ನಾವೂ ಮನುಷ್ಯರು!/ಕೃತಜ್ಞತೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕೃತಜ್ಞತೆ


ನಿರಂಜನ ಸಾಹಿತ್ಯವನ್ನು ಕುರಿತು ವಿಚಾರಗೋಷ್ಠಿಯ ಪ್ರಸ್ತಾಪ ಮಾಡಲೆಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ವಿ.ಬಿ. ಮೊಳೆಯಾರರು ಕೆಲ ದಿನಗಳ ಹಿಂದೆ ನಮ್ಮಲ್ಲಿಗೆ ಬಂದರು. ಇಂತಹ ಸಂದರ್ಭಗಳಲ್ಲಿ ಬರಹಗಾರ ನಿರ್ಲಿಪ್ತನಾಗಿರಬೇಕೆಂಬ ಅಭಿಪ್ರಾಯ ನನ್ನದು. ಮೊಳೆಯಾರರು ಮೆಲುದನಿಯಲ್ಲಿ ಮಾತು ಮುಂದುವರಿಸಿದರು:


“ನಿಮ್ಮದು ಯಾವುದಾದರೂ ಸಣ್ಣ ಪುಸ್ತಕವನ್ನು ಆ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ವತಿಯಿಂದ ಪ್ರಕಟಿಸಿದರೆ ಆದೀತು ಎಂಬ ಯೋಚನೆ ಇದೆ. ಗೆಳೆಯ ಬೋಳಂತಕೋಡಿ ಈಶ್ವರ ಭಟ್ಟರೂ 'ಕೇಳಿ ನೋಡಿ' ಎಂದಿದ್ದಾರೆ."


ಪುಸ್ತಕ ಪ್ರಕಟಣೆ ಎಂದೊಡನೆ ಲೇಖಕರ ಕಣ್ಣುಗಳು ಮಿನುಗುತ್ತವೆ. ನಾನು ಹಳಬ. ಹೊಳಪು ಅವರಿಗೆ ಕಾಣಿಸದಿರಲೆಂದು ಎದೆ ಮುಚ್ಚಿದೆ. ಬಹಳ ಹಿಂದೆ ಬರೆದ ಒಂದು ಏಕಾಂಕ ನಾಟಕದ ಹಸ್ತಪ್ರತಿ ನನ್ನಲ್ಲಿರುವುದು ನೆನಪಾಯಿತು.

ಅದರ ಬಗೆಗೆ ಹೇಳಿದೆ. "ಅದೇ ಆಗಬಹುದು," ಎಂದರು.


ಪ್ರಕಟಣೆ ಅರ್ಥಪೂರ್ಣವಾಗಲೆಂದು 'ಬಣ್ಣದ ಬಯಲು' ಪ್ರಸ್ತಾವನೆ ಈಗ ಬರೆದಿದ್ದೇನೆ. 'ನಾವೂ ಮನುಷ್ಯರು!' ನಾಟಕವನ್ನು ಮೊದಲಬಾರಿ ಆಡಿದ ಜನತಾ ರಂಗಭೂಮಿ'ಯನ್ನು ಕುರಿತು ೧೯೪೪ರಲ್ಲಿ ಬರೆದ ನನ್ನ ಲೇಖನವೂ ಇಲ್ಲಿ ಪುನರ್ಮುದ್ರಣ ಹೊಂದುತ್ತಿದೆ.


ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಸಂಘ ತನ್ನ ಪ್ರಕಾಶನ ಚಟುವಟಿಕೆಯ ಮೂಲಕ ನಾಡಿನ ಗಮನವನ್ನು ತನ್ನೆಡೆಗೆ ಸೆಳೆದಿದೆ. ನನ್ನದೂ ಒಂದು ಪುಸ್ತಕವನ್ನು ಅದು ಹೊರತರುತ್ತಿರುವುದು ನನಗೆ ಅಭಿಮಾನದ ಸಂಗತಿಯಾಗಿದೆ. ಈ ತೀರ್ಮಾನಕ್ಕೆ ಕಾರಣರಾದ ಮಿತ್ರರಿಗೆ, ಅಂದವಾಗಿ ಮುದ್ರಿಸಿರುವ ರಾಜೇಶ್ ಪವರ್ ಪ್ರೆಸ್ಸಿನ ಒಡೆಯರಾದ ಗೆ. ಎಂ. ಎಸ್. ರಘುನಾಥರಾಯರಿಗೆ, ರಕ್ಷಾಕವಚವನ್ನು ರೂಪಿಸಿದ ಕಲಾವಿದ ಗೆ. ಮೋಹನ ಸೋನರಿಗೆ ನಾನು ಕೃತಜ್ಞನಾಗಿದ್ದೇನೆ.

೭-೧೦-೧೯೮೫
ಬೆಂಗಳೂರು

ನಿರಂಜನ