ಪುಟ:ಅರಮನೆ.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೦೩


ನದಿಯಾಗಿ ಹರಿದು ಸಮಸ್ತ ಪಟ್ಟಣವನ್ನು ತೊಯ್ಯಸಿ ತೊಪ್ಪೆ ಮಾಡಿದರು.
ಆ ಅಗೋಚರ ನದಿಯೊಳಗೆ ಮಿಂದು ಮಡಿಯುಡಿಯಿಂದ
ಕಾಡುಗೊಲ್ಲರೀರಯ್ಯನು ವಸ್ತಿಯ ಪಾದಗಳನ್ನು ಯದೆಗವುಚಿಕೊಂಡು ಯವ್ವಾ..
ಯವ್ವಾ ಯಂದು ಬಿಕು ಬಿಕು ಅತ್ತು ಯದೆ ಅಳಾರ ಮಾಡಿಕೊಂಡನೆಂಬಲ್ಲಿಗೆ
ಸಿವಸಂಕರ ಮಾದೇವಾsss
ಯಜ್ಞಾ.. ಯಾವಾಗ ವುಂಡಿದ್ಯೋ ಯ್ಯೋನೋ? ಮೊದಲುಂಬು..
ಯಾವಾಗ ಕುಡಿದಿದ್ಯೋ ಯೇನೋ ಮೊದಲು ಕುಡಿ.. ನಡದೂ ನಡದೂ
ದಣಕೊಂಡೀಯೇನೋ.. ಅಲ್ಲೆ ವುಳುಕೊಂಡು ಮೊದಲು ವಂದು ಚೊಂಪು
ನಿದ್ದಿ ತಗಿss ಯಂದು ಪರಾಂಬರಿಸಿದ ದಯವಸ್ಥರಿಗೆ ಅವಯ್ಯನು..
ಅನಾಥಳಾಗಿರೋ ಜಗಾನುಮಾತೇನ ಯದುರಿಗಿಟ್ಟುಕೊಂಡು ಹೆಂಗ ವುಂಬಲೀ...
ಹೆಂಗ ಕುಡಿಯಲೀ.. ಹೆಂಗ ನಿದ್ದೆ ಮಾಡಲೀ.. ತಾಯಿ ಹೊಳೆಗೊಂಟು
ನೆಲೆನಿಂತ ಮ್ಯಾಲss ಅದೆಲ್ಲಾ... ಅಲ್ಲೀಗಂಟಾ ನಾನು ನಿರಸನ ರೊತ ಪಾಲನ
ಮಾಡತೇನಿ.. ಅದಕಾಗಿ ಯಾರೊಬ್ಬರು ಯಸನ ಮಾಡೋದು ಬ್ಯಾಡ, ಜುಲುಮಿ
ಮಾಡೋದು ಬ್ಯಾಡ, ಗವುರಸಂದರದಂಬೆ ನನ್ನ ನಾಲಗೆ ಮ್ಯಾಲ ಯಿರೋಗಂಟ
ನನಗ ಯಾವ ಭಾದೆ ಕಾಡಾಕಿಲ್ಲ ತಿಳಿರಿ.. ಯಂದನಕಂತ ಸಭೆಯ ಚರ್ಚೆಯೊಳಗ
ವಾಚಾಮಗೋಚರವಾಗಿ ಪಾಲ್ಗೊಂಡನು.. ನೋಡಿರಪ್ಪಾ. ವುಚ್ಚಂಗಿದುರ್ಗದ
ವುಚ್ಚೆಂಗೆವ್ವ ಹುಲುಗಿ ಹುಲಿಗೆವ್ವ ಮಡರಳ್ಳಿ ಚವುಡವ್ವ ತುಪಾಕನಳ್ಳಿ ದುರುಗವ್ವರೆಲ್ಲ
ವಂದು ತೂಕಯಿದ್ದರೆ ಸಾಂಬವಿಯಯು ಅವರೆಲ್ಲರಿಗಿಂತ ಸಾವುರಪಟ್ಟು ತೂಕ
ಯಿರುವಾಕಿ. ಯಿಂಥಾಕೆ ಹೊಳೆಗೆ ಹೊಂಡಲು ಬಲು ಕಟಕಟಿ ಮಾಡುತ್ತಾಳೆ.
ವಂದು ಗುಲಗಂಜಿ ಯೇರುಪೇರು ಆದಲ್ಲಿ ನರಮನುಶ್ಯೋರು ಹುಳುಗಳಾಗಿ
ವುದುರಿ ಬಿದ್ದಾರು.. ಯಿಂಥ ಘನುವಾದ ಕಾರ್ಯೇವಿಗೆ ಘನುವಾದ ಹಿರೀಕರ
ಪಯ್ಕಿ ಹಿರೀಕನೋವ್ವನ ಅಗತ್ಯವುಂಟು ಕನರಪ್ಪಾ.. ತಾಯಿಯ ಅಂತರಂಗಕ್ಕ
ಸುರಂಗ ಹಾಕುವಂಥವನಿರಬೇಕು.. ಭೂತ ಪ್ರೇತ ಪಿಚಾಚಿ ಬೇತಾಳಗಳನ್ನು
ಹೆಡಮುರುಗಿ ಕಟ್ಟುವಂಥವನಿರಬೇಕು. ಸಾವುರ ಕಣ್ಣುಗಳುಳ್ಳವ ನಿರಬೇಕು.
ಸಾವುರ ಕಿವಿವುಳ್ಳವನಿರಬೇಕು. ಸಾವುರ ಮಂದೀಯ ಕಸುವುಳ್ಳವನಿರಬೇಕು
ಕನರಪ್ಪಾ.. ಅಂಥಾತ ಯಲ್ಲವನಂದರ ಫಲಾನ ಯಂತಲ್ಲವನೆ ಕನರಪ್ಪಾ.. ಆ
ಮಾಮಯ್ಯವಂತನನ್ನು ಕರೆತರೋ ಯೇರುಪಾಡನ್ನು ಯೀಗಿಂದೀಗಲೇ
ಮಾಡಬೇಕು ನೋಡಿರಿ.. ಯಂದಮಯ್ಯ ಖಂಡತುಂಡವಾಗಿ ಮಾತಾಡಿದೊಡನೆ...