ಪರಂತಪ ವಿಜಯ ೨/ಅಧ್ಯಾಯ ೧೦

ವಿಕಿಸೋರ್ಸ್ ಇಂದ
Jump to navigation Jump to search
೮೦
ಪರಂತಪ ವಿಜಯ

ಅಧ್ಯಾಯ ೧೦.

ಅರ್ಥಪರನು, ಅಲ್ಲಿಂದ ಪರಂತಪನ ಬಿಡಾರಕ್ಕೆ ಹೋಗಿ, ಆತನನ್ನು ಕರೆದುಕೊಂಡು ರತ್ನಾಕರಕ್ಕೆ ಹೊರಟನು. ಆ ಮಾರ್ಗದಲ್ಲಿ ಸತ್ಯಶರ್ಮನ ಮನೆಯು ಸಿಕ್ಕಿತು, ಪರಂತಪನು, ಅರ್ಥಪರನನ್ನು ಮೆಲ್ಲಗೆ ಹೋಗುತ್ತಿರುವಂತೆ ಹೇಳಿ, ತಾನು ಆ ಮನೆಯನ್ನು ಪ್ರವೇಶಿಸಿ, ಸತ್ಯಶರ್ಮನಿಗೂ ತನ್ನ ಪ್ರಿಯೆಯಾದ ಕಾಮಮೋಹಿನಿಗೂ ತನ್ನ ಪ್ರಯಾಣದ ಸಂಗತಿಯನ್ನು ತಿಳಿಸಿದನು. ಅದನ್ನು ಕೇಳಿ, ಕಾಮಮೋಹಿನಿಯು ಭಯಗ್ರಸ್ತೆಯಾಗಿ, ಆತನ ಕೈಯನ್ನು ಹಿಡಿದುಕೊಂಡು "ಇದು ಅಪಾಯಕರವಾದ ಸ್ಥಳ; ಹೋಗಕೂಡದು.” ಎಂದು ನಿರ್ಬಂಧಿಸಿ ಪ್ರಾರ್ಥಿಸಿಕೊಳ್ಳಲು, ಪರಂತಪನು "ಎಲೆ ಪ್ರಿಯೆ! ಹೆದರಬೇಡ, ನಾನು ಆಯುಧಪಾಣಿಯಾಗಿರುತ್ತೇನೆ. ನನಗೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಅಲ್ಲಿ ಜನಗಳಿಗೆ ಉಂಟಾಗಿರುವ ಭಯವೆಲ್ಲ ನಿರರ್ಥಕವಾದುದು. ಅದನ್ನು ನಿನಗೆ ವಾಸಗೃಹವನ್ನಾಗಿ ಮಾಡಬೇಕೆಂದಿದ್ದೇನೆ. ಅದು ವಾಸಕ್ಕೆ ಬಹು ಅನುಕೂಲವಾಗಿದೆ. ಅದರಲ್ಲಿ ಇನ್ನೂ ಕೆಲವು ಬೇಕಾದ ಆನುಕೂಲ್ಯಗಳನ್ನುಂಟುಮಾಡಿ, ನಿಮ್ಮೆಲ್ಲರನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತೇನೆ. ಹೆದರಬೇಡ." ಎಂದು ಹೇಳಲು, ಸತ್ಯಶರ್ಮನೇ ಮೊದಲಾದವರೆಲ್ಲರೂ ಅವಳಿಗೆ ಧೈರ್ಯ ಹೇಳಿದರು.
ಕಾಮಮೋಹಿನಿ- ಪ್ರಿಯನೇ! ನಿನ್ನ ಧೈರ್ಯ ಸಾಹಸಗಳು ನನಗೆ ಭಯಾವಹಗಳಾಗಿರುವುವು. ಅದು ನಮಗೆ ವಾಸಾರ್ಹವೆಂಬುದರಲ್ಲಿ ನನಗೆ ನಂಬುಗೆ ತೋರುವುದಿಲ್ಲ. ಅಂತೂ, ಆ ಪ್ರದೇಶವು ಅಪಾಯಕರವಾದುದೇ ಸರಿ, ಪುನಃ ನಿನ್ನನ್ನು ನಾನು ನೋಡುವೆನೋ ಇಲ್ಲವೋ ಎಂಬ ಸಂಶಯವೂ ಸಹ ನನ್ನಲ್ಲಿ ನೆಲೆಗೊಂಡಿರುವುದು.

ಪರಂತಪ- ಎಲೆ ಪ್ರಿಯೆ ! ಇದೇನು ನೀನೂ ಹೀಗೆ ಹೆದರುವೆ? ಈ ಭಯವು ನಿನಗೆ ಯೋಗ್ಯವಾದುದಲ್ಲ, ನಾಳೆ ಮಧ್ಯಾಹ್ನದೊಳಗಾಗಿ ನಾನು ಇಲ್ಲಿಗೆ ಬರುವೆನು, ನೋಡು.
೮೧
ಅಧ್ಯಾಯ ೯

ಸತ್ಯಶರ್ಮ- ಅಯ್ಯಾ! ನೀನು ಬಹು ಜಾಗರೂಕನಾಗಿರು. ಆ ಪ್ರದೇಶವು ಭೂತಪ್ರೇತಾದಿಗಳಿಗೂ ಅನೇಕ ದುರ್ದೇವತೆಗಳಿಗೂ ಆಶ್ರಯವಾಗಿರುವುದೆಂದು ಕೇಳುತ್ತೇನೆ. ಜೋಕೆ! ಜೋಕೆ!!
ಪರಂತಪ -(ನಸುನಕ್ಕು) ಇದೀಗ ಅತ್ಯಾಶ್ಚರ್ಯಕರವಾಗಿದೆ. ಭೂತ ಪ್ರೇತ ಪಿಶಾಚಾದಿಗಳು ಯಾವುವಿದ್ದರೂ, ಅವುಗಳನ್ನೆಲ್ಲ ಹೊರಡಿಸಿ ಅದನ್ನು ವಾಸಾರ್ಹವಾಗಿ ಮಾಡುತ್ತೇನೆ; ಚಿಂತಿಸಬೇಡ. ಆದರೆ, ನಾನು ಬರುವವರೆಗೂ ಈ ನನ್ನ ಪ್ರಿಯೆಯನ್ನೂ ನಮ್ಮಿಬ್ಬರ ವಿವಾಹದ ಕರಾರನ್ನೂ ಕಾಪಾಡಿಕೊಂಡಿರು.
ಸತ್ಯಶರ್ಮ - ಈ ವಿಷಯದಲ್ಲಿ ನೀನು ಹೆದರದೆ ಧೈರ್ಯವಾಗಿರು ನಾನು ನೋಡಿಕೊಳ್ಳುವೆನು.
ಪರಂತಪ - (ತನ್ನ ಕೈಪೆಟ್ಟಿಗೆಯನ್ನು ಕಾಮಮೋಹಿನಿಯ ವಶಕ್ಕೆ ಕೊಟ್ಟು) ಪ್ರಿಯೆ! ಇದರಲ್ಲಿ ೨೦ ಲಕ್ಷ ಪೌನುಗಳ ಬ್ಯಾಂಕು ನೋಟುಗಳಿರುತ್ತವೆ. ಇದನ್ನು ನೀನು ಭದ್ರವಾಗಿಟ್ಟುಕೊಂಡಿರು. ನಿನಗೆ ಬೇಕಾದಷ್ಟನ್ನು ತೆಗೆದುಕೊ. ಸತ್ಯಶರ್ಮಾದಿಗಳಿಗೆ ಬೇಕಾದಷ್ಟು ಖರ್ಚಿಗೆ ಕೊಡು. ಇದರ ವಿನಿಯೋಗದ ವಿಷಯದಲ್ಲಿ ನಿನಗೆ ಸರಸ್ವಾತಂತ್ರವನ್ನೂ ವಹಿಸುವೆನು, ಹೋಗು.
ಅದರ ಬೀಗದ ಕೈಯನ್ನು ಅವಳ ವಶಕ್ಕೆ ಕೊಟ್ಟು, ಅವರೆಲ್ಲರ ಅನುಮತಿಯನ್ನೂ ತೆಗೆದುಕೊಂಡು, ಕುದುರೆಯನ್ನು ಹತ್ತಿ ಹೊರಟು, ತನ್ನ ನಿರೀಕ್ಷಣೆಯಿಂದಲೇ ಮೆಲ್ಲನೆ ನಡೆಯುತ್ತಿದ್ದ ಅರ್ಥಪರನನ್ನು ಸೇರಿದನು. ಸೂರ್ಯಾಸ್ತಮಯದೊಳಗಾಗಿಯೇ ಕಣಿವೆಗಳ ಮಾರ್ಗವಾಗಿ ರತ್ನಾಕರದ ಕಟ್ಟಡದ ಸಮೀಪಕ್ಕೆ ಸೇರಿ ಅದರ ರಾಮಣೀಯಕವನ್ನು ನೋಡಿ ಮನಸ್ಸಿನಲ್ಲಿ ಅತ್ಯಾಶ್ಚರ್ಯ ಪಡುತ್ತಿರುವ ಪರಂತಪನು, ಅರ್ಥಪರನನ್ನು ನೋಡಿ “ಅಯ್ಯಾ! ಇದರ ಅಂದವನ್ನು ನೋಡಿದೆಯಾ? ಇದನ್ನು ನಿರ್ಮಿಸಿದ ಶಿಲ್ಪಿಯ ಚಾತುರ್ಯವು ಅನ್ಯಾದೃಶವಾದುದೆಂದು ವ್ಯಕ್ತಪಡುವುದು"ಎಂದನು.

ಅರ್ಥಪರ - ನಿವಾಸಾರ್ಹವಲ್ಲದ ಈ ಕಟ್ಟಡವು, ನನಗೆ ಸ್ಮಶಾನದಲ್ಲಿರುವ ಗೋರಿಯಂತೆ ಕಾಣುವುದು. ಇದನ್ನು ನೋಡಿ ನೀನೇನೋ ಬಹಳ ಅಶ್ಚರ್ಯ ಪಡುವೆಯಲ್ಲ!
೮೨
ಪರಂತಪ ವಿಜಯ

ಪರಂತಪ- ನಿನ್ನ ಕಣ್ಣಿಗೆ ಏನೋ ರೋಗವು ಪ್ರಾಪ್ತವಾಗಿರಬಹುದು. ಈ ಪರ್ವತಗಳ, ಈ ಕೋಟೆಯ, ಈ ಕಟ್ಟಡದಲ್ಲಿ ತೋರಿಸಲ್ಪಟ್ಟಿರುವ ಶಿಲ್ಪ ಚಾತುರ್ಯಗಳೂ ಸಹ, ದೇವತೆಗಳ ಮನಸ್ಸನ್ನೂ ಆಕರ್ಷಿಸುವಂತಿರುವುವಲ್ಲ! ಇದು ನಿನಗೆ ಸ್ಮಶಾನದಂತೆ ಕಾಣಬೇಕಾದರೆ, ನಿನ್ನ ವಿವೇಕ ಶೂನ್ಯತೆಯನ್ನು ಎಷ್ಟೆಂದು ಹೇಳೋಣ!
ಅರ್ಥಪರ- "ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಗಾದೆಯು ನಿನ್ನಲ್ಲಿ ಸಾರ್ಥಕವಾಯಿತು. ಬಾ; ಒಳಗೆ ನೋಡೋಣ,

ಇಬ್ಬರೂ ಮಾತನಾಡುತ್ತ ಬಾಗಿಲ ಬಳಿಗೆ ಹೋಗಿ, ತಮ್ಮ ತಮ್ಮ ಕುದುರೆಗಳನ್ನು ಬಾಗಿಲಲ್ಲಿ ಕಟ್ಟಿಹಾಕಿ, ಬಾರುಮಾಡಿದ ಪಿಸ್ತೂಲ್‌ಗಳನ್ನೂ ದೀಪಗಳನ್ನೂ ತರಿಸಿಕೊಂಡು, ಒಳಕ್ಕೆ ಪ್ರವೇಶಿಸಿದರು. ಸ್ವಲ್ಪ ದೂರ ಹೋದಮೇಲೆ, ಅಲ್ಲಿ ಸಾವಿರಾರು ಗಜ ವಿಸ್ತಾರವುಳ್ಳ ಒಂದಾನೊಂದು ಹಜಾರವು ಕಾಣಿಸಿತು. ಈ ಕಟ್ಟಡವು ಕರಿಕಲ್ಲುಗಳಿಂದ ಅತಿ ಮನೋಹರವಾಗಿ ಕಟ್ಟಲ್ಪಟ್ಟಿತ್ತು. ಅದರ ಮುಂಭಾಗದ ಉಭಯ ಪಾರ್ಶ್ವಗಳಲ್ಲಿಯೂ, ಊಳಿಗದವರು ಇರುವುದಕ್ಕೆ ಯೋಗ್ಯಗಳಾದ ಹನ್ನೆರಡು ಹನ್ನೆರಡು ಕೊಟಡಿಗಳಿದ್ದವು. ಅದರ ಒಳಭಾಗಕ್ಕೆ ಪ್ರವೇಶಿಸಿ ನೋಡಲು, ಚಿತ್ರ ವಿಚಿತ್ರ ವಾದ ಪ್ರತಿಮೆಗಳ ಕಂದಿಲ್ ಗುಳೂಫ್ ಮೊದಲಾದುವುಗಳೂ ಕಟ್ಟಲ್ಪಟ್ಟಿದ್ದುವು. ಇನ್ನೂ ಮುಂದೆ ಹೋಗಿ ಹಿತ್ತಲು ಬಾಗಿಲನ್ನು ದಾಟಿ ನೋಡಲು, ಅಲ್ಲಿ ಅತಿ ಮನೋಹರವಾದ ಉಪವನವೊಂದು ಗೋಚರವಾಯಿತು. ಅದರ ನಾಲ್ಕು ಕಡೆಗಳಲ್ಲಿಯೂ ಇವರು ಮೊದಲು ನೊಡಿದ ತೊಟ್ಟಿಗೆ ಸಮಾನಗಳಾದ ನಾಲ್ಕು ತೊಟ್ಟಿಗಳಿದ್ದುವು. ಇವುಗಳು, ಏಳು ಉಪ್ಪರಿಗೆಗಳುಳ್ಳವಾಗಿ ಅತಿ ವಿಚಿತ್ರಗಳಾಗಿದ್ದುವು. ಅದನ್ನೂ ದಾಟಿಹೋಗಲು, ಮತ್ತೊಂದು ಉಪವನವು ಗೋಚರವಾಯಿತು. ಅದನ ಮಧ್ಯದಲ್ಲಿ ದೊಡ್ಡ ಕಟ್ಟಡವೊಂದು ಕಾಣಬಂದಿತು. ಆದರೆ, ಅದು ಎರಡು ಅಂತಸ್ತುಗಳು ಮಾತ್ರ ಉಳ್ಳುದಾಗಿದ್ದಿತು. ಅದನ್ನು ಪರೀಕ್ಷಿಸಿ ನೋಡಲು, ಅದರಲ್ಲಿರುವ ಪ್ರತಿಯೊಂದು ಕೊಠಡಿಯೂ ಕ್ಷುದ್ರಮೃಗಗಳನ್ನೂ ಅಥವಾ ಸೆರೆ ಹಾಕಲ್ಪಟ್ಟವರನ್ನೂ ಇಡುವುದಕ್ಕಾಗಿ ಮಾಡಲ್ಪಟ್ಟಿರುವಂತೆ ಕಾಣಬಂದಿತು. ಅವುಗಳನ್ನೆಲ್ಲಾ ನೋಡುತ್ತ, ಈ ಕಟ್ಟಡಗಳಿಗಾಗಿ ಎಷ್ಟು ಕೋಟಿ ದ್ರವ್ಯಗಳು
೮೩
ಅಧ್ಯಾಯ ೯

ಖರ್ಚಾಗಿರಬಹುದೆಂದು ಅತ್ಯಾಶ್ಚರ್ಯಪಡುತ್ತ, ಎಲ್ಲಾ ಕಟ್ಟಡಗಳನ್ನೂ ಒಂದೊಂದಾಗಿ ಪರೀಕ್ಷಿಸುತ್ತಿದ್ದರು. ಇದೆಲ್ಲವೂ ಪೂರಯಿಸುವುದರೊಳಗಾಗಿ, ರಾತ್ರಿ ಹನ್ನೆರಡು ಗಂಟೆಯ ಹೊತ್ತಾಯಿತು.
ಪರಂತಪ- ಅಯ್ಯಾ! ಅರ್ಥಪರನೆ! ಈ ಕಟ್ಟಡವನ್ನು ಹತ್ತಿ ಇಳಿದು ಬಹಳ ಆಯಾಸವಾಗಿರುವುದು. ಇಲ್ಲೆಲ್ಲಾದರೂ ಸ್ವಲ್ಪ ವಿಶ್ರಮಿಸಿಕೊಳ್ಳೋಣವೇ?
ಅರ್ಥಪರ- ಚೆನ್ನಾಯಿತು! ಚೆನ್ನಾಯಿತು!! ಈ ಪ್ರದೇಶವು ಭೂತ ಪ್ರೇತ ಪಿಶಾಚಾದಿಗಳಿಗೆ ಮುಖ್ಯಾಶ್ರಯವಾದುದು. ಈ ಮಧ್ಯರಾತ್ರಿಯಲ್ಲಿ - ಪಿಶಾಚಗಳು ಸಂಚರಿಸುವ ವೇಳೆಯಲ್ಲಿ - ಇಲ್ಲಿರತಕ್ಕುದು ಸರ್ವಥಾ ತರವಲ್ಲ. ಇದಕ್ಕಿಂತ, ಕಾಡಿನಲ್ಲಾದರೂ ಮಲಗಬಹುದು.
ಪರಂತಪ - ಇದೇನು - ವಿದ್ಯಾವಂತನಾಗಿಯೂ ಲೋಕ ವ್ಯವಹಾರಜ್ಞನಾಗಿಯೂ ಇರುವ ನೀನೇ ಈ ರೀತಿಯಲ್ಲಿ ಹೆದರುವೆ? ಯುಕ್ತಾಯುಕ್ತ ವಿವೇಕವಿಲ್ಲದ ಎಳೆಯ ಮಕ್ಕಳ ರೀತಿಯಲ್ಲಿ, ವಿವೇಕಶೂನ್ಯವಾದ ಮಾತುಗಳನ್ನು ಆಡುವೆಯಲ್ಲಾ!
ಅರ್ಥಪರ-ಹಾಗೋ? ಹಾಗಾದರೆ ನಾನು ಹೇಳುವುದು ನಿಜವೋ ಸುಳ್ಳೋ ಎಂಬುದು, ನಿನಗೆ ಇನ್ನು ಕ್ಷಣಕಾಲದೊಳಗಾಗಿ ವ್ಯಕ್ತವಾಗುವುದು.

ಹೀಗೆ ಮಾತನಾಡುತ್ತಿರುವಷ್ಟರಲ್ಲಿಯೇ, ಶಂಬರನ ಸಹಾಯದಿಂದ ಅರ್ಥಪರನು ಮೊದಲೇ ನಿರ್ಮಿಸಿದ್ದ ಮನುಷ್ಯ ಮುಖವುಳ್ಳುದಾಗಿಯೂ ಸರ್ಪಾಕಾರವಾಗಿಯೂ ಇರುವ ಒಂದಾನೊಂದು ಯಂತ್ರವು, ಅತ್ಯಾರ್ಭಟದೊಡನೆ ಪರಂತಪನ ಅಭಿಮುಖವಾಗಿ ಬಂದಿತು. ಅರ್ಥಪರನು ಭಯವನ್ನು ನಟಿಸುತ ದೂರಕ್ಕೆ ಓಡಿಹೋಗಲು, ಪರಂತಪನು ಬಾರುಮಾಡಿದ ಪಿಸ್ತೂಲನ್ನು ಹಾರಿಸಿದನು. ಕೂಡಲೇ ಶಂಬರನಿಂದ ನಿಯಮಿತರಾದ ಕೆಲ ಭಟರು ಹಿಂದುಗಡೆಯಿಂದ ಬಂದು ಅವನ ಕೈಲಿದ್ದ ಪಿಸ್ತೂಲನ್ನು ಕಿತ್ತುಕೊಂಡು, ಕೈಕಾಲುಗಳಿಗೆ ಸಂಕಲೆಯನ್ನು ಹಾಕಿ, ಶಂಬರನ ಬಳಿಗೆ ಕರೆದುಕೊಂಡು ಹೋದನು. ಆಗ ಪರಂತಪನು ಸ್ವಲ್ಪ ಹೊತ್ತು ದಿಗ್ಭ್ರಾಂತನಾಗಿದ್ದು, ಕೂಡಲೇ ಚೇತರಿಸಿಕೊಂಡು, ಶಂಬರನನ್ನೂ ಅವನ ದೂತ
೮೪
ಪರಂತಪ ವಿಜಯ

ರನ್ನೂ ನೋಡಿ "ಓಹೋ! ಮೋಸಹೋದೆನು! ನನ್ನನ್ನು ಕೊಲ್ಲುವುದಕ್ಕಾಗಿ ಶಂಬರನ ಪ್ರೇರಣೆಯಿಂದ ಅರ್ಥಪರನು ಈ ತಂತ್ರಗಳನ್ನು ನಡೆಸಿರಬಹುದು. ಇವರ ಕೈಗೆ ನಾನು ಸಿಕ್ಕಿಬಿದ್ದಿರುವನು. ಇನ್ನೇನು ಮಾಡುತ್ತಾರೋ ತಿಳಿಯದು." ಎಂದು ನಾನಾವಿಧವಾಗಿ ಚಿಂತಿಸುತ್ತ ಸ್ತಬ್ದನಾದನು.
ಶಂಬರ- ಎಲೆ ದುರಾತ್ಮನೆ! ನನ್ನ ಪ್ರೇಮಪಾತ್ರಳನ್ನು ಉಪಾಯಾಂತರದಿಂದ ಸ್ವಾಧೀನ ಪಡಿಸಿಕೊಂಡೆಯಲ್ಲ! ಈಗ ಏನುಹೇಳುತ್ತೀಯೆ?
ಪರಂತಪ- ಹೇಳುವುದೇನು? ನೀನು ದುರಾತ್ಮನು. ನನ್ನನ್ನು ಸಿಕ್ಕಿಸಿಕೊಂಡೆನೆಂದು ಗರ್ವ ಪಡಬೇಡ. ಈ ನಿನ್ನ ಸಂತೋಷವು ಸ್ಥಿರವಾಗಿರಲಾರದು. ನಿನಗೆ ಈಗ ತೋರುವ ಪ್ರತಿಕಾರಗಳನ್ನೆಲ್ಲ ಮಾಡು, ಅದಕ್ಕೆ ತಕ್ಕ ಫಲವನ್ನು ನೀನು ಕೂಡಲೇ ಅನುಭವಿಸುವೆ. ನಿನ್ನ ಹೆದರಿಕೆಗಳಿಗೆಲ್ಲ ನಾನು ಹೆದರತಕ್ಕವನು. ನನ್ನನ್ನು ಜೀವಸಹಿತವಾಗಿ ಬಿಟ್ಟಲ್ಲಿ, ನಾನೇ ನಿನಗೆ ತಕ್ಕ ಪ್ರತೀಕಾರವನ್ನು ಮಾಡುವೆನು; ಅಥವಾ ನನ್ನ ಪ್ರಾಣವನ್ನು ನೀನು ತೆಗೆದರೂ, ಬೇರೇ ಜನರಿಂದ ನಿನಗೆ ಅಪಾಯ ಸಂಭವಿಸದೆ ಇರಲಾರದು.
ಶಂಬರ- ನೀನು ನನ್ನ ಪ್ರಾಣ ಪ್ರಿಯಳನ್ನು ಅಪಹರಿಸಿದ್ದಕ್ಕೆ ತಕ್ಕ ಪ್ರತೀಕಾರವನ್ನು ಈಗ ನಾನು ನಿನಗೆ ಮಾಡದೆ ಬಿಡತಕ್ಕವನಲ್ಲ. ನಿಮ್ಮ ವಿವಾಹದ ಕರಾರನ್ನು ನಾಶಪಡಿಸುತ್ತೇನೆ; ಆ ಕಾಮಮೋಹಿನಿಯನ್ನು ಕೂಡಲೇ ನನ್ನ ಸ್ವಾಧೀನ ಪಡಿಸಿಕೊಳ್ಳುತ್ತೇನೆ. ಮಾಧವನ ಉಯಿಲು ಈಗ ನನ್ನ ವಶದಲ್ಲಿದೆ. ರತ್ನಾಕರವು ತನ್ನದೆಂಬ ದುರಭಿಮಾನದಿಂದ, ನೀನು ಅತಿಗರ್ವ ಪಡುತ್ತಿದ್ದೆ. ಈಗ ಆ ರತ್ನಾಕರವೂ ಕಾಮಮೋಹಿನಿಯೂ ನನ್ನ ಸ್ವಾಧೀನವಾದಂತೆ ತಿಳಿ. ಇನ್ನು ಹೆಚ್ಚಾಗಿ ಹೇಳಿ ಪ್ರಯೋಜನವೇನು? ನೀನೇ ನನ್ನ ಕೈವಶವಾಗಿರುವೆ. ನಿನ್ನ ಹೆಂಡತಿಗೆ ಗಂಡನಾಗಿಯೂ ನನಗೆ ಸೇರತಕ್ಕ ಮಾಧವನ ಆಸ್ತಿಗೆ ಯಜಮಾನನಾಗಿಯೂ ಇದ್ದುಗೊಂಡು, ಪ್ರತಿಕ್ಷಣದಲ್ಲಿಯೂ ನಿನ್ನನ್ನು ಹಿಂಸಿಸುತ್ತ, ಅದರಿಂದ ನಾನು ಸರ್ವದಾ ಸಂತುಷ್ಟನಾಗಿರಬೇಕೆಂಬ ಅಭಿಲಾಷೆ ನನಗಿರುವುದು.

ಪರಂತಪ- ಎಲಾ ನರಾಧಮನೇ! ನಿನ್ನ ಪೊಳ್ಳು ಹರಟೆಗಳನ್ನು ನಿಲ್ಲಿಸು. ಭಗವತ್ಕೃಪೆಯಿಂದ ನನಗೆ ಬಂಧ ವಿಮೋಚನೆಯಾದರೆ, ನಿನ್ನ
೮೫
ಅಧ್ಯಾಯ ೯

ನಾಲಗೆಯನ್ನು ಸೀಳಿ ಭೂತಗಳಿಗೆ ಔತಣಮಾಡುವೆನು. ನನಗೆ ಬಂಧ ವಿಮೋಚನೆಯಾಗದ ಪಕ್ಷದಲ್ಲಿ, ನಿನ್ನ ದುಷ್ಕೃತ್ಯಗಳೇ ನಿನ್ನನ್ನು ಸುಡುವುವು.
ಶಂಬರ- ಎಲೆ ಕರಾಳ! ಈ ನೀಚನನ್ನು ಸೆರೆಯಲ್ಲಿಟ್ಟು, ನಿತ್ಯವೂ ಇವನಿಗೆ ಎರಡು ಡಜನ್ ಛಡಿಯೇಟುಗಳನ್ನು ಹಾಕು. ಇವನಿಗೆ ಒಂದೇ ಹೊತ್ತು ಆಹಾರವನ್ನು ಹಾಕು. ಇವನಿಗೆ ಹೊಡೆಯುವಾಗ ಮಾತ್ರ, ಜಾಗರೂಕನಾಗಿ ಪ್ರಾಣ ಹೋಗದಂತೆ ನೋಡಿಕೋ; ಇವನ ಆತ್ಮಹತ್ಯಕ್ಕೆ ಅವಕಾಶ ಕೊಡದಂತೆ ಜಾಗರೂಕನಾಗಿರು. ಕರಾಳನು "ಅಪ್ಪಣೆ" ಎಂದು ಕರೆದುಕೊಂಡು ಹೋಗುವಷ್ಟರಲ್ಲಿ, ಅರ್ಥಪರನು ಬಂದನು.
ಶಂಬರ - ಎಲೈ ಅರ್ಥಪರನೆ! ಕಾರಾಗೃಹವನ್ನು ಸಿದ್ಧಪಡಿಸಿರುವೆಯಾ?
ಅರ್ಥಪರ- ದೃಢವಾದ ಸಲಾಕಿಗಳಿಂದ ಅಭೇದ್ಯವಾಗಿರುವಂತೆ ಮಾಡಿಸಿರುವೆನು.
ಶಂಬರ- ಈತನ ಉಡುಪುಗಳನ್ನು ತೆಗೆಸಿ, ಕಾರಾಗೃಹಕ್ಕೆ ಯೋಗ್ಯವಾದ ಉಡುಪುಗಳನ್ನು ತೊಡಿಸು. ಅರ್ಥಪರನು ಅದರಂತೆಯೇ ಅವನಿಗೆ ಮೊದಲಿನ ಉಡುಪುಗಳನ್ನು ತೆಗೆಸಿ, ಬೇರೆ ಉಡುಗೆಗಳನ್ನು ತೊಡಿಸಿದನು.
ಶಂಬರ - ಇವನ ಜೇಬಿನಲ್ಲಿ ವಿವಾಹದ ಕರಾರು ಇರುವುದೇನೋ ನೋಡು.
ಅರ್ಥಪರ- (ನೋಡಿ) ಇಲ್ಲ.
ಶಂಬರ- ಎಲಾ ನೀಚನೇ ! ಆ ಕಾಗದವೇನಾಯಿತು?
ಪರಂತಪ- ನಾನು ಹೇಳತಕ್ಕವನಲ್ಲ.
ಶಂಬರ-ಬಳ್ಳೆಯದು. ನಿನ್ನಿಂದಲೇ ನಾನು ಹೇಳಿಸುತ್ತೇನೆ. (ಬಾರು ಮಾಡಿದ ಪಿಸ್ತೂಲನ್ನು ಅವನಿಗೆ ಇದಿರಾಗಿ ಹಿಡಿದನು.)

ಪರಂತಪ -ಛೀ! ಹೇಡಿಯೇ! ಬಿಡು. ಈ ಗೊಡ್ಡು ಬೆದರಿಕೆಗೆ ನಾನು ಹೆದರತಕ್ಕವನಲ್ಲ. ಈ ಕಾರಾಗೃಹವಾಸಕ್ಕಿಂತ ಮರಣವೇ ಉತ್ತಮವೆಂದು ಭಾವಿಸಿರುವೆನು. ನೀನು ಹೊಡೆದರೂ ಸರಿ, ನಾನು ಹೇಳ ತಕ್ಕವಲ್ಲ.
೮೬
ಪರಂತಪ ವಿಜಯ

ಶಂಬರ - ಹಾಗೋ? ಹಾಗಾದರೆ ನಿನ್ನನ್ನು ಕೊಲ್ಲುವುದಕ್ಕಿಂತ, ಜೀವಚ್ಛವವನ್ನಾಗಿ ಮಾಡಿ ಹಿಂಸಿಸುವುದೇ ನನಗೆ ಆಪ್ಯಾಯನಕರವಾದುದು. ಎಲೈ ಅರ್ಥಪರನೆ! ನೀನು ಈ ಕರಾಳನ ಸಹಾಯದಿಂದ ಇವನನ್ನು ಕಾರಾಗೃಹಕ್ಕೆ ಸೇರಿಸು. (ಎಂದು ಹೇಳಿ, ತಾನು ವಿಶ್ರಮಾರ್ಥವಾಗಿ ಹೊರಟು ಹೋದನು. ಅವರಿಬ್ಬರೂ ಇವನನ್ನು ಕಾರಾಗೃಹಕ್ಕೆ ಸೇರಿಸಿ ಬೀಗ ಹಾಕಿಕೊಂಡು ಬರುವಷ್ಟರಲ್ಲಿ ಪುನಃ ಅಲ್ಲಿಗೆ ಬಂದು) ಎಲಾ! ದುರಾತ್ಮನಾದ ಪರಂತಪನೆ! ಈ ಛಡಿಯೇಟುಗಳೂ ಕಾರಾಗೃಹವಾಸವೂ ನಿನಗೆ ಯೋಗ್ಯ ವಾದುವಲ್ಲ. ಈಗಲೂ ನನ್ನ ಪ್ರಿಯಳನ್ನು ನನ್ನ ವಶಕ್ಕೆ ಒಪ್ಪಿಸಿ ನೀನು ಈ ದೇಶವನ್ನೇ ಬಿಟ್ಟು ಹೊರಟು ಹೋಗುವುದಾಗಿ ಒಪ್ಪಿದರೆ, ನೀನು ನಿರಾತಂಕವಾಗಿ ಜೀವಿಸಿಕೊಂಡಿರಬಹುದು; ಇಲ್ಲದಿದ್ದರೆ ನಿನಗೆ ಬಂಧವಿಮೋ ಚನೆಯಾಗಲಾರದು. ಏನು ಹೇಳುತ್ತೀಯೆ?

ಪರಂತಪ- ನನಗೆ ಬಂಧವಿಮೋಚನೆಯಾದರೆ, ನಿನ್ನನ್ನು ಜೀವ ಸಹಿತವಾಗಿ ಬಿಡುವೆನೆ? ನಿನ್ನ ತಲೆಯನ್ನು ಸಹಸ್ರಭಾಗವಾಗಿ ಛೇದಿಸುವೆನು.

ಶಂಬರ-ಹಾಗಿದ್ದರೆ, ನಿನಗೆ ಈ ಬಂಧನವು ತಪ್ಪತಕ್ಕದ್ದಲ್ಲ. ಎಲೈ ಅರ್ಥಪರನೇ ! ಈತನ ಕೈಕಾಲುಗಳ ಸಂಕಲೆಯನ್ನು ಬಿಡಿಸು, ಕರಾಳನೇ! ಇವನು ಈ ಕಬ್ಬಿಣದ ಸಲಾಕಿಗಳಿಗೆ ಕೈಹಾಕಿದರೆ ಇವನ ಕೈಬೆರಳುಗಳನ್ನು ಕತ್ತರಿಸಿಬಿಡುವಂತೆ ಯಾಯಿಕರಿಗೆಲ್ಲಾ ಹೇಳು. ಎಲಾ ಪರಂತಪ! ಜೋಕೆ! ವಿಧೇಯನಾಗಿರು!! ಅವಿಧೇಯತೆಯನ್ನು ತೋರಿಸಿದರೆ ಕೇಡಿಗೆ ಗುರಿಯಾಗುವೆ!!!

ಪರಂತಪ- ಎಲೆ ನೀಚನೇ! ಸಾಯುವುದಕ್ಕೆ ಅಂಜುವ ಹೇಡಿಗಳಿಗೆ ಈ ಭಯೋತ್ಪಾತವನ್ನುಂಟುಮಾಡು; ಹೋಗು. ಇಷ್ಟು ಮಾತ್ರಕ್ಕೆ ಏಕೆ ಹಿಗ್ಗುವೆ ? ಕ್ಷಿಪ್ರದಲ್ಲಿಯೇ ತಕ್ಕ ಫಲವನ್ನು ಅನುಭವಿಸುವೆ.

ಇದನ್ನು ಕೇಳಿ, ಅರ್ಥಪರ ಶಂಬರರಿಬ್ಬರೂ ನಗುತ್ತ ಹೊರಟು ಹೋದರು. ಪರಂತಪನು ಕಾರಾಗೃಹದಲ್ಲಿ ತನ್ನ ದುರದೃಷ್ಟಕ್ಕೂ ಅರ್ಥಪರನ ಮೋಸಕ್ಕೂ ಚಿಂತಿಸುತ್ತಿದ್ದನು.
  ಮಾರನೆಯ ದಿವಸ, ಪರಂತಪನು ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಿಲ್ಲದಂತೆ ರತ್ನಾಕರದಲ್ಲಿ ಕಾವಲು ಇಟ್ಟು, ಅರ್ಥಪರನಿಗೆ ಮೇಲುವಿಚಾರ

೮೭
ಅಧ್ಯಾಯ ೯

ಣೆಯನ್ನು ವಹಿಸಿ, ಅವನಿಗೆ ಅಲ್ಲಿಯೇ ಸ್ವಲ್ಪ ದ್ರವ್ಯವನ್ನು ಕೊಟ್ಟು, ಮುಂದೆ ವಿಶೇಷವಾಗಿ ಕೊಡುವಂತೆ ವಾಗ್ದಾನಮಾಡಿ, ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ನಡೆಸುವುದಕ್ಕೋಸ್ಕರ ಅಲ್ಲಿಂದ ಹಿಂದಿರುಗಿದನು. ಆ ದಿನ ಮಧ್ಯಾಹ್ನಕ್ಕೆ ಉತ್ತರಕ್ರಿಯೆಗಳು ಪೂರಯಿಸಿದುವು. ಆ ಕಾಲದಲ್ಲಿ ಬಹುಜನಗಳು ಉತ್ತರಕ್ರಿಯೆಗಳಿಗೆ ಹೋಗಿದ್ದರು. ಶಂಬರನು ಮಾತ್ರ, ದೇಹ ಸ್ವಸ್ಥವಿಲ್ಲದಂತೆ ವೇಷವನ್ನು ಹಾಕಿಕೊಂಡು, ಸುಮಿತ್ರನ ಭಂಡಾರದಲ್ಲಿ ಉಯಿಲು ಮೊದಲಾದ ಕಾಗದ ಪತ್ರಗಳನ್ನು ಹುಡುಕುವುದರಲ್ಲಿ ಉದ್ಯುಕ್ತನಾಗಿದ್ದನು. ಕಲಾವತಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇವನಿಗೆ ಇಷ್ಟವಿರಲಿಲ್ಲ. ಆದರೆ, ಸುಮಿತ್ರನು ಕಲಾವತಿಯನ್ನು ಮದುವೆ ಮಾಡಿಕೊಂಡವನಿಗೆ ತನ್ನ ಆಸ್ತಿಯನ್ನು ಕೊಡುವಂತೆ ಉಯಿಲು ಬರೆದಿದ್ದನು.
  ಆ ವುಯಿಲನ್ನು ಅಪಹರಿಸಿ ಸಮಸ್ತ ಆಸ್ತಿಯನ್ನೂ ಸುಮಿತ್ರನು ತನಗೇ ಕೊಟ್ಟಿರುವಂತೆ ಅರ್ಥಪರನಿಂದ ಒಂದು ಹೊಸ ಉಯಿಲನ್ನು ನಿರ್ಮಾಣ ಮಾಡಿಸಿದರೆ ತನಗೆ ಸುಮಿತ್ರನ ಆಸ್ತಿಯೆಲ್ಲಾ ದಕ್ಕುವುದೆಂದು ಯೋಚಿಸಿದನು. ಪರಂತಪನನ್ನು ಕೊಂದು, ಕಾಮಮೋಹಿನಿಯನ್ನು ಮದುವೆ ಮಾಡಿಕೊಂಡು, ಸುಮಿತ್ರನ ಆಸ್ತಿಯನ್ನು ಅಪಹರಿಸಿ, ಕಲಾವತಿಗೆ ಏನೂ ಇಲ್ಲದಂತೆ ಮಾಡಿದರೆ, ತನ್ನ ಇಷ್ಟಾರ್ಥ ಪರಿಪೂರ್ತಿಯಾಗುವುದೆಂದು ಶಂಬರನು ಭಾವಿಸಿದನು. ದುರಾತ್ಮರ ಸಂಕಲ್ಪವು ಒಂದು ವಿಧವಾಗಿದ್ದರೆ ದೈವ ಸಂಕಲ್ಪವು ಮತ್ತೊಂದು ವಿಧವಾಗಿರುವುದೇನಾಶ್ಚರ್ಯ? ಉತ್ತರಕ್ರಿಯೆಗಳಿಗೋಸ್ಕರ ಬಂದಿದ್ದ ಜನಗಳು ಇನ್ನೂ ಸುಮಿತ್ರನ ಮನೆಯಲ್ಲಿರುವಾಗಲೇ, ಶಂಬರನು ಸುಮಿತ್ರನ ಭಂಡಾರವನ್ನು ಪ್ರವೇಶಿಸಿ ಉಯಿಲನ್ನು ಹುಡುಕುತ್ತಿದ್ದ ನಷ್ಟೆ! ಹಾಗೆ ಅವನು ಹುಡುಕುತ್ತಿದ್ದಾಗ, ದೈವಾಧೀನದಿಂದ ಕಲಾವತಿಯ ಅಲ್ಲಿಗೆ ಹೋದಳು ಶಂಬರನು ಅನೇಕ ಕಾಗದ ಪತ್ರಗಳನ್ನು ತೆಗೆದು "ಇದೇ ಸುಮಿತ್ರನ ಆಖೈರ್ ಉಯಿಲು; ದೈವಾಧೀನದಿಂದ ನನ್ನ ಕೈಗೆ ಸಿಕ್ಕಿತು; ಇನ್ನು ನಾನು ಕೃತಕೃತ್ಯನಾದೆನು.” ಎಂಬುದಾಗಿ, ಆನಂದ ಪರವಶತೆಯಿಂದ ಗಟ್ಟಿಯಾಗಿ ಅಂದನು.

ಕಲಾವತಿ- ಏನೆಂದೆ?

ಶಂಬರ- ಯಾರು, ಕಲಾವತಿಯೇ?

೮೮
ಪರಂತಪ ವಿಜಯ

ಕಲಾವತಿ- ಹೌದು, ನಾನು, ಕಲಾವತಿ!!!
  ಇವರಿಬ್ಬರೂ ಭಂಡಾರದ ಮಧ್ಯಭಾಗದಲ್ಲಿದ್ದರು. ಕಲಾವತಿಯು, ಸುಮಿತ್ರನ ಮರಣದ ದೆಸೆಯಿಂದ ಉಂಟಾದ ದುಃಖದಿಂದಲೂ, ಶಂಬರನು ಏಕಾಂತವಾಗಿ ಭಂಡಾರವನ್ನು ಪ್ರವೇಶಿಸಿ ಕಾಗದಪತ್ರಗಳನ್ನು ತೆಗೆದು ಕೊಂಡದ್ದರಿಂದುಂಟಾದ ಆಗ್ರಹದಿಂದಲೂ, ಬಹಳ ಭಯಂಕರಳಾಗಿದ್ದಳು. ಆಕೆಯ ಕಣ್ಣಿನಲ್ಲಿ ಪಿತೃವಿಯೋಗದಿಂದ ಉಂಟಾದ ನೀರೂ, ಶಂಬರನ ದೌರಾತ್ಮ್ಯದಿಂದ ಉಂಟಾದ ಕೋಪವೂ, ಒಂದಕ್ಕಿಂತ ಒಂದು ಅತಿಶಯವಾಗಿದ್ದುವು. ಕೈಯಲ್ಲಿ ಪಿಸ್ತೂಲನ್ನು ಹಿಡಿದುಕೊಂಡು ಇದ್ದಳು. ಶಂಬರನನ್ನು ಯಮಪುರಿಗೆ ಕಳುಹಿಸಬೇಕೆಂದು ಸಂಕಲ್ಪ ಮಾಡಿಕೊಂಡು ಬಂದಿರತಕ್ಕ ಮೃತ್ಯದೇವತೆಯೋಪಾದಿಯಲ್ಲಿ ಕಾಣಬಂದ ಕಲಾವತಿಯನ್ನು ನೋಡಿ ಶಂಬರನು ಭಯಪರವಶನಾದನು.

ಶಂಬರ- ಕಲಾವತಿ! ಇದೇಕೆ ಇಷ್ಟು ಕೋಪವುಳ್ಳವಳಾಗಿರುತ್ತೀಯೆ? ಪಿಸ್ತೂಲನ್ನು ಬೀಸಾಕು. ಸ್ತ್ರೀಯರ ಕೈಗೆ ಪಿಸ್ತೂಲು ಭೂಷಣವಾದುದಲ್ಲವೆಂಬುದು, ನಿನಗೆ ತಿಳಿಯದೆ? ಅದೆಲ್ಲಾದರೂ ಅಕಸ್ಮಾತ್ತಾಗಿ ಹತ್ತಿ ಕೊಂಡು ಯಾರಿಗಾದರೂ ತಗುಲೀತು.

ಕಲಾವತಿ- ಸ್ತ್ರೀಯರ ಕೈಗೆ ಪಿಸ್ತೂಲು ಹೇಗೆ ಅನರ್ಹವಾದುದೊ, ಪುರುಷರ ಕೈಗೆ ಪರಸ್ವಾಪಹರಣವೂ ಹಾಗೆಯೇ ಅನರ್ಹವಾದುದು. ಈ ಕಾಗದ ಪತ್ರಗಳನ್ನು ಕಳುವುಮಾಡಿ, ನಿನ್ನ ಕೈಗಳು ಬಹಳ ದುಷ್ಟವಾಗಿ ಪರಿಣಮಿಸಿವೆ. ಕಾಗದ ಪತ್ರಗಳನ್ನು ಮೊದಲಿದ್ದ ಸ್ಥಾನದಲ್ಲಿ ಇಟ್ಟು ಇಲ್ಲಿಗೆ ಹೇಗೆ ಕಳ್ಳತನದಿಂದ ಬಂದೆಯೋ ಹಾಗೆಯೇ ಹೊರಟು ಹೋದರೆ, ನಿನಗೆ ಇನ್ನೂ ಸ್ವಲ್ಪ ದಿವಸ ಆಯುಸ್ಸಿರುವುದು. ಹಾಗಿಲ್ಲದ ಪಕ್ಷದಲ್ಲಿ, ನಿನ್ನ ದೌರಾತ್ಮ್ಯಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವೆ. ಯಮಪುರಿಗೆ ಮಾರ್ಗವನ್ನು ಹುಡಕಬೇಡ. ನನ್ನ ತಂದೆಯನ್ನು ಕೊಂದುದಲ್ಲದೆ, ನನ್ನ ಮನೆಗೆ ಕಳವು ಮಾಡುವುದಕ್ಕೋಸ್ಕರವೂ ಬಂದಿದ್ದೀಯೆ. ಕಾಗದಪತ್ರಗಳನ್ನು ಕೆಳಗೆ ಹಾಕಿ ಹೋಗುವೆಯೋ?-ಯಮಪುರಿಗೆ ಕಳುಹಿಸಲೋ?

ಶಂಬರ-ಹುಚ್ಚಳ ಹಾಗೆ ಮಾತನಾಡಬೇಡ. ನನ್ನ ಮಾತನ್ನು ಕೇಳು. ಪಿಸ್ತೂಲನ್ನು ಬೀಸಾಕು. ಹಾಗಿಲ್ಲದ ಪಕ್ಷದಲ್ಲಿ ನೀನು ಬಹಳ ಕಷ್ಟಕ್ಕೆ ಗುರಿಯಾಗುವೆ.