ಪುಟ:ಅರಮನೆ.pdf/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೪ ಅರಮನೆ ಪ್ರಾಣಿಗಳ ತೊಗಲನ್ನು ಖರೀದಿ ಮಾಡಲಕಂತ ಬರುತ್ತಿದ್ದೋರು ಲೆಕ್ಕಯಿಲ್ಲದಷ್ಟು ಮಂದಿ, ಪದ ಹಾಡಿ ನರನ ಮಾಡಲಕೆಂದು ಬರುತಲಿದ್ದ ಕಲಾಯಿವರೆಷ್ಟೋ ಮಂದಿ ಫಳಾರದಂಗಡಿ, ಬಳೆ ಅಂಗಡಿ, ಪಾತ್ರೆಪಗಡಗಳ ಅಂಗಡಿ, ಹಣ್ಣು ಕಾಯಿ ಲೋಬಾನ ಪಚ್ ಕರುಪುರದ೦ಗಳ೦ಗಡಿ ಹಾಕಲಕಂತ ಬರುತಲಿದ್ದವರೆಷ್ಟೋ ಮಂದಿ, ಕಲ್ಕಗಡಕೊಟ್ಟು ಲೇವಾದೇವಿ ಮಾಡಲಕಂತ ಬರುತಲಿದ್ದವರೆಷ್ಟೋ ಮಂದಿ, ಸಣಪುಟ್ಟ ಕಳ್ಳತನ ಮಾಡಲಕಂತ ಬರುತಲಿದ್ದವರೆಷ್ಟೋ ಮಂದಿ, ಯಿಂತಪ್ಪ ಹತ್ತು ಹಲವು ನೂರಾರು, ಸಾವುರಾರು ಮಂದಿಯಿಂದ ಸದರಿ ಪಟ್ಟಣವು ಚಣದಿಂದ ಚಣಕ್ಕೆ ತುಂಬಿ ತುಳುಕಾಡಲಾರಂಭಿಸಿದ ಸಂದರದಲ್ಲಿ.... * ವಂದಲ್ಲಾ ಎಂದು ಮನೆ ಮುಂದೆ ಮಸಾಲೆ ರುಬ್ಬುತ, ಕಯ್ಯಬಳೆ ಸಬುಧ ಮಾಡುತ ಹೆಣು ಮಕ್ಕಳು ಪದ ಹಾಡುತಲಿದ್ದುದೇನು? ಗಂಡಸರು ತಮ ತಮ್ಮ ದೋತರಗಳನ್ನೂ, ಹೆಂಗಸರು ತಮ್ಮ ತಮ್ಮ ಸೀರೆಗಳನ್ನೂ, ತಾಯಂದಿರು ತಮ್ಮ ತಮ್ಮ ಕೂಸು ಕಂದಮ್ಮಗಳ ರೊಳ್ಳೆ ರೊಂಕುಗಳನ್ನು ಅಡಗಿಸಲೋಸುಗ ಯತ್ತಿಕಟ್ಟುತಲಿದ್ದ ಸಂದರದಲ್ಲಿ, ಮೊಲೆಗುಂಡಿಗಳನ್ನು ಅವುಗಳ ಬಾಂಯೊಳಗ ಅಮರುತಲಿದ್ದ ಸಂದರದಲ್ಲಿ, ಬಂದ ಬೀಗರು ಬಿಜ್ಜರಿಗೆ ಕೊಡಲಕಂತ ಹೆ೦ಗಸರು ಚಕ್ಕುಲಿ, ಅಂಬೋಡೆ, ಅಳ್ಳು ಮಾಡಿ ಅಡಕಲಗಡುಗೆಗಳಲ್ಲಿ ತುಂಬಿಡುತಲಿದ್ದಂಥಾ ಸಂದರದಲ್ಲಿ, ಗೋಡೆಗಳಿಗೆ ಸುಣ್ಣಬಣ್ಣ ಬಳಿಯತೊಡಗಿದ್ದಂಥ ಸಂದರದಲ್ಲಿ, ವಂದೊಂದು ಮೋಣಿ ವಳಗೆ, ವಂದೊಂದು ಕೇರಿ ವಳಗ ಯಿದ್ದಂಥ ಪಾವಳಿ ಭಾಗದೋಟು ಮಂದಿಯು ತಮ್ಮ ಅಂಗಯ್ಯಲಿ ದುಗ್ಗಾಣಿ ಯಿಲ್ಲ ದಂಗಾಗಯ್ತಲ್ಲಾ.. ಯಿವತ್ತಿಗೆಂಗ? ನಾಳಿಗೆಂಗ?.. ಹಬ್ಬವನೆಂಗ ಮಾಡುವುದು, ಬೀಗರು ಬಿಜ್ಜರನೆಂಗ ನೋಡಿಕೊಳ್ಳುವುದು ಯಂದು ಮುಂತಾಗಿ ಯಸನದ ಮ್ಯಾಲ ಯಸನ ಮಾಡುತಲಿದ್ದರು ಸಿವನೇ.. ಅಂಥವರ ಮನೆಗಳಲ್ಲಿದ್ದ ಅಡಕಲ ಗಡುಗೆಗಳಲ್ಲಿ ಸೆರೆ ಮುಕ್ತ ಕಾಳು ಕಡಿಯಿರಲಿಲ್ಲ ಸಿವನೇ.. ಅಂಥವರ ಮನೆಗಳಲ್ಲಿದ್ದ ವಲೆಗಳು ಬೆಂಕಿಯ ಮುಖವ ನೋಡಿರಲಿಲ್ಲ ಸಿವನೇ.. ನಾಯಿಗಳು ಅಂಥವರ ಮನೆಯ ಮುಂದೇಸಿಂದ ಬರದಂಗಾಗಿದ್ದವು ಸಿವನೇ.. ಬೆಕ್ಕುಗಳು ಅಂಥವರ ಮನೆಯ ಹಿಂದೇಸಿಂದ ಬರದಂಗಾಗಿದ್ದವು ಸಿವನೇ.. ಅಂಥವರ ಮನೆಗಳ ಮಂದಿಯ ಮಯ್ಯ ಮ್ಯಾಲ ಯಂಥ ಬಟ್ಟೆಬರೆಗಳಿದ್ದವೆಂದರ