ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೩

ಸೊಂಟನೋವಿಗೆ ಎಣ್ಣೆ ಮಜ್ಜನ

ಬಹುತರವಾಗಿ ಯಾವ ಅಮಲ್ದಾರರೂ ಕಾಲಿಡದ ಹಳ್ಳಿಯೆಂದರೆ ಕೊರಕಲಮಟ್ಟಿ. ಅಲ್ಲಿಗೊಮ್ಮೆ ಜಾಫರಖಾನ ಫೌಜದಾರ ಸಾಹೇಬರು ಬಂದುಹೋದರು. ಅಷ್ಟೇ ಅಲ್ಲ, ಒಂದು ರಾತ್ರಿ ಚಾವಡಿಯಲ್ಲಿ ಮುಕ್ಕಾಮು ಮಾಡಿದರು. ಏಳುಗೇಣು ಎತ್ತರದ ಕಪ್ಪು ಕುದುರೆಯನ್ನು ನೀಳಗಡ್ಡದ ಫೌಜದಾರ ಸಾಹೇಬರು ಹತ್ತಿ ನಡೆಯಿಸತೊಡಗಿದರೆ ಕುದುರೆಯ ಬೆನ್ನು ಬಾಗಿ ಬಿಲ್ಲಾಗುತ್ತಿತ್ತು.

ಕೊರಕಲಮಟ್ಟಿಗೆ ಬರುವುದಕ್ಕೆ ಯಾವ ದಾರಿಯೂ ಅನುಕೂಲವಾಗಿಲ್ಲ. ನಡೆಯುತ್ತಲೇ ಬರಬೇಕು. ಇಲ್ಲವೆ ಕುದುರೆ ಹತ್ತಿ ಬರಬೇಕು. ಜಾಫರಖಾನ ಫೌಜದಾರರು ಕುದುರೆ ಸಾಕಿದ್ದರಿಂದಲೇ ಕೊರಕಲಮಟ್ಟಿಗೆ ಬರಲು ಸಾಧ್ಯವಾಯಿತು.

ಬೆಳಗಾಗುವ ಹೊತ್ತಿಗೆ ಚಾವಡಿ ಮುಂದಿನ ಕುದುರೆಯನ್ನು ಬಿಚ್ಚಿಕೊಂಡು ಓಲೆಕಾರನು ಮುಂದೆ ಸಾಗಿದನು. ಅಗಸೆಯ ಹೊರಗಿರುವ ಹನುಮಪ್ಪನ ಹಾಳು ಗುಡಿಯ ಕಲ್ಲುಡಿಗ್ಗೆಯ ಬಳಿಯಲ್ಲಿ ನಿಲ್ಲಿಸಿದನು. ಏಳುಗೇಣಿನ ಕುದುರೆಯಾದ್ದರಿಂದ ಮೇಲೆ ಹತ್ತುವವರಿಗೆ ಆನುಗಲ್ಲು ಅಥವಾ ಕಟ್ಟೆ ಅವಶ್ಯವಾಗಿ ಬೇಕು.

ಗುಡಿಯ ಮಗ್ಗುಲಿಗೆ ಅಸ್ತವ್ಯಸ್ತವಾಗಿ ಬಿದ್ದ ಕಲ್ಲುಗಳಲ್ಲಿ ಒಂದನ್ನೇರಿ ನಿಂತು ಕುದುರೆಯನ್ನು ಜಿಗಿದು ಹತ್ತಿದರು. ಆ ಇಸಲಿಗೆ ಕಾಲಕೆಳಗಿನ ಕಲ್ಲು ಉರುಳಿಬಿತ್ತು. ಗೌಡ ಓಲೆಕಾರರು ಮಾಡಿದ ಮುಜುರೆಯನ್ನು ಸ್ವೀಕರಿಸುತ್ತ ಫೌಜದಾರರು ಕುದುರೆಯನ್ನು ಓಡಿಸಿದರು.

ಅಂದು ರಾತ್ರಿ ಊರಗೌಡರ ಕನಸಿನಲ್ಲಿ ಹನುಮಪ್ಪನು ಕಾಣಿಸಿಕೊಂಡು ಅವನನ್ನು ಗಟ್ಟಿಯಾಗಿ ಹಿಡಿದನು.

“ಏಕೆ ದೇವಾ, ಕನಸಿನಲ್ಲಿ ದರ್ಶನಕೊಟ್ಟಿರಲ್ಲ” ಎಂದು ವಿನಯದಿಂದ ಗೌಡ ಕೇಳಿದನು.

“ಗೌಡ, ಒಳ್ಳೆಯ ಮಾತಿನಿಂದ ಎಣ್ಣೆ ಮಜ್ಜನ ಮಾಡಿಸುವೆಯೋ ಇಲ್ಲವೋ ನಿನ್ನ ಕುತ್ತಿಗೆ ಹಿಸುಕಲೋ ?” ಎಂದನು ಹನುಮಪ್ಪ.