ದ್ರೋಣಪರ್ವ: ೦೪. ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

ಸೂ: ರಾಯ ಕಟಕಾಚಾರ್ಯನಾ ಚಾ

ಪಾಯುಧಾಗ್ರಣಿ ಮೋಹಿದನು ಪ

ದ್ಮಾಯುತ ವ್ಯೂಹವನು ಸೈನ್ಯದ ಜಾಣನಾ ದ್ರೋಣ


ನೀನು ನೆರಹಿದ ಸುಕೃತ ಫಲವದ

ನೇನ ಹೇಳುವೆನಿತ್ತಲುಗ್ಗಡ

ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ

ಧ್ಯಾನವಿತ್ತಲು ರಾಗವತ್ತಲು

ಮೋನವಿತ್ತಲು ರಭಸವತ್ತಲು(ಪಾ: ವಿತ್ತಲು)

ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ ೧


ಎತ್ತಲೊಲೆವುದು ಧರ್ಮಬಲ ತಾ

ನತ್ತಲೊಲೆವುದು ದೈವ ದೈವವ

ದೆತ್ತಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ

ಹೆತ್ತ ನಿನ್ನೊಡಲಿಂಗೆ ತಂಪಿನ

ತೆತ್ತಿಗನೊ ಮೇಣ್ ಬಹಳ ತಾಪದ

ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳೆಂದ ೨


ಸಾಕು ಸಂಜಯ ನುಡಿಯ ಖಡ್ಗದ

ಲೇಕೆ ಗಂಟಲ ಕೊಯ್ವೆ ತಾನವಿ

ವೇಕದಲುಪಾರ್ಜಿಸಿದ ದುಷ್ಕೃತ ಫಲವೆ ತನಗಾಯ್ತು

ಸಾಕದಂತಿರಲಿನ್ನದೇಹರಿ

ಶೋಕಿಸುವೆನಿಲ್ಲಿಂದ ಮೇಲು

ದ್ರೇಕಿ ಕೌರವನೇನ ನೆಗಳಿದ ಹದನ ಹೇಳೆಂದ ೩


ಚಿತ್ತವಿಸು ಧೃತರಾಷ್ಟ್ರ ಕೌರವ

ನಿತ್ತನಿರುಳೋಲಗವ ಮಂಜಿನ

ಮುತ್ತಿಗೆಯ ನಭದಂತೆ ಹೊಗೆದುದು ರಾಯನಾಸ್ಥಾನ

ನೆತ್ತಿ ಮುಸುಕಿನ ಕೈಯ ಗಲ್ಲದ

ಕುತ್ತದಲೆ ನೆಟ್ಟಾಲಿಗಳ ಚಲ

ಚಿತ್ತರಿದ್ದುದು ಸಕಲ ನಾಯಕವಾಡಿ ದುಗುಡದಲಿ ೪


ದುಗುಡವೇಕೈ ನಿಮಗೆ ಕರ್ಣಾ

ದಿಗಳು ನೀವಕ್ಕುಡರೆ ಬಲುಗಾ

ಳೆಗದೊಳಗೆ ಕೈಮಾಡಿ ನೊಂದಿರಿ ಕೊಂದಿರರಿಭಟರ

ಹಗೆಯ ಕಟ್ಟಲು ಕೊಟ್ಟ ಭಾಷೆಯ

ಬಿಗುಹು ಬೀತುದು ಗುರುಗಳಲಿ ನಂ

ಬುಗೆ ನಿರರ್ಥಕವಾಯ್ತೆನುತ ಕುರುರಾಯ ಬಿಸುಸುಯ್ದ ೫


ದ್ರೋಣ ಮನಗೊಂಡಿರಿವಡಂಬುಜ

ಪಾಣಿಯಿದಿರೇ ನಮ್ಮ ಭಾಗ್ಯದ

ಬಾಣಸಿಗ ವಿಧಿ ವಿಷವ ಬೆರೆಸಿದಡಾರು ಕಾವವರು

ಹೂಣಿ ಹೊಕ್ಕನು ಹಿಡಿದು ವೈರಿ

ಕ್ಷೋಣಿಪನ ತರುಬಿದನು ನಾವ

ಕ್ಷೀಣದುರಿತರು ಹಲುಬಿ ಮಾಡುವುದಾವುದುಂಟೆಂದ ೬


ಬಲದೊಳಗೆ ಹೆಸರುಳ್ಳವರು ಮು

ಮ್ಮುಳಿತವಾಯಿತ್ತಾನೆ ಕುದುರೆಗ

ಳಳಿದುದಕೆ ಕಡೆಯಿಲ್ಲ ಪವನಜ ಪಾರ್ಥರುಬ್ಬಟೆಯ

ನಿಲಿಸುವಾಪತ್ತಿಗರು ನಮಗಿ

ಲ್ಲಳಲಿ ಮಾಡುವುದೇನೆನುತ ನೃಪ

ತಿಲಕ ಬೇಸರ ನುಡಿಯೆ ಬಳಿಕಿಂತೆಂದನಾ ದ್ರೋಣ ೭


ಪರಮ ಗರುಡೋದ್ಗಾರ ಮಣಿಯನು

ಗರಳ ಸುಡುವುದೆ ಕೃಷ್ಣರಾಯನ

ಕರುಣ ಕವಚವನೊಡೆಯಲಾಪವೆ ಎಮ್ಮ ಕೈದುಗಳು

ಅರಸ ಮರುಳೈ ಧರ್ಮಪುತ್ರನ

ಬೆರಸಿ ತುಡುಕಲು ತಡೆದನರಿಯಾ

ಮುರಹರನ ಮೈದುನನು ಬಳಿಕೆಮ್ಮಳವೆ ಹೇಳೆಂದ ೮


ನಾಳೆ ಫಲುಘುಣ ತಪ್ಪಿದರೆ ಭೂ

ಪಾಲಕನ ಕಟ್ಟುವೆನು ರಣದಲಿ

ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ

ಕೇಳು ಪದ್ಮವೂಹದಲಿ ಹೊ

ಕ್ಕಾಳು ಮರಳಿದಡಸ್ತ್ರ ವಿದ್ಯಾ

ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ ೯


ಒಳ್ಳಿತಿದು ಕಡುಭಾಷೆ ನಾಳಿನ

ಗೆಲ್ಲವೇ ಗೆಲವರ್ಜುನನು ಹೊ

ಕ್ಕಲ್ಲಿ ಹೊಗುವೆವು ತರುಬಿ ಕಾದುವೆವೆಮ್ಮೆ ಕಳನೊಳಗೆ

ಅಲ್ಲಿ ನೀನೊಲಿದಂತೆ ಮಾಡಿ

ನ್ನೆಲ್ಲವೇತಕೆಯೆನುತ ಸಾಹಸ

ಮಲ್ಲೆರೆದ್ದರು ವೀರ ಸಮಸಪ್ತಕರು ಗರ್ಜಿಸುತ ೧೦


ಪೂತು ಪಾಯಿಕು ತತ್ತ ಹೊತ್ತಿನೊ

ಳಾತುಕೊಂಬವರಾರು ಪಾರ್ಥಿವ

ಜಾತಿಯಲಿ ರಣದಿಟ್ಟರುಂಟೇ ನಿಮ್ಮ ಹೋಲಿಸಲು

ಸೋತುದರಿಬಲ ಹೋಗೆನುತ ಮು

ಯ್ಯಾಂತು ಮನ್ನಿಸಿ ಹೊನ್ನ ಬಟ್ಟಲೊ

ಳಾತಗಳಿಗೊಲಿದಿತ್ತನೈ ಕರ್ಪುರದ ವೀಳೆಯವ ೧೧


ಹರೆದುದೋಲಗವಿತ್ತ ಭುವನದೊ

ಳಿರುಳಡವಿಗಡಿತಕ್ಕೆ ಹರಿದವು

ಕಿರಣ ತೆತ್ತಿದವಭ್ರದಲಿ ತಾರಕೆಯ ತೇರುಗಳು

ಹರಿವ ಮಂಜಿನ ನದಿಯ ಹೂಳ್ದವು

ಸರಸವಾಯಿತು ಗಗನತಳ ತಾ

ವರೆಯ ಸಖ ನಿಜರಥವ ನೂಕಿದನುದಯ ಪರ್ವತಕೆ ೧೨


ಕೆದರಿದವು ನಿಸ್ಸಾಳ ಬರ ಸಿಡಿ

ಲದುಭುತ ಧ್ವನಿಯಲಿ ನಿರಂತರ

ವೊದರಿ ಬಯ್ದವು ಕಹಳೆ ಬಿರುದಾವಳಿಯಲತಿರಥರ

ಕದುಬಿದವು ತಂಬಟದ ದನಿ ದಿಗು

ಸದನವನು ಬಲು ಬೊಬ್ಬೆಯಲಿ ನೆಲ

ನದಿರೆ ನಡೆದುದು ಸೇನೆ ಕಲಶೋದ್ಭವನ ನೇಮದಲಿ ೧೩


ಉಲಿದು ಸಮಸಪ್ತಕರು ತಮ್ಮಯ

ಕಳನ ಗೆಲಿದರು ಚಾತುರಂಗದ

ದಳದ ತೆರಳಿಕೆ ತೆಕ್ಕೆಮಿಗೆ ಕುರುಸೇನೆ ನಡೆತಂದು

ಕಳನ ವೆಂಠಣಿಸಿದವು ರಾಯನ

ಕೆಲಬಲದ ಸುಯಿಧಾನದಲಿ ರಿಪು

ವಳಯ ಧೂಳೀಪಟನು ಹೊಕ್ಕನು ರಣವನಾ ದ್ರೋಣ ೧೪


ನೆರೆದ ನಿಜ ಸೇನಾಧಿಪರ ಸಂ

ವರಣೆಗಳ ನೋಡಿದನು ನೀಡಿದ

ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ

ಹರಿಗೆ ಹಲಗೆ ಕೃಪಾಣು ತೋಮರ

ಪರುಶು ಕಕ್ಕಡೆ ಕೊಂತ ಮುದ್ಗರ

ಸುರಗಿಯತಿಬಳ ಪಾಯ್ದಳವ ನಿರಿಸಿದನು ವಳಯದಲಿ ೧೫


ಎಸೆಳೆಸಳು ಮಿಗೆ ಸರಸದಲಿ ಜೋ

ಡಿಸಿದನವನೀಪಾಲರನು ತ

ದ್ಬಿಸಜ ಕರ್ಣಿಕೆಯೊಡ್ಡಿನಲಿ ಬಲಿದನು ಸುಯೋಧನನ

ಪಸರಿಸಿತು ಕೌರವ ಕುಮಾರ

ಪ್ರಸರ ಕೇಸರವಾಯ್ತು ಮೃತ್ಯುವಿ

ನೊಸಗೆಗೆತ್ತಿದ ಗುಡಿಗಳೆನೆ ತಳಿತವು ಪತಾಕೆಗಳು ೧೬


ನಿಲಿಸಿದನು ರಾವುತರನಾ ಹೊರ

ವಳಯದಲಿ ರಾವುತರು ಮುರಿದರೆ

ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ

ತೊಳಗಿದವು ತೇರುಗಳು ತೇರಿನ

ದಳಕೆ ತಾನೊತ್ತಾಗಿ ರಣದ

ಗ್ಗಳೆಯರಿದ್ದುದು ರಾಯನೊಡೆಹುಟ್ಟಿದರು ಸಂದಣಿಸಿ ೧೭


ಅರನೆಲೆಯ ಸುಯಿಧಾನ ಬಾಹ್ಲಿಕ

ತರಣಿಸುತ ಗುರುಸೂನು ಕೃತವ

ರ್ಮರಿಗೆ ಕೃಪ ದುಶ್ಶಾಸನಾದ್ಯರಿಗಿದಿರಿನಾರೈಕೆ

ಎರಡು ಕೆಲದಲಿ ಶಲ್ಯ ಶಕುನಿಗ

ಳಿರವು ಸೇನೆಯ ಸುತ್ತುವಳಯವ

ಭರವ ಕೈಕೊಂಡಡ್ಡ ಮೆರೆದನು ಗರಡಿಯಾಚಾರ್ಯ (ಪಾ: ಗರುಡಿಯಾಚಾರ್ಯ) ೧೮


ಹಿಳುಕ ತಿರುಹುತ ಸಮ್ಮುಖದ ಬಲ

ದಳವಿಯಲಿ ಗಿರಿಯಂತೆ ಸೈಂಧವ

ಬಿಲುದುಡಕೆ ಮೋಹರಿಸಿದನು ಭೂರಿಶ್ರವಾದಿಗಳು

ದಳದ ಕೆಲಬಲದೊಳಗೆ ನೃಪ ಸಂ

ಕುಲವ ನಿಲಿಸಿದನಮಮ ಕಾಲನ

ಬಳಗಕೌತಣವೆನಲು ಪದ್ಮವ್ಯೂಹ ರಂಜಿಸಿತು ೧೯


ಏನ ಹೇಳುವೆನದನು ನೃಪ ತವ

ಸೂನುವಿನ ಮೋಹರದೊಳಳ್ಳಿರಿ

ವಾನೆಗಳನುಪ್ಪರಿಸಿ ಗಗನವ ಮೊಗೆವ ಕುದುರೆಗಳ

ಆ ನೃಪರ ವಾಜಿಗಳ ಗಿರಿ

ಸಾನು ಸಡಿಲಲು ಜಡಿವ ಭೇರಿ

ಧ್ವಾನವನು ಪಯದಳದ ಸುಭಟರ ಸಿಂಹಗರ್ಜನೆಯ ೨೦


ಮೇಳವದಲೆನ್ನಾನೆಗಳ ಬರ

ಹೇಳು ಸುಭರೊಳಗ್ಗಳರ ಬರ

ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು

ಲೋಲುಪತೆಯವನಿಯಲಿಹರೆ ಬರ

ಹೇಳು ಯಮನಂದನನನಿಂದಿನ

ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ ೨೧


ತುರಗ ಹಲ್ಲಣಿಸಿದವು ಸಮರ

ದ್ವಿರದ ಸಜ್ಜಂಬಡೆದವೊಗ್ಗಿನ

ತುರಗದಲಿ ಹೂಡಿದವು ರಥ ಕಾಲಾಳು ಮುಂಕೊಳಿಸಿ

ಅರಸನನುಜರು ಸಹಿತ ಕೃಷ್ಣನ

ಬೆರಳ ಸನ್ನೆಯೊಳೈದೆ ಬಿಡೆ ಮೋ

ಹರಿಸಿ ನಿಂದುದು ಮುರಿದ ಮಕರವ್ಯೂಹ ರಚನೆಯಲಿ ೨೨


ಬಂದು ಸಮಸಪ್ತಕರ ದೂತರು

ನಿಂದರರ್ಜುನನಿದಿರಲೇಳೈ

ನಂದಗೋಪನ ಮಗನ ಬಿಡು ನೆರವಿಂಗೆ ಕರೆ ಹರನ

ಇಂದು ರಣದಲಿ ಬದುಕಿದರೆ ನೀ

ನೆಂದಿಗೆಯು ಬದುಕಿದನೆ ನಿಂದಿರು

ನಿಂದಿರೆಂದವಗಡಿಸಿ ಹಿಡಿದರು ಫಲುಗುಣನ ಸೆರಗ ೨೩


ಖರೆಯರಹಿರುಂಟುಂಟು ನೆರೆವನೆ

ಕರಸಿಕೊಂಡೇ ಬಹೆನೆನುತ ರಿಪು

ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು

ಕರೆದರರ್ಜುನನನು ವೃಕೋದರ

ಧರಣಿಪತಿ ಮಾದ್ರೇಯ ಹೈಡಿಂ

ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ ೨೪


ಶಿವನ ಬೇಡಿದ ಶರವ ತೆಗೆ ಗಾಂ

ಡಿವವ ಬಿಗಿ ನಿನ್ನಿಷ್ಟದೈವವ

ತವಕದಲಿ ನೀ ಬೇಡಿಕೊಂಬುದು ಪರಮಸದ್ಗತಿಯ

ಅವರಿವರ ಹವಣಲ್ಲ ಗುರು ಮುನಿ

ದವಗಡಿಸಿದರೆ ನಿಲುವನಾವನು

ಬವರಕೇಳೇಳೆಂದು ಜರಿದರು ದೂತರರ್ಜುನನ ೨೫


ಚರರ ಕಳುಹಿದನಸುರವೈರಿಗೆ

ಕರವ ಮುಗಿದನು ಪಾರ್ಥನೀ ಸಂ

ಗರದೊಳಗೆ ನಿಮ್ಮಡಿಯ ಚಿತ್ತದೊಳಾವ ಥಟ್ಟಿನಲಿ

ಬೆರಸುವೆವು ನಾವಿಂದಿನೀ ಮೋ

ಹರದ ಮುರಿವಸದಳ ನಿಧಾನಿಸ

ಲರಿದೆನಲು ಮನದೊಳಗೆ ನಿಶ್ಚೈಸಿದನು ಮುರವೈರಿ ೨೬


ಅಳಿಯನೀ ಮೋಹರದೊಳಲ್ಲದೆ

ಫಲುಗುಣನ ಮಗನಿವನು ಬಲುಗೈ

ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ

ಫಲುಗುಣನ ನಾವಿತ್ತಲೊಯ್ದರೆ

ಬಳಿಕ ನಿರ್ಣಯವೆಂದು ಮನದಲೆ

ತಿಳಿದು ಪಾರ್ಥಂಗೆಂಡವಸುರಾರಾತಿ ನಸುನಗುತ ೨೭


ಗುಣಕೆ ಹುರುಡೇ ನಿನ್ನ ಮಗನೀ

ರಣವ ಬಗೆವನೆ ಸೂರ್ಯನಾರೋ

ಗಣಕೆ ಸೊಡರೇ ಸಾಕಿದೇತಕೆ ಬಯಲ ಭಂಡತನ

ಕೆಣಕು ನಡೆ ಸಮಸಪ್ತಕರನೀ

ಬಣಗುಗಳ ಕೊಂಬನೆ ಕುಮಾರಕ

ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ ೨೮


ಹರಿ ಸಹಿತ ಕಲಿ ಪಾರ್ಥನತ್ತಲು

ತಿರುಗಿದನು ಬಳಿಕಿತ್ತಲೀ ಮೋ

ಹರ ಮಹಾಂಭೋನಿದಿಗೆ ಮೊಗಸಿತು ಸರ್ವತೋಮುಖರು

ಮೊರೆವ ಪಟಹ ಮೃದಂಗ ಘನ ಜ

ರ್ಜರಿತವಹ ನಿಸ್ಸಾಳ ಚಯದ

ಬ್ಬರಣೆ ಗಬ್ಬರಿಸಿದುದು ಕಮಲಭವಾಂಡ ಖರ್ಪರವ ೨೯


ಉರವಣಿಸಿದರು ನಕುಲ ಸಾತ್ಯಕಿ

ವರ ವಿರಾಟ ದ್ರುಪದ ಕೈಕಯ

ಬಿರುದ ಧೃಷ್ಟದ್ಯುಮ್ನ ಕುಂತೀಭೋಜ ಮೊದಲಾಗಿ

ಧರಣಿಪರು ಥಟ್ಟೈಸಿ ರಿಪು ಮೋ

ಹರಕೆ ಕವಿದುದು ಕಾದಿ ದುರ್ಗವ

ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ ೩೦


ಸುಳಿದು ಹರಿ ಮೇಖಲೆಯ ಮೋಹರ

ದೊಳಗೆ ಮುಗ್ಗಿದಿರೈ ಮಹಾ ಮಂ

ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ

ಬಿಲುದುಡುಕಿ ಪವಮಾನ ನಂದನ

ನಳವಿಗೊಟ್ಟನು ಹೂಣೆ ಹೊಕ್ಕರಿ

ಬಲವನಿರಿದನು ಘಾಯವಡೆದನು ಘೋರ ಸಮರದಲಿ ೩೧


ಕಾದಲೆನ್ನಳವಲ್ಲ ಬಲ ದು

ರ್ಭೇದವಿದು ಶಿವಶಿವಯೆನುತ್ತ ವೃ

ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ

ಕೈದೆಗೆಯೆ ರಿಪುಬಲದ ಸುಭಟರು

ಕಾದಿದನು ಕಲಿ ಭೀಮ ಗೆಲಿದನು

ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ ೩೨


ಆ ಮಹಾ ಮೋಹರವನೊಡೆಯಲು

ಸೋಮನುಕುಲಜರು ಭೀತರಾದರು

ಹಾ ಮಹಾದೇವೆನುತ ಧರ್ಮಜ ನೋಡಿ ತಲೆದೂಗಿ

ರಾಮನರಿವನು ಕೃಷ್ಣನರಿವನು

ಸೀಮೆಯಲಿ ಕಲಿ ಪಾರ್ಥನರಿವನು

ಭೂಮಿಪತಿಗಳೊಳುಳಿದ ಸುಭಟರಿಗರಿವುದಿಲ್ಲೆಂದ ೩೩


ಹೊಗಲು ಬಲ್ಲನು ಹೊಕ್ಕವೊಲು ಹೆರ

ದೆಗೆಯಲರಿಯನು ವೀರ ಪಾರ್ಥನ

ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ

ಆಗಿವ ಚಿಂತೆಯೊಳರಸ ಕದನದ

ದುಗುಡ ಭಾರದಲಿರಲು ಮುಂಗೈ

ನಿಗಳವನು ತಿರುಹುತ್ತ ನಸು ನಗುತೆದ್ದನಭಿಮನ್ಯು ೩೪


ಜನಪನಂಘ್ರಿಗೆ ಮಣಿದು ಕೈಮುಗಿ

ದೆನಗೆ ಬೆಸಸೈ ಬೊಪ್ಪ ತಾ ಬ

ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ

ಅನುವರವ ಗೆಲುವೆನು ಕೃತಾಂತನ

ಮನೆಗೆ ಕಳುವೆನಹಿತರನು ನೀ

ನಿನಿತು ಚಿಂತಿಸಲೇಕೆ ಕಾಳೆಗಕೆನ್ನ ಕಳುಹೆಂದ ೩೫


ಹಸುಳೆಯದಟಿನ ನುಡಿಯ ಕೇಳಿದು

ನಸು ನಗುತ ಧರ್ಮಜನು ಘನ ಪೌ

ರುಷವು ನಿನಗಂಟೆಂದು ಕಂದನ ತೆಗೆದು ಬಿಗಿಯಪ್ಪಿ

ಶಿಶುವು ನೀನೆಲೆ ಮಗನೆ ಕಾದುವ

ರಸಮ ಬಲರು ಕಣಾ ಮಹಾ ರಥ

ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ ೩೬


ಸುಳಿಯಬಹುದಂಬುಧಿಯ ನಡುವಣ

ಸುಳಿಯೊಳಗೆ ಸಂವರ್ತಕನ ಕೊರ

ಳೊಳಗೆ ಕುಣಿಯಲುಬಹುದು ಮೃತ್ಯುವಿನಣಲ ಹೊಳಲೊಳಗೆ

ಹೊಳಕಬಹುದಹಿಪನ ಫಣಾ ಮಂ

ಡಳದೊಳಾಡಲುಬಹುದು ಕಾಣೆನು

ಗೆಲುವ ಹದನನು ಮಗನೆ ಪದ್ಮವ್ಯೂಹದೊಡ್ಡಣೆಯ ೩೭


ಬಿಡು ಮರೀಚಿಯ ತೊರೆಗೆ ಹರುಗೋ

ಲಿಡುವರುಂಟೇ ಲೆಪ್ಪದುರಗನ

ಹಿಡಿವಡೇತಕೆ ಗರುಡಮಂತ್ರವು ಚಪಲನೆನ್ನದಿರು

ಕೊಡನ ಮಗನ ಕುಮಂತ್ರದೊಡ್ದಿನ

ಕಡಿತಕಾನಂಜುವೆನೆ ವೆಗ್ಗಳ

ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ ೩೮


ಅವರೊಳಗಲಕೆ ನಿಂದ ರಿಪುಗಳ

ಜವನ ಬೋನವ ಮಾಡದಿದ್ದರೆ

ಅವನಿಯನು ಗೆಲದೇ ಮಹಾರಥರೆನಿಪ ನಾಯಕರ

ಅವನಿಯೊಳಗೊರಗಿಸದೆ ಮಾರಾಂ

ತವರ ನುಂಗದೆ ಮಾಣ್ಣೆನಾದರೆ

ದಿವಿಜಪತಿತನಯಂಗೆ ತಾ ಜನಿಸಿದವನಲ್ಲೆಂದ ೩೯


ಕಂದ ವೈರಿ ವ್ಯೂಹವಸದಳ

ವೆಂದೆನಿಪುದದರೊಳಗೆ ಕೃಪ ಗುರು

ನಂದನರು ರಾಧೇಯ ಭೂರಿಶ್ರವ ಜಯದ್ರಥರು

ಇಂದುಧರನಡಹಾಯ್ದರೊಮ್ಮಿಗೆ

ಹಿಂದು ಮುಂದೆನಿಸುವರು ನೀ ಗೆಲು

ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ ೪೦


ಗಾಳಿ ಬೆಮರುವುದುಂಟೆ ವಹ್ನಿ

ಜ್ವಾಲೆ ಹಿಮಕಂಜುವುದೆ ಮಂಜಿನ

ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ

ಬಾಲನಿವನೆನ್ನದಿರು ದುಗುಡವ

ತಾಳಲಾಗದು ಬೊಪ್ಪ ನಿಮ್ಮಡಿ

ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ ೪೧


ಅಹುದು ಮಗನೆ ಸಮಗ್ರಬಲ ನೀ

ನಹೆ ನಿಧಾನಿಸಲಿಂದು ಪವನಜ

ನಹವ ಮುರಿದರು ಕಾಯ್ದು ಬಿಟ್ಟರು ನಕುಲ ಸಾತ್ಯಕಿಯ

ಸಹಸ ದ್ರುಪದ ವಿರಾಟರುಗಳು

ಮ್ಮಹವ ಸೆಳೆದರು ವಿಜಯ ಗರ್ವದ

ಲಿಹ ಬಲವ ನೀನೊಬ್ಬನೇ ಸಾಧಿಸುವುದರಿದೆಂದ ೪೨


ಧರಣಿಪತಿ ಕೇಳುಳಿದ ಪುಷ್ಪದ

ಪರಿಮಳವು ಪಥಿಸಿದರೆ ಸಂಪಗೆ

ಯರಳ ಪರಿಮಲ ಪಥ್ಯವೇ ತುಂಬಿಗಳ ತಿಂತಿಣಿಗೆ

ಅರಿಭಟರು ಭೀಮಾದಿಗಳ ಗೆಲಿ

ದಿರಲಿ ಹೊಲ್ಲಹವೇನು ಘನ ಸಂ

ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ ೪೩


ಕೈದುಕಾರರ ಬಿಗುಹು ಘನ ನೀ

ಹೊಯ್ದು ಮೊದಲಲಿ ಬಿಡಿಸು ಬಳಿಕಾ

ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ

ಎಯ್ದೆ ಹಗೆಯಲಿ ಹೂಣಿ ಹೊಗದಿರು

ಮೈದೆಗೆದು ಕಾದುವುದು ಜಯಸಿರಿ

ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳೆಂದ ೪೪


ಕೆತ್ತುಕೊಂಡಿರೆ ಬಿಡಿಸುವೆನು ರಥ

ವೆತ್ತಲುರುಬಿದರತ್ತ ಕಣನೊಳು

ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ

ಹೊತ್ತಿ ಹೊಗೆವ ಪರಾಕ್ರಮಾಗ್ನಿಯ

ತುತ್ತು ಪದ್ಮವ್ಯೂಹ ದೇವರು

ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ ೪೫


ಶರನಿಧಿಯ ವಡಬಾನಳನ ದ

ಳ್ಳುರಿಯ ವರ್ಮವ ತಿವಿವ ತುಂಬಿಗೆ

ಮರಳುತಲೆಯುಂಟಾದಡದು ಭವಭವದ ಪುಣ್ಯಫಲ

ಅರಿಬಲವ ನೀ ಖಂಡಿಗಳೆ ಮೋ

ಹರ ಸಹಿತ ನಾ ಬಹೆನು ನಡೆಯೆಂ

ದರಸನಭಿಮನ್ಯುವಿಗೆ ನೇಮವ ಕೊಟ್ಟನಾಹವಕೆ ೪೬


ಶಿವಶಿವಾ ಶಿಶುವಿವನು ರಿಪುಗಳು

ಜವನ ಜೂಜೆನಿಸುವ ಮಹಾರಥ

ನಿಹವಕೊಬ್ಬನೆ ಗಡ ಸಮಾಹಿತವಲ್ಲ ಸಮರಂಗ

ಅವನಿಪತಿ ನಿರ್ದಯನಲಾ ಕಂ

ಡೆವು ಕುಮಾರನನಿಕ್ಕೆ ಬಹ ರಾ

ಜ್ಯವನು ಸುಡು ಸುಡುಲೇತಕೆಂದುದು ನಿಖಿಳ ಪರಿವಾರ ೪೭


ಲಲಿತ ಚಂದ್ರಿಕೆಗೇಕೆ ದಾವಾ

ನಳನ ಖಾಡಾಖಾಡಿ ಸುರಲತೆ

ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ

ನಳಿನ ನಾಳವು ಗಜದ ಕೈಯೊಡ

ನಲವಿಗೊಡಲಂತರವೆ ಪಾಪಿಗ

ಳೆಳಮಗನ ನೂಕಿದರು ಕಾಳೆಗಕೆಂದುದಮರಗಣ ೪೮


ಬಿಗಿದ ಗಂಡುಡಿಗೆಯಲಿ ಹೊನ್ನಾ

ಯುಗದ ಹೊಳೆವ ಕಠಾರಿಯನು ಮೊನೆ

ಮಗುಚಿ ಸಾಧು ಜವಾಜಿ ಕತ್ತುರಿ ಗಂಧಲೇಪದಲಿ

ಮಗಮಗಿಪ ಹೊಂದೊಡರ ಹಾರಾ

ದಿಗಳಲೊಪ್ಪಂಬಡೆದು ನಸುನಗೆ

ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು ೪೯


ಉಲಿವ ಘಂಟೆಯ ಕುಣಿವ ತುರಗಾ

ವಳಿಯ ಗಗನದೊಳಗಿವ ಬಿರುದಿನ

ಪಳಹರದ ತೆತ್ತೆಸಿದ ಕನಕದ ಚೌಕ ಸತ್ತಿಗೆಯ

ಘುಳುಘುಳಿಪ ಚೀತ್ಕಾರ ಕೋಳಾ

ಹಳದ ಸೂತನ ರೇಖೆಯಲಿ ಭಟ

ಕುಲಲಲಾಮನ ತೇರು ಬಂದುದು ತೀವಿದಸ್ತ್ರದಲಿ ೫೦


ತುರಗ ತತಿಗಭಿನಮಿಸಿ ರಥವನು

ತಿರುಗಿ ಬಲವಂದೆರಗಿ ಚಾಪಕೆ

ಕರವ ನೊಸಲಲಿ ಚಾಚಿ ಭಾರಿಯ ಭುಜವನೊದರಿಸುತ

ಅರಸಗಭಿವಂದಿಸುತ ಭೀಮನ

ಹರಕೆಗಳ ಕೈಕೊಳುತ ನಕುಳಾ

ದ್ಯರಿಗೆ ಪೊಡವಟ್ಟಡರಿದನು ನವರತುನಮಯ ರಥವ ೫೧


ಸೂಳವಿಸಿದವು ಲಗ್ಗೆಯಲಿ ನಿ

ಸ್ಸಾಳತತಿ ಸಿಡಿಲೆರಗಿತೆನಲು

ಬ್ಬಾಳು ಮಿಗೆ ಕೈನೆಗಹಿ ರಿಪು ಭೂ

ಪಾಲಕರ ಬೈಬೈದು ಗಜರಿದ

ವಾಳುತನದಾಳಾಪ ಬೀರಿತು ಬೆರಗನಹಿತರಿಗೆ ೫೨


ಒಡನೆ ಕಳುಹುತ ಬಂದನಾ ನೆಲ

ದೊಡೆಯನನುಜರು ಸಹಿತ ನಯನದಿ

ಬಿಡುವನಿಯ ಸಾಲಿನಲಿ ನನೆದರು ನನೆದರು ಬಂದು ಕಿರಿದೆಡೆಯ

ನಡೆ ವಿಜಯನಾಗೆಂದು ತನುವನು

ತಡವಿದರು ಕಡುಮೋಹವೆಡೆಯಲಿ

ಘುಡುಘುಡಿಸೆ ಶಿಶು ಬೀಳುಕೊಂಡನು ಪಿತೃಚತುಷ್ಟಯವ ೫೩


ಎಲೆ ಕುಮಾರಕ ಹರ ಕುಮಾರಂ

ಗಳವಿಯಲಿ ನಿಲಲರಿದು ಕೊರಳಿನ

ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು

ಬಲುಗುಡಿಯನೀ ಕರ್ಣನೀ ಕೃಪ

ನಲಘು ಭುಜಬಲ ದ್ರೋಣನೀ ವೆ

ಗ್ಗಳೆಯ ಜಯದ್ರಥನೆಂದು ಸಾರಥಿ ತೂಗಿದನು ಶಿರವ ೫೪


ಮರುಳು ಸಾರಥಿ ನಮ್ಮ ನಾವ್ ಪತಿ

ಕರಿಸಿಕೊಳಲಾಗದು ಕಣಾ ನೀ

ನರಿಯೆ ನಮ್ಮಂತರವ ನಾವಿನ್ನಾಡಿ ಫಲವೇನು

ಗುರುತನುಜನೇ ಕೃಪನೆ ದ್ರೋಣನೆ

ತರಣಿತನಯನೆ ಸೈಂಧವನೆ ಹುಲು

ನರರು ಗಣ್ಯವೆ ಕೇಳು ಭಾಷೆಯನೆಂದನಭಿಮನ್ಯು ೫೫


ಬವರವಾದರೆ ಹರನ ವದನಕೆ

ಬೆವರ ತಹೆನವಗಡಿಸಿದರೆ ವಾ

ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ

ಜವನ ಜಗವೆಡಿಸುವೆನು ಸಾಕಿ

ನ್ನಿವರವರಲೇನರ್ಜುನನು ಮಾ

ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ ೫೬


ಬಾಲನೆನ್ನದಿರೆನುತ ರಿಪುಭಟ

ಭಾಳಲೋಚನನೆನಿಸುವರ್ಜುನ

ಬಾಳುಗೆನುತುದ್ದಂಡ ಕೋದಂಡವನು ಜೇವೊಡೆಯೆ

ಮೇಲು ಜಗವಲ್ಲಾಡಿದವು ಕೊರ

ಳೋಳಿ ಕೆದರಿತು ಕುಸಿದನಹಿ ಪಾ

ತಾಳ ಗೂಳೆಯ ತೆಗೆಯಲಳ್ಳಿರಿಯಿತ್ತು ಬಿಲು ರಭಸ ೫೭


ಸುರನದಿಗೆ ಶಿವನಾಯ್ತು ಮಕರಾ

ಕರಕೆ ಕಳಶಜನಾಯ್ತು ತರಣಿಗೆ

ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ

ಅರರೆ ಸತ್ವ ರಜಸ್ತಮಂಗಳೊ

ಳೆರಡು ಗುಣವಡಗಿತು ರಜೋ ಗುಣ

ದುರುಳಿಯಾದುದು ಲೋಕವೆನೆ ಘಾಡಿಸಿತು ಪದಧೂಳಿ ೫೮


ಆರ ರಥವಿದು ಸೈನ್ಯ ಪಾರಾ

ವಾರಕಿದನಂಘೈಸುವನು ತ್ರಿಪು

ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ

ವೀರನಹನೋ ಪೂತು ರಣದ ದೊ

ಠಾರನಿವನಾರೆನುತ ತರುಬಿಯೆ

ತೋರಹತ್ತರು ತಾಗಿದರು ಸೌಬಲ ಜಯದ್ರಥರು ೫೯


ಫಡ ಜಯದ್ರಥ ಹೋಗು ಹೋಗಳ

ವಡಿಕೆಯಲ್ಲಿದು ಸಾರು ಸೌಬಲ

ಮಿಡುಕಿದಡೆ ಮರುಳಹಿರಿ ಲೇಸಲ್ಲೆಮ್ಮೊಳತಿಮಥನ

ತುಡುಕಿದರೆ ಕೈ ಬೇವುದೀ ಬಲು

ಗಡಿಯತನ ಬಯಲಹುದೆನುತ ತಡೆ

ಗಡಿದು ಬಿಸುಟನು ಭಟರ ಹಯ ರಥ ಧನುವ ಸಾರಥಿಯ ೬೦


ರಥ ಮುರಿದು ಮನನೊಂದು ಸುಮಹಾ

ರಥರು ಹಿಮ್ಮೆಟ್ಟಿದರು ಬಳಿಕತಿ

ರಥಭಯಂಕರನೊಡೆದು ಹೊಕ್ಕನು ವೈರಿಮೋಹರವ

ಮಥನದಲಿ ಮುರಿಯೊಡೆದ ಶೈಲ

ವ್ಯಥಿತ ಸಾಗರದಂತೆ ಬಿರಿದವು

ರಥನಿಕರ ಕಾಲಾಳು ಕುದುರೆಗಳೊಂದು ನಿಮಿಷದಲಿ ೬೧