ನಿರಾಕಾರ ಬಯಲು ಮೂರ್ತಿಗೊಂಡು ಮಹಾಜ್ಞಾನವೇ ಚಿತ್‍ಸ್ವರೂಪವಾಯಿತ್ತು. ಆ ಚಿಚ್ಛಕ್ತಿಸ್ವರೂಪವೇ ಶರಣನಾಗಿ ಮೂರ್ತಿಗೊಂಡನು ನೋಡಾ. ಆ ಶರಣನ ಸಹಸ್ರಾಂಶದಲ್ಲಿ ಸದಾಶಿವನಾದನು. ಆ ಸದಾಶಿವನ ಸಹಸ್ರಾಂಶದಲ್ಲಿ ಈಶ್ವರ ಮೂರ್ತಿಯಾದನು. ಆ ಈಶ್ವರನ ಸಹಸ್ರಾಂಶದಲ್ಲಿ ರುದ್ರನಾದನು. ಆ ರುದ್ರನ ಕೋಟಿಯ ಅಂಶದಲ್ಲಿ ವಿಷ್ಣು ಹುಟ್ಟಿದನು. ಆ ವಿಷ್ಣುವಿನ ಕೋಟಿಯ ಅಂಶದಲ್ಲಿ ಬ್ರಹ್ಮನಾದನು. ಆ ಬ್ರಹ್ಮನ ಕೋಟಾನುಕೋಟಿಯ ಅಂಶದಿಂದ ನರರು ಸುರರು ಹೆಣ್ಣು ಗಂಡು ಮೊದಲಾದ ಸಕಲ ಚರಾಚರಂಗಳೆಲ್ಲವು ಹುಟ್ಟಿದವು ನೋಡಾ. ಇಂತಿವೆಲ್ಲವೂ ಪರಶಿವನ ನೆನಹುಮಾತ್ರದಿಂದ ತೋರಿ ಅಡಗತ್ತಿಹವು. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇಂತೀ ಐವರನು ತನ್ನಲ್ಲಿ ಗರ್ಭೀಕರಿಸಿಕೊಂಡಿಪ್ಪನು
ಚಿತ್‍ಸ್ವರೂಪನಪ್ಪ ಶರಣನು. ಆ ಶರಣನೇ ಚೆನ್ನಬಸವಣ್ಣನು. ಆ ಚೆನ್ನಬಸವಣ್ಣನೇ ಎನ್ನಂತರಂಗದ ಸುಜ್ಞಾನ ಪ್ರಾಣಲಿಂಗವೆಂದರಿದು ಮನೋಭಾವದಿಂದ ಆರಾಧಿಸಿ ಪಾಣಲಿಂಗ ಸಂಬಂಧಿಯಾಗಿದ್ದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.