ಪುಟ:ಅರಮನೆ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೦ ಅರಮನೆ ಮಡಚಿ ತಾಯ ಬಾಯೊಳಗಿಡ ಬಲ್ಲಂಥವರು ಯಲ್ಲವರೆ? ತಾಯೊಂದಿಗೆ ಬೆಳ್ಳಂಬೆಳಗು ಮಾತಾಡಬಲ್ಲಂಥವರು ಯಲ್ಲವರೆ? ಕಥೆ ಹೇಳುತ ತಾಯ ಬ್ಯಾಸರ ಕಳೆಯುವವರು ಯಲ್ಲವರೆ? ತಾಯಿಗೆ ಹಾಸಿಗೆ ಆಗುವವರು ಯಲ್ಲವರೆ? ತಲೆದಿಂಬಾಗುವವರು ಯಲ್ಲವರೆ? ತಾಯಿ ಮುಂಗಯ್ಯಗೆ ಬಳೆ ಯೇರಿಸುವವರು ಯಲ್ಲವರೆ? ತಾಯ ಕಾಲಿಗೆ ಕಾಲಂದಿಗೆ ಆಗುವವರು ಯಲ್ಲವರೆ? ತಾಯ ನಯನಾಜೂಕಿನ ನಡುವಿಗೆ ವಡ್ಯಾಣ ಆಗಬಲ್ಲಂಥವರು ಯಲ್ಲವರೆ? ಯಿಂಥ ಅಂಥವರನ್ನು ಪಟ್ಟಣದೊಳಗ ಕಂದೀಲು ಹಿಡಕೊಂಡು ಹುಡುಕಾಡುತಿರುವಾಗ್ಗೆ.. ಪಟ್ಟಣದ ತುಂಬೆಲ್ಲರು ತಮ್ಮ ತಮ್ಮ ನಾಲಗೆಗಳೆಂಬುವ ಮೂರು ಕೂರಿಗೆ ಹೊಲದೊಳಗೆ ಸಾಂಬವಿ ಯಂಬುವ ಮೂರಕ್ಕರದ ಸೊಬಗ ಸಬುಧವನ್ನು ಬಿತ್ತಿ ಬೆಳೆಯುತ್ತಿರುವಾಗ್ಗೆ.... ಸದರಿಪಟ್ಟಣದ ಅರಮನೆಯೊಳಗೆ ರಾಜಮಾತೆ ಭಮ್ರಮಾಂಬೆಯು ಸಾಲಗುಂದಿ ಗುಂಡಯ್ಯ ಸಾಸ್ತಿರಿಯನ್ನು ಯದುರಿಗೆ ಕುಂಡರಿಸಿಕೊಂಡು “ಯೇಳೇಳು ಕೊಪ್ಪರಿಗೆ ಹೊನ್ನು ಅಲ್ಲಯ್ತಾss ಯಿಲ್ಲಯ್ತಾ ಹೇಳು” ಯಂದು ತೂಕಡಿಕೆ ಮಾಡುತಲಿದ್ದಳು. ಆ ವಂದು ಗಳಿಗೆ ವಳಗೆ ತರಾವರಿ ಕಣಸುಗಳನ್ನು ಕಾಣುತ ಬೆಚ್ಚಿ ಬೀಳುತಲಿದ್ದಳು, ಸುಭ ಸೂಚಕವಾಗಿಯೋ, ಅಸುಭ ಸೂಚಕವಾಗಿಯೋ ಆಕೆಯ ಸರೀರದ ಆಯಕಟ್ಟಾದ ಜಾಗಗಳು ಅದರುತಲಿದ್ದವು. ತನ್ನ ಮಗ ಬಯಚಪ್ಪ ಯಿನ್ನೂ ಬದುಕಿರುವ ಬಗೆಗೂ, ಸವತಿಯ ಮಗ ಕಾಟಯ್ಯನ ಸರೀರದ ಮಾಲ ಅಲ್ಲೊಂದರಂತೆ, ಯಿಲ್ಲೊಂದರಂತೆ ಕೂದಲು ಕಾಣಿಸಿಕೊಳ್ಳುತ್ತಿರುವವೆಂಬ ವದಂತಿ ಬಗೆಗೂ ತಾನು ಯಾಕುಲಚಿತ್ತೀಯಳಾಗಿದ್ದಳು. ಸದರೀ ಅರಮನೆಯ ಯಿದ್ಯಾಮಾನಗಳೂ ವಂದೇ ಸಮಕ ಯಿರಲಿಲ್ಲ. ಯಲ್ಲಾ ಯೇಕರಿಕ ದೇಕರಿಗಳಿಗೂ ರೊಕ್ಕ ಬೇಕು. ಮಯ್ಯ ಮ್ಯಾಲಿದ್ದಂಥಾ ಚಿನ್ನದಾಭರಣಗಳನ್ನು ರೊಕ್ಕಸ್ಥನಾದ ತಿರುಪಾಲಯ್ಯ ಪೋಷಿ«ಯ ಬಳಿ ಅಡವಿಟ್ಟಾಗಿತ್ತು. ವಂದೊಂದು ಆಭರಣವನ್ನು ವರೆಗಲ್ಲಿಗೆ ತಿಕ್ಕಿ ತಿಕ್ಕಿ ಯಿದರಾಗ ಬಂಗಾರ ಅಷ್ಟು ಅಯ್ಕೆ.. ಅದರಾಗ ಬಂಗಾರ ಅಷ್ಟು ಅಯ್ಕೆ ಯಂದು ಗೊಣಗುತ್ತಲೇ ನೂರು ಕೊಡುವಲ್ಲಿ ಅಯಿವತ್ತು ಕೊಟ್ಟು ಸರಿಮಾಡಿದ್ದನು. ಸಾಲಸೋಲದ ಯವಾರ ತಮ್ಮರಮನೆಯ ಘನಸ್ತ ಸೊಸ್ತೆರ ತವರು ಮನೆಗಳಿಂದಲೂ ನಡೆದಿರುವುದುಂಟು. ಅರಮನೆಯ ಜೀರೋದ್ದಾರಕ್ಕೆ ಪ್ರಜೆಗಳು ಹಿಂದೊಂದು ಸಲ ವುದಾರವಾಗಿ ಚಂದಾ ಯತ್ತಿ ಕೊಟ್ಟಿರುವುದುಂಟು.