ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

 ಉಪೋದ್ಘಾತ ಈಗ ಅಪರೂಪವಾದ್ದರಿಂದ ಸಾಧ್ಯವಿಲ್ಲ ಕೂಸಿಗೆ ಇಂತಿಷ್ಟನೇ ದಿವಸದಲ್ಲಿ ಇಂತಿಷ್ಟನೇ ತಿಂಗಳಲ್ಲಿ ಇಂತಿಷ್ಟನೇ ವರ್ಷದಲ್ಲಿ ಬಾಧಿಸುವಂಥಾದ್ದು ಇಂಧಾ ಗ್ರಹ, ಅದರ ಬಾಧೆಯ ಲಕ್ಷಣಗಳು ಇಂಧವು, ಅದರ ಪರಿಹಾರಕ್ಕೆ ಬಲಿಮಂತ್ರಾದಿಗಳ ಕ್ರಮ ಹೀಗೆ, ಎಂಬ ವಿವರಗಳಿಂದ 12 ವರ್ಷಗಳವರೆಗೆ ಬಾಧಿಸಬಹುದಾದ ಹನ್ನೆರಡು ಗ್ರಹಗಳ ವ್ಯಾಖ್ಯಾನ ಕೆಲವು ಗ್ರಂಥಗಳಲ್ಲಿ, ಶಿಶುವನ್ನು ಬಾಧಿಸತಕ್ಕವು ಸ್ಕಂದಾದಿ ಒಂಭತ್ತು ಗ್ರಹಗಳೆಂತಲೂ, ಅವುಗಳ ಪರಿಹಾರಕ್ಕೆ ಬಲಿ, ಧೂಪ, ಸ್ನಾನಾದಿಗಳನ್ನು ಇಂತಿಂಥಾ ಕ್ರಮಗಳಲ್ಲಿ ನಡೆಸಬೇಕೆಂತಲೂ ಕೆಲವು ಗ್ರಂಥಗಳಲ್ಲಿ ಬರೆಯಲ್ಪಟ್ಟಿದ್ದು ಕಾಣುತ್ತದೆ. ಈಗ ಊರಲ್ಲಿ ಸರ್ವಸಾಮಾನ್ಯವಾಗಿ ನಡಿಸಲ್ಪಡುವ ಬಲಿಯಂತ್ರ ತಂತ್ರಾದಿಗಳ ಪ್ರಸ್ತಾಪ ಆಯುರ್ವೇದದಲ್ಲಿ ಕಾಣುವುದಿಲ್ಲ. ಆದ್ದರಿಂದ ಪ್ರಕೃತ ಸ್ಥಿತಿಯಲ್ಲಿ ವಾತ, ಪಿತ್ತ, ಕಫಗಳೊಳಗೆ ದೋಷಕರವಾದವುಗಳನ್ನು ಸರಿಪಡಿಸುವ ಹಾಗೂ ಮೆದುಳು ಮುಂತಾದ ನರಗಳನ್ನು ಶುದ್ಧಪಡಿಸುವ ಹಾಗೂ ಪ್ರತಿಕ್ರಿಯೆ ಮಾಡತಕ್ಕದ್ದು ಮತ್ತು ಧಾತ್ರಿಯ ಅನಾಚರಣಗಳನ್ನು ನಿಲ್ಲಿಸುವುದು ಮಾತ್ರ ನಮ್ಮ ಕರ್ತವ್ಯವಾಗಿದೆ. ಈ ಅಂಶಗಳಿಗೆ ಲಕ್ಷ್ಯಕೊಡದೆ, ಮಂತ್ರ, ತಂತ್ರ, ವಿಭೂತಿ, ವಿಹಿತವಲ್ಲದ ಬಲಿ ಮುಂತಾದ ನಾನಾ ವಿಧವಾದ ಅಪಾರ್ಥ‌ಕೆಲಸಗಳನ್ನು ಮಾಡುವವುದರಲ್ಲಿಯೇ ಮನಸ್ಸಿಟ್ಟು, ಕಾಲ ಕಳೆದರೆ, ಅನಿಷ್ಟ ಸಂಭವವು ಹೆಚ್ಚಾಗದಿರುವುದು ಹ್ಯಾಗೆ? | 12. ಇಂಥ ಅನರ್ಥ‌ಗ‍ಳೆಲ್ಲ ನಿಂತು, ಭಾರತೀಯರ ಸರಾಸರಿ ಆಯುಃಪ್ರಮಾಣವು ಏರಬೇಕಾದರೆ, ಆಯುರ್ವೇದದ ಜ್ಞಾನವನ್ನು ಸಾಮಾನ್ಯ ಜನರಲ್ಲಿಯೂ ವೈದ್ಯರಲ್ಲಿಯೂ ಬೆಳಿಸುವದು ಅತ್ಯಾವಶ್ಯಕವಾಗಿರುತ್ತದೆ ಆಯುರ್ವೇದದ ತತ್ವಗಳನ್ನು ವಿವರಿಸದೆ, ಕೆಲವು ರೋಗಗಳ ಲಕ್ಷಣಗಳನ್ನು ಮತ್ತು ಅವುಗಳ ಪ್ರತಿಕ್ರಿಯೆಗಳೊಳಗೆ ಪ್ರಶಸ್ತವಾದ ಕೆಲವು ಯೋಗಗಳನ್ನು ಮಾತ್ರ ನಿದರ್ಶಿಸಿ, ಅನೇಕವಾಗಿ ಪ್ರಕಟವಾಗುತ್ತಿರುವ ಪುಸ್ತಕಗಳಿಂದ ಉದರಪೋಷಣವನ್ನೇ ಉದ್ದೇಶವಾಗಿಟ್ಟುಕೊಂಡು ವೈದ್ಯ ವೃತ್ತಿಯನ್ನ ವಲಂಬಿಸಿರುವವರಿಗೆ ಕ್ಷಣಿಕ ಪ್ರಯೋಜನ ಸಿಕ್ಕಬಹುದಾದರೂ, ಆಯುರ್ವೇದ ಜ್ಞಾನಾಭಿವೃದ್ಧಿಗೆ ಸಾರ್ಥ‍ಕತೆ ಇಲ್ಲ. ಆ ಔಷಧಯೋಗಗಳಿಗೆ ಆಧಾರವಾಗಿರುವ ತತ್ವಗಳನ್ನರಿಯದೆ, ಆ ಯೋಗಗಳನ್ನು ಉಪ ಯೋಗಿಸುವವುದರಿಂದ ದೋಷಗಳು ಅಧಿಕವಾಗಿ, ಆಯುರ್ವೇದದ ಕೀರ್ತಿಗೆ ಕುಂದು ಉಂಟಾಗುವ ಸಂಭವವಿರುತ್ತದೆ ಆ ತತ್ವಗಳನ್ನು ಸಾರ್ಥ‍ಕವಾಗಿ ತಿಳಿಯುವುದಕ್ಕೆ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಚರಕ, ಸುಶ್ರುತ, ಮುಂತಾದ ಮಹಾಗ್ರಂಥಗಳನ್ನು ಕಲಿಯಬೇಕಾದ್ದರಿಂದ, ಸಾಕಷ್ಟು ಸಂಸ್ಕೃತ ಜ್ಞಾನವಿಲ್ಲದ ಈಗಿನ ಜನಸಾಮಾನ್ಯಕ್ಕಾಗಲಿ, ವೈದ್ಯರಿಗಾಗಲಿ, ಅಂಥಾ ಜ್ಞಾನಸಂಪಾದನವು ಬಹು ಪ್ರಯಾಸಸಾಧ್ಯವೇ, ಅದಲ್ಲದೆ, ಯಾವುದಾದರೊಂದೇ ಗ್ರಂಥವನ್ನು ಪೂರ್ಣವಾಗಿ ಓದಿದರೂ ಸಾಕಾಗುವುದಿಲ್ಲ ಮತ್ತು ಆ ಪೂರ್ವಗ್ರಂಥಗಳಲ್ಲಿ ಆಧುನಿಕಾವಸ್ಥೆಗಳಿಗೆ ಪ್ರಯೋಜನವಿಲ್ಲದ ಅಂಶಗಳು ಬಹಳ ಇವೆ. ಇಂಥಾ ತಡೆಗೆಳನ್ನೆಲ್ಲ ನಿವಾರಿಸಿ, ಉತ್ಕೃಷ್ಟವಾದ ಆಯುರ್ವೇದೀಯ ವೈದ್ಯದ ಪ್ರಸಾರವನ್ನು ಸಾಧಿಸುವುದಕ್ಕೆ ಅಂಥಾ ಮಹಾ ಗ್ರಂಥಗಳಲ್ಲಿ ಅಡಗಿರುವ ಮುಖ್ಯ ತತ್ವಗಳನ್ನೇ ಹೆಕ್ಕಿ, ಸಾಮಾನ್ಯ ಜನರು ಸುಲಭವಾಗಿ ತಿಳಿಯುವಂತೆ, ಆಯಾ ದೇಶದ ಮಾತೃಭಾಷೆಯಲ್ಲಿ ತಕ್ಕ ಗ್ರಂಥಗಳನ್ನು ರಚಿಸುವುದೇ ಮುಖ್ಯ ಉಪಾಯ ಎಂಬ ವಿಚಾರವು ಈ ಗ್ರಂಥದ ಹೊರಡುವಿಕೆಗೆ ಪ್ರಧಾನ ಕಾರಣವೆನ್ನಬಹುದು.

                                                2*