ನಿರುಪಮ ಅದೆಂತೆಂದೊಡೆ ಬಸವಣ್ಣನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿರುಪಮ ಬಸವಣ್ಣನ ನಿರಾಳ ಬೆಳಗಿನೊಳಗೆ ನಿರಂತರ ಬೆಳಗುತಿರ್ದೆನಯ್ಯಾ. ಅದೆಂತೆಂದೊಡೆ : ಬಕಾರವೇ ಎನ್ನ ಸ್ಥೂಲತನು
ಸಕಾರವೇ ಎನ್ನ ಸೂಕ್ಷ್ಮತನು
ವಕಾರವೇ ಎನ್ನ ಕಾರಣತನು. ಮತ್ತಂ
ಬಕಾರವೇ ಎನ್ನ ಜೀವಾತ್ಮನು
ಸಕಾರವೆ ಎನ್ನ ಅಂತರಾತ್ಮನು
ವಕಾರವೆ ಎನ್ನ ಪರಮಾತ್ಮನು. ಮತ್ತಂ
ಬಕಾರವೆ ಗುರುವಾಗಿ ಬಂದೆನ್ನ ತನುವನೊಳಕೊಂಡಿತ್ತು. ಸಕಾರವೆ ಲಿಂಗವಾಗಿ ಬಂದೆನ್ನ ಮನವನೊಳಕೊಂಡಿತ್ತು. ವಕಾರವೆ ಜಂಗಮವಾಗಿ ಬಂದೆನ್ನ ಧನವನೊಳಕೊಂಡಿತ್ತು. ಮತ್ತಂ
ಬಕಾರವೆ ಇಷ್ಟಲಿಂಗವಾಗಿ ಬಂದೆನ್ನ ಸ್ಥೂಲತನುವನೊಳಕೊಂಡಿತ್ತು. ಸಕಾರವೆ ಪ್ರಾಣಲಿಂಗವಾಗಿ ಬಂದೆನ್ನ ಸೂಕ್ಷ್ಮತನುವನೊಳಕೊಂಡಿತ್ತು. ವಕಾರವೆ ಭಾವಲಿಂಗವಾಗಿ ಬಂದೆನ್ನ ಕಾರಣತನುವನೊಳಕೊಂಡಿತ್ತು. ಮತ್ತಂ
ಬಕಾರವೆ ಶುದ್ಧಪ್ರಸಾದವಾಗಿ ಬಂದೆನ್ನ ಜೀವಾತ್ಮನನೊಳಕೊಂಡಿತ್ತು. ಸಕಾರವೇ ಸಿದ್ಧಪ್ರಸಾದವಾಗಿ ಬಂದೆನ್ನ ಅಂತರಾತ್ಮನನೊಳಕೊಂಡಿತ್ತು. ವಕಾರವೆ ಪ್ರಸಿದ್ಧಪ್ರಸಾದವಾಗಿ ಬಂದೆನ್ನ ಪರಮಾತ್ಮನನೊಳಕೊಂಡಿತ್ತು. ಮತ್ತಂ
ಬಕಾರವೆ ಸತ್ಕ್ರಿಯೆಯಾಗಿ ಬಂದೆನ್ನ ಬಹಿರಂಗವ ಅವಗ್ರಹಿಸುತಿರ್ಪುದು. ಸಕಾರವೆ ಸಮ್ಯಕ್‍ಜ್ಞಾನವಾಗಿ ಬಂದೆನ್ನ ಅಂತರಂಗವ ಅವಗ್ರಹಿಸುತಿರ್ಪುದು. ವಕಾರವೆ ಮಹಾಜ್ಞಾನವಾಗಿ ಬಂದೆನ್ನ ಒಳಹೊರಗನೆಲ್ಲ ಅವಗ್ರಹಿಸುತಿರ್ಪುದು. ಇಂತೀ ಬಸವಾಕ್ಷರಕತ್ರಯಂಗಳಲ್ಲಿ ನಾನು ನಿಕ್ಷೇಪವಾಗಿರ್ದು ಬಸವ ಬಸವ ಬಸವ ಎಂದು ಬಸವಣ್ಣನ ನಾಮತ್ರಯವನು ಎನ್ನ ಮನದಣಿವಂತೆ ತಣಿಯಲುಂಡು ಭವಸೂತ್ರವ ಹರಿದು ಶಿವಸ್ವರೂಪನಾದೆನಯ್ಯಾ ಅಖಂಡೇಶ್ವರಾ.