ಪರಂತಪ ವಿಜಯ ೨/ ಅಧ್ಯಾಯ ೯

ವಿಕಿಸೋರ್ಸ್ ಇಂದ
Jump to navigation Jump to search
೭೧
ಅಧ್ಯಾಯ ೯


ಭೋಜನಾಲಯದಲ್ಲಿ ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತಿದ್ದು, ವಿಶ್ರಮಾರ್ಥವಾಗಿ ಎಲ್ಲರೂ ಅವರವರ ವಾಸಸ್ಥಾನಗಳಿಗೆ ಹೊರಟುಹೋದರು.

ಅಧ್ಯಾಯ ೯.  ಮಾರನೆಯ ದಿವಸ ಅರುಣೋದಯ ಕಾಲಕ್ಕೆ ಎದ್ದು ಪರಂತಪನು ಸುಮಿತ್ರನ ಉಪವನಕ್ಕೆ ಏಕಾಂತವಾಗಿ ಪ್ರವೇಶಿಸಿ ತಾನು ಅಲ್ಲಿ ಹೂತಿಟ್ಟಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವಾಗ, ಕಲಾವತಿಯು ಎದುರಿಗೆ ಬಂದಳು.

ಕಲಾವತಿ-ಎಲೈ ಪರಂತಪನೇ! ಇದೇನು - ಇಷ್ಟು ಹೊತ್ತಿಗೆ ಮುಂಚೆ ಇಲ್ಲಿಗೆ ಬಂದಿರುವೆ? ರಾತ್ರಿ ಮನೆಯಲ್ಲಿದ್ದೆಯಾ? ನಿನ್ನನ್ನು ನಾನು ನಿನ್ನೆ ಕಾಣಲೇ ಇಲ್ಲ! ಇದೇನು ಪೆಟ್ಟಿಗೆ?

ಪರಂತಪ- ಇಲ್ಲ. ನೆನ್ನೆ ನಾನು ಇರಲಿಲ್ಲ. ಇದು ನನ್ನ ಕಾಗದ ಪತ್ರಗಳ ಪೆಟ್ಟಿಗೆ, ಇದನ್ನು ನನ್ನ ಮಿತ್ರನೊಬ್ಬನ ಬಳಿಗೆ ತೆಗೆದುಕೊಂಡು ಹೋಗ ಬೇಕಾಗಿರುವುದು.

ಕಲಾವತಿ- ನೆನ್ನೆ ನಿನಗೂ ನನ್ನ ಮಾವನಿಗೂ ಮನಸ್ತಾಪ ನಡೆದು ಅದರ ಮೇಲೆ ನೀನು ಮನೆಯನ್ನು ಬಿಟ್ಟು ಹೊರಟುಹೋದಂತೆ ಕೇಳಿದೆನು. ಇದು ನಿಜವೆ? ಇದಕ್ಕೆ ಕಾರಣವೇನು?

ಪರಂತಪ- ಇನ್ನೇನೂ ಇಲ್ಲ. ಕಾಮಮೋಹಿನಿಯನ್ನು ದುರ್ಬೊಧನೆಯಿಂದ ನನ್ನ ಸ್ವಾಧೀನ ಮಾಡಿಕೊಂಡೆನೆಂದು, ನಿಮ್ಮ ಮಾವನು ನನ್ನ ಮೇಲೆ ದೋಷಾರೋಪಣೆಯನ್ನು ಮಾಡಿದನು. ಇದು ನನಗೆ ವಿಷಾದವನ್ನುಂಟು ಮಾಡಿದ್ದರಿಂದ, ನಾನು ಬೇರೆ ಬಿಡಾರಕ್ಕೆ ಹೊರಟುಹೋದೆನು.

ಕಲಾವತಿ- ಕಾಮಮೋಹಿನಿಯಲ್ಲಿರುವಳು? - ಬಲ್ಲೆಯಾ?

ಪರಂತಪ- ಬಲ್ಲೆನು; ಆದರೆ ಅದು ಈಗ ಹೇಳ ತಕ್ಕುದಲ್ಲ.

೭೨
ಪರಂತಪ ವಿಜಯ

ಕಲಾವತಿ- ಅದನ್ನು ತಿಳಿದುಕೊಳ್ಳಬೇಕೆಂಬ ಅಭಿಪ್ರಾಯವು ನನಗಿಲ್ಲ. ಅನುರೂಪನಾದ ಪತಿಯನ್ನು ಸೇರಿ ಅವಳು ಇಲ್ಲಿಂದ ಹೊರಟು ಹೋಗಿ ಸುಖವಾಗಿ ಬಾಳಲಿ ಎಂಬುದೇ ನನ್ನ ಮುಖ್ಯಾಶಯವು.


ಪರಂತಪ- ಹೀಗೆ ನೀನು ಬಯಸುವುದಕ್ಕೆ ಕಾರಣವೇನು?


ಕಲಾವತಿ- ಬೇರೆ ಯಾವ ಕಾರಣವೇಕೆ? ಅವಳಿಗೆ ಶಂಬರನಲ್ಲಿ ಸ್ವಲ್ಪವೂ ಅನುರಾಗವಿಲ್ಲ; ಅವಳ ತಂದೆಯು ಅವಳನ್ನು ಶಂಬರನಿಗೇ ಕೊಟ್ಟು ವಿವಾಹ ಮಾಡಬೇಕೆಂದಿದ್ದಾನೆ. ಅದು ಅವಳಿಗೆ ಸರ್ವಾತ್ಮನಾ

ಇಷ್ಟವಿಲ್ಲ.

ಪರಂತಪ- ಹಾಗಾದರೆ, ನಿನಗೆ ಶಂಬರನನ್ನು ವರಿಸುವುದರಲ್ಲಿ ಇಷ್ಟ ವುಂಟೋ?

ಕಲಾವತಿ- ನನಗೇನೋ ಇಷ್ಟವುಂಟು. ನಮ್ಮ ಮಾವನೂ ಅವನನ್ನು ಬಹಳವಾಗಿ ಶ್ಲಾಘಿಸಿರುವನು.

ಪರಂತಪ- ಹಾಗಾದರೆ ನಿಶ್ಚಿಂತಳಾಗಿರು. ಕಾಮಮೋಹಿನಿಯು ಶಂಬರನನ್ನು ಎಂದಿಗೂ ಒಪ್ಪತಕ್ಕವಳಲ್ಲ. ನೀನು ಸರ್ವಪ್ರಯತ್ನದಿಂದಲೂ ಅವನಿಗೆ ಅನುರಾಗವುಂಟಾಗುವಂತೆ ಮಾಡಿಕೋ. ಕಾಮಮೋಹಿನಿಯು ಎಂದಿಗೂ ನಿನ್ನ ಪ್ರಯತ್ನವನ್ನು ಮುರಿಯತಕ್ಕವಳಲ್ಲ; ಇನ್ನೂ ಬೇಕಾದ ಸಹಾಯವನ್ನು ಮಾಡಿಕೊಡುವಳು.

ಕಲಾವತಿ - ಹಾಗಿದ್ದರೆ, ಆ ವಿಷಯದಲ್ಲಿ ನಾನು ಪ್ರಯತ್ನಿಸುವೆನು. ನಿಮ್ಮಿಬ್ಬರ ಸಹಾಯದಿಂದಲೇ ಈ ಕೆಲಸವು ನಡೆಯಬೇಕಾಗಿರುವುದು. ನೀನೇ ಕಾಮಮೋಹಿನಿಗೆ ಅನುರೂಪನಾದ ವರನು. ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಕೈಲಾದಮಟ್ಟಿಗೂ ನಾನು ಮಾಡುವೆನು, ನನ್ನ ಮಾವನಾದರೋ ಬೆಳಗ್ಗೆ ಏಳು ಘಂಟೆಯ ಮೇಲೆ ಏಳುವನು. ನಾನು ಐದು ಘಂಟೆಗೆ ಮೊದಲೇ ನಿತ್ಯವೂ ಎದ್ದು ವ್ಯಾಯಾಮವ್ಯಾಜದಿಂದ ಇಲ್ಲಿಗೆ ಬರುವೆನು. ಈ ಯೆರಡು ವಿವಾಹಗಳು ನಡೆಯುವವರೆಗೂ, ನನ್ನಿಂದಾಗ ಬೇಕಾದ ಸಹಾಯ ಯಾವುದಿದ್ದರೂ ನಡೆಸಿಕೊಡುವೆನು. ನಿತ್ಯವೂ ಈ ಹೊತ್ತಿಗೆ ಸರಿಯಾಗಿ ನೀನು ಬಂದರೆ ಇಲ್ಲಿ ಸಿಕ್ಕುವೆನು.

ಪರಂತಪ-ನೀನು ನಮ್ಮಲ್ಲಿಟ್ಟಿರುವ ಪ್ರೀತಿಗಾಗಿ ನಾವು ಬಹಳ ಕೃತಜ್ಞರಾಗಿರುತ್ತೇವೆ. ಆದರೆ, ನಿನ್ನ ನಿಸರ್ಗವಾದ ಈ ಪ್ರೀತಿಯೇ ನಮ್ಮ

೭೩
ಅಧ್ಯಾಯ ೯

ಲ್ಲಿರುವ ರಹಸ್ಯಗಳನ್ನೆ ಉದ್ಘಾಟಿಸುವಂತೆ ಪ್ರೇರಿಸುವುದು. ನಿಜಸ್ಥಿತಿಯನ್ನು ಹೇಳುವೆನು. ನನಗೂ ಕಾಮಮೋಹಿನಿಗೂ ವಿವಾಹವು ನೆರವೇರಿ ಹೋಯಿತು. ನಾವಿಬ್ಬರೂ ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಮಾಡುವುದರಲ್ಲಿ ಸಿದ್ಧರಾಗಿರುತ್ತೇವೆ. ಆದರೆ, ನಿನಗೆ ಯಾವ ಕ್ಲೇಶಗಳು ಬಂದಾಗ್ಗೂ ಧೈರ್ಯಗೆಡದಿರು. ಹೋಗು; ಪುನಃ ನಾನು ನಿನ್ನನ್ನು ಕಾಣುವೆನು. (ಎಂದು ಹೇಳಿ, ಪರಂತಪನು ಹೊರಟುಹೋದನು.)


  

ಮಾವನ ಮರಣವಾರ್ತೆಯನ್ನು ಕೇಳಿ ಇವಳು ಸಂಕಟ ಪಡುವಳೆಂದು ತಿಳಿದು, ಅವಳಿಗೆ ಧೈರ್ಯವನ್ನು ಹೇಳಿ, ಪರಂತಪನು ಭೋಜನ ಶಾಲೆಗೆ ಹೋದನು. ಅಷ್ಟರಲ್ಲಿಯೇ ಅಲ್ಲಿಗೆ ಅರ್ಥಪರನೂ ಬಂದನು.

ಪರಂತಪ- ಓಹೋ! ನಿನ್ನನ್ನೇ ಇದಿರು ನೋಡುತ್ತಿದ್ದೆನು. ಯಾವಾಗ ಬಂದೆ?

ಅರ್ಥಪರ- ಈಗ ತಾನೆ ಎಂದೆನು. ಅದೇನು ಅಷ್ಟು ಆತುರದಿಂದ ನನ್ನನ್ನು ನಿರೀಕ್ಷಿಸಬೇಕಾದ ಅವಶ್ಯಕ?

ಪರಂತಪ- ಅ೦ತಹುದೇನೂ ಇಲ್ಲ. ನೀನು ಬಹಳ ದಿವಸ ಇಲ್ಲಿ ನಿಲ್ಲಬೇಕಾದ ಅವಶ್ಯಕವೂ ಇಲ್ಲ. ಮಾಧವನು ಬರೆದಿಟ್ಟಿರುವ ಉಯಿಲನ್ನು ರಿಜಿಸ್ಟರು ಮಾಡಿಸಿಕೊಟ್ಟು ನೀನು ಹೊರಟುಹೋಗಬಹುದು.

ಅರ್ಥಪರ- ಈ ಪಟ್ಟಣದ ರಾಮಣೀಯಕವನ್ನು ನೋಡಿದರೆ, ಇದನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವುದಿಲ್ಲ. ನೀನು ಕೊಡತಕ್ಕ ದ್ರವ್ಯದಿಂದ ಜೀವನ ಮಾಡಿಕೊಂಡು ಇಲ್ಲಿಯೇ ಇರಬೇಕೆಂದು ನಿಷ್ಕರ್ಷೆ ಮಾಡಿಕೊಂಡಿದ್ದೇನೆ.

ಪರಂತಪ- ಬಹಳ ಸಂತೋಷ. ಈ ವುಯಿಲನ್ನು ರಿಜಿಸ್ಟರ್ ಮಾಡಿಸಿ ಕೊಂಡು ಬರೋಣ; ಬಾ, ಆ ಕೆಲಸವನ್ನು ಮುಗಿಯಿಸಿಕೊಂಡು ನಾನು ರತ್ನಾಕರಕ್ಕೆ ಹೋಗಿ ಅದನ್ನು ನೋಡಿಕೊಂಡು ಬರಬೇಕೆಂದಿದ್ದೇನೆ.

ಅರ್ಥಪರ - ನೀನೊಬ್ಬನೇ ಹೊರಡುವೆಯಾ ?

ಪರಂತಪ- ನೀನೂ ಬರುವುದಾದರೆ ನನಗೆ ಬಹಳ ಸಂತೋಷ.

ಅರ್ಥಪರ- ಅದರ ವಿಷಯವಾಗಿ ನಾನು ಚಿತ್ರ ವಿಚಿತ್ರವಾದ ಕಥೆಗಳನ್ನು ಕೇಳಿರುವೆನು. ಅದನ್ನು ಪ್ರತ್ಯಕ್ಷವಾಗಿ ನೋಡಿಕೊಂಡು ಬರಬೇಕೆಂಬ ಕುತೂಹಲವು ನನಗೆ ಬಹಳವಾಗಿರುತ್ತದೆ.

೭೪
ಪರಂತಪ ವಿಜಯ

ಪರಂತಪ-ಸರಿ, ಹಾಗಾದರೆ ನಾವಿಬ್ಬರೂ ಹೋಗೋಣ.
  ಹೀಗೆಂದು ನಿಷ್ಕರ್ಷಿಸಿಕೊಂಡು, ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ರಿಜಿಸ್ಟ್ರಾರ್ ಆಫೀಸಿಗೆ ಹೊರಟರು. ಇವರು ಹೋಗಿ ನೋಡಿದಾಗ, ಅಲ್ಲಿನ ನೌಕರರು ಯಾರೂ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಅರ್ಥಪರನ ಹೇಳಿಕೆಯಮೇಲೆ, ಆ ವುಯಿಲನ್ನು ಅಲ್ಲಿನ ಅಧಿಕಾರಿಯ ವಶಕ್ಕೆ ಕೊಟ್ಟು, ಅದರ ಪೂರ್ವಾಪರಗಳನ್ನು ತಿಳಿಸಿ, ಪುನಃ ಬರುವುದಾಗಿ ಹೇಳಿ ಇಬ್ಬರೂ ಹೊರಟು ಹೋದರು. ಅಷ್ಟರೊಳಗಾಗಿ ಸುಮಿತ್ರನ ಶವವು ಪಟ್ಟಣಕ್ಕೆ ತರಲ್ಪಟ್ಟಿತು. ಪರಂತಪ ಶಂಬರರಿಗೆ ನಡೆದ ಯುದ್ದದ ವೃತ್ತಾಂತವು, ಎಲ್ಲೆಲ್ಲಿಯ ಪ್ರಕಟವಾಯಿತು. ಸುಮಿತ್ರನ ಕೊಲೆಗೆ ಪರಂತಪನೇ ಕಾರಣಭೂತನೆಂದು ಜನಗಳೆಲ್ಲ ಅಲ್ಲಲ್ಲಿ ಅಡಿಕೊಳ್ಳುತಿದ್ದರು. ಇದನ್ನು ಕೇಳಿ, ಸಮರಸಿಂಹನೇ ಮೊದಲಾದ ಪಂಚಾಯಿತರೆಲ್ಲರೂ ನಿಜಸ್ಥಿತಿಯನ್ನು ಪ್ರಕಟ ಪಡಿಸಿದರು. ಆಗ ಜನರಿಗೆಲ್ಲ ಶಂಬರನ ವಿಷಯದಲ್ಲಿ ದೋಷವು ಪ್ರಬಲವಾಗಿ ಕಂಡುಬಂದಿತು. ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ಮುಗಿಸಿಕೊಂಡು ಆ ಪಟ್ಟಣದಲ್ಲಿದ್ದ ಒಂದಾನೊಂದು ವಿಹಾರ ಶಾಲೆಗೆ ಹೋಗಲು, ಅಷ್ಟರೊಳಗಾಗಿ ಅಲ್ಲಿಗೆ ಅರ್ಥಪರನೂ ಬಂದನು. ಇಬ್ಬರಿಗೂ ಸ್ವಾಗತ ಸಂಭಾಷಣೆಗಳಲ್ಲ ನಡೆದುವು.
ಶಂಬರ- ಓಹೋ! ಮಿತ್ರನೆ! ಸಕಾಲಕ್ಕೆ ನೀನು ಬಂದೆ.
ಅರ್ಥಪರ- ನಾನು ಎಂದಿಗೂ ಕ್ಲುಪ್ತಕಾಲವನ್ನು ಮೀರತಕ್ಕವನಲ್ಲ. ಇದೇನು - ಕೈಗೆ ಬಟ್ಟೆಯನ್ನು ಸುತ್ತಿಕೊಂಡಿರುವೆ?
ಶಂಬರ- ಪಾಪಿಯಾದ ಪರಂತಪನೊಡನೆ ನಾನು ಯುದ್ಧವನ್ನು ಮಾಡಬೇಕೆಂದಿದ್ದ ಸಂಗತಿಯನ್ನು ನಿನಗೆ ಮೊದಲೇ ತಿಳಿಸಿದ್ದೆನಷ್ಟೆ! ಇದೇ ಅದರ ಫಲ!
ಅರ್ಥಪರ- ಓಹೋ! ಇದಕ್ಕಾಗಿ ನಾನು ಬಹಳ ವಿಷಾದಿಸುತ್ತೇನೆ. ನಿಮ್ಮ ಕಲಹದಲ್ಲಿ ಅವನಿಗೆ ಯಾವ ಅಪಾಯವೂ ಸಂಭವಿಸಿದಂತೆ ಕಾಣುವುದಿಲ್ಲವಲ್ಲ !

ಶಂಬರ-ಅವನಿಗೆ ದೈವವು ಅನುಕೂಲವಾಗಿರುವುದು. ನನಗೆ ಏಟು ಬಿದ್ದುದಲ್ಲದೆ, ಆ ಪರಂತಪನಿಗೋಸ್ಕರ ಪ್ರಯೋಗಿಸಿದ ಗುಂಡು ಸುಮಿತ್ರನಿಗೆ ತಗುಲಿ ಆತನೂ ಮೃತನಾದನು.
೭೫
ಅಧ್ಯಾಯ ೯

ಅರ್ಥಪರ- ಆತನ ಮರಣವು ನಿನಗೆ ಅಭಿಮತವಾಗಿಯೇ ಇರುವುದಷ್ಟೆ! ಇನ್ನು ಅವನ ಆಸ್ತಿಯೆಲ್ಲ ನಿನಗೇ ಸೇರುವುದು. ಇದಕ್ಕಾಗಿ ನಾನು ಸಂತೋಷಿಸುವೆನು.
ಶಂಬರ- ಅದೇನೋ ನಿಜವೆ ! ಆದರೆ, ಸುಮಿತ್ರನು, ತನ್ನ ಆಸ್ತಿಯನ್ನೆಲ್ಲ ಕಲಾವತಿಯ ಹೆಸರಿಗೆ ಉಯಿಲು ಬರೆದಿರುವುದಾಗಿಯೂ, ಅವಳನ್ನು ವಿವಾಹವಾದರೆ ಅವನ ಆಸ್ತಿಯನ್ನು ಅನುಭವಿಸಬಹುದೆಂಬುದಾಗಿಯ ನನಗೆ ಹೇಳಿದ್ದನು.
ಅರ್ಥಪರ-ಹಾಗೋ! ಹಾಗಾದರೆ ಈ ವಿಷಯವನ್ನು ಯಾರಿಗೂ ಹೇಳಬೇಡ. ಆ ವುಯಿಲನ್ನು ಉಪಾಯಾಂತರದಿಂದ ತೆಗೆದು ಸುಟ್ಟುಬಿಡು. ಅವನ ಆಸ್ತಿಯೆಲ್ಲ ನಿನ್ನ ವಶವಾಗುವುದು.
ಶಂಬರ- ಹಾಗಾದರೆ, ಈ ಕೆಲಸವು ಮೊದಲು ಮಾಡತಕ್ಕುದಾಗಿದೆ. ಅದು ಹಾಗಿರಲಿ; ಇನ್ನೇನು ಸಮಾಚಾರ?
ಅರ್ಥಪರ - ಪರಂತಪನಿಗೂ ಕಾಮಮೋಹಿನಿ ಉಪವನದಲ್ಲಿ ನಡೆದ ಸಂಭಾಷಣೆಯನ್ನು ನಿನಗೆ ಮೊದಲೇ ತಿಳಿಸಿರುವೆನಷ್ಟೆ! ಈಚೆಗೆ ಆಕೆಯು ಸತ್ಯಶರ್ಮನ ಮನೆಯಲ್ಲಿರುವುದಾಗಿ ಕೇಳಿ, ವೇಷಾಂತರದಿಂದ ಹೋಗಿ, ಅವನ ಮನೆಯನ್ನು ಪತ್ತೆ ಮಾಡಿ, ಅಲ್ಲಿಯೇ ತಿರುಗಾಡುತ್ತಿದ್ದನು. ಅಷ್ಟರಲ್ಲಿ ಪರಂತಪನು ಬಂದು ಆ ಮನೆಯನ್ನು ಪ್ರವೇಶಿಸಿದನು. ಕೂಡಲೇ ಸತ್ಯಶರ್ಮ ಮೊದಲಾದವರು ಈತನನ್ನು ಕರೆದುಕೊಂಡು ಹೋಗಿ ಕೂರಿಸಿ ಕೊಂಡು, ಅನೇಕ ವಿಷಯಗಳನ್ನು ಕುರಿತು ಮಾತನಾಡುತಿದ್ದರು.
ಶಂಬರ- ಶಹಬಾಸ್! ಮಿತ್ರನೇ!! ಶಹಬಾಸ್ !!! ನೀನು ಬಹಳ ಚತುರನು. ಇದಕ್ಕಾಗಿ ನಿನಗೆ ನಾನು ಎಷ್ಟು ಬಹುಮಾನ ಮಾಡಿದಾಗ್ಗೂ ಕಡಮೆಯಾಗಿರುವುದು. ಇದಕ್ಕೆ ತಕ್ಕಂತೆ ನಾನು ಕೈಲಾದ ಮಟ್ಟಿಗೂ ಕೃತಜ್ಞತೆಯನ್ನು ತೋರಿಸುವೆನು. ಅವರ ಸಂಭಾಷಣೆಯಲ್ಲಿ ನೀನು ಗ್ರಹಿಸಿದ ಸಾರಾಂಶಗಳನ್ನು ಹೇಳು.

ಅರ್ಥಪರ- ಇನ್ನೇನೂ ಇಲ್ಲ ; ಸತ್ಯಶರ್ಮನು ರತ್ನಾಕರದ ಮಾಹಾತ್ಮ್ಯವನ್ನೂ ಅಲ್ಲಿನ ಭಯಾವಹವಾದ ಸಂಗತಿಗಳನ್ನೂ ವಿಸ್ತಾರವಾಗಿ ಹೇಳುತ್ತಿದ್ದನು.
೭೬
ಪರಂತಪ ವಿಜಯ

ಶಂಬರ- ಅದಕ್ಕೆ ಪರಂತಪನೇನು ಹೇಳಿದನು ?
ಅರ್ಥಪರ - ಅದನ್ನು ವಿಸ್ಮಯದಿಂದ ಕೇಳುತ್ತ ಇದ್ದರೂ-ಭೀತಿಪಡದೆ, ತಾನು ಕೆಲವು ದಿವಸಗಳವರೆಗೂ ರತ್ನಾಕರದಲ್ಲೇ ವಾಸಮಾಡುತ್ತಿರುವುದಾಗಿ ಹೇಳಿದನು.
ಶಂಬರ- ಅದಾಗತಕ್ಕುದಲ್ಲ. ರತ್ನಾಕರವು ಇವನ ವಶವಾಗದಂತೆ ಮಾಡತಕ್ಕ ಕೆಲಸವು ನನ್ನದಾಗಿರಲಿ. ಇನ್ನೇನು ವಿಶೇಷ?
ಅರ್ಥಪರ- ಆ ದಿವಸವೇ ಕಾಮಮೋಹಿನಿಗೂ ಪರಂತಪನಿಗೂ ವಿಧಿ ಪೂರ್ವಕವಾಗಿ ವಿವಾಹವು ನಡೆಯಿತು.
ಈ ಮಾತನ್ನು ಕೇಳಿದಕೂಡಲೆ, ಶಂಬರನು ಮೂರ್ಛಿತನಾಗಿ, ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು, ಮಿತಿಮೀರಿದ ಕೋಪಾವೇಶದೊಡನೆ, ಅರ್ಥಪರನನ್ನು ನೋಡಿ “ಎಲೈ ಕಪಟಿಯೆ! ನೀನು ನನಗೆ ಬಹಳ ಮೋಸವನ್ನು ಮಾಡಿದೆ. ಇವರ ವಿವಾಹ ಪ್ರಾರಂಭ ಕಾಲದಲ್ಲಿ ನೀನು ನನಗೇಕೆ ತಿಳಿಸದೆ ಹೋದೆ? ನಾನು ಆ ಕ್ಷಣದಲ್ಲಿ ವಿವಾಹವನ್ನು ನಿಲ್ಲಿಸುತಿದ್ದೆನು ಈಗ ನನ್ನ ಪ್ರಯತ್ನಗಳೆಲ್ಲವೂ ನಿಪ್ಪಲವಾದುವಲ್ಲಾ! ಅವರಿಬ್ಬರಿಗೂ ವಿವಾಹವಾದುದು ನಿಜವೇ? ನೀನು ನೋಡಿದೆಯಾ? ಎಂದನು.
ಅರ್ಥಪರ- ಅಯ್ಯಾ! ಕೋಪಿಸಬೇಡ; ಕೇಳು. ವಿವಾಹ ಪ್ರಾರಂಭದಲ್ಲಿ ನಾನು ನಿನಗೆ ತಿಳಿಸಬೇಕೆಂದು ಬಂದೆನು. ಆಗ ನೀನು ಮನೆಯಲ್ಲಿರಲಿಲ್ಲ. ಒಂದು ಚೀಟಿಯನ್ನು ಬರೆದು ನಿನ್ನ ಮೇಜಿನ ಮೇಲೆ ಇಟ್ಟು, ಮುಂದಿನ ಸಂಗತಿಗಳನ್ನು ಪರೀಕ್ಷಿಸುವುದಕ್ಕಾಗಿ ನಾನು ಹೊರಟುಹೋದೆನು. ಇವರಿಬ್ಬರ ವಿವಾಹವೂ ನಿರ್ವಿಘ್ನವಾಗಿ ನೆರವೇರಿತು. ನೆರೆಹೊರೆಯವರೆಲ್ಲರೂ ಬಂದಿದ್ದರು. ವಿವಾಹದ ಕರಾರೂ ಬರೆಯಲ್ಪಟ್ಟಿತು. ಅದನ್ನು ಸತ್ಯಶರ್ಮನೇ ಬರೆದು, ಇನ್ನೂ ತನ್ನ ಬಳಿಯಲ್ಲೇ ಇಟ್ಟುಕೊಂಡಿರುವನು.

ಶಂಬರನು ಈ ಮಾತನ್ನು ಕೇಳಿದಕೂಡಲೆ ತನ್ನ ಮೇಜನ್ನು ಹುಡುಕಲು, ಅರ್ಥಪರನು ಬರೆದಿಟ್ಟಿದ್ದ ಕಾಗದವು ಸಿಕ್ಕಿತು. ಇದನ್ನು ನೋಡಿ, ತನ್ನನ್ನೇ ತಾನು ನಿಂದಿಸಿಕೊಂಡು "ಎಲೈ ಅರ್ಥಪರನೇ! ಈಗ ಕೆಲಸವು ಕೈ ಮೀರಿತು. ಈ ವಿವಾಹದ ಸಂಗತಿಯು ಯಾರಿಗೂ ತಿಳಿಯಕೂಡದು. ಪರಂತಪನನ್ನು ಕೂಡಲೇ ಕೊಂದು, ಕಾಮಮೋಹಿನಿಗೆ ನನ್ನಲ್ಲಿ ಅನುರಾಗ
೭೭
ಅಧ್ಯಾಯ ೯

ವುಂಟಾಗುವಂತೆ ಮಾಡಿಕೊಳ್ಳುವೆನು ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು? " ಎಂದನು.
ಅರ್ಥಪರ- ಇದು ಕಷ್ಟಸಾಧ್ಯವು. ಆ ವಿವಾಹದ ಸಂಗತಿಯು ನೆರೆ ಹೊರೆಯವರಾದ ಐದಾರು ಮನೆಯವರಿಗೆ ತಿಳಿದುಹೋಗಿದೆ.
ಶಂಬರ- ಹಾಗಾದರೆ, ಅದನ್ನು ಬಲ್ಲವರನ್ನೆಲ್ಲ ಒಟ್ಟಿಗೆ ಕೊಂದುಬಿಟ್ಟರೆ, ನನ್ನ ಮನೋರಥವು ಸಿದ್ಧಿಸುವದಲ್ಲವೆ?
ಅರ್ಥಪರ- ಅದು ಹೇಗೆ ಸಾಧ್ಯವಾಗುವುದು? ಪರಂತಪನು ಸಾಧಾರಣನಲ್ಲ. ಈ ನಮ್ಮ ಪ್ರಯತ್ನವೇನಾದರೂ ಪ್ರಕಟವಾದರೆ, ನಮ್ಮನ್ನು ಮರಣ ದಂಡನೆಗೆ ಗುರಿಮಾಡುವನು.
ಶಂಬರ - ಹೆದರಬೇಡ, ನಿನಗೆ ಹತ್ತು ಲಕ್ಷ ವರಹಗಳನ್ನು ಕೊಡುವೆನು. ನನ್ನ ಪ್ರಯತ್ನಕ್ಕೆ ಸಹಾಯಕನಾಗಿರು.
ಅರ್ಥಪರ- ಅಯ್ಯಾ! ಶಂಬರ 'ಹಾಗಾದರೆ, ನೀನು ಕೊಡತಕ್ಕ ಹಣವನ್ನು ಮೊದಲು ಕೊಡಬೇಕು. ಈ ಪ್ರಯತ್ನದಲ್ಲಿ ನಾನು ಒಂದು ವೇಳೆ ಸಿಕ್ಕಿಕೊಂಡರೂ, ಲ೦ಚವನ್ನಾದರೂ ಕೊಟ್ಟು ಬಿಡಿಸಿಕೊಂಡು ಬರಬೇಕಲ್ಲವೆ! ಆದುದರಿಂದ, ನೀನು ಮೊದಲು ಹಣವನ್ನು ಕೊಟ್ಟರೆ ಸಹಾಯಕನಾಗಿರುವೆನು, ಇಲ್ಲದಿದ್ದರೆ ನನ್ನನ್ನು ಅಪೇಕ್ಷಿಸಬೇಡ.
ಕೂಡಲೆ ಶಂಬರನು ಆ ಹಣಕ್ಕಾಗಿ ತನ್ನ ವಶದಲ್ಲಿದ್ದ ಸುಮಿತ್ರನ ಅಮೂಲ್ಯವಾದ ಕೆಲವು ರತ್ನಾಭರಣಗಳನ್ನು ಕೊಡಲು, ಅರ್ಥಪರನು ಅವನ್ನೆಲ್ಲ ತೆಗೆದುಕೊಂಡು ಹೋಗಿ ಮನೆಯಲ್ಲಿ ಬಚ್ಚಿಟ್ಟು ಬಂದು "ಅಯ್ಯಾ ! ಮಿತ್ರನೆ ! ಇನ್ನು ನೀನು ಹೇಳಿದ ಕೆಲಸವನ್ನು ಮಾಡುವುದರಲ್ಲಿ ಬದ್ಧನಾಗಿರುತ್ತೇನೆ. ಅದರಿಂದ ಯಾವ ವಿಪತ್ತುಗಳು ಬಂದರೂ ಅನುಭವಿಸುವುದಕ್ಕೂ ಸಿದ್ಧನಾಗಿದ್ದೇನೆ.” ಎಂದು ಕೇಳಿದನು.
ಶಂಬರ-ನೀನು ಮನಃಪೂರ್ವಕವಾಗಿ ಮಾಡುವೆಯೋ?
ಅರ್ಥಪರ-ಸತ್ಯವಾಗಿಯೇ ನೀನು ಏನು ಹೇಳಿದರೂ ಮಾಡುವೆನು, ಹೇಳು.

ಶಂಬರ- ಹಾಗಾದರೆ ಆ ನೀಚನಾದ ಪರಂತಪನನ್ನು ಕೊಲ್ಲಬೇಕು.
೭೮
ಪರಂತಪ ವಿಜಯ

ಅರ್ಥಪರ-ಇದು ಸಾಧ್ಯವಲ್ಲ. ಇದಕ್ಕೆ ಮಾತ್ರ, ನಾನು ಪ್ರಯತ್ನಿಸಿದರೆ ನನ್ನ ತಲೆ ಹೋಗುವುದು,
ಶಂಬರ- ಅದೂ ಬೇಡ. ಅವನನ್ನು ಹಿಡಿದುತಂದು ಸೆರೆಯಲ್ಲಿಟ್ಟು ನಾನಾವಿಧವಾದ ಹಿಂಸೆಯನ್ನುಂಟುಮಾಡಿ ಕಾಮಮೋಹಿನಿಯನ್ನೂ ಆ ವಿವಾಹದ ಕರಾರನ್ನೂ ಸ್ವಾಧೀನಪಡಿಸಿಕೊ. ಇದನ್ನು ನೋಡಲಾರದೆ, ಅವನು ತಾನಾಗಿಯೇ ಸಾಯುವನು. ಅವನು ಸಾಯದೆ ಇದ್ದರೆ ಅವನನ್ನು ಕೊಂದುಬಿಡು.
ಅರ್ಥಪರ- ಪ್ರಾಣಹಿಂಸೆಗೆ ಮಾತ್ರ ಎಂದಿಗೂ ನಾನು ಒಪ್ಪತಕ್ಕವನಲ್ಲ. ಅವನನ್ನು ಉಪಾಯದಿಂದ ಹಿಡಿದು ಯಾವಜ್ಜೀವವೂ ಸೆರೆಯಲ್ಲಿಡುತ್ತೇನೆ. ಮಾಧವನ ಉಯಿಲನ್ನು ಅಪಹರಿಸಿ ರತ್ನಾಕರವನ್ನು ನಿನ್ನ ಸ್ವಾಧೀನಕ್ಕೆ ಬರುವಂತೆಯೂ ಮಾಡುತ್ತೇನೆ. ಕಾಮಮೋಹಿನಿಗೆ ಪರಂತಪನು ಸತ್ತನೆಂದು ಪ್ರತ್ಯಯವನ್ನುಂಟುಮಾಡಿ, ಅವಳಿಗೆ ಪುನಃ ನಿನ್ನೊಡನೆ ವಿವಾಹವಾಗುವಂತೆಯೂ ಮಾಡಬಹುದು. ಇಷ್ಟಲ್ಲದೆ, ಪ್ರಾಣಹಿಂಸೆಗೆ ಪ್ರಯತ್ನ ಪಡುವ ಪಕ್ಷದಲ್ಲಿ, ನಿನ್ನ ಸಹವಾಸವೇ ನನಗೆ ಬೇಡ. ಇದು ನಿನಗೆ ಅಭಿಮತವಲ್ಲದಿದ್ದರೆ, ನೀನು ಕೊಟ್ಟಿರುವ ಆಭರಣಗಳನ್ನೆಲ್ಲ ಹಿಂದಿರುಗಿ ಕೊಟ್ಟು ಬಿಡುವೆನು.
ಇದನ್ನು ಕೇಳಿ ಶಂಬರನು ಭಗ್ನಮನೋರಥನಾದುದಲ್ಲದೆ, ತನ್ನ ಪ್ರಯತ್ನವನ್ನು ಹೊರಪಡಿಸುವನೋ ಏನೋ ಎಂದು ಬಹಳ ಭೀತಿಯನ್ನು ಹೊಂದಿ, ಈ ಕೊಲೆಯ ವಿಷಯವಾಗಿ ಈತನೊಡನೆ ಪ್ರಸ್ತಾಪ ಮಾಡಬಾರದಾಗಿತ್ತೆಂದು ಕೊಂಡು, ಮುಂದೆ ತನ್ನ ಯಾವ ಕೊಲೆಯ ವಿಷಯವಾದ ಪ್ರಯತ್ನವನ್ನೂ ಇವನೊಡನೆ ಹೇಳಬಾರದೆಂದು ನಿಷ್ಕರ್ಷಿಸಿಕೊಂಡನು.
ಅರ್ಥಪರ- ಅಯ್ಯಾ! ಇದೇನು ಯೋಚಿಸುತ್ತಿರುವೆ?

ಶಂಬರ- ಏನೂ ಇಲ್ಲ; ನೀನು ಹೇಳಿದಂತೆಯೇ ಮಾಡುವುದು ಯುಕ್ತ, ಪರಂತಪನನ್ನು ಕೊಲ್ಲುವುದಕ್ಕಿಂತ ಸೆರೆಯಲ್ಲಿಡುವುದೇ ಮೇಲು. ಇನ್ನು ಮುಂದೆ ನಿನ್ನ ಇಷ್ಟದಂತೆ ನಡೆಸೋಣ, ಮಾಧವನ ಉಯಿಲಿನ ವಿಷಯದಲ್ಲಿ ಹೇಗೆ ಮಾಡೋಣ ?
೭೯
ಅಧ್ಯಾಯ ೯

ಅರ್ಥಪರ- ಈ ದಿನ ಹನ್ನೊಂದುಘಂಟೆಯ ವೇಳೆಯಲ್ಲಿ ಆ ವುಯಿಲನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಹೋಗಿದ್ದೆವು. ಇದಕ್ಕೆ ಮೊದಲೇ ನಾನು ಕಛೇರಿಯ ನೌಕರರಿಗೆಲ್ಲ ಅಲ್ಪಸ್ವಲ್ಪ ದ್ರವ್ಯವನ್ನು ಕೊಟ್ಟು, ಆ ದಿನ ಸಾವಕಾಶ ಮಾಡಿಕೊಂಡು ಬರುವಂತೆ ಹೇಳಿದ್ದನು. ಇದರಂತೆ ಅವರೂಬ್ಬರೂ ಕಾಲಕ್ಕೆ ಸರಿಯಾಗಿ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಆ ಪರಂತಪನೂ ನಾನೂ ಹೋಗಿ ಅವನ ವಶಕ್ಕೆ ಉಯಿಲನ್ನು ಕೊಟ್ಟೆವು. ಪರಂತಪನ ಪ್ರತ್ಯಮಾರ್ಥವಾಗಿ, ನಾನು ಆ ವುಯಿಲಿನ ಪೂರ್ವಾಪರಗಳನ್ನೆಲ್ಲ ಅಲ್ಲಿನ ಅಧಿಕಾರಿಗೆ ತಿಳಿಸಿ, ಪುನಃ ಬರುವುದಾಗಿ ಹೇಳಿ, ಅವನನ್ನು ಕರೆದುಕೊಂಡು ಹೊರಟು ಬಂದೆನು. ಈಗ ಒಂದು ಲಕ್ಷ ರೂಪಾಯಿಗಳಾದರೆ, ಅದನ್ನು ರಿಜಿಸ್ಟ್ರಾರಿಗೆ ಕೊಟ್ಟು ಆ ಕಾಗದವನ್ನು ತೆಗೆದುಕೊಂಡು ಬರಬಹುದು.
ಶಂಬರ- ನಗದು ಹಣವು ನನ್ನ ಹತ್ತಿರದಲ್ಲಿಲ್ಲ. ಜವಾಹಿರಿನಗಗಳನ್ನು ಕೊಡುತ್ತೇನೆ. ಇದನ್ನು ಎಲ್ಲಾದರೂ ಇಟ್ಟು ಹಣವನ್ನು ತೆಗೆದುಕೊಂಡು ಹೋಗು (ಎರಡು ಲಕ್ಷ ರೂಪಾಯಿ ಬೆಲೆಯುಳ್ಳ ಪದಕವನ್ನು ಕೊಟ್ಟನು).
ಅರ್ಥಪರನು ಅದನ್ನೂ ತೆಗೆದುಕೊಂಡು ಹೋಗಿ ಬಚ್ಚಿಟ್ಟು, ರಿಜಿಸ್ಟ್ರಾರರ ಬಳಿಗೆ ಹೋಗಿ, ದಾಖಲೆಗೋಸ್ಕರ ಆ ವುಯಿಲು ಬೇಕಾಗಿದೆಯೆಂದು ಹೇಳಿ, ಅದನ್ನು ತಂದು ಶಂಬರನ ವಶಕ್ಕೆ ಕೊಡಲು, ಶಂಬರನು ಅದನ್ನು ಪೆಟ್ಟಿಗೆಯಲ್ಲಿ ಭದ್ರಪಡಿಸಿಟ್ಟನು.
ಅನಂತರ, ಅರ್ಥಪರನು, ಆ ದಿನ ಮಧ್ಯಾಹ್ನಾತ್ಪರ ತಾನು ಪರಂತಪನನ್ನು ರತ್ನಾಕರಕ್ಕೆ ಕರೆದುಕೊಂಡು ಬರುವುದಾಗಿಯೂ ಅಲ್ಲಿ ತಕ್ಕ ಸನ್ನಾಹಗಳನ್ನು ಮಾಡಿಕೊಂಡಿದ್ದು ಅವನನ್ನು ಹಿಡಿದು ಏಕಾಂತವಾದ ಸ್ಥಳದಲ್ಲಿಡಬೇಕೆಂಬುದಾಗಿಯ ಶಂಬರನಿಗೆ ತಿಳಿಸಲು, ಅವನು ಅದಕ್ಕೆ ತಕ್ಕ ಸನ್ನಾಹಗಳನ್ನು ಮಾಡಿಸಿದನು.

♠♠ ♠♠