ಪರಂತಪ ವಿಜಯ ೨/ ಅಧ್ಯಾಯ ೭
ಸುಮಿತ್ರ-ಎಲೈ ಶಂಬರನೆ ! ನಿನ್ನ ಸಂತಾಪವನ್ನು ನೋಡಿದರೆ ನನಗೆ ಬಹಳ ವ್ಯಸನವಾಗುತ್ತದೆ. ಕಾಮಮೋಹಿನಿಯು ಮೊದಲಿಂದಲೂ ನಿನ್ನಲ್ಲಿ ಅನುರಕ್ತಳಾಗಿರಲಿಲ್ಲ. ಅವಳಲ್ಲಿ ನಿನಗಿದ್ದ ಅಭಿಮಾನವನ್ನು ನೋಡಿ, ನಿಮ್ಮಿಬ್ಬರಿಗೂ ಘಟನೆ ಮಾಡಬೇಕೆಂದು ನಾನು ಬಹಳ ಪ್ರಯತ್ನ ಪಟ್ಟೆನು. ಇದೆಲ್ಲ ನಿಪ್ಪಲವಾಯಿತು.
ಶಂಬರ- ಎಂದಿಗೂ ನಿಪ್ಪಲವಾಗುವುದಿಲ್ಲ. ಪರಂತಪನನ್ನು ನೋಡಿ ಅವಳು ನನ್ನನ್ನು ತಿರಸ್ಕಾರ ಮಾಡಿದ್ದಾಳೆ. ಇವನನ್ನು ಹಿಡಿದು ಕಾರಾಗೃಹದಲ್ಲಾದರೂ ಇಡುತ್ತೇನೆ; ಅಥವಾ ಯಮಪುರಿಗಾದರೂ ಕಳುಹಿಸುತ್ತೇನೆ. ಕೂಡಲೇ ಅವಳು ವಿನೀತಳಾಗುವಳು.
ಸುಮಿತ್ರ- ಇದು ಅಸಾಧ್ಯ. ಪರಂತಪನು ಸಾಮಾನ್ಯನಲ್ಲ. ಇವನ ಬುದ್ದಿಯೂ, ಶಕ್ತಿಯೂ, ಊಹಾಪೋಹಜ್ಞಾನವೂ ಅಸಾಧಾರಣವಾಗಿರುವುವು. ಇವನ ಗುಣಾತಿಶಯಗಳ ಹಾಗೆಯೇ, ಇವನನ್ನು ನೋಡಿದವರೂ, ಇವನ ಸಂಗಡ ಸಂಭಾಷಣೆಯನ್ನು ಮಾಡಿದವರೂ ಸಹ, ಇವನಲ್ಲಿ ಅತ್ಯಂತ ವಿಶ್ವಾಸಪಡುತ್ತಾರೆ. ಇವನನ್ನು ಪ್ರತಿಭಟಿಸಿದರೆ, ನಮ್ಮ ಪರಿಣಾಮ ಹೇಗಾಗುವುದೋ ಕಾಣೆನು.
ಶಂಬರ- ಯಾರಿಗೂ ತಿಳಿಯದಂತೆ ಇವನನ್ನು ಹಿಡಿದು ಕಾರಾಗೃಹದಲ್ಲಿಡುವೆನು. ಮರಣಾವಧಿ ಬಿಡುವುದಿಲ್ಲ.
ಸುಮಿತ್ರ- ನೀನು ಲೋಕ ವ್ಯವಹಾರಜ್ಞನಲ್ಲ. ಪ್ರಪಂಚದಲ್ಲಿ ನಾವು ಒಂದು ವಿಧವಾಗಿ ಯೋಚಿಸುತ್ತಿದ್ದರೆ, ಅದು ನೆರವೇರದಂತೆ ಮಾಡುವುದಕ್ಕೆ ದೈವವು ಯೋಚಿಸುತ್ತಿರುವುದು. ಕೊನೆಗೆ “ಯತೋಧರ್ಮಸ್ತತೋಜಯಃ" ಎಂಬಂತೆ, ಧರ್ಮವಿದ್ದ ಕಡೆ ಜಯವುಂಟಾಗುವುದು ನಾವು ಮಾಡಿದ ಅನೇಕ ಅಧರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುವೆವು, ಈರೀತಿಯನ್ನು ತಿಳಿದೂ, ಪುನಃ ಅಧರ್ಮದಲ್ಲಿ ಪ್ರವರ್ತಿಸಬಹುದೆ?
ಕಾಲಕ್ಕೆ ತಕ್ಕುವುಗಳಾಗಿರುವುವು. ನನಗೆ ತೋರಿದ ರೀತಿಯಲ್ಲಿ ನಾನು ನಡೆಸುತೇನೆ. ಈ ವಿಷಯದಲ್ಲಿ ನಿನ್ನ ಧರ್ಮೋಪದೇಶಗಳನ್ನು ಕೇಳತಕ್ಕವನಲ್ಲ.
ಸುಮಿತ್ರ- ಯಾವ ಕೆಲಸವನ್ನು ಮಾಡಬೇಕಾದರೂ, ಪೂರ್ವಭಾವಿಯಾಗಿಯೇ ಪರಿಣಾಮವನ್ನು ಯೋಚಿಸಬೇಕು. ಹಾಗಿಲ್ಲದಿದ್ದರೆ, ಅನರ್ಥ ವುಂಟಾಗುವುದೇ ನಿಜ. ಅದು ಹಾಗಿರಲಿ ; ಈ ಪರಂತಪನು ಸಾಮಾನ್ಯನಲ್ಲ. ದುಷ್ಟರನ್ನು ಹೇಗಾದರೂ ಅಡಗಿಸುವನು. ಮಾಧವನು, ಈತನಲ್ಲಿ ಪುತ್ರವಾತ್ಸಲ್ಯದಿಂದ ತನ್ನ ಸರ್ವಸ್ವವನ್ನೂ ಈತನಿಗೇ ಕೊಟ್ಟರುವನು. ಅವನು ಬರೆದ ಉಯಿಲಿನಂತೆ, ಈ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಈತನು ಇಲ್ಲಿಗೆ ಬಂದಿರುವನು. ನಿನಗೂ ಕಾಮಮೋಹಿನಿಗೂ ವಿವಾಹವಾದ ಮೇಲೆ ಈ ಸಂಗತಿಯನ್ನು ತಿಳಿಯಿಸಬೇಕೆಂದು ನಿಶ್ಚಯಿಸಿದ್ದೆನು; ಇದಕ್ಕೆ ಅವನೂ ಒಪ್ಪಿದ್ದನು. ಇದಲ್ಲದೆ, ಇನ್ನೊಂದು ರಹಸ್ಯವುಂಟು. ಇವನು ಕೈಪೆಟ್ಟಿಗೆಯನ್ನು ತೆಗೆದಾಗ, ದೊಡ್ಡ ಮೊಹರುಳ್ಳ ಒಂದು ಕಾಗದವು ಕಾಣಬಂದಿತು. ಅದನ್ನು ಮಾತ್ರ ಮರೆಸಿ, ಉಯಿಲು ಮೊದಲಾದುವುಗಳನ್ನೆಲ್ಲ ತೋರಿಸಿದನು. ಆದಿನ ರಾತ್ರಿಯೇ ಈತನು ನಿದ್ದೆ ಮಾಡುವ ಕಾಲದಲ್ಲಿ ಬೇರೆ ಬೀಗದ ಕೈಯನ್ನು ತಂದು ಆ ಕಾಗದವನ್ನು ಪರೀಕ್ಷಿಸಿದೆನು. ಇವನು ದುಷ್ಟನಿಗ್ರಹದ ವಿಷಯದಲ್ಲಿ ಸರಕಾರದಿಂದ ಸರ್ವಾಧಿಕಾರವನ್ನು ಹೊಂದಿರುವನೆಂದು ಆ ಕಾಗದದಿಂದ ಗೊತ್ತಾಯಿತು. ಇಂಥವನ ಮೇಲೆ ಪ್ರತಿಭಟಿಸುವುದು ಉಚಿತವಲ್ಲ.
ಈ ಮಾತನ್ನು ಕೇಳಿದಕೂಡಲೆ, ಶಂಬರನು ಚಿಂತಾಪರವಶನಾಗಿ ಮೂರ್ಛೆಬಿದ್ದು, ಶೈತ್ಯೋಪಚಾರಗಳಿಂದ ಪ್ರಜ್ಞೆಯನ್ನು ಹೊಂದಿ, ಸುಮಿತ್ರ ತನನ್ನು ಕುರಿತು 'ಅಯ್ಯೋ ! ಸರ್ವಪ್ರಕಾರದಿಂದಲೂ ನಾನು ಕೆಟ್ಟೆನು. ಮಾಧವನಿಗೆ ಹಕ್ಕುದಾರನೆಂದೂ, ಅವನ ಐಶ್ವರ್ಯವೆಲ್ಲ ನನ್ನದೆಂದೂ ತಿಳಿದಿದ್ದೆನು. ಅದೆಲ್ಲವೂ ಪರಾಧೀನವಾಯಿತು. ಕಾಮಮೋಹಿನಿಯಾದರೂ ದೊರಕಬಹುದೆಂದಿದ್ದನು. ಇವಳೂ ಪರಾಧೀನಳಾದಳು. ನಾನು ಬಹು ನಿರ್ಭಾಗ್ಯನು. ಇನ್ನು ನಾನು ಜೀವಿಸಿರಬಾರದು. ಈ ಕ್ಷಣವೇ ಪರಂತಪನನ್ನು ಯಾವ ವಿಧದಿಂದಲಾದರೂ ಕೊಂದು, ಮಾಧವನ ಐಶ್ವರ್ಯವನ್ನೂ ಕಾಮಮೋಹಿನಿಯನ್ನೂ ಹೊಂದುವ ಪ್ರಯತ್ನವನ್ನು ಮಾಡುವೆನು ;
ಅಥವಾ, ಈ ಪ್ರಯತ್ನದಲ್ಲಿಯೇ ಪ್ರಾಣವನ್ನಾದರೂ ಬಿಡುವೆನು. ' ಎಂದು ಹೇಳಿದನು.
ಸುಮಿತ್ರ- ಅಯ್ಯಾ! ಪುತ್ರನೇ! ದುಡುಕಬೇಡ; ದುಡುಕಬೇಡ. ಮಾಧವನ ಆಸ್ತಿಯೂ ಹೋಗಲಿ; ಕಾಮಮೋಹಿನಿಯೂ ಹೋಗಲಿ. ನನಗೆ ಗಂಡುಮಕ್ಕಳಿಲ್ಲ. ನನ್ನ ಸ್ವತ್ತಿಗೆಲ್ಲ ನೀನೇ ಬಾಧ್ಯನಾಗಿರು. ನನ್ನ ಸೋದರ ಸೊಸೆಯಾದ ಕಲಾವತಿಗೆ ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿರುತ್ತೇನೆ. ನನ್ನ ಆಸ್ತಿಯನ್ನೆಲ್ಲ ಅವಳ ಹೆಸರಿಗೆ ಉಯಿಲು ಬರೆದಿರುತ್ತೇನೆ. ಅವಳನ್ನು ಪರಿಗ್ರಹಿಸಿ, ನನ್ನ ಆಸ್ತಿಯನ್ನೆಲ್ಲ ಅನುಭವಿಸಿ ಕೊಂಡು ಸುಖವಾಗಿ ಬಾಳು. ಪ್ರಬಲರಲ್ಲಿ ವಿರೋಧವನ್ನು ಬೆಳಸಬೇಡ.
ಶಂಬರ- ನನ್ನ ಭಾಗಕ್ಕೆ, ನನ್ನ ತಂದೆಯ ಸಹೋದರರಾದ ನೀವಿಬ್ಬರೂ ಮಿತ್ರರಾಗಿ ಪರಿಣಮಿಸಲಿಲ್ಲ. ಮಾಧವನು, ತನ್ನ ಅಸ್ತಿಯನ್ನೆಲ್ಲ ಅಜ್ಞಾತ ಕುಲಗೋತ್ರನಾದ ಪರಂತಪನಿಗೆ ಒಪ್ಪಿಸಿದನು. ನೀನು ನಿನ್ನ ಆಸ್ತಿಯನ್ನೆಲ್ಲ ಕಲಾವತಿಗೆ ಕೊಟ್ಟೆ. ನನ್ನ ತಂದೆಯಾದರೂ, ನನಗೆ ಅನ್ನವಸ್ತ್ರಗಳಿಗೂ ಗತಿಯಿಲ್ಲದಂತೆ, ತನ್ನ ಸರ್ವಸ್ವವನ್ನೂ ದ್ಯೂತ ವ್ಯಭಿಚಾರಗಳಲ್ಲಿ ಕಳೆದು, ಅಕಾಲ ಮರಣವನ್ನು ಹೊಂದಿ, ನನ್ನ ಭಾಗಕ್ಕೆ ಶತ್ರುವಾಗಿ ಪರಿಣಮಿಸಿದನು. ನಿನ್ನ ವಂಶದಲ್ಲಿ ಹುಟ್ಟಿದ ನನಗೆ ಈರೀತಿ ನಿರ್ಗತಿಯಾಯಿತು. ಕಲಾವತಿಯಲ್ಲಿ ನನಗೆ ಅನುರಾಗವಿಲ್ಲ. ನಿನ್ನ ಆಸ್ತಿಯೂ ನನಗೆ ಅವಶ್ಯಕವಿಲ್ಲ. ನನ್ನ ಮನಸ್ಸಿಗೆ ತೋರಿದಂತೆ ನಾನು ನಡೆದುಕೊಳ್ಳುವೆನು.
ಶಂಬರ- ನಾನು, ಪರಂತಪನಿಗೆ ಪ್ರತೀಕಾರವನ್ನು ಮಾಡದೆ ಎಂದಿಗೂ ಬಿಡತಕ್ಕವನಲ್ಲ. ನಾಳೆಯೇ ಅವನನ್ನು ಕಲಹಕ್ಕಾಗಿ ಕರೆದು, ಅವನೊಡನೆ ಯುದ್ಧವನ್ನು ಮಾಡುವೆನು. (ಪೂರ್ವ ಕಾಲದಲ್ಲಿ, ವಾದಿ ಪ್ರತಿವಾದಿಗಳಲ್ಲಿ ನ್ಯಾಯವು ಯಾರ ಪಕ್ಷವಾಗಿದೆಯೆಂಬುದನ್ನು ಪರೀಕ್ಷಿಸುವುದಕ್ಕಾಗಿ, ಇಬ್ಬರು ಪಂಚಾಯಿತರ ಮುಂದೆ ದ್ವಂದ್ವ ಯುದ್ಧವನ್ನು ಮಾಡಿ ಅದರಲ್ಲಿ ಗೆದ್ದವನ ಪಕ್ಷವು ನ್ಯಾಯವೆಂದೂ ಸೋತವನದು ಅಧರ್ಮವೆಂದೂ ನಿರ್ಣಸುತ್ತಿದ್ದರು)
ಸುಮಿತ್ರ- ಇದು ಅಪಾಯಕರವಾದುದು. ನೀನು ಬಲಿಷ್ಟನಾದರೂ ಅವನನ್ನು ಸೋಲಿಸಲಾರೆ. ಹಾಗೂ ಆಗಲಿ; ನೀನು ಯಾವ ರೀತಿಯಲ್ಲಿ ಅವನನ್ನು ಸೋಲಿಸಬೇಕೆಂದು ಯೋಚಿಸಿರುತ್ತೀಯೆ?
ಶಂಬರ-ಪಿಸ್ತೂಲಿನಿಂದ ಸುಟ್ಟು ಅವನನ್ನು ಕೊಂದುಬಿಡುವೆನು.
ಸುಮಿತ್ರ- ಪಿಸ್ತೂಲನ್ನು ಉಪಯೋಗಿಸುವುದರಲ್ಲಿ ಅವನಿಗಿಂತ ನೀನು ಸಮರ್ಥನೋ ?
ಶಂಬರ - ಅವನು ಮಾತ್ರವೇ ಅಲ್ಲ. ಈ ವಿಷಯದಲ್ಲಿ ಯಾರೂ ನನಗೆ ಎದುರಿಲ್ಲ.
ಸುಮಿತ್ರ- ಪರಂತಪನು ಸರಕಾರದಿಂದ ಹೊಂದಿರುವ ಸನ್ನದಿನ ವಿಷಯವನ್ನು ನಾನು ಮೊದಲೇ ತಿಳಿಸಿರುತ್ತೇನಷ್ಟೆ ! ನಾನಾವಿಧವಾದ ಆಯುಧಗಳ ಉಪಯೋಗದಲ್ಲಿ ಅದ್ವಿತೀಯವಾದ ಪಾಂಡಿತ್ಯವಿದ್ದ ಹೊರತು, ಇಂಥ ಅಧಿಕಾರವನ್ನು ಎಂದಿಗೂ ಕೊಡಲಾರರು.
ಶಂಬರ- ಅವನು ಒಳ್ಳೆಯ ಪಂಡಿತನಾಗಿಯೇ ಇರಬಹುದು; ಆದರೆ ನನ್ನ ಸಾಮರ್ಥ್ಯವೂ ಸರಕಾರದವರಿಗೆ ಚೆನ್ನಾಗಿ ತಿಳಿದಿರುವುದು. ಅವನಿಗಿಂತಲೂ ಹೆಚ್ಚಾದ ಅಧಿಕಾರವನ್ನು ಸರಕಾರದವರು ಕಾಲಕ್ರಮೇಣ ನನಗೂ ಕೊಡಬಹುದು.
ಸುಮಿತ್ರ- ಎಷ್ಟು ಹೇಳಿದರೇನು? ಪರಂತಪನ ಕಡೆಗೆ ನ್ಯಾಯವಿರುವುದು. ಉಯಿಲಿನ ಪ್ರಕಾರ ಅವನು ಮಾಧವನ ಆಸ್ತಿಯನ್ನು ಅಪೇಕ್ಷಿಸುವನು. ಕಾಮಮೋಹಿನಿಗೂ ಈತನಲ್ಲಿ ಅನುರಾಗ ವಿಶೇಷ ವುಂಟಾದುದರಿಂದಲೇ, ಅವಳು ಆತನಿಗೆ ಸ್ವಾಧೀನಳಾಗಿರುವಳು. ಅವಳಿಗೆ ನಿನ್ನಲ್ಲಿ