ಪರಮನಪ್ಪಣೆಯಿಂದೆ ಅನುವನರಿದು ಧರೆಗಿಳಿದು

ವಿಕಿಸೋರ್ಸ್ದಿಂದ



Pages   (key to Page Status)   


ಪರಮನಪ್ಪಣೆಯಿಂದೆ ಧರೆಗಿಳಿದು ಬಂದು ಗುರುಲಿಂಗಜಂಗಮದ ಭಕ್ತಿಯನಳವಡಿಸಿಕೊಂಡು
ಷಟ್‍ಸ್ಥಲಬ್ರಹ್ಮದ ಅನುವನರಿದು ನೂರೊಂದು ಸ್ಥಳಕುಳಂಗಳ ಕರತಳಾಮಳಕವಾಗಿ ತಿಳಿದು
ನಿಜೈಕ್ಯಪಥದಲ್ಲಿ ನಿರ್ವಯಲಾದರು ಬಸವಣ್ಣ ಮೊದಲಾದ ಅಸಂಖ್ಯಾತ ಮಹಾಗಣಂಗಳು. ಅದೆಂತೆಂದೊಡೆ : ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು. ಅಕ್ಕಮಹಾದೇವಿ
ಪ್ರಭುದೇವರು ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು. ಹಡಪದಪ್ಪಣ್ಣ
ನೀಲಲೋಚನೆತಾಯಿ ಮೊದಲಾದ ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು. ಚೆನ್ನಬಸವಣ್ಣ
ಮಡಿವಾಳ ಮಾಚಿದೇವ
ಕಿನ್ನರಿಯ ಬ್ರಹ್ಮಿತಂದೆ ಮೊದಲಾದ ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ ಮಹಾಘನಲಿಂಗದೊಳಗೆ ಬಯಲಾದರು. ಇಂತಪ್ಪ ಸಕಲಗಣಂಗಳಿಗೆ ಆಯಾಯ ಸ್ಥಾನದಲ್ಲಿ ನಿರವಯಲಪದವ ಕರುಣಿಸಿಕೊಟ್ಟಾತ ನೀನೊಬ್ಬನಲ್ಲದೆ ಮತ್ತಾರನು ಕಾಣೆನಯ್ಯಾ. ಇಂತಪ್ಪ ಸಕಲಗಣಂಗಳ ತೊತ್ತಿನಮಗನೆಂದು ಎನ್ನನೆತ್ತಿಕೊಂಡು ಸಲಹಿದಿರಾಗಿ ಎನಗೆ ನಿಜೈಕ್ಯ ನಿರವಯಲಪದವೆಲ್ಲಿಹುದೆಂದೊಡೆ : ಉತ್ಪತ್ತಿ ಸ್ಥಿತಿ ಪ್ರಳಯಂಗಳಿಗೆ ಹೊರಗಾದ ನಿಮ್ಮ ಪರಾತ್ಪರ ಪರಮ ಹೃದಯಕಮಲಕರ್ಣಿಕಾವಾಸಮಧ್ಯ ಸೂಕ್ಷ್ಮಬಯಲೊಳಗೆನ್ನ ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ.