ನಮ್ಮ ಪುರಾತನರ ವಚನಂಗಳನೆಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಮ್ಮ ಪುರಾತನರ ವಚನಂಗಳನೆಲ್ಲ ಓದದೆ ಇದ್ದಾರು
ಓದಿಯೂ ನಂಬಿಗೆ ಇಲ್ಲದೆ ಇದ್ದಾರು
ನೂರಕ್ಕೊಬ್ಬರಲ್ಲದೆ ನಂಬರು
ನಮ್ಮ ಆದ್ಯರ ವಚನಂಗಳ ಜರೆದಾರು
ತಮ್ಮ ಕವಿತ್ವವ ಮೆರೆದಾರು
ನಮ್ಮ ಆದ್ಯರ ವಚನಂಗಳಿಂದೊದವಿದ ಜ್ಞಾನವೆಂಬುದನರಿಯರು. ತಾಯಿಯಿಂದ ಮಕ್ಕಳಾದರೆಂಬುದನರಿಯರು. ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು ನಮ್ಮ ಪುರಾತನರ ವಚನವೆ ತಾಯಿ ತಂದೆ ಎಂದರಿಯರು. ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು ನಮ್ಮ ಆದ್ಯರ ವಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ ಪಂಚೇಂದ್ರಿಯ ದಶವಾಯುಗಳಿಚ್ಛೆಗೆ ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ ಲಿಂಗೇಂದ್ರಿಯಂಗಳೆನಿಸಿತ್ತು. ನಮ್ಮ ಆದ್ಯರ ವಚನ ನೂರೊಂದುಸ್ಥಲವ ಮೀರಿದ ಮಹದಲ್ಲಿ ನೆಲಸಿತ್ತು. ನಮ್ಮ ಆದ್ಯರ ವಚನ ಇನ್ನೂರಹದಿನಾರು ಲಿಂಗಕ್ಕೆ ಸರ್ವೇಂದ್ರಿಯವ ಸನ್ಮತವ ಮಾಡಿ
ಸಾಕಾರವ ಸವೆದು ನಿರಾಕಾರವನರಿದು ನಿರವಯಲ ನಿತ್ಯಸುಖದಲ್ಲಿರಿಸಿತ್ತು. ಇಂತಪ್ಪ ಆದ್ಯರ ವಚನಭಂಡಾರವ
ನಮ್ಮ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳು ಅಂಖ್ಯಾತ ಪುರಾತನರು
ಪ್ರಮಥಗಣಂಗಳು ಕೇಳಿ ಹೇಳಿ ಕೊಂಡಾಡಿದ ಕಾರಣ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸರ್ವಸುಖವ ಸೂರೆಗೊಂಡು ಸ್ವಯಲಿಂಗವಾದರು