ಪುಟ:ಅರಮನೆ.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ಅರಮನೆ


ಮಕ್ಕಳೇ ಸದರಿ ಕ್ರಮಕ್ಕೆ ಯಿರೋಧ ಯಕ್ತಪಡಿಸಿದ್ದರು. ಹೊತ್ತು ವಾಲಿದಂತೆ
ಕೊಡೆ ಹಿಡಿಯಬೇಕೆಂದೂ, ಪರಂಗಿ ಮಂದಿ ಬಲಾಡ್ಯರಿದ್ದಾರೆ ಯಂದು
ತಮ್ಮವರಿಗೆಲ್ಲ ಸಬೂಬು ಹೇಳಿದ್ದನು. ಆ ಸಬೂಬನ್ನು ವಪ್ಪದೆ ಅವರೆಲ್ಲ ತಮಗ
ತಾವs ಸೊಸಂತರರಾಗಿದ್ದರು, ಕಳೆದೆರಡು ವರುಷಗಳಿಂದ ಪರಸ್ಪರ ದೊಂಬಿ
ಗಲಾಟೆ ಆಗುತಲಿದ್ದವು. ಅವರ ಪಾಳೆಯದಲ್ಲಿದ್ದವರು ಯಿವರ ಪಾಳೆಯಕ್ಕೆ,
ಯಿವರ ಪಾಳೆಯದಲ್ಲಿದ್ದವರು ಅವರ ಪಾಳೆಯಕ್ಕೆ ಪಾಳೆಯಾಂತರ
ಮಾಡುತಲಿದ್ದುದು ಮಗುಮ್ಮಾಗಿ ನಡೆದೇಯಿತ್ತು. ತನ್ನ ಸಿಮ್ಮಾಸನದ ಮ್ಯಾಲ
ಅಗೊಂದು ಯೀಗೊಂದರಂತೆ ಯೇಳುತಲಿದ್ದ ಮುಳ್ಳುಗಳನ್ನು ರೆಡ್ಡಿಯು
ನಿರ್ದಯವಾಗಿ ಕಿತ್ತುಹಾಕುತ್ತಲೇ ಬಂದಿದ್ದನು. ಗೋಚರ ವಾಗುವ ಮುಳ್ಳುಗಳನ್ನು
ಕೀಳುವಷ್ಟು ಸುಲಭವಾಗಿ ಅಗೋಚರ ಮುಳ್ಳುಗಳನ್ನು ಕೀಳುವುದು ಸುಲಭ
ಯಿರಲಿಲ್ಲ. ಯೀಗ್ಗೆ ಕೆಲ ಕಾಲದ ಹಿಂದs ರೆಡ್ಡಿಯು ಕಿರಸ್ತಾನ ಧರುಮ ಪ್ರಚಾರ
ಮಾಡಬಯಸಿದ ಫಾದರಿಗಳಿಗೆ, ಹೆಂಗಸರ ವಳವುಡುಪಗಳನ್ನು, ಪ್ರಸಾದನ
ಸಾಧನಗಳನ್ನು ಮಾರ ಬಯಸಿದ ಪರಂಗಿ ವರ್ತಕರಿಗೆ, ಸದರಿ ಪಟ್ಟಣದ
ಅಧಿದೇವತೆಯಾದ ಗೊನೆಗೊಂಡೇಸ್ಟರನ ಅಸದಳ ಗಾತುರದ ಪಾದರಕ್ಷೆಗಳನ್ನು
ಕುರಿತು ಸಂಶೋಧನ ಮಾಡ ಬಯಿಸಿದ ಪರಂಗಿ ಯಿದ್ವಾಂಸರಿಗೆ, ಬ್ರಿಟನ್
ರಾಣಿ ಯಾವ ಪದವನ್ನು ಹಾಡುತ್ತಿರುವಳೋ, ಆಕೆ ಯಾವ ನಮೂನಿಯ
ನ್ರುತ್ಯವನ್ನು ಮಾಡುತ್ತಿರುವಳೋ ಅಂಥಾದ್ದೇ ಕಲಾಪ್ರಕಾರ ಗಳನ್ನು ಕಲಿಸ
ಬಯಸಿದ ಕಲಾಯಿದರಿಗೆ, ಬ್ರಿಟೀಷರ ಮದ್ಯ ಖಾದ್ಯಗಳನ್ನು ತಯಾರಿಕೆ ಯನ್ನು
ಕಲಿಸ ಬಯಸಿದ ಪರಂಗಿಯ ಪಾಕಸಾಸ್ತನಿಪುಣರಿಗೆ, ಹಣ ಲೇವಾದೇವಿ ಮಾಡ
ಬಯಸಿದ ಪರಂಗಿ ಆರ್ಥಿಕ ತಗ್ನರಿಗೆ ತಲಾ ವಬ್ಬೊಬ್ಬರಿಂದ ಯಂತಿಷ್ಟು ರುಸುಮು
ವಸೂಲು ಮಾಡಿ ಸುಮುಸ್ಥಾನದ ವಳೀಕ್ಕೆ ವುದಾರವಾಗಿ ಬಿಟ್ಟುಕೊಂಡಿದ್ದನು..
ಯಿದಕ್ಕೆ ಸದರೀ ಸಮುಸ್ತಾನ ವಂದೇ ಅಲ್ಲದೆ ಭರತಖಂಡದ ಅನೇಕ ದೇಸಗಳಲ್ಲಿ
ಪರಂಗಿಯವರಿಗೆ ರತುನಗಂಬಳಿ ಸ್ವಾಗತ ನೀಡಿ ಬರಮಾಡಿಕೊಳ್ಳುವುದು
ನಡೆದೇಯಿತ್ತು, ರೆಡ್ಡಿಗೆ ವಂದರ ಹಿಂದೊಂದರಂತೆ ಯಿರೋಧ ಯಕ್ತಗೊಂಡಿತು.
ಫರಿಂಗಿಯವರ ಯಿರುದ್ಧದ ಪ್ರತಿಭಟನೆ ಸದರಿ ಪಟ್ಟಣದೊಳಗ ರಾಡಿ
ರಂಪಾಟವಾಯಿತು. ಸಯ್ನಿಕ ಅಟ್ಟಹಾಸ ಮೆರೆದ ಪರಿಣಾಮವಾಗಿ ಅನೇಕ
ಪ್ರಜೆಗಳು ಸಂತರಸ್ತಗೊಂಡರು. ಅವರ ಪಯ್ಕಿ ಕೆಲವರು ಮಾರುಯೇಸದಲ್ಲಿ
ಗಡೇಕಲ್ಲಿಗೆ ಹೋಗಿ ಅದೇ ತಾನೆ ನಾಕು ತುತ್ತು ವುಂಡು ಕೂತಿದ್ದಂಥ ಬೊಬ್ಬಿಲಿಗೆ