ನಾನೊಬ್ಬನುಂಟೆಂಬವಂಗೆ ನೀನೊಬ್ಬನುಂಟಾಗಿ ತೋರುವೆ. ನಾನು ನೀನೆಂಬುದುಂಟಾದಲ್ಲಿ ಜ್ಞಾನ ಅಜ್ಞಾನವುಂಟಾಯಿತ್ತು. ಜ್ಞಾನ ಅಜ್ಞಾನ ಉಂಟಾದಲ್ಲಿಯೆ ನಾನಾವಿಧದ ಪ್ರಪಂಚು ಆಯಿತ್ತು ನೋಡಾ. ಮಾಯಿಕವೆಂಬುದು ಹೀಂಗಲ್ಲದೆ ಇನ್ನು ಹೇಂಗಿಹುದು ಹೇಳಾ?
ನಾನು ನೀನೆಂಬುದೆರಡು ಸತ್ತರೆ ಜ್ಞಾನ ಅಜ್ಞಾನವರತಿತ್ತು. ನಾನಾವಿಧವಾಗಿ ತೋರಿದ ಮಾಯಿಕವಳಿಯಿತ್ತು. ಮಾಯಿಕವಳಿಯಿತ್ತಾಗಿ ನಿರ್ಮಾಯನಾದೆನು ಕಾಣಾ. ನಿರ್ಮಾಯನಾದ ನಿಜಶರಣಂಗೆ ಕಾಯವೆಲ್ಲಿಯದು? ಮಾಯವೆಲ್ಲಿಯದು? ಮನವೆಲ್ಲಿಯದು? ನೆನಹೆಲ್ಲಿಯದು? ಅರುಹೆಲ್ಲಿಯದು? ಕುರುಹೆಲ್ಲಿಯದು. ತಾನಷ್ಟವಾದ ಸರ್ವನಷ್ಟಂಗೆ ತನಗನ್ಯವಾಗಿ ಇನ್ನೇನು ದೃಷ್ಟವನೂ ಹೇಳಲಿಲ್ಲ. ``ಯದೃಷ್ಟಂ ತನ್ನಷ್ಟಂ' ಎಂದುದಾಗಿ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ಲಿಂಗವು ನಿರಾಳವಾಗಿ
ಇನ್ನೇನು ಎಂಬ ನುಡಿಗೆಡೆಯಿಲ್ಲ ಕಾಣಿರೋ.