ನರರು ಸುರರು ಕಿನ್ನರರು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ
ನಾನವರ ರೂಹಿಸಿ ಬಲ್ಲೆನೆ ಅಯ್ಯಾ ? ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಭಾವಿಸಿ ಬಲ್ಲೆನೆ ಅಯ್ಯಾ ? ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಅರಿದು ಬಲ್ಲೆನೆ ಅಯ್ಯಾ ? ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ
ತನ್ನ ಇರವೆಂದರಿದ ನಿಜಲಿಂಗೈಕ್ಯನ_ಉಪಮಿಸಲಿಲ್ಲ
ಉಪಮಿಸಲಿಲ್ಲಾಗಿ ರೂಹಿಸಲಿಲ್ಲ
ರೂಹಿಸಲಿಲ್ಲಾಗಿ ಭಾವಿಸಲಿಲ್ಲ
ಭಾವಿಸಲಿಲ್ಲಾಗಿ ಅರಿಯಲಿಲ್ಲ ! ಅರಿಯಲಿಲ್ಲದ ಅರಿವೆ ತಾನಾಗಿ
ಗುಹೇಶ್ವರನೆಂಬುದು ಬೇರಿಲ್ಲ.