ದೇವಾ
``ನಮಃ ಶಿವಾಯೇತಿ ಶಿವಂ ಪ್ರಪದ್ಯೇ ಶಿವಂ ಪ್ರಸೀದೇತಿ ಶಿವಂ ಪ್ರಪದ್ಯೇ ಶಿವಾತ್ಪರಂ ನೇತಿ ಶಿವಂ ಪ್ರಪದ್ಯೇ ಶಿವೋsಹಮಸ್ಮೀತಿ ಶಿವಂ ಪ್ರಪದ್ಯೇ ಎಂದು ನಿಮ್ಮ ಪವಿತ್ರವಚನವಿಪ್ಪುದಾಗಿ ಎನ್ನ ತನುವ ನಿಮ್ಮ ಶರಣರ ಸೇವೆಯಲ್ಲಿರಿಸುವೆನಯ್ಯಾ. ಆನು ಸತ್ಕಾರ್ಯದಿಂದ ಸಂಪಾದಿಸಿದ ಧನವ ನಿಮ್ಮ ನಿಲುವಿಂಗಾಗಿ ವಿನಿಯೋಗಿಸುವೆನಯ್ಯಾ. ಇಂತೀ ಸಕಲದ್ರವ್ಯವ ನಿರ್ವಂಚನೆಯಿಂದ ನಿಮಗರ್ಪಿಸಿ
ನಿಮ್ಮಡಿಯ ಹೊಂದಲಿಚ್ಛಿಸುವೆನಯ್ಯಾ. ಮೇಣು
ನಿಮ್ಮ ಸುಪ್ರಸಾದವ ಪಡೆದು ಲಿಂಗಭೋಗೋಪಭೋಗಿಯಾಗಿ
ನಿಮ್ಮ ಹೊಂದಲಾತುರಿಪೆನಯ್ಯಾ. ದೇವಾ
ನೀವು ಸರ್ವಶಕ್ತರಾಗಿ ಅಂದಿಂದು ಮುಂದೆಂದಿಗೆಯೂ ನಿಮ್ಮ ಸರಿಮಿಗಿಲಾರೂ ಇಲ್ಲವೆಂಬುದನರಿದು ನಿಮ್ಮಡಿಯ ಸೇರೆ ಯತ್ನಿಸುವೆನಯ್ಯಾ. ಬಳಿಕ ನೀವೇ ಎನ್ನ ಸ್ವರೂಪವಾಗಿ [ಅನ್ಯ] ಭೇದವಡಗಿ ನಿಮ್ಮೊಡನೆ ಬೆರೆದು ನಿತ್ಯಮುಕ್ತನಾಗಿರ್ಪೆನಯ್ಯಾ ಕೂಡಲಚೆನ್ನಸಂಗಮದೇವಾ.