ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅತಿಮಾನುಷ ಕಥೆಗಳು
೮೧

ಜೋಗತಿ ಭಿಕ್ಷೆ ಹಾಕು ಎಂದಾಗ ಜೀನನಿಗೆ ಸಿಟ್ಟೇ ಬಂತು “ನೀಡುವದಿಲ್ಲ” ಎಂದರೂ ಆಕೆ ತನ್ನ ಚೌಡಿಕಿ ಬಾರಿಸುವದನ್ನು ಬಿಡಲಿಲ್ಲ. ಜೀನನು ಎದ್ದವನೇ ಎರಡು ಹಸಿದಂಟು ಕಿತ್ತಿ ಜೋಗತಿಯ ಬೆನ್ನಮೇಲೆ ಬಾರಿಸತೊಡಗಿದನು.

“ಹೊಡಿಯಬೇಡೋ ಮಾರಾಯಾ, ಹೊಡಿಯಬೇಡ. ಬಂದ ಹಾದಿಯಿಂದ ಹೋಗ್ತೇನೆ?” ಎನ್ನುತ್ತ ಜೋಗತಿ ಜೀನನ ಹೊಲವನ್ನು ಹೊಕ್ಕಳು. ಅಲ್ಲಿ ತನ್ನ ಕಣ್ಣ ಕಾಡಿಗೆಯನ್ನು ಉದುರಿಸಿದಳು. ಜೀನನು ಬೆನ್ನು ಹತ್ತಿಯೇ ಬರುವದನ್ನು ಕಂಡು ಹತ್ತಿಯ ಹೊಲವನ್ನು ಹೊಕ್ಕು ಅಲ್ಲಿ ಕೈ ಮೇಲಿನ ಗಂಧವನ್ನು ಜಾಡಿಸಿದಳು. ಅಷ್ಟಕ್ಕೇ ಬಿಡದೆ ಗೋದಿಯ ಹೊಲದಲ್ಲಿ ಹಾಯ್ದು ಉಡಿಯೊಳಗಿನ ಭಂಡಾರವನ್ನು ತೂರಿದಳು. ಕಡಲೆಯ ಹೊಲದಲ್ಲಿ ಹಾಯ್ದು ಹಣೆಯ ಮೇಲಿನ ಕುಂಕುಮವನ್ನು ಈಡಾಡಿದಳು. ಅಂತೂ ಆಕೆಯನ್ನ ಬೆನ್ನಟ್ಟಿದ ಜೀನನು ಹೊಲದ ಸೀಮೆ ದಾಟಿಸಿಯೇ ಅಟ್ಟದ ಕಡೆಗೆ ಮರಳಿದನು.

ಉಣ್ಣದೆ ತಿನ್ನದೆ, ಬರಿದಾಗಿ ಕುಳಿತ. ಡೊಳ್ಳು ಹೆಡಿಗೆಯನ್ನು ಹೊತ್ತುಕೊಂಡು ಜೀನನು ಸಂಜೆಗೆ ಮನೆಗೆ ಹೋಗಿ ಮುಸುಕು ಎಳೆದುಕೊಂಡು ಮಲಗಿಯೇ ಬಿಟ್ಟನು.

****

ಬೆಳೆಭರಕ್ಕೆ ಬರುವ ಸಂದರ್ಭದಲ್ಲಿ ಹೊಲಕ್ಕೆ ಹೋಗಿ ಬೆಳೆಯಲ್ಲಿ ತಿರುಗಾಡಿ ನೋಡಿದರೆ ಎಲ್ಲವೂ ಅವಲಕ್ಷಣ. ಜೋಳದ ಬೆಳೆಗೆಲ್ಲ ಕಾಡಿಗೆ ರೋಗ ಬಿದ್ದಿದೆ. ಹತ್ತಿಯ ಬೆಳೆ, ಗೋದಿಯ ಬೆಳೆ, ಕಡಲೆಯ ಬೆಳೆಗಳೆಲ್ಲ ಭಂಡಾರ, ಇಟ್ಟಂಗಿ, ಸಿಡಿ, ಕೊಳ್ಳೆ ರೋಗಗಳಿಗೆ ಈಡಾಗಿದ್ದನ್ನು ಕಂಡು, ಹೊಲದಲ್ಲಿ ಒಂದು ಕ್ಷಣ ಸಹ ನಿಲ್ಲದೆ, ಮನೆಗೆ ಬಂದವನೇ ಕಂಬಳಿ ಹೊದೆದುಕೊಂಡು ಜಗಲಿಗೆ ತಲೆಕೊಟ್ಟು ಮಲಗಿದನು.

ಹೆಂಡತಿ ಬಂದು ಊಟಕ್ಕೆ ಎಬ್ಬಿಸಿದಳು. ಇನ್ನೇನುಣ್ಣಲಿ, ಇನ್ನೇನು ತಿನ್ನಲಿ ಹತ್ತುಖಂಡಗ ಜೋಳವೆಲ್ಲ ಕಾಡಿಗೆ, ಹತ್ತುಖಂಡಗ ಹತ್ತಿಯೆಲ್ಲ ಬಂಜೆ, ಹತ್ತುಖಂಡಗ ಗೋದಿಗೆಲ್ಲ ಸೊಳ್ಳು ಹಾಯ್ದಿದೆ. ಹತ್ತುಖಂಡಗ ಕಡಲೆಗೆಲ್ಲ ಕೊಳ್ಳಿ ಹಾಯ್ದಿದೆ - ಎಂದು ಗೋಳಿಟ್ಟನು.

ಅಟ್ಟ ಮೇಲೆ ಒಲೆ ಉರಿದಂತೆ ಹಿಂದುಗಡೆ ಆತನ ಲಕ್ಷಕ್ಕೆ ಬಂತು. ಅಂದು ಹೊಲದಲ್ಲಿ ಉದೋ ಉದೋ ಎನ್ನುತ್ತ ಭಿಕ್ಷೆಗೆ ಬಂದವಳು ಜೋಗಿತಿಯಾಗಿರದೆ ಎಲ್ಲಮ್ಮ ದೇವಿಯೇ ಆಗಿರಬಹುದೇ ? ಆಕೆ ಎಲ್ಲ