ಪುಟ:ಅಜಿತ ಕುಮಾರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಮಾಯಾವಿಯಾದ ಮಾಧವಿ.

ಮಾಯವಾದಳು. ಆ ಮೇಲೆ ಆಕೆಯನ್ನು ಆ ದೇಶದಲ್ಲಿ ಯಾರೂ ಕಾಣಲಿಲ್ಲವಂತೆ!

ತಾರಾಪತಿಯು ಈ ಚರ್ಯೆಗಳನ್ನು ನೋಡಿ, “ ಏನು ಮಾಡಿ ಬಿಟ್ಟಿ?” ಎಂದು ಅಜಿತನನ್ನು ಕೇಳಿದನು.

ಆಗ ಅಜಿತನು ನೆಲವನ್ನು ತೋರಿಸಿ, "ಇದೊ, ಒಂದು ಮಾಟವನ್ನು ಉಚ್ಚಾಟನೆ ಮಾಡಿದ್ದಾಯಿತು ! ಈಗ ಇನ್ನೊಂದರ ಹೆಸರಿಲ್ಲದಂತೆ ಮಾಡಿಬಿಡುತ್ತೇನೆ” ಎಂದು ಹೇಳಿ, ತಾರಾಪತಿಯ ಹತ್ತಿರ ಬಂದು, ತಾನು ಬಚ್ಚಿಟ್ಟುಕೊಂಡಿದ್ದ ಕತ್ತಿಯನ್ನೂ ಹಾವುಗೆಗಳನ್ನೂ ತೆಗೆದು ತೋರಿಸಿ, ತನ್ನ ತಾಯಿಯಾದ ನೇತ್ರವತಿಯು ಕಲಿಸಿಕೊಟ್ಟಿದ್ದ ಮಾತುಗಳನ್ನು ಹೊರ ಗೆಡವಿದನು.

ಕೂಡಲೆ ತಾರಾಪತಿಯು ಅಜಿತನನ್ನು ಸ್ಥಿರದೃಷ್ಟಿಯಿಂದ ಕ್ಷಣಕಾಲ ನೋಡಿ, ಸಂತೋಷದಿಂದ ಆತನನ್ನು ತಬ್ಬಿಕೊಂಡು ಅಳಹತ್ತಿದನು; ಅಜಿತನೂ ಅತ್ತನು.

ಕೊಂಚ ಹೊತ್ತಿನ ಮೇಲೆ ತಾರಾಪತಿಯು ಅಳುವನ್ನು ನಿಲ್ಲಿಸಿ, ಅಲ್ಲಿ ನೆರೆದಿದ್ದ ಜನಗಳನ್ನು ನೋಡಿ, “ಎಲೈ ಮಾಧವೇಯರಾ, ಇಲ್ಲಿ ಕೇಳಿರಿ. ಈತನು ನನ್ನ ಹಿರಿಯ ಮಗನು ! ತಂದೆಯಾದ ನನಗಿಂತಲೂ ಎಷ್ಟೋ ಉತ್ತಮನಾಗಿದ್ದಾನೆ !” ಎಂದನು.

ಈ ಮಾತನ್ನು ಕೇಳಿ, ಮಾಧವೇಯರು ಹುಚ್ಚರಂತಾದರು. ಒಬ್ಬನು “ದಿಗ್ದೇಶವಿಲ್ಲದ ಈ ನೀಚನನ್ನು ಇಲ್ಲಿ ಇರಗೊಡಿಸಬಾರದು !” ಎಂದನು. ಇನ್ನೊಬ್ಬನು “ಎಷ್ಟಾದರೂ ಆತನು ಒಬ್ಬನೆ ! ನಾವು ಹಲವರಿದ್ದೇವೆ. ಹೊಡೆದು ಹಾಕಿಬಿಡೋಣ" ಎಂದನು. ಈ ರೀತಿಯಾಗಿ ಮದ್ಯವು ತಲೆಗೇರಿ, ಒಬ್ಬೊಬ್ಬರು ಒಂದೊಂದು ವಿಧವಾಗಿ ಗಳಹುವುದಕ್ಕೆ ತೊಡಗಿದರು. ಕೊನೆಗೆ ಬಾಯಿಮಾತು ಹೋಗಿ ಕೈಕೆಲಸಕ್ಕೆ