ಪುಟ:ಅರಮನೆ.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೧೭


ಆ ಪವಾಡಪುರುಸನ ಪಾದ ಮುದ್ರೆಗಳು ಆ ಮಲೆಯ ನೆತ್ತಿ ಮ್ಯಾಲುಂಟು,
ಅವುಗಳ ಯಡ ಬಲಕ ಆ ಅವಸದೀಂರು ಗಿಡಗ೦ಟೆಗಳು
ದಂಡಿದಂಡಿಯಾಗುಂಟು. ಅವುಗಳ ಪಯ್ಕಿ ಯಾದಾಗಿದ್ದಿರಬೌದು,
ಗಾದರಿಪಾಲಯ್ಯನೇss.. ಯಂದು ವಂದರಗಳಿಗೆ ಕಣ್ಣು ಮುಚ್ಚಿಕೊಂಡು ಆ
ಪಸುವಯ್ದ ಮಾರ್ತಾಂಡನಾದ ಹಂಪಜ್ಜ "ಯಲ್ಲಿ ಮತ್ತೆ ಕಂದೀಲು ತಗಂಬ್ರಿ”
ಯಂದೊಡನೆ ವಬ್ಬಾತ ಕಂದೀಲು ತಂದುಕೊಟ್ಟ, “ಬಡಿಗೆ ತಗಂಬರೀ'
ನಂದೊಡನೆ ಯಿನ್ನೊಬ್ಬಾತ ಮಂತ್ರದಂಡವ ತಂದುಕೊಟ್ಟ ವಾನ
ತಗಂಬರ್ರಿಯಂದೊಡನೆ ಮತ್ತೊಬ್ಬಾತ ಕತ್ತೆಯನ್ನು ತಂದು ಬಿಟ್ಟ. ಮಗುದೊಬ್ಬಾತ
ಯೀ ಸರುವತ್ತಿನಾಗ ದೂರದ ಕ್ಯಾತಯ್ನ ಮಲೆಗೆ ಹೋಗೂದು ಬ್ಯಾಡೆಜ್ಜಾ...
ಅಲ್ಲಿ ಹೊನ್ನಿಗ ಸೇರಿಕಂಡಯ್ತಂತೆ.. ನಾನಾ ಯಿಧ ಜಾತಿಯ ಹಾವುಗಳು
ಕಾಲಿಗೆ ತೊಡರುತಾವಂತೆ.. ಯಂದು ಗಿಣೀಗ ಬಡಕೊಂಡಂತೆ ಬಡಕೊಂಡರೂ
ಕೇಳದೆ ಅವಯ್ಯನು ಕಲಕಲ ಯಂದನಕಂತ..
ಯೇಸೋ ಸಂವತ್ಸರಗಳ ಹಿಂದಕ ಹುಟ್ಟಿರುವಂಥವನಾದ, ಯೇಸೋ
ಸಂವತ್ಸರಗಳ ಪರ್ಯಂತರ ಬೆಳೆದಂಥವನಾದ, ಸದರಿ ಗ್ರಾಮದ ನಡೋ
ಬತ್ತಿನಲ್ಲಿರುವ ಮನೆಯನ್ನು ಕೆಲವು ದಂಬಡಿಗೆ ಬೋಗ್ಯ ಮಾಡಿಸಿಕೊಂಡು
ನಡುಲಮನೆಯತ೦ಬ ಪದವನ್ನು ತನ್ನ ಹೆಸರಿನ ಪೂರುವಕ್ಕೆ
ಅಂಟಿಸಿಕೊಂಡಂಥವನಾದ ಹಂಪಜ್ಜನ ಸ್ವಾಸ್ತಿ ಸದರಿ ಗ್ರಾಮವಲ್ಲ. ಯಾವ
ಸೀಮೆಯವನೋ? ಯಾವ ಕಾಲದವನೋ? ಅವಯ್ಯನ ಪೂರುವಿಕರು
ಸ್ರೀಸಯ್ಲ ಕಡೇಲಿಂದ ಪಸು ಸಂಪತ್ತನ್ನು ಮೇಯಿಸುತ್ತಾs ಮೇಯಿಸುತ್ತಾss
ವುಯ್ಯಾಲವಾಡ, ಕುಲುಮಿಗುಂಡಲ, ಚಲಿಮಲ, ಕರಿಯೇಮಲ ಯಿವೇ
ಮೊದಲಾದ ಪ್ರಾಂತಗಳನ್ನಾಯ್ದು ಕೇವಲ ನಾಕಾರು ಪ್ರಜೆಗಳಷ್ಟೆ ವುಳಕೊಂಡಿದ್ದ
ಯಿಜಯನಗರ ಸಾಮ್ರಾಜ್ಯದ ಯದೆ ಭಾಗದಲ್ಲಿರುವ ಹಂಪೆಗೆ ಬಂದರೆಂಬ
ಪ್ರತೀತಿವುಂಟು. ಅವರ ಪಯ್ಕಿ ಮೋರ್ವ ತಾನು ತಂದೆಯಾಗಬೇಕೆಂಬ
ಬಯಕೆಯನ್ನು ದೇವಿ ಹಂಪಾಂಬಿಕೆ ಸನ್ನಿಧಿಯಲ್ಲಿ ತೋಡಿಕೊಂಡಿರಬೇಕು,
ಆಕೆಯ ಕ್ರುಪಾಸೀರುವಾದದಿಂದ ಗಂಡು ಕೂಸು ಜನನವಾಗಿರಬೇಕು. ಅದಕ್ಕೆ
ಹಂಪಯ್ಯನೆಂಬ ನಾಮಕರಣ ಮಾಡಿರಬೇಕು, ಸೊಯಂ ಆದಿಸಗುತಿಯಾದ
ಹಂಪಾಂಬಿಕೆಯೇ ಆ ಕೂಸಿನ ಯೇಕರಿಕೆ ದೇಕರಿಕೆ, ಪಾಲನೆ ಪೋಸಣೆ
ಮಾಡುವ ವುಸ್ತುವಾರಿಯನ್ನು ಕಯ್ಗೆ ತಗಂಡಿರಬೇಕು. ಆಕೆ ಆ ಮಗುವಿಗೆ