ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಎಲ್ಲಮ್ಮನ ಮನಿಸು

ಒಕ್ಕಲಿಗರೆಲ್ಲ ಸೀಗೆ ಹುಣ್ಣಿಮೆ ಹಾಗೂ ಎಳ್ಳು ಅಮಾಸಿಗೆ ಹೊಲದ ಲಕ್ಷ್ಮಿಗೆ ನೈವೇದ್ಯ ಕೊಂಡೊಯ್ಯುತ್ತಾರೆ. ಹೊಲವುಳ್ಳವರು ಹೊಲವಿಲ್ಲದವರನ್ನು ತಮ್ಮೊಡನೆ ಹೊಲಕ್ಕೆ ಕರೆದೊಯ್ದು ಊಟಮಾಡಿಸಿ ಕಳಿಸುವರು. “ಎಳ್ಳು ಅಮಾಸಿಗೆ ಉಳ್ಳಿಕ್ಕೆ ಕರೆಯದವರಾರು” ಎಂಬ ಲೋಕೋಕ್ತಿಯೇ ಹುಟ್ಟಿಕೊಂಡಿದೆ.

ವಾಡಿಕೆಯಂತೆ ಸಜ್ಜೆಯ ಕಡಬು, ಹಿಂಡಿಪಲ್ಲೆ, ಫುಂಡಿಪಲ್ಲೆ, ಬದನೆಕಾಯಿಪಲ್ಲೆ ಅಲ್ಲದೆ ಹೋಳಿಗೆ ಅನ್ನ ಮೊದಲಾದ ಸಾಮಗ್ರಿಗಳು ಸಿದ್ಧವಾಗಬೇಕು. ಅವುಗಳನ್ನೆಲ್ಲ ಒಂದು ಡೊಳ್ಳುಹೆಡಿಗೆಯಲ್ಲಿ ವ್ಯವಸ್ಥಿತವಾಗಿ ಇರಿಸಿಕೊಂಡು, ಗೃಹಿಣಿಯು ಅದನ್ನು ನೆತ್ತಿಯ ಮೇಲೆ ಹೊತ್ತು ಹೊಲದ ಹಾದಿ ಹಿಡಿಯಬೇಕು.

ಜೀನ ಒಕ್ಕಲಿಗನೊಬ್ಬನು ಹೆಂಡತಿಗೆ ಬೊಗಸೆ ಗೋದಿ, ಸೆರೆ ಅಕ್ಕಿ ತೆಗೆದು ಕೊಟ್ಟು ಎಳ್ಳು ಅಮಾಸಿಯ ಅಡಿಗೆ ಮಾಡಲು ಹೇಳಿದನು. ಅಡಿಗೆ ಸಿದ್ಧವಾಯಿತು. ಊರ ಒಕ್ಕಲಿಗರೆಲ್ಲ ತಂತಮ್ಮ ಹೊಲದಹಾದಿ ಹಿಡಿದರು. ನೆರೆಹೊರೆಯವರನ್ನು ಊಟಕ್ಕೆಂದು ಹೊಲಕ್ಕೆ ಕರಕೊಂಡು ನಡೆದರು. ಎಲ್ಲರೂ ಹೋದಬಳಿಕ ಜೀನನ ಎಡೆ ಹೊರಬಿತ್ತು. ಮುಂಚಿತ ಹೊರಬಿದ್ದರೆ ನೆರೆಹೊರೆಯವರನ್ನು ಊಟಕ್ಕೆ ಕರೆಯಬೇಕಾಗುತ್ತಿತ್ತು. ಔಪಚಾರಿಕವಾಗಿ ಕರೆಯುವಷ್ಟರಲ್ಲಿ ಬಂದೇ ಬಿಟ್ಟರೆ ಗತಿಯೇನೆಂದು ತಡಮಾಡಿ ಹೊಲಕ್ಕೆ ಹೊರಟನು. ಹೆಂಡತಿಯನ್ನು ಸಹ ಕರೆದೊಯ್ಯಲಿಲ್ಲ.

ಚರಗದ ಬುಟ್ಟಿಯನ್ನು ಅಟ್ಟದ ಕೆಳಗಿಟ್ಟು ಅಲ್ಲಿಯೇ ತುಸುಹೊತ್ತು ಒರಗುವಷ್ಟರಲ್ಲಿ ಜಂಪು ಹತ್ತಿತು. ಬಹಳ ಹೊತ್ತಿನ ಮೇಲೆ ನಿದ್ದೆಯಿಂದ ಗಡಬಡಿಸಿ ಎದ್ದು ನೋಡುತ್ತಾನೆ - ಇದ್ದಷ್ಟು ಅಡಿಗೆಯನ್ನು ಗುಬ್ಬಿ ಕಾಗೆಗಳು ತಿಂದು ಚೆಲ್ಲಾಡಿದ್ದವು. ಮಗಿಯಲ್ಲಿಟ್ಟ ನೀರಿಗೆ ಹದ್ದು ಬಾಯಿ ಹಾಕಿ ಉರುಳಿಸಿದೆ. ಇನ್ನೇನುಣ್ಣುವುದು, ಇನ್ನೇನು ತಿನ್ನುವುದು ಎಂದು ಮೋರೆ ಒಣಗಿಸಿಕೊಂಡು

ಕುಳಿತಾಗ ಅತ್ತಕಡೆಯಿಂದ ಒಬ್ಬ ಜೋಗತಿ ಬಂದಳು ಉಧೋ ಉಧೋ ಎನ್ನುತ್ತ. ಆಕೆ ಬಂದುದು ಭಿಕ್ಷೆ ಬೇಡುವ ಸಲುವಾಗಿ.