ನಾಗಲಾಂಬಿಕೆ

ವಿಕಿಸೋರ್ಸ್ದಿಂದ

ಅಂಗದಿಂದುದಯವಾದಾತ ಮಡಿವಾಳಯ್ಯ. ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ. ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ. ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ. ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ. ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ.



ಬಸವಣ್ಣಪ್ರಿಯ ಚೆನ್ನಸಂಗಯ್ಯ.


ಅರಿಯದೆ ಮರಹಿಂದ ಭವದಲ್ಲಿ ಬಂದೆನಲ್ಲದೆ, ಇನ್ನು ಅರಿದ ಬಳಿಕ ಬರಲುಂಟೆ ? ಹೃದಯಕಮಲಮಧ್ಯದಲ್ಲಿ ನಿಜವು ನೆಲೆಗೊಂಡ ಬಳಿಕ, ಪುಣ್ಯಪಾಪವೆಂಬುದಕ್ಕೆ ಹೊರಗಾದೆನು. ಭುವನಹದಿನಾಲ್ಕರೊಳಗೆ ಪರಿಪೂರ್ಣ ನಿರಂಜನಜ್ಯೋತಿಯಾಗಿ ಬೆಳಗುವ ಪ್ರಭುವ ಕಂಡು ಬದುಕಿದೆನು ಕಾಣಾ ಬಸವಣ್ಣಪ್ರಿಯ ಚೆನ್ನಸಂಗಯ್ಯಾ.




ಅಯ್ಯಾ, ನಾನಧವೆ, ಅಯ್ಯಯ್ಯ ಕೈಯ ಕೋಲಕೊಂಬರೆ ? ಅಯ್ಯಾ, ಎಳೆಗರುವಿನ ಎಳಗಂತಿಯನೆಳೆದೊಯ್ವರೆ ಭಕ್ತರು ? ಅಯ್ಯೋ ಅಯ್ಯೋ ಎನಲೊಯ್ವರೆ, ಬಸವಣ್ಣಪ್ರಿಯ ಚೆನ್ನಸಂಗಯ್ಯಾ ?



ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ. ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ. ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ ಹಾದಿಯನೆಲ್ಲರಿಗೆ ತೋರಿದ. ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು, ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ. ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ, ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ. ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ, ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.

ಎನ್ನ ಕುಲಸೂತಕವ ಕಳೆದಾತ ಬಸವಣ್ಣ. ಎನ್ನ ಛಲಸೂತಕವ ಕಳೆದಾತ ಬಸವಣ್ಣ. ಎನ್ನ ತನುಸೂತಕವ ಕಳೆದಾತ ಬಸವಣ್ಣ. ಎನ್ನ ಮನಸೂತಕವ ಕಳೆದಾತ ಬಸವಣ್ಣ. ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ. ಎನ್ನ ಭಾವಸೂತಕವ ಕಳೆದಾತ ಬಸವಣ್ಣ. ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ. ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ. ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ. ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ. ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.



ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ ಸಂಗನಬಸವಣ್ಣನ ಒಕ್ಕುದ ಕೊಂಡೆನಾಗಿ. ಎನ್ನ ಮನದ ಕಪಟ ಹಿಂಗಿತ್ತಯ್ಯಾ ಚೆನ್ನಬಸವಣ್ಣನ ಕರುಣವ ಪಡೆದೆನಾಗಿ. ಎನ್ನಂತರಂಗದ ಸಂದುಸಂಶಯ ತೊಲಗಿತ್ತಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಎನ್ನ ಪರಮಗುರು ಅಲ್ಲಮಪ್ರಭುದೇವರ ಶ್ರೀ ಚರಣವ ಕಂಡೆನಾಗಿ.



ಎನ್ನ ತನು ಚೆನ್ನಬಸವಣ್ಣನ ಬಯಲ ಬೆರಸಿತ್ತು. ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು. ಎನ್ನ ಪ್ರಾಣ ಅಲ್ಲಮಪ್ರಭುದೇವರ ಅರಿವ ಬೆರಸಿತ್ತು. ಇಂತೀ ಮೂವರು ಒಂದೊಂದ ಹಂಚಿಕೊಂಡ ಕಾರಣ, ಎನಗೇನೂ ಇಲ್ಲದೆ, ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.

ಗುರುಸಂಬಂಧಿ ಗುರುಭಕ್ತಯ್ಯನು. ಲಿಂಗಸಂಬಂಧಿ ಪ್ರಭುದೇವರು. ಜಂಗಮಸಂಬಂಧಿ ಸಿದ್ಧರಾಮನು. ಪ್ರಸಾದಸಂಬಂಧಿ ಮರುಳಶಂಕರದೇವರು. ಪ್ರಾಣಲಿಂಗಸಂಬಂಧಿ ಅನಿಮಿಷದೇವರು. ಶರಣಸಂಬಂಧಿ ಘಟ್ಟಿವಾಳಯ್ಯನು. ಐಕ್ಯಸಂಬಂಧಿ ಅಜಗಣ್ಣಯ್ಯನು. ಸರ್ವಾಚಾರಸಂಬಂಧಿ ಚೆನ್ನಬಸವಣ್ಣನು. ಇಂತಿವರಸಂಬಂಧ ಎನ್ನ ಸರ್ವಾಂಗದಲ್ಲಿ ನಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ ! ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ? ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ. ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ. ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ. ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ. ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ ?

ಬಸವನೆ ಮಖಸೆಜ್ಜೆ, ಬಸವನೆ ಅಮಳೋಕ್ಯ. ಬಸವನ ನಾನೆತ್ತಿ ಮುದ್ದಾಡಿಸುವೆನು. ಬಸವಾ, ಸಂಗನಬಸವಿದೇವಾ ಜಯತು. ಬಸವಾ, ಸಂಗನಬಸವಲಿಂಗಾ ಜಯತು. ಬಸವಗೂ ಎನಗೂ ಭಾವಭೇದವಿಲ್ಲ ಬಸವಗೂ ಎನಗೂ ರಾಸಿಕೂಟವುಂಟು. ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಬಸವನ ಬೆಸಲಾದ ಬಾಣತಿ ನಾನಯ್ಯಾ ಬಸವಾ, ಬಸವಾ, ಬಸವಾ!

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು. ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ. ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು. ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ. ಎನ್ನ ಕಂಗಳೊಳಗಿಂಬಾದ ಬಸವ, ಎನ್ನ ಮನ ಭಾವಂಗಳೊಳಗಾದ ಬಸವ, ಎನ್ನಂತರಂಗ ತುಂಬಿ ನಿಂದಾತ ಬಸವ. ಹೊರಗೆ ಗುರುಬಸವನ ಕೀರುತಿ. ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ. ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ ಬಸವಾ ಬಸವಾ ಜಯತು ಗುರುಸಂಗನಬಸವಾ ಜಯತು.



ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ, ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವೆನು ? ಎಲೆ ಅಯ್ಯಾ ಪರಮಗುರುವೆ, ಆಹಾ ಎನ್ನ ಅಂತರಂಗದ ಜ್ಯೋತಿಯೆ, ನಿಮ್ಮ ಒಕ್ಕ ಶೇಷಪ್ರಸಾದವನಿಕ್ಕಿ ಎನ್ನ ಪಾವನವಮಾಡಿ ಉಳುಹಿದೆಯಯ್ಯಾ. ಲಿಂಗವೆ ಎನಗಿನ್ನಾರು ಹೇಳಯ್ಯಾ ನೀವಲ್ಲದೆ ? ಬಸವಣ್ಣಪ್ರಿಯ ಚೆನ್ನಸಂಗಯ್ಯಾ, ನೀವಗಲಿದಡೆ ಎನ್ನ ಪ್ರಾಣ ನಿಮ್ಮೊಳಗಲ್ಲದೆ ಅಗಲಬಲ್ಲುದೆ ?

ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವನು. ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ, ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ. ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು.

ಶ್ರೀಗುರುವೆ ತಾಯಿತಂದೆಯಾಗಿ, ಲಿಂಗವೆ ಪತಿಯಾಗಿ, ಜಂಗಮವೆ ಅತ್ತೆಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ, ಸತ್ಯಸದಾಚಾರವೆಂಬ ಮನೆಗೆ ಕಳುಹಿದರಾಗಿ, ಶರಣಸತಿ ಎಂಬ ನಾಮ ನಿಜವಾಯಿತ್ತು. ಆದಂತೆ ಇರುವೆ, ಹಿಂದುಮುಂದರಿಯದೆ ನಡೆವೆ. ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ, ಬಸವಣ್ಣಪ್ರಿಯ ಚೆನ್ನಸಂಗಯ್ಯಾ ನಿಮ್ಮಡಿಗಳಿಗೆ.