ದೂರದ ನಕ್ಷತ್ರ/೧೦

ವಿಕಿಸೋರ್ಸ್ ಇಂದ
Jump to navigation Jump to search

೧೦

ರಂಗರಾಯರು ಆ ಬೆಳಗ್ಗೆಯೇ ಹೊರಟು ಹೋದ ವಿಷಯವೂ ಜಯದೇವ ಬಸ್ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಟ್ಟ ವಿಷಯವೂ ವೆಂಕಟರಾಯರಿಗಾಗಲೀ ನಂಜುಂಡಯ್ಯನಿಗಾಗಲೀ ತಿಳಿದು ಬರುವುದರಲ್ಲಿ ಸಂದೇಹ ವಿರಲಿಲ್ಲ. ಆದರೆ ಜಯದೇವ ಮಾತ್ರ ತಾನಾಗಿಯೇ ಆ ಮಾತನ್ನೆತ್ತಲಿಲ್ಲ.

ವಿರೂಪಾಕ್ಷ ಏದುತ್ತ ಬಂದು ಒಬ್ಬರೇ ಇದ್ದ ವೆಂಕಟರಾಯರ ಮುಂದೆ ನಿಂತು ವರದಿಯೊಪ್ಪಿಸಿದ

“ಹೆಡ್ ಮೇಷ್ಟ್ರು ಇವತ್ತು ಬೆಳಗ್ಗೆನೇ ಬಸ್ನಲ್ಲಿ ಹೋದ್ರಂತೆ ಸಾರ್.” ಮುಖ್ಯೋಪಾಧ್ಯಾಯರಿಗೆ ಎಲ್ಲಿಲ್ಲದ ಸಿಟ್ಟು ಬಂತು.

* ಯಾವ ಹೆಡ್ಮೇಷ್ಟ್ರೋ ?”

ವಿರೂಪಾಕ್ಷ ಕಕಾಬಿಕ್ಕಿಯಾದ.

“ಹೆಡ್ಮೇಷ್ಟ್ರು ಸಾರ್."

ವೆಂಕಟರಾಯರು ಮುಷ್ಟಿ ಬಿಗಿದು ಮೇಜಿನ ಮೇಲೆ ಗುದ್ದಿದರು.

“ಇಲ್ಲಿ ನಾನು ಹೆಡ್ಮೇಷ್ಟ್ರು ತಿಳಿತೇನೋ?”

ವಿರೂಪಾಕ್ಷನಿಗೆ ತನ್ನ ತಪ್ಪು ತಿಳಿಯಿತು. ನಿಸ್ತೇಜವಾಯಿತು ಆತನ ಮುಖ..ಹೊಸ ಮುಖ್ಯೋಪಾಧ್ಯಾಯರ ಕೆಂಗಣ್ಣು ನೋಡಿ ಭಯವಾಯಿತು.

“ಯಾರು ನೀನು? ನಿನ್ನ ಹೆಸರೇನು?

“ವಿರೂಪಾಕ್ಷ ಸಾರ್. ನಂಜುಂಡಯ್ಯ ಮೇಷ್ಟ್ರ ತಮ್ಮ ಸಾರ್.”

ಒಮ್ಮೆಲೆ, ವೆಂಕಟರಾಯರ ಕೋಪ ಇಳಿದು ಹೋಯಿತು. ಅವರು ಮುಗುಳ್ನಗಲೆತ್ನಿಸುತ್ತಾ ಕೈ ಬೀಸಿ ಅಂದರು :

“ಕ್ಲಾಸಿಗೆ ಹೋಗು.”

ರಂಗರಾಯರು ಹೊರಟು ಹೋದ ವಿಷಯ ತಿಳಿದಾಗ ನಂಜುಂಡಯ್ಯ, ಜಯದೇವನನ್ನು ಕೇಳಿದರು:

“ಸುದ್ದಿ ಕೇಳಿದಿರಾ ಜಯದೇವ ? -ರಂಗರಾಯರು ಇವತ್ತು ಬೆಳಗ್ಗೆನೇ ಹೋದರಂತೆ.”

“ಹುಂ, ಬಸ್ ನಿಲಾಣದಲ್ಲಿ ನನಗೆ ನೋಡೋಕೆ ಸಿಕ್ಕಿದ್ರು.”

“ಹೌದೆ? ಅವರು ಹೋಗೋದು ಗೊತ್ತಿತ್ತೇನು ನಿಮಗೆ?”

ಗೊತ್ತಿತ್ತು-ಎನ್ನಬೇಕೆಂದು ತೋರಿತು ಜಯದೇವನಿಗೆ..' ಹಾಗೆಯೇ ಹೇಳೆಂದು ಮನಸಿನ ಒಂದು ಭಾಗ ಒತ್ತಾಯಿಸಿತು. ಮನಸಿನ ಇನ್ನೊಂದು ಭಾಗ, ಸುಳ್ಳು ಹೇಳಿದರೂ ತಪ್ಪಿಲ್ಲ-ಇಲ್ಲವೆನ್ನು, ಎಂದು ಆಗ್ರಹ ತೊಟ್ಟಿತು.

ಬಲವಾಗಿತ್ತು ಆ ಆಗ್ರಹ,

“ಇಲ್ಲ! ಕಾಫಿಗೇಂತ ಬೆಳಿಗ್ಗೆ ಹೋದವನಿಗೆ ಅಕಸ್ಮಾತ್ ಸಿಕ್ಕಿದರು.”

“ಓ!"

ನಂಜುಂಡಯ್ಯ, ಪರೀಕ್ಷಿಸುವ ದೃಷ್ಟಿಯಿಂದ ಜಯದೇವನನ್ನು ನೋಡಿದರು. ಆ ಮಾತನ್ನು ಸತ್ಯವೆಂದು ನಂಬಲು ಅವರು ಸಿದ್ಧವಿರಲಿಲ್ಲ. ಅಂತೂ ಈ ಜಯದೇವ ಕಟ್ಟುನಿಟ್ಟಿನ ಬ್ರಾಹ್ಮಣನೇ ಸರಿ, ರಂಗರಾಯನ ಪಕ್ಷಪಾತಿಯೇ–ಎಂದು ಅವರಿಗೆ ತೋರಿತು. ಮರುಕ್ಷಣವೇ ವೆಂಕಟರಾಯನೂ ಬಾಹ್ಮಣನೇ, ಆತನ ಬುದ್ಧಿ ಯಾಕಿರಬಾರದು ಈ ಜಯದೇವನಿಗೆ? ಅನಿಸಿತು.

ವೆಂಕಟರಾಯರು ಮೂದಲಿಸುತ್ತ ಅಂದರು :

“ಸಭ್ಯ ವರ್ತನೇನೂ ತಿಳೀದೇನೋ ಆತನಿಗೆ? ಬಂದು ಹೇಳ್ಬಿಟ್ಟಾದ್ರೂ ಹೋಗ್ವೇಕೋ ಬೇಡ್ವೋ?”

ರಂಗರಾಯರ ನಿಂದನೆಯನ್ನು ಸಹಿಸಲಾರದೆ ಜಯದೇವನೆಂದ:

“ನಿಮಗೆ ಹೇಳೋಕೆ ಮರೆತು ಹೊಯ್ತು, ನಿಮ್ಮಿಬ್ಬರಿಗೂ ನಮಸ್ಕಾರ ತಿಳಿಸ್ಬೇಕೂಂತಂದ್ರು.”

“ಹಾಗೊ ! ಹುಂ.”

ತಾನು ಮತ್ತು ಅವರಿಬ್ಬರ ನಡುವೆ ತನಗರಿಯದೆಯೇ ಅಡ್ಡ ಗೋಡೆಯೊಂದು ಎದ್ದಿತೆಂಬುದು ಜಯದೇವನಿಗೆ ಸ್ಪಷ್ಟವಾಯಿತು. ಅದನ್ನು ತಪ್ಪಿಸಬೇಕೆಂದು ಆತ ಶ್ರಮಿಸಿದ್ಯ, ಆದರೆ ಅದು ಅನಿವಾರ್ಯವಾಗಿತ್ತು,

ಇನ್ನು ಆದುದಾಗಲಿ–ಎಂದುಕೊಂಡ ಜಯದೇವ, ತನ್ನ ಮನಸಾಕ್ಷಿಗೆ ಅನ್ಯಾಯವಾಗುವಂತೆ ವರ್ತಿಸಲು ಆತ ಇಚ್ಛಿಸಲಿಲ್ಲ, ಸಾಧ್ಯವಾದಷ್ಟು ಮಟ್ಟಿಗೆ ಆತ್ಮಾಭಿಮಾನವನ್ನು ಉಳಿಸಿಕೊಂಡೇ ಬದುಕಬೇಕೆಂದು ಆತ ಬಯಸಿದ.

ಆದರೆ ಸುಲಭವಾಗಿರಲಿಲ್ಲ ಅಂತಹ ಬದುಕು.

ಹಿಂದಿನ ಮುಖ್ಯೋಪಾಧ್ಯಾಯರು ಅಧೋಗತಿಗೆ ಇಳಿಸಿದ್ದರೆಂದು ಹೇಳಲಾದ ಶಾಲೆಯನ್ನು ಮತ್ತೆ ಊರ್ಜಿತ ಸ್ಮಿತಿಗೆ ತರಲು ಬದ್ಧ ಕಂಕಣರಾದ ವೆಂಕಟರಾಯರು ಸುಧಾರಣೆಗಳನ್ನು ಜಾರಿಗೆ ತರತೊಡಗಿದರು. ಅವರೂ ನಂಜುಂಡಯ್ಯನ ದೃಷ್ಟಿಯಲ್ಲಿ 'ಹಳೆ ಮರ್ಜಿಯ ಹಳೇ ಮೆಟ್ರಿಕ್ಯುಲೇಟ್,' ತಾವು ಮುಂದೆ ಮುಖ್ಯೋಪಾಧ್ಯಾಯನಾಗಿ ಬರುವುದಕ್ಕೆ ಪೂರ್ವ ಭಾವಿಯಾಗಿ ಸ್ವಲ್ಪ ಕಾಲವಷ್ಟೇ ಇರುವ ಈ ಹಳಬ ಬೇಕಾದ್ದನ್ನು ಮಾಡಿ ಕೊಳ್ಳಲಿ–ಎಂದು ನಂಜುಂಡಯ್ಯ ಸುಮ್ಮನಾದರು.

ವೆಂಕಟರಾಯರ ಸುಧಾರಣೆಯಲ್ಲಿ ಮೊದಲನೆಯದು ಶಾಲೆಯ ಘನತೆಯನ್ನುಳಿಸುವ ಕಾರ್ಯಕ್ರಮ. ಜಯದೇವ ಅಲ್ಲಿ ಮಲಗಲೇ ಕೂಡದೆಂಬುದು ವೆಂಕಟರಾಯರ ದೃಢ ಅಭಿಪಾಯವಾಗಿತ್ತು.

“ಇನ್ನೊಂದು ವಾರದೊಳಗೆ ನೀವು ಬೇರೆ ಕಡೆ ಏರ್ಪಾಡು ಮಾಡಲೇ ಬೇಕು” ಎಂದು ಅವರು ಖಡಾಖಂಡಿತವಾಗಿ ಹೇಳಿಯೇ ಬಿಟ್ಟರು.

ಶಾಲೆಯಲ್ಲಿಯೇ ಇರಿ-ಎಂದು ಹಿಂದೆ ಹೇಳಿದ್ದ ನಂಜುಂಡಯ್ಯ ಈಗ ಮಾತೆತ್ತಲಿಲ್ಲ.

ಜಯದೇವ ನಾಲ್ಕನೆಯ ತರಗತಿಯಲ್ಲಿ ಹುಡುಗರ ನೆರವು ಕೇಳಿದ:

“ಯಾರಾದರೂ ನನಗೊಂದು ಒಳ್ಳೆ ರೂಮು ದೊರಕಿಸಿ ಕೊಡ್ರೀರೇನಪ್ಪ? ಸ್ಕೂಲ್ನಲ್ಲೆ ಇದ್ದು ಬೇಜಾರಾಗಿದೆ.”

“ಓ! ಅದಕ್ಕೇನ್ಸಾರ್? ಹುಡುಕಿ ಕೊಡ್ರೀವಿ” ಎಂಬ ಉತ್ತರ ಹಲವು ಕಂಠಗಳಿಂದ ಬಂತು.

ಕೊಠಡಿ ಹುಡುಕುತಿದ್ದುದಕ್ಕೆ ನಿಜವಾದ ಕಾರಣವೇನೆಂಬುದು ಕೆಲವು ಹುಡುಗರಿಗೆ ಹೊಳೆದೇ ಹೊಳೆಯಿತು.

ಮಾರನೆ ದಿನ ಒಬ್ಬಿಬ್ಬರು ಹುಡುಗರು ಒಂದೆರಡು ಕೊಠಡಿಗಳನ್ನು ಜಯದೇವನಿಗೆ ತೋರಿಸಿದರು. ನಾಲ್ಕೈದು ರೂಪಾಯಿ ಬಾಡಿಗೆ. ಹೇಳಿಕೊಳ್ಳುವ ಅನುಕೂಲತೆಯೊಂದೂ ಇರಲಿಲ್ಲ, ಆ ಎರಡರಲ್ಲೇ ಯಾವುದಾದ ರೊಂದನ್ನು ಗೊತ್ತು ಮಾಡುವುದೇ ಮೇಲೆಂದುಕೊಂಡ ಜಯದೇವ.

ಅಷ್ಟರಲ್ಲೆ ನಾಗರಾಜ ಎಂಬೊಬ್ಬ ವಿದ್ಯಾರ್ಥಿ, ಜಯದೇವನ ಬಳಿಗೆ ಪ್ರತ್ಯೇಕವಾಗಿ ಬಂದು ಹೇಳಿದ:

“ನಮ್ಮನೇ ಮಹಡಿ ಮೇಲೆ ಒಂದು ರೂಮಿದೆ ಸಾರ್, ಕಕ್ಕಸು-. ಸಾನಕ್ಕೆಲ್ಲ ಪಕ್ಕದಿಂದ್ಲೆ ಇಳಿದ್ಬಿಟ್ಟು ಹೋಗ್ಬಹುದು. ಬರ್ತೀರಾ ಸಾರ್?”

"ಬೇರೆ ಯಾರಿರ್ತಾರೆ ಅಲ್ಲಿ?"

“ಯಾರೂ ಇಲ್ಲ ಸಾರ್, ಮಹಡೀನ ಗೋಡೌನ್ ಮಾಡಿದ್ದಾರೆ.”

ಆ ಹುಡುಗನ ತಂದೆ ಜಯರಾಮಶೆಟ್ಟರು ಆ ಊರಿನ ಪ್ರಮುಖ ವ್ಯಾಪಾರಿಯಾಗಿದ್ದರು. ಅವರು ಶ್ರೀಮಂತರೆಂಬುದು ಜಯದೇವನಿಗೆ ತಿಳಿದಿತ್ತು, ಆ ವಾತಾವರಣ ತನಗೆ ಸರಿಹೋಗುವುದೋ ಇಲ್ಲವೋ ಎಂದು ಆತ ಶಂಕಿಸಿದ.

“ಹೋಟೆಲಿಗೆ ದೂರವಾಗುತ್ತೇನೋ ?”

“ಇಲ್ಲ! ಆನಂದವಿಲಾಸದ ಬೋರ್ಡು ನಮ್ಮನೆಗೇ ಕಾಣಿಸುತ್ತೆ.”

“ಎಷ್ಟಪ್ಪಾ ಬಾಡಿಗೆ?”

ಹುಡುಗ ಹೇಳಲು ಸಂಕೋಚಪಟ್ಟ, ಅದು ಜಾಸ್ತಿಯೇ ಇರಬಹುದೆಂಬ ಜಯದೇವನ ಸಂದೇಹ ಬಲವಾಯಿತು.

“ಎಷ್ಟು ಹೇಳು?

“ಬಾಡಿಗೆ ಇಲ್ಲ ಸಾರ್”

“ಅಂದ್ರೆ?”

“ನಮ್ಮಪ್ಪ ಹೇಳಿದ್ರು ಸಾರ್ -ಮೇಷ್ಟ್ರಿಂದ ಬಾಡಿಗೆ ತಗೋಬಾರ್ದೂಂತ."

“ಅದು ಹ್ಯಾಗಾಗುತ್ತೆ?

“ನನಗೆ ದಿನಾ ಸ್ವಲ್ಪ ಹೊತ್ತು ಪಾಠ ಹೇಳ್ಕೊಟ್ಬಿಡಿ ಸಾರ್”

ಒಳ್ಳೆಯ ಯೋಜನೆ! ನಾಗರಾಜನ ತಂದೆಯ ತೂಗಿ-ಅಳೆದು. ನೋಡುವ ಸಾಮರ್ಥ್ಯಕ್ಕೆ ಜಯದೇವ ತಲೆದೂಗಿದ. -

“ನೀವು ಒಪ್ಪಿದೀರಿ ಅಂತ ಹೇಳ್ಲೆ ಸಾರ್ ಮನೇಲಿ?”

ಜಯದೇವ ಮುಗುಳ್ನಕ್ಕು ಕೊಠಡಿ ನೋಡದೆಯೇ, “ಹೂಂ” ಎಂದ.

ಆ ಕೊಠಡಿ ಚೆನ್ನಾಗಿಯೇ ಇತ್ತು, ಗಾಳಿ ಬೆಳಕು ಯಥೇಷ್ಟವಾಗಿ. ಓಡಾಡುವ ಹಾಗಿತ್ತು ವಾತಾವರಣ, ಜಯರಾಮಶೆಟ್ಟರು ಉಪಾಧ್ಯಾಯರ ಅನುಕೂಲಕ್ಕೆಂದು ಒಂದು ಆರಾಮ ಕುರ್ಚಿಯನ್ನೂ ಹುಲ್ಲಿನ ಚಾಪೆಯನ್ನೂ ಕೊಟ್ಟರು. ಕೊಠಡಿಯ ಗೋಡೆಯ ಮೇಲೆ ಶೆಟ್ಟರ ಸಂಸಾರಕ್ಕೆ ಸಂಬಂಧಿ ಸಿದ ಭಾವಚಿತ್ರಗಳಿದುವು, ತಿರುಪತಿ ವೆಂಕಟರಮಣನಿದ್ದ, ಮೇಕಪ್ ಸುಂದರಿ ಚಲಚ್ಚಿತ್ರ ತಾರೆಯ ದೊಡ್ಡ ಚಿತ್ರವಿದ್ದ ಕ್ಯಾಲೆಂಡರಿತ್ತು. ಮನೆಯವರು ಅದೊಂದನ್ನೂ ತೆಗೆಯಲಿಲ್ಲ, ಗೋಡೆ ಶುಭ್ರವಾಗಿ ಖಾಲಿಯಾಗಿಯೇ ಇರಬೇಕೆಂಬ ಆಸೆ ಜಯದೇವನಿಗೆ ಇತ್ತಾದರೂ ಹಾಗೆ ಸಲಹೆ ಮಾಡಲು ಆತ ಸಮರ್ಥನಾಗಲಿಲ್ಲ - -

ನಾಗರಾಜಶೆಟ್ಟರು ಜಯದೇವನಿಗೆ ಕೊಠಡಿ ಕೊಟ್ಟುದನ್ನು ಕೇಳಿ ನಂಜುಂಡಯ್ಯನೆಂದರು :

“ನಮ್ಮ ಊರಲ್ಲಿ ಒಳ್ಳೆಯ ಜನರಿಗೇನೂ ಕಡಮೆ ಇಲ್ಲ!”

ತಿಂಗಳು ದಾಟಿದರೂ ವೆಂಕಟರಾಯರು ಮನೆ ಮಾಡುವ ಲಕ್ಷಣ ಕಾಣಿಸಲಿಲ್ಲ ರಂಗರಾಯರಿದ್ದ ಮನೆಗೆ ಬೇರೆ ಯಾರೋ ಒಕ್ಕಲು ಬಂದರು.

“ಮಳೆಗಾಲ ಕಳೆದು ಹೋಗ್ಗಿಂತ ಸುಮ್ಮಗಿದೀನಿ” ಎಂದು ಅವರು ವಿವರಣೆಯನ್ನೇನೋ ಕೊಟ್ಟರು.

ಆದರೆ ನಿಜವಾದ ಕಾರಣವನ್ನು ಜಯದೇವ ಊಹಿಸಿದ್ದ, ಆದಷ್ಟು ದಿನ ಹೆಚ್ಚು ವೆಚ್ಚವಿಲ್ಲದೆಯೇ ಕಳೆಅಯಲೆಂಬುದು ವೆಂಕಟರಾಯರ ಹಂಚಿಕೆಯಾಗಿತ್ತು.

ಅವರ ವಿಷಯವಾಗಿ ಗೌರವ ತಳೆಯುವುದು ಜಯದೇವನಿಂದಾಗಲಿಲ್ಲ. 'ಆ ಮನುಷ್ಯನಲ್ಲಿ ವಿದ್ವತ್ತೇನೋ ಇತ್ತು, ಆದರೆ ವಿನಯವೇನೂ ಇರಲಿಲ್ಲ. ತನ್ನ ಹೊರತು ಉಳಿದವರನ್ನೆಲ್ಲ ತುಚ್ಛವಾಗಿ ಕಾಣುವ ಅವರ ಮನೋವೃತ್ತಿಯಿಂದ ವಾಕರಿಕೆ ಬಂದ ಹಾಗಾಗುತಿತ್ತು ಜಯದೇವನಿಗೆ. ವೆಂಕಟರಾಯರಲ್ಲಿ ಇನ್ನೊಂದು ದುರ್ಗುಣವಿತ್ತು, ಅದು ವಕ್ರ ವಾಚಾಳಿತನ, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವುದರಲ್ಲಿ ಅವರು ಬಲು ನಿಪುಣರಾಗಿದ್ದರು.

“ನಂಜುಂಡಯ್ಯನಿಗೇನಪ್ಪ–ಊರಿನವರು. ಆದರೆ ಎಲ್ಲಿಂದಲೋ ಬಂದಿರೋರು, ಹೊರಹೊರಗಿನೋರು, ನಾವು ತಾನೆ?"

ಅಥವಾ, ಅದಕ್ಕಿಂತಲೂ ಒರಟಾಗಿ:

“ನಮ್ಮವರೂಂತ ಅಂದುಕೊಳ್ಳೋಕೆ ನೀವು ಒಬ್ಬರಾದರೂ ಇದೀರಲ್ಲ ఇల్లి...."

ಜಯದೇವ ಅವರೊಡನೆ ಬಲು ಎಚ್ಚರವಾಗಿ ವರ್ತಿಸುತ್ತಿದ್ದ ತಾನು. ಇಲ್ಲದಿದ್ದಾಗ ನಂಜುಂಡಯ್ಯನೊಡನೆ ತನ್ನ ವಿಷಯವಾಗಿ ಮಧುರವಲ್ಲದ ಮಾತುಕತೆ ನಡೆಯುತಿತ್ತೆಂಬುದು ಆತನಿಗೆ ಗೊತ್ತೇ ಇತ್ತು.

ಒಂದು ಕಾಲದಲ್ಲಿ ಜರಿ ಪೇಟವನ್ನು ಬಿಡದೆ ತೊಡುತಿದ್ದ ವೆಂಕಟ ರಾಯರು ಈಗ ಕಟ್ಟಾ ರಾಷ್ಟ್ರೀಯವಾದಿಯಾಗಿದ್ದಶು. ಅಲ್ಲದೆ ಅವರು ಆಧುನಿಕರು ಕೂಡಾ, ದೇವತಾ ಪಾರ್ಥನೆಯಲ್ಲಿ ಬದಲಾವಣೆಯಾಗಬೇಕೆಂದು ಅವರು ಸೂಚಿಸಿದರು.

“ಏನು ಜಯದೇವ, ಯಾವ ಹಾಡು ಸೂಚಿಸ್ತೀರಾ ನೀವು? 'ದೇವಿ ಭುವನ ಮನಮೋಹಿನಿ' ಇರ್ಲೋ??”

ಆ ಪ್ರಶ್ನೆಯಲ್ಲಿ ವ್ಯಂಗ್ಯವಿತ್ತು, ಜಯದೇವ ತಕ್ಷಣ ಉತ್ತರವೀಯಲಿಲ್ಲ.

ತಾವು ಸೂಚಿಸುವುದು ಅಗತ್ಯವೆಂದು ಭಾವಿಸಿ ನಂಜುಂಡಯ್ಯ ನೆಂದರು;

“ಬದಲಾಯಿಸಬೇಕು ನಿಜ. ನಾನು ಆ ಕಡೆ ಗಮನವನ್ನೇ ಕೊಟ್ಟಿರ್ಲಿಲ್ಲ. ಕಾಯೌ ಶ್ರೀಗೌರಿ ಚೆನ್ನಾಗಿರುತ್ತೆ--ಅಲ್ವೆ?"

ಕೊನೆಗೂ ಮನಸ್ಸಿನಲ್ಲಿದುದನ್ನು ಜಯದೇವ ಹೇಳಿದ:

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು-ಇಡೋಣ.”

“ಬೇಡೀಪ್ಪ ಸದ್ಯಃ !” ಎಂದು ವೆಂಕಟರಾಯರು ನಕ್ಕರು.

“ಯಾಕ್ಸಾರ್?"

“ನೆಹರೂ ಹೇಳಿದ್ದು ಓದಿಲ್ವೇನ್ರಿ? ಭಾಷಾದುರಭಿಮಾನ ಇರಕೂಡ್ದು,ಅಲ್ದೆ ಕರ್ನಾಟಕ ಅನ್ನೋದು ಎಲ್ಲಿದೆ? ನಾವು ಮೈಸೂರು ರಾಜ್ಯದಲ್ಲಿದೊಂಡು ಆ ಹಾಡು ಹೇಳೋದೆ? ಅದು ರಾಜಕೀಯ ವಿಷಯ ಬೇರೆ!"

ತಮ್ಮ ಸೂಚನೆಯೇ ವೆಂಕಟರಾಯರಿಗೂ ಮೆಚ್ಚುಗೆಯಾಗುತ್ತದೆಂದು ನಂಜುಂಡಯ್ಯ ನಂಬಿದರು. -

“ನೋಡಿ ನಂಜುಂಡಯ್ಯ, ನನ್ನ ವೈಯಕ್ತಿಕ ಅಭಿಪ್ರಾಯ ಹೇಳೋದಾದ್ರೆ ನಿಮ್ಮ ಸೂಚನೇನೇ ನನಗೂ ಮಾನ್ಯ, ಆದರೆ ನಮ್ಮ ಮಂತ್ರಿಮಂಡಲಕ್ಕೆ ಅದು ಹಿಡಿಸೋದಿಲ್ಲ.”

ನಂಜುಂಡಯ್ಯ ಸುಮ್ಮನೆ ಕುಳಿತರು.

ಇದಕ್ಕೆಲ್ಲಾ ಪರಿಹಾರ ಅಂದ್ರೆ-ಜನಗಣಮನ. ರಾಷ್ಟ್ರಗೀತೆ ಹಾಕ್ಬೀಡೋಣ. ನಮ್ಮ ಹುಡುಗರಲ್ಲಿ ರಾಷ್ಟ್ರಾಭಿಮಾನ ತುಂಬಿದ ಹಾಗೂ ಆಗುತ್ತೆ. ಆಲ್ವೆ ಜಯದೇವ್?”

ಜಯದೇವ ಅಲ್ಲವೆನ್ನಲೂ ಇಲ್ಲ: ಹೌದೆನ್ನಲೂ ಇಲ್ಲ, ನಂಜುಂಡಯ್ಯನಿಗೂ ಒಂದುರೀತಿಯಲ್ಲಿ ಮುಖಭಂಗವಾಯಿತು.

ಆ ಸಾಯಂಕಾಲ ನಂಜುಂಡಯ್ಯ ಜಯದೇವನನ್ನು ಕರೆದರು.

“ಬನ್ನಿ, ವಾಕಿಂಗ್ ಹೋಗೋಣ.”

ತನ್ನೊಬ್ಬನನ್ನೇ ಕರೆಯುವುದೆಂದರೆ ವೆಂಕಟರಾಯರಿಗೆ ಅಪ್ರಿಯವಾದುದನ್ನೇನೋ ಮಾತಾಡುವುದಕ್ಕೋಸ್ಕರ ಇರಬೇಕು–ಎಂದು ಜಯದೇಷ ಊಹಿಸಿದ.

“ಇಲ್ಲ ಸಾರ್ ಕ್ಷಮಿಸಿ, ಇವತ್ತು ಬಟ್ಟೆ ಒಗೆದು ಹಾಕ್ಕೇಕು, ಬರೋದಿಲ್ಲ” ಎಂದು ಹೇಳಿ ಆತ ತಪ್ಪಿಸಿಕೊಂಡ.

ವೆಂಕಟರಾಯರು ಆಫೀಸು ಕೊಠಡಿಯಲ್ಲೂ ಸುಧಾರಣೆ ಮಾಡಿದರು. ಪಂಚಮ ಜಾರ್ಜರು ನಿವೃತ್ತರಾಗಬೇಕಾಯಿತು. ಊರಲ್ಲಿ ಸಂತೆಯ ದಿನ ಹೊಸ ಭಾವಚಿತ್ರಗಳನ್ನು ಕೊಂಡುತಂದರು. ಒಂದೆಡೆ ರಾಷ್ಟ್ರಾಧ್ಯಕ್ಷರು ಮತ್ತು ರಾಜಪ್ರಮುಖರು; ಇನ್ನೊಂದೆಡೆ ರಾಷ್ಟ್ರದ ಪ್ರಧಾನಿ ಮತ್ತು ಮೈಸೂರಿನ ಮುಖ್ಯ ಸಚಿವರು.

ಗೋಡೆ ಗಡಿಯಾರ ದುರಸ್ತಿಯಾಯಿತು.

ಶಾಲೆಗೊಬ್ಬ ಜವಾನ ಬೇಕೇಬೇಕೆಂದು ಆಗ್ರಹಪಡಿಸಿ, ವೆಂಕಟ ರಾಯರು ಮೇಲಧಿಕಾರಿಗಳಿಗೆ ಬರೆದರು. ಅಷ್ಟರವರೆಗೆ ತಾತ್ಕಾಲಿಕವಾಗಿ ಇರಲೆಂದು ತಿಂಗಳಿಗೆ ಎಂಟು ರೂಪಾಯಿ ಸಂಬಳದ ಮೇಲೆ, ಶಂಕರಪ್ಪನವರ ಸಹಾಯದಿಂದ, ಆಳೊಬ್ಬನನ್ನು ಗೊತ್ತು ಮಾಡಿದರು.

ಶಾಲೆಯ ಕೆಲಸವನ್ನಲ್ಲವಾದರೂ ಆ ಜವಾನ ವೆಂಕಟರಾಯರ ಸಮಸ್ತ ಕೆಲಸಗಳನ್ನೂ ಮಾಡಿದ.

ಆಡಳಿತದ ಶಿಸ್ತು-ಅಚ್ಚು ಕಟ್ಟು ಯಾರಾದರು ಮೆಚ್ಚುವಂಥದೇ. ಅದಕ್ಕಾಗಿ ವೆಂಕಟರಾಯರನ್ನು ಟೀಕಿಸುವ ಹಾಗೆಯೇ ಇರಲಿಲ್ಲ, ಆದರೆ ಅವರ ಎಲ್ಲ ಸಾಮರ್ಥವೂ ಸಣ್ಣ ಪುಟ್ಟ ಕೆಲಸಗಳಿಗಾಗಿಯೇ ವಿನಿಯೋಗವಾಗುತ್ತಿತ್ತು.

ಒಂದು ವಿಷಯದಲ್ಲಿ ಮಾತ್ರ ಅವರು ಕೃತಕೃತ್ಯರಾಗಲೇ ಇಲ್ಲ, ಅದು ವಿದ್ಯಾರ್ಥಿಗಳ ಒಲವನ್ನು ಸಂಪಾದಿಸುವ ವಿಷಯ. ಎದುರಿಗೇನೋ ಹುಡುಗರು ಭಯಭೀತಿಗಳನ್ನು ವ್ಯಕ್ತಪಡಿಸುತಿದ್ದರು. ಆದರೆ ವೆಂಕಟರಾಯರು ಮುಖ ತಿರುಗಿಸಿದೊಡನೆ, ಅವರ ಹಾವ ಭಾವಗಳನ್ನು ಅಣಕಿಸುತ್ತ, ಲೇವಡಿ ಮಾಡುತಿದ್ದರು.

ಸ್ವಲ್ಪ ಮುಟ್ಟಿಗೆ ಈ ಮಾತು ನಂಜುಂಡಯ್ಯನಿಗೂ ಅನ್ವಯಿಸುತ್ತಿತ್ತು.

ಜಯದೇವ ಮಾತ್ರ ಆ ಕ್ಷೇತ್ರದಲ್ಲಿ ಸಂಪೂರ್ಣ ವಿಜಯಿಯಾಗಿದ್ದ. ಪಾಠ ಹೇಳಿಕೊಡುವ ಕೆಲಸಕ್ಕೆ ಹೊಸಬನಾದರೂ ಆತ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ. ಒಬ್ಬಂಟಿಗನಾಗಿ ಜಯದೇವ ದೊರೆತರೆ ಸಾಕು, ಹುಡುಗರು ಇಲ್ಲವೆ ಹುಡುಗಿಯರು ಅವನನ್ನು ಮುತ್ತಿಕೊಳ್ಳುತಿದ್ದರು. ಹಾದಿಯಲ್ಲಿ ಹುಡುಗರು ಕಾಣಲು ದೊರೆತಾಗ ಜಯದೇವನಿಗೆ ಸಿಗುತಿದ್ದ ನಮಸ್ಕಾರಗಳೂ ಅಷ್ಟೇ. ఆ ವಂದನೆಗಳು ಪ್ರೀತಿಪೂರ್ವಕವಾಗಿ ಬರುತಿದ್ದುವು.. ತರಗತಿಗಳ ಒಬ್ಬಿಬ್ಬರು ಪೋಲಿ ಹುಡುಗರು ಕೂಡ ಜಯದೇವನ ನಗೆಯ ಆಹ್ವಾನಕ್ಕೆ ಮಾರು ಹೋಗುತಿದ್ದರು. ಹಾಗೆ ಹಾದಿಯಲ್ಲಿ ನಮಸ್ಕಾರಗಳನ್ನು ಸ್ವೀಕರಿಸಿದಾಗಲೆಲ್ಲ ಜಯದೇವನಿಗೆ ತಾನು ವಿದ್ಯಾರ್ಥಿಯಾಗಿದ್ದ ಕಾನಕಾನಹಳ್ಳಿ ಶಾಲೆಯು ನೆನಪಾಗುತ್ತಿತ್ತು, ಅಲ್ಲೊಬ್ಬ ಉಪಾಧ್ಯಾಯಧಾಯರು, ಶಾಲೆಯ ಹೊರಗೆ ಬೀದಿಯಲ್ಲಿ ವಿದ್ಯಾರ್ಥಿಗಳು ಯಾರಾದರೂ ತಮಗೆ ನಮಸ್ಕರಿಸದೇ ಹೋದರೆ ಗುರುತಿಟ್ಟುಕೊಂಡು ಮರುದಿನ ತರಗತಿಯಲ್ಲಿ ಅವರನ್ನು ಬೆಂಚಿನ ಮೇಲೆ ನಿಲ್ಲಿಸಿ, ಶಿಷ್ಟಾಚಾರವನ್ನು ಕಲಿಸಿಕೊಡುತಿದ್ದರು. ಆ ನೆನಪು ಆದಾಗಲೆಲ್ಲ ಜಯದೇವನಿಗೆ ನಗು ಬರುತಿತ್ತು.

ಮನಸ್ಸು ಉಲ್ಲಾಸವಾಗಿದ್ದ ದಿನಗಳಲ್ಲಿ ಜಯದೇವ ಬೆಂಗಳೂರಿಗೆ ವೇಣುಗೋಪಾಲನಿಗೆ ಕಾಗದ ಬರೆಯುತಿದ್ದ, ಒಮ್ಮೊಮ್ಮೆ ಕಾನಕಾನಹಳ್ಳಿಗೆ ತನ್ನ ತಂದೆಗೂ ಕೂಡಾ.

ಅವರಿಂದಲೂ ಆಗಾಗ್ಗೆ ಕಾಗದಗಳು ಬರುತಿದ್ದುವು. ಜಗತ್ತು ವಿಶಾಲ ವಾಗಿದೆ ಎಂಬುದನ್ನು ತೋರಿಸಿಕೊಡುತಿದ್ದುವು.

ಆದರೆ, ಘಾಸಿಗೊಂಡ ಹೃದಯದೊಡನೆ ವರ್ಗವಾಗಿ ಹೋದ ರಂಗರಾಯರು ಜಯದೇವನಿಗೆ ಬರೆಯಲೇ ಇಲ್ಲ......