ರೀಯರಿಗೆ ಅಧಿಕಾರವಿರುವುದಿಲ್ಲ. ಸ್ತ್ರೀಪ್ರಧಾನ ಅಧಿಕಾರದ ಪದ್ಧತಿ ಜಗತ್ತಿನ ನಾನಾ ಕಡೆ ಆಚರಣೆಯಲ್ಲಿದೆ. ಜಗತ್ತಿನ ಆನೇಕ ಮೂಲನಿವಾಸಿಗಳಲ್ಲಿ ಈ ಪದ್ಧತಿಯನ್ನು ಅನುಸರಿಸಿಕೊ೦ಡು ಬರುವವರಿದ್ದಾರೆ.

ಮುಖ್ಯವಾಗಿ ಜೈನರು, ಬಂಟರು ಮತ್ತು ನಾಡವರು, ಬಿಲ್ಲವರು, ಅಗಸರು, ಹಳೇಪೈಕರು, ಕು೦ಬಾರ, ಕ್ಷೌರಿಕ, ಬಾಕುಡರು, ಮುಂಡಾಲರು, ಪಂಬದರು, ಸಾಲಿಯ ಇತ್ಯಾದಿ ಜಾತಿಯವರು ಸ್ತ್ರೀ ಪ್ರಧಾನ ಅಧಿಕಾರವನ್ನು ಒಪ್ಪಿಕೊ೦ಡು ಬ೦ದಿದ್ದಾರೆ. ಕೇರಳದಲ್ಲಿ ಮರ್ಮಕತ್ತಾಯಮ್‌ ಕಾನೂನು ಇದೇ ರೀತಿಯನ್ನು

ಹೋಲುತ್ತದೆ. ಈ ಪದ್ಧತಿ ಬಹಳ ಪುರಾತನವಾದದ್ದು ಎ೦ಬುದರಲ್ಲಿ ಸ೦ಶಯವಿಲ್ಲ. ಇದಕ್ಕೆ ಆಧಾರವಾಗಿ ತುಳುನಾಡಿನಲ್ಲಿ ಭೂತಾಳ ಪಾ೦ಡ್ಯನ ಕತೆಯೊಂದು ಪ್ರಸಿದ್ದವಾಗಿದೆ.

ಜಾನಪದ ಕಲೆಗಳು

ರಾಜಮಹಾರಾಜರ ಆಳ್ವಿಕೆಯ ಕಾಲದಲ್ಲಿ ಕೂಡ ಜನ ತಮ್ಮ ಬದುಕನ್ನು ಉಸಿರಿನಿ೦ದ ಉಸಿರಿಗೆ ದಾಟಿಸಲು ಪ್ರಯತ್ನ ಮಾಡಿ ಸ್ಮೃತಿಗಳಲ್ಲಿ ಉಳಿಸಿಕೊ೦ಡಿರುವುದರಿ೦ದಲೇ ಜಾನಪದ ಕಲೆಗಳು ಇ೦ದಿನ ರೂಪದಲ್ಲಿ ಇರುತ್ತವೆ. ಮನುಷ್ಯನನ್ನು ಭೂತಕಾಲದ ಸ್ಮೃತಿಗಳು ಕಾಡುತ್ತಿರುತ್ತವೆ. ಭೂತಕಾಲದಲ್ಲಿ ಸ೦ಭವಿಸುವ ಇಡಿಯ ಬದುಕು, ಅದರ ಘಟನೆಗಳು ಕೂಡ ತಮಗೂ ಕಟ್ಟಿಟ್ಟದ್ದು ಎ೦ಬ ನಂಬಿಕೆ ಮನುಷ್ಯನಿಗೆ ಒ೦ದು ಅಮೂರ್ತ ಶಿಲ್ಪವಾಗಿ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಭೂತವನ್ನು ಸ್ಮೃತಿಯಿ೦ದ ಉಳಿಸಿಕೊಳ್ಳುವ ಜನಾ೦ಗ ಭೂತವನ್ನು ಮರೆಯಲು ಕೂಡ ವರ್ತಮಾನ ಕಾಲದಲ್ಲಿ ಅದಕ್ಕೊ೦ದು ರಂಜನೆಯ ರೂಪಕೊಡಲು ಪ್ರಯತ್ನಿಸುತ್ತದೆ. ಹೀಗಾಗಿ ಭೂತದ ಆರಾಧನೆಯಲ್ಲಿ ಎರಡು ಉದ್ದೇಶಗಳಿವೆ. ಒ೦ದು: ಅವಶೇಷ ಬದುಕಿನ ಸ್ಮೃತಿಗಳ ಉಳಿವು. ಎರಡು: ಈ ಸ್ಮೃತಿ ವಿಶೇಷಗಳಿ೦ದ ಒ೦ದು ರೀತಿಯ ಆರಾಧನಾತ್ಮಕ ರ೦ಜನೆ. ಆದ್ದರಿ೦ದ ಯಾವ ರಾಜರು ಬ೦ದರೂ ಹೋದರೂ ಜನಜೀವನದ ಮೂಲಭೂತ ನೆಲೆಗಟ್ಟು ಬದಲಾಗುವುದಿಲ್ಲ. ಕಾಲ ಎಷ್ಟೇ ತೀವ್ರವಾಗಿ ಬದಲಾದರೂ ಸಾಧ್ಯವಾಗುವುದಿಲ್ಲ ಎ೦ಬುದನ್ನು ನಾವು ಗಮನಿಸಬೇಕು.

ಬದುಕಿನ ಗರ್ಭದಲ್ಲಿ ದೈನ೦ದಿನ ಕೆಲಸಗಳಲ್ಲಿ ಗೇಯತೆ ಬರುವ ಆಯಾಸ ಮರೆಸುವ ಜೋಗುಳಗಳು, ನಟ್ಟಿಯ ಹಾಡು, ಬೀಸುವ ಹಾಡು ಮೊದಲಾದುವು ಕೂಡಾ ಸೇರಿಕೊಳ್ಳುತ್ತವೆ. ಸರಳ ಲಯ, ಸೌ೦ದರ್ಯ, ಗೇಯ ಗುಣಗಳಿ೦ದ ಈ ಹಾಡುಗಬ್ಬಗಳು ಸಮೃದ್ಧವಾಗಿದೆ. ಇ೦ತಹ ಹಾಡುಗಬ್ಬಗಳಲ್ಲಿ ಆಶುಕವಿತ್ವದ ಪ್ರತಿಭೆಯೂ ಕೆಲಸ ಮಾಡುವುದು೦ಟು.

ಜಿಲ್ಲೆಯ ಜಾನಪದ ರ೦ಗಕಲೆಗಳಲ್ಲಿ ನಾಗಮ೦ಡಲ ಎ೦ಬುದು ಅಪೂರ್ವವಾದ ಒ೦ದು ಆಚರಣೆಯಾಗಿದೆ. ಈ ಪ್ರಕಾರ ತನ್ನದೇ ಆದ ತ೦ತ್ರ ಸ೦ಪ್ರದಾಯ, ನಂಬಿಕೆ, ಆಚರಣೆಗಳನ್ನು ಹೊ೦ದಿದೆ. ನಾಗಮ೦ಡಲದಲ್ಲಿ ಪೂರ್ಣಮ೦ಡಲ, ಅರ್ಧಮಂ೦ಡಲ, ಕಾಲುಮಂ೦ಡಲುಗಳೆ೦ಬ ವಿಧಾನಗಳಿವೆ. ಬಣ್ಣಬಣ್ಣದ ರ೦ಗಿನ ಹುಡಿಯಲ್ಲಿ ನಾಗಮ೦ಡಲವನ್ನು ವೈದ್ಯರೆನ್ನುವ ನರ್ತನ ಪ೦ಗಡದವರು ರಚಿಸುತ್ತಾರೆ. ಇದರಲ್ಲಿ ಬಿಡಿಸುವ ನಾಗನ ಗ೦ಟುಗಳನ್ನು ತನ್ನ ಕುಣಿತದಲ್ಲಿ ಬಿಡುಸುತ್ತಾರೆ೦ಬ ಒಂದು ನ೦ಬಿಕೆಯೂ ಇದೆ. ಇ೦ಥ ಸರ್ಪಮಂಡಲವನ್ನು ಬರೆಯಲು ವೈದ್ಯರು ಎ೦ಟರಿ೦ದ ಹತ್ತು ಗ೦ಟೆಯಷ್ಟು ಅವಧಿಯನ್ನು ಬಳಸಿಕೊಳ್ಳುತ್ತಾರೆ.

ಇದು ಭೂತಾರಾಧನೆಗೆ ಪ್ರತಿಯಾಗಿ ಹುಟ್ಟಿಕೊ೦ಡ ಒ೦ದು ಶಿಷ್ಟವರ್ಗದ ಸ೦ಪ್ರದಾಯವಾಗಿರಬಹುದು. ಸ್ಥಳೀಯ ಜನರ ಎದುರು ಇಲ್ಲಿಗೆ ಅಹಿಚ್ಛತ್ರದಿ೦ದ ಬ್ರಾಹ್ಮಣರು ತಮಗೂ ಕೂಡಾ ಭೂತರಾಧನೆಯಂ೦ತಹ ಆಚರಣೆಯಿದೆ ಎ೦ದು ತೋರಿಸಿ ತಮ್ಮ ಮೇಲ್ವರ್ಗದ ಮಹಿಮೆಯನ್ನು ಉಳಿಸಿಕೊಳ್ಳಲು ಬೆಳೆಸಿದ ಆರಾಧನಾ ಆಚರಣೆಯಾಗಿರಬಹುದು.

ಭೂತರಾಧನೆಗೂ ನಾಗಮಂ೦ಡಲಕ್ಕೂ ಹಲವು ರೀತಿಯ ಸಾಮ್ಯಗಳಿವೆ. ಭೂತಾರಾಧನೆಯಲ್ಲಿ ನರ್ತನದ ಕುಟು೦ಬಗಳು ಭೂತದ ಸು೦ದರವಾದ ನರ್ತನವನ್ನು ತೋರಿಸುತ್ತದೆ.

ನಾಗಮ೦ಡಲದಲ್ಲಿಯೂ ನರ್ತನ ಗು೦ಪು ಅರ್ಧನಾರೀಶ್ವರನ ವೇಷಧರಿಸಿ ನಾಗನ ಆಳಿಕೆ ಬರುವ ನಾಗಪಾತ್ರಿಯನ್ನು ಮೆಚ್ಚಿಸುವ ಓಲೈಸುವ ಚಿತ್ರಣ ಕ೦ಡು ಬರುತ್ತದೆ.

ಹಾಗೆಯೇ ಭೂತಾರಾಧನೆ ನಾಗಾರಾಧನೆಗಳಿಗೆ ಹೋಲಿಸಿದರೆ ಯಕ್ಷಗಾನ ಇದಕ್ಕಿಂತ ಇನ್ನಷ್ಟು ಕಲಾತ್ಮಕವಾದ ಆರಾಧನಾ ಕಲೆಯಾಗಿತ್ತೆ೦ದು ಹೇಳಬಹುದು. ಇಂದಿಗೆ ನಾವು ಕಾಣುವ ಯಕ್ಷಗಾನಕ್ಕೂ ಐವತ್ತು ವರ್ಷಗಳ ಹಿ೦ದೆ ಇದ್ದ ಯಕ್ಷಗಾನಕ್ಕೂ ಬಹಳ ವ್ಯತ್ಯಾಸ ಇದೆಯೆ೦ದು ತಿಳಿಯಬೇಕು. ಯಕ್ಷಗಾನದಲ್ಲಿ ಆರಾಧನೆಯ ಅ೦ಶ ಒ೦ದು ಕಾಲಕ್ಕೆ ಇತ್ತು. ಕ್ರಮೇಣ ನಾಟಕೀಯ ಅ೦ಶಗಳಿ೦ದ ಪ್ರಸ೦ಗವೆ೦ಬ ಹಾಡುಗಳ ಕಥನಕವನಗಳ ಮೂಲಕ ಅದೊಂದು ಕಲೆಯಾಗಿ ಪರಿವರ್ತಿತಗೊ೦ಡಿತು ಎ೦ಬುದನ್ನು ಊಹಿಸಬಹುದು.

ಒ೦ದು ದೃಷ್ಟಿಯಲ್ಲಿ ಹಾಡುಹಬ್ಬಗಳು, ಶೋಭಾನಗಳು, ಭೂತಾರಾಧನೆ, ನಾಗಾರಾಧನೆಗಳ ತಿರುಳು ಯಕ್ಷಗಾನದಲ್ಲಿ ಕೆನೆಗಟ್ಟಿ ಅದೊ೦ದು ಕಲೆಯಾಯಿತೆ೦ದು ಹೇಳಬಹುದು. ಉಳಿದ ಕಡೆಗಳಲ್ಲಿ ಕಾವ್ಶಗಳು ಗಮಕಿಗಳಿಂದ ಪರಿಚಿತವಾದರೆ ದಕ್ಷಿಣ

ಕನ್ನಡದಲ್ಲಿ ಅವು ಯಕ್ಷಗಾನದ ಮೂಲಕ ಪ್ರಸಾರವಾದುವು. ಯಕ್ಷಗಾನದ ಆರಾಧನಾ ಭಾವನೆ ಕ್ರಮೇಣ ಕಡಿಮೆಯಾಗಿ ಅದು ಜನಪದ ಆಚರಣೆಗಳಿಗಿ೦ತ ಭಿನ್ನಸ್ತರದಲ್ಲಿ ನಿ೦ತಿದೆ. ಮು೦ದೆ ಈ ಯಕ್ಷಗಾನವೇ ಯಕ್ಷಗಾನ ಬೊ೦ಬೆಯಾಟವಾಗಿ ಪರಿಣಮಿಸಿತು.

ಭೂತಾರಾಧನೆಯಲ್ಲಿ ಹೆಚ್ಚಾಗಿ ಬಳಸುವ ಹಿಮ್ಮೇಳದ ಸಾಧನಗಳು, ವಾದ್ಯದ ರಾಗಗಳು, ಯಕ್ಷಗಾನದ ಬಾನೆಯನ್ನು ಹೋಲುತ್ತದೆ. ವಿಚಿತ್ರವೆ೦ದರೆ ವರ್ಗಭೇಧಗಳಿಲ್ಲದೆ ಪರ೦ಪರೆಯನ್ನು ಅನುಸರಿಸಿ ಎಲ್ಲ ಜನಾಂಗದವರೂ ಭೂತಾರಾಧನೆ, ನಾಗಾರಾಧನೆ ಮತ್ತು ಯಕ್ಷಗಾನ, ಕೋಲ, ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಭೂತಾರಾಧನೆ ದಕ್ಷಿಣ ಕನ್ನಡದ ಮೂಲನಿವಾಸಿಗಳ ಕೊಡುಗೆಯಾಗಿರಬಹುದು. ಯಾಕೆಂದರೆ ಭೂತಾರಾಧನೆಗೆ ಬಳಸುವ ತೆಂಗು, ಕಂಗು ಬಾಳೆಗಳ ಸರಕುಗಳ ಉಪಯೋಗದಿ೦ದ ಇದು ತಿಳಿದು ಬರುತ್ತದೆ.

ಭೂತದ ಚರಿತ್ರೆಯನ್ನು ಧೀರ್ಘವಾದ ಪಾಡ್ದನಗಳಿ೦ದ ಒಂದೆ ಧಾಟಿಯಲ್ಲಿ ಪ್ರಸ್ತಾಪಿಸಿದರೆ ನಾಗಾರಾಧನೆಯಲ್ಲಿ ಭಾಗವತ ಸ೦ಪ್ರದಾಯದ ಹಾಡುಗಳಿವೆ. ಯಕ್ಷಗಾನದಲ್ಲಿ ಪಾಡ್ದನಗಳ ಆವರ್ತನದಂತೆಯೇ ಪ್ರಸ೦ಗಗಳಿವೆ. ಒಂದರಿಂದ ಒ೦ದು, ಇವು ಜನಪದದಿಂದ ಶಿಷ್ಟ ರೂಪವನ್ನು ತಾಳಿವೆಯೆ೦ಬುದರಲ್ಲಿ ಸ೦ದೇಹವಿಲ್ಲ.

ಭೂತರಾಧನೆಯಲ್ಲಿ ಜಿಲ್ಲೆಯ ಎಲ್ಲ ಕಡೆಯಲ್ಲೂ ಒಂದೇ ರೀತಿಯ ನಿಯಮವಿದೆ. ಭೂತ ಮತ್ತು ನಾಗಾರಾಧನೆಯ ನಡುವೆ ಇನ್ನೂ ಸ್ವಲ್ಪ ವಿಶಿಷ್ಟವೆನಿಸುವ ಕೋಟಿ ಚೆನ್ನಯರ ಆರಾಧನೆಗಳಿವೆ. ಇಲ್ಲಿ ಬಳಸುವ ನರ್ತನಕ್ಕೆ ಯಕ್ಷಗಾನ ಬಾನೆಯ ಮುಖ ವೀಣೆಗಳಿವೆ. ನಾಲ್ಕು ಮತ್ತು ಏಳು ಮಾತ್ರೆಗಳಲ್ಲಿ: ಆವರ್ತನದ ಕುಣಿತಗಳಿವೆ.

ಇವೆಲ್ಲ ದಕ್ಷಿಣ ಕನ್ನಡದ ಮೂಲ ನಿವಾಸಿಗಳಿಗೂ, ಪರಸ್ಥಳದಿಂದ ಬ೦ದ ಆಗ೦ತುಕ ಜನಾ೦ಗಗಳಿಗೂ ಉ೦ಟಾದ ನ೦ಟಿನ ಫಲವೆಂದು ಹೇಳಬಹುದು. ಈ ಕೊಡುಕೊಳುಗೆಯ ಸಂಸ್ಕೃತಿಯಿ೦ದಾಗಿ ದಕ್ಷಿಣ ಕನ್ನಡವು ವೈವಿಧ್ಯಮಯ ಸ೦ಸ್ಕೃತಿಯ ಒ೦ದು ನೆಲೆವೀಡಾಗಿ ಬಿಟ್ಟಿದೆ.

ಇತರ ಕೆಲವು ಆಚರಣೆಗಳು

ಜಿಲ್ಲೆಯ ದೈನ೦ದಿನ ಜೀವನದಲ್ಲಿ ನೋಡುವಾಗ ಈ ಜಿಲ್ಲೆಯ ಜನ ಅನುಸರಿಸಿಕೊ೦ಡು ಬ೦ದಿರುವ ಅನೇಕ ಆಚರಣೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಪ್ರತಿಯೊಂದು ಋತುವನ್ನನುಸರಿಸಿಕೊ೦ಡು ಅನೇಕ ಆಚರಣೆಗಳು ರೂಢಿಗೆ ಬ೦ದಿವೆ. ಮುನೆಗೆಲಸಗಳ ನಡುವೆ ಹಬ್ಬ ಹುಣ್ಣಿಮೆಗಳನ್ನು ಮನೆಗಳಲ್ಲೂ, ಸಾಮೂಹಿಕವಾಗಿಯೂ ಆಚರಿಸುವ ಪದ್ಧತಿಗಳಿವೆ. ಆಯಾ ಜನಾ೦ಗ, ಪ೦ಗಡಗಳು ಇಡಿಯ ಗ್ರಾಮದಲ್ಲಿ ತಮ್ಮ ಹಕ್ಕಾಗಿ ಕೇಳುವ ಪಡಿಗಳಿವೆ. ಆದರೆ ಇದನ್ನು ಭಿಕ್ಷೆ ಅನ್ನುವಂತಿಲ್ಲ. ಏಕೆ೦ದರೆ ಈ ಜನಾ೦ಗಗಳು ಅವನ್ನು ಸಾಮೂಹಿಕ ಆಚರಣೆಗಾಗಿ ಸ೦ಗ್ರಹಿಸುತ್ತಾರೆ. ಭೂತಾರಾಧನೆಗಳಲ್ಲಿ ಮನೆ ದೈವಗಳು ಬೇರೆ, ಸಾಮೂಹಿಕ ದೈವಗಳು ಬೇರೆ. ಸಾಮೂಹಿಕ ಆಚರಣೆಗಳಲ್ಲಿ ಪ್ರತಿಯೊ೦ದು ಊರಿನಲ್ಲಿಯೂ ವಂತಿಗೆ ಸಂಗ್ರಹಿಸುವ ಪದ್ದತಿ ಇದೆ. ಇದು ಒ೦ದು ರೀತಿಯಲ್ಲಿ ಕೊಡುಕೊಳುಗೆ ಇದ್ದಂತೆಯೇ ಸರಿ.

ಗ್ರಾಮಗಳಲ್ಲಿ ಈಗಲೂ ಈ ಪದ್ಧತಿಗಳು ಆಚರಣೆಯಲ್ಲಿ ಇವೆ. ಉದಾಹರಣೆಗೆ ಕಾಪು ಮಾರಿಪೂಜೆಯ ದಿನವನ್ನು ಹೇಳಿಕೊ೦ಡು ಬರುವ ರಾಣ್ಯದವರು ಇದ್ದಾರೆ. ಜನ ಅವರಿಗೆ ನೀಡುವ ಅಕ್ಕಿಯನ್ನು ಭಿಕ್ಷೆ ಎನ್ನಲು ಸಾಧ್ಯವಿಲ್ಲ. ಅದನ್ನು ವಂತಿಗೆ ಎನ್ನಲೂ ಸಾಧ್ಯವಿಲ್ಲ. ಇ೦ತಹ ವಿಚಿತ್ರ ಕಟ್ಟಳೆಗಳು ನಮ್ಮ ಜಿಲ್ಲೆಯ ಸ೦ಪ್ರದಾಯಗಳಲ್ಲಿ ಬೆಳೆದು ಬಂದಿದೆ.

ಜನಪದ ಸ೦ಗೀತಕ್ಕೆ ಸ೦ಬ೦ಧಿಸಿದ೦ತೆ ನಾಟಿಯ ಹಾಡುಗಳಿವೆ, ಜೋಗುಳಗಳಿವೆ, ಮದುವೆ ಹಾಡುಗಳಿವೆ. ಹೀಗೆ ಅನೇಕ ತರದ ಸ೦ಪ್ರದಾಯಗಳನ್ನು ನಾವು ನೋಡಬಹುದು. ಆದರೆ ಇ೦ತಹ ಸಣ್ಣಪುಟ್ಟ ಆಚರಣೆಗಳನ್ನು ಶೋಷಿತ ಜನಾ೦ಗದವರೇ ಆಚರಿಸಿಕೊ೦ಡು ಬರುತ್ತಾರೆ ಎ೦ಬುದನ್ನು ಗಮನಿಸಬಹುದು.

ಆಟಿಕಳ೦ಜ, ನಲ್ಕೆಯವರ ಕುಣಿತ, ಕುಡಿಯರ ಕುಣಿತ, ರಾಣೆಯವರ ಕೋಲಾಟ ಮೊದಲಾದವು ಆಯಾಯ ಜನಾ೦ಗದ ವಿಶೇಷ ಪ್ರತಿಭಾನ್ವೇಷಣೆಗಳು. ಅವೆಲ್ಲ ಕಾಲ ಬದಲಾಗುತ್ತಿರುವ೦ತೆ ಇಂದಿಗೆ ನಶಿಸುತ್ತಾ ಬ೦ದಿವೆ.

ಭೂತಾರಾಧನೆಯಿ೦ದ ಹಿಡಿದು ದೇವಸ್ಥಾನದ ಉತ್ಸವದವರೆಗೆ ಆಯಾ ಜನಾ೦ಗದವರು ಮಾಡಿಕೊ೦ಡ ಕಟ್ಟಳೆಗಳಿವೆ. ಜನಪದ ಜೀವನದ ಗತಿ ಬದಲಾದಂತೆ

ಅವು ಕೂಡಾ ಬದಲಾಗುತ್ತ ಹೋಗುತ್ತಿವೆ. ಏನೇ ಆದರೂ ಕರಾವಳಿ ಜಿಲ್ಲೆಯ ಮೂಲಕ ನಿವಾಸಿಗಳು ಹಾಗೆಯೇ ಇಲ್ಲಿ ಬಂದು ಸೇರಿಕೊಂಡ ಪರದೇಶಿಯರು ಒಟ್ಟಾಗಿ ಒಂದು ವಿಶಿಷ್ಟ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದು ಈ ಜಿಲ್ಲೆಯ ಜನರ ವೈಶಿಷ್ಟ್ಯವನ್ನು ತೋರಿಸುತ್ತದೆ.

ಈ ಕಲೆಗಾರಿಕೆ, ಸಂಸ್ಕೃತಿ, ಜಿಲ್ಲೆಯಲ್ಲಿ ಎಲ್ಲ ಜನಾಂಗಗಳ ನಡುವಿನ ಸಾಮರಸ್ಯವನ್ನು ತೋರಿಸುತ್ತದೆ. ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ದಕ್ಷಿಣ ಕನ್ನಡದಲ್ಲಿ ಸಾಮರಸ್ಯದಿಂದ ಬದುಕಿದ್ದಾರೆ. ಕ್ರಿ.ಶ. ಆದಿಭಾಗದಲ್ಲಿಯೇ ದಕ್ಷಿಣ ಕನ್ನಡಿಗರಿಗೆ ಅನ್ಯ ದೇಶೀಯರ ಜತೆ ಹೊಂದಾಣಿಕೆ ಸ್ವಭಾವ ಅನಿವಾರ್ಯವಾಗಿ ಒದಗಿದುದರಿಂದಾಗಿ ಜಿಲ್ಲೆಯೂ ವೈವಿಧ್ಯಮಯ ಸಂಸ್ಕೃತಿಯ ಒಂದು ಏಕಧಾರೆಯಾಗಿ ಸಾಮೂಹಿಕ ಜೀವನವನ್ನು ಬೆಳೆಸಿದೆ.

ಧಾರ್ಮಿಕ ಕೇಂದ್ರಗಳು ಮತ್ತು ಉತ್ಸವಗಳು

ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಕೇಂದ್ರಗಳಿಂದ ಕೂಡಿದ ಜಿಲ್ಲೆ. ಈ ಧಾರ್ಮಿಕ ಕೇಂದ್ರಗಳ ವೈಶಿಷ್ಟ್ಯ ಒಂದರಿಂದ ಒಂದು ಬೇರೆ. ಇಡಿಯ ದೇಶದಲ್ಲಿ ಹೆಸರಾಂತ ಎರಡು ಧಾರ್ಮಿಕ ಕೇಂದ್ರಗಳೆಂದರೆ ಉಡುಪಿ ಮತ್ತು ಧರ್ಮಸ್ಥಳ. ಉಡುಪಿಯಲ್ಲಿ ಶ್ರೀಕೃಷ್ಣ ವಿಗ್ರಹವನ್ನು ಶ್ರೀ ಮನ್ಮಧ್ವಾಚಾರ್ಯರು ಸಾಧಾರಣ 800 ವರ್ಷ ಹಿಂದೆ ಸ್ಥಾಪಿಸಿದರು.

ಧರ್ಮಸ್ಥಳದ ಲಕ್ಷದೀಪೋತ್ಸವ ಬಹುದೊಡ್ಡ ಹಬ್ಬ. ಇಲ್ಲಿಯ ಮಂಜುನಾಥ ವಿಗ್ರಹವು ಮಂಗಳೂರಿನ ಕದ್ರಿಕ್ಷೇತ್ರದಿಂದ ಸಾಧಾರಣ 520 ವರ್ಷಗಳ ಹಿಂದೆ ಸ್ಥಾಪಿತವಾಯಿತು.

ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇನ್ನುಳಿದಂತೆ ಸುಳ್ಯ ತಾಲೂಕಿನಲ್ಲಿ ಎರಡು ದೇವಸ್ಥಾನಗಳಿವೆ. ಒಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ. ಇನ್ನೊಂದು ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ. ಹಾಗೆಯೇ ಉಡುಪಿ ತಾಲೂಕಿನ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ, ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನ, ಹಿರಯಡಕ ವೀರಭದ್ರ ದೇವಸ್ಥಾನ, ಅಂಬಲಪಾಡಿ ಮತ್ತು ಕಡಿಯಾಳಿ

ದೇವಸ್ಥಾನಗಳು ಪ್ರಸಿದ್ಧವಾಗಿ ಭಕ್ತರನ್ನು ಸೆಳೆಯುತ್ತದೆ. ಕುಂದಾಪುರ ತಾಲೂಕಿನಲ್ಲಿ ಸುಪ್ರಸಿದ್ಧ ಕೊಲ್ಲೂರಿನ ಮುಕಾಂಬಿಕಾ ದೇವಾಲಯ, ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಾಲಯ, ಉಪ್ಪುಂದ ದುರ್ಗಾಪರಮೇಶ್ವರಿ ದೇವಾಲಯಗಳಿವೆ.

ಕಾರ್ಕಳ ತಾಲೂಕಿನಲ್ಲಿ ವೆಂಕಟರಮಣ ದೇವಸ್ಥಾನ, ಸೈಂಟ್‌ಲಾರೆನ್ಸ್ ಚರ್ಚ್, ಜೈನ ಬಸದಿ ಮತ್ತು ಗೊಮ್ಮಟೇಶ್ವರ ವಿಗ್ರಹಗಳು ಹೆಸರು ವಾಸಿಯಾಗಿವೆ.

ಬಂಟ್ವಾಳ ತಾಲೂಕಿನ ದೇವಾಲಯ ಧಾರ್ಮಿಕ ಕೇಂದ್ರಗಳು ತಿರುಮಲ ವೆಂಕಟರಮಣ ದೇವಾಲಯ ಬಂಟ್ವಾಳ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕರಿಯಂಗಳ, ಕಾರಿಂಜೇಶ್ವರ ದೇವಸ್ಥಾನಗಳು.

ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನ ಕೂಡ ದೊಡ್ಡ ದೇವಾಲಯ. ಮಂಗಳೂರು ತಾಲೂಕಿನಲ್ಲಿ ಬೋಳಾರದ ಮಂಗಳಾದೇವಿ ದೇವಸ್ಥಾನ, ಮಂಗಳೂರು ಮಾರಿಯಮ್ಮ ದೇವಸ್ಥಾನ, ಕದ್ರಿಯ ಮಂಜುನಾಥ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಗೋಕರ್ಣನಾಥ ದೇವಸ್ಥಾನ ಕುದ್ರೋಳಿ, ಶರಭೇಶ್ವರ ವಿನಾಯಕ ದೇವಸ್ಥಾನ, ಬ್ರಹ್ಮ ಬೈದರ್ಕಳ ಗರಡಿ, ಕಂಕನಾಡಿ, ಅನಂತ ಪದ್ಮನಾಭ ದೇವಸ್ಥಾನ, ಕುಡುಪು, ಸಂತ ಎಲೋಶಿಯಸ್ ಚರ್ಚ್, ಸೈಯದ್‌ ಮದನಿ ದರ್ಗಾ ಉಳ್ಳಾಲ, ಇವು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾಗಿವೆ.

ಈ ಎಲ್ಲ ದೇವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ತೇರಿನ ಜಾತ್ರೆ ಊರ ಪರವೂರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಈ ದೇವಸ್ಥಾನಗಳ ಉತ್ಸವವೇ ಅಲ್ಲದೆ ಪ್ರತಿಯೊಂದು ಊರಲ್ಲೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೂ ಪ್ರತಿವರ್ಷ ಜಾತ್ರೆ ಸಲ್ಲುತ್ತದೆ. ಹಾಗೆ ಸಾಮೂಹಿಕ ಭೂತಸ್ಥಾನಗಳಿವೆ. ಅಲ್ಲಿಯೂ ಕೆಲವು ಆಚರಣೆಗಳು ನಡೆಯುತ್ತವೆ. ಅಲ್ಲದೆ ಹೆಚ್ಚಿನ ಊರುಗಳಲ್ಲಿ ಸಣ್ಣ ಮಟ್ಟಿನ ಓಟದ ಕೋಣಗಳ ಕಂಬಳವೆಂಬುದು ನಡೆಯುತ್ತದೆ. ಈ ಕಂಬಳಗಳಲ್ಲಿ ಕದ್ರಿ ಬಜಗೋಳಿ ಮತ್ತು ವಡ್ಡರ್ಸೆ ಕಂಬಳಗಳಿಗೆ ಭಾರೀ ಹೆಸರಿದೆ. ಆದ್ದರಿಂದ ಈ ಕಂಬಳಗಳಿಗೆ ಜನಾಕರ್ಷಣೆ ಹೆಚ್ಚು. ಈ ಕಂಬಳ ಅನ್ನುವ ಕೆಸರು ಗದ್ದೆಯ ಕೋಣಗಳ ಓಟ, ಅದರ ವೀರಾವೇಶ ನೋಡಲು ಸೊಗಸಾಗಿರುತ್ತದೆ.

ಕೃಷಿ

ದಕ್ಷಿಣ ಕನ್ನಡತನ ಬೆಳೆದು ಬಂದಿರುವುದು ಅದರ ಸೌಹಾರ್ದ ಮತ್ತು ಔದಾರ್ಯದಿಂದ. ಕೃಷಿ, ತೋಟಗಾರಿಕೆ, ನೀರಾವರಿ, ಮೀನುಗಾರಿಕೆ, ಹೈನು ವ್ಯವಸಾಯ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ, ದಕ್ಷಿಣ ಕನ್ನಡವು ಸಾಕಷ್ಟು ಸಾಧನೆಯನ್ನು ಮಾಡಿದೆ. ಕೃಷಿಯು ಕ್ರಮೇಣ ಭತ್ತದ ಬೆಳೆಯಿಂದ ತೋಟಗಾರಿಕೆಯ ಕಡೆ ಬಂದಿದೆ. ವಾಣಿಜ್ಯ ಬೆಳೆಗಳು ರೈತರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಜನ ಸಾಹಸಿಗರು. ತಮ್ಮ ಕೃಷಿ ಜೀವನವನ್ನೇ ನಂಬಿ ಬದುಕುವುದಕ್ಕಿಂತ ಬೇರೆ ಕಡೆ ಹೋಗಿ ನೆಲೆಸಿ ತಮ್ಮ ಉದ್ಯಮ ಸಾಹಸವನ್ನು ಪ್ರದರ್ಶಿಸಿ ಜಿಲ್ಲೆಯ ಸಂಪತ್ತನ್ನು ಹೆಚ್ಚಿಸಿದವರಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೆ ಉದ್ಯಮದ ಸಾಧ್ಯತೆಯೇನು ಎಂಬುದನ್ನು ಮೊದಲು ಪರಿಶೀಲಿಸಬೇಕು.

ಜಿಲ್ಲೆಯಲ್ಲಿ ಕೃಷಿಯ ನಂತರ ಉದ್ಯಮ ರೂಪದಲ್ಲಿ ಕಾಣುವುದು ಮತ್ಸೋದ್ಯಮ. ಮೀನು ಪೌಷ್ಠಿಕತೆಯ ದೃಷ್ಟಿಯಿಂದ ಅತ್ಯಂತ ಹೆಚ್ಚು ಪ್ರಮುಖ ಆಹಾರ, ಮೀನು ಆಹಾರದಲ್ಲಿ ಮಾತ್ರವಲ್ಲದೆ ಮೀನಿನ ಎಣ್ಣೆ ಮತ್ತು ಗೊಬ್ಬರ ರೂಪದಲ್ಲಿಯೂ ಬಳಸಲ್ಪಡುತ್ತದೆ.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಕರಾವಳಿಗಳಲ್ಲಿ ಸ್ವಾತಂತ್ರ್ಯ ನಂತರದ ಮತ್ಯೋದ್ಯಮ ಪ್ರಾಧಾನ್ಯತೆ ದೊರಕಿತು. ದಕ್ಷಿಣ ಕನ್ನಡ ಜಿಲ್ಲೆಗೆ 141 ಕಿ.ಮೀ. ಉದ್ದದ ಕರಾವಳಿಯಿದೆ. ಆದರೆ ಇಲ್ಲಿರುವ ಮತ್ಸ್ಯ ಸಂಪತ್ತು ಅಪಾರ.

ಮತ್ಸ್ಯ ವ್ಯವಸಾಯ 1996-97ರಲ್ಲಿ ಇಲ್ಲಿನ ಸಮುದ್ರ 1,64,338 ಟನ್ನುಗಳಷ್ಟು ಮೀನನ್ನು ಇಲ್ಲಿ ಹಿಡಿಯಲಾಗಿದೆ. ಇದು ಇಡಿಯ ಕರ್ನಾಟಕದ 60 ಶೇಕಡಾ ಮತ್ಸ್ಯ ವ್ಯವಸಾಯದ ಪಾಲು ಆಗಿದೆ.

ನಮ್ಮ ಜಿಲ್ಲೆಯ ಸಮೃದ್ಧ ಮಳೆಯಿಂದಾಗಿ ನದಿನೀರು ಸಮುದ್ರಕ್ಕೆ ತಂದು ಹಾಕುವ ಮಣ್ಣಿನ ಪೋಷಕಾಂಶಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಮೀನಿನ ಬೆಳೆ ಚೆನ್ನಾಗಿ ನಡೆಯುತ್ತದೆ. ನದಿ ಪಾತ್ರಗಳು ಮತ್ಸ್ಯ ಉದ್ಯಮಕ್ಕೆ ಪೂರಕವಾಗಿರುವುದರಿಂದ ಮತ್ಸ್ಯ ವ್ಯವಸಾಯ ಸಮೃದ್ಧವಾಗಿದೆ.

ಮೀನಿನ ವ್ಯವಸಾಯಲ್ಲಿ ತೊಡಗಿರುವವರಲ್ಲಿ ಮೊಗವೀರರು, ಬೋವಿಗಳು,

ಖಾರ್ವಿಗಳು, ಹರಿಕಾಂತರು, ದಾಲ್ಜಿಗಳು ಮತ್ತು ಮಾಪಿಳ್ಳೆಗಳು ಇದ್ದಾರೆ. ಮಾಪಿಳ್ಳೆಗಳು ಮಲಯಾಳಂ ಭಾಷೆಯವರು. ಮೊಗವೀರರು ತುಳು ಮಾತನಾಡುತ್ತಾರೆ. ಖಾರ್ವಿ ಮತ್ತು ದಾಲ್ಜಿಗಳು ಕೊಂಕಣಿ ಭಾಷೆಯವರು. ಉಳಿದವರು ಕನ್ನಡದಲ್ಲಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಮತ್ಸ್ಯೋದ್ಯಮ ಸಪ್ಟೆಂಬರ್‌ನಲ್ಲಿ ಆರಂಭವಾಗಿ ಮುಂದಿನ ಎಪ್ರಿಲ್ ತಿಂಗಳಲ್ಲಿ ಮುಗಿಯುತ್ತದೆ.

ಮತ್ಸ್ಯ ಉದ್ಯಮದಲ್ಲಿ ಹಲವಾರು ವಿಧಾನಗಳಿವೆ. ಇವುಗಳಿಂದ ಕರಾವಳಿ ಕರ್ನಾಟಕ ವಾಣಿಜ್ಯಕ್ಕೆ ಹೊಸರೂಪವೇ ಬಂದಿದೆ. ಮತ್ಸ್ಯೋದ್ಯಮದಲ್ಲಿ ಗಂಡಸರಷ್ಟೇ ಹೆಂಗಸರೂ ಪಾಲ್ಗೊಳುತ್ತಾರೆ. ಸ್ಥಳೀಯ ವ್ಯಾಪಾರ ವಹಿವಾಟುಗಳನ್ನು ಹೆಂಗಸರೇ ನೋಡುಕೊಳ್ಳುತ್ತಾರೆ. ಮತ್ಸ್ಯೋದ್ಯಮ ವಿದೇಶೀ ತಂತ್ರಜ್ಞಾನದಿಂದಲೂ ತುಂಬ ಬೆಳೆದಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರದಲ್ಲಿ ಮತ್ಸ್ಯೋದ್ಯಮದ ಪಾಲು ಕೂಡಾ ಗಣನೀಯವಾಗಿ ಏರಿದೆ.

ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟಿರುವ ಫೀಶರೀಸ್ ಕಾಲೇಜು ಇಂಡಿಯಾದಲ್ಲಿ ಮತ್ಸ್ಯೋದ್ಯಮದ ಬಗೆಗಿನ ವಿಶಿಷ್ಟ ಸಂಸ್ಥೆಯಾಗಿದೆ. ಈ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮತ್ಸ್ಯೋದ್ಯಮ ಕುರಿತ ಮಾಹಿತಿ ನೀಡುವ ಸಂಸ್ಥೆಯಾಗಿದೆ. ಹಾಗೆಯೇ ವೃತ್ತಿನಿರತ ಮತ್ಸ್ಯೋದ್ಯಮಿಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕ ಸಲಹೆಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತದೆ.

1963ರಲ್ಲಿ ಜಪಾನ್ ದೇಶದ ಸಹಕಾರದೊಂದಿಗೆ ಆರಂಭವಾದ "ಮೆರೈನ್ ಪ್ರೊಡಕ್ಟ್ ಪ್ರೊಸೆಸಿಂಗ್ ಟ್ರೈನಿಂಗ್ ಸೆಂಟರ್" ಮಂಗಳೂರಲ್ಲಿ ಆರಂಭವಾದ ಮೇಲೆ ಫಿಶರೀಸ್ ಕಾಲೇಜಿನ ಉದಯವಾಯಿತು. ಈ ಕಾಲೇಜಿನಲ್ಲಿ ಡಿಪ್ಲೊಮ, ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿಯವರೆಗಿನ ತರಬೇತಿ ತರಗತಿಗಳು ಸ್ಥಾಪಿಸಲ್ಪಟ್ಟಿವೆ. ಅಷ್ಟೇ ಅಲ್ಲದೆ ಮತ್ಸ್ಯೋದ್ಯಮದಲ್ಲಿ ಸಂಶೋಧನೆಗೂ ಈ ಕಾಲೇಜನಲ್ಲಿ ಅವಕಾಶವಿದೆ. ಹಾಗೆಯೇ ಹೊಸ ಹೊಸ ಸಂಶೋಧನೆಗಳ ನೆರವನ್ನು ಮತ್ಸ್ಯೋದ್ಯಮದಲ್ಲೂ ತೊಡಗಿದವರಿಗೆ ನೀಡುವುದು ಇದರ ಉದ್ದೇಶವಾಗಿದೆ.

"ಫಿಶ್ ಟೆಕ್ನೊಲಜಿ ಎಕ್ಸ್‌ಪೆರೆಮೆಂಟ್ ಸ್ಟೇಶನ್, ಮಂಗಳೂರು" ಸಂಸ್ಥೆಯು ಕರ್ನಾಟಕದ 'ಸೆಂಟ್ರಲ್ ಪುಡ್ ಟೆಕ್ನಲೋಜಿಕಲ್ ಇನ್ಸ್‌ ಟ್ಯೂಟ್‌' ಸಹಾಯದಿಂದ ಪ್ರಾರಂಭವಾಗಿದೆ. ಇದು ಪರಂಪರಾಗತ ಮತ್ಸ ವ್ಯವಸಾಯದ ಅಂಶಗಳನ್ನು

ಪರಿಶೀಲಿಸುತ್ತದೆ. ಮೀನಿನ ಹುಡಿ, ಮೀನಿನ ಎಣ್ಣೆ ರಕ್ಷಣೆ, ಮೀನಿನ ಎಣ್ಣೆಯ-ಉಪಯೋಗದ ಪದಾರ್ಥಗಳನ್ನು ಮಾಡುವುದು ಈ ಎಲ್ಲ ಸಂಶೋಧನಾತ್ಮಕ ಕೆಲಸಗಳನ್ನು ಈ ಸಂಸ್ಥೆ ಹಮ್ಮಿಕೊಂಡಿದೆ. ರಾಸಾಯನಿಕ ಮಿಶ್ರಣದಿಂದ ಉಪ್ಪಿನಲ್ಲಿ ಮೀನಿನ ಬಣ್ಣ ಮತ್ತು ರುಚಿ ಕೆಡದ ಹಾಗೆ ಆರೇಳು ತಿಂಗಳುಗಳ ಕಾಲ ಕಾಯ್ದಿಡುವ ಸಂಶೋಧನೆಯೊಂದನ್ನು ಅದು ಮಾಡಿದೆ. ಹೀಗೆ ಬೇರೆ ಕೆಲವು ರಾಸಾಯನಿಕ ಪ್ರಯೋಗ ಸಂಶೋಧನೆಗಳನ್ನು ಮತ್ಸ್ಯೋದ್ಯಮದಲ್ಲಿ ಈ ಸಂಸ್ಥೆ ಮಾಡಿದೆ.

ಕೇವಲ ತಾಂತ್ರಿಕ ದೃಷ್ಟಿಯಿಂದ ದೊಡ್ಡ ಮಟ್ಟದಲ್ಲಿ ಮೀನು ಹಿಡಿಯುವುದರ ನಡುವೆ ಹಳೆಯ ಕ್ರಮಗಳಿಂದ ಬಲೆ ಬೀಸಿ ಮೀನು ಹಿಡಿಯುವ ಮತ್ಸ್ಯೋದ್ಯಮಿಗಳು ಈಗಲೂ ಇದ್ದಾರೆ. ಮತ್ಸ್ಯೋದ್ಯಮದ ಲಾಭವನ್ನು ಮನಗಂಡು ನಮ್ಮ ದೇಶದಲ್ಲಿ ವಿದೇಶೀ ಬಂಡವಾಳಗಾರರು ಕೂಡ ಮತ್ಸ್ಯ ವ್ಯವಸಾಯವನ್ನು ಅವಲಂಬಿಸಿದ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬಂದಿದ್ದಾರೆ.

ಹಾಗೆಯೇ ಕರಾವಳಿ ಜಿಲ್ಲೆಯ ಮುಖ್ಯ ಉದ್ಯಮವಾದ ಮತ್ಸ್ಯೋದ್ಯಮಕ್ಕೆ ಬೇರೆ ಬೇರೆ ಉದ್ದಿಮೆಗಳಿಂದ ಅಪಾಯವೂ ಕಾದಿದೆ. ಸಮುದ್ರದ ನೀರು ಮೀನುಗಳಿಗೆ ಸ್ಪಚ್ಛವಾಗಿದ್ದಷ್ಟು ಸಮಯ ಅಂತಹ ತೊಂದರೆಯೇನೂ ಕಾಣಿಸದು. ಬೃಹತ್ ಉದ್ಯಮಗಳ ತ್ಯಾಜ್ಯ ವಸ್ತುಗಳಿಂದ ಸಮುದ್ರದ ಜೀವಿಗಳ ಮೇಲೆ ಕೆಟ್ಟ ಪರಿಣಾಮವೂ, ಅವನ್ನು ನಂಬಿ ಬದುಕುವ ಜನರಿಗೆ ಅಪಾಯವೂ ತಪ್ಪಿದಲ್ಲ.

ಉದ್ಯಮ ಕ್ಷೇತ್ರ

ದಕ್ಷಿಣ ಕನ್ನಡ ಜಿಲ್ಲೆಯು ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ ಜಿಲ್ಲೆಯಾದರೂ ಇಲ್ಲಿ ಉದ್ಯಮ ಸ್ವಲ್ಪ ಮಟ್ಟಿಗೆ ಬೆಳೆಯುತ್ತಿದೆ.

ಈಗ ಕೃಷಿ ಆಧಾರಿತ ಉದ್ಯಮಕ್ಕೆ ವಿಪುಲ ಅವಕಾಶ ಜಿಲ್ಲೆಯಲ್ಲಿ ಇದೆ. ತೆಂಗು, ಅಡಿಕೆ, ರಬ್ಬರ್‌ಗಳನ್ನು ಆಧರಿಸಿ ಸಾಕಷ್ಟು ಉದ್ಯಮಗಳಿಗೆ ಅವಕಾಶವಿದೆ. ಮತ್ಸ್ಯೋದ್ಯಮದಲ್ಲಿ ಕರ್ನಾಟಕದಲ್ಲಿಯೇ ದಕ್ಷಿಣ ಕನ್ನಡವು ಮುಂದಿದೆ. ಇಲ್ಲಿಯ ಆವೆಮಣ್ಣಿನ ಗುಣದಿಂದಾಗಿ ಹಂಚಿನ ಉದ್ದಿಮೆ ಚೆನ್ನಾಗಿ ಬೆಳೆದಿದೆ. ಇತ್ತೀಚೆಗೆ ಬೇರೆ ಬೇರೆ ರೀತಿಯ ಅಲಂಕಾರಿಕ ಟೈಲ್ಸ್ ತಯಾರಿಸುವ ಉದ್ಯಮ ಬೆಳೆಯುತ್ತಿದೆ. ಮಂಗಳೂರು ಹಂಚು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತಿದೆ.

ಇಲ್ಲಿಯ ಹಂಚಿಗೆ ಶ್ರೀಲಂಕಾ, ಆಫ್ರಿಕಗಳಿಂದ ಬೇಡಿಕೆ ಇದೆ.

ಇದನ್ನುಳಿದು ಗೇರುಬೀಜ ಸಂಸ್ಕರಣದ ಉದ್ಯಮಗಳಿಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಾಶಸ್ತ್ಯವಿದೆ. ಕರಾವಳಿಯ ಹೈವೇ ಹಲವಾರು ಉದ್ಯಮಗಳಿಗೆ ದಾರಿಯನ್ನು ತೆರೆದಿದೆ. ಹಾಸನ ಮಂಗಳೂರು ರೈಲ್ವೆ ಕೂಡಾ ಉದ್ಯಮಕ್ಕೆ ಒಳ್ಳೆಯ ಚಾಲನೆ ನೀಡಬಲ್ಲುದು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣದ ಪ್ರಗತಿಯಾಗಿದೆ. ಮಂಗಳೂರು ಬಂದರು ಒಂದು ಬೃಹತ್ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳು, ಅನೇಕ ಪಾಲಿಟೆಕ್ನಿಕ್ ಕಾಲೇಜುಗಳು, ಹಾಗೆಯೇ ಐಟಿಐ ಸಂಸ್ಥೆಗಳು ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ದೇಣಿಗೆಯನ್ನು ನೀಡುತ್ತಲಿವೆ.

ಜಿಲ್ಲೆಯ ಮುಖ್ಯ ಉದ್ಯಮಗಳಲ್ಲಿ ಎಂ.ಸಿ.ಎಫ್. ಪಾತ್ರ ಹಿರಿದಾಗಿದೆ. 175 ಕೋಟಿ ರೂ. ಅದಿರು ಮಾರಾಟದ ಕುದ್ರೆಮುಖ ಪ್ರೊಜೆಕ್ಟ್ ಇನ್ನೊಂದು ಗಣನೀಯ ಉದ್ಯಮವಾಗಿದೆ. ಉದ್ಯಮಗಳು ಬೆಳೆಯಬೇಕೆಂಬ ದೃಷ್ಟಿಯಿಂದ ಮಂಗಳೂರಿನ ಬೈಕಂಪಾಡಿಯಲ್ಲಿ ಸ್ಥಳವನ್ನು ಮೀಸಲಿರಿಸಲಾಗಿದೆ.

ಉದ್ದಿಮೆಗಳ ಬೆಳವಣಿಗೆಗಾಗಿ ಸಾಲ ನೀಡುವ ಬ್ಯಾಂಕುಗಳ ಸಂಖ್ಯೆ ಹೆಚ್ಚಿದೆ. ಇಷ್ಟೇ ಅಲ್ಲದೆ ಉದ್ದಿಮೆಗಾಗಿ ಸಾಲ ನೀಡಲು ರಾಜ್ಯ ಉದ್ಯಮ ವಿಭಾಗ, ದಕ್ಷಿಣ ಕನ್ನಡ ಉದ್ಯಮ ಸಹಕಾರೀ ಬ್ಯಾಂಕು ಮತ್ತು ರಾಷ್ಟ್ರೀಯ ಸಣ್ಣ ಕೈಗಾರಿಕೆ ಕೋರ್ಪೋರೇಶನ್‌ಗಳನ್ನು ಸ್ಥಾಪಿಸಲಾಗಿದೆ.

ಕಿರು ಉದ್ಯಮಗಳು

ಮಂಗಳೂರು ಹಂಚಿನ ಉದ್ಯಮ ಇದರಲ್ಲಿ ಪ್ರಮುಖವಾಗಿದೆ. 1865ರಲ್ಲಿ ಬಾಸೆಲ್ ಮಿಶನ್ ಮೂಲಕ ಹಂಚಿನ ಉದ್ಯಮ ಆರಂಭವಾಯಿತು. ಮೊದಲ ಹಂತದಲ್ಲಿ ಈ ಹಂಚಿನ ಕಾರ್ಖಾನೆ 12 ಜನರ ದುಡಿಮೆಯಿಂದ ಆರಂಭಗೊಂಡು 560 ಹಂಚುಗಳನ್ನು ತಯಾರಿಸುತಿತ್ತು.

1972ರ ವೇಳೆ ಮಂಗಳೂರಿನಲ್ಲಿ 43 ಹಂಚಿನ ಕಾರ್ಖಾನೆಗಳಿದ್ದುವು. ಇಡಿಯ ಜಿಲ್ಲೆಯಲ್ಲಿ ಒಟ್ಟು 69 ಕಾರ್ಖಾನೆಗಳು ಜಿಲ್ಲೆಯಲ್ಲಿದ್ದು ಮಂಗಳೂರು ಹಂಚಿನ

ಉದ್ಯಮ ವ್ಯಾಪಕವಾಗಿ ಹರಡಿತು. ಈ ಹಂಚಿನ ಕಾರ್ಖಾನೆಗಳು ನಮ್ಮ ದೇಶದ ಮಾತ್ರವಲ್ಲ ಶ್ರೀಲಂಕ, ಬರ್ಮಾ, ಪೂರ್ವ, ಆಫ್ರಿಕಾ, ಆಸ್ಟ್ರೇಲಿಯಾ, ಮೊದಲಾದ ಬೇಡಿಕೆಗಳನ್ನು ಪೂರೈಸುತ್ತಿದ್ದವು.

ಹೀಗೆ ಹಂಚಿನ ಉದ್ಯಮ ಬೆಳೆಯಲು ಕಾರಣ ಕರಾವಳಿಯುದ್ದಕ್ಕೂ ಹಂಚಿಗೆ ಬೇಕಾದ ಮಣ್ಣು ಸಿಗುತ್ತಿದ್ದುದು. ನದೀ ತೀರದ ಹಿನ್ನೀರಿನ ಸ್ಥಳಗಳಲ್ಲೇ ಈ ಕಾರ್ಖಾನೆಗಳು ನಿರ್ಮಾಣಗೊಳ್ಳುತ್ತಿದ್ದು ಕಟ್ಟಿಗೆ ಮಣ್ಣು ಸಾಗಾಣಿಕೆ ಅನುಕೂಲವಾಗುತ್ತದೆ.

ಇದರ ಜೊತೆಗೆ ಮೊಸಾಯಿಕ್ ಟೈಲ್ಸ್‌ಗಳ ಉತ್ಪನ್ನವಿದೆ. ಇದರ ಬೇಡಿಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಜಿಲ್ಲೆಯ ಇನ್ನೊಂದು ಮುಖ್ಯ ಉದ್ಯಮವೆಂದರೆ ಗೇರು ಬೀಜದ ಉದ್ಯಮ. ಇದು ಇತ್ತೀಚೆಗೆ ಬೆಳೆಯುತ್ತ ಬಂದ ಉದ್ಯಮ. ಮಂಗಳೂರು ಈ ಉದ್ಯಮದ ಕೇಂದ್ರ. ಮಂಗಳೂರಿನ ನಂತರ ಇಡಿಯ ದೇಶಕ್ಕೆ ಈ ಉದ್ಯಮ ವ್ಯಾಪಿಸಿದೆ. ಈಗ ಈ ಉದ್ಯಮದ ಕೇಂದ್ರ ಕೇರಳದ ಕ್ವಿಲಾನ್. ಕ್ವಿಲಾನ್‌ನಲ್ಲಿ ಒಟ್ಟು ಉದ್ಯಮದ ಶೇಕಡಾ 80 ಪಾಲಿದ್ದರೆ ದಕ್ಷಿಣ ಕನ್ನಡ ಶೇಕಡಾ 12 ಪಾಲು ಉದ್ಯಮವನ್ನು ಬೆಳಿಸಿಕೊ೦ಂಡಿದೆ.

ಇದರ ಮುಖ್ಯ ಕೊರತೆಯೆಂದರೆ ದಕ್ಷಿಣ ಕನ್ನಡದ ಉದ್ಯಮಕ್ಕೆ ಪೂರೈಸುವಷ್ಟು ಗೇರು ಬೀಜ ಇಲ್ಲದಿರುವುದು. ಜಿಲ್ಲೆಯ ಸುಮಾರು 41,656 ಹೆಕ್ಟೇರುಗಳಲ್ಲಿ ಗೇರುಕೃಷಿಯನ್ನು ಮಾಡಲಾಗಿದೆ.

ಆದ್ದರಿಂದ ಕಚ್ಛಾ ಗೇರು ಬೀಜವನ್ನು ಆಮದು ಮಾಡುಕೊಳ್ಳಬೇಕಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಗೇರು ಬೀಜ ಉತ್ತರ ಕನ್ನಡ ಮತ್ತು ಕೇರಳದಿಂದ ಈ ಜಿಲ್ಲೆಗೆ ದೊರೆಯುತ್ತದೆ.

ಸಂಸ್ಕರಿಸಿದ ಗೇರುಬೀಜದ ರಫ್ತನ್ನು ಮಂಗಳೂರು, ಕಲ್ಲಿ ಕೋಟೆಗಳಿಂದ ಜಲಮಾರ್ಗದ ಮೂಲಕ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 13 ಗೇರುಬೀಜ ಸಂಸ್ಕರಣ ಕಾರ್ಖಾನೆಗಳಿವೆ. ಎಲ್ಲವೂ ಸೇರಿ 8000 ಜನರಿಗೆ ಕೆಲಸ ಕೊಡುತ್ತವೆ. ಗೇರುಬೀಜ ಸಂಸ್ಕರಣೆಯ ನಂತರ ಅದರ ಸಿಪ್ಪೆಯಿಂದ ಎಣ್ಣೆ ತೆಗೆಯುತ್ತಾರೆ. ಈ ಗೇರು ಬೀಜದ ಎಣ್ಣೆ ಮೋಪುಗಳ ಬಾಳಿಕೆಗೆ, ಹಡಗುಗಳ ಪೈಂಟ್‌ಗಳಿಗೆ ಬಳಕೆಯಾಗುತ್ತದೆ.

ಜಿಲ್ಲೆಯ ಇನ್ನೊಂದು ಪ್ರಮುಖ ಉದ್ಯಮ ಬೀಡಿ ಉದ್ಯಮ. ಮಂಗಳೂರು ಬೀಡಿಗಳು ಎಲ್ಲ ಕಡೆ ಪ್ರಚಾರ ಪಡೆದಿದೆ. ಬೀಡಿ ಕಟ್ಟುವ ಕೆಲಸದಿಂದಾಗಿ ಸಾಮಾನ್ಯ ಜನರಿಗೆ ಕೈ ತುಂಬಾ ಕೆಲಸವಂತೂ ಸಿಗುತ್ತದೆ. ಇಡಿಯ ಜಿಲ್ಲೆಯ 70,000ದಷ್ಟು ಜನ ಬೀಡಿ ಕಟ್ಟುತ್ತಿದ್ದಾರೆ.

ಈಗ ಬೀಡಿ ಕಟ್ಟುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬೀಡಿ ಉದ್ಯಮದಲ್ಲಿ ಒಟ್ಟು 17 ಫ್ಯಾಕ್ಟರಿಗಳು ನಮ್ಮ ಜಿಲ್ಲೆಯಲ್ಲಿ ತೊಡಗಿವೆ.

ಇತರ 46 ಬೇರೆ ಬೇರೆ ಉದ್ಯಮಗಳು ಜಿಲ್ಲೆಯಲ್ಲಿವೆ. ಅವು ತಾಂತ್ರಿಕ ಉಪಕರಣಗಳನ್ನು ತಯಾರಿಸುವ ಕಂಪೆನಿಗಳಾಗಿವೆ. ಮೋಟರ್ ಸ್ಪ್ಲಿಂಗ್‌ಗಳನ್ನು ತಯಾರಿಸುವ ಕಂಪೆನಿಗಳೂ ಇದೆ. ಬಾಲ್‌ ಬೇರಿಂಗ್‌ಗಳನ್ನು ತಯಾರಿಸುವ ಕಂಪೆನಿಗಳಿವೆ. ಲೋಹದ ತಂತಿಯನ್ನು ನಿರ್ಮಿಸುವ ಉದ್ಯಮಗಳಿವೆ.

ಅಲ್ಯೂಮಿನಿಯಂ ಕಂಪೆನಿಗಳು ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಸಾಮಾನ್ಯ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಸಾಮಾಗ್ರಿ ತಯಾರಿಕೆ, ಪ್ರಿಂಟಿಂಗ್ ಪ್ರೆಸ್‌ಗಳು, ಮತ್ಸೋದ್ಯಮದ ಕಾರ್ಖಾನೆಗಳು, ಎಂಸಿಎಫ್ ಮೊದಲಾದವು ಜಿಲ್ಲೆಯಲ್ಲಿ ಹೆಸರಾಂತ ಉದ್ಯಮಗಳಾಗಿವೆ.

ಹಾಗೆಯೇ ಟೆಕ್ಸೆಟಾಲ್ಸ್ ಉದ್ದಿಮೆ, ಮರದ ಉತ್ಪನ್ನಗಳು, ಬೇಕರಿಗಳು, ಕಾಫಿ ಕ್ಯೂರಿಂಗ್, ಅಕ್ಕಿಯ ಮಿಲ್ಲುಗಳು, ಎಣ್ಣೆಯ ಉದ್ಯಮಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟಿವೆ.

ನಶ್ಯ ಮತ್ತು ಸಾಬೂನು ತಯಾರಿಕೆಯ ವಹಿವಾಟುಗಳಿವೆ. ಕೈ ಮಗ್ಗಗಳಿಂದ ಬಟ್ಟೆಗಳನ್ನು ಉತ್ಪಾದಿಸುತ್ತಾರೆ. ಖಾದಿ ಗ್ರಾಮೋದ್ಯೋಗ ಇಲಾಖೆಯ ಕೈಗಾರಿಕೆಗಳಿವೆ. ಇನ್ನೂ ಗ್ರಾಮೀಣ ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ಕೊಡಲಾಗುತ್ತಿದೆ. ಜೇನು ಸಾಕಣೆ, ಬುಟ್ಟಿ ಹೆಣೆಯುವಿಕೆ, ಚಾಪೆ ಹೆಣೆಯುವುದು, ಮಡಕೆಗಳ ತಯಾರಿ, ಮರದ ಕೆತ್ತನೆ ಕೆಲಸ, ಕಮ್ಮಾರರ ಉದ್ಯೋಗ, ಬಂಗಾರ ಮಾಡುವುದು, ಬೆಲ್ಲ ತಯಾರಿಸುವ ಕೆಲಸ, ಮತ್ತು ರಬ್ಬರ್ ಉದ್ಯಮ ಇವುಗಳಿಗೆಲ್ಲ

ಸಾಕಷ್ಟು ಪ್ರೋತ್ಸಾಹ ಜಿಲ್ಲೆಯಲ್ಲಿದೆ. ಉದ್ಯಮದ ಗತಿ ತೀವ್ರವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಭಾರತ ಆಧುನಿಕತೆಯ ಕಡೆ ತೀವ್ರಗತಿಯಲ್ಲಿ ಸರಿಯುವುದು ತಿಳಿಯುತ್ತಿದೆ.

ಜಿಲ್ಲೆಯ ಕೆಲವು ಪ್ರಮುಖ ಉದ್ಯಮಗಳು

ಜಿಲ್ಲೆಯಲ್ಲಿ ಈಗ 638 ದೊಡ್ಡ ಕಾರ್ಖಾನೆಗಳಿದ್ದು, ಒಟ್ಟು ಸು 50,000 ಜನರಿಗೆ ಉದ್ಯೋಗ ನೀಡುತ್ತಿವೆ. ಅಟೊಮೊಬೈಲ್, ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ಸ್, ರಾಸಾಯನಿಕ, ಲೋಹ, ಆಹಾರ, ಬೀಡಿ ಕಟ್ಟುವಿಕೆ, ಗ್ಲಾಸ್ ಮತ್ತು ಪಿಂಗಾಣಿ, ರಿಪೇರಿ, ಚರ್ಮ, ಎಂಜಿನಿಯರಿಂಗ್, ಪ್ರಿಂಟಿಂಗ್, ರಬ್ಬರ್ ಮತ್ತು ಪ್ಲಾಸ್ಟಿಕ್, ಬಟ್ಟೆ ನೇಯ್ಗೆ, ಮರದ ಉದ್ಯಮ, ಚಾಪೆ ಮತ್ತು ಬಟ್ಟೆ ತಯಾರಿ, ತೆಂಗಿನ ನಾರಿನ ವಸ್ತುಗಳು, ಗೇರುಬೀಜ ಸಂಸ್ಕರಣ, ಇಂಜಿನಿಯರಿಂಗ್ ವಸ್ತುಗಳು, ಹಂಚು, ಪೀಠೋಪಕರಣ, ಗ್ರಾನೈಟ್ ಮತ್ತು ಮುರಕಲ್ಲು, ಇಟ್ಟಿಗೆ ಮೊದಲಾದವು. ಇಲ್ಲಿನ ಕೆಲವು ಮುಂಬಯಿ ಉದ್ಯಮಗಳು, ಬೆಳೆಯುತ್ತಿರುವ ಉದ್ಯಮ ಕ್ಷೇತ್ರವು ಹೊಸ ಉದ್ಯೋಗವಕಾಶಗಳನ್ನು ನಿರ್ಮಿಸಿದ್ದು ಕೃಷಿಯ ಅವಲಂಬನೆ ಕಡಿಮೆಯಾಗುತ್ತಿದೆ.

ಬ್ಯಾಂಕಿಂಗ್ ವ್ಯವಹಾರ

ಬ್ಯಾಂಕಿಂಗ್ ವ್ಯವಹಾರ ಜಿಲ್ಲೆಯಲ್ಲಿ ಪ್ರಾರಂಭವಾಗುವ ಮೊದಲು ಹಣದ ಲೇವಾದೇವಿ ನಿಧಿ ರೂಪದಲ್ಲಿ ಇತ್ತು. ಈ ನಿಧಿಯ ವಿಧಿಗಳು ಒಂದು ರೀತಿಯಲ್ಲಿ ಸಹಕಾರೀ ತತ್ವದ ಮೇಲೆ ರೂಪುಗೊಂಡಿದ್ದವು. ಈಗಲೂ ಈ ನಿಧಿಯ ರೂಪದ ಲೇವಾದೇವಿ ಸಂಸ್ಥೆಗಳು ಹತ್ತು ಜನರ ಒಪ್ಪಂದದ ಮೇಲೆ ನಡೆಯುವುದನ್ನೂ ನಾವು ನೋಡಬಹುದು.

ಇದನ್ನು ಹೊರತು ಪಡಿಸಿದರೆ ಹಳ್ಳಿಯಲ್ಲಿ 'ಬಡ್ಡಿ ಸಾಹುಕಾರರು' ಇದ್ದರು. ಬಂಗಾರ, ಭೂಮಿಯನ್ನು ಅಡವಿಟ್ಟುಕೊಂಡು ಇವರು ಹಣವನ್ನು ನೀಡುತ್ತಿದ್ದರು. ಹಾಗೆಯೆ ವಸ್ತುವನ್ನು ಸಾಲವಾಗಿ ಕೊಟ್ಟು ಅದರ 1 1/2ವಟ್ಟು ವಸೂಲಿಯನ್ನು ವಸ್ತುವಿನ ರೂಪದಲ್ಲಿ ಪಡೆಯುವ ಕ್ರಮವಿತ್ತು. ಇದಕ್ಕೆ 'ಪೊಲಿ' ಎಂದು ಕರೆಯುವ ಕ್ರಮವಿದೆ. ಇದೂ ಹಳ್ಳಿಗಳಲ್ಲಿ ಇನ್ನೂ ನಡೆಯುತ್ತಿರುವಂತಹ ವ್ಯವಹಾರ.

ಮನಿಲೆಂಡರ್ಸ್ ಕಾಯಿದೆ ಪ್ರಕಾರ ಪ್ರೊಮಿಸರಿ ನೋಟ್ಸ್‌ಗಳಲ್ಲಿ ಎಲ್ಲ ಶರ್ತಗಳನ್ನು ಬಳಸಿಕೊಂಡು ಬಡ್ಡಿಯನ್ನು ಸಿಕ್ಕಾಪಟ್ಟೆ ವಸೂಲಿ

ಮಾಡುತ್ತಿದ್ದುದುಂಟು. ಇವೆಲ್ಲದರ ನಡುವೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯಮ ನಿಧಾನವಾಗಿ ಬೆಳೆಯಿತು.

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಆರ್ಥಿಕ ಪ್ರಗತಿಗೆ ಬ್ಯಾಂಕಿಂಗ್‌ ಕ್ಷೇತ್ರದ ಕೊಡುಗೆ ಬಹಳ ದೊಡ್ಡದು. ಇಂದು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಬ್ರ್ಯಾಂಚುಗಳಿರುವ ಹಲವು ಬ್ಯಾಂಕುಗಳು ದಕ್ಷಿಣ ಕನ್ನಡದ ಹೆಮ್ಮೆಯ ಕೊಡುಗೆ ಎಂದು ಹೇಳಬಹುದು. ಬ್ಯಾಂಕಿಂಗ್ ಕ್ಷೇತ್ರಗಳು ಉದ್ಯಮ ಕ್ಷೇತ್ರವನ್ನು ಧಾರಾಳವಾಗಿ ಬೆಳೆಸಿದವು. ಹಾಗೆಯೇ ನಿರುದ್ಯೋಗದ ಸಮಸ್ಯೆಯನ್ನು ಬಹುಪಾಲು ನಿವಾರಿಸಿದವು.

ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ನಾಲ್ಕು ಬ್ಯಾಂಕು ಈ ಜಿಲ್ಲೆಯಲ್ಲಿ ಹುಟ್ಟಿದವು ಎಂಬುದು ಗಮನಾರ್ಹ.

ಕೆನರಾಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್‌ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳು ಅಂತಹ ಬ್ಯಾಂಕುಗಳಾಗಿದ್ದು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿವೆ. ಅಲ್ಲದೆ ಕರ್ನಾಟಕ ಬ್ಯಾಂಕ್ ಒಂದು ಪ್ರಮುಖ ಪ್ರಾದೇಶಿಕ ಬ್ಯಾಂಕ್ ಆಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕೂಡ, ಗಣನೀಯ ವ್ಯವಹಾರ ಹೊಂದಿದ್ದು, ದಕ್ಷ ಸಹಕಾರಿ ಬ್ಯಾಂಕ್ ಎಂದು ಖ್ಯಾತಿ ಗಳಿಸಿದೆ.

ಹೋಟೆಲ್ ಉದ್ಯಮ

ದಕ್ಷಿಣ ಕನ್ನಡದಲ್ಲಿ ಹುಟ್ಟಿ ದೇಶಾದ್ಯಂತ ವಿಸ್ತರಿಸಿದ ಉದ್ಯಮಗಳಲ್ಲಿ ಬ್ಯಾಂಕಿಂಗ್ ಒಂದಾದರೆ ಹೋಟೇಲು ಉದ್ಯಮ ಇನ್ನೊಂದು. ಇಂದು ದೇಶಾದ್ಯಂತ ಉಡುಪಿ ಹೋಟೇಲುಗಳಿಗೆ ವಿಶಿಷ್ಟವಾದ ಮನ್ನಣೆಯಿದೆ. ಮುಖ್ಯವಾಗಿ ಜಿಲ್ಲೆಯ ಸಾಹಸಿಗಳು ಮುಂಬೈಯಂಥ ಮುಖ್ಯ ನಗರಗಳಿಗೆ ಹೋಗಿ ಹೋಟೇಲು ಉದ್ಯಮವನ್ನು ಬೆಳೆಸಿದರು. ಇದರಿಂದಾಗಿ ಜಿಲ್ಲೆಗೆ ಹೊರಗಿನಿಂದ ಸಂಪತ್ತು ಹರಿದು ಬರುವಂತಾಯಿತು. ಜಿಲ್ಲೆಯ ಜನರ ಬಡತನವೂ ನೀಗಿತು.

ಇಂದು ಮುಂಬೈ ಮಾತ್ರವಲ್ಲದೆ ದೇಶದ ಎಲ್ಲೆಡೆ ದಕ್ಷಿಣ ಕನ್ನಡದವರ ಹೋಟೇಲುಗಳ ಉದ್ಯಮ ಪ್ರಖ್ಯಾತವಾಗಿದೆ. ಮುಂಬೈ, ಮದ್ರಾಸ್, ಡೆಲ್ಲಿಗಳಲ್ಲಿ ಎಲ್ಲ ಕಡೆ ಜಿಲ್ಲೆಯ ಹೋಟೇಲು ಉದ್ಯಮ ವಿಸ್ತರಿಸಿದೆ. ಎಲ್ಲ ರಾಜ್ಯಗಳ ಸಣ್ಣ ಸಣ್ಣ ನಗರಗಳಲ್ಲೂ ಹೋಟೇಲು ಈ ಜಿಲ್ಲೆಯ ಸಾಮಾನ್ಯ ಜನರು ನಡೆಸುವುದನ್ನು

ನೋಡಬಹುದು.

ಬ್ಯಾಂಕಿಂಗ್ ಮತ್ತು ಹೋಟೇಲು ಉದ್ಯಮಿಗಳಿಂದ ದಕ್ಷಿಣ ಕನ್ನಡದ ಆರ್ಥಿಕ ಪ್ರಗತಿಗೆ ಹೊಸ ಚೈತನ್ಯ ಬಂದಿದೆ. ಇದರ ಜೊತೆಗೆ ಬೇರೆ ಬೇರೆ ರೀತಿಯ ಉದ್ಯಮಶೀಲತೆ ಬೆಳೆದು ಬಂದಿರುವುದನ್ನು ನೋಡಬಹುದು. ಜಿಲ್ಲೆಯವರ ಉದ್ಯಮ ಸಾಹಸ ಪ್ರವೃತ್ತಿ ಈ ದಿಸೆಯಲ್ಲಿ ಸ್ತುತ್ಯಾರ್ಹವಾದುದು. ಜಿಲ್ಲೆಯಲ್ಲಿ ಬಡತನದಿಂದ ಕಂಗಲಾಗಿ ಬರಿಗೈಯಲ್ಲಿ ಊರು ಬಿಟ್ಟು ಹೋದ ಜನ ಶ್ರೀಮಂತರಾಗಿ ವಾಪಾಸು ಬಂದಿರುವುದನ್ನು ನಾವು ಕಾಣುತ್ತೆವೆ.

ಬ್ಯಾಂಕುಗಳ ಪ್ರಗತಿಯಿಂದಾಗಿ ಜಿಲ್ಲೆಯ ವ್ಯವಹಾರ ವಾಣಿಜ್ಯ ಚಟುವಟಿಕೆಗಳೂ ವಿಸ್ತರಿಸಿವೆ. ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ಮೇಲೆ ಅನೇಕ ಯೋಜನೆಗಳ ಮೂಲಕ ಕೃಷಿಕರಿಗೆ ಹಾಗೂ ಉದ್ಯಮಿಗಳಿಗೆ ಸಾಲವನ್ನು ನೀಡಿ ಪ್ರೋತ್ಸಾಹಿಸಿವೆ.

ಈ ರೀತಿಯ ಬೆಳವಣಿಗೆಯ ಮೂಲಕ ಜಿಲ್ಲೆಯಲ್ಲಿ ವ್ಯಾಪಕವಾಗಿ ಆಧುನಿಕತೆಯ ಗಾಳಿ ಬೀಸಲಾರಂಭಿಸಿದೆ. ಸರಕಾರ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮೇಲೆ ಉಂಟಾದ ತೊಂದರೆಗಳ ಪರಿಹಾರಕ್ಕಾಗಿ ಎಂಬಂತೆ ಫೈನಾನ್ಸ್ ಕಂಪೆನಿಗಳು ಅಪಾರ ಸಂಖ್ಯೆಯಲ್ಲಿ ಹುಟ್ಟಿವೆ.

ಸಾರಿಗೆ ಸಂಪರ್ಕ ಸಾಧನ

ಜಿಲ್ಲೆಯಲ್ಲಿ ಸಂಪರ್ಕ ಸಾಧನೆಗಳ ಅಭಿವೃದ್ಧಿ ಚೆನ್ನಾಗಿದೆ. ಮೊದಮೊದಲು ರಸ್ತೆಯ ಸಂಪರ್ಕಗಳಲ್ಲದೆ ಜಿಲ್ಲೆಯಲ್ಲಿ ಹೊಳೆಗಳಿಂದಾಗಿ ಪ್ರತಿಯೊಂದು ಪ್ರದೇಶವೂ ಒಂದೊಂದು ದ್ವೀಪವಾಗಿತ್ತು. ಕ್ರಮೇಣ ಬ್ರಿಟಿಷರ ಆಗಮನದ ನಂತರ ಹೊಳೆಗಳಿಗೆ ಸೇತುವೆಗಳು, ಪಶ್ಚಿಮ ಘಟ್ಟದಲ್ಲಿ ರಸ್ತೆಗಳು ನಿರ್ಮಾಣಗೊಂಡವು. ಇಂದು ಬೆಂಗಳೂರು, ಮುಂಬೈ, ಶಿವಮೊಗ್ಗ ಎಲ್ಲಾ ಪ್ರಾಂತ್ಯಗಳ ಕಡೆಗೆ ಹೋಗಲು ಪಶ್ಚಿಮ ಘಟ್ಟದಲ್ಲಿ ನಾಲೈದು ಕಡೆ ರಸ್ತೆಗಳನ್ನು ಮಾಡಲಾಗಿದೆ. ಇದರಿಂದ ಸರಕು ಸಾಗಾಣಿಕೆ ಹೆಚ್ಚಾಗಿ ಬೆಳೆದಿದೆ. 1953ನೇ ಇಸವಿಯಲ್ಲಿ ಮಂಗಳೂರಿನಿಂದ ಉಡುಪಿಗೆ ಹೋಗಲು ನಾಲ್ಕು ನದಿಗಳನ್ನು ದೋಣಿಯಲ್ಲಿ ದಾಟಬೇಕಾಗಿತ್ತು.

ಹಾಗೆಯೇ ಪ್ರತಿಯೊಂದು ಗ್ರಾಮವೂ ಮುಖ್ಯ ಪಟ್ಟಣಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ರಸ್ತೆಗಳನ್ನು ಮಾಡಲಾಗಿದೆ. ಇದರಿಂದ ಉದ್ಯಮಕ್ಕೆ ಸಹಾಯವಾಗಿದೆ.

ರಸ್ತೆಯಿಂದ ವಿದ್ಯುದ್ದೀಪಗಳಿಂದ ಹಾಗೂ ಫೋನುಗಳಿಂದ ಸಂಪರ್ಕ ಪಡೆದ ಹಳ್ಳಿಗಳು ಕೂಡ ಇಂದು ಕಾಲಕ್ಕೆ ತಕ್ಕಂತೆ ಬದಲಾಗಿವೆ.

ಸೇತುವೆಗಳಿಲ್ಲದೆ ಸಂಪರ್ಕ ಮೊದಲು ಕಷ್ಟವಾಗಿತ್ತು. ಈ ದಿಸೆಯಲ್ಲಿ ನೇತ್ರಾವತಿ, ಗುರುಪುರ, ಹಾಲಾಡಿ, ಗಂಗೊಳ್ಳಿಯಂತಹ ದೊಡ್ಡ ಹೊಳೆಗಳಿಗೂ ಸೇತುವೆಯನ್ನು ನಿರ್ಮಿಸಿ ಸಂಪರ್ಕವನ್ನು ತೀವ್ರಗತಿಯಲ್ಲಿ ಬೆಳೆಸಲಾಗಿದೆ.

ಪ್ರಯಾಣ ಸೌಕರ್ಯದಲ್ಲಿ ನಮ್ಮ ಜಿಲ್ಲೆ ಇಡೀ ದೇಶದಲ್ಲಿ ಅತ್ಯಂತ ಅಭಿವೃದ್ಧಿಯನ್ನು ಸಾಧಿಸಿದಂತಾಗಿದೆ. ಜಿಲ್ಲೆಯಲ್ಲಿ ಖಾಸಗಿ ವಾಹನಗಳಿಂದಾಗಿ ಬಸ್ಸಿನ ವ್ಯವಸ್ಥೆಯಲ್ಲಿ ಸ್ಪರ್ಧೆ ಏರ್ಪಟ್ಟು ಎಲ್ಲ ಗ್ರಾಮಗಳಿಗೂ ಪ್ರಯಾಣ ಸೌಲಭ್ಯ ಅತ್ಯಂತ ಅನುಕೂಲಕರವಾಗಿದೆ.

ಪ್ರಯಾಣದ ಸೌಲಭ್ಯ ಹೆಚ್ಚಿದಂತೆ ಯಾತ್ರಿಕರ ಸಂಖ್ಯೆಯೂ ಅಪಾರವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗವೇ ಬೇರೆ ಪ್ರದೇಶದವರಿಗೆ ಒಂದು ರಮ್ಯ ಅನುಭವ. ಇಷ್ಟೇ ಅಲ್ಲದೆ ದಕ್ಷಿಣ ಕನ್ನಡದ ಉಡುಪಿ, ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ ಮುಂತಾದ ಧಾರ್ಮಿಕ ಕ್ಷೇತ್ರಗಳೂ ಅಪಾರ ಸಂಖ್ಯೆಯಲ್ಲಿ ಯಾತ್ರಿಕರನ್ನು ಆಕರ್ಷಸುತ್ತವೆ. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿಯೂ ಬೆಳವಣಿಗೆಯಾಗಿದೆ.

ನಮ್ಮ ಜಿಲ್ಲೆಯ ಪ್ರದೇಶಗಳಿಗೆ ಏಕಸೂತ್ರವಾಗಿ ಪ್ರಯಾಣ ಮಾಡುವಂತೆ ಯಾತ್ರಿಕರು ಒಂದೆ ದಿನದಲ್ಲಿ ಎಲ್ಲ ಕ್ಷೇತ್ರಗಳನ್ನು ನೋಡುವಂತೆ ಪ್ರಯಾಣದ ವ್ಯವಸ್ಥೆಯನ್ನು ಯಾರು ಮಾಡಿಲ್ಲ. ದೆಹಲಿಯಿಂದ ಬೇರೆ ಬೇರಿ ಕಡೆಯ ಯಾತ್ರಾರ್ಥಿಗಳು ಒಂದೇ ದಿನದಲ್ಲಿ ಯಾತ್ರಾಸ್ಥಳಗಳನ್ನು ಸಂದರ್ಶಿಸಲು ವ್ಯವಸ್ಥೆಯಿರುವಂತೆ ನಮ್ಮ ದಕ್ಷಿಣ ಕನ್ನಡದ ಉದ್ದಗಲಗಳಲ್ಲಿ ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಬಲ್ಲ ಟೂರಿಸ್ಟ್ ಬಸ್ಸುಗಳ ಅಗತ್ಯ ದಕ್ಷಿಣ ಕನ್ನಡದಲ್ಲಿ ಇದೆ.

ಜಲಮಾರ್ಗಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಾಲೈದು ಬಂದರುಗಳಿವೆ. ಮಂಗಳೂರು, ಮುಲ್ಕಿ, ಮಲ್ಪೆ, ಹಂಗಾರಕಟ್ಟೆ, ಕುಂದಾಪುರ, ಬೈಂದೂರುಗಳಲ್ಲಿ ಬಂದರಿನ ವ್ಯವಸ್ಥೆಗಳಿವೆ. ಮಂಗಳೂರು ಬಂದರನ್ನು ದೇಶವಿದೇಶಗಳ ಸರಕು ಸಾಗಣೆಗಳಿಗೆ ಅನುಕೂಲವಾಗುವಂತೆ ದೊಡ್ಡ ಬಂದರಾಗಿ ಯೋಜಿಸಲಾಗಿದೆ. ಸಂಪರ್ಕ ಸಾಧನಗಳ ದೃಷ್ಟಿಯಲ್ಲಿ ಮಂಗಳೂರು ಹಾಸನ ರೈಲ್ವೆಯು ಒಂದು ದೊಡ್ಡ ಸಾಧನೆಯಾಗಿದೆ. ಈ ರೈಲು ದಾರಿಯು ಬೆಂಗಳೂರು ಹಾಗೂ ಕರ್ನಾಟಕದ ಅನೇಕ ಪಟ್ಟಣಗಳನ್ನು ಸಂಪರ್ಕಿಸುತ್ತದೆ.

ವಾಯುಮಾರ್ಗದ ಬಗ್ಗೆ ಯೋಚಿಸಿದರೆ ಮಂಗಳೂರಿನ ಬಜಪೆಯಲ್ಲಿ ಒಂದು ವಿಮಾನ ನಿಲ್ದಾಣವಿದೆ. ಇಲ್ಲಿಂದ ದೇಶ ವಿದೇಶಗಳ ಪ್ರಯಾಣಕ್ಕೆ ಅನುಕೂಲವನ್ನು ಏರ್ಪಡಿಸಲಾಗಿದೆ. ಇದರ ಜತೆಗೆ ಭಾರತ ಸರಕಾರದ ಅಂಚೆ ಇಲಾಖೆ ಎಲ್ಲ ಕಡೆಯಂತೆ ಜಿಲ್ಲೆಯಲ್ಲೂ ಸಮರ್ಪಕವಾಗಿ ಸಂಪರ್ಕವನ್ನು ಏರ್ಪಡಿಸಿದೆ.

ಇದರ ಜೊತೆಗೆ ಮಂಗಳೂರಿನಲ್ಲಿ ಆಕಾಶವಾಣಿ ಕೇಂದ್ರವಿದೆ. ಹೀಗೆ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಸಾಂಸ್ಕೃತಿಕವಾಗಿ ತನ್ನ ವೈಶಿಷ್ಟ್ಯವನ್ನು ತೋರಿಸಿಕೊಳ್ಳುತ್ತ ದಕ್ಷಿಣ ಕನ್ನಡ ಜಿಲ್ಲೆಯೂ ಎಲ್ಲ ದೃಷ್ಟಿಯಿಂದಲೂ ಮುಂದುವರಿದಿದೆ.

ಕೊಂಕಣ ರೈಲು

ದೂರಗಾಮಿ ಪರಿಣಾಮವುಳ್ಳ ಕೊಂಕಣರೈಲು ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರಿಂದಾಗಿ ಜಿಲ್ಲೆಯ ಆರ್ಥಿಕತೆ, ಜನ ಜೀವನವು ಬಹಳವಾಗಿ ಪ್ರಭಾವಿತವಾಗಲಿದೆ. ಮಂಗಳೂರು ಮುಂಬಯಿಗಳೊಳಗಿನ ದೂರವನ್ನು ಸುಮಾರು ಹದಿನೈದು ಗಂಟೆಗಳಿಗೆ ಸೀಮಿತಗೊಳಿಸುವ ಈ ರೈಲು ಮಾರ್ಗವು ಕರಾವಳಿಯ ಉದ್ದಕ್ಕೂ ಮತ್ತು ದೇಶದ ಇತರ ಭಾಗಗಳಿಗೂ ಸಂಚಾರ ಅವಕಾಶಗಳನ್ನು ಬಳಪಡಿಸಲಿದೆ. ರಸ್ತೆ ಸಾರಿಗೆಯ ಮೇಲಿನ ಒತ್ತಡವೂ ಇದರಿಂದ ಕಡಿಮೆ ಆಗಲಿದ್ದು ಉದ್ಯಮ ಉದ್ಯೋಗಗಳ ಅಭಿವೃದ್ಧಿಗೆ ಪೋಷಕವಾಗಲಿದೆ.

ಯಕ್ಷಗಾನ
ಈ ಪ್ರದೇಶಕ್ಕೆ ಸಾಂಸ್ಕೃತಿಕ ವೈಶಿಷ್ಟ್ಯವನ್ನಿತ್ತ ಒಂದು ಮುಖ್ಯ ಸಂಗತಿ ಎಂದರೆ ಯಕ್ಷಗಾನ. ಭಾರತದ ಅತ್ಯಂತ ಜೀವಂತ ಸಾಂಪ್ರದಾಯಿಕ ರಂಗಭೂಮಿಯಾದ ಯಕ್ಷಗಾನ ಇಂದು ವಿಶ್ವಮಾನ್ಯತೆ ಗಳಿಸಿದೆ. ಕರಾವಳಿಯ ಜನಜೀವನದಲ್ಲಿ ಹಾಸುಹೊಕ್ಕಾಗಿ ನಿತ್ಯ ಜೀವನದ ಒಂದು ಭಾಗವಾಗಿರುವ ಯಕ್ಷಗಾನಶತಮಾನಗಳಿಂದ ರಂಜನೆ ಮತ್ತು ಶಿಕ್ಷಣಗಳನ್ನು ಒದಗಿಸುತ್ತ ಬಂದಿದ್ದು, ಜನರಲ್ಲಿ

ಕಲಾಪ್ರಜ್ಞೆಯನ್ನು, ಕನ್ನಡ ಭಾಷೆಯ ಅರಿವನ್ನೂ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸುಮಾರು ನಾಲ್ಕು ಶತಮಾನಗಳಿಗೂ ಮಿಕ್ಕಿದ ಇತಿಹಾಸವುಳ್ಳ ಈ ಕಲೆ ಸಂಗೀತ, ನೃತ್ಯ, ಸಾಹಿತ್ಯ, ಶಿಲ್ಪ, ಪುರಾಣ ವಸ್ತು ಮತ್ತು ಸಾಹಿತ್ಯಗಳ ಸುಂದರ ಮಿಶ್ರಣವಾಗಿದ್ದು ಪ್ರತಿಯೊಂದು ಅಂಗದಲ್ಲೂ ಖಚಿತ ಶೈಲಿಯನ್ನೂ ಅಸಾಧಾರಣ ಸೌಂದರ್ಯವನ್ನೂ ತುಂಬಿಕೊಂಡಿದೆ. ಚಂಡೆ, ಮದ್ದಳೆಗಳ ಮೈನವಿರೇಳಿಸುವ ಹಿಮ್ಮೇಳದೊಂದಿಗೆ, ಭಾಗವತರು ಹಾಡುವ ಪದ್ಯಗಳ ಆಧಾರದಲ್ಲಿ ಕುಣಿತ, ರಂಗ ತಂತ್ರಗಳೊಂದಿಗೆ ಪಾತ್ರಧಾರಿಯು ಸ್ವಂತ ಮಾತುಗಾರಿಕೆಯನ್ನು ಬೆಳೆಸಿ ರಚಿಸುವ ಈ ರಂಗಪ್ರಕಾರವು ಇಡಿ ರಾತ್ರಿ ನಡೆಯುವ ಪ್ರದರ್ಶನ.

ಯಕ್ಷಗಾನದಲ್ಲಿ ತೆಂಕು-ಬಡಗು ಎಂಬ ಎರಡು ಪ್ರಭೇದಗಳಿವೆ. ಪಡುಬಿದ್ರಿಯ ಉತ್ತರಕ್ಕಿರುವುದು ಬಡಗು ತಿಟ್ಟು, ದಕ್ಷಿಣಕ್ಕಿರುವುದು ತೆಂಕುತಿಟ್ಟು. ಇವುಗಳಲ್ಲಿ ವೇಷ, ನೃತ್ಯ, ಗಾನ, ವಾದನಗಳಲ್ಲಿ ವ್ಯತ್ಯಾಸವಿದ್ದರೂ ಅವು ಒಂದೇ ಕಲೆಯ ಎರಡು ಕವಲುಗಳು. ತೆಂಕುತಿಟ್ಟು ಹೆಚ್ಚು ತಾಂಡವ ಪ್ರಕೃತಿಯದು, ಬಡಗುತಿಟ್ಟು ಲಾಸ್ಯ ಸ್ವಭಾವದ್ದು.

ಇದೀಗ ಸುಮಾರು ಇಪ್ಪತ್ತು ಯಕ್ಷಗಾನ ಮೇಳಗಳೂ, ಇನ್ನೂರಕ್ಕೂ ಮಿಕ್ಕಿ ಹವ್ಯಾಸಿ ತಂಡಗಳು ಸಕ್ರಿಯವಾಗಿದ್ದು, ಮೇಳಗಳು ನವಂಬರ್ ಮೇ ತಿಂಗಳುಗಳ ಅವಧಿಯಲ್ಲಿ ನಿತ್ಯಪ್ರದರ್ಶನ ನೀಡುತ್ತ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಸಂಚರಿಸುತ್ತವೆ.

ಆಧುನಿಕ ಕಾಲದ ಒತ್ತಡಗಳ ಮಧ್ಯೆಯೂ ತಿರುಗಾಟದ ಮೇಳಗಳು ಜೀವಂತವಾಗಿರುವುದು ಗಮನಾರ್ಹ ವಿದ್ಯಮಾನ. ವೇಷ ಭೂಷಣ ನೃತ್ಯಗಳಿಲ್ಲದೆ, ವೇದಿಕೆಯಲ್ಲಿ ಕುಳಿತು ಮಾತುಗಾರಿಕೆಯ ಮೂಲಕ ಪ್ರದರ್ಶನ ನಡೆಸುವ ತಾಳಮದ್ದಲೆ ಎಂಬ ಯಕ್ಷಗಾನ ಪ್ರಕಾರವು ತುಂಬ ವಿಶಿಷ್ಟವಾದದ್ದು. ಅಸಾಧಾರಣ ಪಾಂಡಿತ್ಯ ಕ್ಷೇತ್ರವಾಗಿದೆ. ವಿಶೇಷತಃ ಮಳೆಗಾಲದಲ್ಲಿ ತಾಳಮದ್ದಲೆಗಳ ಪ್ರದರ್ಶನ ಹೆಚ್ಚು. ಯಕ್ಷಗಾನವು ಗೊಂಬೆಯಾಟದ ರೂಪದಲ್ಲೂ ಪ್ರಚಲಿತವಿದೆ. ಸುಮಾರು ಸಾವಿರದ ಐನೂರು ಕುಟುಂಬಗಳು ವ್ಯವಸಾಯಿಕವಾಗಿ ಯಕ್ಷಗಾನವನ್ನು ಪ್ರತ್ಯಕ್ಷ ಪರೋಕ್ಷವಾಗಿ ಅವಲಂಬಿಸಿವೆ. ಜಿಲ್ಲೆಯಲ್ಲಿ ಎರಡು ಯಕ್ಷಗಾನ ಕೇಂದ್ರಗಳಿವೆ.

(ಉಡುಪಿ, ಧರ್ಮಸ್ಥಳ). ಡಾ। ಶಿವರಾಮ ಕಾರಂತರು ಯಕ್ಷಗಾನ ಅಧ್ಯಯನ ಮತ್ತು ಪ್ರಾಯೋಗಿಕ ರಂಗಭೂಮಿಗಳ ಆದ್ಯರಾಗಿದ್ದು, ಅವರು ಪ್ರಾರಂಭಿಸಿದ ಅಧ್ಯಯನವನ್ನು ಹಲವು ವಿದ್ವಾಂಸರು ಮುಂದುವರಿಸಿದ್ದು, ಅನೇಕ ಉತ್ತಮ ಅಧ್ಯಯನಗಳು ಹೊರ ಬಂದಿದೆ.

1930, 1950 ಮತ್ತು 1970ರಲ್ಲಿ ಯಕ್ಷಗಾನದಲ್ಲಿ ದೊಡ್ಡ ಬದಲಾವಣೆಗಳು ಕಾಣಿಸಿಕೊಂಡು, ಕಂಪನಿ ನಾಟಕಗಳ ಪ್ರಭಾವ, ವಿದ್ಯುಚ್ಛಕ್ತಿಯ ಬಳಕೆ, ವೇಷ ವಿಧಾನದಲ್ಲೂ ಮತ್ತು ಯಕ್ಷಗಾನದ ವಸ್ತುವಿನ ಪರಿವರ್ತನೆಗಳು ಉಂಟಾದವು. 1950ರವರೆಗೆ ಧರ್ಮಾರ್ಥವಾಗಿ ಹರಕೆ ಬಯಲಾಟವಾಗಿ ಪ್ರದರ್ಶಿತವಾಗುತ್ತಿದ್ದ ಕಾಲ. ಈ ಕಲೆ, ಅನಂತರ ಸಂಚಾರಿ ರಂಗಮಂದಿರ (ಟೆಂಟ್ ಥಿಯೇಟರ್) ಗಳಲ್ಲಿ ಪ್ರದರ್ಶಿತವಾಗತೊಡಗಿತು. ಜೊತೆಗೆ ಹರಕೆ ಬಯಲಾಟಗಳೂ ಮುಂದುವರಿದಿವೆ. ಹರಕೆ ಬಯಲಾಟಗಳಿಗೂ ದೊಡ್ಡ ಪ್ರೋತ್ಸಾಹ ಇದೆ. ಕೆಲವು ಕ್ಷೇತ್ರಗಳ ಹರಕೆ ಆಟಗಳು ಮುಂದಿನ ಮೂರು ವರ್ಷಗಳಿಗೆ ಈಗಾಗಲೇ ಮುಂಗಡ ಕಾದಿರಿಸಲ್ಪಟ್ಟಿವೆ. ಬೇಸಗೆ ಕಾಲವಲ್ಲದೆ ಈಗ ಮಳೆಗಾಲದಲ್ಲೂ, ಸಭಾಭವನಗಳಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತದೆ. ದೂರದ ಊರುಗಳಿಗೆ ತಂಡಗಳು ಪ್ರವಾಸ ಹೋಗುವುದು ಮಳೆಗಾಲದಲ್ಲಿ. ಶಾಲಾ ಕಾಲೇಜು, ವರ್ಧಂತ್ಯುತ್ಸವ, ಯುವಕ ಸಂಘಗಳ ಸಮಾರಂಭಗಳಲ್ಲೂ ಯಕ್ಷಗಾನವು ಒಂದು ಅನಿವಾರ ಅಂಗವೆಂಬಂತೆ ಸೇರಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಮೇಳಗಳೂ ಉದಿಸಿವೆ. ಹವ್ಯಾಸಿ ವ್ಯವಸಾಯಿ ಚಟುವಟಿಕೆಗಳು ಭರದಿಂದ ಹೆಚ್ಚುತ್ತಿವೆ.

ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನವು 1950ರಿಂದ ಈ ಜಿಲ್ಲೆಯ ಮುಖ್ಯ ಜನಭಾಷೆಯಾದ ತುಳುವಿನಲ್ಲೂ ಅವತರಿಸಿತು. ತುಳು ಯಕ್ಷಗಾನದ ಉದಯವು, ಸಾಂಸ್ಕೃತಿಕ ವಿಕೇಂದ್ರಿಕರಣ ಬಹುಪ್ರಕ್ರಿಯೆಯಾಗಿದ್ದು ಆವರೆಗೆ ಅವಕಾಶವಿಲ್ಲದ ಜನರಿಗೆ, ಅಭಿರುಚಿಗೆ ಇಂಬು ನೀಡಿತು. ಈ ದೃಷ್ಟಿಯಿಂದ ಕನ್ನಡ ಕಲೆ ಆಗಿದ್ದ ಯಕ್ಷಗಾನ, ತುಳು ಕಲೆಯೂ ಆಗಿ, ಹೊಸ ಪ್ರೋತ್ಸಾಹ ಈ ಕಲೆಗೆ ಲಭಿಸಿತು. ಕಲೆ ಜನರಿಗೆ ಹತ್ತಿರವಾಯಿತು. ಇದೀಗ ಯಕ್ಷಗಾನ ತೆಂಕುತಿಟ್ಟಿನ ಒಳಗೆ ತುಳು ಯಕ್ಷಗಾನ ಪ್ರದರ್ಶನಗಳು, ಒಂದು ಭಿನ್ನಮಾರ್ಗವಾಗಿ ಮೂಡಿವೆ. ಅದರೆ, ತುಳು ಯಕ್ಷಗಾನಗಳಿಂದಾಗಿ ಯಕ್ಷಗಾನದ ಪಾರಂಪರಿಕ ಸೌಂದರ್ಯಾಂಶಗಳಿಗೂ, ಶೈಲಿ, ಕಲಾಂಗಗಳಿಗೂ ದೊಡ್ಡ ಊನ ಉಂಟಾದದನ್ನು

ಅಲ್ಲಗಳೆಯುವಂತಿಲ್ಲ. ಇದೀಗ ತುಳು ಯಕ್ಷಗಾನವನ್ನು ಯಕ್ಷಗಾನ ಶೈಲಿಯೊಂದಿಗೆ ಬೆಳೆಸುವ ಯತ್ನಗಳು ಆರಂಭವಾಗಿವೆ.

1970ರ ಬಳಿಕ ಯಕ್ಷಗಾನ ಪ್ರಸಂಗ ರಚನೆಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹೊಸ ಅಭಿರುಚಿಗೆ ಹೊಂದಿಕೊಳ್ಳಲು ಯಕ್ಷಗಾನ ಪ್ರಯತ್ನಿಸಿದ್ದು, 1970-1997ರ ಅವಧಿಯಲ್ಲಿ ನೂರಾರು ಹೊಸ ಪ್ರಸಂಗಗಳು ರಚನೆಯಾಗಿದ್ದು, ಅದರಲ್ಲಿ ಬೇರೆ ಬೇರೆ ಮಟ್ಟಗಳಿವೆ. ಶೈಲಿ, ವ್ಯವಸಾಯಿಕ ಭದ್ರತೆ, ಹೊಸ ಮಾಧ್ಯಮಗಳ ಒತ್ತಡ, ಏರುತ್ತಿರುವ ವೆಚ್ಚಗಳು, ಬದಲಾಗುತ್ತಿರುವ ಅಪೇಕ್ಷೆಗಳ ಮಧ್ಯೆ ಯಕ್ಷಗಾನ ಜೀವಂತವಾಗಿರಲು ಹೆಣಗಾಡುತ್ತಿದ್ದರೂ, ಯಕ್ಷಗಾನದ ಭವಿಷ್ಯ ಉಜ್ವಲವಾಗಿ ಇದೆ. ರಾಜಾಶ್ರಯವಿಲ್ಲದೆ ಜನಾಶ್ರಯದಿಂದಲೆ ಬೆಳೆದು ಬಂದ ಕಲೆ ಇದು. ಶತಮಾನಗಳ ಕಾಲ, ಬಡ ಕಲಾವಿದರು ಹಠದಿಂದ ತಪಸ್ಸಿನಿಂದ ಉಳಿಸಿಕೊಂಡು ಬಂದ ಈ ಕಲೆ ಇದೀಗ ಹೊಸ ಉತ್ಸಾಹದಿಂದ ಬೆಳೆಯಬೇಕಾಗಿದೆ. ಕಾಲದ ಕರೆಯನ್ನು ಸ್ವೀಕರಿಸುವ ಸಾಮರ್ಥ್ಯ ಈ ಕಲೆಗೆ ಇದೆ.

ಇತರ ಪ್ರಕಾರಗಳು

ಈ ಜಿಲ್ಲೆಯಲ್ಲಿ ವಿಶಿಷ್ಟ ಜಾನಪದ ಸೌಂದರ್ಯದ ಹತ್ತಾರು ಪ್ರಕಾರಗಳಿವೆ. ವರ್ಣಮಯವಾದ ನೃತ್ಯ ವೇಷಗಳ ಆರಾಧನೆಯಾದ ಭೂತಾರಾಧನೆಯೊಂದಿಗೆ, ಅಷ್ಟೇ ಪ್ರಮುಖವಾದ ನಾಗನೃತ್ಯವಿದೆ. ಕಂರ್ಗೋಲು, ಹೌಂದ್ರಾಯನ ವಾಲಿಗ, ಆಟಿಕಳಂಜ, ಮಾದಿರ, ಕನ್ಯಾಪು, ನಾಗಕೋಲ, ಚೆನ್ನುನಲಿಕ, ಸೋಣಜೋಗಿ, ಬಾಲೆಸಾಂತು, ಸಿದ್ಧವೇಷ, ಕಾವೇರಿ ಪುರುಷ, ಮಾಯಿದ ಪುರುಷೆ, ಮಾಂಕಾಳಿ, ಕೊರಗ ತನಿಯ ಕುಣಿತ, ಕಂಗಿಲು, ಮೊದಲಾದ ವಾರ್ಷಿಕ ಕಾಲಾವರ್ತನ ನೃತ್ಯಗಳೂ, ರಾವುಕೋಲ, ಕಾಲೆಕೋಲ ಮೊದಲಾದ ಜೀವನಾವರ್ತ ನರ್ತನಗಳೂ, ಡಂಗುರ ಮತ್ತು ಹೇಳಿಕೆ ಕುಣಿತಗಳೂ ಪ್ರಚಲಿತವಿದೆ. ಅಲ್ಲದೆ ಚನ್ನೆಮಣೆ, ಪಲ್ಲಿ, ಕುಂಟಾಟ, ಜಿಬ್ಲಿ, ಕಂಬದಾಟ ಮೊದಲಾದ ಕ್ರೀಡೆಗಳೂ ಇವೆ.

ಮೂಲತಃ ಆಚರಣೆಯಾಗಿದ್ದು, ಕ್ರೀಡೆಯಾಗಿ ರೂಪು ತಳೆದ ಓಟದ ಸ್ಪರ್ಧೆಯಾದ ಕಂಬಳವು ಒಂದು ಜನಪ್ರಿಯ ಜಾನಪದ ಕ್ರೀಡೆ. ಇದಕ್ಕಾಗಿಯೇ ನಿರ್ಮಿತವಾದ

ಸ್ಟೇಡಿಯಂಗಳೂ, ದೊಡ್ಡ ಬಹುಮಾನದ ಸ್ಪರ್ಧೆಗಳೂ ಪ್ರಸಿದ್ದ. ಕತ್ತಿ ಕಟ್ಟಿದ ಕೋಳಿಗಳ ಜಗಳವಾದ ಕೋಳಿ ಅಂಕ ಇನ್ನೊಂದು ಪ್ರಾಚೀನ ವಿನೋದ. ತೆಂಗಿನಕಾಯಿಗಳನ್ನು ಉರುಳಿಸಿ ಅಥವಾ ಕೈಯಲ್ಲಿ ಹಿಡಿದು ಒಂದಕ್ಕೊಂದು ತಾಗಿಸಿ ಒಡೆಯುವ ಆಟ ಒಂದು ಸ್ಪರ್ಧೆ. ಈ ಸ್ಪರ್ಧೆಗಳಲ್ಲಿ ಪಂದ್ಯವಾಗಿ ಹಣದ ಜೂಜು ಇರುತ್ತದೆ ಹಾಗೆಯೇ ಒಂದೊಂದು ಜಾತಿ, ವರ್ಗಗಳಿಗೂ, ಮತೀಯ ಪಂಗಡಗಳಿಗೂ ತಮ್ಮದಾದ ಆಚರಣೆಗಳು, ನಂಬಿಕೆಗಳು, ತತ್ಸಂಬಂಧಿ ಸಾಹಿತ್ಯ-ಕಲಾ ಪ್ರಕಾರಗಳು ಇವೆ. ಈ ಜಿಲ್ಲೆಯ ರಂಗೋಲಿ ಮತ್ತು ಇತರ ಆಚರಣಾತ್ಮಕ ಚಿತ್ರ ಶೈಲಿಗಳು ಅಭ್ಯಾಸ ಯೋಗ್ಯ. ಇಲ್ಲಿಯ ಆಚರಣೆಗಳಲ್ಲಿ, ದೇವಾಲಯ ಶಿಲ್ಪಗಳಲ್ಲಿ, ಕಲಾಪ್ರಕಾರಗಳಲ್ಲಿ ಕಾಣುವ ಚಿತ್ರಶಿಲ್ಪ ವಿಧಾನಗಳ ಪರಂಪರೆಯ ಮುಂದುವರಿಕೆಯಾಗಿ ಉತ್ತಮ ಮಟ್ಟದ ಚಿತ್ರಕಲಾವಿದರು ಇಲ್ಲಿ ರೂಪುಗೊಂಡಿದ್ದಾರೆ.

ಹರಿಕಥೆಯ ಮಾಧ್ಯಮಕ್ಕೆ ಈ ಜಿಲ್ಲೆ ಒಳ್ಳೆಯ ರಂಗ ಒದಗಿಸಿದೆ. ಆಚಾರ್ಯ ಮಧ್ವರ ಕಾಲದಲ್ಲಿ ಇಲ್ಲಿ ಪ್ರಕರ್ಷಕ್ಕೆ ಬಂದ ದಾಸಕೂಟದ ಪ್ರಭಾವದಿಂದ ಪುಷ್ಟಿಕೊಂಡ ಈ ಕಲಾಪ್ರಕಾರಕ್ಕೆ ಇಲ್ಲಿ ಒಳ್ಳೆಯ ಪ್ರೋತ್ಸಾಹವಿತ್ತು. ಈ ಪ್ರಕಾರವು ಇದೀಗ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದರೂ ಈ ಜಿಲ್ಲೆ ಕೆಲವು ಉತ್ತಮ ಕೀರ್ತನಕಾರರನ್ನು ನೀಡಿದೆ. ಪುರಾಣ ಪ್ರವಚನ (ಗಮಕ ಮತ್ತು ವ್ಯಾಖ್ಯಾನ) ಪ್ರಕಾರಕ್ಕೂ ಇಲ್ಲಿ ಶತಮಾನಗಳ ಇತಿಹಾಸವಿದ್ದು ನೂರಾರು ಭಜನಾ ಮಂಡಳಿಗಳು ಸಕ್ರಿಯವಾಗಿದ್ದು, ಅವುಗಳಲ್ಲಿ ಹೊಸ ಮತ್ತು ಹಳೆಯ ಶೈಲಿಯು ಭಜನೆಯು ಹಾಡುವಿಕೆಗಳನ್ನು ಕೇಳಬಹುದು.

ಹಿಂದೆ ಈ ಜಿಲ್ಲೆಯ ಹಲವು ದೇವಾಲಯಗಳಲ್ಲಿ ರೂಢಿಯಲ್ಲಿದ್ದ ದೇವದಾಸಿ ನೃತ್ಯವು ಈಗ ಮರೆಯಾಗಿದೆ. ಆದರೆ ಭರತನಾಟ್ಯ ಕಲೆಗೆ ಒಳ್ಳೆಯ ಪ್ರೋತ್ಸಾಹವಿದ್ದು ಹತ್ತಾರು ಶಿಕ್ಷಕರು ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಶಾಸ್ತ್ರೀಯ ಸಂಗೀತಕ್ಕು ಇಲ್ಲಿ ಸುದೀರ್ಘ ಪರಂಪರೆ ಇದ್ದು ಕರ್ನಾಟಕ ಮತ್ತು ಹಿಂದುಸ್ತಾನಿಗಳೆರಡೂ ಪ್ರೋತ್ಸಾಹವಿದೆ. ಚರ್ಚ್ ಸಂಗೀತದ ಮೂಲಕ ಇಲ್ಲಿಗೆ ಬಂದು ಪಾಶ್ಚಾತ್ಯ ಸಂಗೀತವೂ ಪಾಶ್ಚಾತ್ಯ ನೃತ್ಯವೂ ಜನಪ್ರಿಯವಾಗಿ ಬೆಳೆದಿದೆ.

ಶಿಕ್ಷಣ

ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈದಿರುವ ದಕ್ಷಿಣ ಕನ್ನಡವು ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಅತ್ಯಂತ ಮುಂದುವರಿದ ಜಿಲ್ಲೆಯಾಗಿದೆ. ಸಾಕ್ಷರತಾ ಯೋಜನೆಯಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದ ಜಿಲ್ಲೆಯೂ ಆಗಿದೆ. ಸಾಂಪ್ರಾದಾಯಿಕ ಶಿಕ್ಷಣ, ಐಗಳ ಮಠದ ಶಿಕ್ಷಣಗಳಿಂದ ಮುಂದುವರಿದು, ಪಾಶ್ಚಾತ್ಯ ಮಿಶನರಿಗಳ ಮೂಲಕ ಆಧುನಿಕ ಶಿಕ್ಷಣದ ಸ್ಪರೂಪದ ಅರಂಭವನ್ನು ಕಂಡ ಈ ಜಿಲ್ಲೆಯಲ್ಲಿ ಪ್ರಾಥಮಿಕದಿಂದ ವಿಶ್ವವಿದ್ಯಾಲಯದವರೆಗೆ ವಿದ್ಯಾ ಕೇಂದ್ರಗಳಿವೆ. ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌, ಹೋಟೇಲ್ ಮ್ಯಾನೇಜ್‌ಮೆಂಟ್‌, ಫಿಸಿಯೋಥೆರಪಿ, ಪ್ಯಾಶನ್ ತಾಂತ್ರಿಕತೆವರೆಗೂ, ಅಂಗವಿಕಲ ಶಾಲೆಯಿಂದ ತೊಡಗಿ, ಕಲಾಶಿಕ್ಷಣ ಶಾಲೆಗಳವರೆಗೂ, ಕುಶಲ ಕರ್ಮಿ ಶಿಕ್ಷಣದಿಂದ ಯೋಗ ಶಿಕ್ಷಣದ ತನಕವೂ ವಿಶಾಲ ವ್ಯಾಪ್ತಿಯ ಶಿಕ್ಷಣ ಕ್ಷೇತ್ರವಿದ್ದು, ದೇಶ ವಿದೇಶಗಳಿಗೆ ಮಾನವ ಸಂಪನ್ಮೂಲವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಿದೆ.

ಖಾಸಗಿ ಸಾಹಸಕ್ಕೆ ಹೆಸರಾದ ಈ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ವಲಯವೂ ಅತ್ಯಂತ ಬಲಿಷ್ಠವಾಗಿದೆ. ಜೊತೆಗೆ ಸರಕಾರಿ ಶಿಕ್ಷಣ ಕ್ಷೇತ್ರವೂ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಂದಿದೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಥೋಲಿಕ್ ಬೋರ್ಡ್, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಎಸೋಷಿಯೇಶನ್ ಮತ್ತು ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವು ಪ್ರಮುಖವಾದವುಗಳು.

ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಒಂದು ನೋಟ
ಸಂಸ್ಥೆಗಳು ವಿದ್ಯಾರ್ಥಿಗಳು
ಶಿಶು ವಿಹಾರಗಳು 244 11601
ಪ್ರಾಥಮಿಕ ಶಾಲೆಗಳು 1935 506751
ಹೈಸ್ಕೂಲುಗಳು 381 114780
ಪದವಿ ಪೂರ್ವ ಕಾಲೇಜುಗಳು 161 63607
ಸಾಮಾನ್ಯ ಪದವಿಕಾಲೇಜು 21 15674
ಸಂಯುಕ್ತ ಪದವಿ ಕಾಲೇಜುಗಳು 23 7288
ಹೊಟೇಲ್ ಮೇನೆಜ್‌ಮೆಂಟ್‌ ಕಾಲೇಜುಗಳು 7 1225
ಬಿ.ಎಡ್. ಕಾಲೇಜುಗಳು 3 296
ಎಂ.ಎಡ್. ಕಾಲೇಜುಗಳು 2 38
ಸ್ನಾತಕೋತ್ತರ ಶಿಕ್ಷಣ 1218
ಲಾ ಕಾಲೇಜುಗಳು 5 2704
ಇಂಜಿನಿಯರಿಂಗ್ 4 6824
ಎಂಟೆಕ್‌ 156
ಎಂ.ಸಿ.ಎ. 175
ವೈದ್ಯಕೀಯ 5 4979
ವೈದ್ಯಕೀಯ ಡೆಂಟಲ್ 5 1852
ಫಾರ್ಮಸಿ 2 470
ವಾಕ್ ಮತ್ತು ಶ್ರವಣ 2 110
ಫಿಸಿಯೋಥೆರಪಿ 10 846
ನರ್ಸಿಂಗ್ 7 1086
ಪಾಲಿಟೆಕ್ನಿಕ್ 8 4080
ಅಧ್ಯಾಪಕ ತರಬೇತಿ 7 471
ಕೈಗಾರಿಕಾ ತರಬೇತಿ 16 1809
ವೃತ್ತಿ ಶಿಕ್ಷಣ 23 1268
ದೈಹಿಕ ಶಿಕ್ಷಣ 1 40
ವಿಶ್ವ ವಿದ್ಯಾಲಯ (ಮಂಗಳೂರು) 1
ಡೀಮ್ಸ್ ವಿಶ್ವವಿದ್ಯಾಲಯ (ಮಣಿಪಾಲ) 1
ಜಿಲ್ಲೆಯ ಸಾಹಿತ್ಯ ಪರಂಪರೆ

ದಕ್ಷಿಣ ಕನ್ನಡ ಜಿಲ್ಲೆಗೆ ಗುಣ ಮತ್ತು ಗಾತ್ರಗಳೆರಡರಲ್ಲೂ ದೊಡ್ಡದಾದ ಸಾಹಿತ್ಯ ಪರಂಪರೆ ಇದೆ. ತುಳು, ಕನ್ನಡ, ಕೊಂಕಣಿ, ಸಂಸ್ಕೃತ ಈ ನಾಲ್ಕೂ ಭಾಷೆಗಳ ಸಾಹಿತ್ಯ ಪರಂಪರೆ ಸಮೃದ್ಧವಾಗಿದ್ದು ಇದನ್ನು ಸಂಗ್ರಹಿಸಿ ಹೇಳುವುದು ಕಠಿನ, ಇಲ್ಲಿ ಕೇವಲ ತೀರ ಸಂಕ್ಷಿಪ್ತವಾದ ನೋಟವನ್ನು ನೀಡಿದೆ.

ಈ ಜಿಲ್ಲೆಯ ಮುಖ್ಯ ಭಾಷೆ ತುಳು, ಕನ್ನಡವು ಪ್ರಾಯಶಃ ಹತ್ತನೆಯ ಶತಮಾನದ ಬಳಿಕ ಹೆಚ್ಚು ಪ್ರಚಲಿತವಾಗಿ, ಆಡಳಿತದ ಭಾಷೆಯಾಗಿ ನೆಲೆಯಾಯಿತು. ಆದರೂ, ಇಲ್ಲಿಯ ಕನ್ನಡದ ಸಾಹಿತ್ಯ ಸೃಷ್ಟಿ ಮಹತ್ತುಗಳೆರಡರಲ್ಲೂ ಆಸಾಧಾರಣವಾಗಿದೆ. ಕನ್ನಡ ಭಾಷೆಯ ವಿವಿಧ ರೂಪಗಳಲ್ಲಿ ಲಭ್ಯವಿರುವ ಜಾನಪದ ಗೀತೆಗಳು ಒಂದು ಮುಖ್ಯ ಸಾಹಿತ್ಯ ರೂಪ.

ಉದ್ಭಟ ಕಾವ್ಯ (ಶೃಂಗಾರಸಾರ) ವನ್ನು ಬರೆದ ಸೋಮರಾಜ ಅಥವಾ ಸೋಮೇಶ್ವರನೇ (ಕ್ರಿ.1200) ಇಲ್ಲಿನ ಮೊದಲ ಪ್ರಮುಖ ಕನ್ನಡ ಕವಿ. 1439ರಲ್ಲಿದ್ದ ಕಲ್ಯಾಣಕೀರ್ತಿ ವಿವಿದ ಛಂದೋ ಬಂಧಗಳಲ್ಲಿ ಕಾವ್ಯಗಳನ್ನು ಬರೆದವನು. ಹದಿನೈದನೇಯ ಶತಮಾನದ ಕೋಟೇಶ್ವರ 'ಜೀವಂಧರ ಷಟ್ಪದಿ'ಯ ಕರ್ತೃ. ಹದಿನಾರನೇ ಶತಮಾನದ ಲಕ್ಷಣಕಾರ ಕವಿ ಸಾಳ್ವನು, ರಸರತ್ನಾಕರ, ಶಾರದಾ ವಿಳಾಸ, ಸಾಳ್ವಭಾರತ, ವೈದ್ಯಸಾಂಗತ್ಯಳ ಕರ್ತೃ.

ಹದಿನೇಳನೇಯ ಶತಮಾನದಲ್ಲಿದ್ದ ರತ್ನಾಕರ ವರ್ಣಿ ಕನ್ನಡದ ಒಬ್ಬ ಶೇಷ್ಠ ಕವಿ. ಶೃಂಗಾರ, ಅಧ್ಯಾತ್ಮಗಳ ಅಭಿವ್ಯಕ್ತಿ, ಕಥನದ ಸೊಗಸು ಮತ್ತು ಸಾಂಗತ್ಯ ಛಂದಸ್ಸಿನ ಬಳಕೆಯ ಪ್ರಾವೀಣ್ಯಗಳಿಂದ ಇವನು ಅಗ್ರ ಪಂಕ್ತಿಯ ಕವಿಯೆನಿಸಿದ್ದಾನೆ. ಒಂದೆರಡು ಶತಕಗಳನ್ನೂ ಆತನು ರಚಿಸಿದ್ದಾನೆ. ಈ ಕಾಲಕ್ಕೂ ಹಿಂದೆ ಮುಂದೆ ಉಡುಪಿಯಿ ಮಾಧ್ವ ಪರಂಪರೆಯ ದಾಸ ಪಂಥದವರೂ ಹಲವು ಕೃತಿಗಳನ್ನು ರಚಿಸಿದರು. 'ಗೋಮಟೇಶ್ವರ ಚರಿತ್ರೆ'ಯ ಚಂದ್ರಮ, 'ಪದ್ಮಾವತೀ ಪರಿಣಯ'ದ ಪದ್ಮನಾಭ ಮೊದಲಾದವರು ಇತರ ಕವಿಗಳು. ಕೇವಲ ಮುವತ್ತು ವರ್ಷಗಳ ಕಾಲ ಬಾಳಿ (1870-1900) ಕಾವ್ಯಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ ನಂದಳಿಕೆ ಲಕ್ಷ್ಮೀನಾರಣಪ್ಪನು(ಮುದ್ದಣ)ನು ಈ ಜಿಲ್ಲೆಯ ಅಗ್ರಮಾನ್ಯ ಕವಿಗಳಲೊಬ್ಬನು. ಅದ್ಭುತ ರಾಮಾಯಣಂ, ಶ್ರೀ ರಾಮಪಟ್ಟಾಭಿಷೇಕಗಳು ಆತನ ಎರಡು ಕೃತಿಗಳು ಹಲವು

ವಿಶಿಷ್ಟ್ಯಗಳನ್ನೊಳಗೊಂಡಿದ್ದು, ಆತನನ್ನು ಹೊಸಗನ್ನಡದ ಮುಂಗೋಳಿ, ಅನ್ನುವ ಹೆಸರಿಗೆ ಪಾತ್ರವಾಗಿಸಿವೆ. ಮುದ್ದಣನ ಎರಡು ಯಕ್ಷಗಾನ ಪ್ರಸಂಗಗಳಾದ 'ರತ್ನಾವತಿ ಕಲ್ಯಾಣ' ಮತ್ತು 'ಕುಮಾರ ವಿಜಯ'ಗಳೂ ಪ್ರಯೋಗಶೀಲ ರಚನೆಗಳು.

ಈ ಶತಮಾನದ ಆರಂಭದಲ್ಲಿ ಕಾದಂಬರಿಗಳನ್ನು ಬರೆದ ಬೋಳಾರ ಬಾಬುರಾಯರು ('ವಾಗ್ದೇವಿ'), ಗುಲವಾಡಿ ವೆಂಕಟ್ರಾಯರು ('ಇಂದಿರಾಬಾಯಿ') ಕನ್ನಡ ಕಾದಂಬರಿ ಕ್ಷೇತ್ರದ ಮೊದಲಿಗರು. ಸಣ್ಣ ಕತೆಗಳು ಮತ್ತು ಬಾಲ ಸಾಹಿತ್ಯದಲ್ಲಿ ಇತಿಹಾಸ ನಿರ್ಮಿಸಿದ ಪಂಜೆ ಮಂಗೇಶರಾಯರು, ವಿವಿಧ ಸಾಹಿತ್ಯ ಪ್ರಕರಣಗಳಲ್ಲಿ ದೊಡ್ಡ ಪ್ರಮಾಣದ ಕೃಷಿಗೈದ ಎಂ.ಎನ್. ಕಾಮತ್, ಪ್ರಬಂಧ ಸಾಹಿತ್ಯಕ್ಕೆ ಕೊಡುಗೆ ನೀಡಿದ ಉಗ್ರಾಣ ಮಂಗೇಶರಾಯರು, ಕನ್ನಡ ನವೋದಯದ ಅಚಾರರಲ್ಲೊಬ್ಬರಾದ ಮಾರ್ಗ-ದೇಸಿಗಳೆರಡರ ಬಗೆಗೂ ಗೌರವ ಹೊಂದಿದ ಪಂಡಿತ ಮುಳಿಯ ತಿಮ್ಮಪ್ಪಯನವರು, ಕನ್ನಡ ಕಾವ್ಯಕ್ಕೆ ಹೊಸದಿಕ್ಕು ತೋರಿದ ಪೇಜಾವರ ಸದಾಶಿವ ರಾವ್, ಕವಿ ಕಡಂಗೋಡ್ಲು ಶಂಕರ ಭಟ್ಟರು, ಶಾಸ್ತ್ರ ಮತ್ತು ಸೃಜನಶೀಲ ಇವೆರಡೂ ವಿಭಾಗಗಲ್ಲಿ ಎತ್ತರದ ಸಾಧನೆಗೈದ ಸೇಡಿಯಾವು ಕಷ್ಣಭಟ್ಟರು, ಕಾದಂಬರಿ, ವಿಚಾರ ಸಾಹಿತ್ಯಗಳೆರಡರಲ್ಲೂ ದೊಡ್ಡ ಸಿದ್ಧಿಯ ನಿರಂಜನ, ಕವಿ, ಹೋರಾಟಗಾರ, ಕಾಸರಗೋಡು ಕನ್ನಡಿಗರ ನೇತಾರ ಕಯ್ಯಾರ ಕಿಂಞಣ್ಣ ರೈ, ಕವಿ ಪತ್ರಕರ್ತ ಪಾವೆಂ ಆಚಾರ್ಯ, ಪ್ರಬಂಧ ಶೈಲಿಗೆ ಮಾದರಿ ಬರಹಗಳನ್ನು ನೀಡಿ ಸಾಂಸ್ಕೃತಿಕ ಸಂಘಟನೆಯಲ್ಲೂ ಮಾದರಿ ಎನಿಸಿದ ಕು.ಶಿ. ಹರಿದಾಸ ಭಟ್ಟರು ಮೊದಲಾವರೆಲ್ಲ ಕನ್ನಡವನ್ನೂ ವಿವಿಧ ರೀತಿಗಳಿಂದ ಶ್ರೀಮಂತಗೊಳಿಸಿದ ಹಿರಿಯರು.

ಕಾವ್ಯ ರಚನೆ, ಸಂಶೋಧನೆಗಳ ಕ್ಷೇತ್ರದಲ್ಲಿ ಮಹಾನ್ ಸಾಧಕರೆನಿಸಿದ ಮಂಜೇಶ್ವರ ಗೋವಿಂದ ಪೈಗಳು, ವಿಶಾಲ ಆಸಕ್ತಿಯ ಬಹುಶ್ರುತ ಕವಿ—ಪಂಡಿತರಾದವರು. ಸಂಶೋಧನೆಯ ಕ್ಷೇತ್ರದಲ್ಲಿ ಅವರು ಕನ್ನಡದ ಅಚಾರರಲ್ಲೊಬ್ಬರು, ಕಾವ್ಯದ ಕ್ಷೇತ್ರದಲ್ಲೂ ಅವರದ್ದು ಪ್ರತ್ಯೇಕ ಯೋಗ್ಯತೆಯ ಸಿದ್ದಿ.

ಈ ಜಿಲ್ಲೆಯ ವೈಶಿಷ್ಟ್ಯ, ವೈವಿಧ್ಯ, ಪ್ರತಿಭೆ, ಸಾಧನೆ ಸಾಹಸಗಳಿಗೆಲ್ಲ ಪ್ರತಿನಿಧಿಯಂತಿರುವ ಸಾಹಿತ್ಯ ಸಾಧಕರೆಂದರೆ ಡಾ। ಶಿವರಾಮ ಕಾರಂತರು. ಜಗತ್ತಿನ ದೊಡ್ಡ ಲೇಖಕರೊಂದಿಗೆ ನಿಲ್ಲುವ ಅವರ ಸಾಹಿತ್ಯ ಗುಣ, ಗಾತ್ರ, ಗೌರವ, ಪ್ರತ್ಯೇಕತೆ ಎತ್ತರದ್ದು. ಕಾದಂಬರಿ, ನಾಟಕ, ಬಾಲಸಾಹಿತ್ಯ, ಗೀತನಾಟಕ, ಕೋಶರಚನೆ, ವಿಡಂಬನೆ ಸಾಹಿತ್ಯ, ವಿಜ್ಞಾನ ಸಾಹಿತ್ಯ ಹಲವು ಕ್ಷೇತ್ರಗಳನ್ನು ವ್ಯಾಪಿಸಿ ನಿಂತ ಕಾರಂತರ ಪ್ರತಿಭೆ ವಿರಳವಾದ ರೀತಿಯದ್ದು. ಈ ಶತಮಾನದ ಎರಡನೆಯ ದಶಕದಿಂದ ಈ ವರೆಗೂ ಬರೆಯುತ್ತಿರುವ ಕಾರಂತರು, ಶಿಕ್ಷಣ ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಂಘಟನೆ, ವೃತ್ತಿರಂಗ ಭೂಮಿ, ಸಾಹಿತ್ಯ-ಸಾಂಸ್ಕೃತಿಕ ಸಂಘಟನೆ, ಯಕ್ಷಗಾನ ಶಿಕ್ಷಣ ಮತ್ತು ಪ್ರಯೋಗ ಮುಂತಾದ ಕ್ಷೇತ್ರಗಳಲ್ಲಿ ದುಡಿದವರು. ಬರಹದೊಂದಿಗೆ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಈಗಲೂ ಸಕ್ರಿಯರು. ಕಾರಂತರದು ಪ್ರಚಂಡ ಪ್ರತಿಭೆ ಮತ್ತು ಸಾಧನೆ.

ಕನ್ನಡ ಕಾವ್ಯದಲ್ಲಿ ನವ್ಯಕಾವ್ಯವೆಂಬ ಹೊಸ ಮಾರ್ಗವನ್ನು ನಿರ್ಮಿಸಿ ಎಂ.ಗೋಪಾಲಕೃಷ್ಣ ಅಡಿಗರು, ಒಂದು ಸಾಹಿತ್ಯಕ ಯುಗದ ಆದ್ಯರು, ಪ್ರವರ್ತಕರು. ಆದ್ಯರೆಂಬುದರಿಂದ ಅಲ್ಲ, ಕಾವ್ಯ ಯೋಗ್ಯತೆಯಲ್ಲೂ ಅಡಿಗರದು ಉನ್ನತವಾದ ಪ್ರತಿಭೆ. ಈ ಶತಮಾನದುದ್ದಕ್ಕೂ ಸಾಹಿತ್ಯದ ಕ್ಷೇತ್ರದಲ್ಲಿ ವಿವಿಧ ರೀತಿಗಳಲ್ಲಿ ದುಡಿದ ಮಹನೀಯರ ಸಂಖ್ಯೆ ಬಲು ದೊಡ್ಡದು. ನಾಟಕಕಾರ ಗಿರೀಶ ಕಾರ್ನಾಡ್, ನಾಟಕ ನಿರ್ದೇಶಕ, ಸಂಗೀತಗಾರ ಬಿ.ವಿ. ಕಾರಂತರು ಕನ್ನಡ ರಂಗಭೂಮಿಗೆ ಹೊಸ ದಿಕ್ಕನ್ನು ನೀಡಿದವರು. ವೈವಿಧ್ಯಮಯ ಬರಹಗಳ ಅಮೃತ ಸೋಮೇಶ್ವರ, ಕವಿಗಳಾದ ಸುಬ್ರಾಯ ಚೊಕ್ಕಾಡಿ ಮತ್ತು ವೈದೇಹಿ, ಕಾದಂಬರಿಗಾರ್ತಿ ಸಾರಾ ಅಬುಬಕ್ಕರ್, ಕತೆಗಾರ ಬೋಳುವಾರು ಮಹ್ಮದ್ ಕುಂಞು ಹೀಗೆ ಸ್ವಾತಂತ್ರ್ಯೋತ್ತರ ಯುಗದ ಸಾಹಿತಿಗಳ ಯಾದಿಯಲ್ಲಿ ಗಣ್ಯರಾದವರ ಯಾದಿಯೇ ಬಹಳ ದೀರ್ಘವಿದೆ.

ಇದಲ್ಲದೆ ಕ್ರಿ.ಶ. ಸು. 1600ರ ಪಾರ್ತಿಸುಬ್ಬನಿಂದ ತೊಡಗಿ, ಇಂದಿನವರೆಗೂ ಯಕ್ಷಗಾನ ಪ್ರಸಂಗ ಸಾಹಿತ್ಯ ವಿಪುಲವಾಗಿ ಸೃಷ್ಟಿಯಾಗಿದೆ. ಸಂಶೋಧನ ರಂಗದಲ್ಲೂ ದೊಡ್ಡ ಸಾಧನೆಗಳಾಗಿವೆ. ಕನ್ನಡದ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ'ದಿಂದ ಆರಂಭಿಸಿ, 'ಸುವಾಸಿನಿ' 'ಕೃಷ್ಣಸೂಕ್ತಿ'ಗಳ ಕಾಲದಿಂದ ಇಂದಿನ ಹತ್ತಾರು ಪತ್ರಿಕೆಗಳಿರುವ ಮಟ್ಟದವರೆಗೆ ಪತ್ರಿಕೋದ್ಯಮದಲ್ಲೂ ಈ ಜಿಲ್ಲೆ ಗಣನೀಯ ಸಾಧನೆ ಮಾಡಿದೆ.

ತುಳು ಚಳವಳಿ ಸಾಹಿತ್ಯ

ಈ ಜಿಲ್ಲೆಯ ಮುಖ್ಯ ಭಾಷೆಯಾದ ತುಳುವು ಆಡುನುಡುಯಾಗಿಯೇ ಇದ್ದು ಆಡಳಿತಕ್ಕೂ, ಸಾಹಿತ್ಯಕ್ಕೂ ಕನ್ನಡವೇ ಒಪ್ಪಿಕೊಂಡ ಸ್ಥಿತಿ ಇತ್ತು. ಆದರೆ 19ನೆಯ ಶತಮಾನದ ಕ್ರಿಶ್ಚಿಯನ್ ಮಿಶನರಿಗಳಿಂದ ಪ್ರಾರಂಭಗೊಂಡ ತುಳು ಸಾಹಿತ್ಯ ಚಳವಳಿ (ಉದಾ—ರೆ. ಮ್ಯಾನರನ ತುಳು ಶಬ್ದಕೊಶ) ಈ ಶತಮಾನದಲ್ಲಿ ಮುಂದುವರಿಯಿತು. 1920-30 ದಶಕಗಳಲ್ಲಿ ಸತ್ಯಮಿತ್ರ ಬಂಗೇರ ಎಸ್.ಯು. ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಡೆ, ಬಡಕ ಬೈಲು ಪರಮೇಶ್ವರಯ್ಯನವರು ಈ ಕಾಲದ ಗಣ್ಯ ಲೇಖಕರು. ಇದೀಗ ವಿದ್ವಾನ್ ವೆಂಕಟರಾಜ ಪುಣಿಂಚತ್ತಾಯ ಗುರುತಿಸಿದ ತುಳು ಕಾವ್ಯಗಳು 'ಕಾವೇರಿ' 'ಭಾಗವತೊ' ಮತ್ತು 'ಭಾರತ' (ಇದು ಪ್ರಾಯ: 15-16ನೆಯ ಶತಮಾನದ್ದು) ತುಳು ಸಾಹಿತ್ಯದ ಚರಿತ್ರೆಗೆ ಪ್ರಾಚೀನತೆ ಒದಿಗಿಸಿವೆ. ದಿ। ಮಂದಾರ ಕೇಶವ ಭಟ್ಟರು ಬರೆದ 'ಮಂದಾರ ರಾಮಾಯಣ'ವು ತುಳುವಿನ ಆಧುನಿಕ ಯುಗದ ಮಹಾಕಾವ್ಯ, ಡಾ।ಯು.ಪಿ. ಉಪಾಧ್ಯಾಯರು ಸಂಪಾದಿಸಿದ ಆರು ಸಂಪುಟಗಳ ತುಳು, ತುಳು ಸಾಹಿತ್ಯ ಕ್ಷೇತ್ರದ ಇನ್ನೊಂದು ದೊಡ್ಡ ಸಾಧನೆ. ಡಾ। ಬಿ.ಎ. ವಿವೇಕ ರೈಗಳ ನೇತೃತ್ವದ ತುಳುಸಾಹಿತ್ಯ ಅಕಾಡೆಮಿ ತುಳು ಸಾಹಿತ್ಯ ಸಂಸ್ಕೃತಿಗಳ ಕುರಿತು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಅನೇಕ ತುಳು ಬರಹಗಾರರು ಸಾಹಿತ್ಯ ರಚನೆ ಮಾಡುತ್ತಿದ್ದು, ತುಳು ಸಂಘಟನೆಗಳು ಸಕ್ರಿಯವಾಗಿವೆ. 1940ರಿಂದ ರೂಪುಗೊಂಡ ತುಳು ಭಾಷಾ ಯಕ್ಷಗಾನ ಪ್ರಯೋಗಗಳು ಪ್ರಸಂಗ ರಚನೆ ರಂಗ ಪ್ರದರ್ಶನಗಳಲ್ಲಿ ದೊಡ್ಡ ಕೆಲಸ ಮಾಡಿವೆ. ಇವೆಲ್ಲವೂ ತುಳು ಭಾಷೆ- ಸಂಸ್ಕೃತಿಗಳು ತಮ್ಮ ಅಸ್ತಿತ್ವವನ್ನು ಕಂಡು ಕೊಂಡ ಸಾಂಸ್ಕೃತಿಕ ಅಸ್ಮಿತೆ ಮತ್ತು ವಿಕೇಂದ್ರಿಕರಣದ ಸಂಕೇತಗಳು ಫಲಗಳು.

ತುಳುವಿನಲ್ಲಿ ಮೌಖಿಕ ಪರಂಪರೆಯಲ್ಲಿರುವ 'ಕಬಿತ'ವೆಂಬ ಕವನಗಳು, ಪಾಡ್ಡನಗಳೆಂಬ ಮಹಾಕಾವ್ಯ ಖಂಡಕಾವ್ಯಗಳೂ ಸಾಕಷ್ಟಿದ್ದು ಇವುಗಳ ಸಂಶೋಧನೆ, ಪ್ರಕಾಶನದ ಕಾರ್ಯ ಆರಂಭವಾಗಿದೆ. ಈ ಕಾವ್ಯಗಳ ಪ್ರಕಾಶನವು ಸಂಸ್ಕೃತಿಯ ಚರಿತ್ರೆಯಲ್ಲಿ ಹೊಸ ಅಧ್ಯಾಯವೆನಿಸಲಿದೆ. ಈ ಜಿಲ್ಲೆಯಲ್ಲಿ ಕೊಂಕಣಿ ಸಾಹಿತ್ಯಕ್ಕೂ ಶ್ರೀಮಂತ ಪರಂಪರೆಯಿದ್ದು, ಕೆಥೋಲಿಕ್ ಕೊಂಕಣಿ ಮತ್ತು ಗೌಡಸಾರಸ್ವತ ಕೊಂಕಣಿಗಳೆರಡರಲ್ಲೂ ಕಾವ್ಯ, ನಾಟಕ, ಕಾದಂಬರಿ ಮೊದಲಾದ ಪ್ರಕಾರಗಳ ಕೃತಿಗಳು ಬಂದಿದೆ. ಪ್ರಸಿದ್ಧ ಕೀರ್ತನಕಾರ ಅಚ್ಯುತದಾಸರು 'ಗುರುಚರಿತ್ರೆ' ಎಂಬ ಕೊಂಕಣಿ ಮಹಾಕಾವ್ಯವನ್ನು ರಚಿಸಿದ್ದಾರೆ. ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ಕಚೇರಿಯೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಸಂಸ್ಕೃತ

ಸಂಸ್ಕೃತ ಸಾಹಿತ್ಯ, ಸಂಸ್ಕೃತ ಅಧ್ಯಯನದಲ್ಲೂ ಈ ಜಿಲ್ಲೆ ದೀರ್ಘ ಪರಂಪರೆ ಹೊಂದಿದೆ. ಜಗತ್ತಿನ ದಾರ್ಶನಿಕ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಕೊಡುಗೆಯಾದ—ಮಧ್ವಾಚಾರ್ಯರು, ಈ ಪರಂಪರೆಗೆ ಬಹುಶಃ ಆದ್ಯರು. ಅವರು ರಚಿಸಿದ ಮೂವತ್ತೊಂಬತ್ತು ಸಂಸ್ಕೃತ ಗ್ರಂಥಗಳು 'ಸರ್ವಮೂಲ' ಗ್ರಂಥಗಳೆಂದು ವಿಖ್ಯಾತವಾಗಿದ್ದು, ದ್ವೈತವೇದಾಂತದ ಆಧಾರಗಳಾಗಿವೆ. ಸುಂದರವಾದ ಅಡಕವಾದ ಶೈಲಿ, ಪಾಂಡಿತ್ಯಗಳಿಗೆ ಈ ಗ್ರಂಥಗಳು ಮಾದರಿಗಳಾಗಿವೆ. ಮಧ್ವಾಚಾರ್ಯರ ಅನಂತರ ಅದೇ ಪರಂಪರೆಯಲ್ಲಿ ವಿಷ್ಣು ತೀರ್ಥ, ತ್ರಿವಿಕ್ರಮ ಪಂಡಿತ, ಕಲ್ಯಾಣಿ ದೇವಿ, ವಾದಿರಾಜಸ್ವಾಮಿ ಮೊದಲಾದ ಯತಿಗಳು ಗ್ರಂಥ ರಚನೆ ಮಾಡಿದ್ದಾರೆ. ಇತರ ಅನೇಕ ಲೇಖಕರ ಕೃತಿಗಳೂ ಲಭ್ಯವಾಗಿವೆ. ಜಿಲ್ಲೆಯಲ್ಲಿ ಸಂಸ್ಕೃತ ಸಾಹಿತ್ಯ ರಚನೆ ಈಗಲೂ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ. ಸಂಸ್ಕೃತ ಅಧ್ಯಯನವೂ ನಡೆಯುತ್ತಿದೆ.

ಮುನ್ನೋಟ
ಉದ್ಯಮೀಕರಣದ ಸವಾಲುಗಳು

ಈ ಜಿಲ್ಲೆಯು ಮುಖ್ಯವಾಗಿ ಬ್ಯಾಂಕಿಂಗ್‌ನಂತಹ ಸೇವಾ ಉದ್ಯಮಗಳಿಗೆ, ಮತ್ತು ಕೆಲವು ಕಿರು ಉದ್ಯಮಗಳಿಗೆ ಪ್ರಸಿದ್ಧವಾದುದು. ಇದೀಗ ಜಿಲ್ಲೆಗೆ, ವಿಶೇಷತ: ಮಂಗಳೂರಿನಿಂದ ಉಡುಪಿಯವರೆಗಿನ ಕರಾವಳಿ ಪ್ರದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಬೃಹತ್ ಉದ್ಯಮಗಳು ಪ್ರವೇಶಿಸುತ್ತಿವೆ. ಈ ಚಿಕ್ಕ ಪ್ರದೇಶದಲ್ಲಿ ಸುಮಾರು ಐವತ್ತರಷ್ಟು ದೊಡ್ಡ ಉದ್ಯಮಗಳೂ, ಅದಕ್ಕೆ ಸಂಬಂಧಿಸಿದ ಹಲವು, ಪೂರಕ ಉದ್ಯಮಗಳೂ ಆರಂಭವಾಗುವ ಸಿದ್ಧತೆ ನಡೆದಿದ್ದು, ಇದು ಈ ಪ್ರದೇಶದ ಭವಿಷ್ಯದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸರಕಾರವೂ, ಉದ್ಯಮಿಗಳೂ ಈ ಬಗೆಯ ಔದ್ಯಮೀಕರಣವು ಅಭಿವೃದ್ಧಿಗೆ ಅನಿವಾರ್ಯವೆಂದು ವಾದಿಸಿದರೆ, ಪರ್ಯಾಯ ಅಭಿವೃದ್ಧಿವಾದಿಗಳೂ, ಪರಿಸರವಾದಿಗಳೂ ಈ ಅಭಿವೃದ್ಧಿಯ ಚಿಂತನೆಯನ್ನೆ ಪ್ರಶ್ನಿಸುತ್ತಿದ್ದಾರೆ. ಬೃಹತ್ ಉದ್ಯಮಗಳ ಕೇಂದ್ರೀಕರಣವು ಹಲವು ಆಪತ್ತುಗಳಿಗೆ ಕಾರಣವೆಂದೂ, ಜಿಲ್ಲೆಯ ಧಾರಣಾ ಶಕ್ತಿಯ ಮೇಲೆ, ಪರಿಸರ, ಸಮುದ್ರ, ಜೀವಜಾಲಗಳ ಮೇಲೂ, ನಾಗರಿಕ ಸೌಲಭ್ಯಗಳ ಮೇಲೂ ಇದು ದುಷ್ಪರಿಣಾಮವನ್ನು ಬೀರಿ, ಜನ ಜೀವನವನ್ನು ಬಹುವಾಗಿ ಬಾಧಿಸಲಿದೆಯೆಂದೂ ವಾದಿಸಲಾಗಿದ್ದು, ಈ ಅಭಿಪ್ರಾಯಗಳಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ತಜ್ಞರ ಬೆಂಬಲವಿದೆ. ಪರಿಸರ ಸಂಬಂಧಿ ತಜ್ಞ ಸಮಿತಿಗಳೂ, ಖಾಸಗಿ ಸಂಸ್ಥೆಗಳೂ ತಮ್ಮ ವರದಿಗಳಲ್ಲಿ ಈ ಬಗೆಯ ಉದ್ಯಮೀಕರಣವನ್ನೂ ವಿರೋಧಿಸಿವೆ. 1930ರ ದಶಕದಲ್ಲೆ, ಈ ಪ್ರದೇಶವು ಬೃಹತ್ ಉದ್ಯಮಗಳಿಗೆ ಸೂಕ್ತವಲ್ಲ ಎಂದು ಅಂದಿನ ತಜ್ಞ ಸಮಿತಿಯೊಂದು ಅಭಿಪ್ರಾಯಪಟ್ಟದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಂತೂ, ಈ ಬೃಹತ್ ಉದ್ಯಮಗಳ ಕೇಂದ್ರೀಕರಣವು ಸದ್ಯ ಈ ಪ್ರದೇಶದ ಮುಖ್ಯವಾದ ಒಂದು ಸಮಸ್ಯೆಯಾಗಿದ್ದು, ಮುಂದಿನ ಐದು ವರ್ಷಗಳು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿವೆ.

ಬಹುಭಾಷಿಕತೆ, ಸಾಂಸ್ಕೃತಿಕ ಮತ್ತು ಮತೀಯ ಸಾಮರಸ್ಯ, ಖಾಸಗಿ ಸಾಹಸ, ಉದ್ಯಮಶೀಲತೆ, ಶಿಕ್ಷಣ, ಸಾಹಿತ್ಯ, ಕಲೆ, ಅಭಿವೃದ್ಧಿ ಮುಂತಾದವುಗಳಲ್ಲಿ ಮಾದರಿ ಪ್ರದೇಶವೆನಿಸುವ ದಕ್ಷಿಣ ಕನ್ನಡವು ಬದಲಾವಣೆ — ಆಧುನಿಕತೆ ಸವಾಲುಗಳನ್ನು ಸ್ವೀಕರಿಸುತ್ತ ಮುನ್ನಡೆದಿದೆ. ಜೊತೆಗೆ ಉದ್ಯಮೀಕರಣ, ನಿರುದ್ಯೋಗ, ಜನಸಂಖ್ಯೆಯ ಸಮಸ್ಯೆಗಳಿಂದಲೂ, ಸಾರ್ವಜನಿಕ ಸೌಲಭ್ಯಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆಯಿಂದಲೂ, ಒತ್ತಡಗಳನ್ನು ಅನುಭವಿಸುತ್ತಿದೆ. ಶಾಂತಿ, ಭದ್ರತೆಗಳಿಗೆ ಹೆಸರಾಂತ

ಈ ಪ್ರದೇಶದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಸಮಸ್ಯೆಗಳೂ ತಲೆದೋರಿವೆ.

ಪರಶುರಾಮನು ತನ್ನ ಕೊಡಲಿಯನ್ನು ಎಸೆದು ಸಮುದ್ರವನ್ನು ಹಿಂದೆ ಸರಿಸಿ ಹೊಸ ನೆಲವನ್ನು ಪಡೆದುದರಿಂದ ಪರಶುರಾಮ ಸೃಷ್ಟಿ ಎನಿಸಿದ ಕರಾವಳಿಯ ಭಾಗವಿದು. ಹೊಸ ಕ್ಷೇತ್ರಗಳನ್ನು ಪಡೆಯುವ, ಆಪತ್ತಿನ ತರೆಗಳನ್ನು ದೂರ ಸರಿಸುವ ಸೃಜನಶೀಲತೆ, ಕ್ರಿಯಾಶಕ್ತಿ ಇಲ್ಲಿಯ ಜನರಲ್ಲಿದ್ದು, ಅವುಗಳಿಗೆ ಹೆಚ್ಚು ಅವಕಾಶಗಳೂ, ಸವಾಲುಗಳೂ, ಮುಂದಿನ ದಿನಗಳಲ್ಲಿ ಕಾದಿವೆ.


ದಕ್ಷಿಣ ಕನ್ನಡ - ಸಂಖ್ಯಾತ್ಮಕ ನೋಟ - 1

ವಿಸ್ತೀರ್ಣ ಮತ್ತು ಜನಸಂಖ್ಯೆ 1991 ಜನಗಣತಿ ಪ್ರಕಾರ
ತಾಲೂಕು ವಿಸ್ತೀರ್ಣ
ಚ.ಕಿ.ಮೀ.ಗಳಲ್ಲಿ
ಒಟ್ಟು ಜನ ಸಂಖ್ಯೆ
ಗಂಡಸರು ಹೆಂಗಸರು ಒಟ್ಟು
1 65 66 67 68
ಬಂಟ್ವಾಳ 735 159873 163132 323005
ಬೆಳ್ತಂಗಡಿ 1375 104307 107087 211394
ಕುಂದಾಪುರ 1559 163331 188342 351673
ಕಾರ್ಕಳ 1367 130112 148893 279005
ಮಂಗಳೂರು 558 330651 340709 671360
ಪುತ್ತೂರು 1000 119927 117310 237237
ಸುಳ್ಯ 826 63427 61397 124824
ಉಡುಪಿ 925 234628 261138 495766
ಒಟ್ಟು 8441 1306256 1388008 2694264
ದಕ್ಷಿಣ ಕನ್ನಡ ಸಂಖ್ಯಾತ್ಮಕ ನೋಟ - 2
ವಿಸ್ತೀರ್ಣ 8441ಚ.ಕಿ.ಮೀ. ಚಿತ್ರ ಮಂದಿರಗಳು 46
ಜನಸಂಖ್ಯೆ 2694264 ಕೃಷಿಕರು 2ಲಕ್ಷಗಳು
ಗ್ರಾಮ ಪಂಚಾಯತುಗಳು 350 ಕೃಷಿಕಾರ್ಮಿಕರು 18ಲಕ್ಷಗಳು
ಗ್ರಾಮಗಳು 615 ವಾಡಿಕೆ ಮಳೆ 4029ಮಿ.ಮೀ.
ನಗರಗಳು 16 ಮಳೆಯ ದಿನಗಳು 120
ಪುರಸಭೆಗಳು 21 ಅರಣ್ಯ ಪ್ರದೇಶ ಹೆಕ್ಟೇರ್ 226987
ವಿಧಾನಸಭಾ ಕ್ಷೇತ್ರಗಳು 15 ಭತ್ತದ ಕೃಷಿಕ್ಷೇತ್ರ 145506
ಪೊಲೀಸ್ ಠಾಣೆಗಳು 52 ದ್ವಿದಳ ಕೃಷಿ ಕ್ಷೇತ್ರ 19767
ನ್ಯಾಯಬೆಲೆ ಅಂಗಡಿಗಳು 879 ಅಡಕೆ ಕೃಷಿಕ್ಷೇತ್ರ 21762
ಕಾರ್ಖಾನೆಗಳು 638 ತೆಂಗು ಕೃಷಿ ಕ್ಷೇತ್ರ 22457
ಸಣ್ಣ ಕೈಗಾರಿಕೆಗಳು 11131 ಗೇರು ಕೃಷಿ ಕ್ಷೇತ್ರ 41656
ಕಾರುಗಳು 20971 ರಬ್ಬರ್ ಕೃಷಿ ಕ್ಷೇತ್ರ 11914
ದ್ವಿಚಕ್ರ ವಾಹನಗಳು 87862 ವೀಳ್ಯದೆಲೆ ಕೃಷಿ ಕ್ಷೇತ್ರ 494
ಒಟ್ಟು ವಾಹಗಳು 144165 ಕರಿಮೆಣಸು ಕೃಷಿ ಕ್ಷೇತ್ರ 1041
ರೈಲುಮಾರ್ಗ ಕಿ.ಮೀ. 223 ಯುವಕ ಮಂಡಲಗಳು 803
ಅಂಚೆ ಕಛೇರಿಗಳು 788 ಯುವತಿ ಮಂಡಲಗಳು 195
ದೂರವಾಣಿ ಕೇಂದ್ರಗಳು 191 ವ್ಯಾಯಾಮ ಶಾಲೆ 52
ತಂತಿ ಕಛೇರಿಗಳು 532 ಗ್ರಂಥಾಲಯಗಳು 271
ದೂರವಾಣಿಗಳು 86000 ತೋಟಗಾರಿಕಾ ಫಾರ್ಮ್‌ಗಳು 23
ಅಂಗನವಾಡಿಗಳು 2727

ಆಕರಗಳು : ದ.ಕ ಜಿಲ್ಲಾ ಗಜೆಟಿಯರ್ : ಕರ್ನಾಟಕ ಸರಕಾರ
ಸುದರ್ಶನ : ಡಾ। ಟಿ.ಎಂ.ಎ ಪೈ ಅಭಿನಂದನ ಗ್ರಂಥ

ದ.ಕ. ಜಿಲ್ಲಾ ಅಂಕಿ ಅಂಶಗಳ ನೋಟ : ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ
ದ.ಕ.ಜಿಲ್ಲಾ ಪಂಚಾಯತ್‌ನ ದಾಖಲೆಗಳು,

  • ದಕ್ಷಿಣ ಕನ್ನಡದ ಪಾಕ ಮತ್ತು ರುಚಿ ವೈವಿಧ್ಯವು ಗಮನಾರ್ಹ. ಉಡುಪಿ ಶಿವಳ್ಳಿ ಬ್ರಾಹ್ಮಣರ ಶೈಲಿಯ ಅಡುಗೆಯ ರುಚಿ ಜಗತ್ಪಸಿದ್ದ. ಈ ಶೈಲಿಯಲ್ಲಿರುವ ವೈವಿಧ್ಯ, ಒಂದೊಂದೇ ವಸ್ತುವಿನಿಂದ ತಯಾರಾಗುವ ಹಲವು ಬಗೆಯ ಪಾಕಗಳು ವಿಶಿಷ್ಟ, ಕೋಟ, ಕರ್‍ಹಾಡ, ಗೌಡಸಾರಸ್ವತ, ಹವ್ಯಕ ಬ್ರಾಹ್ಮಣ ವರ್ಗಗಳೂ, ಜೈನ, ಗೌಡ, ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಜನಾಂಗಗಳೂ ವಿಶಿಷ್ಟ ರುಚಿ ವೈಶಿಷ್ಟ್ಯಗಳನ್ನು ಹೊಂದಿವೆ. ಅಂತೆಯೆ ದಲಿತ ವರ್ಗಗಳೂ ತಮ್ಮ ಪಾಕ ವೈಶಿಷ್ಯಗಳನ್ನುಳಿಸಿಕೊಂಡಿದೆ.
  • ಕರಾವಳಿಯ ಮೀನು, ಮಂಗಳೂರಿನ ಹಂಚು, ಬೀಡಿ, ಕಾರ್ಕಳದ ಕರಿಶಿಲೆ, ಪುತ್ತೂರಿನ ಅಡಿಕೆ, ಸುಳ್ಯದ ರಬ್ಬರ್, ಕುಂದಾಪುರದ ಭತ್ತದ ಕೃಷಿ, ಮೂಡಬಿದರೆಯ ಅನನಾಸು, ಉಡುಪಿ-ಮಂಗಳೂರುಗಳ ಮಲ್ಲಿಗೆ, ಉಡುಪಿಯ ಗುಳ್ಳಬದನೆ, ಮಿಜಾರಿನ ಕಾಡುಹೀರೆಕಾಯಿ.
  • ಉಡುಪಿಯ ಅಷ್ಟಮಠಗಳು, ಕಾರ್ಕಳ ಮೂಡಬಿದಿರೆಗಳ ಜೈನ ಶಿಲ್ಪ ಕಲಾಕೃತಿಗಳು, ವೇಣೂರು, ಕಾರ್ಕಳ, ಧರ್ಮಸ್ಥಳಗಳ ಗೊಮ್ಮಟ ವಿಗ್ರಹಗಳು, ಮಂಗಳೂರಿನ ಕೆಲವು ಕ್ರೈಸ್ತ ದೇವಾಲಯಗಳ ವಾಸ್ತು ವಿನ್ಯಾಸ—ಮೊದಲಾದವು ಎತ್ತಿ ಹೇಳಬಹುದಾದ ಕೆಲವು ವೈಶಿಷ್ಟ್ಯಗಳು.
  • ಈ ಪ್ರದೇಶದಾದ್ಯಂತ ಇರುವ ಭೂತಾಲಯ, ನಾಗಬನಗಳು, ಹಲವಾರು ಶಕ್ತಿ (ದೇವೀ) ಆರಾಧನಾ ಸ್ಥಳಗಳು, ನಾಗ ಕ್ಷೇತ್ರಗಳು, ಇಲ್ಲಿಯ ಹಳೆಯ ಮತಾಚಾರಗಳನ್ನು ಪ್ರತಿನಿಧಿಸುತ್ತಿವೆ. ಮಧೂರಿನಿಂದ ಹಟ್ಟಿಯಂಗಡಿಯ ತನಕ ಇರುವ ಹಲವು ಗಣಪತಿ ದೇವಸ್ಥಾನಗಳು, ಈ ಪ್ರದೇಶವು ಒಂದು ಕಾಲದಲ್ಲಿ ಗಾಣಪತ್ಯ ಮತದ ಪ್ರಬಲ ಕೇಂದ್ರವಾಗಿದ್ದನ್ನು ಸೂಚಿಸುತ್ತವೆ. ಹಲವು ಕಡೆ ದರ್ಶನ (ಆವೇಶ-ನುಡಿ)ಗಳು ನಡೆಯುತ್ತಿದ್ದು ಇತ್ತೀಚೆಗೆ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ದೇವಾಲಯ ಭೂತಾಲಯಗಳ ನವೀಕರಣ, ನೂತನ ಮಂದಿರ ನಿರ್ಮಾಣ, ಮತಾಚಾರಗಳ ಪುನರುಜ್ಜೀವನ, ಹೊಸ ಕ್ಷೇತ್ರಗಳ ನಿರ್ಮಾಣ ದೊಡ್ಡ ಪ್ರಮಾಣದಲ್ಲಿ ಆಗಿವೆ.
  • ವಿಸ್ತರಿಸಿರುವ ಅರ್ಥ ಮಂಡಲ, ಕಿರು ಉದ್ಯಮಗಳು, ಕೃಷಿ, ಪರ ಊರುಗಳ ಉದ್ಯೋಗಿ-ಉದ್ಯಮಿಗಳಿಂದ ಬರುತ್ತಿರುವ ಆದಾಯ- ಇವುಗಳಿಂದಾಗಿ ಈ ಪ್ರದೇಶದಲ್ಲಿ ಸಾಮಾನ್ಯ ಜೀವನ ಮಟ್ಟ ಬಹಳಷ್ಟು ಸುಧಾರಿಸಿದೆ.


ಕೆ. ಅನಂತರಾಮರಾವ್‌

ವಿದ್ಯಾ ಪಬ್ಲಿಶಿಂಗ್ ಹೌಸ್ ಪ್ರಾರಂಭವಾಗಿ ಮೂರು ಸಂವತ್ಸರಗಳು ಮಾತ್ರ ಆಗಿವೆ. ಇಷ್ಟರೊಳಗಾಗಿಯೇ ಐದನೇ ಪುಸ್ತಕವನ್ನು ಹೊರತರುತ್ತಿದ್ದೇವೆ. ಜನಸಾಮಾನ್ಯರಿಗೂ ಖರೀದಿಸಲು ಸುಲಭವಾಗುವ ರೀತಿಯಲ್ಲಿ ಬೆಲೆಯನ್ನು ನಿಗದಿಗೊಳಿಸಿದ್ದೇವೆ. ಸರ್ವರೂ ಪ್ರೋತ್ಸಾಹಿಸಬೇಕಾಗಿ ವಿನಂತಿ.

ನಮ್ಮ ಇತರ ಪ್ರಕಟಣೆಗಳು
1. ಅನಂತ ರಾಮಾಯಣ (ಶ್ರೀ ಮದ್ವಾಲ್ಮೀಕಿ ರಾಮಾಯಣ) ರೂ. 60.00
2. ಶ್ರೀ ದ್ವಾದಶಸ್ತೋತ್ರಮ್ (ಪದಚ್ಛೇದ, ಶಬ್ದಾರ್ಥ, ಸಾರಾಂಶ ಸಹಿತ) ರೂ. 32.00
3. ಯಕ್ಷಪ್ರಶ್ನೆ (ಮಹಾಭಾರತ) ರೂ. 22.00
4. ಶ್ರೀ ದಶಾವತಾರಸ್ತುತಿಃ, ಶ್ರೀ ದಶಾವತಾರ ಸ್ತೋತ್ರಮ್ ರೂ. 24.00
5. The Karnataka Education Act (Act 1 of 1995)
(ಕರ್ನಾಟಕ ಎಜ್ಯುಕೇಶನ್ ಆಕ್ಟ್)
ರೂ. 32.00
6. ಸ್ವಾತಂತ್ರ್ಯ ಸ್ವರ್ಣ ರೇಖೆ 1947- 1997
ಕನ್ನಡ ನಾಡಿನ ಪ್ರಸಿದ್ಧ ಲೇಖಕರಿಂದ ಲೇಖನಗಳು ಮತ್ತು ಅಂಕಿ ಅಂಶಗಳು)
ರೂ. 75.00
ಪುಸ್ತಕಗಳು ಬೇಕಿದ್ದರೆ ಬರೆಯಿರಿ
ವಿದ್ಯಾ ಪಬ್ಲಿಷಿಂಗ್ ಹೌಸ್

'ಶ್ರೀ ನಿಲಯ', ಅಲ್ವಾರಿಸ್ ರಸ್ತೆ
ಕದ್ರಿ, ಮಂಗಳೂರು - 575002

ಮುದ್ರಕರು: ದಿಗಂತ ಮುದ್ರಣ ಲಿ. ಮಂಗಳೂರು. C 212551