ಪುಟ:ಅಜಿತ ಕುಮಾರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ವಸಂತಕಾಲದ ಬಲಿ.

ಇವರೆಲ್ಲ ಎಲ್ಲಿದ್ದಾರೆ? ಈ ಪುರುಷಾಮೃಗವು ಕೂಡ ಅವರ ಹಾದಿಯನ್ನೇ ಹಿಡಿಯಲಿ! ಶತಬಲಿಯು ಏನಾದರೂ ಅಡ್ಡಿಮಾಡಿದನೆಂದರೆ ಆತನಿಗೂ ಅದೇ ಗತಿಯು ಪ್ರಾಪ್ತಿಸುವುದು !” ಎಂದು ಹೇಳಿದನು.

ತಾರಾಪತಿಯು "ಆದರೆ, ಮಗನೆ, ಅದನ್ನು ಹೇಗೆ ಕೊಲ್ಲಬಲ್ಲೆ? ಗದೆಯನ್ನೂ ಕವಚವನ್ನೂ ತೆಗೆದುಕೊಂಡು ಹೋಗುವುದಕ್ಕೆ ಬಿಡರು ! ಮೈಮೇಲಿದ್ದ ಬಟ್ಟೆಯನ್ನು ಸುಲಿದು, ಬತ್ತಲೆ ಮಾಡಿ, ಅದರೊಳಕ್ಕೆ ತಳ್ಳಿ ಬಿಡುತ್ತಾರೆ !” ಎಂದನು.

ಆಗ ಅಜಿತನು "ಆ ಕೋಟೆಯೊಳಗೆ ಕಲ್ಲು ಗಳಾದರೂ ಇರಲಾರವೆ ? ನನಗೆ ಮುಷ್ಟಿಗಳೂ ಹಲ್ಲುಗಳೂ ಮತ್ತೇತಕ್ಕೆ? ಕ್ರೂರಾಕ್ಷನನ್ನು ನೆಲಸಮ ಮಾಡುವುದಕ್ಕೆ ನನಗೆ ಯಾವ ಆಯುಧವು ಬೇಕಾಯಿತು ?” ಎಂದನು.

ಅಜಿತನ ದೃಢತ್ವವನ್ನು ಕಂಡು, ತಾರಾಪತಿಯು ಎಷ್ಟು ಪ್ರಾರ್ಥಿಸಿದರೂ ಅಜಿತನು ಕೇಳದೆ ಹೊರಡುವುದಕ್ಕೆ ಸಿದ್ಧನಾದನು. ಕಡೆಗೆ ತಾರಾಪತಿಯು "ಚಿಂತೆ ಇಲ್ಲ ; ಒಂದು ಮಾತು ಹೇಳುತ್ತೇನೆ; ಒಂದು ವೇಳೆ ನೀನು ಗೆದ್ದು ಬಂದರೆ, ನಿನ್ನ ಹಡಗಿನ ಕರಿ ಪತಾಕೆಯನ್ನು ತಪ್ಪಿಸಿ, ಬಿಳಿ ಪತಾಕೆಯನ್ನು ಏರಿಸಿಬಿಡು ! ನಿನ್ನ ವಿಜಯವು ಆದಷ್ಟು ಬೇಗನೆ ನನಗೆ ತಿಳಿಯಲಿ; ಆ ಗುಡ್ಡದ ಮೇಲೆ ಕಾದುಕೊಂಡಿರುತ್ತೇನೆ!” ಎಂದನು. ಅಜಿತನು ಹಾಗೆಯೇ ಮಾಡುವುದಾಗಿ ಮಾತುಕೊಟ್ಟು, ಸಂತೆಯ ಕಡೆಗೆ ಹೊರಟುಹೋದನು.

ಅಲ್ಲಿ ಶತಪುರಕ್ಕೆ ಹೋಗತಕ್ಕವರನ್ನು ಆರಿಸಿ ತೆಗೆಯುತಿದ್ದರು. ಅಲ್ಲಿಯೇ ನಿಂತಿದ್ದ ರಾಜದೂತನ ಹತ್ತಿರ ಹೋಗಿ ಅಜಿತನು ತನ್ನನ್ನೂ ಕಳುಹಿಸಬೇಕೆಂದು ಪ್ರಾರ್ಥಿಸಿದನು.

ಆಗ ದೂತನು "ಯುವಕನೆ, ಎಲ್ಲಿಗೆ ಹೋಗುವುದೆಂದು ಗೊತ್ತಿದೆಯೆ ?” ಎಂದು ಕೇಳಿದನು.