ದ್ರೋಣಪರ್ವ: ೦೩. ಮೂರನೆಯ ಸಂಧಿ
ಸೂ. ಹನುಮನನುಜನ ಬಾಹುಬಲ ರಿಪು
ವನಧಿಯನು ತುಳುಕಿದನು ಭಗದ
ತ್ತನನು ಮರ್ದಿಸಿ ಮುರಿದನರ್ಜುನ ಸುಪ್ರತೀಕವನು
ಗುರುಗಳಾಡಿದ ಭಾಷೆ ಪರಬಲ
ದರಸ ಕಟ್ಟುವದದು ನಿಲಲಿ ನ
ಮ್ಮರಸ ಸಿಲುಕಿದ ಭೀಮ ಗಜ ಕಟ್ಟಿದುದು ಬೀದಿಗಳ
ತಿರುಗಲಾಪರೆ ಸಮಯವಿದು ಸಂ
ಗರ ಸಮರ್ಥರು ಬರಲಿ ಯೆಂಬ
ಬ್ಬರದೊಳಗೆ ಭಗದತ್ತ ಮೇಳೈಸಿದನು ನಿಜಗಜವ ೧
ಬಲವೊರಜೆ ಎಡವೊರಜೆ ಬೆನ್ನಿನ
ಮಿಳಿಯ ಜಾಳಿಗೆವೊರಜೆ ತಳ ಸಂ
ಕಲೆಯ ತೊಡರಂಕಣಿಯ ಕೊಂಡೆಯ ಪಕ್ಕ ಗಂಟೆಗಳ
ತುಳುಕಿನುಗ್ಗಡಣೆಗಳ ಹಿಣಿಲಿನ
ಬಲುವೊರಜೆಗಳ ಬಾರ ಸಂಕಲೆ
ಗಳನು ಬಿಗಿದರು ಜೋಡಿಸಿದರುಬ್ಬರದ ಮದಗಜವ ೨
ಬಿಗಿದು ಗಳವತ್ತಿಗೆಯನೆದೆವ
ತ್ತಿಗೆಯ ಘನಮುಂಡಿಗೆಯ ಲೌಡಿಯ
ಬಿಗಿದು ಗುಳ ರೆಂಚೆಗಳ ಭಾರಿಯ ಕೈಯ ಪಟ್ಟೆಯವ
ಅಗಿವ ಬಡಿಗೆಯನಂಕುಶದ ಕ
ಟ್ಟಿಗೆಯ ಧಾರೆಯ ಕಮಳದಳ ಕೊಡ
ತಿಗಳ ಕೈಹಾರೆಗಳನಳವಡಿಸಿದರು ವಹಿಲದಲಿ ೩
ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾ ನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ ೪
ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈ ಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು ೫
ಸುತ್ತ ಮೆರೆದವು ಮೇಲೆ ಪಲ್ಲವ
ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ
ಒತ್ತಿ ಕಿವಿಗಳನೊದೆದು ಶಿರದಲಿ
ತೆತ್ತಿಸಿದರಂಕುಶವನಾ ಭಗ
ದತ್ತ ದಂತಿಯನೇರಿದನು ಜಯರವದ ರಭಸದಲಿ ೬
ಕಾಲುಗಾಹಿನ ಕುದುರೆಗಳ ಕಾ
ಲಾಳ ಕೈವಾರಿಗಳ ಸಬಳದ
ಸೂಲಿಗೆಯ ತೇರುಗಳ ಹರಹಿನ ಹೊಂತಕಾರಿಗಳ
ಆಳ ಬಲು ಬೊಬ್ಬೆಯಲಿ ಘನ ನಿ
ಸ್ಸಾಳತತಿ ಮೊಳಗಿದವು ಡೌಡೆಯ
ತೂಳುವರೆಗಳು ಗಜರಿದವು ತಂಬಟದ ಲಗ್ಗೆಯಲಿ ೭
ಸುರಪ ಕಡಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ ೮
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಳ ಕುಲ
ದಿಗಿಭವೆಂಟೊಂದಾಯ್ತೊ ಕೈ ಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡಿರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾ ಗಜವೈದಿತಾಹವವ ೯
ಪವನಬಲ ಪರಿದಳಿತ ಕದಳೀ
ನಿವಹದಲಿ ನಭ ಧಾತುಗೆಟ್ಟುದು
ರವಿಗೆ ಕಾಪಥವಾಯ್ತು ಹೊಗಳುವೆನೇನನುದುಭುತವ
ಭುವನ ಕೋಶದೊಳಾದ ವಿಪಿನೋ
ದ್ಭವವೊ ಭಾರಿಯ ದಂತಿ ಮಹದಾ
ಹವದೊಳಿಳಿದುದು ಕೃಷ್ಣನೊಲಿದರಿಗಾವುದರಿದೆಂದ ೧೦
ಹಿಡಿವ ಬಿಡುವೊಬ್ಬುಳಿಗೆ ತಹ ಬಲ
ನೆಡಕೆ ಹಾಯ್ಕುವ ಸುತ್ತಲೊತ್ತುವ
ತಡೆವ ನಡಸುವ ಸೆಳೆವ ತಿರುಹುವ ಹದಿರ ಜೋಕೆಯಲಿ
ಗಡಣಿಸಿದನವನಿಭಪತಿಯನವ
ಗಡಿಸಿ ನೂಕಿದೊಡಮಮ ದಿಕ್ಕರಿ
ನಡುಗೆ ಚೌಕದ ಕಳನ ತುಳಿದುದು ಸುಪ್ರತೀಕಗಜ ೧೧
ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನೊ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ ೧೨
ಮೊಗವ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊಡೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ ೧೩
ನೆಳಲು ಸುಳಿಯಲು ದಂತಿಯೆಂದ
ಪ್ಪಳಿಸೆ ವಾಸುಕಿ ನೊಂದನಂಬುಧಿ
ತುಳುಕಿದವು ಸತ್ವಾತಿಶಯವೆಂತುಟು ಮಹಾದೇವ
ತುಳಿದುದರಿ ಸುಭಟರನು ಸಾವಿರ
ತಲೆಯ ಸೆಳೆದುದು ಸೊಂಡಿಲಲಿ ವೆ
ಗ್ಗಳೆಯ ಮದಕರಿ ಕೇಣಿಗೊಂಡುದು ವೈರಿಮೋಹರವ ೧೪
ಸೀಳಿ ಹರಹಿತು ಕರಿಗಳನು ನೇ
ಪಾಳಗುದುರೆಯ ಥಟ್ಟುಗಳ ಹಿಂ
ಗಾಲಲಣೆದುರು ರಥವನೈದಾರೇಳನೊಂದಾಗಿ
ತೋಳೊಳಗೆ ನೆಗ್ಗೊತ್ತಿ ಮಿಗೆ ಕಾ
ಲಾಳ ತೊತ್ತಳದುಳಿದು ಕಾಲನ
ಗೂಳೆಯಕ್ಕುಪಕಾರಿಯಾದುದು ಸುಪ್ರತೀಕಗಜ ೧೫
ದ್ವಿಗುಣ ತ್ರಿಗುಣದಲಣೆದು ಜೋಡಿಸಿ
ಚಿಗಿದು ಹಾಯ್ಕುವ ಮೆಟ್ಟಿ ಸೀಳುವ
ತೆಗೆದು ಕಟ್ಟುವ ತಿರುಹಿ ನೂಕುವ ಹೆಡೆತಲೆಯೊಳಡಸಿ
ಉಗುರೊಳೌಕುವ ನಿಗ್ಗವದೊಳಿ
ಬ್ಬಗಿಯ ಮಾಡುವ ಕಾಲುಗೊಲೆಯಲಿ
ವಿಗಡ ಕರಿ ತುಳಿದಾಡಿತಿದಿರಿರಾದ ಪಟುಭಟರ ೧೬
ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರು
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ ೧೭
ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ ೧೮
ಮುರಿದು ಕೊಟ್ಟುದು ದಂತಿ ಗುರುವಿ
ನ್ನುರುಬಿ ರಾಯನ ಹಿಡಿಯದಿರನಿದ
ತರುಬಲಾಪರೆ ಬರಲಿ ಸಾತ್ಯಕಿ ನಕುಲ ಪವನಜರು
ಇರಿತಕಿವರಂಜಿದರೆ ಪಾರ್ಥಂ
ಗರುಹಿ ಬೇಗದೊಳೆನುತ ನಾಯಕ
ರೊರಲುತಿರಲನುವಾದುದಿತ್ತಲು ದೊರೆಗಳೊಗ್ಗಿನಲಿ ೧೯
ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು ೨೦
ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚ ಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ ೨೧
ಗಿರಿಯ ತರಿವರೆ ಶಕ್ರನಲ್ಲದೆ
ನೆರೆದ ದಿವಿಜ ಸಮೂಹ ಮಾಡುವ
ಭರವಸಿಕೆ ತಾನೇನು ಹೊದ್ದಿದರಿವರು ದಿಗ್ಗಜವ
ಸರಳ ಬಲುವಳೆಗಾಲವಹಿತ
ದ್ವಿರದ ಗಿರಿಯಲಿ ಕಾಣಲಾದುದು
ಕೆರಳಿ ಕರಿ ಕೈಕೊಂಡುದರೆಯಟ್ಟಿತು ಮಹಾರಥರ ೨೨
ಚೆಲ್ಲಿತಿದು ದೆಸೆದೆಸೆಗೆ ಚೌಪಟ
ಮಲ್ಲ ಗಿಲ್ಲರ ಪಾಡೆ ನಮ್ಮದು
ಬಲ್ಲಿತಹುದುಸುರಿಲ್ಲದೊಡಲಿನ ಚೆಲುವು ಫಲವೇನು
ಅಲ್ಲಿ ದೈವದ ನೆನೆಹು ಘನ ಜಯ
ವೆಲ್ಲಿಯದು ನಮಗಿನ್ನು ಸಾಕಿ
ನ್ನೆಲ್ಲವೇತಕೆ ಚಿತ್ತವಿಸು ಚೌದಂತನಾಹವವ ೨೩
ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧ ಭೂಪರ ಕೊಡಹಿ ಹಾಯಿಕಿತು ೨೪
ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ ೨೫
ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ ೨೬
ಬಾಲರೆಸುಗೆಯ ಮಿಟ್ಟೆಯಂಬಿಗೆ
ಸೋಲುವುದೆ ಗಿರಿ ವೈರಿ ಸುಭಟರ
ಕೋಲ ಕೊಂಬುದೆ ವೀರ ಕುಂಜರ ಮತ್ತೆ ಮೊಗ ನೆಗಹಿ
ಆಳೊಳಗೆ ಬೆರಸಿತು ಮಹಾ ರಥ
ರೋಳಿ ಮುರಿದುದು ಕುರಿಯ ಹಿಂಡಿನ
ತೋಳನೈ ನಿನ್ನಾನೆ ಸವರಿತು ಮತ್ತೆ ಮಾರ್ಬಲವ ೨೭
ಹಡಗು ಜಲಧಿಯೊಳೋಡಿ ಗಿರಿಗಳ
ನೆಡಹಿ ನುಗ್ಗಾದಂತೆ ಸುಭಟರ
ಗಡಣ ಗಜವನು ತಾಗಿ ತಾಗಿ ವಿಘಾತಿಯಲಿ ನೊಂದು
ಒಡಲ ಮೇಲೆಳ್ಳನಿತು ಮೋಹವ
ಹಿಡಿಯದಿವರೌಕಿದರು ಹಾವಿನ
ಕೊಡನು ದೋಷಿಗೆ ಸುಲಭವೇ ಧೃತರಾಷ್ಟ್ರ ಕೇಳೆಂದ ೨೮
ಮುರಿದು ಮೋದಿತು ಸಮ್ಮುಖದೊಳಿ
ಟ್ಟೊರಸಿತೆಡದಲಿ ಹೊಯ್ದು ಸೀಳಿತು
ಹರಹಿತಪಸವ್ಯದಲಿ ಮೆದೆಗೆಡಹಿತು ಮಹಾರಥರ
ಹೊರೆದ ರಕುತದ ಧಾರೆಗಳ ತುದಿ
ಕರದೊಳೆಳಲುವ ತಲೆಗಳಂಘ್ರಿಯೊ
ಳೊರೆದ ನೆಣನಡಗಿನ ಮಹಾಗಜ ಮೊಗೆದುದರಿಬಲವ ೨೯
ಹಿಂದೆ ಹಿಡಿವರು ಮುರಿದರೆಡದಲಿ
ಸಂದಣಿಸುವರು ತಿರುಗಿದರೆ ಬಲ
ದಿಂದ ಕೈ ಮಾಡುವರು ಕವಿದರೆ ಸಿಡಿವರೆಡಬಲಕೆ
ಮುಂದೆ ಕಟ್ಟುವರಟ್ಟಿದರೆ ಮುರಿ
ವಿಂದ ಜಾರುವರಾ ಮಹಾರಥ
ವೃಂದ ಕಾದಿತು ಮದಕರಿಯ ಬೇಸರದೆ ಬಳಿಸಲಿಸಿ ೩೦
ಕರಿಯ ಕೋಲಾಹಲವನಾ ಜೋ
ದರ ಶರೌಘವ ಸೈರಿಸುತ ಮು
ಕ್ಕುರಿಕಿ ಧರ್ಮಜ ನಕುಲ ಸಾತ್ಯಕಿ ಭೀಮ ನಂದನರು
ಸರಳ ಸಾರವ ಕಟ್ಟಿದರು ಮಿಗೆ
ಕೆರಳಿದನು ಭಗದತ್ತನನಿಬರ
ಹರೆಗಡಿದು ಹೊಗರಂಬ ಸುರಿದನು ಸರಿದರತಿರಥರು ೩೧
ಹತ್ತು ಶರದಲಿ ಧರ್ಮಜನನಿ
ಪ್ಪತ್ತರಿಂದಭಿಮನ್ಯುವನು ತೊಂ
ಬತ್ತು ಶರದಲಿ ನಕುಲ ಸಾತ್ಯಕಿ ದ್ರುಪದ ಕೈಕೆಯರ
ಕೆತ್ತಿದನು ಹದಿನೆಂಟು ಬಾಣದ
ಲಿತ್ತ ಭೀಮನ ನಂದನನನೈ
ವತ್ತು ಶರದಲಿ ಸಕಲ ರಥಿಕರನೆಚ್ಚು ಬೊಬ್ಬಿರಿದ ೩೨
ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಂದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ ೩೩
ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ ಕೈಯಾನೆ ಹೆಣಗಿತು ಭೀಮಸೇನನಲಿ ೩೪
ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಳಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ ೩೫
ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ ೩೬
ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ ೩೭
ಭೀಮನಿನ್ನರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಂತಿಯ
ತಾಮಸಿಕೆ ಘನ ತೆಗೆಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು ೩೮
ಮತ್ತೆ ರಥವರುವತ್ತು ಸಾವಿರ
ಮುತ್ತಿಕೊಂಡುದು ಗಜವನಾ ಭಗ
ದತ್ತ ಬಳಲಿದನವಧಿಯಿಲ್ಲದೆ ಶರವ ನೆರೆ ತುಳುಕಿ
ಮೆತ್ತಿದವು ಶರವಿಭದ ಮೆಯ್ಯಲಿ
ಬೆತ್ತ ಬೆಳೆದದ್ರಿಯವೊಲಿದ್ದುದು
ಮತ್ತಗಜ ನೊಂದರಿಯದನಿಬರ ಬಾಣ ಹತಿಗಳಲಿ ೩೯
ಕರಿ ವಿನೋದದಿ ಕುಡಿದ ಜಲವನು
ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರ ತುಷಾರದಲಿವರು ಮೋರೆಯ
ತಿರುಹೆ ನನೆದವು ಬಾಹುರಿಕೆ ಹ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರ ಚಮರಿಗಳು ೪೦
ಸಾಕು ಬಳಲಿದಿರಕಟಕಟ ನಿಮ
ಗೇಕೆ ಸಂಗರವಾನೆಯೊಡನೆ ಪಿ
ನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು
ಆ ಕಿರೀಟಿಯ ಕರಸಿಕೊಳ್ಳಿ ವಿ
ವೇಕವುಳ್ಳರೆ ತೊಲಗಿಯೆನುತವೆ
ನೂಕಿದನು ಭಗದತ್ತನನಿಬರ ಮೇಲೆ ದಿಗ್ಗಜವ ೪೧
ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ ೪೨
ತಿದ್ದಿತೋ ಕಲಿ ಪಾರ್ಥನಿದ್ದರೆ
ಹೊದ್ದ ಹೇಳೋ ರಾಯದಳವಡಿ
ಗದ್ದುದೋ ಬಿದ್ದುದು ಭಯಾಂಬುಧಿಯೊಳಗೆ ಭಟನಿಕರ
ಹದ್ದು ಕಾಗೆಯ ಮನೆಗೆ ಬಾಣಸ
ವಿದ್ದುದೋ ಗಜವೆನುತ ಬೊಬ್ಬಿಡು
ತಿದ್ದುದರಿ ಬಲವಿತ್ತ ಹರಿ ಕೇಳಿದನು ಕಳಕಳವ ೪೩
ಮರಳು ಫಲುಗುಣ ಸುಪ್ರತೀಕದ
ಖುರಪುಟವ ನೋಡಿತ್ತಲಗ್ಗದ
ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ
ತೆರಳುತಿದೆ ನಮ್ಮವರು ದಿಕ್ಕರಿ
ಹರಹಿ ಕೊಲುತಿದೆ ಮಾತಿಗಿಲ್ಲವ
ಸರವೆನುತ ಕರಿಯತ್ತ ತಿರುಹಿದನಸುರರಿಪು ರಥವ ೪೪
ಹೆದರದಿರು ನರ ಹೋಗದಿರು ಹೋ
ಗದಿರು ಕೊಡು ಕೊಡು ಕಾಳೆಗವನೆಂ
ದದಟರಟ್ಟಿತು ವೀರ ಸಮಸಪ್ತಕರು ಸೂಠಿಯಲಿ
ಇದಿರಲಿನಸುತ ಶಲ್ಯರಡಗ
ಟ್ಟಿದರು ಖತಿಯಲಿ ಪಾರ್ಥನನಿಬರ
ಸದೆದು ವಹಿಲದಲೈದಿದನು ದಿಕ್ಕರಿಯ ಸಮ್ಮುಖಕೆ ೪೫
ಬಲು ಬಿಸಿಲೊಳುರೆ ನೊಂದ ನೈದಿಲೆ
ಗಳಿಗೆ ಚಂದ್ರಿಕೆ ದೈತ್ಯರುರುಬೆಗೆ
ಸಿಲುಕಿದಮರರಿಗಸುರಹರನ ಕಟಾಕ್ಷವಿಕ್ಷೇಪ
ಬಲಿದ ತಾಪತ್ರಯದ ಭವಗೋ
ಟಲೆಯ ಜೀವಿಗೆ ಸುಪ್ರಬೋಧದ
ಸುಳುವಿನಂತಿರೆ ಪಾರ್ಥ ಮೈದೋರಿದನು ನಿಜಬಲಕೆ ೪೬
ಕೆದರಿತೀ ಬಲ ಬೆರಳ ತುಟಿಗಳೊ
ದರಿತಾ ಬಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕವ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ ೪೭
ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೊಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ಶರವ
ಕೆರಳಿದನು ಭಗದತ್ತನಿವನೇ
ನರನು ಫಡ ನಿಲ್ಲು ನಿಲ್ಲೆನು
ತುರು ಶರೌಘವ ಕರೆದು ಮುಸುಕಿದನರ್ಜುನನ ರಥವ ೪೮
ಪೂತುರೇ ಭಗದತ್ತ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ಶರ
ಪಾತವಿನಿತಿಲ್ಲದಡೆ ಹೊಳ್ಳಿಸಬಹುದೆ ನೃಪ ಧನವ
ನೂತನ ದ್ವಿಪದಿಂದ ವೈರಿ
ವ್ರಾತವನು ಸೋಲಿಸಿದ ಗರ್ವದ
ರೀತಿಗಿದು ಠಾವಲ್ಲೆನುತ ತೆಗೆದೆಚ್ಚನಾ ಪಾರ್ಥ ೪೯
ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ ೫೦
ಸೆಳೆದು ಬಾಣತ್ರಯದಲೆಚ್ಚನು
ಫಲುಗುಣನ ಮಕುಟವನು ಮುರಿದುದು
ಕೆಲಕೆ ಸಡಿಲುವ ಮಣಿಗಳಲಿ ವರಮೌಳಿಯೋಸರಿಸೆ
ಬಲಿದು ಸಸಿನವ ಮಾಡಿ ಖಾತಿಯ
ತಳೆದು ಕೂರಂಬಿನಲಿ ಹೂಳಿದ
ನಳವಿನಲಿ ರಿಪುಗಜವನಾ ಭಗದತ್ತನವಯವವ ೫೧
ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳೆಂದ ೫೨
ಮತ್ತೆ ಖಾತಿಯೊಳಂಕುಶದಿನೊಡೆ
ಯೊತ್ತಿ ಬಿಟ್ಟನು ಗಜವನರ್ಜುನ
ನತ್ತಲಿಭ ತೂಳಿದಡೆ ತಿರುಹಿದನಸುರರಿಪು ರಥವ
ಇತ್ತ ಬಲದಲಿ ಬಲಕೆ ಮೊಗವಿಡ
ಲತ್ತಲೆಡದಲಿ ಮರಳಲಲ್ಲಿಂ
ದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ ೫೩
ಸಾರಥಿಯ ಕೊಂದಲ್ಲದರ್ಜುನ
ತೀರುವವನಲ್ಲೆನುತ ದಳ್ಳುರಿ
ಧಾರೆಯಂಬೈದರಲಿ ದೇವನನೆಸಲು ಮಧ್ಯದಲಿ
ಹಾರಿಸಿದನಾ ಪಾರ್ಥನಿವನೆಡೆ
ಗೋರಿದನಲಾಯೆನುತ ಕೆಡೆಯೆನು
ತಾರಿ ಸುರಿದನು ನೂರು ಬಾಣವನರ್ಜುನನ ಮೇಲೆ ೫೪
ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ ೫೫
ತೈಲ ಲೇಪದ ನಯದ ಹೊಗರಿನ
ಜಾಳಿಗೆಯ ಗಹಗಹಿಕೆಗಳ ಹೂ
ಮಾಲೆಗಳ ಸಿಂಪಿಸಿದ ಗಂಧದ ಬಂಧದಕ್ಷತೆಯ
ಕೀಲಣೆಯ ಮಣಿವೆಳಗುಗುಳ ಹರಿ
ದಾಳಿಯಲಿ ಕಾಳೋರಗನ ಕುಡಿ
ನಾಲಿಗೆಯವೋಲೆಸೆದುದಂಕುಶ ಭಟನ ಮುಷ್ಟಿಯಲಿ ೫೬
ಕುಡಿ ಕಿರೀಟಿಯ ರಕುತವನು ಹಗೆ
ಕೆಡಲಿ ಕೌರವ ರಾಯನಾಳಲಿ
ಪೊಡವಿಯನು(ದು?) ಪರಿತೋಷವಾಗಲಿ ನೃಪನ ಮಿತ್ರರಿಗೆ
ತಡೆದು ಹಲಕಾಲದಲುಪಾಸಂ
ಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು ನೀನೆನುತ ತಿರುಹಿಟ್ಟನು ಮಹಾಂಕುಶವ ೫೭
ತೀರಿತಿನ್ನೇನಕಟ ಪಾಂಡವ
ವೀರರುಬ್ಬಟೆ ಹಾರಿತೇ ತ್ರಿಪು
ರಾರಿಯುರಿಗಣ್ಣಿಂದ ಸೋಲದ ಕೈದುಗೊಂಡನಲ
ಧಾರುಣಿಯನಿನ್ನುಣಲಿ ಧರ್ಮ ಕು
ಮಾರನಕಟಿನ್ನಾರು ಕಾವವ
ರಾರೆನುತ ತಲ್ಲಣಿಸುತಿರ್ದುದು ಪಾಂಡುಸುತ ಸೇನೆ ೫೮
ಹಾ ಯುಧಿಷ್ಠಿರ ರಾಯ ಶಿವ ಶಿವ
ವಾಯುಸುತ ಹಾ ಪಾರ್ಥ ಹಾ ಮಾ
ದ್ರೇಯರಿರ ಹಾಯೆನುತ ಹರೆದುದು ಸೇನೆ ದೆಸೆದೆಸೆಗೆ
ಬಾಯ ಬಿಟ್ಟುದು ದಿವಿಜಬಲ ನಿ
ರ್ದಾಯದಲಿ ನೆಲನಾಯಿತಲ ಕುರು
ರಾಯಗೆನುತಿರ್ದುದು ಜಗತ್ರಯವೊಂದು ನಿಮಿಷದಲಿ ೫೯
ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು ೬೦
ಮೆರೆದುದುರದಲಿ ಕೌಸ್ತುಭದ ಮಣಿ
ಮರಿಯನಿಳುಹಿದ ವೋಲು ಬೆಳಗಿನ
ತುರುಗಲಲಿ ತೂಗಾಡುತಿದ್ದುದು ಕೈದು ತೊಡವಾಗಿ
ಮುರಿದುದಗ್ಗದ ಭೀತಿ ಹರುಷದ
ಸೆರೆಗೆ ಬಿಡುಗಡೆಯಾಯ್ತು ಬಲು ಬೊ
ಬ್ಬಿರಿವುತಿರ್ದುದು ವೈರಿಕಟಕದೊಳರಸ ಕೇಳೆಂದ ೬೧
ಕೌತುಕವನಿದ ಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನೆ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ೬೨
ತಿರುಗಿ ಕಂಡನು ಕೃಷ್ಣನೀತನ
ಪರಿಯನರಿದನು ಮನದಲಿವನು
ತ್ತರವ ಕೇಳುವೆವೆಂದು ಪಾರ್ಥನ ನುಡಿಸಿದನು ನಗುತ
ಉರವಣಿಸುತಿದೆ ಮತ್ತೆ ಕರಿ ನಿಜ
ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ ತನ್ನಾಣೆ ಹೇಳೆಂದ ೬೩
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೊ ಕೃಷ್ಣ ನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ
(ಈ ಸಾಲು ಷಟ್ಪದಿಯ ಅಳತೆಗೆ ಕೂಡದು.
"ಳಾದನೈ ತಾ ನರನೆನುತ ಮುರ ವೈರಿಯಿಂತೆಂದ" ಇರಬೇಕು - ಸಂ) ೬೪
ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ ೬೫
ವಿಲಸದುಪನಿಷದುರು ರಹಸ್ಯವ
ತಿಳುಹಿದೆನು ನಿನಗೊಮ್ಮೆ ಮತ್ತೆಯು
ತಿಳಿದುದಿಲ್ಲಾ ಕ್ಷತ್ರತಾಮಸ ಬಿಡದು ಬುದ್ಧಿಯಲಿ
ಸುಲಭವಂತರ್ನಿಷ್ಠರಿಗೆ ನಿ
ಷ್ಕಳ ನಿರೂಪನನಂತ ನಿಜ ನಿ
ರ್ಮಳವೆನಿಪ ಪರಮಾತ್ಮ ಚಿನುಮಯ ರೂಪ ತಾನೆಂದ ೬೬
ಸಂಗಿಯಲ್ಲದ ವಿಮಳ ಪರಮಾ
ತ್ಮಂಗೆ ಲೀಲೆಯೊಳಾಯ್ತು ಮಾಯಾ
ಸಂಗವದರಿಂದಾಯ್ತು ನಾಲಕು ಮೂರ್ತಿಗಳು ತನಗೆ
ಅಂಗಿಯಂಗ ವಿಭಾಗವಿಲ್ಲದ
ಭಂಗ ಸನ್ಮಾತ್ರಂಗೆ ಭಾವಿಸ
ಲಂಗ ಕಲ್ಪನೆ ಮಿಥ್ಯವಲ್ಲಾ ಪಾರ್ಥ ಹೇಳೆಂದ ೬೭
ಇಂದು ಕಮಳಭವ ಪ್ರಜೇಶ್ವರ
ರೊಂದು ಮೂರುತಿ ವಿಷ್ಣು ಮನುಗಳು
ಸಂದ ಪಾರ್ಥಿವ ಲೋಕಪಾಲಕರೊಂದು ಮೂರ್ತಿಯದು
ಇಂದು ಶೇಖರನಗ್ನಿ ಯಮನರ
ವಿಂದಸಖ ಕಾಲಾಗ್ನಿ ಮೂರ್ತಿಯ
ರೊಂದು ಮೂರುತಿ ವಿಶ್ವದೊಳು ನಿಷ್ಯೂತ ಚೈತನ್ಯ ೬೮
ಇದುವೆ ಮತ ಕೆಲಬರಿಗೆ ಕೆಲಬರಿ
ಗಿದು ಮತವು ವಿವಿಧಾವತಾರದ
ಲುದಿಸುತೊಂದಿಹುದೊಂದು ಮೂರ್ತಿ ತಪೋ ವಿನೋದದಲಿ
ಉದಧಿಯೊಳು ವರ ಯೋಗ ನಿದ್ರಾ
ಸ್ಪದದಲೊಂದಿಹುದೊಂದಖಿಳ ವಿ
ಶ್ವದ ಸುಕೃತ ದುಷ್ಕೃತವನೀಕ್ಷಿಸುತಿಹುದು ಕೇಳೆಂದ ೬೯
ಕೆಲರು ಧರ್ಮಾರ್ಥಾದಿ ನಾಲುಕು
ಲಲಿತ ಮೂರ್ತಿಗಳೆಂಬರಿದರೊಳು
ಕೆಲರು ಜಾಗರಣಾದ್ಯವಸ್ಥೆಗಳೆಂಬ ಮೂರ್ತಿಗಳು
ತಿಳಿಯಲೋತಪ್ರೋತದಲಿ ನಿ
ಷ್ಕಳವೆ ಸಕಳವೆಯಾಗಿ ವಿಶ್ವದೊ
ಳೊಳಗು ಹೊರಗಾನಲ್ಲದಿಲ್ಲೆಲೆ ಪಾರ್ಥ ಕೇಳೆಂದ ೭೦
ಉದಧಿಶಯನನ ಮೂರ್ತಿ ಕಲ್ಪಾಂ
ತದಲಿ ಕರಗಿದ ಧರೆಯನುದ್ದರಿ
ಸಿದೆನು ಯಜ್ಞವರಾಹ ರೂಪಿನಲಂದು ಕರುಣದಲಿ
ಪದವ ಭಜಿಸಿಯೆ ಭೂಮಿ ತಾ ಬೇ
ಡಿದಳು ಪುತ್ರನನಾಕೆಯಲಿ ಜನಿ
ಸಿದನು ನರಕಾಸುರನವಧ್ಯನು ಸಕಲ ದಿವಿಜರಿಗೆ ೭೧
ಇದು ವರಾಹನ ದಾಡೆಯಿದನಾ
ತ್ರಿದಿಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದು(ದು?) ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ ೭೨
ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ ೭೩
ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕೂರಂಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡು ಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ ೭೪
ಸುತ್ತಿದುರಗನ ಮಂದರಾಚಲ
ಕಿತ್ತು ಬೀಳ್ವಂದದಲಿ ಬರಿಕೈ
ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ
ಇತ್ತಲರ್ಜುನ ದೇವನುಗಿದನು
ಬತ್ತಳಿಕೆಯಲಿ ದಿವ್ಯ ಶರವನು
ತೆತ್ತಿಸಿದನವನುರವನಿಬ್ಬಗಿಯಾದುದರಿ ದೇಹ ೭೫
ಗಿರಿಯ ಶಿರದಲಿ ಹೂತ ಕಕ್ಕೆಯ
ಮರ ಮುರಿದು ಬೀಳ್ವಂತೆ ವಿಮಳಾ
ಭರಣ ಕಾಂತಿಯ ಕಡಲ ಕೋಮಲಕಾಯ ಭಗದತ್ತ
ಉರುಳಿದನು ಗಜದಿಂದ ಕುರುಬಲ
ಸರಿಯೆ ಸುರಕುಲ ಕುಸುಮ ವೃಷ್ಟಿಯ
ಸುರಿಯೆ ರಿಪುಸೇನೆಯಲಿ ಹರುಷದ ಹೊನಲು ಬಿರಿವರಿಯೆ ೭೬
ಹರಿದುದಗ್ಗದ ಸುಪ್ರತೀಕ
ದ್ವಿರದ ಭಗದತ್ತಾಂಕನವನಿಯೊ
ಳುರುಳಿದನು ದಳ ಮುರಿದುದಿನ್ನೇನೆನುತ ಬಲ ಬೆದರೆ
ನರನ ತಡೆದರು ಸುಬಲ ಸುತರಿ
ಬ್ಬರು ನೃಪಾಲ ಕುಮಾರರೈನೂ
ರುರುಬಿದರು ಗಾಂಧಾರ ರಾಜರು ಶಕುನಿಯೊಡಗೂಡಿ ೭೭
ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವೃಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ ೭೮
ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರ ಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ ೭೯
ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ ೮೦